Story

ಕುಂತಿಯ ಮುಸ್ಸಂಜೆ ಮಾತು

ಕತೆಗಾರ್ತಿ ಜ್ಯೋತಿ ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯನ್ನು ಹವ್ಯಾಸ ವಾಗಿಸಿಕೊಂಡಿರುವ ಅವರ ‘ ಕುಂತಿಯ ಮುಸ್ಸಂಜೆ ಮಾತು’ ಕತೆ ನಿಮ್ಮ ಓದಿಗಾಗಿ...

ಮುಚ್ಚಿಕೊಂಡಿದ್ದ ಕಣ್ಣುಗಳು ಭಾರವೆನಿಸಿತು. ನಿಧಾನವಾಗಿ ಬಿಡಿಸಿಕೊಂಡರೆ, ಹೊರಗೆ ಕತ್ತಲು ದಟ್ಟವಾಗಿತ್ತು. ನರಿಗಳು ಊಳಿಡುವ ಸದ್ದು ಕಿವಿಗಪ್ಪಳಿಸಿತು. ಕುಟೀರದ ಹೊರಗಿನ ಅಂಗಳದ ಮಬ್ಬುಗತ್ತಲಲ್ಲಿ ಕುಳಿತು ಧ್ರತರಾಷ್ಟ್ರ ಮತ್ತು ಗಾಂಧಾರಿ ಲೋಕಾಭಿರಾಮವಾಗಿ ಏನೋ ಮಾತನಾಡುತ್ತಿರುವುದು ಮೆಲುದನಿಯಲ್ಲಿ ಕೇಳಿಸುತ್ತಿತ್ತು. ಏನೇ ಮಾತನಾಡಿದರೂ, ಅದೇ ಹಳೆಯ ವಿಷಯಗಳ ಪುನರಾವರ್ತನೆ. ಕೆಲವೊಮ್ಮೆ ನಗು, ಮಗದೊಮ್ಮೆ ಅಳು… ಆ ಮಗ ಹಾಗೆ ಮಾಡುತ್ತಿದ್ದ, ಈ ಮಗ ಹೀಗೆ ಮಾಡುತ್ತಿದ್ದ… ಕೆಲವೊಮ್ಮೆ, ನನಗೆ ಅವರ ಮಾತಿನಲ್ಲಿ ಸೇರಿಕೊಳ್ಳಲು ಭಯವಾಗುತ್ತಿತ್ತು. ಎಲ್ಲಿ, ‘ನಿನ್ನ ಮಕ್ಕಳು, ನಮ್ಮ ವಂಶ ನಿರ್ವಂಶ ಮಾಡಿಬಿಟ್ಟರು,’ ಅಂದುಬಿಡುತ್ತಾರೆ, ಎನ್ನುವ ಆತಂಕ.

ನಾನು, ಮಧ್ಯಾಹ್ನ ಊಟದ ನಂತರ ಯಾಕೋ ದಣಿವಾಗಿದೆ, ಸ್ವಲ್ಪ ವಿಶ್ರಮಿಸೋಣವೆಂದು, ಹಾಗೆ ಮಲಗಿದ್ದವಳಿಗೆ, ಜೋಂಪು ಹತ್ತಿಬಿಟ್ಟಿತ್ತು. ಬೆಳಗ್ಗಿನಿಂದಲೇ ಸ್ವಲ್ಪ ತಲೆಭಾರವೆನಿಸಿತ್ತು. ಯಾಕೋ ಮಕ್ಕಳ ನೆನಪು ಇತ್ತೀಚೆಗೆ ಹೆಚ್ಚು ಕಾಡುತ್ತಿದೆ. ಅರಮನೆ ತ್ಯಜಿಸುವಾಗ, ದೃಢ ನಿರ್ಧಾರದಿಂದಲೇ ಹೊರಗೆ ಹೆಜ್ಜೆ ಹಾಕಿದ್ದೆ. ಆದರೆ, ಈಗ ನೆನಪಾಗಿ ಕಾಡುತ್ತಿದ್ದಾರೆ. ಕ್ಷೇಮವಾಗಿರಬಹುದಲ್ಲವೇ? ಇರಲೇಬೇಕು. ನನಗನಿಸಿದಂತೆ, ಶತ್ರುಗಳ ಭಾದೆಯಂತೂ ಇಲ್ಲ. ಇನ್ನು ಅಣ್ಣತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ. ಯುಧಿಷ್ಠಿರ ಎಲ್ಲರನ್ನು ಸಂಭಾಳಿಸುತ್ತಾನೆ. ಆ ನಿಟ್ಟಿನಲ್ಲಿ, ಒಗ್ಗಟ್ಟು ಚೆನ್ನಾಗಿಯೇ ಮುಂದುವರಿದಿದೆ. ಬಹುಶಃ, ಇದರ ಶ್ರೇಯಸ್ಸು ನನಗಿಂತ, ದ್ರೌಪದಿಗೆ ಸೇರಬೇಕು. ಇಷ್ಟೂ ವರ್ಷ, ಐದು ಜನರನ್ನು ಚೆನ್ನಾಗಿಯೇ ನಿಭಾಯಿಸಿದ್ದಾಳೆ. ಈ ವಿಷಯದಲ್ಲಿಯಾದರೂ, ನನ್ನ ಯೋಜನೆ ಅಂದುಕೊಂಡಂತೆ ಫಲ ನೀಡಿತು.

ನಾನು, ಮಕ್ಕಳೊಂದಿಗೆ ಕಾಡು ಮೇಡು ಸುತ್ತುತ್ತಾ ಕಷ್ಟನಷ್ಟ ಅನುಭವಿಸುವಾಗ ಜೊತೆಗಿದ್ದು, ಅಂತೂ ಈಗ ಗದ್ದುಗೆ ಸಿಕ್ಕ ಮೇಲೆ, ವೈರಾಗ್ಯ ಮೂಡಿ, ಅಕ್ಕ ಭಾವನ ಹಿಂದೆ ಹೆಜ್ಜೆಯಿಡುವ ನಿರ್ಧಾರ ಮಾಡಿ, ಕಾಡಿನತ್ತ ಮುಖ ಮಾಡಿದಾಗ, ನನ್ನ ಮಕ್ಕಳಿಗೆ ತಕ್ಷಣ ನಂಬಲಾಗಲಿಲ್ಲ. ಅವರಿಗೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಮಹದಾಸೆ ಇತ್ತೆಂದು ಅವರ ಮುಖಭಾವದಲ್ಲಿಯೇ ಗೊತ್ತಾಯಿತು. ಮೊದಲು, ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಕುರುಕ್ಷೇತ್ರ ಯುದ್ಧರಂಗ ನೋಡಿದ ಮೇಲೆ ನನಗೆ ವೈರಾಗ್ಯ ಮೂಡಿತು. ಈ ವೈಭೋಗ, ಒಣ ಪ್ರತಿಷ್ಠೆ ಯಾವುದೂ ನನಗೆ ಬೇಕಿಲ್ಲವೆನಿಸಿತು. ಮಕ್ಕಳು ಅನುಭವಿಸಬೇಕೆಂದಿದ್ದ ಅಧಿಕಾರ ಮರಳಿ ಅವರಿಗೆ ಸಿಕ್ಕ ಮೇಲೆ, ನನ್ನ ಕರ್ತವ್ಯ ಇನ್ನು ಮುಗಿಯಿತು, ಇನ್ನು ಏನಿದ್ದರೂ ಬದುಕಿನ ನಿರ್ಗಮನದ ಸಿದ್ಧತೆ ಮಾಡಿಕೊಳ್ಳುವುದಷ್ಟೇ ಬಾಕಿಯಿದೆ ಅಂದುಕೊಂಡೆ. ಯಾಕೋ, ಸುಪ್ಪತ್ತಿಗೆಯ ವ್ಯಾಮೋಹವೆಲ್ಲಾ ಕಳೆದು ಮನಸ್ಸು ಜಿಡ್ಡಾಗಿ ಹೋಗಿತ್ತು.

ಮತ್ತೊಮ್ಮೆ, ಆ ಹಳೆಯ ನೆನಪುಗಳು ಮನಸ್ಸನ್ನು ಕೊರೆಯುತ್ತಿವೆ. ವಾಸ್ತವದಲ್ಲಿ ಬದುಕಲಾಗದೆ, ನನ್ನನ್ನು ಹಿಂದಕ್ಕೆ ಎಳೆದೊಯ್ಯುತ್ತಿರುವಂತೆ ಭಾಸವಾಗುತ್ತಿದೆ. ಈ ಮನಸ್ಥಿತಿ ತಲುಪಿ ಹಲವು ದಿನಗಳೇ ಕಳೆದುಹೋದವು. ವಿಸ್ಮಯವೆಂದರೆ, ಜೀವನವಿಡೀ ಹರಸಾಹಸ ಮಾಡಿ, ರಕ್ತಪಾತದ ನಡುವೆ ಅಂತೂ ಮಕ್ಕಳಿಗೆ ರಾಜ್ಯಭಾರ ಸಿಕ್ಕಾಗ, ಖುಷಿಯಾಗುವುದರ ಬದಲಾಗಿ, ಮನಸ್ಸು ಹೆಪ್ಪುಗಟ್ಟಿತ್ತು. ಯುಧಿಷ್ಠಿರನ ಪಟ್ಟಾಭಿಷೇಕದ ದಿನ, ಸುತ್ತಲೂ ನೀರವ ಮೌನ. ಆಗ ಅನ್ನಿಸಿದಿಷ್ಟೇ, ಇಷ್ಟು ಗಳಿಕೆಗಾಗಿ ಜೀವನಪರ್ಯಂತ ಕಷ್ಟ ಪಟ್ಟಿದ್ದೇ? ಸಂತೋಷ ಹಂಚಿಕೊಳ್ಳಲು ಸುತ್ತಲೂ ಜನವೇ ಇಲ್ಲವಲ್ಲ?

