ಅವರೆ ಕಾಯ ಕೀಳುವಾಗ ಸೊಗಡು ಕೈಗಂಟಿ
ನೆನಪಾಗುತ್ತದೆ ರಾತ್ರಿಯ ಚಳಿ
ನಡುನಡುಗಿ ಸೆಟೆದು ಸುಕ್ಕುಗಟ್ಟಿದ ಚರ್ಮ
ಉರಿ ತಡೆಯಲಾಗದೇ ಉಜ್ಜಿಕೊಳ್ಳುವಾಗ
ಆಳದಿಂದ ಮೇಲೆದ್ದು ಬರುವ ಬಿರಿ
ಒಂದಿಷ್ಟು ಹರಳೆಣ್ಣೆ ಹಚ್ಚಿದರೆ
ಸೂರ್ಯನ ಶಾಖಕ್ಕೆ ಕಡಿಮೆಯಾದೀತು ಚುಚ್ಚುವುದು,
ರಾಗಿ ಕಣ ಮಾಡಿದಂದಿನಿಂದ
ಗಂಟಲಲ್ಲೇ ಉಳಿದ ಗಷ್ಟು ಇನ್ನೂ ಕೆಮ್ಮು ಹೋಗಿಲ್ಲ.
ಈಗ ಹಗಲಿಗಿಂತಲೂ ರಾತ್ರಿ ಅವಧಿಯೇ ಹೆಚ್ಚು.
ಊರ ಮಂದಿಯೆಲ್ಲಾ ನಿದ್ದೆ ಮಾಡುವಾಗ
ದನಗಳ ಮೈ ತೊಳೆಯುತ್ತಿದ್ದ ಹೋರಿ ರಾಮಣ್ಣಿ.
ನೇಗಿಲ ಗೆರೆಯ ಪಾಟ ಮಾಡುವಾಗ ಬಿದ್ದ ಏಟಿಗೆ ಅಲ್ಲಲ್ಲಿ ಸಣ್ಣ ಸಣ್ಣ ಗುರುತು
ತಡಕುವಾಗ ಕರುಳೊಳಗೆ ಚುಳ್ಳೆನ್ನುವ ನೋವು
ಅವನ ಕೈ ಸ್ಪರ್ಷಕ್ಕೆ ಹೊಡೆತದ ನೆನಪೂ ಉಳಿಸಿಕೊಳ್ಳದ
ಹೋರಿ ಸುಖದಿಂದ ನೆಕ್ಕುತ್ತಿತ್ತು ಬಾಗಿದ್ದ ಅವನ ತಲೆಯ.
ಸುತ್ತೂರ ಹಸುಗಳಿಗೆ ಇವನದೇ ಹೋರಿ
ಹೆಮ್ಮೆಯ ಜೊತೆಗೆ ಒಂದಿಷ್ಟು ಕಾಸು, ಮತ್ತೊಂದ ಕೊಳ್ಳುವ ಕನಸು.
ಮಕ್ಕಳಿಗೆ ಹೇಳಿದರೆ ಕೆಲಸ ಕೆಡಿಸುತ್ತಾರೆ ಕೊಂಬುಗಳಿಗೆ ಪೇಂಟ್ ಹಚ್ಚಿ,
ಹಚ್ಚುವಾಗ ಚರ್ಮಕ್ಕಂಟಿಕೊಂಡರೆ ಅವುಗಳಿಗೂ ಕಿರಿಕಿರಿ
ಎಂದು ಸಿದ್ಧವಾಗಿರಿಸಿದ್ದ ನೀಲಿ ಬಣ್ಣ
ಹುಚ್ಚಿಗೆ ಬಿದ್ದು ಮನೆ ಮಠ ಮರೆತವನಿಗೆ
ಹೋರಿಗೇನು ಬೇಕಂತ ಗೊತ್ತು ಮಕ್ಕಳಿಗಲ್ಲ
ಹೆಂಡÀತಿ ಬೈಯ್ಯುವಾಗ ಪೆದ್ದು ನಗು.
ಬೆನ್ನಿಗೊಂದು ಕಂಕುಳಲ್ಲೊಂದು ಕಟ್ಟಿಕೊಂಡು,
ನಾಟಿ ಹಾಕಿ, ಕಳೆಕಿತ್ತು ಬೆಳೆಸಿದ ಮಕ್ಕಳು ಅವಳ ಹೆಮ್ಮೆ
ಇವನಿಗೆ ಮೂಕ ಪ್ರಾಣಿಯೇ ಹೆಮ್ಮೆ.
ಉರವಲಿಗೆ ಹೋಗಿದ್ದವಳು ಜಗಳಗಂಟಿಯ ಮರದ
ಬೇರು ಕಾಂಡ ಕಡೆಗೆ ತೊಗಟೆಯ ಚೂರು
ಏನನ್ನು ಒಲೆಗೆ ತುರುಕಿದ್ದಳೇನೋ
ದಿನ ಬೆಳಕಾದರೆ ಜಗಳವೇ ಜಗಳ
ಜಗಳವಿಲ್ಲದ ಮನೆ ಯಾವುದಿದೆ ಹೇಳಬಲ್ಲಿರಾ?
