Poem

ಮನಕ್ಕೊಂದು ಮನವಿ..!

ಅವರವರನ್ನು ಹಾಗೆ ಅವರಿದ್ದಂತೆ
ಒಪ್ಪಿಕೊಂಡು ಬಿಡು ಬದಲಾಯಿಸದೆ
ಬರುವ ಕ್ಷಣಗಳೆಲ್ಲವನು ಬಂದಂತೆ
ಅಪ್ಪಿಕೊಂಡು ಬಿಡು ಬೇಸರಿಸದೆ.!

ತಿದ್ದುವ ತೀಡುವ ಸಂಘರ್ಷಗಳಿಗಿಂತ
ಅಸಹಿಷ್ಣು ಬದುಕಿನ ಘರ್ಷಣೆಗಳಿಗಿಂತ
ಬಾಗುವ ಒಗ್ಗುವ ಸಹನಶೀಲತೆ ಮುಖ್ಯ
ಸಹಿಸಿದಷ್ಟೂ ಬಾಳಿಲ್ಲಿ ಅನುಭವ ಜನ್ಯ.!

ಕೆಟ್ಟವರು ಒಳ್ಳೆಯವರು ಎಲ್ಲರಿಂದಲು
ಪ್ರತಿಯೊಬ್ಬರಿಂದಲೂ ಕಲಿಕೆಯ ಪಠ್ಯ
ಸುಖಸಮಯ ಕಷ್ಟಕಾಲ ಎಲ್ಲದರಲ್ಲು
ಪ್ರತಿಘಳಿಗೆಯಲ್ಲೂ ಅನುಭಾವದ ಪದ್ಯ.!

ನಿನ್ನನ್ನೂ ಸೇರಿದಂತೆ ಇಲ್ಲಿ ಯಾರೂ
ಪರಿಪಕ್ವರೂ ಇಲ್ಲ ಪರಿಪೂರ್ಣರೂ ಅಲ್ಲ
ಕೆಡುಕ ಕಡೆಗಣಿಸಿ ಒಳಿತುಗಳ ಆದರಿಸಿ
ನಡೆದರಷ್ಟೇ ಹೆಜ್ಜೆ ಹೆಜ್ಜೆಯೂ ಅಭಿವಂದ್ಯ.!

ಸೈತಾನನೊಡಲಲ್ಲು ಸಾಧುವಿನ ದರ್ಶನ
ಸಂತನೊಳಗೂ ಸೈತಾನನ ರುದ್ರ ನರ್ತನ
ಸುಗ್ಗಿಯಲ್ಲು ಸೂತಕ, ಸಂಕಟದಲ್ಲು ಸವಿಗಾನ
ಇದುವೇ ಈ ಬದುಕಿನ ವೈವಿಧ್ಯ ವೈರುಧ್ಯ.!

ಹೊಂದಿಕೊಂಡರಷ್ಟೇ ನೀನೆಲ್ಲರಿಗು ಸಹ್ಯ
ಅರಗಿಸಿಕೊಂಡರಷ್ಟೇ ಅನುಕ್ಷಣ ಕಾವ್ಯ
ಎಲ್ಲವು ಎಲ್ಲರು ಸದಾ ತನ್ನಂತಿರಬೇಕೆಂಬ
ಭಾವವ ತೊರೆದರಷ್ಟೇ ಬಾಳಲು ಸಾಧ್ಯ.!

ನಿನ್ನ ಕಣ್ಣಿನ ಸಂಕುಚಿತ ದೃಷ್ಟಿಗಿಂತಲೂ
ಜಗದ ಸೃಷ್ಟಿಯದು ನಿಲುಕದಷ್ಟು ವೈಶಾಲ್ಯ
ಕಣ ಕಣ ಅನುದಿನ ಅನುಕ್ಷಣ ಅನೂಹ್ಯ
ಒಳಗಣ್ಣು ಅಗಲಿಸಿದರಷ್ಟೇ ನೋಟ ವೇದ್ಯ.!

