‘ಗದ್ದರ್’ ಎಂದೇ ಖ್ಯಾತರಾಗಿದ್ದ ತೆಲಂಗಾಣದ ಕ್ರಾಂತಿಕಾರಿ ಗಾಯಕ ಗುಮ್ಮಡಿ ವಿಠ್ಠಲ್ ರಾವ್ 2023 ಆಗಸ್ಟ್ 6ರಂದು ನಿಧನರಾಗಿದ್ದಾರೆ. ಅವರ ಕುರಿತು ಕನ್ನಡದ ಖ್ಯಾತ ಕವಿ ಆರಿಫ್ ರಾಜಾ ಅವರು 12 ವರ್ಷಗಳ ಹಿಂದೆ ಬರೆದ ಕವಿತೆಯನ್ನು ಯುವ ಕವಿ ರೇಶ್ಮಾ ಗುಳೇದಗುದ್ದಾಕರ್ ಅವರು ವಾಚಿಸಿದ್ದಾರೆ. ಆ ಹಾಡು ಹಕ್ಕಿಗೆ ನಮ್ಮ ಕಾವ್ಯ ನಮನಗಳು.
ಕವಿತೆ ಓದಿದ ಮೇಲೆ
ಇಲ್ಲ ಇಲ್ಲ ಕವಿತೆ ಕುಣಿಸಿದ ಮೇಲೆ
ಆ ಕವಿ
ತನ್ನ ಕೋಣೆಗೆ ಕರೆದೊಯ್ದ
ಜೇಡರ ಬಲೆ ತಲೆ,ಕೋಣೆ
ರಾಜಕೀಯ ವಸ್ತು ಸಂಗ್ರಹಾಲಯ
ಗೋಡೆಗೆ ಮಾಸಿದ ಪಟ
ಗಾರೆ ನೆಲ ಕರಪತ್ರದ ಹೊಲ
ಆ ಕಡೆ ಈ ಕಡೆ
ಕಾಡು ಬೆಕ್ಕಿನಂತೆ ಕಣ್ಣಾಡಿಸಿದವನೇ
ಬೆಳಕು ಜಿನುಗಲು
ಇದ್ದ ಒಂದೇ ಒಂದು ಕಿಂಡಿಗೆ ಪುಸ್ತಕ ಅಡ್ಡವಿಟ್ಟ
ಬಾಗಿಲು ಬಂದು ಮಾಡಿದ ಚಿಲಕ ಹಾಕಿದ
ಕಡ್ಡಿ ಗೀರಿ ಕ್ಯಾಂಡಲ್ ಹೊತ್ತಿಸಿದ
ಮತ್ತೆ ಪರೀಕ್ಷಿಸಿದ ಪೆಕರು ಹಾಗೆ
ಗಬಕ್ಕನೆ ಕೈ ಹಿಡಿದ,ಉಡದ ಹಿಡಿತ
ಭಯ ಬೆವರು
ಕವಿಯ ಸಹವಾಸ ಗುರು
ಶರ್ಟು ಕಳೆದು ಪದರು ಪದರು ಬಿಚ್ಚಿ ತೋರಿಸಿದ
ಎದೆಯ ಎಡಭಾಗದಲಿ ನೆಟ್ಟ ಒಂದು ಕಾಡತೂಸು
ಸಾವಿಗೂ ಬಾಳಿಗೂ ಸೇತುವೆಯಾಗಿ ನಿಂತ
ಮರೆಯಲಾಗದ್ದನ್ನು ಮರೆಯಬಾರದ್ದನ್ನು ಮರೆಯಲೇ ಬೇಕಾದ್ದನ್ನು
ಮುರಿದ ಮುಳ್ಳಾಗಿ ನೆನಪಿಸುವ
ಆ ಒಂದು ಕಾಡತೂಸನ್ನು
ಕಾಲವು ಸ್ಥಂಭಿಸಿ ಕ್ಷಣವೊಂದು ಅಮರವಾದಂತೆ
ಅದರೊಳಗಿಂದ ಕೇಳುತ್ತಿತ್ತು
ಕುಟುರ್ ಹಕ್ಕಿಯ ಹಾಡು
ಎಲೆ ಮರೆಯ ಕಾಡು
- ಆರಿಫ್ ರಾಜಾ
ವಿಡಿಯೋ
ವಿಡಿಯೋ
ಆರಿಫ್ ರಾಜಾ
2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಆರಿಫ್ ರಾಜ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರಾದರು. 1983 ಡಿಸೆಂಬರ್ 6ರಂದು ಜನಿಸಿದ ಅವರು ರಾಯಚೂರಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬಾಗಲಕೋಟೆಯ ಗವರ್ನಮೆಂಟ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಇಳಕಲ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಬರೆದಿರುವ ಹಲವು ಕವಿತೆಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇವರು ಅನುವಾದಿತ ಕವಿತೆಗಳು ಪರ್ಷಿಯನ್ ಭಾಷೆಯಲ್ಲಿ ರಚಿತವಾದ ಭಾರತದ ಸಮಕಾಲೀನ ಕವಿತೆಗಳು ಸಂಕಲನದಲ್ಲಿ ಪ್ರಕಟಗೊಂಡಿವೆ.
ಸೈತಾನನ ಪ್ರವಾದಿ (2006), ಜಂಗಮ ಫಕೀರನ ಜೋಳಿಗೆ (2009), ಬೆಂಕಿಗೆ ತೊಡಿಸಿದ ಬಟ್ಟೆ (2012), ನಕ್ಷತ್ರ ಮೋಹ(2017) ಎಂಬ ಹೆಸರಿನ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಭಾವನಾತ್ಮಕ ತಾಕಲಾಟವನ್ನು ಬಹುಸಂಸ್ಕೃತಿಯ ನೆಲೆಯಲ್ಲಿ ಪುನರ್‌ಸಂಘಟಿಸುವ ಇವರ ರಚನೆಗಳಲ್ಲಿ ಹೊಸ ನುಡಿಗಟ್ಟಿದೆ ಎಂದು ವಿಮರ್ಶಕರು ಗುರುತಿಸಿದ್ದಾರೆ.