ಈಗ ತಿಂಗಳೊಪ್ಪತ್ತಿನ ಹೊತ್ತಾಯಿತು. ಸಂಗಪ್ಪನ ಕಣ್ಣಿಗೆ ನಿದ್ದೆ ಅಂಬೋದು ಕನಸಿನ ಮಾತಾಗಿತ್ತು. ರಾತ್ರಿ ಹೊತ್ತು ಊಟ ಮಾಡಿದರೆ ಮಾಡಿದ; ಇಲ್ಲದಿದ್ದರೆ ಇಲ್ಲ ಎಂಬಂತ ಸ್ಥಿತಿಯಲ್ಲಿ ಹಾಸುಗೆಯಲ್ಲಿ ಮಲಗಿರುತ್ತಿದ್ದ. ಆತ ಇನ್ನೇನು ನಿದ್ದೆಗೆ ಜಾರಿದ ಎನ್ನುವಷ್ಟರಲ್ಲಿ ಏನಕೇನರೆ ವಿಚಾರಗಳು ಕಣ್ಮುಂದೆ ಬಂದಂತಾಗಲು ದಿಗ್ಗನೆ ಹಾಸುಗೆಯಲ್ಲಿ ಎದ್ದು ಕುಂತವನೆ ಮೇಲೆ ಸೂರಿಗೆ ಕಣ್ಣುಗಳನ್ನು ನೆಟ್ಟು ಚಿಂತೆಗಿಳಿದು ಬಿಟ್ಟನೆಂದರೆ ತೀರಿತು... ಸಂಗಪ್ಪನಿಗೆ ರಾತ್ರಿ ಕಳೆದು ಹಗಲು ಹೊಂಟಿದ್ದೇ ಗೊತ್ತಗುತ್ತಿರಲಿಲ್ಲ. ಇದು ಇತ್ತಿತ್ತಲಾಗಿ ಆತನ ನಿತ್ಯದ ಕ್ರಿಯೆಗಳಲ್ಲಿ ಒಂದಾಗಿ ಹೋಗಿತ್ತು. ಆದರೆ, ಇದೆಲ್ಲ ದಿನ ಕಳೆದಂಗೆ ಹೆಚ್ಚಾಗುತ್ತ ಹೋದಂತೆ ಸಂಗಪ್ಪ ತನ್ನ ಬದುಕಿನ ಮೇಲಿನ ಚೈತನ್ಯವನ್ನೇ ಕಳೆದುಕೊಂಡು ಬಿಟ್ಟಿದ್ದ. ಹೀಗಾಗಿ, ಆತನ ಕುಟುಂಬಕ್ಕೆ ಆಸರೆಯಾಗಿದ್ದ ಮೂರು ಎಕರೆ ಜಮೀನಿನಲ್ಲಿ ಜೋಳವನ್ನು ಬಿತ್ತನೆ ಮಾಡಿದ್ದನಾದರೂ ಅದಕ್ಕೆ ಗೊಬ್ಬರ ಹಾಕುವುದು, ನೀರು ಉಣಿಸುವುದು ಮತ್ತು ಕಸ ತೆಗೆಯುವುದರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೇ ಒಂದು ತೆರದಲ್ಲಿ ನಿರಾಸಕ್ತನಾಗಿ ಬಿಟ್ಟಿದ್ದ. ಆದರೆ, ಜಮೀನಿನಲ್ಲಿ ಕೆಲಸ ಮಾಡಿಕೊಂಡು ಸದಾ ಲವಲವಿಕೆಯಿಂದ ಇರುತ್ತಿದ್ದ ಸಂಗಪ್ಪನಲ್ಲಿ ಹೀಗೆ ಇದ್ದಕ್ಕಿದ್ದಂಗೆ ಆದ ಬದಲಾವಣೆಯು ಆತನ ಹೆಂಡತಿ ಸುಮ್ಮವ್ವನಿಗೆ ಚಿಂತೆಯಾಗಿ ಕಾಡತೊಡಗಲು ದಿಗಿಲಿಗೆ ಬಿದ್ದಿದ್ದಳು. ಆಗ, ಆತನಿಗೆ ಎದೆ ಮಟ್ಟ ಬೆಳೆದು ನಿಂತ ಮಗಳು ಪ್ರೇಮಾಳ ಭವಿಷ್ಯದ ಬಗ್ಗೆ ಎಚ್ಚರಿಸುವುದರ ಮೂಲಕ ದಿನವೂ ಆಕೆ ಬುದ್ಧಿವಾದ ಹೇಳುತ್ತಿದ್ದಳು. ಹೀಗೆ, ಸುಮ್ಮವ್ವ ಹೇಳುತ್ತಿದ್ದ ಬುದ್ಧಿ ಮಾತುಗಳ ಕಾರಣವಾಗಿಯೋ ಅಥವಾ ಸ್ವಯಂ ತಾನೇ ಮನಸ್ಸು ಗಟ್ಟಿ ಮಾಡಿ, ಈ ಚಿಂತೆಯ ಬಲೆಯಿಂದ ಹೊರ ಬಂದು ಮೊದಲಿನಂತೆ ಜಮೀನಿನಲ್ಲಿ ಕೆಲಸ ಮಾಡಿಕೊಂಡು ನೆಮ್ಮದಿಯಿಂದ ಇರಬೇಕೆಂದುಕೊಂಡ ಕಾರಣವಾಗಿಯೋ ಏನೋ ಸಂಗಪ್ಪ ದಿನವೂ ಜಮೀನಿನತ್ತ. ಹೋಗತೊಡಗಿದ್ದ. ಆದರೆ, ಅಲ್ಲಿ ಹೋದ ಕೂಡಲೇ ಆತನಿಗೆ ಅದೇನಾಗುತ್ತಿತ್ತೋ ಏನೋ ಮತ್ತೇ ಎಂದಿನಂತೆಯೇ ಅನ್ನ ಆಹಾರದ ಖಬರು ಇಲ್ಲದಂಗೆ ಜಮೀನಿನ ಒಂದು ಬದಿಗಿದ್ದ ಬೇವಿನ ಗಿಡದ ನೆರಳಿನಲ್ಲಿ ಸರಿಯಾಗಿ ಆರೈಕೆಯಿಲ್ಲದೇ ಜಮೀನಿನ ತುಂಬ ಬಯಲು ಬಯಲಾಗಿ ಬೆಳೆದು ನಿಂತ ಜೋಳದ ಬೆಳೆಯನ್ನು ಕಣ್ತುಂಬಿಕೊಂಡು ಸಂಜೆಯವರೆಗೂ ಏನೇನೋ ಗೇಣಕಿ ಹಾಕುತ್ತ ಕುಂತು ಬಿಡುತ್ತಿದ್ದ!
