Poem

ಅದೇನ್ ಕಿತ್ಕೋತೀರೋ ..

ಕವಿತೆ ಬರೆಯುತ್ತೇನೆ
ನಿರಂತರವಾಗಿ
ಚಾಟಿ ಹೊ ಸೆಯುತ್ತಲೇ ಇರುತ್ತೇನೆ...
ಏನ್ ಮಾಡ್ಕೋತೀರಿ ನೀವು?

ಖೂಳರೇ ಪಟ್ಟಭದ್ರರೇ
ಕೇವಲ ಕವಿತೆಗೇ ಹೆದರಿ
ಬಾಲಮುದುರಿ
ಬಿಲ ಹೊಕ್ಕು ಬಿಟ್ಟರೆ ಹೇಗೆ?

ಕಾವ್ಯದ ಚಬಕಿನ ಒಂದೊಂದೆ
ಒಂದೊಂದೇ ಏಟಿಗೆ
ಬೆವರು ಕಿತ್ಕೊಂಡ್ ಕಿತ್ಕೊಂಡ್ ಬಂದಿರಬೇಕು!ಪಾಪ!

ಬಹುಶ: ನಮ್ಮ ಕಾವ್ಯದ
ಸಿಡಿಗುಂಡುಗಳಂಥಾ ಶಬ್ಧಗಳು
ಅರ್ಧರಾತ್ರಿಯಲ್ಲೂ ಬೆಚ್ಚಿಬೀಳಿಸಿ
ಉಚ್ಛೇ ಹೊಯ್ಯಿಸಿರಬೇಕು! ಕನಸಲಿ ಕನಲಿ ಕನಲಿ ಕಂಗಾಲಾಗಿಸಿರಬೇಕು!

ಇಷ್ಟಕ್ಕೇ ಹೀಗಾದರೆ ಹೇಗೆ
ಉತ್ತರಕುಮಾರರೇ ?
ನಿಮ್ಮಂಥವರ ಕಂಡೇ ನಮ್ಮ ಜನಪದರು 'ಮುಂದಿದೆ ಮಾರಿಹಬ್ಬ' ಅನ್ನೋ
ನುಡಿಗಟ್ಟನ್ನು ಹುಟ್ಟುಹಾಕಿರಬೇಕು!

ಹೇ ಳಿ ದುರುಳರೇ ,
ಕವಿಯನ್ನು ಕೊಲ್ಲಬಲ್ಲಿರಿ
ಕಾವ್ಯವನ್ನು ಕೊಲ್ಲಬಲ್ಲಿರೇ?
ಕವಿಯನ್ನು ಬಂಧಿಸಬಲ್ಲಿರಿ
ಕಾವ್ಯವನ್ನು ಬಂಧಿಸಬಲ್ಲಿರೇ ?

ಕಾವ್ಯದ ತಾಕತ್ತಿನ ಮುಂದೆ
ಅನುಗಾಲವೂ
ಬಾಂಬು ಬಂದೂಕಗಳು
ದರ್ಪ ದೌರ್ಜನ್ಯಗಳು
ನಿರ್ವೀಯಗೊಂಡು ಬಿದ್ದದ್ದೇ ಹೆಚ್ಚು!

ಕವಿಯನ್ನು ಕೊಂದ,
ಬಂಧಿಸಿದ ರಕ್ತಸಿಕ್ತಅಧ್ಯಾ ಯಗಳು ಚರಿತ್ರೆಯುದ್ದಕ್ಕೂ ತಾಂಡವವಾಡುತ್ತಿವೆ. ಕಣ್ಣೆದುರೇ ಇತಿಹಾಸದ ಕನ್ನಡಿ ಇದ್ದರೂ ನೀವಿನ್ನೂ
ಪಾಠ ಕಲಿತಿಲ್ಲ!
ಕೇಳಿ ಪಾತಕಿಗಳೆ,
ಕಾವ್ಯದ ಗುಡುಗು ಸಿಡಿಲಿಗೆ ಬೆದರಿ
ಬಂದೂಕಿನ ಗುಂಡುಗಳು
ಸ್ತಬ್ಧಗೊಂಡಿವೆಯೇ ಹೊರತು
ಕಾವ್ಯವೆಂದಿಗೂ ಬೆನ್ನು ಬಾಗಿಸಿ
ಜೀ ಹುಜೂರ್ ಹೇಳಿದ ನಿದರ್ಶನವೇ ಇಲ್ಲ.

ಕೊಲ್ಲುವುದೇ ನಿಮ್ಮ ಕಾಯಕವಾದರೆ
ಕಾಯುವುದು ನಮ್ಮ ಧರ್ಮ!
ವಿನಾಶವೇ ನಿಮ್ಮ ಹಕೀಕತ್ತಾದರೆ
ಸೃಷ್ಟಿಯೇ ನಮ್ಮ ತಾಕತ್ತು

ಕೊನೆಯ ಉಸಿರಿನವರೆಗೂ
ಕವಿತೆ ಸೃಷ್ಟಿಸುತ್ತಲೇ ಇರುತ್ತೇನೆ
ಅದೇನ್ ಕಿತ್ಕೋತೀರೋ ಕಿತ್ಕೊಳ್ಳಿ...

ಚರಿತ್ರೆಯ ಪುಟಗಳಲಿ ಮತ್ತೊಂದು
ಅಧ್ಯಾಯ ದಾಖಲಾಗಿಬಿಡಲಿ.

- ವೀರೇಂದ್ರ ರಾವಿಹಾಳ್

ವೀರೇಂದ್ರ ರಾವಿಹಾಳ್

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನವರಾದ ವೀರೇಂದ್ರ ರಾವಿಹಾಳ್ ಇವರು ಮೂಲತಃ ವ್ಯಾಪಾರಿಗಳಾಗಿದ್ದು ವ್ಯಾಸಾಂಗದ ದಿನಗಳಿಂದಲೂ ತೀವ್ರವಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಕಲ್ಲುಗಳು ಬೇಕು ಗೆಳೆಯ' ಇವರ ಮೊದಲ ಕವನಸಂಕಲನವಾಗಿದೆ.

1996 ರಲ್ಲಿ ಚಿತ್ರ ಸಾಹಿತಿ ಚಿ.ಉದಯಶಂಕರ್ ಸ್ಮರಣಾರ್ಥ ಪ್ರೇಮಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2012 ರ ಸಕ್ರಮಣ ಸಣ್ಣ ಕಥಾ ಪುರಸ್ಕಾರ,‌ ಸಾಹಿತ್ಯ ಪರಿಷತ್ತಿನ ಕೆ. ವಿ. ರತ್ನಮ್ಮ ದತ್ತಿ ಪ್ರಶಸ್ತಿ,‌ 2021ರ ಸಾಲಿನ ಉತ್ಥಾನ ಕಥಾ ಪ್ರಶಸ್ತಿ ಆರೂಢಜ್ಯೋತಿ ಪ್ರಶಸ್ತಿಗಳನ್ನು ಪಡೆದುಕೊಂಡು ತಮ್ಮ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮುಂದುವರೆಸಿದ್ದಾರೆ. ಪ್ರಸ್ತುತ ಬಳ್ಳಾರಿಯಲ್ಲಿ ವಾಸವಿದ್ದಾರೆ.

More About Author