Poem

ನೆನಪಾಗಿ ಕಾಡಬಹುದು

ಕೂದಲು ನೆರೆತಾಗ,
ಕಣ್ಣುಗಳಲ್ಲಿ ಗುಳಿ ಬಿದ್ದಾಗ,
ಕಿವಿ ಕೇಳದಂತಾದಾಗ,
ಮುಖದಲ್ಲಿ ಸುಕ್ಕುಗಳು ಕಾಣಿಸಿದಾಗ,
ಎದೆ ಜೋತು ಬಿದ್ದಾಗ,
ಬೆನ್ನು ಬಾಗಿದಾಗ,
ಮೈ ನಡುಗುವಾಗ,
ನಡೆಯಲಾರದೆ ನಡೆಯುವಾಗ
ನೆನಪಾಗಿ ಕಾಡಬಹುದು.

ಬಣ್ಣಿಸುವವರ
ಬಣ್ಣ ಕಳಚಿದಾಗ,
ಆಷಾಡಭೂತಿಗಳ
ಸಂಚಿಗೆ ಬಲಿಯಾದಾಗ,
ಆಶ್ರಯದ ಆಮಿಷ ಒಡ್ಡಿದವರು
ಬೆನ್ನು ತೋರಿಸಿದಾಗ
ನೆನಪಾಗಿ ಕಾಡಬಹುದು.

ಕೂಡಿ ಬಾಳುವವರ,
ಬೇರಾಗಿ ಮತ್ತೆ ಬೆರೆತವರ,
ಜೊತೆಯಾಗಿ ಸಂತೆ ಮುಗಿಸಿದವರ
ನೋಡಿದಾಗಲೆಲ್ಲ
ನೆನಪಾಗಿ ಕಾಡಬಹುದು.

ಕ್ಷಣಗಳ ಎಣಿಸುತ್ತಿರುವಾಗ,
ಏದುಸಿರು ಬಿಡುತ್ತಿರುವಾಗ,
ಬಾಯಿ ಪಸೆಯಿಲ್ಲದಂತಾದಾಗ
ನೆನಪಾಗಿ ಕಾಡಬಹುದು.

- ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author