ಈ ತೆರನಾಗಿ ಸಂಗಪ್ಪನು ಸಿಂಬಳದಲ್ಲಿ ಸಿಲುಕಿದ ನೊಣದಂತೆ ಚಿಂತೆಯೆಂಬ ಕೆಸರಿನೊಳಗೆ ದಿನ ದಿನವೂ ಹೂತು ಹೋಗುತ್ತಿರುವಾಗಲೇ, ಇಂದು ಸಂಜೆ ಹೊತ್ತಲ್ಲಿ ತಳವಾರ ಭೀಮಪ್ಪನು ಮನೆ ವರೆಗೂ ಬಂದು, ‘ಸಂಗಪ್ಪ, ನಾಳೆ ಹೊತ್ತು ಹೊಂಟುತ್ಲೆ ಚನ್ನಪ್ಪಸಾವ್ಕಾರ್ರು ನಿನ್ಗ ಬಂದು ಭೇಟ್ಟಿ ಆಗ್ಲಿಕ್ಕೆ ಹೇಳ್ಯಾರು...’ ಎಂದು ಸುದ್ದಿ ಮುಟ್ಟಿಸಿ ಹೋಗಿದ್ದ. ಈ ಸುದ್ದಿ ಸಂಗಪ್ಪನಿಗೆ ವಿಪರೀತ ಸಿಟ್ಟು ತರಿಸಿತ್ತು. ಆ ಹೊತ್ತಲ್ಲಿ, ಚನ್ನಪ್ಪಸಾವ್ಕಾರನು ತನ್ನನ್ನು ಕರೆ ಕಳಿಸಿದ್ದರ ಹಿಂದಿನ ಹಕೀಕತ್ತು ಏನಿರಬೇಕೆಂಬುದನ್ನು ಊಹಿಸಿಕೊಂಡಿದ್ದ ಆತ, ‘ಇಂಥ ಹಡಬಿಟ್ಟಿ ಸೂಳಿಮಕ್ಳು ಇರೂದ್ರಿಂದನS ನಮ್ಮಂಥ ಸಣ್ಣ ಸಣ್ಣ ರೈತರ ಬಾಳೇವಿ ಹರದು ಹಂಗ್ಡ ಆಗ್ಹೋಗೆದ...’ ಎಂದು ಮನದೊಳಗೆ ಬೈದುಕೊಂಡ. ಹಾಗೆಯೇ, ಚನ್ನಪ್ಪಸಾವ್ಕಾರನಂಥ ಲಾಭದ ಮನುಷ್ಯನಿಂದಾಗಿ ತಾನು ಎದುರಿಸಬೇಕಾಗಿ ಬಂದ ಸಮಸ್ಯೆಗಾಗಿ ಒಳಗೊಳಗೆ ಸಂಕಟಪಡತೊಡಗಿದ. ಈ ಸಿಟ್ಟು ಮತ್ತು ಸಂಕಟದ ನಡುವೆಯೇ ಸಂಗಪ್ಪನು ನಾಳೆ ಹುಟ್ಟಲಿರುವ ಹಗಲನ್ನು ಎದುರು ನೋಡುತ್ತ ಕುಂತಿರಲು ಇತ್ತ ಮನುಷ್ಯನ ಈ ಥರದ ಲಾಭ ನಷ್ಟಗಳ ಅರಿವೇ ಇಲ್ಲದ ಆ ರಾತ್ರಿಯು, ಅದೇ ನಾಳೆ ಹುಟ್ಟಲಿರುವ ಹಗಲಿನೊಳಗೆ ಕರಗಿ ಕರಗಿ ಹೋಗುತ್ತಿತ್ತು!
ರೈತಕಿ ಬದುಕನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಸಂಗಪ್ಪನಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಮೂರು ಎಕರೆ ಜಮೀನಿನಲ್ಲಿ ಕೆಲಸ ಮಾಡುವುದೆಂದರೆ ಎಲ್ಲಿಲ್ಲದ ಹುಮ್ಮಸ್ಸು. ಭೂಮ್ತಾಯಿಯೊಂದಿಗೆ ಹೀಗೆ ನಿರಂತರವಾಗಿ ಒಡನಾಡುವುದಕ್ಕೂ ದೇವರಲ್ಲಿ ಬೇಡಿ ಬಂದಿರಬೇಕು ಎಂಬುದು ಆತನ ಬಲವಾದ ನಂಬಿಕೆಯಾಗಿತ್ತು. ಅದಕ್ಕೇ, ಆತ ಹಗಲು ಹನ್ನೆರಡು ತಾಸು ಜಮೀನಿನಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ. ತನ್ನ ಜಮೀನಿನಲ್ಲಿ ಜೋಳ, ಅರಿಸಿನ, ಗೋದಿ, ರಾಗಿ- ಹೀಗೆ ಕಾಲ ಕಾಲಕ್ಕೆ ಬೇರೆ ಬೇರೆ ಬೆಳೆಯನ್ನು ಬೆಳೆಯುತ್ತಿದ್ದ ಸಂಗಪ್ಪ ಮಾತ್ರ ಈ ಬೆಳೆಗಳಿಗೆಲ್ಲ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದ. ಜಮೀನಿನಲ್ಲೇ ಕೊಳವೆ ಬಾವಿಯನ್ನು ಕೊರೆಸಿದ್ದ ಆತ ಆಗಾಗ ಬೆಳೆದ ಬೆಳೆಗೆ ತಿಪ್ಪಿ ಗೊಬ್ಬರ ತಂದು ಹಾಕುವುದು, ನೀರು ಉಣಿಸುವುದು, ಮತ್ತು ಕೈಯಲ್ಲಿ ಒಂದೆರಡು ಆಳುಗಳನ್ನು ತೆಗೆದುಕೊಂಡು ಕಸ ತೆಗೆಯುವುದು ಮಾಡುತ್ತಿದ್ದ. ಈ ತೆರನಾಗಿ ಆತ ಕೃಷಿ ಮಾಡುವ ಕಾಯಕವನ್ನು ಒಂದು ತಪಸ್ಸಿನಂತೆ ಮಾಡುತ್ತಿದ್ದನಾದ್ದರಿಂದ ಬೆಳೆ ಬಂದ ಮೇಲೆ ಬೇರೆಯವರಿಗಿಂತ ಜಾಸ್ತಿ ಇಳುವರಿಯನ್ನು ಪಡೆದುಕೊಳ್ಳುತ್ತಿದ್ದ. ಹೀಗಾಗಿ, ಸಂಗಪ್ಪನಿಗಿಂತ ಹೆಚ್ಚಿನ ಹೊಲವನ್ನು ಹೊಂದಿದ್ದ ಇತರೆ ರೈತರಿಗಿಂತ ಬರೀ ತನ್ನ ಮೂರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಯಿಂದ ಹೆಚ್ಚಿನ ಲಾಭವನ್ನು ಮಾಡಿಕೊಳ್ಳುತ್ತಿದ್ದ. ಆದರೆ, ಇದೆಲ್ಲ ಸಂಗಪ್ಪನಿಗೆ ಹೇಗೆ ಸಾಧ್ಯವಾಗುತ್ತದೆ?- ಎಂಬುದು ಯಕ್ಷಪ್ರಶ್ನೆಯಾಗಿ ಆ ರೈತರನ್ನೆಲ್ಲ ಕಾಡುತ್ತಿತ್ತು. ಅಷ್ಟಕ್ಕೂ ಆತ ಅನುಸರಿಸುತ್ತಿದ್ದ ಸಾಂಪ್ರದಾಯಿಕವಾದ ಕೃಷಿ ಪದ್ಧತಿಯೇ ಇದಕ್ಕೆಲ್ಲ ಕಾರಣವಾಗಿತ್ತು.