ಅಂದು, ಯುದ್ಧದ ಕೊನೆಯದಿನ ಕುರುಕ್ಷೇತ್ರಕ್ಕೆ ಹೋಗಿದ್ದೆ. ಅಂದರೆ, ನನ್ನ ಮಕ್ಕಳ ಅಂತಿಮ ವಿಜಯೋತ್ಸವದ ದಿನ. ಇಡೀ ಕುರುಕ್ಷೇತ್ರ ಭಯಾನಕ ಸ್ಮಶಾನದಂತೆ ಕಾಣಿಸುತ್ತಿತ್ತು. ಕೆಲವು ಅರೆ ಸತ್ತ ಜೀವಗಳ ನರಳಾಟ, ಕೆಲವು ಸಂಪೂರ್ಣ ಸತ್ತಿರುವ ಹೆಣಗಳ ದುರ್ನಾತ, ಇನ್ನು ಕೆಲವು ಇನ್ನೂ ರಕ್ತ ಒಸರುತ್ತಿರುವ ದೇಹಗಳು. ಸುತ್ತಲೂ, ರಣ ಹದ್ದು, ಕಾಗೆಗಳ ಹಾರಾಟ, ಚೀರಾಟ, ಸಂಭ್ರಮ. ಅಲ್ಲಿ ಕಳೆದಷ್ಟು ಹೊತ್ತು ಮೂಗು ಮುಚ್ಚಿಕೊಂಡಿದ್ದೆ. ಅಲ್ಲಿ ಬಿದ್ದಿದ್ದ ಲಕ್ಷಾಂತರ ಜನರ, ಆನೆಗಳ, ಕುದುರೆಗಳ ಛಿದ್ರಗೊಂಡ, ಕೊಳೆಯುತ್ತಿದ್ದ ದೇಹಗಳ ಅವಶೇಷ, ರಕ್ತದ ತೊರೆಯ ಮಧ್ಯೆ ತಮ್ಮವರನ್ನು

ಹುಡುಕಾಡುತ್ತಾ ಕಣ್ಣೀರಿಡುವ ಮಂದಿ, ಬೆಲೆಬಾಳುವ ವಸ್ತುಗಳೇನಾದರೂ ಸಿಗಬಹುದೋ, ಎಂದು ಅಪರಾಧಿ ಪ್ರಜ್ಞೆಯಿಂದ ಅರಸುತ್ತಿದ್ದ ನಿರ್ಗತಿಕರು.... ಹೀಗೆ ನೋಡುತ್ತಾ, ಹೊಟ್ಟೆ ತೊಳಿಸಿದಂತಾಗಿ, ನಿಲ್ಲಲಾಗದೇ, ಅರಮನೆಗೆ ವಾಪಸ್ಸಾದೆ.

ನನ್ನ ಮಕ್ಕಳು ಅಧಿಕಾರ ಪಡೆದ ರಾಜ್ಯವಿಂದು ಬರಿ ವಿಧವೆಯರಿಂದ, ಅನಾಥ ಮಕ್ಕಳಿಂದ ತುಂಬಿಕೊಂಡಿದೆ. ಅವರ ಜೀವನ ನಿರ್ವಹಣೆಯ ಗತಿ! ಅಂತೂ, ಭಿಕ್ಷುಕರ ರಾಜ್ಯಕ್ಕೆ ನನ್ನ ಮಕ್ಕಳು ಅಧಿಪತಿಗಳಾದರು. ಮನುಷ್ಯರಂತೆಯೇ, ಲಕ್ಷಾಂತರ ಆನೆ, ಕುದುರೆಗಳು ಕೂಡ, ನನ್ನ ಮಕ್ಕಳು ರಾಜ್ಯ ಪಡೆಯುವುದ್ದಕ್ಕಾಗಿ ಜೀವ ಕಳೆದುಕೊಂಡಿವೆ. ಅವುಗಳಿಗೆ, ಯಾವ ರಾಜ್ಯದ ಆಸೆಯಿತ್ತು? ಹುಟ್ಟಿಸಿದ ದೇವರು, ಮನುಷ್ಯನ ಹಂಗಿಲ್ಲದೆ ಬದುಕಲು ಅವುಗಳಿಗೆ ಆಹಾರ ಒದಗಿಸಿದ್ದಾನೆ. ಆದರೂ ನಾವು ನಮ್ಮ ಸ್ವಾರ್ಥ ಸಾಧನೆಗೆ ಅವುಗಳಿಂದ ಶಕ್ತಿಮೀರಿ ದುಡಿಸಿಕೊಳ್ಳುತ್ತೇವೆ. ಇಷ್ಟೆಲ್ಲಾ ಮಾರಣ ಹೋಮದ ನಂತರ ಸಿಕ್ಕಿದ ರಾಜ್ಯ, ಸುಖ ಕೊಡುವ ಬದಲಾಗಿ ನಿದ್ರೆ ಕಸಿದುಕೊಂಡಿತ್ತು. ಅರಮನೆಯ ಸುಪ್ಪತ್ತಿಗೆ, ಸ್ಮಶಾನದ ಅನುಭವ ತಂದಿತು. ಅಲ್ಲಿ ಹೆಚ್ಚು ದಿನ ಉಳಿದುಕೊಳ್ಳಲಾಗಲಿಲ್ಲ. ಅದಕ್ಕೆ ಇವರೊಂದಿಗೆ ಕಾಡಿಗೆ ಬಂದೆ.

ವಿಸ್ಮಯವೆಂದರೆ, ಇಂದು ಜೀವಂತವಾಗಿರುವ ನನ್ನವರಿಗಿಂತ, ಎಷ್ಟೋ ವರ್ಷಗಳ ಹಿಂದೆ ಗತಿಸಿಹೋದ ಅಪ್ಪ, ಅಮ್ಮ, ಪಾಂಡು, ಮಾದ್ರಿ ಹಾಗು ನಾನೆಂದೂ ಪ್ರೀತಿ ತೋರಿಸಲಾಗದ ನನ್ನ ಹಿರಿ ಮಗ ಕರ್ಣ, ಇವರೆಲ್ಲಾ ನೆನಪಾಗಿ ಕಾಡುತ್ತಿದ್ದಾರೆ. ಆದಷ್ಟು ಬೇಗ ಅವರನ್ನೆಲ್ಲಾ ಸೇರಿಕೊಳ್ಳಬೇಕೆನ್ನಿಸುತ್ತಿದೆ. ಆದರೆ, ಲೋಕ ನೋಡುವ ಶಕ್ತಿ ಕಳೆದುಕೊಂಡ ಇವರಿಬ್ಬರನ್ನು ಬಿಟ್ಟು ಹೇಗೆ ಮುಂದುವರಿಯಲಿ? ಅವರ ಜೊತೆಯಿದ್ದು ಕೊನೆಯವರೆಗೆ ಮುನ್ನೆಡೆಸುವ ಜವಾಬ್ದಾರಿ ನನ್ನ ಮೇಲಿದೆ. ಯಾಕೆಂದರೆ, ಅವರು ತಮ್ಮ ಮುಂದೆಯೇ, ಒಂದಲ್ಲ, ಎರಡಲ್ಲ, ನೂರು ಜನ ಮಕ್ಕಳು, ನನ್ನ ಮಕ್ಕಳ ಕೈಯಲ್ಲಿ ಹತರಾಗುವುದನ್ನು ನೋಡಿದವರು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಸಂಕಟವೇನೆಂದು ನಾನು ಚೆನ್ನಾಗಿ ಬಲ್ಲೆ. ಈ ಯುದ್ಧ, ನನ್ನ ನತದ್ರಷ್ಟ ಮಗ ಕರ್ಣನನ್ನೂ ಬಲಿ ತೆಗೆದುಕೊಂಡಿಲ್ಲವೇ?

ಕೆಲವೊಮ್ಮೆ ನನ್ನನ್ನು ನಾನೇ ಪ್ರಶ್ನಿಸುವುದಿದೆ. ಇದೆಲ್ಲಾ ವಿಧಿ ಲಿಖಿತವೇ? ಇದನ್ನು ನಮ್ಮಿಂದ ತಪ್ಪಿಸಲು ಸಾಧ್ಯವಿರಲಿಲ್ಲವೇ? ಕೊನೆಗೂ, ಜೊತೆಯಾಗಿ ಬೆಳೆದ ದಾಯಾದಿಗಳ ಹೆಣ ಉರುಳಿಸಿ, ನನ್ನ ಮಕ್ಕಳಿಗೆ ರಾಜ್ಯ ಬೇಕಿತ್ತೆ? ಈ ವಿವೇಚನೆ ಮೊದಲೇ ನಮಗೆ ಯಾಕಿರಲಿಲ್ಲ. ನಿಜ, ಅರ್ಜುನನೇನೋ ಸ್ವಲ್ಪ ತಡವರಿಸಿದ. ಆಮೇಲೆ, ಕೃಷ್ಣನ ಮಾತು ಕೇಳಿ ಯುದ್ಧಕ್ಕೆ ಸಿದ್ದನಾದ.

