Story

ಹೂವಿನ ಪತ್ತಲದ ಹುಡುಗಿ

ಎಂಟರ ರೈಲು ಹೋಗಿ ಸರೊತ್ತಾದ್ರೂ ತುಳಸಮ್ಮ ಇನ್ನು ಮಲಗಿದಲ್ಲೇ ಹೊರಳಾಡುತಿದ್ಲು. ಎಚ್ಚರಾಗಿ ತಾಸೊತ್ತಾಗಿದ್ರೂ ಆಕಿಗೆ ಏಳಾಕ ಸಗತಿ ಇರಲಾರದಂಗಾಗಿತ್ತು. ನಿನ್ನೆಯ ತಡರಾತ್ರಿಯ ದಂಧೆಯಿಂದಾಗಿ ಮೈಯೆಲ್ಲ ಹಣ್ಣಣ್ಣು. ಕೈಕಾಲಿನ ನರ ಒಂದ ಸವನ ಸೇದಿದಂದಾಗಿ ಬಡ್ದ ಒಗ್ದಂಗ ಆಗಿತ್ತು. 
        ‘ಎಮ್ಮ ಏಳಬೇ.. ಸಾಲಿಗೆ ಹೊತ್ತ ಆಕೈತಿ. ದೌಡ ನಂಗ ನಾಷ್ಟಾ ಮಾಡೇಳು’ ಅಂತ ಮೊಮ್ಮಗಳು ರೇಣಿ ಮುದುಕಿನ್ನ ಅಳ್ಳಾಡಿಸತೊಡಗಿದಳು. ಮುದುಕಿ ಮಲಿಗಿದಲ್ಲೆ ಕಣ್ಬಿಟ್ಟು ಹೊತ್ತು ಬಾಳ ಆದದ್ದು ಗಮನಕ್ಕೆ ಬಂದು ಬದಗ್ಗನ ಎದ್ದು ಕುಂತ್ಲು. ಹನ್ಮ್ಯಾ ಇನ್ನು ಹಾಸಗ್ಯಾಗ ಗೊರಕಿ ಹೊಡಿತಿದ್ದ. ಅವನ ಉಚ್ಚಿ ಹರಕ ರಗಟ್ಯಾಗ ರಂಗೋಲಿ ಬಿಡಿಸಿದ್ರ, ಅವನ ಕಟಬಾಯಿ ಸುತ್ಲೂ ಜೊಲ್ಲು ಸೋರಿದ ಗುರುತಿಗಾಗಿ ಗೆರಿ ಮೂಡಿತ್ತು. ರೇಣಿ ಹನ್ಮ್ಯಾನನ್ನೂ ಅಳ್ಯಾಡಿಸಿದಳು. ಅಂವ ಎದ್ದು ಹೋಗಿ ಮನಿಬಾಕ್ಲ ಮುಂದ ಕುಂತ. ಉಚ್ಚಿ ಚಿಂಗ ವಾಸ್ನಿಯ ಅಂವನ ಕೌದಿ ತೆಗೆದ ರೇಣಿ ಮನಿ ಮುಂದಿನ ಜಾಲಿಕಂಟಿ ಮ್ಯಾಲ ಹರ್ಯಾಕಿದಳು. ಯಾಡ್ಡು ಪ್ಲ್ಯಾಸ್ಟಿಕ್ ತಂಬಗಿ ತುಂಬ್ಕೊಂಡು ಒಂದು ಹನ್ಮ್ಯಾಗ ತುಂಬಿಕೊಟ್ಲು. ಇನ್ನೊಂದನ್ನು ತಾ ಹಿಡ್ಕೊಂಡ್ಲು. ಇಬ್ಬರು ರೈಲು ಹಳಿ ಕಡೆ ಹೆಜ್ಜಿ ಹಾಕಿದ್ರು. ಹಳಿ ದಾಟಿದ ಮ್ಯಾಲ ಅಲ್ಲಿನ ಬಳ್ಳಾರಿ ಜಾಲಿ ತೋಪಿನೊಳಗ ಇಬ್ಬರು ಒಂದೊಂದು ಕಡೆ ಮಾಯವಾದರು. 
        ಹೊಳ್ಳಿ ಬಂದು ಮನಿ ಮುಂದಲ ತಟ್ಟಿ ಬಚ್ಚಲದಾಗ ಜಳಕ ಮಾಡಿ ಮುದುಕಿ ಮಾಡಿಟ್ಟ ರಾತ್ರಿ ಅನ್ನದ ಒಗ್ಗರಣಿ ತಿಂದು ಸಾಲಿ ದಾರಿ ಹಿಡಿದ್ರು. ಅವರ ಹ್ವಾದ ಮ್ಯಾಲ ಉಳದ ಒಗ್ಗರಣಿ ಅನ್ನ ಉಂಡ ತುಳಸಮ್ಮ ಮುಖಕ್ಕ ಒಂದಿಷ್ಟು ಪೌಡ್ರು, ಸುನರ್ರು, ತುಟಿಗೆ ಬಣ್ಣ ಬಳ್ಕೊಂಡು, ಮೋಟುಜಡಿಗೆ ಚೌರ ಜೊಡಿಸಿಕೊಂಡು ದುಂಡು ದೇಹಕ್ಕೆ ಕಡುಗುಲಾಬಿ ಬಣ್ಣದ ಪತ್ಲ ತೊಟ್ಕೊಂಡು ಎದೆಕಟ್ಟು ಸರಿಪಡಿಸಿಕೊಂಡು ರೈಲು ನಿಲ್ದಾಣದ ದಾರಿ ಹಿಡಿದ್ಲು. 