ಕೃಷಿ ಕಾಯಕದಲ್ಲಿ ದೇವರನ್ನು ಕಾಣುತ್ತಿದ್ದ ಆತನನ್ನು ಎಂದೂ ಭೂಮ್ತಾಯಿಯು ಕೈ ಬಿಟ್ಟಿರಲಿಲ್ಲ. ಅಂತೆಯೇ, ಸಂಗಪ್ಪ ತನ್ನ ಹೆಂಡತಿ ಸುಮ್ಮವ್ವ ಹಾಗೂ ವಯಸ್ಸಿಗೆ ಬಂದ ಒಬ್ಬಳೇ ಮಗಳು ಪ್ರೇಮಾಳೊಂದಿಗೆ ನೆಮ್ಮದಿಯ ಬದುಕನ್ನು ಸಾಗಿಸಿದ್ದ. ಅಲ್ಲದೇ, ಕೈಯಲ್ಲಿ ನಾಲ್ಕು ಕಾಸು ಮಾಡಿಕೊಂಡಿದ್ದ ಆತ ಪ್ರೇಮಾಳ ಮದುವೆಗಾಗಿ ಬಂಗಾರದ ಒಡವೆಗಳನ್ನು ಸಹ ಮಾಡಿಸಿಟ್ಟುಕೊಂಡಿದ್ದ. ಇನ್ನೇನು ಬರುವ ತುಳಸಿ ಲಗ್ನಕ್ಕೆ ಆಕೆಯ ಮದಿವಿ ಮಾಡಬೇಕೆಂದುಕೊಂಡಿದ್ದ ಸಂಗಪ್ಪ, ತನ್ನ ಹೆಂಡತಿ ಸುಮ್ಮವ್ವನ ತಮ್ಮ ಸುಭಾಷನಿಗೆ ಕೊಟ್ಟು ಮನೆ ಅಳಿಯನನ್ನಾಗಿಸಿಕೊಳ್ಳಬೇಕೆಂಬ ವಿಚಾರದಲ್ಲಿದ್ದ. ಆತನ ಈ ನಿರ್ಧಾರ ಸುಮ್ಮವ್ವನಿಗೂ ಸಹ ಹಿಡಿಸಿತ್ತು. ಈ ರೀತಿಯಾಗಿ ಸಂಗಪ್ಪನ ವಿಚಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬರುತ್ತಿರುವ ಹೊತ್ತಲ್ಲೇ ಆತನ ಬದುಕನ್ನೇ ಕಸಿದುಕೊಳ್ಳುವಂಥ ವ್ಯವಸ್ಥಿತವಾದ ಪಿತೂರಿಯೊಂದು ತನ್ನಷ್ಟಕ್ಕೆ ತಾನೇ ಜೀವ ಪಡೆದುಕೊಳ್ಳತೊಡಗಿತು. ಮತ್ತು ಇದೇ ಆತನ ಮನೋ ನೆಮ್ಮದಿಯನ್ನು ಕಸಿದುಕೊಳ್ಳುವುದಕ್ಕೆ ಕಾರಣವಾಗಿತ್ತು. ಇದೆಲ್ಲ ಶುರುವಾದದ್ದು ಈಗ ತಿಂಗಳೊಪ್ಪತ್ತಿನ ಹಿಂದೆ.
