ಕತೆಗಾರ, ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಆಸಕ್ತಿ ಕ್ಷೇತ್ರವಾಗಿದ್ದು, ಪ್ರಸ್ತುತ ಅವರು ಬರೆದಿರುವ ʻಸಂಕಟದಲ್ಲಿ ಮರೆತವರು' ಕತೆ ನಿಮ್ಮ ಓದಿಗಾಗಿ...
ಒಂದಾನೊಂದು ಕಾಲದಲ್ಲಿ ಶಿವಪುರ ಎಂಬ ಸುಂದರ ಪಟ್ಟಣವನ್ನು ಕುಮಾರವರ್ಮ ಎನ್ನುವ ರಾಜ ಆಳುತ್ತಿದ್ದನು. ಅವನಿಗೆ ತನ್ನ ಸಾಮ್ರಾಜ್ಯದ ಜನರನ್ನು ಕಂಡರೆ ಬಹಳ ಪ್ರೀತಿ. ಆತನು ನೊಂದವರಿಗೆ ಯಾವಾಗಲೂ ಸಹಾಯ ಮಾಡುತ್ತಿದ್ದನು. ಇವನಿಗೆ ಸರಳವಾಗಿ ಜೀವನ ಸಾಗಿಸುವುದು ಎಂದರೆ ಬಲು ಇಷ್ಟ. ಇವನಿಗೆ ಶಿವಕುಮಾರ ಎಂಬ ಗೆಳೆಯನಿರುತ್ತಾನೆ. ರಾಜನು ತನ್ನ ಗೆಳೆಯನೊಂದಿಗೆ ವಾರಕ್ಕೆ ಒಮ್ಮೆಯಾದರೂ ತನ್ನ ಸಾಮ್ರಾಜ್ಯವನ್ನು ಸುತ್ತಿ ಹೊಸ ಅನುಭವಗಳನ್ನು ಪಡೆಯುತ್ತಿರುತ್ತಾನೆ.
ಒಂದು ದಿನ ರಾಜನ ಅರಮನೆಯಲ್ಲಿ ತನ್ನ ಮಗಳ ಹುಟ್ಟುಹಬ್ಬ ಬರುತ್ತದೆ. ಮಗಳ ಜನ್ಮದಿನವನ್ನು ಗೆಳೆಯನೊಂದಿಗೆ ಅದ್ದೂರಿಯಾಗಿ ಆಚರಿಸೋಣ ಎಂದು ಯೋಚಿಸುತ್ತಾನೆ. ಅರಮನೆಯಲ್ಲಿರುವ ಸೈನಿಕನ ಕೈಯಲ್ಲಿ ಆಮಂತ್ರಣವನ್ನು ಕಳಿಸುತ್ತಾನೆ. ರಾಜನ ಆಮಂತ್ರಣ ನೋಡಿದ ಶಿವಕುಮಾರನಿಗೆ ಸಂತೋಷವಾಗುತ್ತದೆ. ಕ್ಷಣವೇ ಅರಮನೆಗೆ ಹೊರಡಲು ಸಿದ್ಧವಾಗುತ್ತಾನೆ. ಕುಮಾರ ದಾರಿಯಲ್ಲಿ ಹೋಗುವಾಗ ಅವನಿಗೆ ರಂಗಣ್ಣ ಎದುರಾಗುತ್ತಾನೆ. 'ಮಿತ್ರ ಎಲ್ಲಿಗೆ ಹೊರಟಿರುವೆ?' ಎಂದು ಕೇಳುತ್ತಾನೆ. 'ನಮ್ಮ ರಾಜನ ಮಗಳ ಹುಟ್ಟುಹಬ್ಬಕ್ಕೆ ಆಮಂತ್ರಿಸಿದ್ದಾರೆ. ಔತಣಕ್ಕೆ ಹೋಗುತ್ತಿರುವೆ. ನೀನು ಬರುವೆಯಾ?' ಎಂದು ಕೇಳಿದ. ಈ ಮಾತುಗಳನ್ನು ಕೇಳಿದ ತಕ್ಷಣ ರಂಗಣ್ಣನ ಬಾಯಲ್ಲಿ ನೀರು ತುಂಬಿತು. ಊಟವನ್ನು ಸವಿಯುವ ಆಸೆಯಿಂದ ಅವನ ಜೊತೆ ಹೊರಟ.