ವಿಚಿತ್ರವೆಂದರೆ, ನನ್ನ ಮಕ್ಕಳು ಅಧಿಕಾರಕ್ಕಾಗಿ ಯಾರನ್ನು ಕೊಂದರೋ, ಅವರ ಹೆತ್ತವರೊಂದಿಗೆ ನಾನು ದಿನ ಕಳೆಯುತ್ತಿದ್ದೇನೆ. ಆದರೆ, ಇದು ನನ್ನ ಆಯ್ಕೆಯೂ ಹೌದು. ಹೀಗೆ ಮಾಡಿ, ಮನಸ್ಸು ಸ್ವಲ್ಪ ಹಗುರ ಮಾಡಿಕೊಳ್ಳಬೇಕಿತ್ತು. ನಿಜ, ಧ್ರತರಾಷ್ಟ್ರ ಪುತ್ರವ್ಯಾಮೋಹದಿಂದ ನನ್ನ ಮಕ್ಕಳ ಹಕ್ಕು ಕಸಿದ. ಆದರೆ, ನಾನು ಅವನಿಗಿಂತ ಹೇಗೆ ಭಿನ್ನವಾಗಿದ್ದೇನೆ? ನನ್ನ ಐದು ಮಕ್ಕಳ ರಕ್ಷಣೆಗಾಗಿ, ನಾನೆಂದೂ ತಾಯಿಯ ಪ್ರೀತಿ ತೋರಿಸದ ಹಿರಿ ಮಗನ ಹತ್ತಿರ, ಕದ್ದು ಮುಚ್ಚಿ ಹೋಗಿ, ನಿರ್ಲಜ್ಜೆಯಿಂದ, ಜೀವ ಭಿಕ್ಷೆ ಕೇಳಿಲ್ಲವೇ?

ಈ ಎರಡು ಹಿರಿ ಜೀವಗಳ ಮಾತು ಸತ್ತಿರುವ ಶೂನ್ಯ ಭಾವ ಗಮನಿಸಿದರೆ, ನೇರವಾಗಿ ಅವರ ಮುಖ ನೋಡುವುದಕ್ಕೂ ಇರುಸು ಮುರುಸಾಗುತ್ತದೆ. ಕೆಲವೊಮ್ಮೆ, ಅವರಿಬ್ಬರೇ, ತಮ್ಮ ಮಕ್ಕಳನ್ನು ನೆನೆಸಿಕೊಂಡು ಮಾತನಾಡುವಾಗ, ಕೇಳಿಯೂ ಕೇಳಿಸದಂತೆ ನಟಿಸುತ್ತೇನೆ. ಆಮೇಲೆ, ಒಬ್ಬಳೇ ಕುಳಿತು ಸದ್ದಿಲ್ಲದೇ ಅಳುತ್ತೇನೆ.

ಅಂದು, ಭೀಮನ ನಡವಳಿಕೆ ಸ್ವಲ್ಪ ಅತಿರೇಕವಾಗಿತ್ತು. ಸ್ವಲ್ಪವೂ ಸಭ್ಯತೆ ಇಲ್ಲದವನಂತೆ ನಡೆದುಕೊಂಡ. ಮಕ್ಕಳನ್ನು ಕಳೆದುಕೊಂಡು ಪುತ್ರಶೋಕದಲ್ಲಿದ್ದ ಧ್ರತರಾಷ್ಟ್ರ ಹಾಗು ಗಾಂಧಾರಿ, ನನ್ನ ಮತ್ತು ಯುಧಿಷ್ಠಿರನ ವಿನಂತಿಯಂತೆ, ನಮ್ಮ ಅರಮನೆಯಲ್ಲಿಯೇ ಉಳಿದುಕೊಂಡಿದ್ದರು. ಆದರೆ, ಪ್ರತಿಕ್ಷಣ ವಿಪರೀತ ಮಾನಸಿಕ ಯಾತನೆ ಅನುಭವಿಸಿದರೆಂದು ಹೇಳಬಹುದು. ತಮ್ಮ ಮಕ್ಕಳನ್ನು ಕೊಂದವರ ಅತಿಥಿಗಳಾಗಿರುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಪೂರಕವೆಂಬಂತೆ, ಒಂದು ದಿನ

ಧ್ರತರಾಷ್ಟ್ರ ಊಟಮಾಡುತ್ತಾ, ಮೂಳೆಯೊಂದನ್ನು ಜಗಿಯುತ್ತಿದ್ದಾಗ, ಸ್ವಲ್ಪ ಸದ್ದಾಯಿತು. ಇದನ್ನು ಗಮನಿಸಿದ ಭೀಮ ತಕ್ಷಣ ಪ್ರತಿಕ್ರಿಯಿಸಿದ,

"ದೊಡ್ಡಪ್ಪ, ಅಂದು ನಿಮ್ಮ ದೊಡ್ಡ ಮಗನ ತೊಡೆ ಮುರಿಯುವಾಗಲೂ, ಹೀಗೆಯೇ ಕಟಕಟ ಸದ್ದಾಗಿತ್ತು.”

ಭೀಮ ಗೊಳ್ಳನೆ ನಕ್ಕ. ನಾನು ಹಾಗು ಯುಧಿಷ್ಠಿರ, ಭೀಮನನ್ನು ಗದರಿಸಿದೆವು, ನಿಜ. ಆದರೆ, ಅದರ ಪರಿಣಾಮವಾಗಿ, ಧ್ರತರಾಷ್ಟ್ರ ಅರಮನೆ ತೊರೆದು ವಾನಪ್ರಸ್ಥಕ್ಕೆ ಹೊರಡುವ ತನ್ನ ನಿರ್ಧಾರ ದೃಢಗೊಳಿಸಿದ. ಅವರ ಸ್ಥಿತಿ ನೋಡಿ ನಾನೂ ಜೊತೆಯಾದೆ.

ಕಳೆದ ಕೆಲವು ದಿನಗಳಿಂದ, ಕಳೆದುಹೋದ ಬಾಲ್ಯದ ದಿನಗಳ ನೆನಪೆಲ್ಲಾ ಮರಳಿ, ಪುನಃ ಬದುಕನ್ನು ಅವಲೋಕಿಸಲು ಪ್ರೇರೇಪಿಸುತ್ತಿದೆ. ಆಗ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ- ನನ್ನ ಸಾಧನೆಯೇನು? ಗಳಿಸಿದ್ದೇನು? ಕಳೆದುಕೊಂಡದ್ದೇನು? ಬಹುಶಃ, ಮನುಷ್ಯನಿಗೆ ತನ್ನ ಬಾಲ್ಯದ ಮುಗ್ದ ದಿನಗಳ ನೆನಪುಗಳನ್ನು ಬಿಟ್ಟರೆ, ಉಳಿದದ್ದೆಲ್ಲಾ, 'ಛೆ, ನಾನು ಹಾಗೆ ಮಾಡಬಾರದಿತ್ತು. ಛೆ, ನಾನು ಹೀಗೆ ಹೇಳಬೇಕಿತ್ತು. ಅಯ್ಯೋ, ಇದಾಗಿದ್ದರೆ ಎಷ್ಟು ಚೆನ್ನಾಗಿತ್ತು'... ಹೀಗೆ ನೆನಪುಗಳು, ನಮ್ಮ ದೇಹಕ್ಕೆ ವಯಸ್ಸಾದಂತೆ, ಮನಸ್ಸಿಗೆ ದಣಿವಾದಂತೆ ಕಾಡುತ್ತಲೇ ಇರುತ್ತವೆ, ತಮ್ಮ ಪಾಲಿನ ನೋವನ್ನು ನಮಗೆ ಕೊಡುತ್ತಲೇ ಇರುತ್ತವೆ. ಹೀಗೆ, ನನ್ನ ಜೀವನವನ್ನು ಪುನರ್ ಅವಲೋಕಿಸಿದರೆ- ನಾನು ಎಷ್ಟೊಂದು ತಿರುವುಗಳನ್ನು ದಾಟುತ್ತಾ, ಸಹಿಸಿಕೊಳ್ಳುತ್ತಾ, ಇಲ್ಲಿಯವರೆಗೆ ಬಂದು ತಲುಪಿದೆ! ಬಹುತೇಕ ಸವಾಲುಗಳನ್ನು, ಒಂಟಿಯಾಗಿಯೇ ನಿರ್ವಹಿಸಿದೆಯೆನ್ನಬಹುದು. ಇಂದು, ಜೀವನದ ಮೈಲುಗಲ್ಲುಗಳನ್ನು ನೆನೆಸಿಕೊಂಡರೆ, ಸಾಕಷ್ಟು ನಿಟ್ಟುಸಿರುಗಳು, ದೀರ್ಘ ಮೌನಗಳು ಮಧ್ಯೆ ಮಧ್ಯೆ ಸೇರಿಕೊಳ್ಳುತ್ತದೆ…

ಗತಿಸಿಹೋದ ದಿನಗಳತ್ತ ಮರುನೋಟ ಬೀರಿದರೆ, ನಾನು ಪಾಂಡುವಿನೊಂದಿಗೆ ಕೊನೆಯ ಬಾರಿ ಕಾಡಿಗೆ ಹೋಗುವವರೆಗೂ, ನಾಡಿನ ಎಲ್ಲಾ ಸುಖ ಸಂಪತ್ತನ್ನು ಅನುಭವಿಸಿದವಳೇ. ನನ್ನ ಜೀವನದಲ್ಲಿ ಸಾಕಷ್ಟು ಸಂತಸದ ಕ್ಷಣಗಳೂ ಇದ್ದವು. ಲೋಕದಲ್ಲಿ ಎಲ್ಲರಿಗೆ ಒಬ್ಬ ತಂದೆ ತಾಯಿಯಾದರೆ, ನನಗೆ ಮಾತ್ರ ಇಬ್ಬಿಬ್ಬರು ಅಪ್ಪಂದಿರು, ಅಮ್ಮಂದಿರು. ನನಗೆ ಇಂದಿಗೂ ಕೂಡ, ಅವರಲ್ಲಿ, ಯಾರು ಕಡಿಮೆ, ಯಾರು ಹೆಚ್ಚು, ಎಂದು ಹೇಳಲಾಗುತ್ತಿಲ್ಲ. ಜನ್ಮದಾತ, ಯಾದವ ಕುಲದ ಶೂರಸೇನನಾದರೂ, ಅವನ ಸ್ನೇಹಿತ, ಸ್ವಂತ ಮಕ್ಕಳಿಲ್ಲದ ಕುಂತಿ ಭೋಜ, ನನಗೆ ಅಷ್ಟೇ ಪ್ರೀತಿ ತೋರಿಸಿದ. ನನ್ನ ಬಾಲ್ಯವೆಲ್ಲಾ, ಈ ಅರಮನೆಯಿಂದ, ಆ ಅರಮನೆಗೆ ಓಡಾಡುತ್ತಾ, ಕಳೆದುಹೋದುದೇ ಗೊತ್ತಾಗಲಿಲ್ಲ. ಎಲ್ಲಾ ಕಡೆಯಿಂದ ನನಗೆ ಪ್ರೀತಿಯ ಮಳೆ.