*
        ಈ ತುಳಸವ್ವ ಮುದುಕಿ ಊರ ಮಂದಿ ಬಾಯಾಗ ತುಳಸಿ ಅಂತ ಕರೆಸಿಕೊಳ್ಳೊ ಹರೇದ ವಯಸ್ಸಿನೊಳಗ ಬದಾಮಿ ತಾಲೂಕಿನ ಹಾಲಿಗೇರಿ ಎಂಬ ದಟ್ಟದರಿದ್ರ ಹಳ್ಳಿ ಬಿಟ್ಟು ಬಂದು ಈ ಬಾಗಲಕ್ವಾಟಿಯ ರೈಲು ಹಳಿ ಪಕ್ಕದ ಸ್ಲಮ್ಮು ಸೇರಿದವಳು. ಆಗ ಕೆರೂರ ದನದ ಬಜಾರದ ಮೂಲಿಯೊಳಗ ಮೂರು ಮೂಲಿ ತಾಡಪಾಲು ಗುಡ್ಲು ಹಾಕ್ಕೊಂಡಿದ್ದ ಜೋಗ್ಯಾರ ಪಕ್ಯಾ ಸೈಕಲ್ ಮ್ಯಾಲ ಹತ್ತಿ ಆ ಕಾಲದ ಹಳ್ಳಿ ಹುಡಿಗ್ಯಾರು ಬಳಸುತ್ತಿದ್ದ ಸೌಂದರ್ಯ ವರ್ಧಕಗಳನ್ನು ಪಿನ್ನು, ಏರಪಿನ್ನು, ರುಬ್ಬೆನ್ನು, ಬಾಚುಣಿಕಿ, ಟಿಕಳಿ, ಪೌಡರ್ರು, ಸುನರ್ರು, ನಾರು ಸಬಕಾರ, ಕಾಡ್ಗಿ ಹೀಗೆ ಸಕಲೆಂಟು ಸೌಂದರ್ಯವರ್ದಕಗಳನ್ನು ಮಾರಾಟ ಮಾಡ್ತಿದ್ದ. ಮಮಟಗೇರಿ, ಹಳಗೇರಿ, ಕುಳಗೇರಿ, ಕಲ್ಲಾಪುರ ಹನುಮಸಾಗರಗಳಿಗೆ ತಿರುಗಾಡ್ಕೊತ ಹೊಟ್ಟಿ ಹೊರಿತಿದ್ದ. ಇವತ್ತು ಈ ಊರಲ್ಲಿದ್ದರೆ ನಾಳೆ ಯಾವೂರು ಎಂಬುದು ಗೊತ್ತಿಲ್ಲದ ಈ ಪಕ್ಯಾನ ಮೂಲ ಸ್ಥಳ ಯಾವುದೆಂಬುದು ಯಾರಿಗೂ ಗೊತ್ತಿರಲಿಲ್ಲ. ಅಷ್ಟೇ ಯಾಕೆ, ಹಳ್ಳಿಗರ ಬಾಯಲ್ಲಿ ಪಕ್ಯಾ, ಪಕ್ಯಾ, ಪಕೀರಣ್ಣ, ಪಕೀರಸಾಬ, ಪಕೀರಪ್ಪ ಎಂದು ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಈ ಜೋಗ್ಯಾರ ಸಾಮಾನು ಮಾರುವ ಜೋಗಿಯ ಖರೆ ಹೆಸರು ಯಾವುದು?, ಜಾತಿ ಯಾವುದು, ಧರ್ಮ ಯಾವುದು? ಎಂಬುದು ಸಹ ಗೊತ್ತಿರಲಿಲ್ಲ. ಹೆಂಗ ಕರೆದ್ರೂ ಓಗೋಡುತ್ತಿದ್ದ ಈ ಆಸಾಮಿ ಸಹ ಇದ್ಯಾವದನ್ನು ತಿಳಿಸಿ ಹೇಳುವ ಗೊಡವೆಗೆ ಹೋಗಿರಲಿಲ್ಲ. ಹುಟ್ಟುಟ್ತಾ ಬೀದಿ ಬಸವನಾಗಿಯೇ ಬೆಳೆದ ಈ ಪಕ್ಯಾ ಸಣ್ಣವನಿದ್ದಾಗ ವೇಷಗಾರರ ಕೂಡ ಬಾಲರಾಮನ ವೇಷ ಹಾಕೊಂಡು ಊರೂರು ತಿರುಗುತ್ತಿದ್ದ. ಇಂವ ದೊಡ್ಡವನಾಗುತ್ತಿದ್ದಂತೆ, ಟಿವಿ ಹಾವಳಿಯಿಂದಾಗಿ ಇವರ ತಂಡದ ವೇಷಗಾರರು ಹಾಕುತ್ತಿದ್ದ ವೇಷಗಳಿಗೆ ಕಿಮ್ಮತ್ತೇ ಇಲ್ಲದಂತಾಗಿ ತಂಡದ ಸದಸ್ಯರು ಹೊಟ್ಟೆ ಉಪಜೀವನಕ್ಕಾಗಿ ದಿಕ್ಕುಪಾಲಾಗಿದ್ದರು. ಅಲ್ಲೊಂದಿಷ್ಟು ದಿನ ಇಲ್ಲೊಂದಿಷ್ಟು ದಿನ ಅಲೆದಾಡಿದ ನಂತರ ಪಕ್ಯಾ ಮೋಡ್ಕಾ ಸೈಕಲ್ ಹಿಡ್ಕೊಂಡು ಕೂದ್ಲಾ ತುಂಬುವ ಕೆಲಸವನ್ನು ಖಾಯಂ ಮಾಡಿಕೊಂಡಿದ್ದ.
        ಊರ ಅಗಸಿ ಬಾಕಲಿನಲ್ಲೆ ಇವನ ಅಂಬಾರಿ ಸೈಕಲ್‌ನ ಟನ್ ಟನ್ ಗಂಟಿ ಶಬುದಕ್ಕೆ ಮರುಳಾದವರಂತೆ ಓಡೋಡಿ ಬರುತ್ತಿದ್ದ ಹಳ್ಳಿ ಪಾರಿಯರು ಪಕ್ಯಾನ ಸುತ್ತ ಮುಕುರಿಪಟ ಬೀಳುತ್ತಿದ್ದರು. ಆಗಷ್ಟೆ ಹರೆಯ ಚಿಗಿಯುತ್ತಿದ್ದ ಏರು ಜವ್ವನೆಯರಂತೂ ಆ ಓಣಿಯಲ್ಲಿರುತ್ತಿದ್ದ ಪಕ್ಯಾ ಈ ಓಣಿಗೆ ಯಾವಾಗ ಬರುತ್ತಾನೋ ಎಂದು ಜಾತಕಪಕ್ಷಿಯಂತೆ ಹಳಹಳಿಸುತ್ತಿದ್ದರು. ಅಲ್ಲಿ ಪಕ್ಯಾಸಾಬ ಬರುತ್ತಾನೆಂದರೆ ಇಲ್ಲಿ ಹೆಂಗಳೆಯರು ಬಾಚುಣಕಿ ತುಗೊಂಡು ತಲೆ ಬಾಚಿಕೊಳ್ಳಲು ನಿಲ್ಲುತ್ತಿದ್ದರು. ಬಾಚುಣಿಕೆಗೆ ಸಿಲುಕಿಕೊಳ್ಳುವ ಕೂದಲು ಮಡಚಿ ಉಂಡೆ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ವಾರಗಟ್ಟಲೆ ಉಂಡೆ ಮಾಡಿ ದಂದಕ್ಕಿ ಮಾಡಿನಲ್ಲಿಟ್ಟ ಕೂದಲನ್ನು ತುಗೊಂಡು ಪಕ್ಯಾನಿಗೆ ರವಾನಿಸುತ್ತಿದ್ದರು. ಕೂದಲುಂಡೆಗಳ ಗಾತ್ರವನ್ನು ಕಣ್ಣಲ್ಲೆ ಅಳೆದು ಅವರು ಬೇಕೆಂದ ಸೌಂದರ್ಯ ವರ್ದಕವನೋ, ಪಿನ್ನು ಏರಪಿನ್ನನ್ನೋ ಕೊಟ್ಟು ಈ ಜೋಗಿ ಮುಂದಲ ಓಣಿಗೆ ಪಾದಂಗೈಯ್ಯುತ್ತಿದ್ದ.
