Poem

ಸಾವಿನ ಜಾಡಿನಲ್ಲಿ

ಜೊತೆಯಾಗಿ ನಡೆದವರೆಲ್ಲ ಅಗಲಿದರೂ
ಸಾವು ಮಾತ್ರ ಜೊತೆಗಿರುವ ಖಾಯಂ ಮಿತ್ರ,
ಒಳಗೇ ಮುಗುಮ್ಮಾಗಿ ಮಲಗಿದ್ದು
ಕಾದು ನೋಡಿ ಹೆಡೆಯೆತ್ತುವುದೇ ಸಾರ್ವತ್ರಿಕ ಸೂತ್ರ,
ಸಾವೆದ್ದರೆ ನಾವಿಲ್ಲ: ನಾವೆದ್ದರೆ ಸಾವಿಲ್ಲ.
ನಮ್ಮೆಚ್ಚರ ಸಾವಿಗೆ ನಿದ್ರೆ; ಸಾವಿನೆಚ್ಚರ ನಮಗೆ ಚಿರನಿದೆ.

ಕರೆದರೆ ಬಾರದು; ಬಾರದೆ ಬಿಡದು.
ಸಾವನರಸಿ ಅವಗಾಹಿಸುವುದು ಕೂಡದು.
ನೂರು ಮಿಥ್ಯ: ಸಾವು ಮಾತ್ರ ಸತ್ಯ.

ಆಸೆಗೆ ಮಿತಿಯಿಲ್ಲ, ಕೊನೆಯೆಂಬುದಿಲ್ಲ.
ಆಸೆಯ ಪಟ್ಟಿಯಲ್ಲಿ ಸಾವೇ ಇಲ್ಲ.

ಸಾವಿನ ಹುಟ್ಟು ಜೀವಹರಣ,
ಜೀವದ ಹುಟ್ಟು ಸಾವಿಗೆ ಹೂರಣ.
ಸಾವು ಸರ್ವಾಂತರ್ಮಯಿಯಾದರೂ
ಅದರ ಆಗಮನದ ಸುದ್ದಿಯೇ ಸ್ಪುರಣ.

ಸಾವು ಅಲ್ಲ ಪೆಡಂಭೂತ
ಜೊತೆಜೊತೆಯಲೇ ಮಿಗದಂತೆ ಇದ್ದರೂ
ಉದಾಸೀನದಿಂದ ಮಾತ್ರ ಸಖೀಗೀತ.

ಕೆಲವರಿಗೆ ಸಾವಿನ ಭಯವೇ ಇಲ್ಲ;
ಅಮರರು ಅವರು.
ಸಾವರಗಿದರೂ ಬದುಕುವರು ಜನಮಾನಸದಲಿ
ಗಾಂಧಿ ಬುದ್ಧ ಬಸವರಂತೆ.
ಮತ್ತೆ ಕೆಲವರಿಗೆ ಅಳಿಯಲು ಸಾವೇ ಬೇಕಿಲ್ಲ.
ಇದ್ದೂ ಸತ್ತಂತಿಹರು ಸಾವು ಬರದಿದ್ದರೂ,
ಅಸಂಖ್ಯಾತ ನಿಷ್ಟ್ರಯೋಜಕ ಜಂತುಗಳಂತೆ.

ಕೆ.ಎಸ್ ಗಂಗಾಧರ

ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author