ಒಂದು ದಿನ, ಕುಂತಿಭೋಜನ ಆಸ್ಥಾನಕ್ಕೆ ಅತಿಥಿಯಾಗಿ ಮುಂಗೋಪಿ ದುರ್ವಾಸ ಮುನಿ ತನ್ನ ಶಿಷ್ಯರೊಂದಿಗೆ ಬಂದಿದ್ದರು. ನನಗಾಗ ಹದಿಮೂರು ವರ್ಷ. ಅಪ್ಪನಿಗೆ ಚಿಂತೆಯಾಗಿತ್ತು. ಅತಿಥಿ ಸತ್ಕಾರದಲ್ಲಿ ಕಿಂಚಿತ್ತು ಕೊರತೆಯಾದರೂ, ಋಷಿಗಳು ಶಾಪಕೊಟ್ಟು ಬಿಟ್ಟಾರು, ಎನ್ನುವ ಭಯ ಆವರಿಸಿತ್ತು. ನಾನು ಆಶ್ವಾಸನೆ ಕೊಟ್ಟು ಋಷಿಗಳ ಸತ್ಕಾರದ ಹೊಣೆ ನಾನೇ ಹೊತ್ತುಕೊಂಡು, ಅವರ ಮೆಚ್ಚುಗೆ ಗಳಿಸಿದೆ. ತೃಪ್ತರಾದ ದುರ್ವಾಸರು, ಅಪ್ರಬುದ್ಧ ವಯಸ್ಸಿನ ನನಗೆ ವರವೊಂದನ್ನು ದಯಪಾಲಿಸಿದರು. ಇಂದಿಗೂ, ಅದು ವರವೋ, ಶಾಪವೋ, ಸ್ಪಷ್ಟವಾಗಿಲ್ಲ. ಆದರೆ, ನನ್ನ ಬದುಕಿನ ದಾರಿಯನ್ನಂತೂ ಸಂಪೂರ್ಣ ಬದಲಾಯಿಸಿತು.

"ನಿನಗೆ ಇಷ್ಟಬಂದ ಐದು ದೇವರನ್ನು ನೆನೆಸಿಕೊಂಡು, ಅವರಿಂದ, ಐದು ಗಂಡು ಮಕ್ಕಳ ಪಡೆಯುವ ಸೌಭಾಗ್ಯ ಸಿಗಲಿ."

ಅಂದು ದುರ್ವಾಸರು ವರ ಕೊಡುವಾಗ ಹೆತ್ತವರು ಹತ್ತಿರವಿರಲಿಲ್ಲ. ಅದು ಕೇವಲ ನನಗಷ್ಟೇ ಗೊತ್ತಿತ್ತು. ದುರ್ವಾಸರು ಹೋದ ಮೇಲೆ, ಆ ವರ ನನ್ನ ಕಾಡಲಾರಂಭಿಸಿ, ಮನಸ್ಸನ್ನು ಚಂಚಲ ಗೊಳಿಸಿತು.

ಏನಿದರ ಅರ್ಥ, ಇಷ್ಟ ಬಂದ ದೇವರನ್ನು ಕರೆಸಿಕೊಳ್ಳುವುದೆಂದರೆ? ಒಮ್ಮೆ, ಯಾಕೆ ಪರೀಕ್ಷಿಸಿ ನೋಡಬಾರದು? ಆ ದೇವರು, ನನಗೆ ಮಗು ಕೊಡುತ್ತಾನೆಯೇ? ಮಗುವೆಂದರೆ, ಮುದ್ದಾಗಿರುತ್ತದೆಯಲ್ಲವೇ?

ಸಂಪ್ರದಾಯ, ಮದುವೆಯ ಒಳ ಹೊರಗೆ ಹೆಣ್ಣಿನ ನಡವಳಿಕೆ, ಮಗು ಪಡೆಯುವ ಅರ್ಹತೆ, ಮಾನದಂಡ, ರೀತಿ ರಿವಾಜುಗಳು, ಇವೆಲ್ಲಾ ತಿಳಿಯದ ವಯಸ್ಸದು. ಒಂದು ದಿನ, ಅಮ್ಮನ ಕಣ್ಣು ತಪ್ಪಿಸಿ, ಹತ್ತಿರದ ಗುಡ್ಡದ ತುದಿಗೆ ಹೋಗಿ, ಕುತೂಹಲ ತಾಳಲಾಗದೆ, ಒಂದು ವರ ಪರೀಕ್ಷಿಸಿಯೇ ಬಿಡುವ, ಅಂದುಕೊಂಡೆ. ಕರೆಸಿಕೊಳ್ಳಲು ತಕ್ಷಣ ನೆನಪಾದ ದೇವರು- ನಿತ್ಯ ಕಣ್ಣಿಗೆ ಕಾಣಿಸುವ, ಭೂಮಿಗೆ ಬೆಳಕು ನೀಡುವ ಸೂರ್ಯ ದೇವಾ. ಮಂತ್ರ ಜಪಿಸಿ ಕಣ್ಣು ಬಿಟ್ಟಾಗ, ಎದುರು ಸೂರ್ಯನಿದ್ದ. ನೋಡಿ ಒಂದು ಕ್ಷಣ ಭಯವಾಗಿ, ಮೈ ಬೆವೆತಿತು. ಅಂದರೆ, ವರ ಸುಳ್ಳಲ್ಲ, ಕೆಲಸ ಮಾಡುತ್ತಿದೆ. ಮುಂದೆ ಏನು ಮಾಡಬೇಕೆಂದು ತಿಳಿಯದೆ, ಓಡಿ ಹೋಗಬೇಕೆಂದುಕೊಂಡೆ. ಆದರೆ, ಸೂರ್ಯ ಬಿಡಲಿಲ್ಲ. ಕೈಹಿಡಿದ. ಅವನಿಗೆ ತಾನು ಏನು ಮಾಡಬೇಕೆಂದು ಗೊತ್ತಿತ್ತು.

ಭಯದಿಂದಲೇ, ಅರಮನೆಗೆ ವಾಪಸ್ಸಾದೆ. ಯಾವಾಗಲೂ ಓಡಾಡುತ್ತಿದ್ದವಳು, ಇದ್ದಕ್ಕಿದ್ದಂತೆ ಅಂತಃಪುರದಿಂದ ಹೊರಗೆ ಕಾಲಿಡದ್ದನ್ನು ಗಮನಿಸಿದ ಅಮ್ಮ, ವಿಷಯವೇನೆಂದು ಕೇಳಿದಳು. ನಾನು ಹೇಳಿಕೊಂಡೆ. ಅಮ್ಮನಿಗೆ ಒಂದು ಕ್ಷಣ ಚಿಂತೆಗೊಂಡರೂ, ತಕ್ಷಣ ಕಾರ್ಯಮಗ್ನಳಾಗಿ, ನನ್ನ ಇರುವಿಕೆಯನ್ನು ಗುಟ್ಟಾಗಿಟ್ಟು, ಒಂಬತ್ತು ತಿಂಗಳು ಲೋಕದ ದೃಷ್ಟಿಯಿಂದ ದೂರವಿಟ್ಟಳು. ನಾನು ಕತ್ತಲಲ್ಲಿ ಬಂದಿಯಾಗಿದ್ದರೆ, ಹೊರಗೆ ಸೂರ್ಯ ಜಗತ್ತಿಗೆ ಬೆಳಕು ನೀಡುತ್ತಿದ್ದ, ನನ್ನ ಅಸ್ತಿತ್ವವನ್ನು ಸಂಪೂರ್ಣ ಮರೆತವನಂತೆ. ಅಂತೂ, ಮಗು ಹುಟ್ಟಿದ. ಹೆಚ್ಚು ಸಮಯ ವ್ಯರ್ಥಗೊಳಿಸದೆ, ರಾತೋ ರಾತ್ರಿ, ಅಮ್ಮ ನನ್ನ ಎಬ್ಬಿಸಿ, ಮಗುವಿನೊಂದಿಗೆ ಗಂಗೆಯ ತೀರಕ್ಕೆ ಕರೆತಂದು, ಅದನ್ನು ಗಂಗೆಗೆ ಅರ್ಪಿಸುವಂತೆ ಹೇಳಿದಳು. ನನಗೆ ಇಷ್ಟವಿಲ್ಲದಿದ್ದರೂ, ಅಮ್ಮನ ತೀಕ್ಷ್ಣ ದನಿಗೆ ಹೆದರಿ, ಹಾಗೆಯೇ ಮಾಡಿದೆ.