        ಒಮ್ಮೊಮ್ಮೆ ಆ ಬಿನ್ನಾಣಗಿತ್ತಿಯರ ಚೈನಿ ಮಾಡುವ ಒಳಾಸೆಯನ್ನೋ, ಅವರ ತೊಟ್ಟಿರತಕ್ಕಂಥ ಚಂದದ ಬಟ್ಟೆಗಳು,  ಧರಿಸಿರತಕ್ಕಂತ ಬಂಗಾರದ ಒಡವೆಗಳ ಮೂಲಕ ಅವರ ಶ್ರೀಮಂತಿಕೆಯ ಮಟ್ಟ ಅಳೆಯುತ್ತಿದ್ದ ಪಕ್ಯಾ, ತನ್ನ ಕಾಮದೇನು ಕೈಚೀಲದ ಯಾವದೋ ಮೂಲೆಯಲ್ಲಿ ಕೈ ತೂರಿಸುತ್ತಿದ್ದ. ಎದುರಿನ ಹುಡಿಗಿಯ ಮೈಕಟ್ಟಿಗೆ ಹೊಂದುವಂಥ ರೇಶ್ಮಿ ಮಿಂಚಿನ, ಪಕ ಪಕ ಹೊಳೆಯುವ ಮೆತ್ತನೆಯ ಒಳ ಉಡುಪು ತೆಗೆದುಕೊಟ್ಟು ಕಣ್ಣು ಮಿಟುಕಿಸುತ್ತಿದ್ದ. ಅದರ ಅಂದಚಂದವನ್ನು ನೋಡಿ ಮೊದಲಿಗೆ ತಬ್ಬಿಬ್ಬುಗೊಳ್ಳುತ್ತಿದ್ದ ಹುಡುಗಿಯರು ಆನಂತರದಲ್ಲಿ ಎದೆಯ ಮೆದುವಿನಿಂದ ಪರ್ಸ್ ತೆಗೆದು ಚಕಚಕನೆ ರೊಕ್ಕ ಎನಿಸಿಕೊಟ್ಟು, ಒಳುಡುಪನ್ನು ಬದಗ್ಗನೆ ತಮ್ಮ ಮಲಿಕಟ್ಟಿನಲ್ಲಿ ಮುಚ್ಚಿಟ್ಟಕೊಂಡು ಮಾಯವಾಗಿಬಿಡುತ್ತಿದ್ದರು. ಇಂಥ ವೈವಿಧ್ಯಮಯ ಮೆತ್ತನೆಯ, ಕುಸುರಿ ಕಲೆಯ ಒಳ ಉಡುಪುಗಳು ಪಕ್ಯಾನ ಹತ್ತಿರ ಸಿಗುವ ಬಗ್ಗೆ ನಮ್ಮ ಕಥಾ ನಾಯಕಿ ತುಳಸಿಗೆ ಗುಮಾನಿ ಇತ್ತಾದರೂ ಅವಳೆಂದೂ ಅವುಗಳನ್ನು ಕೊಳ್ಳಲು ಮನಸ್ಸು ಮಾಡಿರಲಿಲ್ಲ. ದಿನದ ಕೂಳಿಗೆ ಪರದಾಡುವಂಥ ಬಡ ಮನೆತನದ ಕುಸುಮವಾಗಿದ್ದ ತುಳಸಿ ಅಂತ ಒಳ ಉಡುಪುಗಳನ್ನು ಧರಿಸುವ ಕನಸು ಸಹ ಕಂಡವಳಲ್ಲ. ಆದರೆ, ಆಕೆಯ ಮನೆಯ ಪಕ್ಕದಲ್ಲಿದ್ದ ದೆವ್ವದಂಥ ವಾಡೆಗೆ ವರ್ಷದ ಹಿಂದೆ ಸೊಸೆಯಾಗಿ ಬಂದಿದ್ದ, ವಾಡೆಯಿಂದ ಯಾವತ್ತು ಹೊರಗೆ ಮುಖ ತೊರಿಸಿದ ಶಶಿಕಲಾ ಗೌಡ್ತಿಯ ಹಿಕಮತ್ತಿನಿಂದಾಗಿ ತುಳಸಿ ಒಳಉಡುಪುಗಳ ಚಂದವನ್ನು ನೋಡುವ, ಸ್ಪರ್ಷಿಸುವ ಅದೃಷ್ಟವನ್ನು ಪಡೆದಿದ್ದಳು. ಈ ಊರಿನ ಇದ್ದುಳ್ಳ ಹೆಂಗಸರಿಗೆ ಈ ಪಕ್ಯಾಸಾಬ ಬ್ರಾ, ಪ್ಯಾಂಟಿ ಸರಬರಾಜು ಮಾಡುವುದನ್ನು ಯಾವದೋ ಮಾಯೆಯಿಂದ ಪತ್ತೆ ಹಚ್ಚಿದ್ದ ಶಶಿಕಲಾ ಗೌಡ್ತಿ, ತನಗೆ ಬೇಕಾದ ಒಳ ಉಡುಪುಗಳನ್ನು ಖರೀದಿಸಲು ಮನೆಗೆ ಕಸ ಹೊಡೆಯಲು ಬರುತ್ತಿದ್ದ ಬಡ ಹುಡುಗಿ ತುಳಸಿಯನ್ನು ಬಳಸಿಕೊಳ್ಳತೊಡಗಿದ್ದಳು. ಪಾಪ ತುಳಸಿಯೂ ಹೆಂಗಸೇ ಅಲ್ಲವೇ? ಹೆಣ್ತನದ ಸಹಜ ಆಸೆಯಿಂದ ಉಡುಪುಗಳ ನುಣಪನ್ನು ಸ್ಪರ್ಷಿಸುವುದು, ಒಳ ಉಡುಪನ್ನು ತನ್ನ ಎದೆಕಟ್ಟಿಗೆ ಹಿಡಿದು ನೋಡುವುದು ಮಾಡುತ್ತಿದ್ದಳು. ಆ ಕ್ಷಣದಲ್ಲಿ ಅವಳ ಕಣ್ಣಲ್ಲಿನ ಆಸೆಯನ್ನು ಗುರುತಿಸಿದ್ದ ಪಕ್ಯಾ ಆದದ್ದಾಗಲಿ ಎಂದು ‘ಇದುನಿಂಗ. ರೊಕ್ಕಬ್ಯಾಡ’ ಎಂದು ಒಂದು ಜೊತೆ ಎದೆಕಟ್ಟುಗಳನ್ನು ಆಕೆಯ ಕೈಯಲ್ಲಿಟ್ಟು ಹಲ್ಕಿರಿದು ಮುಂದೆ ನಡೆದಿದ್ದ. ಹೀಗೆ ಮುಂದಿನೆಂಟಾನೆಂಟು ದಿನಗಳವರೆಗೆ ಅದು..ಇದು ಕೊಡುತ್ತಾ ತಿಂಗಳೊಪ್ಪತ್ತಿನಲ್ಲಿ ತುಳಸಿಯನ್ನು ಬುಟ್ಟಿಗೆ ಹಾಕಿಕೊಂಡ ಪಕ್ಯಾ ಒಂದು ದಿನ ಸಂಜೆ ಅವಳನ್ನು ಸೈಕಲ್ ಮೇಲೆ ಹತ್ತಿಸಿಕೊಂಡು ಕೆರೂರ ದನದ ಬಜಾರನಲ್ಲಿದ್ದ ತನ್ನ ಗುಡ್ಲಿಗೆ ಕರೆತಂದಿದ್ದ. ಆ ಹಳ್ಳಿಜನರ ಭಯವಿದ್ದ ಕಾರಣ ಮರುದಿನ ಸೀದಾ ಬಾಗಲಕೋಟೆಗೆ ಕರೆತಂಡು ಜಾಲಿಕಂಟಿಯೊಳಗೆ ಮುಚ್ಚಿಕೊಂಡಂತಿದ್ದ ಈ ತಗಡಿನ ಶೆಡ್ಡಿನೊಳಗೆ ಹೊಗಿಸಿದ್ದ. ಅವತ್ತಿನಿಂದ ತುಳಸಿ ತನ್ನ ಹುಟ್ಟಿದ ಮನೆ ಕಡೆ ಮುಖ ಮಾಡಿರಲಿಲ್ಲ. ಇವರೆಗೂ..
*
        ಮದುವೆಯಾದ ಹೊಸತರಲ್ಲಿ ಅಕ್ಕಪಕ್ಕದ ಸ್ಲಂಗಳ ಸರೀಕರು ನಿಂತು ನೊಡುವಂತಿತ್ತು ಇವರ ಸಂಸಾರ. ವರ್ಷೊಪ್ಪತ್ತಿನಲ್ಲಿ ತುಳಸಿಯ ಉಡಿಯಲ್ಲಿ ಮಾದೇವಿ ಮೂಡಿ, ಮಿಸುಕಾಡಿ, ಮುಂದೊಟ್ಟೆಗೆ ಒದ್ದುಗಿದ್ದು ಮಾಡಿ, ಭೂಮಿಗೆ ಬಿದ್ದು, ಅತ್ತು-ಕರೆದು ಮಾಡಿ, ಹಾಡುತ್ತಾ, ಕಾಡುತ್ತಾ ತಾಯ್ತನದ ಖುಷಿ ನೀಡಿದಳು. ಆದರೆ, ವರ್ಷ ಐದಾದರೂ ಮಾತು ಬರಲೇ ಇಲ್ಲ. ಸ್ಲಂನಲ್ಲೆಲ್ಲ ಮೂಕಿ ಮಾದೇವಿ ಎಂದೆ ಆಕೆ ಹೆಸರಾದಳು.