ದಾರಿಯಲ್ಲಿ ಸ್ವಲ್ಪ ಮುಂದೆ ಅದೇ ಸಂದರ್ಭದಲ್ಲಿ ಇನ್ನೊಬ್ಬ ಗೆಳೆಯ ಸಿಕ್ಕನು. ಇವರು ರಾಜನ ಮಗಳ ಹುಟ್ಟುಹಬ್ಬದ ವಿಷಯ ತಿಳಿಸಿದರು. ಆತನು ಬರುವೆ ಎಂದು ಹೇಳಿ ಅವರ ಜೊತೆಯಲ್ಲಿ ಹೊರಟನು. ಹೀಗೆ ದಾರಿಯಲ್ಲಿ ಎದುರಾದ ಎಲ್ಲರನ್ನೂ ರಾಜನ ಮಗಳ ಹುಟ್ಟುಹಬ್ಬದ ಕರೆದುಕೊಂಡು ಹೋಗುತ್ತಾನೆ.
ಶಿವಕುಮಾರ ಮತ್ತು ಅವನ ಸ್ನೇಹಿತರನ್ನು ನೋಡಿ ರಾಜನಿಗೆ ಬಲು ಸಂತೋಷವಾಗುತ್ತದೆ. ಇದರ ಜೊತೆಯಲ್ಲಿ ಶಿವಕುಮಾರನ ಗೆಳೆಯರ ಸಂತೋಷ ಅಷ್ಟಿಷ್ಟಲ್ಲ. ಉಳಿದವರ ಸಂತೋಷದಲ್ಲಿ ಪಾಲುಗೊಳ್ಳುವ ತನ್ನ ಮಿತ್ರರ ಬಗ್ಗೆ ಹೆಮ್ಮೆ ಎನಿಸುತ್ತದೆ. ರಾಜನು ತನ್ನ ಮಿತ್ರನ ಬಳಿ ಬಂದು 'ಮಿತ್ರ ಈ ಸಂತೋಷದ ಭೋಜನಕೂಟದಲ್ಲಿ ನಿನ್ನ ಸ್ನೇಹಿತರನ್ನು ಕರೆದು ತಂದಿರುವುದು ತುಂಬಾ ಸಂತೋಷದ ವಿಷಯ' ಎನ್ನುತ್ತಾನೆ. ರಾಜನ ಮಾತು ಕೇಳಿ ಶಿವಕುಮಾರನಿಗೆ ಆನಂದವಾಗುತ್ತದೆ.
ರಾಜನು ತನ್ನ ಗೆಳೆಯನ ಬಳಿ ಬಂದು 'ನೀನೊಬ್ಬನೇ ಬರುವೆ ಅಂದುಕೊಂಡಿದ್ದೆ, ಆದರೆ ನಿನ್ನ ನಿನ್ನ ಸ್ನೇಹ ಬಳಗವನ್ನೆಲ್ಲ ಕರೆದು ತಂದಿದ್ದು ಸಂಭ್ರಮಕ್ಕೆ ಒಂದು ಸುಂದರವಾದ ಕಳೆ ಬಂದಿದೆ' ಎಂದು ಹೇಳಿದನು. ಮಿತ್ರನಿಗೂ ಹಾಗೂ ಅವರ ಸ್ನೇಹಿತರಿಗೂ ಭರ್ಜರಿ ಭೋಜನವನ್ನು ನೀಡಿ ಸಂತೋಷದಿಂದ ತನ್ನ ಮಗಳ ಹುಟ್ಟುಹಬ್ಬವನ್ನು ರಾಜ ಆ ದಿನ ಆಚರಿಸುತ್ತಾನೆ.