ಒಂದು ಕ್ಷಣ ನನ್ನ ಬದುಕಲ್ಲಿ ಏನು ನಡೆಯುತ್ತಿದೆಯೆಂದು ಗೊತ್ತಾಗದಿದ್ದರೂ, ಅಂದಿನಿಂದ ನಾನು ಅಂತರ್ಮುಖಿಯಾದೆ. ಕತ್ತಲಲ್ಲಿ ಗಂಗೆಗೆ ಅರ್ಪಿಸಿದ ಮಗುವಿನ ಮುಖ ಸದಾ ಕಾಡುತ್ತಿತ್ತು. ಅಮ್ಮನಿಗೆ, ಇನ್ನು ಹೆಚ್ಚು ಸಮಯ ವ್ಯರ್ಥ ಮಾಡದೆ, ಆದಷ್ಟು ಬೇಗ ನನ್ನ ಮದುವೆ ಮಾಡಿಸಬೇಕೆನ್ನಿಸಿ, ಸ್ವಯಂವರ ಏರ್ಪಡಿಸುವಂತೆ ಅಪ್ಪನಲ್ಲಿ ಹೇಳಿದಳು. ಅಲ್ಲಿ, ಕುರುವಂಶದ ಪಾಂಡುವಿಗೆ ನಾನು ಹಾರ ಹಾಕಿದೆ.

ಕಣ್ಣಿನಲ್ಲಿ ಪಡಿಯಚ್ಚಾಗಿ ಉಳಿದಿದ್ದ ಮಗುವನ್ನು ಮರೆತು, ಹೊಸ ಊರು, ಮನೆ, ಸಂಸಾರದಲ್ಲಿ ನನ್ನ ಹೊಸ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅಷ್ಟರಲ್ಲಿ, ಮಾದ್ರಿ ನನ್ನ ಸವತಿಯಾಗಿ ಅರಮನೆಗೆ ಕಾಲಿಟ್ಟಳು. ಅವಳದ್ದು, ತೀವ್ರ ಸ್ಪರ್ಧಾ ಮನೋಭಾವ. ಪ್ರತಿಕ್ಷಣ ಗಂಡನ ಗಮನವೆಲ್ಲಾ, ಕೇವಲ ತನ್ನೆಡೆಗೆ ಇರಬೇಕೆಂದು ಸದಾ ಏನೇನೂ ಪ್ರಯತ್ನ ಪಡುತ್ತಲೇ ಇದ್ದಳು.

ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ, ಗಂಡಿನಿಂದ ಮಕ್ಕಳನ್ನು ಪಡೆದು, ಅವರೊಂದಿಗೆ ನನ್ನ ನೋವನ್ನು ಮರೆಯಬೇಕೆಂದುಕೊಂಡಿದ್ದೆ. ಆದರೆ, ಅದೂ ಆಗಲಿಲ್ಲ. ಒಂದು ದಿನ ಪಾಂಡು, ಬೇಟೆಯ ಹುಚ್ಚು ಆವೇಶದಲ್ಲಿ, ಋಷಿ ಕಿಂಡಮನ ಶಾಪವನ್ನು ಮೈಮೇಲೆ ಎಳೆದುಕೊಂಡು ಬಿಟ್ಟ.

"ನಾನು ನನ್ನ ಹೆಂಡತಿಯೊಂದಿಗೆ ಇರುವಾಗ, ಹೇಗೆ ನನ್ನ ಸಾಯಿಸುತ್ತಿರುವೆಯೋ, ಹಾಗೆಯೇ, ಇನ್ನು ಮುಂದೆ ನೀನು ನಿನ್ನ ಹೆಂಡತಿಯೊಂದಿಗೆ ಸಲ್ಲಾಪಕ್ಕೆ ಮುಂದಾದಲ್ಲಿ, ನಿನ್ನ ಸಾವಾಗಲಿ."

ಪಾಂಡು ತತ್ತರಿಸಿ ಹೋದ. ರಾಜವಂಶಸ್ಥರಿಗೆ ಮಕ್ಕಳಾಗದಿದ್ದರೆ ವಂಶ ಮುಂದುವರಿಯುವುದು ಹೇಗೆ? ಹತಾಶೆಗೊಂಡ ಪಾಂಡು, ಹೆಚ್ಚು ಯೋಚಿಸದೆ, ಸನ್ಯಾಸ ಸ್ವೀಕರಿಸುತ್ತೇನೆಂದ. ಅಣ್ಣನಿಗೆ ರಾಜ್ಯ ಒಪ್ಪಿಸಿ ನನ್ನನ್ನು, ಮಾದ್ರಿಯನ್ನು ಶತಶೃಂಗ ಬೆಟ್ಟಕ್ಕೆ ಕರೆದುಕೊಂಡು ಹೋಗಿ, ಅಲ್ಲಿಯೇ ತನ್ನ ಮುಂದಿನ ದಿನಗಳನ್ನು ಕಳೆಯಲು ನಿರ್ಧರಿಸಿದ. ನಾವಲ್ಲಿ, ಋಷಿಗಳ ನಡುವೆ ಸಾತ್ವಿಕ ಜೀವನ ನಡೆಸುತ್ತಿದ್ದೆವು. ನಾನು, ಹೇಗೋ ಮನಸ್ಸಿಗೆ ನೆಮ್ಮದಿ ತಂದುಕೊಂಡೆ.

ಆದರೆ, ನಿಧಾನವಾಗಿ ಪಾಂಡುವಿಗೆ ವಂಶದ ಚಿಂತೆ ಹತ್ತಿತು. ಎಷ್ಟೆಂದರೂ, ಮೈಯಲ್ಲಿ ಹರಿಯುತ್ತಿರುವುದು ರಾಜವಂಶದ ರಕ್ತವಲ್ಲವೇ? ಹೆಚ್ಚು ದಿನ ಅಧಿಕಾರ ಬಿಟ್ಟಿರಲು ಸಾಧ್ಯವಿಲ್ಲ. ಪಾಂಡು ಯೋಚಿಸಿದ, - 'ಹೀಗೆಯೇ ಬಿಟ್ಟರೆ, ಅಣ್ಣ ರಾಜನಾಗಿ ಮುಂದುವರಿಯುತ್ತಾನೆ. ಮುಂದೆ, ಅವನ ಮಕ್ಕಳು ರಾಜರಾಗುತ್ತಾರೆ. ನನ್ನ ಹೆಸರೇ ವಂಶವೃಕ್ಷದಿಂದ ಮರೆಯಾಗಿ ಹೋಗುತ್ತದೆ. ಹಾಗಾಗಬಾರದು. ನಿಯೋಗ ಮಾಡಿಕೊ', ಎಂದು ನನ್ನ ಒತ್ತಾಯಿಸಲಾರಂಭಿಸಿದ. ಆಗ ನನಗೆ, ಮರೆತುಬಿಡಬೇಕೆಂದುಕೊಂಡಿದ್ದ ದುರ್ವಾಸರ ವರಗಳು ಪುನಃ ನೆನಪಾದವು. ಅದನ್ನೆಂದೂ ಉಪಯೋಗಿಸಬಾರದೆಂದುಕೊಂಡಿದ್ದೆ. ಬೇರೆ ದಾರಿಯಿಲ್ಲದೆ ಪಾಂಡುವಿನಲ್ಲಿ, ಆ ನಾಲ್ಕು ವರಗಳ ಕುರಿತು ಹೇಳಿದೆ, ಉಪಯೋಗಿಸಿದ ಒಂದು ವರವನ್ನು ಬಿಟ್ಟು. ಅವನು ಅತ್ಯಂತ ಖುಷಿ ಪಟ್ಟ. ದೇವತೆಗಳ ಸಹಾಯದಿಂದ ತನ್ನ ವಂಶ ಬೆಳೆಯುವುದೆಂದರೆ ಸಾಮಾನ್ಯವೇ! ಮತ್ತೊಮ್ಮೆ, ದೇವರುಗಳ ಮೊರೆಹೋಗಬೇಕಾಯಿತು.

ಮಂತ್ರದಿಂದ ಮಕ್ಕಳಾಗುತ್ತವೆಯೇ? ಮನಸ್ಸನ್ನು ಗಟ್ಟಿಮಾಡಿಕೊಂಡೆ, ಪಾಂಡುವಿನ ವಂಶ ಬೆಳೆಸುವ ಸಲುವಾಗಿ. ಕಳೆದ ಸಲ, ನನ್ನ ಅಸಹಾಯಕ ಸ್ಥಿತಿ ನೋಡಿ ಸೂರ್ಯನೇನೂ ಮಗುವ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಲಿಲ್ಲ. ಆದರೆ, ಈ ಸಲ ಗಂಡನ ಉಸ್ತುವಾರಿಯಲ್ಲಿಯೇ ನಡೆಯುತ್ತಿರುವುದರಿಂದ, ಮಕ್ಕಳು ಅನಾಥರಾಗುವ ಭಯವಿಲ್ಲ. ಲೋಕದ ದೃಷ್ಟಿಯಲ್ಲಿ, ಪಾಂಡುವಿನ ಮಕ್ಕಳೆಂದು ಗುರುತಿಸಲ್ಪಡುತ್ತಾರೆ.

ಪಾಂಡು ಹೇಳಿದ,-‘ಜಗತ್ತಿನ ಜನರನ್ನು ನಿರ್ದಾಕ್ಷಿಣ್ಯವಾಗಿ ಅವರವರ ಪಾಪ, ಪುಣ್ಯಕ್ಕೆ ತಕ್ಕಂತೆ, ಸ್ವರ್ಗ, ನರಕಕ್ಕೆ ಕಳುಹಿಸುವ ಯಮಧರ್ಮನಿಂದ ಮಗನನ್ನು ಪಡೆದರೆ, ಅವನೂ ಧರ್ಮಿಷ್ಠನಾಗಿ ಕುರುವಂಶ ಬೆಳಗಿಸಬಹುದು.’ ನಾನು ಒಪ್ಪಿಕೊಂಡೆ. ಹೀಗೆ, ಯಮನು ದಯಪಾಲಿಸಿದ ಮಗ, ಯುಧಿಷ್ಠಿರ.