 ಮೂಕಿ ಬೆಳೆಯುತ್ತಾ ಅಂಗಳದಲ್ಲಾಡಿ ಖುಷಿ ಕೊಡುತ್ತಿದ್ದ ಈ ದಿನಗಳಲ್ಲೆ ಯಾವುದೇ ಕಾಗದಪತ್ರಗಳಿಲ್ಲದ ಮುಸಲರನ್ನು ಹಿಡಕೊಂಡು ಹೋಗಿ ಕೊಂಡವಾಡಕ್ಕ ಹಾಕಾಕಹತ್ಯಾರ ಅನ್ನೋ ಗುಲ್ಲು ಇಡೀ ಸ್ಲಂ ತುಂಬಾ ಹಬ್ಬಿ ಹರಡತೊಡಗಿತ್ತು. ಪಕ್ಯಾ ನಿಜವಾಗಲೂ ಈಗ ದಿಗಿಲಿಗೆ ಬಿದ್ದಿದ್ದ. ಆತನಿಗೆ ತಾನ್ಯಾವ ಧರ್ಮ, ತನ್ನ ಬೇರುಗಳು ಎಲ್ಲಿವೆ. ತನ್ನದು ಯಾವೂರು, ಅಪ್ಪವ್ವ ಯಾವ ದೇಶದಿಂದ ಬಂದವರು ಅನ್ನೋದು ಖರೆನ ಗೊತ್ತಿರಲಿಲ್ಲ. ಆತನೂ ಇವ್ಯಾವಗಳ ಬಗ್ಗೆ ತಲೆಕೆಡಿಸಿಕೊಂಡವನಲ್ಲ. ಆದರೆ, “ಅವನೌನ ಹಸಿರು ಕಂಡಲ್ಲಿ ತಿಂದು, ಬೆಚ್ಚಗಿದ್ದಲ್ಲಿ ಮಲಗಿ ಸಂದಿಕಂಡಲ್ಲಿ ಹಿಕ್ಕಿ ಹಾಕಿ ಸತ್ತು ಹೋಗಿಬಿಡಬೇಕು ಅವನೌನ” ಅನ್ನೋ ಮಾತನ್ನ ಮಾತ್ರ ಆತ ಪದೇ ಪದೇ ಹೇಳಿ ಹಿಹ್ಹಿಹ್ಹಿಹ್ಹಿ ಅಂತ ಹಲ್ಕಿರುತ್ತಿದ್ದುದನ್ನು ಮಾತ್ರ ನೂರಾರು ಜನ ನೋಡಿದ್ದರು. “ರೇಷನ್ ಕಾರ್ಡ ಆದ್ರು ಮಾಡ್ಸು, ಒಂದಿಷ್ಟು ರೇಷನ್ ಅನ್ನಾನಾರ ಊಣ್ಣೂನು” ಅಂತ ತುಳಿಸಿ ಹೇಳಿದಾಗಲೆಲ್ಲ. “ಹೇ ನಮಗ್ಯಾರ ಕೊಡ್ತಾರ ರೇಷನ್ ಕಾರ್ಡು, ನಾವು ಮನುಷ್ಯಾರ ಅಂತ ಹೇಳಾಕಾರ ನಮ್ಮ ಹಂತ್ಯಾಕ ಏನ್ ದಾಖಲೆಗಳಾದವು? ಇರೋದು ಮೂರು ಜೀವ. ನಿನಗೇನು ಉಣ್ಣಾಕ ತಿನ್ನಾಕ ಕಮ್ಮಿ ಮಾಡಲ್ಲೇಳು. ಹುಲಿ ಯಾವತ್ತಾರು ರೇಷನ್ ಅಕ್ಕಿ ತಿನ್ನುತ್ತೇನು” ಅನ್ಕೊತ ಹಿಹ್ಹಿಹ್ಹಿ ಅಂತ ಹಲ್ಕಿರಿಯುತ್ತಿದ್ದ. ಇಂಥ ವೇಳೆಯಲ್ಲಿ ಇವರ ಸ್ಲಮ್ಮಿನ ಒಂದು ಅಂಚಿನಲ್ಲಿ ಒಂದಿಷ್ಟು ಕೋಟುಬೂಟು ಧರಿಸಿದ್ದ ನಾಲ್ಕಾರು ಅಧಿಕಾರಿಗಳು ಕಾಣಿಸಿಕೊಂಡು ಇವರ ಶಡ್ಡಿಗೂ ಬಂದಿದ್ದರು. ಅವರ ಹಿಂದೆ ಜೈ ಭಾರತಮಾತೆ ಅಂತ ಕೂಗುವ ಒಂದು ಗುಂಪೂ ಇತ್ತು.. 
ಅವತ್ತು ಈ ಪಕ್ಯಾ ಮೈ ಕೈ ನೋವು ಅನ್ಕೊಂಡು ಬೆಳಬೆಳಗ್ಗೆನೇ ಎಣ್ಣೆ ಬೇರೆ ತುಗೊಂಡು ಬಿಟ್ಟಿದ್ದರಿಂದ ಇವನನ್ನು ಗುಡ್ಲಿನ ಒಳಗೆ ಕೂಡಿಹಾಕಿದ್ದ ತುಳಿಸಿ ಎಲ್ಲ ಕಾಲಂಗಳನ್ನು ತಾನೆ ಬಾಗಿಲು ಪಕ್ಕದಲ್ಲಿ ನಿಲ್ಲಿಸಿಕೊಂಡೆ ತುಂಬಿಸಿದ್ದಳು. ಆದರೆ, ಧರ್ಮ ಅನ್ನೋ ಕಾಲಂ ಬಂದೊಡನೆ ತುಳಸಿ ನಾಜೂಕಿನಿಂದ “ನಾವು ಹಿಂದೂ ಜನಾರಿ” ಅನ್ನುತಿರಬೇಕಾದ್ರೆ ಒಳಗಿನಿಂದ ಫಕ್ಯಾ ದಬಾ ದಬಾ ಅಂತ ಬಾಗಿಲು ಕಿತ್ತು ಬರುವಂಗ ಬಾರಿಸಿಬಿಟ್ಟ. ಆಮೇಲೆ ಕಿಡಕಿ ಸಂದಿಯಲ್ಲಿ ಮುಖ ಇಟ್ಕೊಂಡು “ಲೇ ಬೊಸುಡಿ, ಅದೆಂಗ ನಾನು ಹಿಂದೂ ಅಂತ ಹೇಳ್ತಿ? ನಾನು ಹುಟ್ಟಿದ್ದ ಯಾವ ಕುಲಾನೋ? ಯಾವ ಜಾತಿನೋ?, ನಂಗೆ ಗೊತ್ತಿಲ್ಲ. ನೋಡ್ರಿ ನಮ್ದು ಪ್ರಾಣಿ ಧರ್ಮ ಸಾಹೇಬ್ರ. ಹುಟ್ತಿವಿ. ಬದುಕ್ತಿವಿ. ಸಾಯ್ತಿವಿ. ಅಷ್ಟೆಯ. ನಮ್ದು ಫ್ರಾಣಿ ಧರ್ಮ ಅಂತ ಬರಕೋರಿ. 
ಬಂದಿದ್ದ ಅಧಿಕಾರಿಗಳು ಗಿಲುಗೊಂಡರು. ಎಷ್ಟು ಹುಡುಕಾಡಿದರೂ ಆತರಹದ್ದೊಂದು ಕಾಲಂ ಅವರಿಗೆ ಸಿಗಲಿಲ್ಲ. ತಮ್ಮ ತೂತು ಮುಚ್ಚಿಕೊಳ್ಳಲವರು ಸಿಟ್ಟಿಗೆದ್ದರು. “ಏಯ್ ಅದೆಲ್ಲ ಪುರಾಣ ಹೇಳಬ್ಯಾಡ ನೀನು? ನಿಂದ ಯಾವ ಧರ್ಮ?  ಅಷ್ಟ ಬಾಯಿ ಬಿಡ್ತಿಯೋ ಇಲ್ಲೋ?” ಅಂತ ಅನ್ಕೊತ ಬಾಗಲ ಚಿಲಕಾ ತೆಗೆದು ಹೊರಗ ಎಳೆದುಕೊಂಡರು. 