ಹೀಗೆ ಬಹಳ ದಿನಗಳು ಕಳೆದವು. ಒಂದು ದಿನ ರಾಜನ ಹೆಂಡತಿ ಅನಾರೋಗ್ಯದಿಂದ ಮರಣ ಹೊಂದಿದಳು. ರಾಜನು ತನ್ನ ಗೆಳೆಯನ ಜೊತೆ ಶೋಕ ಕಳೆದರೆ ತನಗೆ ನೆಮ್ಮದಿ ಸಿಗುವುದು ಎಂದು ಯೋಚಿಸಿ ಮತ್ತೆ ಸೈನಿಕನ ಕೈಯಲ್ಲಿ ಹೇಳಿ ಕಳಿಸುತ್ತಾನೆ. ಸೈನಿಕನು ರಾಜನ ಹೆಂಡತಿ ತೀರಿಕೊಂಡಿರುವ ವಿಷಯವನ್ನು ಶಿವಕುಮಾರನಿಗೆ ತಿಳಿಸುತ್ತಾನೆ. ಈ ವಿಷಯವನ್ನು ತಿಳಿದ ಕೂಡಲೇ ಶೋಕದಲ್ಲಿರುವ ತನ್ನ ಮಿತ್ರನನ್ನು ನೋಡಲು ಹೊರಡುತ್ತಾನೆ. ಹೀಗೆ ಅವನು ದಾರಿಯಲ್ಲಿ ಹೋಗುವಾಗ ಮತ್ತೆ ಅವನಿಗೆ ಮಿತ್ರರೆಲ್ಲ ಎದುರಾಗುತ್ತಾರೆ. ರಾಜನ ಮನೆಯಲ್ಲಿ ಶೋಕವಿದೆ ಎಂದು ವಿಷಯ ತಿಳಿಸುತ್ತಾನೆ. 'ಶೋಕದಲ್ಲಿ ಯಾರಾದರೂ ಭಾಗಿಯಾಗುವೀರಾ' ಎಂದು ಕೇಳುತ್ತಾನೆ. ಶೋಕ ಎಂಬ ಪದ ಕೇಳಿ ಯಾರು ಜೊತೆಗೆ ಬರಲು ತಯಾರಾಗಲಿಲ್ಲ. ಒಬ್ಬೊಬ್ಬರೂ ಒಂದೊಂದು ನೆಪವನ್ನು ಹೇಳಿ ತಪ್ಪಿಸಿಕೊಂಡರು. ಆತನೊಬ್ಬನೇ ಅರಮನೆ ಕಡೆಗೆ ಹೊರಟನು.
ರಾಜನನ್ನು ಕಂಡು ಶಿವಕುಮಾರ ಸಂತಾಪವನ್ನು ಹೇಳಿದನು. ಮಾತು ಮಾತಲ್ಲೇ ರಾಜನು 'ಮಿತ್ರ ಈ ಶೋಕದಲ್ಲಿ ನಿನ್ನ ಗೆಳೆಯರು ಯಾಕೆ ಬಂದಿಲ್ಲ' ಎಂದು ಕೇಳಿದನು. 'ಎಲ್ಲರೂ ನೆಪ ಹೇಳಿ ತಪ್ಪಿಸಿಕೊಂಡರು' ಎಂದು ಉತ್ತರ ನೀಡಿದನು. 'ಮಿತ್ರ ನಮ್ಮ ಬಳಿ ಐಶ್ವರ್ಯ ಮತ್ತು ಸಂತೋಷವಿದ್ದರೆ ಮಾತ್ರ ಜನ ಇರುತ್ತಾರೆ ಸಂಕಟದಲ್ಲಿ ಯಾರೂ ಬರುವುದಿಲ್ಲ' ಎಂದು ಹೇಳಿ ಅರಮನೆಯ ಒಳಗೆ ಕರೆದುಕೊಂಡು ಹೋಗುತ್ತಾನೆ.
-ಮೊಹಮ್ಮದ್ ಅಜರುದ್ದೀನ್
ಮೊಹಮ್ಮದ್ ಅಜರುದ್ದೀನ್
ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ, ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.
ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.
ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ
More About Author