ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕೆ.ಎಸ್ ಗಂಗಾಧರ ಅವರ ‘ನೆತ್ತರ ಧರ್ಮ’ ಕತೆ ನಿಮ್ಮ ಓದಿಗಾಗಿ...
ಮತೀಯ ಗಲಭೆಯಿಂದ ನಗರದಲ್ಲಿ ಪ್ರಕ್ಷುಬ್ಧ ವಾತಾವರಣವಿತ್ತು. ಯಾರೂ ಯಾರನ್ನೂ ನಂಬದ ಪರಿಸ್ಥಿತಿ ಉಂಟಾಗಿತ್ತು. ನಗರದಲ್ಲೆಡೆ ಪೋಲೀಸ್ ಪಹರೆ ಇದ್ದರೂ ಗಾಳಿ ಸುದ್ದಿಗಳ ಪ್ರಭಾವದಿಂದ ಅಲ್ಲಲ್ಲಿ ಸಂಭವಿಸುತ್ತಿದ್ದ ಮುಸುಕಿನ ಗುದ್ದಾಟದಿಂದ ಇಡೀ ನಗರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಇಂತಹ ಅಲಗಿನಂಚಿನ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿದ್ದ ದುಷ್ಕರ್ಮಿಗಳ ಹಾವಳಿಯಿಂದ ಅಮಾಯಕರು ಬೇಸತ್ತಿದ್ದರು.
ಭೃಂಗಾ ಮಠದ ಭೃಂಗೇಶ್ವರ ಸ್ವಾಮೀಜಿಯವರು ಎಲ್ಲವನ್ನೂ ಗಮನಿಸುತ್ತಿದ್ದರೂ ಏನೂ ಮಾಡಲಾಗದೆ ಅಸಹಾಯಕರಂತಿದ್ದರು. ಪ್ರಗತಿಪರ ಧೋರಣೆಗಳನ್ನು ಹೊಂದಿದ್ದ ಅವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿತ್ತು. ಎಲ್ಲಾ ಧರ್ಮದವರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದ ಸ್ವಾಮೀಜಿಯವರು ಏನಾದರೂ ಮಾಡಿ ಜನರ ಅನುಮಾನಗಳನ್ನೂ ಭಯ ಮಿಶ್ರಿತ ವಾತಾವರಣವನ್ನೂ ತಿಳಿಗೊಳಿಸಿ ಶಾಂತಿ ಸ್ಥಾಪನೆ ಮಾಡಬೇಕೆಂದು ಆಲೋಚಿಸಿದರು. ಇಲ್ಲವಾದರೆ ತಾವು ನಂಬಿದ್ದ ಆಧ್ಯಾತ್ಮಿಕ ಸಮನ್ವಯಕ್ಕೆ ಯಾವ ಬೆಲೆಯೂ ಇರುವುದಿಲ್ಲ ಎಂಬ ಭಾವ ಅವರನ್ನು ಚಿಂತೆಗೆ ದೂಡಿತು.
ಇದ್ದಕ್ಕಿದ್ದಂತೆ ಭೃಂಗೇಶ್ವರ ಸ್ವಾಮೀಜಿಯವರಿಗೆ ಹೊಟ್ಟೆನೋವು ಶುರುವಾಯಿತು. ನಗರದ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು ಮಾಡಲಾಯಿತು.ಪರೀಕ್ಷೆ ಮಾಡಿದ ಹಿರಿಯ ವೈದ್ಯರು ಒಂದೆರಡು ದಿನದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿ ತುರ್ತಾಗಿ ಒಂದೆರಡು ಯೂನಿಟ್ ರಕ್ತದ ಅವಶ್ಯಕತೆಯಿದೆಯೆಂದು ತಿಳಿಸಿದರು.
ಸ್ವಾಮೀಜಿವರದು ಒಂದೇ ಪಟ್ಟು “ಬೇರೆ ಧರ್ಮದವರ ರಕ್ತ ಬೇಡ”. ಅದು ಸಾಧ್ಯವಾಗದಿದ್ದಲ್ಲಿ ತಮಗೆ ಶಸ್ತ್ರಚಿಕಿತ್ಸೆಯೇ ಬೇಡವೆಂದು ಹಠ ಹಿಡಿದರು.
