ಭಾಷೆಯೊಂದು ಭಾವವಾಗಿ
ಭಾವೈಕ್ಯತೆಯ ಸಾರಿದೆ
ಕರೆದೆ ನಾನು ಅಮ್ಮನನ್ನು
ಅಲ್ಲಿ ಪ್ರೀತಿ ತುಂಬಿದೆ
ಎದೆಗೆ ಬಿದ್ದ ಅಕ್ಷರದ ಬೀಜವು
ಟಸಿಲೋಡೆದು ಕೂಗಿದೆ
ಅದುವೇ ಕನ್ನಡ ನಮ್ಮ ಕನ್ನಡ
ಪ್ರಾಂತ್ಯದಲ್ಲಿ ಹಲವು ಕವಲು
ಒಂದೇ ಬೇರ ಆಶ್ರಯಿಸಿದೆ
ಕವನ ನಾಟ್ಯ ಸಾಹಿತ್ಯ ಸಂಗೀತ
ನಿನ್ನ ಆಭರಣವಾಗಿ ವಿಜೃಂಭಿಸಿದೆ
ರಾಜ ರಾಜ್ಯಗಳ ವೈಭವವನ್ನು ಹೊತ್ತ ನಿನ್ನ
ಬಾಹುಗಳು ಬಲವಾಗಿದೆ
ಅದುವೇ ಕನ್ನಡ ನಮ್ಮ ಕನ್ನಡ
ಜ್ಞಾನಪೀಠ ಜ್ಞಾನದಾಸೋಹ
ನಿರಂತರವಾಗಿ ಸಾಗಿದೆ
ಅಲ್ಲಿ ಕಡಲು ಇಲ್ಲಿ ಬೆಟ್ಟ
ಸೌಂದರ್ಯವೇ ನಿನಗೆ ದಾಸಿಯಾಗಿದೆ
ಗಣಿಯು ನೀನು ಧಣಿಯು ನೀನು
ನಿನಗೆ ಯಾರ ಹಂಗಿದೆ
ಅದುವೇ ಕನ್ನಡ ನಮ್ಮ ಕನ್ನಡ
ಭುವನೇಶ್ವರಿಯ ಕಂದ ನೀನು
ಚಾಮುಂಡಿಯ ಆಶೀರ್ವಾದವಿದೆ
ಸ್ವಾಭಿಮಾನ ನಿನ್ನ ಉಸಿರು
ಆದಿ ಅಂತ್ಯ ನಿನಗೆ ಎಲ್ಲಿದೆ
ಸರಳ ಸುಂದರ ಮನೋಹರ ನೀನು
ನಿನ್ನ ಕಂಪು ಎಲ್ಲೆಡೆ ಪಸರಿಸಿದೆ
ಅದುವೇ ಕನ್ನಡ ನಮ್ಮ ಕನ್ನಡ
ಪ್ರದೀಪ್ ಬೇಲೂರು
ಆಡಿಯೋ
ವಿಡಿಯೋ
ಪ್ರದೀಪ್ ಬೇಲೂರು
ಲೇಖಕ ಪ್ರದೀಪ್ ಬೇಲೂರು ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬೆಂಗಳೂರಿನ ಒರಾಕಲ್ ಇಂಡಿಯಾ ಪ್ರೈ. ಲಿಮಿಟೆಡ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ ಅವರ ಹವ್ಯಾಸವಾಗಿದೆ.
ಕೃತಿಗಳು : ಎಲವೋ ವಿಭೀಷಣ (ಕಥಾ ಸಂಕಲನ), ಶತ್ರುಘ್ನ (ಕಾದಂಬರಿ)