ಪ್ರೇಮ ನಗರಿಯ ಸುತ್ತ ಎಲ್ಲೆಲ್ಲೂ ಗೋಡೆಗಳು
ಪ್ರೇಮದ ಪರಿಭಾಷೆ ನರಳುತಿದೆ ನೋಡು
ತಾಯಿ ಹೃದಯವು ಒಂದೇ ಈ ನೆಲಕೆ, ನಭಕೂ
ಗಾಯಕ್ಕೆ ಹಚ್ಚುವ ಮುಲಾಮಿನ ಹಾಡು
ನೋವಿನ ತೊಟ್ಟಿಲಲ್ಲಿ ಅಳುತ್ತಿದೆ ಜಗವೆಂಬ ಮಗು
ಅರಳುವುದು ಮರೆತಿದೆ ತುಟಿಗಳಲಿ ಹೂ ನಗು
ಸಂದೇಹ ಸಂಶಯಗಳ ಮೈದಾನವಾಗಿದೆ ಹೃದಯ
ಅವರನ್ನು ಇವರು, ಇವರ ಅಸ್ಮಿತೆಯ ಅವರು
ತುಳಿದು ಅಳಿಸಲು ಬೇಡ, ಕೋರಬೇಕಿದೆ ನೋಡಿದೆಯ
ದಿಗಿಲೊಂದು ಅಡಗಿದೆ ಎಲ್ಲರೆದೆಯೊಳಗೆ
ಸಾವರಿಸಿ ಲಾಲಿಸುವರು ಕಾಣಬೇಕಿದೆ ನಮಗೆ
ದಾಟುವುದು ಹೇಗೆಂಬ ಆತಂಕ ಜತೆಗಿದೆಯಲ್ಲ
ಜಗವನ್ನು ಸುಧಾರಿಸುವ ಮಾತನಾಡುವರು ಸರಿಯೆ
ತನ್ನೊಳಗೆ ತಾನು ಇಣುಕಿ ಮೊದಲು ನೋಡಬೇಕಲ್ಲ
ಬಾಂಧವ್ಯವ ಕೊಂಡಿಗೆ ಬೆಸೆಯಬೇಕಿದೆ ಕಿರುಬೆರಳು
ಎಲ್ಲರದು, ಜೀವಗಳದು, ಕೊಟ್ಟ ಕೊನೆಯದ್ದು ಕೂಡ
ತುಟಿಗಳ ಮೇಲಿನ ಮಾತಾಗದೆ ಈಡೇರಲಿ ಸವಿಕನಸು
ಅಸಲಿ ಕಾಳಜಿ ಜಿನುಗಿ ಕಟ್ಟಬೇಕಿದೆ ಸಮನ್ವಯದ ನಾಡ
-ಬಿ.ಎ. ಮಮತಾ ಅರಸೀಕೆರೆ
ವಿಡಿಯೋ
ವಿಡಿಯೋ
ಬಿ.ಎ. ಮಮತಾ ಅರಸೀಕೆರೆ
ಬಿ.ಎ. ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು.
ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಸಂತೆ ಸರಕು ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದಲ್ಲದೇ ಕಾಲಡಿಯ ಮಣ್ಣು ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ.