Poem

ಮೌನಗೀತೆ..!

ಮಾತು ಬೆಳ್ಳಿ ಮೌನ ಬಂಗಾರ
ನನ್ನ ಅವಳ ಸಂಭಾಷಣೆಯಲಿ
ಬೆಳ್ಳಿ ಇಲ್ಲ ಎಲ್ಲವೂ ಬಂಗಾರ.!
ಮಾತಿಲ್ಲ ಮೌನದ ಕಾರುಬಾರು.!
ಮುದವೀವ ಮೌನ ದರ್ಬಾರು.!

ಮಾತಿಗೆ ಒಂದೇ ಅರ್ಥವಂತೆ
ಮೌನಕ್ಕೆ ಸಾವಿರ ಅರ್ಥಗಳಂತೆ
ನಮ್ಮಿಬ್ಬರಾ ದಿನಂಪ್ರತಿ ಸಂವಾದಕೆ
ಮಾತಿಲ್ಲ ಮೌನದ್ದೇ ಸತತ ಸಾರಥ್ಯ
ಸಾವಿರದ ಸಾವಿರ ಅರ್ಥ ನಿತ್ಯ.!

ಮಾತಿನಲ್ಲಿ ಭಾಷೆಯ ವೈಭವ
ಮೌನದಲ್ಲಿ ಭಾವಗಳ ಅನುಭಾವ
ನನ್ನ ಅವಳ ಸಖ್ಯ ಸಾಂಗತ್ಯದಲ್ಲಿ
ಮೊರೆವ ಮೆರೆವ ಭಾಷೆಗಿಂತಲೂ
ಮಿಡಿವ ತುಡಿವ ಭಾವವೇ ಜೀವ.!

ಮಾತು ಅತಿವೃಷ್ಟಿ ಮೌನ ಸಮಷ್ಟಿ
ನನ್ನ ಅವಳ ಒಟ್ಟು ಒಡನಾಟದಲಿ
ಒಲವ ನಲಿವ ಆಟ ಕೂಟದಲಿ
ಇರದು ಶಬ್ದ ಬಿರುಮಳೆದಾಂಗುಡಿ
ಬರಿದೆ ಮೌನ ಸೋನೆಮಳೆ ಗಾರುಡಿ.!

ಮಾತು ಬೆಂಕಿ ಮೌನ ಬೆಳಕು
ನಮ್ಮಿಬ್ಬರಾ ಸಾಮಿಪ್ಯ ಸಾನಿಧ್ಯದಲಿ
ಬೆಂಕಿಯ ಶಾಖವಿಲ್ಲದ ಬೆಳಕಲೋಕ.!
ಇರಿವ ಕೊರೆವ ನುಡಿಕಿರಣಗಳಿಲ್ಲದ
ಅಹ್ಲಾದ ಮೌನದಾ ಬೆಳದಿಂಗಳನಾಕ.!

"ಓದುತ್ತಲೇ ಒಂದು ತರಾ ಖುಷಿ ಕೊಡುವ ಮೌನದ ಸುಂದರ ಕವಿತೆ. ವಿಶಿಷ್ಟ ಮುದವೀವ ಮೌನದ ರಿಂಗಣಗಳ ಮಧು ಮಧುರ ಕವಿತೆ. ಕೆಲವೊಮ್ಮೆ ವ್ಯರ್ಥ ಅನರ್ಥದ ಶಬ್ದ, ನುಡಿಗಳಿಗಿಂತ ಅರ್ಥಭರಿತ ನಿಶ್ಯಬ್ದ, ಮೌನ ಆಹ್ಲಾದಕರ, ಆನಂದಕರ. ಹಲವಷ್ಟು ಬಾರಿ ಅಸಹನೀಯ ಮಾತಿನ ಡಂಗುರಕಿಂತ, ಅವರ್ಣನೀಯ ಮೌನದ ಝೇಂಕಾರವೇ ಸಮ್ಮೋಹನ, ಸಂಜೀವನ. ಏನಂತೀರಾ..?"

- ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

 

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ.

ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ಎಂಬ ಪ್ರಶಂಸೆ ದೊರೆತಿದ್ದು, ‘ಗುಬ್ಬಿಯ ಕಲರವ’ ಕೃತಿಗೆ ‘ಬಿ.ಕೃಷ್ಣ ಪೈ ಬದಿಯಡ್ಕ ಸ್ಮಾರಕ ಪ್ರಶಸ್ತಿ’, 2012ರಲ್ಲಿ ನಡೆದ ಕೇರಳ ರಾಜ್ಯ 5ನೆಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಕಾವ್ಯ ಪ್ರಶಸ್ತಿ’, ಮಂಡ್ಯದ ‘ಅಡ್ವೈಸರ್’ ಪತ್ರಿಕೆಯ 2012ರ ‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’, ಬೆಂಗಳೂರಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಸುರ್ವೆ ಪತ್ರಿಕೆಯಿಂದ ‘ಎಡನೀರೊಡೆಯನಿಗೆ ಚುಟುಕು-ಪುಷ್ಪಾರ್ಚನೆ’ ಕೃತಿಗೆ ರಾಜ್ಯಮಟ್ಟದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮತ್ತು ಬೆಳ್ಳಿಪದಕ ಬಹುಮಾನ ಪಡೆದಿದ್ದಾರೆ. ಬಿಜಾಪುರದ ಬಸವಜಯಂತಿ ಶತಮಾನೋತ್ಸವ ಸಂಭ್ರಮ-2013 ಸಮಾರಂಭದಲ್ಲಿ ಪ್ರತಿಷ್ಠಿತ ‘ಬಸವಜ್ಯೋತಿ’ ಪ್ರಶಸ್ತಿ, ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ‘ಕೆ.ಎಸ್.ನ. ರಾಜ್ಯಮಟ್ಟದ ಕಾವ್ಯಪುರಸ್ಕಾರ’, ಅಖಿಲ ಭಾರತ ಅಣುಶಕ್ತಿ ನಿಗಮದ ರಾಷ್ಟ್ರಮಟ್ಟದ 2009, 2013, 2016, 2018ರ ಸಾಂಸ್ಕೃತಿಕ ಸ್ಪರ್ಧಾವಳಿಯಲ್ಲಿ ‘ಸ್ವರಚಿತ ಕವನ ವಾಚನ’ದಲ್ಲಿ ಪ್ರಥಮ ಬಹುಮಾನ, ಹುಣಸೂರಿನ ಚುಟುಕು ಸಾಹಿತ್ಯ ಪರಿಷತ್ತಿನಿಂದ 2014ರ ‘ಚುಟುಕು ಮುಕುಟ’ ರಾಜ್ಯ ಪ್ರಶಸ್ತಿ, ಕೈಗಾದ ಸಹ್ಯಾದ್ರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆ-2012 ರಲ್ಲಿ ಬಹುಮಾನ ಮತ್ತು 2013 ರ ‘ಯುವ ಪ್ರತಿಭಾ ಪುರಸ್ಕಾರ’ ಪಡೆದಿದ್ದಾರೆ. ‘ಶಕ್ತಿ ಮತ್ತು ಅಂತ' ನಾಟಕ ಸಂಕಲನಕ್ಕೆ ಸಂತೃಪ್ತಿ ಸಾಹಿತ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನಿಂದ 2017 ನೇ ಸಾಲಿನ `ನೃಪ ಸಾಹಿತ್ಯ ಪ್ರಶಸ್ತಿ', 2019 ರಲ್ಲಿ `ಜನ್ನ’ ಕಾವ್ಯ ಪ್ರಶಸ್ತಿ, ಡಿ.ಎಸ್.ಕರ್ಕಿ ಪ್ರತಿಷ್ಟಾನ ನೀಡುವ 2019 ನೇ ಸಾಲಿನ ಪ್ರತಿಷ್ಟಿತ `ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗಳು ಲಭಿಸಿವೆ.

 

More About Author