“ಹಹ್ಹಹ್ಹ, ಗೊತ್ತು ಸಾಹೇಬ್ರ ನೀವು ಫಕೀರಸಾಬ ಅಂದ್ರೂ ದಾಖಲೆ ಕೇಳ್ತಿರಿ, ಫಕೀರಪ್ಪ ಅಂದ್ರೂ ದಾಖಲೆ ಕೇಳ್ತಿರಿ. ಆದ್ರ ನನ್ನ ಹಂತ್ಯಾಕ ಯಾವ ದಾಖಲೆಗೊಳು ಇಲ್ಲ. ಈಗ ನಾನು ಪ್ರಾಣಿ ಅಷ್ಟೆ. ಅಗೋ ಅಲ್ಲಿ ಕಾಣುತ್ತೆ ನೋಡ್ರಿ ರೋಡ್ ಆಚಿ ಕಡೆ, ಗಿಡದ ಕೆಳಗ ಮರಿಗೆ ಹಾಲುಡಿಸ್ತೈತಲಾ ನಾಯಿ, ಆ ನಾಯಿಗೆ ಯಾವ ಧರ್ಮ, ಯಾವ ದೇಶ  ಐತಿ ಹೇಳ್ರಿ ಸಾಹೇಬ್ರ, ಹಂಗ ನಿನ್ನೆ ಹುಟ್ಟಿ ನಾಳೆ ಸಾಯೋ ಈ ನನ್ನಂಥ ಪ್ರಾಣಿಗೆ ಜಾತಿ ಧರ್ಮ ಎಲ್ಲ ಬೇಕಾ ಸಾಹೇಬ್ರ” ಎಂದ ಪಕ್ಯಾ ತಡವರಿಸುತ್ತಲೇ ಕೆಳಗೆ ಬಿದ್ದಬಿಟ್ಟ. ಬಿದ್ದವ ಕ್ಷಣ ಬಿಟ್ಟು ಅಲ್ಲೆ ವ್ಯಾಕ್ ವ್ಯಾಕ್ ಅಂತ ವಾಂತಿ ಮಾಡಿಕೊಂಡ. ಆ ವಾಸನೆ ತಡೆದುಕೊಳ್ಳಲಿಕ್ಕಾಗದ ಅಧಿಕಾರಿಗಳು ಮೂಗು ಮುಚ್ಚಿಕೊಂಡು ಅಲ್ಲಿಂದ ಪರಾರಿಯಾದರು.
ಕೇವಲ ಎರಡೇ ಎರಡು ದಿನಗಳಲ್ಲಿ ಕೆರೂರು ದಂದ ಬಜಾರ ಪಕ್ಕದಲ್ಲಿ ಹಂದಿಗೂಡಿನಂತ ಸೀಟ್ ಮನೆಗಳಲ್ಲಿ ಅರ್ಧಕರ್ಧ ಖಾಲಿಯಾಗಿಬಿಟ್ಟವು. ಇಲ್ಲಿದ್ದರೆ ಉಳಿಗಾಲವಿಲ್ಲವೆಂದು ರಾತ್ರೋ ರಾತ್ರಿ ಜನ ಊರು ಬಿಟ್ಟಿದ್ದೆರು. ಇನ್ನುಳಿದವರಲ್ಲಿ ಕಾಲು ಭಾಗದಷ್ಟು ಜನರನ್ನು ಆಗಾಗ ಈ ಸ್ಲಮ್ಮಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೊಲೀಸರು ಯಾವದ್ಯಾವದಕ್ಕೋ ರಟ್ಟಿ ಹಿಡ್ಕೊಂಡು ಎಳೆದೊಯ್ಯತೊಡಗಿದರು. 
ತುಳಸಿ ಸಹ “ಇಲ್ಲಿ ಇರೂದು ಬ್ಯಾಡ. ಎಲ್ಯಾದ್ರೂ ಹೋಗೋಣ ಬಾ ಅಂತ ಪಕ್ಯಾಗ ತಲೆ ತಿನ್ನತೊಡಗಿದಳು. ಆದ್ರೆ ಪಕ್ಯಾ ನಾನೆಲ್ಲಿಯೂ ಬರೂದಿಲ್ಲ. ಗೋ ಅಲ್ಲಿ ಮಲಗೈತೆಲ್ಲ ನಾಯಿ, ಅದು ನಾನು ಸಾಕಿದ್ದು. ಅಂಥ ನಾಯಿಗೆ ಇಲ್ಲಿ ಬದಕಾಕ ಹಕೈತೆಂದ್ರ ನನಗಿಲ್ಲೇನು? ಅದೇನು ಮಾಡ್ಕೋತಾರೋ ಮಾಡ್ಕೊಳ್ಳಲಿ. ನಾನಂತ್ರೂ ಬರೂದಿಲ್ಲಂದ್ರ ಬರೂದಿಲ್ಲ ಅಂತ ಹಟ ಹಿಡಿದು ಕುಳಿತುಬಿಟ್ಟ. ಒಂದು ರಾತ್ರಿ ಇವರ ತಗಡು ಗೂಡಿನ ಮುಂದೆ ನಿಂತು ಪೊಲೀಸ್ ಪೇದೆಗಳು ಟಕ್ ಟಕ್ ಅಂತ ಬಾಗೀಲು ತಟ್ಟಿದರು. “ಸಾಹೇಬ್ರು ಕರಿಯಾಕ ಹತ್ಯಾರ ಬಾರಯ್ಯೋ ಅಂತ ಪಕ್ಯಾನನ್ನು ಎಳಕೊಂಡು ಹೋದರು. 
ಮೂರು ದಿನವಾದ ಮೇಲೆ ಪಕ್ಯಾ ಮನೆಗೆ ಬಂದ. ಬಹಳ ಹೆದರಿದವನಂತೆ ಕಾಣುತ್ತಿದ್ದ. “ಈ ಊರು ನಮಗೆ ಬ್ಯಾಡವೇ ಬ್ಯಾಡ. ಬಾಗಲಕ್ವಾಟಿಗೆ ಹೋಗೋಣು ನಡಿ” ಅಂತ ತಾಬಡತೋಬಡ ಹೆಂಡತಿ ಮಗಳನ್ನು ರಾತ್ರೋರಾತ್ರಿ ಹೊಂಡಿಸಿಕೊಂಡು ಹೊರಟ.
**

ಬಾಗಲಕೋಟೆಯ ರೈಲು ನಿಲ್ದಾಣದ ಮತ್ತು ಮುಖ್ಯ ಹೈವೆ ನಡುವಿನ ಸಂದಿಯಲ್ಲಿ ಅದ್ಯಾವ ಸರೊತ್ತಿನಲ್ಲಿಯೋ ಮೊಳಕೆಯೊಡೆದಿದ್ದ ಸ್ಲಮ್ಮು ನಿಧಾನಕ್ಕೆ ಚಿಗಿತು ಆಚೀಚೆಯ ಉದ್ದಕ್ಕೂ ಚಾಚಿಕೊಳ್ಳುತ್ತಿತ್ತಲ್ಲ, ಆ ಸ್ಲಮ್ಮಿನ ಎಡದಂಚಿಗೆ ತನ್ನ ಗಂಟುಮೂಟೆಗಳೊಂದಿಗೆ ಬಂದು ತಲುಪಿದ ಪಕ್ಯಾ ಮೂರ್ನಾಲ್ಕು ದಿನ ಗುದುಮುರುಗಿ ಹಾಕಿ ಮೂರು ಮೂಲೆಯ ಗುಡಿಸಲೊಂದನ್ನು ಎಬ್ಬಿಸಿ ನಿಲ್ಲಿಸಿದ. ಆಮೇಲೆ ಅದರೊಳಗೆ ಹಾಸಿಗೆ ಹಿಡಿದು ಮಲಗಿಬಿಟ್ಟ. ತುಳಸಿ ಏನೋ ಹೊಸ ಉತ್ಸಾಹದಲ್ಲೇ ಹೊಸಬದುಕನ್ನು ಶುರು ಮಾಡಲು ಮುಂದಾಗಿದ್ದಳು. ಆದರೆ, ಪಕ್ಯಾ ಈ ಹೊಸ ಬದುಕಿಗೆ ಹೆಗಲು ಕೊಡದೇ ಸೊಂಬೇರಿಯಂತೆ ಬಳಗ ತೆಗೆದು ಮಲಗಿಬಿಟ್ಟಿದ್ದ. 
