ಗಂಡುಕೊಂಡು ಕೂಡಿ ಬಳಸಿದ
ಸಾಲಂಕೃತ ಗುಲಾಮಿ
ಭಾಷೆಗೆ ಹುಲುಯುಗುರು ಕೋರೆಹಲ್ಲು
ಅದೃಶ್ಯದ ನಂಜು
ಮರುಭೂಮಿಯ ಧಗೆ ಅಗ್ನಿಯ ಹೊಗೆ
ಬಿಟ್ಟಿದಂತೆ ಅವರ ನೆರಳು
ತುಸು ಬದಲಾದರೂ
ಇಲಿ ಹಿಡಿಯುವ ಬೆಕ್ಕಿನ ಠಕ್ಕು
ಕಾಂಚಾಣದ ಹೆಜ್ಜೆಯ ಹಣೆಗೆತ್ತಿಕೊಂಡ
ಶೀಲದೆತ್ತರ ಸ್ವಲ್ಪವೂ ಕುಗ್ಗದಂತೆ
ಆಳುವ ಭೋಗಿಸುವ ಸಾವಿರದ ಸೊಕ್ಕು
ಭಾಷೆಯ ವೀರ್‍ಯದಿಂದಲೆ
ಆತ ಪಡೆದದ್ದು ಗರ್ಭದ ಸಂಯೋಗ
ಆನಂದದ ಶೃಂಗಸುಖ
ಈಯುವ ಬೇನೆಯ ಅದೇ ಜಾಡೆಲ್ಲೇ
ಚರಿತ್ರೆ ಧರ್ಮ ಶಾಸ್ತ್ರ ತತ್ವ ತರ್ಕ
ರಾಜಕೀಯ ಸಾಹಿತ್ಯ ವಿಜ್ಞಾನದ ಹೆರಿಗೆ
ಹೀಗಾಗಿಯೇ ಗಂಡು
ಸಹಜ ಪ್ರಸವದ ಸೂಲಿಗ
ಭೂತವವನು ಬಗೆದು ನೋಡುವ
ಮೋಡಿಯ ಮೋಹದ ಹಾಸಿನ
ಬೀಸಿನ ತೆರೆದೆದೆಯ ತೋಳಿನ
ಭಾಷೆಯ ಆರೈಕೆಯೊಂದಿಗೆ ದಷ್ಟ
ಪುಷ್ಪ ವರ್ಣ ವರ್ಗದ ಲಿಂಗ
ಸಂಕರಗೊಂಡ ಮನ್ವಂತರ ಕೊಟ್ಟ
ಹಾಗೆ ಮಾಡಿ ಒಂದಕ್ಕೆರಡು ವಸೂಲಿ
ರಕ್ತ ಬೀಜಾಸುರನ ಶುದ್ಧ ತಳಿ
ಶತಮಾನಗಳ ನಮ್ರತೆಯ ಲಾಂಛನ
ಜನಾಂಗ ಜಾತಿ ನಾನು ಎನ್ನುವ ಹಮ್ಮು
ಹೆಣ್ಣಿಗಾದರೂ ಭಾಷೆಯ ಮೂಳ ಸೆರೆ
ನಾಲಗೆ ಹೃದಯದ ಇಚ್ಚೆ
ಬಿಟ್ಟು ಹೋಗದೆ ನೆಟ್ಟ ದೃಷ್ಟಿಯಲಿ
ಮೀರುವುದಿದ್ದರೆ ಹೆಣ್ಣೆಂಬ
ಕಾಯವನೆ ಮೀರುವ ಮನಸಿನ ತವಕ
ಬಚ್ಚಿಟ್ಟ ಬಿಡುಗಡೆಯ ಆತ್ಮದ ಗೆಯ್ಕೆ
ಕಾಲನ ಕಾಲ್ಕುರಿಯ ಪದಾತಿ ಪ್ರಸಾದಲ್ಲಿ
ಸಮಾನತೆಯೆಂಬುದೆ ನಂಬುಗೆಯ ನುಡಿಗಟ್ಟು
ಅದೆಷ್ಟೊ ಸಂವತ್ಸರಗಳ ಸಂಸಾರದ ಸತ್ವ
ಜೀವಭಾವದ ಭವದ ಪಯಣಕ್ಕೆ
ಜೊತೆ ನೀನುಂಟಿ ಎಂಬ
ಶರಣಾಗತಿಯ ಸತ್ಯದ ಹುಡುಕಾಟ
ನಾಯಿಯ ಅಗೆಯುವ ಕೆಲಸ
ಅವ್ವನೆಂದರೆ ಅವ್ವ
ಮಗಳೆಂದರೆ ಮಗಳು
ಮಡದಿಯೆಂದರೆ ಮಡದಿ
ಕಟ್ಟಿಕೊಂಡವಳು ಇಟ್ಟುಕೊಂಡವಳು
ಗೆಣೆಗಾರ್ತಿ ಸೂಳೆ ಜೋಗತಿ
ಭಾಷೆಯ ಹಾಸಿನ ಉದ್ದಕ್ಕೂ
ಚಾಚಿದ ಜನ್ಮಜನ್ಮದ ಭಂಗಿ
ಛಲಹೂಡಿ ತಡಕಾಡಿದರೆ
ಹೂತಿಟ್ಟ ಬೀಜವೇ ಮೊಳೆವಂತೆ
ಗಂಡು ಹೆತ್ತ ಭಾಷೆಯ ಒಳಗೆ
ಪಿಂಡದ ಕಾಳ ಹೆಕ್ಕುವ
ಕಾಗೆಗಳ ಬರ್‍ರೆಂಬ ಹಾರುವ ಸದ್ದು.
- ಕವಿತಾ ರೈ
ಕವಿತಾ ರೈ
ಮಹಿಳಾ ಲೇಖಕಿ ಕವಿತಾ ರೈ ಅವರು ಮೂಲತಃ ಮಡಿಕೇರಿಯವರು. ತಾಯಿ ಬಿ.ಎಲ್.ರಾಧಾ, ತಂದೆ ಬಿ.ಎಸ್.ರಂಗನಾಥ ರೈ. ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಸಾಹಿತ್ಯದೆಡೆಗಿನ ಒಲವು ಬಾಲ್ಯದಿಂದಲೂ ಅಪಾರವಾಗಿತ್ತು.
ಕನ್ನಡ ಸಾಹಿತ್ಯದಲ್ಲಿ ಇವರ ಕೊಡುಗೆಗೆ ದಿ.ವಿ.ಎಮ್. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಒಲಿದುಬಂದಿದೆ. ಇವರು ಬರೆದಿರುವ ಕೃತಿಗಳೆಂದರೆ ಹಕ್ಕಿ ಹರಿವ ನೀರು, ನೀರ ತೇರು (ಕವನ ಸಂಕಲನ) , ಮಹಿಳೆ ಅಸ್ತಿತ್ವದ ಸಂಕಥನ, ಅರಿವಿನ ನಡೆ, ವಿವಾಹ ಮತ್ತು ಕುಟುಂಬ (ವೈಚಾರಿಕ) ಮುಂತಾದವು.
More About Author