******
ಸಂಗಪ್ಪನಿಗೆ ಇತ್ತಿತ್ತಲಾಗಿ ತನ್ನ ಬದುಕಿನ ಬಗ್ಗೆ ಅಭದ್ರತೆಯ ಭಾವ ಕಾಡತೊಡಗಿತ್ತು. ಮಣ್ಮನ್ನೇ ನಂಬಿ ಬದುಕಿ ಬಾಳುತ್ತಿದ್ದ ಆತನ ಸಧ್ಯದ ಸ್ಥಿತಿ ಸೂತ್ರ ಕಿತ್ತ ಗಾಳಿಪಟದಂಗಾಗಿತ್ತು. ಅದಕ್ಕೆ ಕಾರಣವೂ ಇತ್ತು. ಅದು, ಚನ್ನಪ್ಪಸಾವ್ಕಾರನು ತನ್ನ ಹತ್ತು ಎಕರೆ ಜಮೀನನ್ನು ಬೆಳಗಾವಿಯ ಶ್ರೀಮಂತ ವ್ಯಕ್ತಿಯೊಬ್ಬನಿಗೆ ಎಕರೆಗೆ ಐವತ್ತು ಲಕ್ಷ ರೂಪಾಯಿಯಂತೆ ಮಾರಾಟ ಮಾಡಲು ನಿರ್ಧರಿಸಿದ್ದ! ಹಾಗಂತ ಚನ್ನಪ್ಪಸಾವ್ಕಾರನು ಈ ನಿರ್ಧಾರವನ್ನು ಏಕಾಏಕಿಯಾಗಿ ಏನೂ ತೆಗೆದುಕೊಂಡಿರಲಿಲ್ಲ. ಈಗ ನಾಲ್ಕಾರು ವರ್ಷಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಹೆಂಡತಿಯನ್ನು ಕಳೆದುಕೊಂಡಿದ್ದ ಚನ್ನಪ್ಪಸಾವ್ಕಾರನ ಏಕೈಕ ಪುತ್ರ ಸುಧೀರನು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಪ್ಟವೇರ್ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದ. ಆತ, ತನ್ನ ಹೆಂಡತಿಯೊಂದಿಗೆ ಅಲ್ಲಿಯೇ ನೆಲೆಸಿದ್ದನಾದ್ದರಿಂದ ಚನ್ನಪ್ಪಸಾವ್ಕಾರನು ಮಾತ್ರ ಹೊಲ-ಮನೆ ನೋಡಿಕೊಳ್ಳುವುದಕ್ಕಾಗಿ ಊರಲ್ಲಿಯೇ ಉಳಿದುಕೊಂಡಿದ್ದ. ಈಗ ಒಬ್ಬಂಟಿಯಾಗಿರುತ್ತಿದ್ದನಾದ್ದರಿಂದ ತನ್ನ ಅನುಕೂಲಕ್ಕಾಗಿ ತಳವಾರ ಭೀಮಪ್ಪ ಮತ್ತು ಆತನ ಹೆಂಡತಿ ರುಕುಮವ್ವನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ರುಕುಮವ್ವ ಮನೆ ಕೆಲಸ ಮಾಡಿಕೊಂಡಿದ್ದರೆ, ಭೀಮಪ್ಪ ಹೊಲದ ಕಡೆಗೆ ನೋಡಿಕೊಳ್ಳುತ್ತಿದ್ದ. ಆದರೂ, ಇದ್ದೊಬ್ಬ ಮಗನಿಂದ ದೂರ ಉಳಿದು ಒಬ್ಬಂಟಿಯಾಗಿ ಹಳ್ಳಿಯಲ್ಲಿಯೇ ಇರುತ್ತಿದ್ದ ಚನ್ನಪ್ಪಸಾವ್ಕಾರನಿಗೆ ಸಾಕಷ್ಟು ತ್ರಾಸು ಆಗುತ್ತಿತ್ತು. ಇದೆಲ್ಲ ಆತನ ಮಗ ಸುಧೀರನ ಆರಿವಿಗೂ ಬಂದಿತ್ತು. ಅದಕ್ಕೇ, ಆತ ಊರಲ್ಲಿದ್ದ ಜಮೀನನ್ನು ಮಾರಿ, ಇದ್ದ ಮನೆಯನ್ನು ಯಾರಿಗಾದರೂ ಬಾಡಿಗೆಗೆ ಕೊಟ್ಟು ತಮ್ಮೊಂದಿಗೆ ಬೆಂಗಳೂರಿನಲ್ಲಿ ಬಂದು ನೆಲೆಸಲು ಚನ್ನಪ್ಪಸಾವ್ಕಾರನಿಗೆ ಆಗಾಗ ಒತ್ತಾಯಿಸುತ್ತಲೇ ಇದ್ದ. ಹಾಗೆ ನೋಡಿದರೆ
ಚನ್ನಪ್ಪಸಾವ್ಕಾರನಿಗೂ ಸಹ ಇದು ಬೇಕಾಗಿತ್ತಾದರೂ ಆತನೇ ಈ ವಿಚಾರವನ್ನು ಮುಂದೆ ಹಾಕುತ್ತ ಬಂದಿದ್ದ. ಆದರೆ, ಅದಕ್ಕೆಲ್ಲ ಈಗ ಕಾಲ ಕೂಡಿ ಬಂದಿದೆ ಏನೋ ಎಂಬಂತೆ ಇತ್ತೀಚಿಗೆ ಸರಕಾರ ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದ ಮೇಲೆ ಕಾರ್ಪೋರೇಟ್ ವಲಯದ ಶ್ರೀಮಂತ ವ್ಯಕ್ತಿಗಳು ನಗರಕ್ಕೆ ಸಮೀಪವಿದ್ದ ಹಳ್ಳಿಗಳಲ್ಲಿನ ಜಮೀನುಗಳನ್ನು ಕೊಂಡುಕೊಳ್ಳಲು ಮುಂದೆ ಬರತೊಡಗಿದರು. ಅವರು ಸಣ್ಣ ಸಣ್ಣ ರೈತರಿಗೆ ಹಣದ ಆಮಿಷವೊಡ್ಡಿ, ಬೇರೆ ಬೇರೆ ರೀತಿಯಲ್ಲಿ ಒತ್ತಡಗಳನ್ನು ಹೇರಿ ನೂರಾರು ಎಕರೆ ಭೂಮಿಯನ್ನು ಖರೀದಿಸಲು ಪ್ರಾರಂಭಿಸಿದರು. ಅದರಂತೆ ಬೆಳಗಾವಿಯ ಶ್ರೀಮಂತ ವ್ಯಕ್ತಿಯೊಬ್ಬ ಹೆಚ್ಚಿನ ಹಣವನ್ನು ಕೊಟ್ಟು ಚನ್ನಪ್ಪಸಾವ್ಕಾರನ ಹತ್ತು ಎಕರೆ ಜಮೀನನ್ನು ಕೊಂಡುಕೊಳ್ಳಲು ಮುಂದೆ ಬಂದಿದ್ದ. ಇದರಿಂದಾಗಿ ಕೋಟ್ಯಂತರ ರೂಪಾಯಿ ಹಣ ಸಿಕ್ಕುತ್ತದೆ ಎಂದುಕೊಂಡು ಜಮೀನನ್ನು ಮಾರಲು ಒಪ್ಪಿಕೊಂಡಿದ್ದ ಚನ್ನಪ್ಪಸಾವ್ಕಾರನು ಹೀಗೆ ಮಾರಿ ಬಂದ ಹಣದೊಂದಿಗೆ ಬೆಂಗಳೂರಿನಲ್ಲಿರುವ ಮಗ ಸುಧೀರನೊಂದಿಗೆ ನೆಲೆಸಲು ನಿರ್ಧರಿಸಿದ್ದ!