ಒಂದು ವರ್ಷದ ನಂತರ, ಪಾಂಡುವಿಗೆ ವಿವೇಚನೆ ಮೂಡಿತು- ಕೇವಲ ಧರ್ಮನಿಷ್ಠತೆ ರಾಜ್ಯವಾಳಲು ಸಾಕಾಗುವುದಿಲ್ಲ, ಜೊತೆಗೆ, ದೇಹಶಕ್ತಿಯೂ ಬೇಕಾಗುತ್ತದೆ. ಅದಕ್ಕಾಗಿ, ಎರಡನೇ ವರ ಉಪಯೋಗಿಸಿ, ಭೂಮಿಯನ್ನು ಗಾಳಿ, ಬಿರುಗಾಳಿಯ ಮೂಲಕ ನಿಯಂತ್ರಣದಲ್ಲಿಡುವ ಪ್ರಚಂಡ ವಾಯುದೇವನ ಸಹಾಯ ಕೇಳಲು ಹೇಳಿದ. ಅವನ ಮಾತಿನಂತೆ, ನಾನು ವಾಯುದೇವನಿಂದ ಭೀಮನನ್ನು ಪಡೆದೆ. ಮೂಲತಃ, ಮನುಷ್ಯನಿಗೆ ಎಲ್ಲವೂ ತನ್ನದಾಗಬೇಕೆಂಬಾಸೆ, ಧರ್ಮಕ್ಕೆ ಸಿಗುವುದಾದರೆ. ಇನ್ನು, ಪಾಂಡುವಿನ ಇಷ್ಟಾರ್ಥಗಳು ಮುಗಿಯಿತೆಂದುಕೊಂಡೆ.

ಆದರೆ, ಹಾಗಾಗಲಿಲ್ಲ. ಒಂದೂವರೆ ವರ್ಷದ ನಂತರ ಪಾಂಡುವಿಗೆ ಇನ್ನೊಂದು ಯೋಚನೆ ಹೊಳೆಯಿತು-ಧರ್ಮ, ಶಕ್ತಿಯೊಂದಿಗೆ, ಒಂದು ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಲು, ಜಾಣ್ಮೆಯೂ ಅಷ್ಟೇ ಮುಖ್ಯ. ಇದನ್ನು ದಯಪಾಲಿಸಲು ದೇವಲೋಕದ ಅನಭಿಷಕ್ತ ದೊರೆ ಇಂದ್ರನಿಗಿಂತ ಇನ್ಯಾರು ಅರ್ಹರಿದ್ದಾರೆ? ಪಾಂಡುವಿನ ಇಚ್ಛೆಯಂತೆ, ಇಂದ್ರನಿಂದ ಅರ್ಜುನ ಹುಟ್ಟಿದ.

ಇನ್ನೊಂದು ವರ ಬಾಕಿ ಉಳಿದಿತ್ತು. ಅಷ್ಟರಲ್ಲಿ, ಮಾದ್ರಿ, ಪಾಂಡುವಿನಲ್ಲಿ ನನ್ನಿಂದ 'ವರ' ದಕ್ಷಿಣೆ ಕೊಡಿಸುವಂತೆ ಕೇಳಿಕೊಂಡಳಂತೆ. ಅವಳಿಗೆ, ನನ್ನಲ್ಲಿಯೇ ಕೇಳಬಹುದಿತ್ತು, ಬಿಗುಮಾನ ಬಿಡಬೇಕಲ್ಲ. ಆದರೂ, ನಾನು ಕೊಟ್ಟುಬಿಟ್ಟೆ. ಅವಳ ಲೆಕ್ಕಾಚಾರವೇ ಬೇರೆಯಾಗಿತ್ತು. ತನಗೆ ಲಭಿಸಿದ ಒಂದು ವರದಲ್ಲಿ ಹೆಚ್ಚು ಮಕ್ಕಳ ಪಡೆಯಬೇಕಿತ್ತು, ನನ್ನ ಜೊತೆ ಸ್ಪರ್ಧೆಗಿಳಿಯಲು. ಅದಕ್ಕಾಗಿ ಚೆನ್ನಾಗಿ ಯೋಚಿಸಿ, ಸುಂದರ ಅವಳಿಗಳಾದ ಅಶ್ವಿನಿ ದೇವತೆಗಳನ್ನು ಕರೆಸಿಕೊಂಡಳು. ಅವರಿಂದ, ನಕುಲ ಹಾಗು ಸಹದೇವರನ್ನು ಪಡೆದಳು. ಅಷ್ಟಕ್ಕೇ ನಿಲ್ಲಲಿಲ್ಲ, ಮಾದ್ರಿಯ ಆಟ. ಅವಳ ಹುಡುಗಾಟಕ್ಕೆ, ಪಾಂಡು ಬಲಿಯಾದ. ಗಂಡನ ಮೇಲಿದ್ದ ಶಾಪ ತಿಳಿದೂ, ಅವನಲ್ಲಿ ಪ್ರಚೋದನೆ ಉಕ್ಕಿಸಿ, ಶೃಂಗಾರಕ್ಕೆ ಅವನನ್ನು ಕರೆದಳು. ಆ ಮೇಲೆ, ಅಷ್ಟೇ ಪಾಪ ಪ್ರಜ್ಞೆಯಲ್ಲಿ, ಅವನೊಂದಿಗೆ ಚಿತೆಯೇರಲು ನಿರ್ಧರಿಸಿ, ನಕುಲ ಸಹದೇವರನ್ನು ನನ್ನ ಮಡಿಲಿಗೆ ಹಾಕಿದಳು. ಅವರನ್ನು ನನ್ನ ಮಕ್ಕಳಂತೆ ನೋಡಿಕೊಳ್ಳುವಂತೆ ಹೇಳಿ ಕೈಮುಗಿದಳು. ನಿಜ, ಮನುಷ್ಯನ ಲೆಕ್ಕಾಚಾರದಂತೆ ಬದುಕು ನಡೆಯುವುದಿಲ್ಲ.

ಮುಂದೆ, ನನ್ನ ಮಕ್ಕಳ ಭವಿಷ್ಯ ಮಾತ್ರ ಪಾಂಡುವಿನ ಹಾರೈಕೆಯಂತೆ ನಡೆಯಿತು. ಯುಧಿಷ್ಠಿರ ಧರ್ಮಿಷ್ಠನಾಗಿಯೇ ಉಳಿದ. ಭೀಮನ ಶಕ್ತಿಗೆ ಯಾರು ಸರಿಸಾಟಿ ಇರಲಿಲ್ಲ. ಅರ್ಜುನ, ಜಗತ್ತು ಅಸೂಹೆ ಪಡುವಷ್ಟು ಮೇಧಾವಿಯಾದ. ನಕುಲ ಸಹದೇವರು ಅಣ್ಣಂದಿರ ಆಜ್ಞೆಯಂತೆ ನಡೆದುಕೊಂಡರು. ಮಕ್ಕಳನ್ನು ಒಂಟಿತಾಯಿಯಾಗಿ ಸಲಹುವ ಜವಾಬ್ದಾರಿ ನನ್ನ ಮೇಲಿತ್ತು.

ಪಾಂಡು ಸತ್ತ ನಂತರ ನಮ್ಮನ್ನು, ಅಜ್ಜ ಭೀಷ್ಮ ಹಸ್ತಿನಾಪುರಕ್ಕೆ ಕರೆತಂದರು. ಆಮೇಲೆ ಜನಿಸಿದ ಗಾಂಧಾರಿಯ ನೂರು ಮಕ್ಕಳೊಂದಿಗೆ, ನನ್ನ ಐದು ಮಕ್ಕಳು ಬೆಳೆದರು. ಮಕ್ಕಳ ನಡುವೆ ದಿನವೂ ಜಗಳ. ಆ ಬಾಲ್ಯದ ಸಣ್ಣ ಪುಟ್ಟ ಜಗಳಗಳೆ, ಮುಂದೆ, ರಾಜಿಯಾಗದ ಹಗೆಯಾಗಿ ಮಾರ್ಪಟ್ಟು ಕುರುಕುಲವನ್ನು ನಾಶ ಮಾಡಿತೆನ್ನಬಹುದು.

ಹೆಸರಿಗೆ ಧ್ರತರಾಷ್ಟ್ರ ರಾಜನಾಗಿದ್ದರೂ, ಎಲ್ಲ ವ್ಯವಹಾರವನ್ನು ಭೀಷ್ಮನೇ ನೋಡಿಕೊಳ್ಳುತ್ತಿದ್ದ. ದ್ರೋಣ ಮಕ್ಕಳಿಗೆ ಬಿಲ್ವಿದ್ಯೆ ಹೇಳಿಕೊಟ್ಟ. ಭಾವ, ತನ್ನ ಮಗ ಸುಯೋಧನನಿಗೆ ಪಟ್ಟಾಭಿಷೇಕ ಮಾಡಲು ಮುಂದಾದ. ಆಗ ವಿಧುರ ತಡೆದು, ‘ಯುಧಿಷ್ಠಿರ ಕುರುಕುಲಕ್ಕೆ ಹಿರಿ ಮಗ, ಸಿಂಹಾಸನ ಅವನಿಗೆ ಸೇರಬೇಕಾದುದು,’ ಎಂದ.

