Poem

ಆಷಾಡದ ಸಡಗರ

ಆಷಾಡಮಾಸ
ತಂದಿತು ನವೋಲ್ಲಾಸ
ತವರು ಮನೆಯ
ನೆನಪಿನಂಗಳದಲಿ
ಹುಚ್ಚೆದ್ದು ಕುಣಿದಿದೆ ಮನ॥

ಅಕ್ಕರೆಯ ಅಣ್ಣ
ಬರುವ ನನ್ನ ಕರೆದೊಯ್ಯಲು
ಬಗಬಗೆಯ ತಿಂಡಿ ಮಾಡಿ
ಹೊಸಿಲ ಬಾಗಿಲಲಿ
ನಿರೀಕ್ಷೆ ಅಮ್ಮನದು॥

ಅಪ್ಪಯ್ಯನೊಂದಿಗೆ ಹರಟೆ
ಅಜ್ಜಿಯ ಕಥೆಕಟ್ಟು ಬಿಚ್ಚಿ
ತಂಗಿಯರೊಡಗೂಡಿ
ಮನಸೋ ಇಚ್ಚೆ
ಕಾಲ ಕಳೆಯುವ ಸುಸಮಯ॥

ಹಳೆ ಗೆಳತಿಯರೊಂದಿಗೆ ಭೇಟಿ
ಕಷ್ಟ ಸುಖದ ಮಾತು ಹಂಚಿ
ಸುತ್ತ ಬೇಣ ಬೆಟ್ಟ ಸುತ್ತಿ
ಅಡಿಕೆತೋಟ ಗದ್ದೆ ಬಿಡದೆ
ಸಖತ್ ದಿನ ಕಳೆಯುವ ಸಮಯ॥

“ಯಮ್ಮನಿಗೆ ಬಾರೆ ಯಮ್ಮನಿಗೆ ಬಾರೆ”
ಊರ ಮಂದಿಗೆಲ್ಲ
ನನ್ನ ಕಂಡರೆ ಬಲು ಇಷ್ಟ
ಊಟ ತಿಂಡಿ ವಗೈರೆ
ಒಂದೊಂದು ಮನೆ ಹೊಕ್ಕಿ ಬರುವೆ॥

ನಲ್ಲಾ ಇದೇ ನೋಡು
ನನ್ನ ತವರಿಗೆ ಹೋಗುವ ಸಂಭ್ರಮ
ಕೊಂಚ ಬಿಡುವು ಮಾಡಿಕೊಡು
ಆಷಾಡ ಮುಗಿದೊಡೆ
ನಿನ್ನ ಹತ್ತಿರ ಓಡೋಡಿ ಬರುವೆ॥

ಇಲ್ಲಿರಲು ನೀನು ನನಗೆ ಚೆಂದ
ಅಲ್ಲಿರಲು ನನ್ನ ತೌರೇ ಅಂದ
ಅಮಿತ ಪ್ರೀತಿ ಮನೆ ಮಾಡಿಹುದು
ಎರಡೂ ಮನೆ ಕೀರ್ತಿ ಅರಿತು
ಬಾಳಿ ಬೆಳಗುವೆ ನಾನು॥

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) 

More About Author