ಆಸ್ಪತ್ರೆಯ ವೈದ್ಯ ತಂಡಕ್ಕೆ ಮತ್ತು ಅಧಿಕಾರಿಗಳಿಗೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಯಿತು.ರಕ್ತದಾನ ಮಾಡುವವರ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ ಎಂಬ ನಿಯಮದಿಂದ ಅವರ ಕೈ ಕಟ್ಟಿದಂತೆ ಆಯಿತು.ಇದು ಮಾಧ್ಯಮದಲ್ಲಿ ವಿಪರೀತ ಸುದ್ದಿಯಾಯಿತು. ಕೆಲವು ಸುದ್ದಿಮಾಧ್ಯಮಗಳು ಸ್ವಾಮೀಜಿಯವರ ಪರವಾಗಿ; ಮತ್ತೆ ಕೆಲವು ವಿರುದ್ಧವಾಗಿ ತಮ್ಮ ವಿಶ್ಲೇಷಣೆಗಳನ್ನು ಪ್ರಸಾರ ಮಾಡಿದವು. ದಿನವಿಡೀ ಸಾಮಾಜಿಕ ಜಾಲತಾಣಗಳಲ್ಲಿ ಇದರದ್ದೇ ಬಿಸಿಬಿಸಿ ಚರ್ಚೆಯಾಯಿತು. ಸ್ವಾಮೀಜಿಯವರ ಖ್ಯಾತಿ ಮತ್ತು ಸಚ್ಚಾರಿತ್ಯದ ಅರಿವಿದ್ದ ಇತರ ಧರ್ಮದ ಗುರುಗಳಿಗೆ ಮೊದಲು ಆಶ್ಚರ್ಯವಾದರೂ ಅವರು ಆರೋಗ್ಯವಾಗಿ ಗುಣಮುಖರಾಗುವುದು ಮುಖ್ಯವಾದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅವರ ಷರತ್ತನ್ನು ಪಾಲಿಸುವುದು ಸೂಕ್ತವೆಂದು ಪ್ರತಿಪಾದಿಸಿದರು.
ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಯುವ ವೈದ್ಯ ಡಾ.ಆಂತೊಣಿ ಡಿಸೋಜ ತನ್ನ ಮೇಲಧಿಕಾರಿಗಳ ಅಪ್ಪಣೆ ಪಡೆದು ಸ್ವಾಮೀಜಿಯವರ ಭೇಟಿ ಮಾಡಿದ. ಅಳುಕಿನಿಂದಲೇ ರಕ್ತದಾನಿಯ ಹೆಸರನ್ನು ಬಹಿರಂಗಪಡಿಸಲಾಗದ ನಿಯಮದ ಬಗ್ಗೆ ವಿವರಿಸಿದ.ಇವನ ಮಾತನ್ನು ಕೇಳಿ ಸೌಮ್ಯವಾಗಿ ತಲೆಯಾಡಿಸಿದ ಸ್ವಾಮೀಜಿಯವರನ್ನು ನೋಡಿ ಮತ್ತಷ್ಟು ಹುರುಪಿನಿಂದ ತನ್ನ ಮಾತನ್ನು ಮುಂದುವರೆಸಿದ. “ವಿಜ್ಞಾನ ಇಷ್ಟೊಂದು ಮುಂದುವರೆದಿರುವಾಗ ರಕ್ತದ ವಿಷಯದಲ್ಲಿ ಈ ರೀತಿ ಬೇಧಭಾವ ಮಾಡುವುದು ಸರಿಯಲ್ಲ. ನಾವು ತಿನ್ನುವ ಆಹಾರ,ತೊಡುವ ಬಟ್ಟೆ,ಬರೆಯುವ ಪೆನ್ನು,ಉಸಿರಾಡುವ ಗಾಳಿ, ನಲ್ಲಿಯಲ್ಲಿ ಬರುವ ಕುಡಿವ ನೀರು ಇವೆಲ್ಲಾ ಎಲ್ಲಾದರೊಂದು ಕಡೆ ಬೇರೆ ಧರ್ಮದವರನ್ನು ಮುಟ್ಟಿಯೇ ಬಂದಿರುತ್ತದೆ.ನೀವು ತುಂಬಾ ತಿಳಿದಿರುವ ಪ್ರಾಂಜಲ ಮನಸ್ಸಿನವರು. ಬೇರೆ ಧರ್ಮದವರ ರಕ್ತವೇ ಬೇಡ ಎಂಬಂತಹ ಕಟ್ಟುನಿಟ್ಟಿನ ಷರತ್ತುಗಳನ್ನು ಹಾಕಿದರೆ ನಾವು ಜೀವನ ನಡೆಸುವುದು ಹೇಗೆ ಸ್ವಾಮೀಜಿ” ಎಂದು ವಿನಮ್ರವಾಗಿ ಪ್ರಶ್ನಿಸಿದ.