ಧ್ರತರಾಷ್ಟ್ರನಿಗೆ ಇಷ್ಟವಿಲ್ಲದಿದ್ದರೂ, ಭೀಷ್ಮನ ಆಜ್ಞೆಯಂತೆ, ಯುಧಿಷ್ಠಿರನನ್ನು ಸಿಂಹಾಸನದಲ್ಲಿ ಕೂರಿಸಿದ. ಆದರೆ, ಅವನ ಮಗ ಸುಯೋಧನನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಗಾಂಧಾರಿಯ ತಮ್ಮ ಶಕುನಿ ಜೊತೆಗೂಡಿಕೊಂಡು, ಹೇಗಾದರೂ ಯುಧಿಷ್ಠಿರನನ್ನು ಪಟ್ಟದಿಂದ ಇಳಿಸಬೇಕೆಂದುಕೊಂಡರು. ಆ ಯೋಜನೆಯ ಭಾಗವಾಗಿ, ನಮಗೊಂದು ಸುಂದರ ಅರಮನೆಯನ್ನು ಸಿದ್ಧಮಾಡಿ, ಎಲ್ಲರೆದುರು ಅಕ್ಕರೆಯಿಂದ ಉಡುಗೊರೆಯಾಗಿ ಕೊಟ್ಟರು. ಎಂದೂ ಇಲ್ಲದ ಪ್ರೀತಿ ಈಗ ಹೇಗೆ ಎಂಬ ಸಂಶಯದಲ್ಲಿ, ನಾನು ಮತ್ತು ಮಕ್ಕಳು, ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದೆವು.

ನಾವಂದುಕೊಂಡಂತೆಯೇ ಆಯಿತು. ಒಂದು ರಾತ್ರಿ, ಇದ್ದಕ್ಕಿದ್ದಂತೆ, ಇಡೀ ಅರಮನೆ ಬೆಂಕಿಯಲ್ಲಿ ಧಗಧಗನೆ ಉರಿದು ಹೋಯಿತು. ಭೀಮ ನಮ್ಮನ್ನೆಲ್ಲಾ ನಿದ್ರೆಯಿಂದ ಎಬ್ಬಿಸಿ, ಎತ್ತಿಕೊಂಡು ಹೋಗಿ ಜೀವ ಉಳಿಸಿದ. ಸಧ್ಯ ಬದುಕಿ ಉಳಿದಿರುವುದೇ ಹೆಚ್ಚು. ಅಂದು ಸಂಜೆ, ಭಿಕ್ಷೆಗೆಂದು ತನ್ನ ಐದು ಜನ ಗಂಡು ಮಕ್ಕಳೊಂದಿಗೆ ಬಂದಿದ್ದ ಹೆಣ್ಣು ಮಗಳೊಬ್ಬಳು, 'ದಣಿವಾಗಿದೆ, ರಾತ್ರಿ ಇಲ್ಲಿಯೇ ಉಳಿದು ನಾಳೆ ಮುಂದುವರಿಯುತ್ತೇನೆ', ಎಂದಿದ್ದಳು. ಬಹುಶಃ, ಅವರೆಲ್ಲಾ ಬೆಂಕಿಯಲ್ಲಿ ಸುಟ್ಟುಹೋಗಿರಬಹುದು. ನಾಳೆ, ಈ ಬೆಂಕಿ ಇಟ್ಟವರು ಬಂದು ನೋಡಿದರೆ, ನಾವೇ ಸತ್ತಿರಬಹುದೆಂದು ತಿಳಿದು ಸಂಭ್ರಮಿಸಬಹುದು.

ಅಧಿಕಾರಕ್ಕಾಗಿ ರಕ್ತಸಂಬಂಧಿಕರ ಜೀವ ತೆಗೆಯಲು ಹೇಸದವರ ಸಹವಾಸ ಸಾಕೆಂದುಕೊಂಡು, ವೇಷ ಬದಲಾಯಿಸಿಕೊಂಡು, ಊರೂರು ಅಲೆಯುತ್ತಾ, ಒಂದು ದಿನ ಹಿಡಿಂಬ ವನ ತಲುಪಿದೆವು. ಅಲ್ಲಿನ ಒಡೆಯ ಹಿಡಿಂಬ, ನಮ್ಮನ್ನು ಸಾಯಿಸಬೇಕೆಂದು ಮುನ್ನುಗ್ಗಿ ಬಂದ. ನಮ್ಮ ಜೀವರಕ್ಷಣೆಗಾಗಿ, ಭೀಮ ಅವನನ್ನು ಸಾಯಿಸಬೇಕಾಯಿತು. ಅಲ್ಲಿಗೆ ಓಡೋಡಿ ಬಂದ, ಅವನ ತಂಗಿ ಹಿಡಿಂಬೆ, 'ನಾನು ಅನಾಥಳಾದೆ, ನೀವೇ ನನಗೆ ನ್ಯಾಯ ಒದಗಿಸಬೇಕು. ಅಣ್ಣನನ್ನು ಸಾಯಿಸಿದ ಭೀಮ, ನನ್ನ ಮದುವೆಯಾಗಬೇಕು', ಎಂದು ಹಠ ಹಿಡಿದಳು. ಹಿರಿ ಮಗ ಯುಧಿಷ್ಠಿರನ ಮದುವೆ ಇನ್ನೂ ಆಗದಿದ್ದರೂ, ರಾಜವಂಶದವರಾಗಿ ನ್ಯಾಯ ಪರಿಪಾಲನೆ ಮಾಡಬೇಕೆಂದುಕೊಂಡು, ಭೀಮನಿಗೆ ಅವಳೊಂದಿಗೆ ಮದುವೆ ಮಾಡಬೇಕಾಯಿತು. ಆದರೆ, ಕುರುವಂಶದ ಮುಂದಿನ ಪೀಳಿಗೆ, ಈ ರೀತಿ ಆರಂಭವಾಗಲು ಸಾಧ್ಯವಿರಲಿಲ್ಲ. ಅದಕ್ಕಾಗಿ, ಅವಳಿಗೆ ಹುಟ್ಟಿದ ಮಗು ಘಟೋತ್ಕಚನೊಂದಿಗೆ ಕಾಡಿನಲ್ಲಿಯೇ ಇರಲು ಹೇಳಿದೆ. ಒಂದು ವೇಳೆ ನಾಡಿಗೆ ಕರೆತಂದಿದ್ದರೆ, ನಾವು ಬೆಳೆಸಿರುವ ವೈವಾಹಿಕ ಸಂಬಂಧಗಳ ಕುರಿತು, ನಮ್ಮ ದಾಯಾದಿಗಳು ಅಪಹಾಸ್ಯ ಮಾಡಬಹುದಿತ್ತು.

ಪಯಣ ಮುಂದುವರಿಸುತ್ತಾ ತಲುಪಿದ್ದು, ಏಕಚಕ್ರಪುರ ಎನ್ನುವ ಹಳ್ಳಿಗೆ. ಅಲ್ಲಿನ ಜನರನ್ನು ಕಾಡಿದ್ದ ಬಕನಿಂದ ಮುಕ್ತಿಗೊಳಿಸಿದ ಭೀಮ, ಅವರಿಗೆ ದೇವರಂತೆ ಕಂಡ. ನಾವು ಉಳಿದುಕೊಂಡಿದ್ದ ಮನೆಯ ಬ್ರಾಹ್ಮಣರು ತಿಳಿಸಿದಂತೆ, ಪಾಂಚಾಲ ದೇಶದಲ್ಲಿ ನಡೆಯುತ್ತಿರುವ ದ್ರೌಪದಿಯ ಸ್ವಯಂವರದಲ್ಲಿ, ಮಕ್ಕಳು ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾದರು. ನನಗೆ ಗೊತ್ತಿತ್ತು, ಸ್ಪರ್ಧೆಯ ನಿಯಮದಂತೆ ಗೆಲ್ಲುವ

ಅರ್ಹತೆ ಇದ್ದುದು ಅರ್ಜುನನಿಗೆ ಮಾತ್ರ. ಹಿಡಿಂಬೆ ಪ್ರಕರಣದಂತೆ, ಪುನಃ ಹಿರಿಮಗನನ್ನು ಬಿಟ್ಟು ಅರ್ಜುನನಿಗೆ ಹೇಗೆ ಮದುವೆ ಮಾಡಿಸುವುದು ಎನ್ನುವ ಚಿಂತೆ ಕಾಡಿತು.

ಆಗ ಬಂದ ನಾರದ ಒಂದು ಪರಿಹಾರ ಸೂಚಿಸಿದ, 'ಒಗ್ಗಟ್ಟಾಗಿ ರಾಜ್ಯ ಗೆಲ್ಲಬೇಕಾದ ಸಮಯದಲ್ಲಿ, ಮಕ್ಕಳು ಬೇರೆ ಬೇರೆ ಹೆಣ್ಣುಗಳನ್ನು ಮದುವೆಯಾಗಿ, ಹೆಂಡಂದಿರ ಮಾತು ಕೇಳಿಕೊಂಡು ಛಿದ್ರವಾಗಬಾರದು, ಎಲ್ಲರೂ ಒಬ್ಬಳನ್ನೇ ಮದುವೆಯಾಗುವುದು ಸೂಕ್ತ ಹಾಗು ಇದು ವಿಧಿ ಲಿಖಿತ ಕೂಡ.' ನನಗೂ ಸರಿಯೆನಿಸಿತು. ಹಾಗಾಗಿ, ದ್ರೌಪದಿಯ ಕರೆತಂದ ಮಕ್ಕಳನ್ನು, ತಲೆಯೆತ್ತಿ ನೋಡದೆ ದೃಢವಾಗಿ ಹೇಳಿದೆ,

"ಎಲ್ಲರೂ ಸಮಾನವಾಗಿ ಹಂಚಿಕೊಳ್ಳಿ."

ಲೋಕ ಇದನ್ನು ವಿಧಿ ಲಿಖಿತವೆಂದು ಒಪ್ಪಿತು. ನನ್ನ ಮಕ್ಕಳು, ತಾಯಿಯ ಮಾತು ಮೀರದವರೆಂದು ಪ್ರಶಂಸೆಗಳಿಸಿದರು. ದ್ರೌಪದಿ ಮಹಾಸತಿಯಾದಳು. ನಾನು, ನನ್ನ ಕುಟುಂಬವನ್ನು ಒಟ್ಟಾಗಿ ಇಟ್ಟುಕೊಂಡು, ಬಾಹ್ಯ ಶಕ್ತಿಗಳನ್ನು ಮಣಿಸಲು ಸಾಧ್ಯವಾಯಿತು.

