Poem

ಮಡಚಿಟ್ಟ ಪುಟ ಮತ್ತೆ ತೆರೆತೋಣ ಬಾ

ಬಾ ಅಂದು ನಾವು
ಗೀಚಿ ಮುಗಿಸಬೇಕಾದ
ಅಧ್ಯಯನವೊಂದು
ಯಾವುದೋ ಕೇಡುಗಾಲಕ್ಕೆ
ಮಡಚಿಟ್ಟ ಪುಟಗಳನ್ನು
ಮತ್ತೆ ತೆರೆಯೋಣ ಬಾ

ಹೌದೌದು ಬಾ ಬಾ
ನೋಡುವ ಕಣ್ಣಿನ ಕರಿ
ಗುಡ್ಡೆಗೆ ಹೆದರಿ ಹಿಂಜರಿಯಬೇಡ
ಆಡುವ ಮಾತಿಗಂತೂ
ಕಿವಿ ಕೊಡಲೇ ಬೇಡ
ಇಲ್ಲಿ ಗಟ್ಟಿ ನಿಲುವುಗಳು ಇದ್ದರಷ್ಟೆ
ಉಸಿರಾಡಲು ಜಾಗ

ಸುಳಿಗಾಳಿಯಲ್ಲಿ ಹಾರಿ ಬಂದ
ರೌದಿಯಂತೆ ಈ ಬದುಕು
ಮತ್ತೆ ಹಾರಲು ತರಾತುರಿನೇ

ಆ ಭಾರಿಯಂತೆ
ಪ್ರತಿ ಭಾರಿಯೂ ನಿನ್ನ
ಕಿರು ಬೆರಳ ತುದಿ ಇನ್ನ್ಯಾರದೋ
ಹಿಡಿತಕ್ಕೆ ಬಲಿಯಾಗುವುದನ್ನ ಮತ್ತೆ ನೋಡಲಾರೆ
ಹ್ಮ...ಹೌದು ನಿನಗೆ
ಒಳಿತು ಬಯಸುವಲ್ಲಿಯೂ
ನನ್ನ ಸ್ವಾರ್ಥದ ಬಹು ಪಾಲು ಅಡಗಿದೆ

ಈಗ ಸುಡುಗಾಡಿನಲ್ಲಿ ಅರಳಿನಿಂತ
ಮಲ್ಲಿಗೆಯ ಕಥೆಯಾಗಿದೆ
ಮುಡಿಯುವವರೇ ಕಮ್ಮಿ

ಬಾ ನಾವು ಮೊದಲಿನಂತೆ
ಆಗಿ ಬಿಡೋಣ ಬಾ
ಮಡಚಿಟ್ಟ ಪುಟವನ್ನು
ಮತ್ತೆ ತೆರೆಯೋಣ ಬಾ

ಸುಡುವ ಬಿಸಿಲಿಗೆ
ತಂಗಾಳಿಯಂತೆಯೋ
ಎಂಜಲು ಹಾಲಿಗೆ ಪರದಾಡುವ
ಕೂಸಿನಂತೆಯೋ
ಬಿರಕು ಬಿಟ್ಟ ತುಟಿಗಳಿಗೆ ಸಿಹಿ
ಮುತ್ತಿನಂತೆಯೋ
ಬರಿದಾದ ಬದುಕಿಗೆ ಆಸರೆಯ
ಅಪ್ಪುಗೆಯಂತೆ ಇದ್ದು ಬಿಡೋಣ ಬಾ

ಬಾ ಮೊದಲಿನಂತೆ
ಆಗಿ ಬಿಡೋಣ ಬಾ
ಮಡಚಿಟ್ಟ ಅಧ್ಯಯನವನ್ನು
ಮತ್ತೆ ಬರೆಯೋಣ ಬಾ

- ಆನಂದ ಎಸ್ ಗೊಬ್ಬಿ ಶಹಾಪೂರ

ಆನಂದ ಎಸ್ ಗೊಬ್ಬಿ

ಆನಂದ ಎಸ್ ಗೊಬ್ಬಿ ಅವರು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಐಕೂರ ಗ್ರಾಮದವರು. (ಜನನ: 01-06-1995). ಇವರ ಚೊಚ್ಚಲ ಕಥಾ ಸಂಕಲನ  ‘ನಿರುದ್ಯೋಗಕ್ಕೆ ಹೆಣವಾದ ಅಪ್ಪ’ . ಸದ್ಯ, ಕಲಬುರಗಿಯಲ್ಲಿ ಬಿ ಇಡಿ ವಿದ್ಯಾರ್ಥಿ. 

More About Author