“ನಮ್ಮನ್ನ ದೇಸಾ ಬಿಡಿಸ್ತಾರಂತೆ ದೇಸಾ. ದೇಸಾ ಏನು ನಿಮ್ಮಪ್ಪಂದ್ರ ಗಂಟೇನ್ರೋ ಹಡ್ಸಿಮಕ್ಕಳಾ? ನೀವೇನು ಇಲ್ಲೆ ಗೂಟಾ ಹೊಡ್ಕೊಂಡು ಇರ್ತಿರೇನಲೇ ಬೋಸಡಿಕೆಗೊಳ? ಅಂತ ಪದೇ ಪದೇ ಕಂಡು ಕಂಡವರಿಗೆಲ್ಲ ಬೈಯ್ಯುವುದು, ಜಗಳ ತೆಗೆದು ಹೊಡೆಸಿಕೊಂಡು ಮನೆಗೆ ಬರುವುದು ಮಾಡುತ್ತಿದ್ದ. ಅಪರಾತ್ರಿ ಜೋರು ನಿದ್ರೆಯಲ್ಲಿ ಎದ್ದು ನಿಂತು ಬರ್ರೆಲೆ ಮಕ್ಕಳ್ರ್ಯಾ ಏನ್ ಕಿತ್ಗೊತಿರೋ ಕಿತ್ಗೋರಿ” ಅಂತ ಸೆಡ್ಡು ಹೊಡೆಯುವುದು, “ಬಂದ್ರು ಬಂದ್ರು, ಓಡು ಓಡು” ಅಂತ  ಓಡಿ ಹೋಗಿ ಅವಿತುಕೊಳ್ಳುವುದು, “ಕಾಗದ ಪತ್ರ ಅದಾವು ನೋಡ್ರೆಲೇ” ಅಂತೆಲ್ಲ ಮಗಳ ಸಾಲಿ ಪುಸ್ತಕಗಳನ್ನು ಹರಿದು ಬೀಸಾಕುವುದು ಮಗಳನ್ನು ಹೆಗಲಿಗೇರಿಸಿಕೊಂಡು ರೈಲ್ವೆ ಹಳೀಗುಂಟ ಓಡಿ ಹೋಗುವುದು, ಇತ್ಯಾದಿ ಹುಚ್ಚಾಟಗಳನ್ನೆಲ್ಲ ಶುರುವಚ್ಚಿಕೊಂಡಿದ್ದ.  ಆಮೇಲಾಮೇಲೆ ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹಗಲೆಲ್ಲ ತಲೆಸಿಡಿತ ಅಂತ ಕುಡಿಯುವುದನ್ನು ಶುರು ಹಚ್ಚಿಕೊಂಡ. ಕುಡಿತದ ಚಾಳಿ ಜಾಸ್ತಿಯಾಗಿ ಮನೆಗೆ ಬರುವುದು ತಡರಾತ್ರಿಯಾಗತೊಡಗಿತ್ತು. ಒಮ್ಮೊಮ್ಮೆ ವಾರ ಕಳೆದರು ಬರುತ್ತಲೇ ಇರಲಿಲ್ಲ. ಮುಂದೊಮ್ಮೆ ತಿಂಗಳು ಕಳೆದರೂ ಬರಲೇ ಇಲ್ಲ. 
        ತಿಂಗಳುಗಟ್ಟಲೇ ಅವನಿಗಾಗಿ ಕಾಯ್ದ ತುಳಸಿ ಅನಿವಾರ್ಯವಾಗಿ ಗಂಡನ ಪಿನ್ನು, ಎರಪಿನ್ನು, ರಿಬ್ಬೆನ್ನುಗಳ ಕೈ ಚೀಲ ಹಿಡಿದಳು.ಬಾಗಲಕ್ವಾಟಿ ಸುತ್ತಲಿನ ಹಳ್ಳಿ ಹಳ್ಳಿ ತಿರುಗಾಡತೊಗಿದಳು.
**
ಇಲ್ಯಾರೋ ಪಿಜ್ಜಾ ಬರ್ಗರ್ರುಗಳನ್ನು ತಿಂದು ಅರಗಿಸಿಕೊಳ್ಳಲಾಗದೇ ವಾಂತಿ ಮಾಡಿಕೊಳ್ಳುತ್ತಿದ್ದರು. ಅಲ್ಯಾರೋ ತಿಂದು ಚೆಲ್ಲಿದ ಊಟದೆಲೆಯಲ್ಲಿ ಅನ್ನ ಹುಡುಕುತ್ತಿದ್ದರು. ಇದ್ಯಾವದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಈ ಕಾಲ, ಈ ದೇಶ, ಈ ಜಗತ್ತು, ಗುರಿಯಿಲ್ಲದ ಗಾಣದೆತ್ತಿನಂತೆ ಓಡುತ್ತಲೇ ಇದ್ದವು. ವರ್ಷಗಳು ಉರುಳಿದಂತೆ ಸರ್ಕಾರಗಳು ಬದಲಾದವು. ಈಗ ತುಳಸಿಗೆ ಯಾರೂ ದಾಖಲೆಗಳನ್ನು ಕೇಳುತ್ತಿರಲಿಲ್ಲವೇನೋ ಖರೆ ಆದರೂ ಆಕಿ ಗಂಡನಿಗೆ ಒದಗಿದ ದುಸ್ಥಿತಿ ಮಕ್ಕಳಿಗೆ ಬಾರದಿರಲೆಂದು ಎಲ್ಲರ ಆಧಾರ ಕಾರ್ಡ ಮಾಡಿಸಿಕೊಂಡಿದ್ದಳು. ಅದರಲ್ಲಿ ಗಂಡನ ಹೆಸರು ಫಕೀರಪ್ಪ ಎಂದೇ ಬರೆಸುವ ಮೂಲಕ ತರ್ಲೆ ತಕರಾರುಗಳಿಗಿಂತಲೂ ಬದುಕು ದೊಡ್ಡದು ಎಂಬುದನ್ನು ಅರಿತುಕೊಂಡಿದ್ದಳು.