ಭೀಷ್ಮ ಪುನಃ ನಮ್ಮನ್ನು ಹಸ್ತಿನಾಪುರಕ್ಕೆ ಕರೆಸಿಕೊಂಡು ಸುಯೋಧನನ ಇಷ್ಟಕ್ಕೆ ವಿರುದ್ಧವಾಗಿ ಅರ್ಧರಾಜ್ಯ ಕೊಡಿಸಿದ. ಸಧ್ಯ, ಎಲ್ಲಾ ಕಷ್ಟಗಳು ಮುಗಿದುಹೋಯಿತೆಂದು ಸ್ವಲ್ಪ ಸಮಯ ನಿರಾಳವಾಗಿದ್ದೆವು. ಆದರೆ, ಸುಯೋಧನ ಪುನಃ ಹೊಸ ದಾಳ ಹೂಡಿದ. ಮಾವ ಶಕುನಿಯ ಸಲಹೆಯಂತೆ ಸುಯೋಧನ, ಯುಧಿಷ್ಠಿರನನ್ನು ಪಗಡೆಯ ಪಂದ್ಯಕ್ಕೆ ಕರೆದ. ಈ ಯುಧಿಷ್ಠಿರನಿಗೆ ಸರಿಯಾಗಿ ಪಗಡೆ ಆಡಲು ತಿಳಿದಿಲ್ಲ. ಆದರೂ, ಹೊಸದಾಗಿ ಪದಗ್ರಹಣ ಮಾಡಿಕೊಂಡ ರಾಜ. ಮರ್ಯಾದೆ ಪ್ರಶ್ನೆಯೆಂದು, ಸವಾಲೊಪ್ಪಿದ. ಅಷ್ಟೇ, ಹೀನಾಯವಾಗಿ ಸೋತ. ತಾನೊಬ್ಬನೇ ಸೋಲಲಿಲ್ಲ. ಜಿದ್ದು ಹಿಡಿದವನಂತೆ ಆಟ ಮುಂದುವರಿಸಿದ- ರಾಜ್ಯ ಅಡವಿಟ್ಟು ಸೋತ, ತಮ್ಮಂದಿರ ಅಡವಿಟ್ಟು ಸೋತ, ಕೊನೆಗೆ ಹೆಂಡತಿಯನ್ನೂ ಅಡವಿಟ್ಟು ಸೋತುಹೋದ. ಅಂದು, ನನ್ನ ಐದು ಮಕ್ಕಳು ಅತ್ಯಂತ ದುರ್ಬಲರಂತೆ ಕಂಡರು. ದುಶ್ಯಾಸನ, ಹೆಂಡತಿಯ ಸೀರೆ ಎಳೆದಾಡುತ್ತಿದ್ದರೆ, ರಕ್ಷಿಸಲು ಯುಧಿಷ್ಠಿರನಿಗೆ ತಾನು ಕೊಟ್ಟ ಮಾತು ಅಡ್ಡಬಂದಿತು, ಉಳಿದ ಮಕ್ಕಳ ಕೈ ಕಟ್ಟಿಹಾಕಿತು. ಒಂದು ವೇಳೆ, ಅಂದು ಕೃಷ್ಣ ಸಹಾಯ ಮಾಡದಿದ್ದಲ್ಲಿ, ನನ್ನ ಸೊಸೆಯ ಮಾನ ಮಣ್ಣು ಪಾಲಾಗುತ್ತಿತ್ತು. ಪಾಪ, ನನ್ನ ಮನೆಗೆ ಕಾಲಿಟ್ಟಂದಿನಿಂದ ಏನೆಲ್ಲಾ ಅನುಭವಿಸಿದಳು, ಆ ದ್ರೌಪದಿ. ಆದರೂ, ಎಂದಿಗೂ ಕೊಂಕು ಮಾತಾಡಲಿಲ್ಲ. ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ತನ್ನ ಐದು ಮಕ್ಕಳನ್ನೂ ಕಳೆದುಕೊಂಡಳು. ಈಗ, ಒಬ್ಬಳೇ ಎಷ್ಟು ದುಃಖಿಸುತ್ತಿದ್ದಾಳೆಯೋ, ಅರಮನೆಯಲ್ಲಿ?

ಜೂಜಿನಲ್ಲಿ ಸೋತ ನನ್ನ ಬುದ್ದಿಗೇಡಿ ಮಕ್ಕಳಿಗೆ, ಪುನಃ ಹನ್ನೆರಡು ವರ್ಷಗಳ ವನವಾಸ, ಒಂದು ವರ್ಷದ ಅಜ್ಞಾತವಾಸ. 'ಈ ಸಲ ನಾನು ನಿಮ್ಮೊಂದಿಗೆ ಬರುವುದಿಲ್ಲ, ವಯಸ್ಸಾಗಿದೆ ನನಗೆ', ಎಂದು ವಿದುರನ ಮನೆಯಲ್ಲಿ ಉಳಿದುಕೊಂಡೆ. ಅವರು, ದ್ರೌಪದಿಯೊಂದಿಗೆ ಹದಿಮೂರು ವರ್ಷ ಕಾಡು ಮೇಡು ಸುತ್ತಾಡಿದರು. ಈ ನಡುವೆ, ಅರ್ಜುನ, ನನ್ನ ಅಣ್ಣನ ಮಗಳು ಸುಭದ್ರೆಯನ್ನು ವಿವಾಹವಾದ. ಉಳಿದವರೂ ಪ್ರತ್ಯೇಕ ಸಂಸಾರ ಕಂಡುಕೊಂಡರು. ನನ್ನ ಕಣ್ಣ ಮುಂದೆ ಇದೆಲ್ಲಾ ಆಟವಾಡಲು ಅವರಿಗೆ ಸಾಧ್ಯವಿರಲಿಲ್ಲ. ಯಾಕೆಂದರೆ, ದ್ರೌಪದಿಯನ್ನು ಐವರಿಗೆ ವಿವಾಹ ಮಾಡಿಸಿದವಳು ನಾನು. ಇಷ್ಟೆಲ್ಲಾ, ನಮ್ಮ ಕುಟುಂಬಕ್ಕೆ ತ್ಯಾಗಮಾಡಿದ ಅವಳಿಗೆ, ನಿಷ್ಠರಾಗಿರುವುದು ಅವರ ಕರ್ತವ್ಯವಾಗಿತ್ತು.

ಅಂತೂ ಹದಿಮೂರು ವರ್ಷಗಳ ಪರ್ಯಟನೆ ಮುಗಿಸಿ ವಾಪಸ್ಸಾದರು. ಯುಧಿಷ್ಠಿರ ಹೋಗಿ, 'ನಮ್ಮ ರಾಜ್ಯ ವಾಪಸ್ಸು ಕೊಡು', ಎಂದರೆ ಸುಯೋಧನ ಸಾಧ್ಯವಿಲ್ಲವೆಂದ. 'ಹೋಗಲಿ, ಕೊನೆಗೆ ಐದು ಗ್ರಾಮಗಳನ್ನಾದರೂ ಕೊಡು,' ಎಂದರೆ, ಅದೂ ಸಾಧ್ಯವಿಲ್ಲವೆಂದ. 'ಏನೇ ಪಡೆಯುವುದಿದ್ದರೆ, ಯುದ್ಧದ ಮೂಲಕ ಮಾತ್ರ. ತಾಕತ್ತಿದ್ದರೆ, ಯುದ್ಧಕ್ಕೆ ಬನ್ನಿ' ಎಂದು ಗುಡುಗಿದ.

ಅಂತೂ, ಹದಿನೆಂಟು ದಿನಗಳ ಯುದ್ಧವಾಯಿತು. ಲಕ್ಷಾಂತರ ಜನರು ಸತ್ತು ಹೋದರು. ಸುಯೋದನನ ಸಾವಿನೊಂದಿಗೆ ಯುದ್ಧ ಸಮಾಪ್ತಿಯಾಯಿತು. ಯುಧಿಷ್ಠಿರ ಅಂತೂ ರಾಜನಾದ.

ಅರಮನೆಯಲ್ಲಿ ಅನಾಥಪ್ರಜ್ಞೆ ಕಾಡಿ, ಮಕ್ಕಳ ನೆನಪಲ್ಲಿ ತತ್ತರಿಸಿ ಹೋದ ದೃತರಾಷ್ಟ್ರ ಗಾಂಧಾರಿ ವಾನಪ್ರಸ್ಥಕ್ಕೆ ಹೋರಾಡಲು ನಿರ್ಧರಿಸಿದರು. ನಾನು ಅವರೊಂದಿಗೆ ಹೋರಾಡಲು ಸಿದ್ಧಳಾದೆ. ಮಕ್ಕಳು ಸಾಕಷ್ಟು ವಿನಂತಿ ಮಾಡಿಕೊಂಡರೂ, ನನಗೆ ನನ್ನ ನಿರ್ಧಾರವೇ ಸರಿಯೆನ್ನಿಸಿತು.

'ಕುಂತಿ, ಎಲ್ಲಿದ್ದೀಯಮ್ಮಾ. ಕತ್ತಲಾಯಿತೆಂದು ಕಾಣಿಸುತ್ತದೆ. ಒಳಗೆ ಕರೆದುಕೊಂಡು ಹೋಗು."

ಅಕ್ಕನ ಮಾತು, ಮರಳಿ ವಾಸ್ತವಕ್ಕೆ ನನ್ನ ಕರೆತಂದಿತು.

ಜ್ಯೋತಿ ಎಸ್

ಜ್ಯೋತಿ ತುಮಕೂರು ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾದ್ಯಾಪಕರಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ಓದು ಅವರ ಆಸಕ್ತಿಯ ವಿಚಾರವಾಗಿದೆ.

More About Author