ನನ್ನ ಈ ಜನುಮಕ್ಕೆ ಕಾರಣಕರ್ತನವನು
ನನಗೆ ಬದುಕಿನ ಭಿಕ್ಷೆ ನೀಡಿದವನು
ನನ್ನ ಹೆಸರಿಗೆ ಹೊಸ ಅರ್ಥ ಇತ್ತವನು
ಅವನೇ ನನ್ನ ಪ್ರೀತಿಯ ಅಪ್ಪ ||
ಬೆವರ ಹನಿ ಸುರಿಸಿ ದುಡಿಯುವನು
ನನಗೆ ನಗುವನ್ನು ಕಲಿಸಿದವನು
ನಾನು ಬಿದ್ದಾಗ ಕೈ ಹಿಡಿದವನು
ನನ್ನ ಬದುಕಿಗೆ ಅರ್ಥ ಕೊಟ್ಟ ವನೇ ನನ್ನ ಅಪ್ಪ ||
ತನ್ನ ಹೆಗಲ ಮೇಲೆ ಕೂರಿಸಿ
ಬದುಕಿಗೆ ಪಾಠ ಕಲಿಸಿದವನು
ನಾನು ತಪ್ಪು ದಾರಿ ಹಿಡಿದಾಗ
ಸರಿ ದಾರಿ ತೋರಿಸುವನ್ನು ನನ್ನ ಅಪ್ಪ ||
ತನ್ನ ಹೆತ್ತವರಿಗೆ ಮಗನಾಗಿ
ತನ್ನ ಹೆಂಡತಿಗೆ ಗಂಡನಾಗಿ
ತಾನು ಹೆತ್ತ ಮಕ್ಕಳಿಗೆ ಅಪ್ಪನಾಗಿ
ಸಂಸಾರ ಎಂಬ ದೋಣಿ ನಡೆಸುವವನು ನನ್ನ ಅಪ್ಪ ||
ನನ್ನ ಬೇಕು-ಬೇಡಗಳನ್ನು ಪೂರೈಸುತ್ತಾ
ತನ್ನ ಆಸೆಗಳನ್ನು ಮರೆಯುವವನು
ನನ್ನ ಉಜ್ವಲ ಭವಿಷ್ಯಕ್ಕಾಗಿ
ಹಗಲಿರುಳು ಕಷ್ಟಪಡುವವರು ನನ್ನ ಅಪ್ಪ ||
ತನಗೆ ಇರುವ ಕಷ್ಟಗಳನ್ನು
ತನ್ನವರ ಸುಖದಲ್ಲಿ ಮರೆಯುವನು
ತನ್ನವರ ಖುಷಿಯಲ್ಲೇ
ತನ್ನ ಖುಷಿಯನ್ನು ಬಯಸುವನು ನನ್ನ ಅಪ್ಪ ||
ಅಮ್ಮನನ್ನು ಎಲ್ಲರೂ ದೇವರು
ಎಂದು ಕರೆಯುವಾಗ
ದೂರದಲ್ಲಿ ನಿಂತು ಖುಷಿಪಡುವವನು
ತನ್ನ ನೋವುಗಳನ್ನೆಲ್ಲ ಮರೆತು
ನನ್ನ ಹಿಂದೆ ಮಾರ್ಗದರ್ಶಕನಾಗಿ ನಿಂತು
ದಾರಿ ತೋರುವವನು ನನ್ನ ಅಪ್ಪ ||
- ಮೊಹಮ್ಮದ್ ಅಜರುದ್ದೀನ್
ಮೊಹಮ್ಮದ್ ಅಜರುದ್ದೀನ್
ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ, ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.
ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.
ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ
More About Author