ಆದರೆ, ಇದೆಲ್ಲ ಚನ್ನಪ್ಪಸಾವ್ಕಾರನ ಖಾಸಗಿ ವಿಷಯವಾಗಿತ್ತಾದರೂ ಸಂಗಪ್ಪನ ಬುಡಕ್ಕೆ ನೀರು ತಂದಿಟ್ಟಿತ್ತು. ಆತನ ಜಮೀನಿನ ಅಕ್ಕ ಪಕ್ಕದಲ್ಲಿದ್ದ ಶಿವಪ್ಪ, ರಾಮಪ್ಪ ಮತ್ತು ತುಕ್ಕಪ್ಪ- ಇವರೆಲ್ಲರೂ ಸಹ ತಮಗಿದ್ದ ತುಂಡು ಜಮೀನುಗಳನ್ನು ಕೈತುಂಬ ಹಣ ಬರುತ್ತದೆ ಎಂದುಕೊಂಡು ಚನ್ನಪ್ಪಸಾವ್ಕಾರನ ಮಾತು ಕೇಳಿಕೊಂಡು ಅದೇ ವ್ಯಕ್ತಿಗೆ ಮಾರಲು ನಿರ್ಧರಿಸಿದ್ದರು! ಹೀಗೆ, ಇವರೆಲ್ಲ ಜಮೀನು ಮಾರುವುದರಿಂದ ಚನ್ನಪ್ಪಸಾವ್ಕಾರನಿಗೆ ಹೆಚ್ಚಿನ ಲಾಭವಿತ್ತು. ಜಮೀನು ಕೊಳ್ಳಲು ನಿರ್ಧರಿಸಿದ್ದ ಆ ವ್ಯಕ್ತಿ, ಈ ಊರಿನ ಸಣ್ಣ ಪುಟ್ಟ ರೈತರ ಜಮೀನುಗಳನ್ನು ಮಧ್ಯವರ್ತಿಯಾಗಿ ತನಗೆ ಕೊಡಿಸಿದರೆ ಚನ್ನಪ್ಪಸಾವ್ಕಾರನಿಗೆ ಸಾಕಷ್ಟು ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿದ್ದ. ಈ ರೀತಿಯಾಗಿ ಚನ್ನಪ್ಪಸಾವ್ಕಾರನ ಮೂಲಕ ಆತ ಊರಿನ ಎಲ್ಲ ರೈತರ ಜಮೀನು ಖರೀದಿಸಿ ಅಲ್ಲೊಂದು ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಿದ್ದ. ಇದು ಸಂಗಪ್ಪನ ಆತಂಕವನ್ನು ಹೆಚ್ಚಿಸಿತ್ತು. ಒಂದು ವೇಳೆ ಎಲ್ಲ ರೈತರು ಚನ್ನಪ್ಪಸಾವ್ಕಾರನ ಮಾತು ಕೇಳಿ ಆ ಶ್ರೀಮಂತ ವ್ಯಕ್ತಿಗೆ ತಮ್ಮ ಜಮೀನುಗಳನ್ನು ಮಾರಿದರೆ ತನ್ನ ಉಪಜೀವನಕ್ಕೆ ಆಸರೆಯಾಗಿದ್ದ ಮೂರು ಎಕರೆ ಭೂಮಿಯನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದು ಆತನನ್ನು ಚಿಂತೆಯಾಗಿ ಕಾಡುತ್ತಿತ್ತು.
ಮಣ್ಣಿನೊಂದಿಗೆ ಸಂಪರ್ಕವನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿದ್ದ ಸಂಗಪ್ಪನಿಗೆ ಮುಂದೆ ಏನು ಮಾಡಬೇಕೆಂದು ತಿಳಿಯದಾಗಿತ್ತು. ಅದಕ್ಕೇ, ಆಗಿನಿಂದಲೂ ದಿಕ್ಕುಗೇಡಿಯಂತಾಗಿದ್ದ ಆತ ಅನ್ನ ಆಹಾರದ ಖಬರು ಇಲ್ಲದಂಗೆ ಬರೀ ಚಿಂತೆಯೂಳಗೆ ಕಾಲ ಕಳೆಯಲಾರಂಭಿಸಿದ್ದ. ಅಂಥದರಲ್ಲಿ ಇಂದು ಸಂಜೆ ಹೊತ್ತಲ್ಲಿ ಚನ್ನಪ್ಪಸಾವ್ಕಾರನ ಕೆಲಸದಾಳು ತಳವಾರ ಭೀಮಪ್ಪ ಮನೆ ವರೆಗೂ ಬಂದು ಆತ ಹೇಳಿ ಕಳಿಸಿದ್ದ ಸುದ್ದಿಯನ್ನು ಮುಟ್ಟಿಸಿ ಹೋಗಿದ್ದ. ಆ ಸುದ್ದಿಯನ್ನು ಕೇಳಿದಾಗಿನಿಂದಲೂ ಸಿಟ್ಟು ಮತ್ತು ಸಂಕಟದಲ್ಲಿ ಕುದಿಯುತ್ತಿದ್ದ ಸಂಗಪ್ಪನು ಅದಾಗಲೇ ಮನದೊಳಗೆ ಒಂದು ನಿರ್ಧಾರಕ್ಕೆ ಬಂದಿದ್ದ. ಅದಕ್ಕೇ ಆತ ನಾಳೆ ಹುಟ್ಟಲಿರುವ ಕಾಯುತ್ತಿದ್ದ.
