ಎರಡು ಹೆರಳಿನ-ಅರಳುಕಣ್ಣಿನ
ಪ್ರಶ್ನೆ ಸಾಲಿಗುತ್ರ ಹೇಳೋ
ಸುಭಗ...
ಕ್ವಾಟೀ ಹೊರಗಿನ ಕೊತ್ತಳಕ್ಕ ಬಿದ್ದು ನರಳುವ ಕರಿ ಹಸುರು ನೀರೊಳಗಿನ
ಪ್ರತಿಬಿಂಬನೇ ಹೇಳು...ನೀ ಮೌನಿ ಯಾಕ?
ಗುಂಭದಾಗಿನ ಈ ಗುಪಿತ ಯಾಕ?
ಹಸುರು ಕೆಸರಾಗಿ ಕಮಲ ಮಲವಾಗಿ ಈ ಕಾಮಾಟಿಪುರ,
ಚಿಲಕ ಜಡಿದ ಚಕ್ರವ್ಯೂಹ..
ಭೇದಿಸಿ ಬಂದಾನೇ ರಾಜಕುಮಾರ?
ಅಷ್ಟೇ ಸುದ್ದಿ,
'ಹೂಂ ಮುಂದ?'
'ಏನು ಹೂಂ ಮುಂದ?'
'ಅದೇ, ಚಿಲಕಾ ತಗದನೋ ಇಲ್ಲೋ ರಾಜಕುಮಾರಾ?
ಕ್ವಾಟೀ ಒಳಗ ಎಷ್ಟು ಅತ್ತಿರಬೇಕು
ರಾಜಕುಮಾರಿ?'
ಕರಡೀ ಮಾರೀ ಮಾಯಾರಾಕ್ಷಸ ಒಯ್ದು,
ಖಡಖಡಕ ಮಂತ್ರ ಝಳಪಿಸಿ
ಮಾರಿಗೆ ಉಗ್ಗಿ ಚೆಲ್ಲಿ ಮಂಕು ಬೂದಿ ಮುಸುಕು
ಒಯ್ದಿಟ್ಟ ಕ್ವಾಟೀ ಚಿಲಕಾ...?
ಇನ್ನೇನು ನಕ್ಷತ್ರ ಫಲ,
ಸೂಳಿ- ಅಲ್ಲಲ್ಲ ಸೆಕ್ಸ್ ವರ್ಕರ್?
ಕಾನೂನು ಹೇಳಿತ್ತಂತ ಹಿಂಗಂತ..
ಒಳಗ ದಬ್ಬಿಸಿಕೊಂಡ ಹೆಣ್ಣು ಕುರಿ
ಹೊರಗ ಬಂತೇನ
ನಗಿ ತಂತೇನ?
ಒತ್ತಿ ದಿಂಬಿಗೆ ಮಾರಿ ಅತ್ತತ್ತು ರಾಜಕುಮಾರಿ
ಕೈ ಬೀಸಿ ಕನಸಿನೊಳಗ ಕಂಡ ಅವನೇ,
ಕುದರಿಯೇರಿ ಕಟ್ಟಡಕ ಕಡಕಟ್ಟ..
ಬೆಟ್ಟ ಕುಟ್ಟುತ್ತ ಬಂದು ಹಾದೀಯೊಳಗ
ಗುಡ್ಡದ ಋಷಿಯ ದಂಡಕಮಂಡಲಕ
ಅಡ್ಡ ಬಿದ್ದಾಗ ಸಿಕ್ಕಂಥ ಕ್ವಾಟಿ!
ಒದ್ದಿ ಮುದ್ದ್ಯಾಗಿ ಥರಥರ
ನಡಿಗಿ ಗಿಳಿಹಂಗ ಹೆಣ್ಣು...
ಉಬ್ಬಿದೆದಿ ಮುಚ್ಚಲೇ
ಕೈ ಕೆಳಗೊಯ್ಯಲೇ?ಯಾವ ದಿಕ್ಕಿಗ್ಹೋದರ ಉಳಿದಾವೇ ಮಾನಾ..?
ಇರೂದೊಂದೇ ಶೀಲ!
ಆಟಕ್ಕೊಂದು ಬ್ಯಾಟಾ ಮಾಡಿ
ಕರಕೊಂಡು ಬಂದ್ಲಲ್ಲ ಕುಂಟಲಗಿತ್ತಿ..
ಎತ್ತೆತ್ತಿ ಹೊನ್ನ ಸುರದಿದ್ದಾನು
ರಾಕ್ಷೇಸ ಅಕಿಯುಡಿಗೆ.
ಹೆಂಗ್ಸ್ಯಾಕ ಹಿಂಗವ್ವ ?
