ಕನಕ,
ಮೊನ್ನೆಯಷ್ಟೇ
ಕದ್ದುಬಿಟ್ಟೆ
ನಿನ್ನ ಕಂಬಳಿ, ಜೋಳಿಗೆ, ತಂಬೂರ
ಖ್ಯಾತಿಗೆ
ಮಾರುಹೋದವಳು ನಾ
ಹಾಡುತ್ತಾಡುತ್ತಾ
ಭ್ರಮೆಯಲ್ಲೆ ಮೈಮರೆತು ದಾರಿ ಕಳೆದವಳು
ತಿರುಗಿ ನೋಡಿದರಲ್ಲಿ ಬಯಲಿಗೆ ನೂರು
ಕದ
ಕದ ಬಿಗಿದ ಸರಪಳಿ
ಸರಪಳಿಯ ಬಂಧಿಸಿದ ಬೀಗ
ಕದ್ದ ಜೋಳಿಗೆಯ ಒಳಗೊಂದು ಕೀಲಿಕೈ ಇಟ್ಟಿರಬೇಕಿತ್ತು ನೀನು
ಅಥವಾ
ಗುಟ್ಟಿನ ಚೀಟಿಯನ್ನಾದರೂ
ನೋಡೀಗ
ಬಗಲಿಗೆ ಜೋತುಬಿದ್ದ ವಯೋವೃದ್ಧ ಜೋಳಿಗೆ
ಹದಿನೆಂಟರ ಹುಮ್ಮಸ್ಸಲ್ಲಿ
ಆಕಾಶಕ್ಕೆ ಜೀಕುತ್ತದೆ
ಧನಕನಕದ ಆಸೆಗೆ
ಊರಲ್ಲೆಲ್ಲಾ ಬಿಲ ತೋಡುವಾ ಕನಸು
ಸಾಂಗತ್ಯದ ಉನ್ಮಾದಕ್ಕೆ ಲೋಕದಾ ಅಂಕೆ
ಕಳ್ಳತನದ ಬಸುರಿಗೆ ಬೆಳಕಿನದ್ದೇ ಚಿಂತೆ
ಥಳುಕಿಗೊಂದು ಪದ್ಯ
ಆದರ್ಶಕ್ಕೊಂದು ಹೊಸ ರಾಗ
ಇಬ್ಬಂದಿತನವ ಮುಚ್ಚಿಡಲು ಹೊಸತೆರದ ಮುಖವಾಡ
ಈಗೀಗ ನಿನ್ನ ಜೋಳಿಗೆ ಹೆಗಲ ಮುರಿಯುತ್ತಿದೆ
ಕಂಬಳಿ ಮೊನಚು ಇಂಚಿಂಚೇ ಇರಿಯುತ್ತಿದೆ
ತಂತಿಬೆರಳ ತುಂಬಾ ರಕ್ತಸಿಕ್ತ ಆಕ್ರಂದನ
ಹೀಗೆ
ಸುಳ್ಳೇ ಸುಳ್ಳು ನಿನ್ನ ವೇಷ ತೊಟ್ಟು, ಭಾಷೆ ಇಟ್ಟು
ಆಡ ಹೊರಟ ಮಾತೆಲ್ಲ ಬಿಸಿತುಪ್ಪ
ನೀನು
ತಣಿಸಿ ಕುಡಿಯಬೇಕಾದ
ತಣ್ಣೀರಿನಂತವ
ನನ್ನ ಎದೆಯೀಗ ಕಾದ ಕಾವಲಿ
~ ದೀಪದ ಮಲ್ಲಿ
ದೀಪದ ಮಲ್ಲಿ (ದೀಪಾ ಕೆ)
ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. 'ದೀಪದಮಲ್ಲಿ' ಕಾವ್ಯನಾಮದಲ್ಲಿ ಬರವಣಿಗೆಯಲ್ಲಿ ತೊಡಗಿರುವ ಅವರು, ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿದವರು. ಹಲವಾರು ಸಾಮಾಜಿಕ ಸಂಘಟನೆಗಳ ಮೂಲಕ ಮಹಿಳೆಯರು, ಮಕ್ಕಳು, ಯುವಜನರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ರೈತರ ಬಲವರ್ಧನೆಗಾಗಿ ಕೆಲಸ ಮಾಡಿದ್ದಾರೆ.
ಇವರ ʼಅಸ್ಮಿತಾʼ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2015ರಲ್ಲಿ ಚೊಚ್ಚಲ ಪುಸ್ತಕ ಬಹುಮಾನ ಲಭಿಸಿದ್ದು, ಅದೇ ಕೃತಿಗೆ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ʼಶ್ರೀಲೇಖಾ ದತ್ತಿ ಪ್ರಶಸ್ತಿʼಯೂ ದೊರಕಿದೆ. ಬೆಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿ.ಎಸ್ಸಿ ಫ್ಯಾಡ್ ತರಗತಿಗೆ ಇವರ ಲೇಖನ ಪಠ್ಯವಾಗಿದೆ. ʼನರೋ ವಾʼ ನಾಟಕ ಮತ್ತು ʼಸುಂದರಭಾಗ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯʼ ಮಕ್ಕಳ ಕತೆಯನ್ನು ಇಂಗ್ಲೀಷಿನಿಂದ ಅನುವಾದ ಮಾಡಿದ್ದಾರೆ. ʼಸುರಗಿ ಸೀರೆಗಳುʼ ಸೀರೆಗಳ ಕುರಿತ ಕನ್ನಡ ಕವಿತೆಗಳನ್ನು ಸಂಗ್ರಹಿಸಿದ್ದಾರೆ. 2024ರಲ್ಲಿ ಇವರ ‘ಹುಣಸೇ ಚಿಗುರು’ ಮತ್ತು ಇತರ ಕತೆಗಳು ಪ್ರಕಟಗೊಂಡಿದೆ.
More About Author