******
ಚನ್ನಪ್ಪಸಾವ್ಕಾರನ ಮನೆಗೆ ಸಂಗಪ್ಪ ಬಂದಾಗ ಆತ ಆರಾಮಖುರ್ಚಿಯಲ್ಲಿ ಕುಂತಿದ್ದ. ಆತನ ಸುತ್ತಲೂ ನೆಲದ ಮೇಲೆ ಶಿವಪ್ಪ, ರಾಮಪ್ಪ, ತುಕ್ಕಪ್ಪ ಹಾಗೂ ಮತ್ತೊಂದಿಬ್ಬರು ಕುಂತಿದ್ದರು. ಆ ಹೊತ್ತಲ್ಲಿ, ಅವರೊಂದಿಗೆ ಮಾತಿನೊಳಗೆ ಮುಳುಗಿ ಹೋಗಿದ್ದ ಚನ್ನಪ್ಪಸಾವ್ಕಾರನು ಹೆಜ್ಜೆ ಸಪ್ಪಳಾದಂತೆನಿಸಿ ಕತ್ತು ತಿರುಗಿಸಿ ಬಾಗಿಲಿನತ್ತ ನೋಡಿದ. ಆಗ, ಸಂಗಪ್ಪನು ಮನೆಯೊಳಗೆ ಬರುತ್ತಿರುವುದನ್ನು ಕಂಡು, ಆರಾಮಖುರ್ಚಿಯಲ್ಲಿ ಎದ್ದು ಕುಂತವರಂತೆ ಮಾಡುತ್ತ, ‘ಸಂಗಪ್ಪ, ಬಾ, ಬಾ... ನಿನ್ನ ದಾರಿನS ಕಾಯಾಕತ್ತಿದ್ದೆ...’ ಎಂದ. ಆದರೆ, ಆ ಮಾತುಗಳನ್ನು ಕೇಳಿಸಿಕೊಳ್ಳುತ್ತ, ಒಂದೂ ಮಾತಾಡದೆ ಸಂಗಪ್ಪ ಪಡಸಾಲೆಯತ್ತ ಬಂದು, ಇವ ಬರುವುದನ್ನೇ ದಿಟ್ಟಿಸಿ ನೋಡುತ್ತ ನೆಲದ ಮೇಲೆ ಕುಂತಿದ್ದವರ ಪಕ್ಕದಲ್ಲಿ ಬಂದು ಕುಂತ. ಆದರೆ, ಚನ್ನಪ್ಪಸಾವ್ಕಾರನ ಮನೆಯತ್ತ ಬರುವಾಗಲೇ ಗಂಭೀರ ಮುಖವನ್ನು ಹೊತ್ತುಕೊಂಡು ಬಂದಿದ್ದ ಸಂಗಪ್ಪನಿಂದಾಗಿ ತುಸು ಹೊತ್ತು ಪಡಸಾಲೆಯ ತುಂಬ ನೀರವ ಮೌನ ಆವರಿಸಿತು. ಇದರಿಂದಾಗಿ ಆ ಮೌನದ ನಡುವೆ ಒಬ್ಬರ ಮುಖ ಒಬ್ಬರು ನೋಡುತ್ತ ಹಾಗೇ ಸುಮ್ಮನೆ ಕುಂತರು. ಹೀಗೆ, ಅಲ್ಲಿ ಕ್ಷಣ ಕ್ಷಣಕ್ಕೂ ಮೌನ ಹೆಪ್ಪುಗಟ್ಟುತ್ತ
ಹೋಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಚನ್ನಪ್ಪಸಾವ್ಕಾರನು ವಿಚಾರ ತುಸು ಗಂಭೀರವಾಗಿಯೇ ಇದೆ ಎಂಬುದನ್ನು ಅರಿತುಕೊಂಡ. ಆಗ ತಾನೇ ಮುಂದಾಗಿ ಮಾತಿಗಿಳಿದ. ಆರಾಮಖುರ್ಚಿಗೆ ಒರಗಿ ಕುಂತಿದ್ದ ಆತ ತುಸು ಮುಂದೆ ಬಾಗಿ,
‘ಸಂಗಪ್ಪ, ಇಲ್ಲಿಗೆ ಬರಲಿಕ್ಕೆ ಹೇಳಿದ್ದು ಯಾಕ ಅನ್ನೂದು ನಿನ್ಗೂ ಗೊತ್ತೈತಿ ಅಂದ್ಕೋತಿನಿ. ಬೆಳಗಾವಿಯ ಶ್ರೀಮಂತವೊಬ್ಬ ನಮ್ಮವೆಲ್ಲ ಜಮೀನಗಳನ್ನು ಕೊಂಡಕೊಳ್ಳಲಿಕ್ಕೆ ಮುಂದ ಬಂದಾನು. ಅವುನು ಇಲ್ಲೊಂದು ಕಾರ್ಖಾನೆ ಸುರು ಮಾಡ್ತಾನಂತ. ಅದಕ್ಕS, ನಮ್ಮ ಜಮೀನುಗಳಿಗೆ ಎಕರೆಗೆ ಐವತ್ತು ಲಕ್ಷ ರೂಪಾಯಿ ಕೊಡ್ಲಿಕ್ಕೆ ತಯಾರದಾನು. ಆ ರೇಟ್ ಕೇಳಿ ನನ್ಗ ಹುಚ್ಚು ಹಿಡಿದಂಗ ಆಗೆದ. ಇಷ್ಟೊಂದು ರೊಕ್ಕ ಎಂದೆಂದಿಗೂ ಕನ್ಸು ಮನ್ಸಿನ್ಯಾಗೂ ನೋಡ್ಲಿಕ್ಕೆ ಆಗಂಗಿಲ್ಲ. ರೈತರಾದ ನಾವು ಈ ದಿನಮಾನದಾಗ ಭೂಮ್ಯಾಗ ಬೆಳೆ ತೆಗ್ದು ಲಾಭ ಮಾಡ್ಕೋದು ಅಟ್ರಾಗನS ಐತಿ. ನಾವು ಸಾಯೂತಂಕ ಜಮೀನ್ದಾಗ ದುಡಿದ್ರೂ ಇಷ್ಟೊಂದು ರೊಕ್ಕ ಗಳಿಸ್ಲಿಕ್ಕೆ ಆಗಂಗಿಲ್ಲ! ಹಿಂಗಾಗಿ, ಈ ಭೂಮಿ ನಂಬ್ಕೊಂಡು ನಾವೆಲ್ಲ ಬಾಳೇವಿ ಮಾಡೂದು ಅಟ್ರಾಗನS ಐತಿ. ಅದಕ್ಕS, ಈಗ ನಾವೆಲ್ಲ ಜಮೀನು ಇಟ್ಕೊಂಡರೆ ಏನು ಮಾಡೂದೈತಿ!? ಒಂದು ವೇಳೆ ಆ ಶ್ರೀಮಂತನ್ಗಿ ಮಾರಿದ್ರ ಕೈತುಂಬ ದುಡ್ಡು ಬರತಾವ. ಆ ದುಡ್ಡನ್ನೆಲ್ಲ ಬ್ಯಾಂಕಿನೊಳ್ಗ ಫಿಕ್ಸ್ ಡಿಪಾಜಿಟ್ ಮಾಡಿದ್ರ ತಿಂಗ್ಳ ತಿಂಗ್ಳ ಬಡ್ಡಿ ಬರತೈತಿ! ಆಗ ನಾವೆಲ್ಲ ಆ ಬಡ್ಡಿಯೊಳ್ಗನS ಆರಾಮಾಗಿ ಚೈನೀ ಮಾಡ್ಕೊಂಡು ಇರಬೋದು. ಈಗ ಇದನ್ನೆಲ್ಲ ವಿಚಾರ ಮಾಡಿನS ಇವರೆಲ್ಲ ತಮ್ಮ ಜಮೀನುಗಳನ್ನು ಮಾರಲಿಕ್ಕೆ ತಯಾರ ಆಗ್ಯಾರು. ಅದಕ್ಕS, ನೀನೂ ವಿಚಾರ ಮಾಡಿ ನೋಡು. ನಿನ್ನ ಆ ಮೂರೆಕರೆ ಜಮೀನು ಆ ಶ್ರೀಮಂತನ್ಗಿ
ಮಾರಿದೆಂದ್ರ ಕಾರ್ಖಾನೆ ಕಟ್ಟಲಿಕ್ಕೆ ಅವನ್ಗೂ ಇಂಬಳತಿ ಜಾಗ ಸಿಕ್ಕಂಗ ಆಗ್ತೈತಿ. ನಿನ್ಗ ಉಡಿಗಟ್ಟಲೆ ರೊಕ್ಕ ಸಿಕ್ಕಂಗ ಆಗ್ತೈತಿ. ಸಂಗಪ್ಪ, ತಿಳ್ದು ನೋಡು.. ನಿನ್ಗ ಕಡೀ ಮಾತು ಹೇಳ್ತೀನಿ. ಎಣ್ಣೆ ಬಂದಾಗ ಕಣ್ಣು ಮುಚ್ಕೊಂಡು ಕುಂತೆಂದ್ರ ನಿನ್ನ ಹುಚ್ಚ ಅಂತಾರು..’ ಎಂದು ಮಾತು ಮುಗಿಸಿದವನೆ ದೀರ್ಘವಾದ ನಿಟ್ಟುಸುರೊಂದನ್ನು ಬಿಡುತ್ತ, ಮತ್ತೇ ಆರಾಮಖುರ್ಚಿಗೆ ಒರಗಿ ಕುಂತ.
ಇದುವರೆಗೂ ಚನ್ನಪ್ಪಸಾವ್ಕಾರ ಅಂದ ಮಾತುಗಳನ್ನು ಕೇಳಿಸಿಕೊಂಡ ಸಂಗಪ್ಪ, ತುಸು ಹೊತ್ತು ತಲೆ ಕೆಳಗೆ ಹಾಕಿ ಮನದೊಳಗೆ ಯೋಚಿಸುತ್ತ ಕುಂತ. ಆಮೇಲೆ ಮನದೊಳಗೆ ಒಂದು ನಿರ್ಧಾರಕ್ಕೆ ಬಂದವನೆ ಚನ್ನಪ್ಪಸಾವ್ಕಾರನತ್ತ ಮುಖ ಮಾಡಿ,
‘ಸಾವ್ಕಾರ್ರಿ, ಒಂದು ರೀತೀಲೆ ನೀವು ಹೇಳೂದು ಖರೇ ಐತಿ. ಆದ್ರ ಒಬ್ಬ ಶ್ರೀಮಂತ ವ್ಯಕ್ತಿ ಕಾರ್ಖಾನೆ ಕಟ್ಟಲಿಕ್ಕೆ ಅನುಕೂಲ ಆಗಲೆಂತೇಳಿ ನಾವೆಲ್ಲ ಅವುನಿಗೆ ಭೂಮಿ ಮಾರಿ ದಿಕ್ಕಿಲ್ಲದ ಪರದೇಶಿಯಂಗ ಆಗೂದ್ರಾಗ ಏನು ಅರ್ಥ ಐತಿ? ಅವುನು ಎಕರೆಗೆ ಕೋಟಿ ರೂಪಾಯಿ ಕೊಟ್ರನೂ ಆ ದುಡ್ಡು ನಮ್ಮ ಬಳಿ ಶಾಶ್ವತವಾಗಿ ಉಳಿತದೆನು? ನಿಮ್ಗ ಒಂದು ಮಾತು ಹೇಳ್ತಿನಿ ಕೇಳ್ರಿ... ರೊಕ್ಕ ರೂಪಾಯಿ ಯಾರ ಹತ್ರನೂ ಉಳಿಯಂಗಿಲ್ಲ! ಆದ್ರ ಭೂಮ್ತಾಯಿ ಹಂಗಲ್ಲ. ಅಕಿ ಶಾಶ್ವತವಾಗಿ ನಮ್ಮ ಕೂಡ ಇರತಾಳು. ಬರೀ ಅಕಿ ಎದೆ ಮ್ಯಾಲೆ ಒಂದು ಹಿಡಿ ಹಸುರು ಮೂಡಿದ್ರ ಸಾಕು... ನಮ್ಮನ್ನೆಲ್ಲ ಕೈ ಹಿಡಿತಾಳು. ನಮ್ಮ ಮಕ್ಕಳ ಮದಿವಿ, ಮುಂಜಿ, ರೋಗ-ರುಜಿನಿ, ಹುಟ್ಟು ಸಾವಿನಂಥ ಕಾಲಕ್ಕೆ ಆಸ್ರ ಆಗ್ತಾಳು. ಹಿಂಗಿರುವಾಗ, ಒಬ್ಬ ಶ್ರೀಮಂತನನ್ನು ಇನ್ನಷ್ಟು ಶ್ರೀಮಂತನ ಮಾಡ್ಲಿಕ್ಕೆ ನಮ್ಮಂಥ ಸಣ್ಣ ಸಣ್ಣ ರೈತರು ಜಮೀನು ಕಳ್ಕೊಂಡು ಬೀದಿಗೆ ಬೀಳ್ಬೇಕೆನು? ಸರಕಾರ ಏನೇನೋ ಕಾಯಿದೆ ಕಾನೂನು ಮಾಡ್ತೈತಿ. ಅದು ಯಾವಾಗ್ಲೂ ರೊಕ್ಕುಳ್ಳವ್ರು ಹೇಳ್ದಂಗ ಕುಣೀತೈತಿ! ಹಂಗಂತ ನಾವೆಲ್ಲ ಜಮೀನು ಮಾರೂದು ಸರಿ ಕಾಣಂಗಿಲ್ಲ...’ ಎಂದು ಕಡ್ಡಿ ತುಂಡು ಮಾಡಿದಂತೆ ಅಂದ. ನಂತರ ಕ್ಷಣ ಹೊತ್ತು ತಡೆದು, ಆತನ ಮಾತುಗಳನ್ನು ಕೇಳಿಸಿಕೊಳ್ಳುತ್ತ ಆತನ ಪಕ್ಕದಲ್ಲಿ ಕುಂತಿದ್ದ ಶಿವಪ್ಪ, ರಾಮಪ್ಪ ಮತ್ತು ತುಕ್ಕಪ್ಪನಿಗೆ,