 ಕಾಲನ ಬಂಡಿಯ ಚಕ್ರಕ್ಕೆ ಸಿಕ್ಕು ಮೂಕಿ ಮಾದೇವಿ ಮೈನೆರೆದು ದೊಡ್ಡವಳೆಣಿಸಿಕೊಂಡಳು. ಬಲಿತ ಮೈಯೊಳಗಿನ ಆಕೆಯ ಮನಸ್ಸು ಮಾತು ಕೇಳದೆ ಎಗರಾಡತೊಡಗಿತ್ತು. ಅಕ್ಕಪಕ್ಕದ ಮನೆಗಳ ಸ್ಲಂ ಹುಡುಗಿಯರು ಅಗ್ಗದ ಸ್ನೊ ಪೌಡರ್ ಬಳಿದುಕೊಂಡು, ನಗರದ ತಿರುವುಗಳಲ್ಲಿ ಕಳೆದುಹೋದವರು ಸಂಜೆಯೇ ಗುಡಿಗೆ ಮರಳುತ್ತಿದ್ದುದು ಅದೇ ಸಮಯದಲ್ಲಿ ಆಕೆಯ ಗಮನಕ್ಕೆ ಬರತೊಡಗತ್ತು. ಅವರ ತಳುಕುಬಳಕನ್ನು ನೋಡಿ ಮರಳಾಗುತ್ತಿದ್ದ ಮೂಕಿ ತಾನು ಬರುತ್ತೇನೆಂದು ಅವರೊಂದಿಗೆ ಮೂಕ ಸನ್ನೆಯಲ್ಲಿ ಜಗಳಕ್ಕೆ ತೆಗೆಯತೊಡಗಿದಳು. ಅವರನ್ನು ಹಿಂಬಾಲಿಸಿ ಹೋಗತೊಡಗಿದಳು. 
        ಹೆಂಗೂ ತುಳಸವ್ವನ ಕೈಚೀಲದಲ್ಲಿ ಬಣ್ಣ ಬಣ್ಣದ, ವೈವಿದ್ಯಮಯ, ಏರಪಿನ್ನು, ಟಿಕಳಿ, ಕಾಡಿಗೆ, ಪೌಡರ್ರು, ಸುನರ್ರು ಸೇರಿದಂತೆ ಮೆತ್ತನಯ ಒಳ ಉಡುಪುಗಳಿದ್ದವಲ್ಲ, ಅವು ಆಗಾಗ ಮಾಯವಾಗತೊಡಗಿ ಮೂಕಿ ಮೈಮೇಲೆ ವಿಜೃಂಭಿಸತೊಡಗಿದವು. ತುಳಸವ್ವ ಒಂದೆರಡು ಸಲ ಬೈಯ್ದಳು. ಆದರೂ ಹೆತ್ತ ಕರುಳಲ್ಲವೇ? ‘ಅಯ್ಯ ಏಟ ಚಂದ ಕಾಣ್ತೈತೆ ನನ್ನ ಕೂಸು. ನಾಲಿಗಿ ಒಂದು ಶುದ್ಧ ಇದ್ದಿದ್ರ ರಾಜಕುಮಾರಿ ಥರಾ ಮೆರಿತಿದ್ಲು’ ಎಂದು ಲಟಗಿ ಮುರಿತಿದ್ಲು. ಆದರೆ ಆಗೆಲ್ಲ ಮೂಕಿ ತುಳಸವ್ವಳ ಮುಖಕ್ಕೆ ಮುಖ ಕೊಡದೆ ಖಿನ್ನಳಾಗುತ್ತಿದ್ದಳು.
        ಈ ಪ್ರಕಾರವಿದ್ದಾಗಲೇ ಮಗಳು ಮೂಕಿಯ ಮೈಮಾಟದ ಬದಲಾಗತೊಡಗಿತ್ತು. ನಡೆನುಡಿಯಲ್ಲಿ ನವಿಲಿನ ಒಣಪು. ಹಾವಭಾವದಲ್ಲಿ ಹೂವಿನ ಸುಗಂಧ. ಮೈವರ್ಣ ನಾಗರ ಬಣ್ಣಕ್ಕೆ ತಿರುಗಿ, ನಾಗರಕಟಿ ನಡುವಿನ ಮುಂದೊಟ್ಟೆ ಬಲೂನಿನ ತರಹ ದಿನದಿಂದ ದಿನಕ್ಕೆ ಊದಿಕೊಳ್ಳತೊಡಗಿತ್ತು. ದಿನದ ಹೊಟ್ಟೆ ಹೊರೆಯುವ ಕಸರತ್ತಿನಲ್ಲಿದ್ದ ತುಳಸಿಗೆ ಮಗಳು ಮೂಕಿ ಮೂರ್ನಾಲ್ಕು ತಿಂಗಳಿಂದ ಹೊರಗಾಗದಿರುವುದು ಗಮನಕ್ಕೆ ಬಂದೇ ಇರಲಿಲ್ಲ. ಅಕ್ಕಪಕ್ಕದವರು ಅನುಮಾನಪಟ್ಟಿದ್ದರಿಂದ ಗೌರನ್ಮೆಂಟ್ ದವಾಖಾನಿಗೆ ಕರೆದೊಯ್ದಳು. 
        ‘ಗುಡ್ನ್ಯೂ ಸ್, ನಿನ್ನನ ಮಗಳು ಕಳೆದನಾಲ್ಕು ತಿಂಗಳಿಂದ ಪ್ರಗ್ನೆಂಟ್, ಆಕಿಗೆ ಹಾಲುಹೈನು ಚಲೋತಂಗ ತಿನ್ಸು’ ಎಂದು ಡಾಕ್ಟರ್ಬಾ್ಯಿ ಇವರನ್ನು ನಗನಗ್ತಾ ಮನಗೆ ಕಳಿಸಿದ್ದರು. ಮನೆಗೆ ಬಂದವಳೇ ತುಳಸವ್ವ ಮೂಕಿಗೆ ಮುಖ ಮೋತಿಯೆನ್ನದೆ ಬಾರಿಸಿದ್ದಳು. ತುರುಬು ಹಿಡಿದು ಗುದ್ದಿದ್ದಳು. ಆಮೇಲೆ ಇಬ್ಬರು ಹಾಡ್ಯಾಡಿ ಅತ್ತಿದ್ದರು. 
 **
        ಎರಡು ದಿನ ಕಳೆಯುತ್ತಿದ್ದಂತೆ ಸ್ಲಂ ತುಂಬಾ ಗುಲ್ಲಾಯಿತು. ಸಮಾಧಾನ ಹೇಳುವ ನೆಪದಲ್ಲಿ ಮನೆಗೆ ಬಂದ ಹೆಂಗಸರು ಇವರ ಬಾಯಿ ಬಿಚ್ಚಿಸಿ ಖರೆ ಖರೆ ನಡೆದದ್ದು ಏನೆಂದು ತಿಳಕೊಂಡು ಇನ್ನಷ್ಟು ಬಣ್ಣ ಹಚ್ಚಿದ ಮಾತುಗಳನ್ನು ತೇಲಿ ಬಿಟ್ಟರು.
        ಎದುರಿಗಿರುವ ಬೆಟ್ಟದಂತ ಸಂಕಟದಿಂದ ಹೆಂಗಾದರೂ ಪಾರಾಗಬೇಕೆಂದು ನಿರ್ಧರಿಸಿದ ತುಳಸವ್ವ ಅವರಿವರ ಹಂತ್ಯಾಕ ಕೈಸಾಲ ಇಸ್ಕೊಂಡು, ಕುಡಿಕೆಯಲ್ಲಿದ್ದ ಮಡಿಕೆ ನೋಟು ಏಣಿಸಿಕೊಂಡು ಮೂಕಿಯನ್ನು ದರ ದರ ಎಳ್ಕೊಂಡು ವೈಷ್ಣೋದೇವಿ ಡಾಕ್ಟರ್ ಬಾಯಿ ಮನೆಯಲ್ಲೆ ನಡೆಸುತ್ತಿದ್ದ ದವಾಖಾನೆಗೆ ಹೋದಳು. ಇವರ ಕತೆಯನ್ನೆಲ್ಲ ಕೇಳಿದ ಡಾಕ್ಟರಮ್ಮ ಮೂಕಿಗೆ ‘ಇಂಥವೆಲ್ಲ ಹೊಲ್ಸು ಕೆಲಸದ ಬಗ್ಗೆ ಯಾಕೆ ತಿಳುವಳಿಕೆ ಕೊಟ್ಟಿಲ್ಲ’ ಎಂದು ತುಳಸವ್ವಗೆ ದಬಾಯಿಸುತ್ತಲೇ ಕಾರ್ಯನಿರತಳಾದಳು. ಮೂಕಿಯ ಹೊಟ್ಟೆ, ಎದೆಯ ಮೇಲೆ ಸ್ಟೇತೋಸ್ಕೋಪು ಇಟ್ಟು, ಅದರೆರಡು ತುದಿಗಳನ್ನು ತನ್ನೆರಡು ಕಿವಿಗಳಿಗೆ ಸಿಗಿಸಿಕೊಂಡು ಅಶರೀರವಾಣಿಯನ್ನು ಆಲಿಸುವಂತೆ ಆಕಾಶಮುಖಿಯಾದಳು. ಆನಂತರ ದೈವವಾಣಿ ಆಲಿಸಿದವಳಂತೆ ‘ಮಗು ಬಲತೈತೆ, ಅದರ ಉಸಿರಾಟ ಸೈತ ಕೇಳಿಸ್ತೈತೆ ನೋಡು. ಈಗ ಇದು ಬಾಳ ಅಪಾಯದ ಕೆಲಸ’ ಎನ್ನುತ್ತಲೇ ಮುಖಕ್ಕೆ ಮಾಸ್ ಕೈಗೆ ಗ್ಲೌಸು ಧರಿಸತೊಡಗಿದರು. ಆದರೆ, ಮೂಕಿಗೆ ಅದೇನು ತಿಳಿಯಿತೋ? ಎನು ಪ್ರೇರಣೆಯಾಯಿತೋ? ಅಲ್ಲಿಂದೆದ್ದು ಬುದುಬುದನೇ ಓಡಿಬಿಟ್ಟಿದ್ದಳು.
