ಕ್ರೂರಿಗು ಶೌರಿಗೂ ಅಂತರ ಬಹಳಿದೆ
ಅಗಣಿತ ಸಂತಾನ ಜಿಂಕೆಗಳು
ಎಣಿಕೆಗೆ ನಿಲುಕಿವೆ ಸಿಂಹಗಳು ॥ಪ॥
ಮುಳ್ಳಿನ ನಡುವಲಿ ಹೂವಿನ ಜೀವನ
ಮುಳ್ಳಿಗೆ ಕಂಟಕ ಸೌಂದರ್ಯ
ಗಾಳಿಯು ಸೋಕಲು ತುಸು ಅಲುಗಾಡಲು
ಕ್ರೌರ್ಯವ ಮೆರೆಯಿತು ಔದಾರ್ಯ
ಬೆಂಕಿಯ ಕೆಂಡದಿ ಬಂಗಾರ ಬೆಂದರೆ
ಅಪ್ಪಟ ಹೊಳಪಿನ ಅಪರಂಜಿ
ಸುತ್ತಿಗೆ ಏಟಿಗೆ ಮಾಟವಿದಾಯಿತು
ತಪ್ಪುಗಳಾಗದು ಗುಲಗಂಜಿ
ಹಲ್ಲಿನ ನಡುವಲಿ ನಾಲಿಗೆ ಬದುಕಿದೆ
ನಿಶ್ಚಿತ ಸಿಕ್ಕರೆ ತುಂಡುಗಳು
ನಾಲಿಗೆ ನುಡಿಯಲಿ ಹದ್ದು ಮೀರಿದರೆ
ಹಲ್ಲುಗಳುದುರಿವೆ ದಂಡಗಳು
ಕುರಿಮರಿ ಗೆಳೆತನ ಮಾಡಿದ ತೋಳಕೆ
ಹಸಿವಿಲ್ಲೆಂಬುದು ತಿಳಿದಿರಲಿ
ನಾಗರ ಧರಿಸಲು ಶಿವನೆಂದರಿದರೆ
ಶವನಾಗೊ ಸಂಭವ ಸನಿಹದಲಿ ೪
ದಡಗಳಿಗೊಂದಿನ ಸುನಾಮಿ ಮುತ್ತಲು
ಬೆಳಕಿದು ಸಾಯಲು ಕತ್ತಲೆಯು
ಬೈತಲೆಯೆಂದಿಗೂ ದಾರಿಗಳಾಗವು
ಒಳದೆಲೆ ಯೋಚನೆ ಬೆತ್ತಲೆಯು
ಜೀವರಾಜ ಹ ಛತ್ರದ
ಜೀವರಾಜ ಹ ಛತ್ರದ
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)
More About Author