ಮೂವತ್ತೇ ದಿನಗಳು ಸಾಕು
ತಿಳಿಯದಂತೆ ತಿಂಗಳೊಂದು ಮುಗಿಯಲು
ತವಕದಲ್ಲೆ ಬಂದು ತಿದ್ದಿ ತೀಡಿ
ನಿಲುವಿಗೂ ನಿಲುಕದೆ ನುಣುಚುವ ದಿನಗಳಿಂದಾದ
ತಿಂಗಳೊಂದರ ತಂಗಳ ಕಳೆಯಲು
ಮೂವತ್ತೇ ಮೂವತ್ತು ದಿನಗಳು ಸಾಕು...
ವಾರದ ನಾಲ್ಕೂ ಸೋಮವಾರದಿಂದ
ಪ್ರಾರಂಭವಾಗುವ ವಾರಗಳು
ಮಂಗಳ, ಬುಧ, ಗುರು ಶುಕ್ರದಲ್ಲಿ ಮುಳುಗಿ
ಶನಿ ಹಿಡಿದು ಭಾನುವಾರದಂದು
ಬೇಕಂತಲೆ ಬೇಡವಾಗುತ್ತದೆ ಬೇಸರದಿಂದ...
ಇಂಥದ್ದೆ ಬೇಸರದ ನಾಲ್ಕು ವಾರಗಳು ಕೂಡಿ
ಸಂಜೆ ಮುಂಜಾವುಗಳೇ ಸಂಶಯಗೊಳ್ಳುವಂತೆ
ಬೆಟ್ಟದಷ್ಟು ಭಾರದ ಭಾವುಕತೆಯ
ಏರಿಬಿಡುತ್ತದೆ ಎದೆ ಮೇಲೆ
ಎದುರುಗೊಂಡ ತಿಂಗಳು...
ಕ್ಷಣವ ನೀಗಲಾಗದವರಿಗೆ ನಿಮಿಷ ದೊಡ್ಡದಾಗಿ
ನಿಮಿಷಗಳಿಂದ ಗಂಟೆಯೂ ಗಟ್ಟಿ ಎನಿಸಿ
ಗಂಟೆ ಗಂಟೆಗಳ ಗುಂಪಿನ ಒಂದು ದಿನವ
ಸವೆಸುವುದೇ ಬದುಕಿನ ಧೈಯವಾಗುತ್ತದೆ
ಎಲ್ಲರಿಗೂ ತಿಳಿಸಿಯೂ ತಿಳಿಸದಂತೆ
ಇರುಳ ಗಾಢ ಕತ್ತಲಲ್ಲಿ ಸದ್ದೆತ್ತದೆ
ನುಣುಚಿಕೊಳ್ಳುತ್ತದೆ ಕೊನೆಗೆ
ಉಚಿತ ಸಿಕ್ಕಿದ್ದ ಆ ಒಂದು ದಿನ
ನಿನ್ನೆ ಎಂಬ ಹೆಸರ ಹಣೆಗಂಟಿಸಿಕೊಂಡು...
ನಿದ್ದೆಯಿಂದ ಎದ್ದ ಜಗವೆಲ್ಲ
ಮೋಹದ ಮುಂಜಾವಿಗೆ ಮರುಳಾಗಿ
ಕಳೆದ ದಿನಗಳನ್ನು ನಿನ್ನೆ ಮೊನ್ನೆ ಎಂದೇ
ಕರೆದು ಸುಮ್ಮನಾಗುತ್ತಾರೆ, ಪುನಃ
ಇಂದಿನ ಈ ದಿನವ ಗೊತ್ತಿದ್ದೂ ಕಳೆದುಕೊಳ್ಳುತ್ತ
ನಾಳೆಯ ನೆನೆದು ಸೃಷ್ಟಿಸುತ್ತಾರೆ ನಾಳಿದ್ದನ್ನು...
ಹೀಗೆ ಅರಿವಿಗೆ ಬಾರದೆ ತಿಂಗಳೊಂದು
ತವರಿಗೆ ಬಂದು ತಿರುಗಿಹೋದ ಮಗಳಂತೆ
ಹೊರಟೇ ಹೋಗುತ್ತದೆ ಸುದ್ದಿ ಸ್ವಾರಸ್ಯಗಳಿಲ್ಲದೆ
ಮುಂದಿನ ತಿಂಗಳಿಗೆ ಜಾಗಬಿಟ್ಟು...
- ಸಂತೋಷ್ ಕುಮಾರ್ ಎನ್.
ಸಂತೋಷ್ ಕುಮಾರ್ ಎನ್
ಲೇಖಕ ಸಂತೋಷ್ ಕುಮಾರ್ ಮೂಲತಃ ನರಸೀಪುರ ತಾಲೂಕಿನ ಕೆಂಪನಪುರದವರು. ಓದು-ಬರಹ ಇವರ ಆಸಕ್ತಿ. ಕೇರಳದ ಪಾಲಕ್ಕಾಡ್ ನಲ್ಲಿ ಬಿಇಎಂಎಲ್ ಲಿ. ಸಂಸ್ಥೆಯ ಉದ್ಯೋಗಿ.