“ಇದು ಅಡಿಗಡಿಗೂ ಆಂತರ್ಯದೊಳಗೆ
ಗುನುಗುನಿಸಬೇಕಿರುವ ಕವಿತೆ. ಹೆಜ್ಜೆ
ಹೆಜ್ಜೆಗೂ ಬೆಳಕಾಗಿ ಬದುಕಿನ ಹಾದಿಯ
ಬೆಳಗುವ ಭಾವಪ್ರಣತೆ. ಪ್ರತಿದಿನ ವಿಭಿನ್ನ
ವೈವಿಧ್ಯ ಜನಗಳ ಜೊತೆಯಲ್ಲಿ, ಅನಿರೀಕ್ಷಿತ,
ಅನಿಶ್ಚಿತ ವಿವಿಧ ಸಂಧರ್ಭಗಳ ನಡುವಲ್ಲಿ
ನಡೆಯಲೇಬೇಕಾದ ಅನಿವಾರ್ಯ
ಜೀವನವಿದು. ಇಲ್ಲಿ ಜೀವದ ಪಯಣ
ಯಶಸ್ವಿಯಾಗಬೇಕೆಂದರೆ ಸಹಿಷ್ಣುತೆ,
ಸಮಗ್ರತೆ, ಸೌಜನ್ಯತೆ, ಸಹನಶೀಲತೆ,
ಸೌಹಾರ್ದತೆ ಸದಾ ಮುಖ್ಯ. ಏನಂತೀರಾ..?”

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ.

ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ಎಂಬ ಪ್ರಶಂಸೆ ದೊರೆತಿದ್ದು, ‘ಗುಬ್ಬಿಯ ಕಲರವ’ ಕೃತಿಗೆ ‘ಬಿ.ಕೃಷ್ಣ ಪೈ ಬದಿಯಡ್ಕ ಸ್ಮಾರಕ ಪ್ರಶಸ್ತಿ’, 2012ರಲ್ಲಿ ನಡೆದ ಕೇರಳ ರಾಜ್ಯ 5ನೆಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಕಾವ್ಯ ಪ್ರಶಸ್ತಿ’, ಮಂಡ್ಯದ ‘ಅಡ್ವೈಸರ್’ ಪತ್ರಿಕೆಯ 2012ರ ‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’, ಬೆಂಗಳೂರಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಸುರ್ವೆ ಪತ್ರಿಕೆಯಿಂದ ‘ಎಡನೀರೊಡೆಯನಿಗೆ ಚುಟುಕು-ಪುಷ್ಪಾರ್ಚನೆ’ ಕೃತಿಗೆ ರಾಜ್ಯಮಟ್ಟದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮತ್ತು ಬೆಳ್ಳಿಪದಕ ಬಹುಮಾನ ಪಡೆದಿದ್ದಾರೆ. ಬಿಜಾಪುರದ ಬಸವಜಯಂತಿ ಶತಮಾನೋತ್ಸವ ಸಂಭ್ರಮ-2013 ಸಮಾರಂಭದಲ್ಲಿ ಪ್ರತಿಷ್ಠಿತ ‘ಬಸವಜ್ಯೋತಿ’ ಪ್ರಶಸ್ತಿ, ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ‘ಕೆ.ಎಸ್.ನ. ರಾಜ್ಯಮಟ್ಟದ ಕಾವ್ಯಪುರಸ್ಕಾರ’, ಅಖಿಲ ಭಾರತ ಅಣುಶಕ್ತಿ ನಿಗಮದ ರಾಷ್ಟ್ರಮಟ್ಟದ 2009, 2013, 2016, 2018ರ ಸಾಂಸ್ಕೃತಿಕ ಸ್ಪರ್ಧಾವಳಿಯಲ್ಲಿ ‘ಸ್ವರಚಿತ ಕವನ ವಾಚನ’ದಲ್ಲಿ ಪ್ರಥಮ ಬಹುಮಾನ, ಹುಣಸೂರಿನ ಚುಟುಕು ಸಾಹಿತ್ಯ ಪರಿಷತ್ತಿನಿಂದ 2014ರ ‘ಚುಟುಕು ಮುಕುಟ’ ರಾಜ್ಯ ಪ್ರಶಸ್ತಿ, ಕೈಗಾದ ಸಹ್ಯಾದ್ರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆ-2012 ರಲ್ಲಿ ಬಹುಮಾನ ಮತ್ತು 2013 ರ ‘ಯುವ ಪ್ರತಿಭಾ ಪುರಸ್ಕಾರ’ ಪಡೆದಿದ್ದಾರೆ. ‘ಶಕ್ತಿ ಮತ್ತು ಅಂತ' ನಾಟಕ ಸಂಕಲನಕ್ಕೆ ಸಂತೃಪ್ತಿ ಸಾಹಿತ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನಿಂದ 2017 ನೇ ಸಾಲಿನ `ನೃಪ ಸಾಹಿತ್ಯ ಪ್ರಶಸ್ತಿ', 2019 ರಲ್ಲಿ `ಜನ್ನ’ ಕಾವ್ಯ ಪ್ರಶಸ್ತಿ, ಡಿ.ಎಸ್.ಕರ್ಕಿ ಪ್ರತಿಷ್ಟಾನ ನೀಡುವ 2019 ನೇ ಸಾಲಿನ ಪ್ರತಿಷ್ಟಿತ `ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗಳು ಲಭಿಸಿವೆ.

 

More About Author