ಗುರಿ ಮಾಡುವುದು ಯಾಕೆ ಸುಮ್ಮನೆ ಅವಳೊಬ್ಬಳನ್ನೇ?
ಇರುವ ಸೀರೆಯ ಜೊತೆಗೆ ಇನ್ನೊಂದು ಚಂದದ ಸೀರೆ, ಬಯಕೆಯಿಷ್ಟೇ
ಮೆರೆಯಲೇನಿದೆ ತನಗೆ?
ಊರ ಹೆಂಗೆಳೆಯರ ಕೊರಳಲ್ಲಿ ಚಿನ್ನದ ಗುಂಡು
ಆದರೆ ತನ್ನ ಗಂಡ ತರುತ್ತಾನೆ ಕರುಗಳಿಗೆ ಮರೆಯದೆ ಕೊರಳ ಹುರಿ ಗಂಟೆ.
ಕಾಲು ಎತ್ತಿಟ್ಟ ಕಡೆ ಢಾಳಾದ ಗೆಜ್ಜೆ ಸದ್ದು,
ಕೊಂಬುಗಳಿಗೆ ನೀಲಿಬಣ್ಣ ಹಚ್ಚಿಕೊಳ್ಳುತ್ತಿದ್ದ ಎತ್ತುಗಳು
ಕಟ್ಟಬೇಕಿರುವ ಬಲೂನು
ಊದುವ ಮಕ್ಕಳ ಕೆನ್ನೆಗಳೂ.
ದನಗಳ ಕೊರಳ ತುಂಬಾ ಜಗಮಗಿಸುವ ಸರಗಳು
ಇದನ್ನೆಲ್ಲಾ ಯಾವಾಗ ತಂದಿದ್ದ ಕಳ್ಳ! ಕೇಳಿಯೇ ಬಿಡಬೇಕು
ಹೆಂಡತಿಯ ಕಣ್ಣುಕೆಂಪು
ಉಣ್ಣಿ ಕಟ್ಟೆಯ ಮುಂದೆ ರಾಸುಗಳ ಕಾಪಾಡೆಂದು ಪೂಜೆ, ಮಂಗಳಾರತಿ, ಚರ್ಪು.
ಊರ ರಸ್ತೆಯಲಿ ಹಗುರ ಹರಡಿದ್ದ ತೊಗರಿ, ಜೋಳದ ಕಡ್ಡಿ
ಹಚ್ಚಿದ ಬೆಂಕಿ ತಾಕಿದರೂ ತಾಕದಿರುವಂತೆ ಬಿಸಿ
ಗಾಬರಿಗೂ ಗಾಬರಿಹುಟ್ಟುವಂತೆ ಅದ ಹಾದವು ರಾಸುಗಳು
ಕಿಚ್ಚು ಹಾಯಿಸಿದ ಮೇಲೆ ಎಲ್ಲರಿಗೂ ಬಿಡುವು
ಬಿಡುವೆಂದರೆ ಬಿಡುವಲ್ಲ ಗೇಯ್ಮೆ
ನಿಲ್ಲಿಸಿದರೆ ವಯಸ್ಸಾದಂತೆ ಎಂಬ ನಂಬಿಕೆ
ಶಾಖಕ್ಕೆ ಉದುರಿ ಹೋದ ಉಣ್ಣೆ
ಹಾಯೆನ್ನುವ ನಿದ್ದೆಗೆ ಈಗ ಮೈ ಚಾಚುವುದಷ್ಟೇ ಬಾಕಿ.
ಹಾದ ಕಿಚ್ಚಿನ ಬಿಸಿಯ ದನಗಳ ಮೈಲಿ ಹುಡಕುವಾಗ
ಹೋರಿ ರಾಮಣ್ಣಿ ಕೃತಜ್ಞ
ಆದರೆ ಮನೆಯ ತುಂಬೆಲ್ಲ ಅತೃಪ್ತಿಯ ಅಲೆ
ಜಗಳಕ್ಕೆ ಕಾರಣಗಳ ತೇಲಿಸುತ್ತದೆ ಗಾಳಿ
ಊರನವರಿಗಿದು ಸಾಮಾನ್ಯ
ಹಬ್ಬದ ದಿನವೂ ತಪ್ಪುವುದಿಲ್ಲ ಇವರ ರಗಳೆ
ಪಥ ಬದಲಿಸಿದ ಸೂರ್ಯ ನಿಂತು ನೋಡಿದ
ಭೂಮಿ ತನ್ನ ಅಕ್ಷ ಬದಲಿಸಲೇ ಇಲ್ಲ.
ಹಚ್ಚಿದ್ದ ಕಿಚ್ಚು ಬದುಕ ಆವರಿಸಿ ಉರಿದುರಿದು
ಉರಿಯ ಹೆಚ್ಚಿಸಿಕೊಂಡು
ಆರಲೂ ಇಲ್ಲ.
- ಪಿ. ಚಂದ್ರಿಕಾ