‘ನೋಡ್ರೆಪ್ಪ, ನಾನಂತೂ ನನ್ನ ಜಮೀನು ಮಾರಂಗಿಲ್ಲ! ನಿಮ್ಗೂ ಅದS ಮಾತು ಹೇಳ್ತಿನಿ. ಯಾರ ಯಾರದೋ ಮಾತು ಕೇಳ್ಕೊಂಡು ಬಂಗಾರಂಥ ನಿಮ್ಮ ಜಮೀನುಗಳನ್ನು ಮಾರಲಿಕ್ಕೆ ಹೋಗಬ್ಯಾಡ್ರಿ; ಹೆಂಡ್ತಿ ಮಕ್ಕಳನ್ನು ಬೀದಿ ಪಾಲು ಮಾಡಬ್ಯಾಡ್ರಿ. ನನ್ಗ ತಿಳಿದಷ್ಟು ಹೇಳ್ತಿನಿ...’ ಎಂದ. ಅದೇ ಕ್ಷಣದಲ್ಲಿ ಪಡಸಾಲೆಯಿಂದ ತಟ್ಟನೆ ಎದ್ದವನೆ, ‘ಸಾವ್ಕಾರ್ರಿ, ನಾ ಇನ್ನು ನಡೀತಿನಿ...’ ಎನ್ನುತ್ತ ಅಲ್ಲಿಂದ ಹೊರ ನಡೆದ.
ಆಗ, ಆತನ ಮಾತುಗಳಿಗೆ ಕಿವಿಯಾಗಿ ಕುಂತಿದ್ದ ಅವರೆಲ್ಲರೂ ಮನೆ ಬಾಗಿಲನ್ನು ದಾಟಿಕೊಂಡು ಸಂಗಪ್ಪ ಹೋಗುತ್ತಿರುವುದನ್ನೇ ದಿಟ್ಟಿಸಿ ನೋಡತೊಡಗಿದರೆ, ಇತ್ತ ಆರಾಮಖುರ್ಚಿಯಲ್ಲಿ ಕುಂತಿದ್ದ ಚನ್ನಪ್ಪಸಾವ್ಕಾರನು ಆ ಮಾತುಗಳ ಏಟಿಗೆ ತತ್ತರಿಸಿ ಕಟಿಕಟಿ ಬೆವೆತು ಹೋಗಿದ್ದ ತನ್ನ ಮಾರಿಯನ್ನು ಧೋತರದ ಚಾಳಿಯಿಂದ ಒರೆಸಿಕೊಳ್ಳತೊಡಗಿದ!
ಚಿತ್ರ : ಎಸ್.ವಿ. ಹೂಗಾರ
ಕಲ್ಲೇಶ್ ಕುಂಬಾರ್
ಬೆಳಗಾವಿ ಜಿಲ್ಲೆಯ ಹಾರೂಗೇರಿ ಗ್ರಾಮ (ಜನನ: 06-05-1967) ಹುಟ್ಟೂರು. ಧಾರವಾಡ, ದಾವಣಗೆರೆ ಮತ್ತು ಬೀದರ್ ನಲ್ಲಿ ವಿದ್ಯಾಭ್ಯಾಸ. ಹಾರೂಗೇರಿಯ ಶ್ರೀ ಕರೇಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. 'ಉಸುರಿನ ಪರಿಮಳವಿರಲು' ಕಥಾಸಂಕಲನ ಮತ್ತು 'ಪುರುಷ ದಾರಿಯ ಮೇಲೆ' ಕವನಸಂಕಲನಗಳ ಪ್ರಕಟಣೆ. ಜೊತೆಗೆ,ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಥೆ, ಕವನ,ಲೇಖನಗಳ ಪ್ರಕಟಣೆಯಾಗಿವೆ.
'ಪಾಪು ಕಥಾ ಪ್ರಶಸ್ತಿ', 'ಜಯತೀರ್ಥ ರಾಜಪುರೋಹಿತ ಕಥಾ ಪ್ರಶಸ್ತಿ', 'ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ, 'ವಿಜಯವಾಣಿ ದೀಪಾವಳಿ ಕಥಾಸ್ಪರ್ಧೆ', 'ಕರವೇ ಮಾಸಿಕದ ಕಥಾಸ್ಪರ್ಧೆ', 'ಗುರುತು ಮಾಸಿಕ ಕಥಾಸ್ಪರ್ಧೆ', 'ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆ', 'ತಿಂಗಳು ಮಾಸಿಕ ಪತ್ರಿಕೆಯ ಕಾವ್ಯಸ್ಪರ್ಧೆ', 'ಮೊಗವೀರ ಮಾಸಿಕದ ಕಥಾಸ್ಪರ್ಧೆ'ಗಳಲ್ಲಿ ಬಹುಮಾನ doretide.
'ಪುರುಷ ದಾರಿಯ ಮೇಲೆ' ಕವನ ಸಂಕಲನಕ್ಕೆ 2007ನೇ ಸಾಲಿನ ಕ ಸಾ ಪ ದತ್ತಿನಿಧಿ ಪ್ರಶಸ್ತಿ ಹಾಗೂ ಬಿ ಆರ್ ಆಜೂರ್ ಪುಸ್ತಕ ಪ್ರತಿಷ್ಠಾನ ನೀಡುವ ಪುಸ್ತಕ ಬಹುಮಾನ ಲಭಿಸಿದೆ. ಸದ್ಯ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯ, ಬಾಗಲಕೋಟೆಯ ತೇರದಾಳದ ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
More About Author