Poem

ಕೇದಿಗೆಯ ಪೊದೆಯೊಳಗೆ ನಾಗರದ ಹೆಡೆಕಂಡು 

ಹೀಗೆ ಆಡುವಾಗ ಮರದ ಬೊಡ್ಡೆಗೆ ಬೆನ್ನುಜ್ಜಿ
ಬೆನ್ನಮೇಲೊಂದು ಚಿತ್ರ, ಬುಡದ ಮೇಲೆಯೂ!
ಎಂಥೆಂಥಾ ಕಥೆಯ ಕತ್ತಲೆಗೆ ಬೆಳಕಿನ ರೇಕು ಬಳಿದಂತೆ
ಮಾತು
ಇಲ್ಲಿ ಆಡುವುದು, ಹಾಡುವುದು ಎರಡು ನಿಶಿದ್ಧ.
ಹೀಗೆನ್ನುವಾಗಲೇ
ಮರದ ಬೇರುಗಳು ಕವಲಾಗಿ ಕಾಲುಗಳಾಗಿ
ಕಾಂಡದೊಳಗೆ ಯೋನಿ ಮೂಡಿ ಕೂಡುವ ಕಾತುರಕೆ
ಕೇದಿಗೆಯ ಪೊಂದೆಯಲ್ಲೊಂದು ಹೂ
ಹೂವೆಂದರೆ ಹೂ ಮಾತ್ರವಲ್ಲ ಗಂಧಕ್ಕೊಂದು ಘಮಲು ಸಣ್ಣ ಮುಳ್ಳುಗಳು
ಕಾಯುತ್ತಿವೆ
ನಾಟಬೇಕಿರುವ
ತಿಂಗಳು ದಾಟಿದ ಹೆಣ್ಣೊಡಲ ಒಳಗೆ
ಇನ್ನೂ ಅಲುಗಾಡದ ಕೂಸ ಮೂಡಿರದ
ಮೃದು ಕೈ ಬೆರಳ!
ಇತ್ತಿತ್ತಲಾಗಿ ಒತ್ತಿ ಮೂಲಕ್ಕೆ ಎಸೆದ ಕಾಡಿನ ಕಾವಲ್ಲಿ ಕವಣೆ ಕಲ್ಲಾಟ
ಮೇಲೆ ಎಸೆವಾಗ ಖುಷಿಗೆ
ಸೀಪತ್ಲೆ ಬೀಜಗಳು ಗಟ್ಟಿಗೊಳ್ಳುತ್ತಾ ಕಪ್ಪಗಾಗುತ್ತಿವೆ
ನೆನ್ನೆ ಕೆರಯ ಬಳಿಯಿಂದ ಹೊತ್ತೊಯ್ದ ಮೀನ
ಮೂಳೆಗಳು ಗಿಡದ ಬುಡದಲ್ಲಿ
ಕರ್ರೆನ್ನುವ ಕಾಗೆಗೆ
ಈಗ ಬೀಜ ಬಲಿಯುವ ಸದ್ದು ಕೇಳುತ್ತದೆ ನಿಖರವಾಗಿ
ಮಸೆವ ಕೊಕ್ಕಲ್ಲಿ ಉಳಿದ ಮೀನವಾಸನೆಯ ಶಿಂಡು
ಸೀಪತ್ಲೆ ಕಾಯಿಗೂ ಅಂಟಬಹುದು
ಈಗ ಕಾಗೆಗೂ ಕೀಳಲು ಕಾಯುವ ಕೈಗಳಿಗೂ ದೊಡ್ಡ ಜಗಳ
ಕಟ್ಟಿಟ್ಟಬುತ್ತಿ.
ಸೂರ್ಯ ಬೆಳ್ಳಗಾದಂತೆ ಕಾವೂ ಜಾಸ್ತಿ
ಯಾವುದೂ ವಿಕಾರವಲ್ಲ ಕೆರೆಯಲ್ಲಿ ಕಾಣುವ ಮುಖವೂ
ಎಲ್ಲದರ ಜೊತೆ ಅಖಂಡ
ಕಾರೆ ಮುಳ್ಳುಗಳ ನಡುವೆ
ಗೊಂಡೆಗೆ ಮುಡಿವ ಹೂವಿಗಾಗಿ ಅರಸಿ ಬರುವ ಹುಡುಗಿ
ಬೆನ್ನಲ್ಲಿ ಹಚ್ಚೆ
ಸರಿವ ಹಾವಿಗೂ ರೋಮಾಂಚನ ಅವಳ ಆ ಹೆಜ್ಜೆ
ಹುಡುಗಿ ಕೈ ಹರಿದಡೆಯೆಲ್ಲಾ ಹಾವೂ ಹರಿದು
ಅವಳ ಕೈ ಜೊತೆ ಕೇಳಿಯಾಟ
ಕಿಲ ಕಿಲ ನಗುವಿಗೆ
ಬಾನು ತಾನಿಳಿದು ಹಗಲ ಕತ್ತಲಾಗಿಸುವ ರೆಂಬೆಗಳ ಹೆಣೆದ
ಮರಗಳ ಸಂಕಷ್ಟ ಈಗ ಹೇಳತೀರದು
ಬಣ್ಣದ ಹಂಗು ತೊರೆದರೂ ತಾನೇ ಬಣ್ಣವಾಗುವ
ನಿಚ್ಚಣ ಕೆಯ ಕೆಳಗೆ
ಈ ಹುಡುಗಿ ಆ ಹಾವು
ಬೊಡ್ಡೆಗೆ ಕೂತು ಬೆನ್ನಲ್ಲೆ ಚಿತ್ರ ಮೂಡಿಸಿಕೊಂಡ ನಾವೆಲ್ಲಾ
ದಂಗು ಬಡಿದಂತೆ ನಿಶ್ಚೇತ!
ಕೇದಿಗೆಯ ಘಮಲು ಹುಡುಗಿಯ ಮೂಗ ಕೆದಕಿ
ಅದ ಕೀಳುವಾಗ ಶಿವ ಶಿವಾ ಆ ಹಾವ ಹೆಡೆ ಅವಳ ಕೈಮೇಲೆ ಆಡುತ್ತಿದೆ
ಫ್ರೀಜ್ ಎನ್ನಿ ಪ್ಲೀಸ್
ಕ್ಯಾನ್ವಾಸಿನ ಎದೆಯ ಮೇಲೆ ಈತ ಬರೆಯಲು ಶುರು ಮಾಡಿದ್ದಾನೆ
ಜಗತ್ತಿನ ಎಲ್ಲವೂ ಈಗ ಚಿತ್ರಗಳೇ

- ಪಿ. ಚಂದ್ರಿಕಾ



ಪಿ. ಚಂದ್ರಿಕಾ

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು.

ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ಧರಣಿ, ಜುಗಲ್ಬಂಧಿ ಕವಿತೆಗಳು, ನನ್ನೊಳಗಿನ ನಿನ್ನ ಕಥೆಗಳು, ಭಿನ್ನ ವಿಭಿನ್ನ, ತಾಮ್ರವರ್ಣದ ತಾಯಿ, ಚಿಟ್ಟಿ, ಒಬ್ಬಳೇ ಆಡುವ ಆಟ, ಯಾರ ಜಪ್ತಿಗೂ ಸಿಗದ ನವಿಲುಗಳು, ಆಕಾಶದಗಲ ನಗುವಿನ ಅವಧೂತ, ಗುಲಾಬಿ ಟಾಕೀಸ್, ಸಂಪಾದಿತ ಕೃತಿಗಳು. 'ಮೋದಾಳಿ' ಅಪ್ರಕಟಿತ ನಾಟಕ. ಇವು ಪಿ ಚಂದ್ರಿಕಾ ಅವರ ಪ್ರಮುಖ ಪ್ರಕಟಿತ ಕೃತಿಗಳು.

ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ (ನನ್ನೊಳಗಿನ ನಿನ್ನ ಕಥೆಗಳು, ತಾಮ್ರವರ್ಣದ ತಾಯಿ), ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕೆ. ಪಿ ಪೂರ್ಣಚಂದ್ರ ತೇಜಸ್ವಿ ನೈಸರ್ಗಿಕ ಕೃಷಿ ಮಹಿಳಾ ಪ್ರಶಸ್ತಿ, ಮಂಡ್ಯಾ ಆರ್ಗ್ಯಾನಿಕ್ ಗೌರವ ಇತ್ಯಾದಿ ಚಂದ್ರಿಕಾ ಅವರನ್ನು ಅರಸಿ ಬಂದಿರುವ ಪ್ರಶಸ್ತಿ ಮತ್ತು ಗೌರವಗಳು.

More About Author