ಹೆಣ್ಣಿಗ್ಹೆಣ್ಣೇ ವೈರಿ ಸುಳ್ಳೇನು
ಖರೆಯೇನು?
ಕೆಂಪು ದೀಪದ ತಿಮಿರ
ಕಾಮಾಟಿಪುರದ ಕ್ವಾಟಿ ದದ್ದನಕ,
ಅಗಸಿಗೆ -ಒದ್ದು ಕೆಡವಿದನೇನು ಕುದರಿಯೇರಿದ ಕುಮಾರ?
ತಗದನೇನು ಚಿಲಕಾ??
ಅಳತಾಳ ಒಳಗೊಳಗ ಸುಕುಮಾರಿ
ಎದಿ ಒಡದು ಮಳಮಳಿಸಿ..
ಇಲ್ಲಿ ಉರುಳಾಡಿದವರೆಲ್ಲ
ಯಾರ್ಯಾರದೋ ಬೇಟಿ!
ಎಲ್ಹೋದ್ಯೋ ನೀ? ಉಳಿಬೇಕಂದ್ರ ಹೆಣ್ಣು,
ಮುರಿ ಚಕ್ರವ್ಯೂಹದ ಕ್ವಾಟಿ.
ಮುಂದೇನು ಪ್ರಶ್ನಿ?
ಅದೇ- ತಗೀತೇನು ಚಿಲಕಾ?!
ಜಯಶ್ರೀ ದೇಶಪಾಂಡೆ
ಲೇಖಕಿ ಜಯಶ್ರೀ ದೇಶಪಾಂಡೆ ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ.
ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ ಕೆಂದಾಯಿ ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ) ಹೌದದ್ದು ಅಲ್ಲ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು (ವಿಜಯ ಕರ್ನಾಟಕ), ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ) ಇವು ಧಾರಾವಾಹಿಯಾಗಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಕಾದಂಬರಿಗಳು.:ಪ್ರಥಮ್ ಬುಕ್ಸ್ ಸಂಸ್ಥೆಗಾಗಿ ಸ್ವಂತ ಕಥೆಗಳಲ್ಲದೆ ಮರಾಠೀ ಮತ್ತು ಇಂಗ್ಲಿಷ್ಶ್ ಭಾಷೆಗಳಿಂದ ಕನ್ನಡಕ್ಕೆ ಭಾವಾನುವಾದ ಮಾಡಿದ ನಲವತ್ತರಷ್ಟು ಪುಸ್ತಕಗಳು ಪ್ರಕಟವಾಗಿವೆ.
ಪ್ರಶಸ್ತಿ-ಗೌರವ: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ , ದೂರದರ್ಶನ, ಉದಯ ಟಿವಿ ವಾಹಿನಿಗಳಲ್ಲಿ ಸಂದರ್ಶನ, *ಅಕ್ಷರ ಪ್ರತಿಷ್ಠಾನದ ಮಕ್ಕಳ "ಕಲಿಕಾ ಏಣಿ" ಯೋಜನೆಯ ಮಾರ್ಗದರ್ಶಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ. (ಯತ್ಕಿಂಚಿತ್- ಕವನ ಸಂಕಲನಕ್ಕೆ ), ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ 'ಸುಧಾ ಮೂರ್ತಿ ತ್ರಿವೇಣಿ ಸಾಹಿತ್ಯ ಪ್ರಶಸ್ತಿ' (ಸ್ಥವಿರ ಜಂಗಮಗಳಾಚೆ' ಕಥಾ ಸಂಕಲನಕ್ಕೆ), ಅತ್ತಿಮಬ್ಬೆ ಪ್ರಶಸ್ತಿ. (ಹೌದದ್ದು ಅಲ್ಲ ಅಲ್ಲದ್ದು ಹೌದು- ಲಲಿತ ಪ್ರಬಂಧ ಸಂಕಲನಕ್ಕೆ), ಗೋರೂರು ಪ್ರತಿಷ್ಠಾನದ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ.( ಮೂರನೆಯ ಹೆಜ್ಜೆ- -ಕಥಾಸಂಕಲನಕ್ಕೆ), ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ. ಅತ್ತಿಮಬ್ಬೆ ಪ್ರತಿಷ್ಠಾನದಿಂದ. (ಬೆಳಗಾಂವಕರ್ ನಾಸು- ಕಾದಂಬರಿ ಸುನಂದಾ - ವಿಮರ್ಶೆ), ದಿ. ಸಿ ಎನ್ ಜಯಲಕ್ಷ್ಮೀದೇವಿ (ಕಥಾಪ್ರಶಸ್ತಿ)
More About Author