ಸ್ವಾಮೀಜಿಯವರು ಮುಗುಳ್ನಗುತ್ತಾ ಹೇಳಿದರು. “ಇದು ನನಗೂ ಗೊತ್ತು. ಈ ಸಂದೇಶವನ್ನು ಸರ್ವ ಜನರಿಗೂ ತಲುಪಿಸಲೆಂದೇ ನಿಮ್ಮ ಹಿರಿಯ ವೈದ್ಯರೊಡನೆ ಸೇರಿ ಈ ನಾಟಕ ಆಡಿದ್ದು. ನನಗೆ ಶಸ್ತ್ರಚಿಕಿತ್ಸೆಯೂ ಬೇಕಾಗಿಲ್ಲ, ರಕ್ತದ ಅವಶ್ಯಕತೆಯೂ ಇಲ್ಲ. ಈಗ ಈ ಊರಿನಲ್ಲಿ ನೆಲಕ್ಕೆ ಬೀಳುತ್ತಿರುವ ನೆತ್ತರಾಗಲೀ, ಸ್ವಯಂಪ್ರೇರಿತರಾಗಿ ದಾನ ಮಾಡುವ ನೆತ್ತರಾಗಲೀ ಯಾವ ಧರ್ಮಕ್ಕೂ ಸೇರಿಲ್ಲ. ಮನುಷ್ಯ ದೇಹದ ನೆತ್ತರಿಗೆ ಧರ್ಮವೆಂಬುದೇ ಇಲ್ಲವೆಂಬ ಸಂದೇಶವನ್ನು ಸಾರುವುದೇ ನಮ್ಮ ಉದ್ದೇಶವಾಗಿತ್ತು”.
ಭೃಂಗೇಶ್ವರ ಸ್ವಾಮೀಜಿಯವರ ಉದಾತ್ತ ಧ್ಯೇಯದ ಅರಿವಾಗಿ ಡಾ.ಆಂತೊಣಿ ಡಿಸೋಜನ ಹೃದಯ ತುಂಬಿ ಬಂತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗಿ ಹಲವಾರು ಜನರಿಗೆ ಜ್ಞಾನೋದಯವಾದಂತೆ ಆಯಿತು. ಯಾವ ಪ್ರವಚನಕ್ಕಿಂತಲೂ ಮಿಗಿಲಾಗಿ ಈ ಪ್ರಹಸನ ಜನರ ಮೇಲೆ ಪ್ರಭಾವ ಬೀರಿ ಮುರಿದ ಮನಸ್ಸುಗಳನ್ನು ಬೆಸೆಯುವಲ್ಲಿ ಸ್ವಲ್ಪ ಮಟ್ಟಿಗಾದರೂ ಸಹಕಾರಿಯಾಯಿತು ಎಂಬುದಂತೂ ನಿಜ.
ಕೆ.ಎಸ್ ಗಂಗಾಧರ
ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.
More About Author