 ಆಕೆಯನ್ನು ಹಿಂಬಾಲಿಸಿಕೊಂಡು ಮನೆಗೆ ಬಂದ ತುಳಸವ್ವ ಮತ್ತೊಮ್ಮೆ ಆಕೆಯ ತುರುಬು ಹಿಡಿದು ಎಳೆದಾಡಿ ಸಾಕಾಗುವಷ್ಟು ಬಡಿದಿದ್ದಳು. ಆಮೇಲೆ ಯಥಾಪ್ರಕಾರ ಇಬ್ಬರು ಅತ್ತು ಕರೆದು ಮಾಡಿ ಸುಮ್ಮನಾಗಿದ್ದರು.
*
        ಬಡವರಿಗೆ ಮಕ್ಕಳು ಹೆಚ್ಚು ಅನ್ನೋದಕ್ಕೆ ಪ್ರೂವ್ ಮಾಡಲೆಂಬಂತೆ ಆ ಕರುಣಾಮಯಿ ದೇವರು ಈ ಮೂಕಿಗೆ ಅವಳಿ ಜವಳಿ ಮಕ್ಕಳನ್ನು ಕರಣಿಸಿದ್ದ. ತಂದೆ ದಿಕ್ಕಿಲ್ಲದ ಆ ಮಕ್ಕಳಿಗೆ ತುಳಸವ್ವ ಆ ನೆಲದ ದೇವರುಗಳ ಹೆಸರಾದ ರೇಣುಕಾಂಬಾ ಮತ್ತು ಹನುಮಪ್ಪ ಎಂದು ಹೆಸರಿಟ್ಟು ದಿಕ್ಕಿಲ್ಲದ ಈ ಮಕ್ಕಳ ಬದುಕು ಹಸನು ಮಾಡ್ರಿ ಎಂದು ದೇವರ ದಿಕ್ಕಿಗೆ ಕೈಮುಗಿದಳು.
        ಮಕ್ಕಳು ದೊಡ್ಡವರಾಗುತ್ತಿದ್ದಂತೆ ಯಥಾಪ್ರಕಾರ ಮೂಕಿ ಮತ್ತೆ ಹೂವಿನ ಪತ್ತಲ, ಬಿಗಿಜಂಪರ್ ತೊಟ್ಕೊಂಡು ದಂದೆಗೆ ಶುರುಹಚ್ಚಿಕೊಂಡಿದ್ದಳು. ಆದರೆ, ಈ ಸಲ ಬಸಿರುಗಟ್ಟದಂತೆ ಎಚ್ಚರಿಕೆವಹಿಸುವಷ್ಟು ಪಳಗಿದ್ದಳು. ಮೈ ಹಣ್ಣಾಗುವಷ್ಟು ದುಡಿಯುತ್ತಾ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳಿಸುತ್ತಿದ್ದಳು.
        ಒಂದಿನ ಅದೇನಾಯಿತೋ ಗೊತ್ತಿಲ್ಲ. ಆ ದಿನ ರಾತ್ರಿ ಪೂರ್ತಿ ಮೂಕಿ ಮನೆಗೆ ಬರಲಿಲ್ಲ. ಮರುದಿನ ಬೆಳಗ್ಗೆ ‘ಯ್ಯಯ್ಯಯ್ಯಾ’ ಎಂದು ಅಳ್ಳುತ್ತಲೇ ಮನೆಗೆ ಬಂದ ಮೂಕಿ ತನ್ನ ಮೈಮೇಲಿನ ಸುಟ್ಟ ಗಾಯಗಳನ್ನು ತುಳಸವ್ವಗೆ ತೋರಿಸುತ್ತಾ ರೋಧಿಸತೊಡಗಿದ್ದಳು. ಮೈಮೇಲೆಲ್ಲ ಸೀಗರೇಟ್ನಿಂದದ ಸುಟ್ಟ ಗಾಯಗಳು ಬೆಂಕಿಯುಂಡೆಗಳಂತೆ ಹಸಿ ಹಸಿ ಕಾಣುತ್ತಿದ್ದವು. ಸೊಂಟದ ಸಂದಿಯಿಂದ ಜಿನುಗುತ್ತಿದ್ದ ಕೆಂಪು ಮಣಕಾಲುಗಂಟ ಇಳಿಯುತ್ತಿತ್ತು. ರಕ್ತ ಬೆವರಿನ ಮಿಶ್ರಣದ ಕಟುವಾಸನೆ ತಗಡಿನ ಶಡ್ಡಿನ ತುಂಬಾ ತುಂಬಿಕೊಂಡಿತ್ತು. ತಾಯಿಮಗಳು ಆತುಕೊಂಡು ಅತ್ತವು. ಮೂಕಿಯ ಕೂಸುಗಳು ಏನೊಂದು ಗೊತ್ತಾಗದೇ ಮೂಕರಾಗಿ ರೋದಿಸಿದವು. ಆ ಸಂಕಟದಲ್ಲೂ ತುಳಸವ್ವ ಲಗುಬಗೆಯಿಂದ ದವಾಖಾನಿಗೆ ತೋರಿಸಿಕೊಂಡು ಬಂದಳು. ಇದಾದ ಎಂಟು ದಿನಕ್ಕೆ ಮೂಕಿ ತನ್ನ ಸಂಕಷ್ಟದ ಕತೆಯನ್ನು ತನ್ನೊಳಗೆ ಗುಟ್ಟಾಗಿಟ್ಟುಕೊಂಡು ಬದುಕಿನ ಪುಟ ಮುಗಿಸಿದ್ದಳು. ಜರ್ಜರಿತಗೊಂಡು ಸೋತು ಹಿಡಿಯಷ್ಟಾಗಿದ್ದ ಮೂಕಿಯ ದೇಹವನ್ನು ಮುನ್ಸಿಪಾಲ್ಟಿ ಗಾಡಿಯೊಂದು ವಿಲೆವಾರಿ ಮಾಡಬೇಕಾದ ತ್ಯಾಜ್ಯವೆಂಬಂತೆ ಹೇರಿಕೊಂಡು ಹೋಗಿ ವಿದ್ಯುತ್ ಚಿತಾಗಾರದ ಮುಂದಿಳಿಸಿ ವಿಸರ್ಜನಾ ಪ್ರಕ್ರಿಯೆ ಮುಗಿಸಿತು. 
*
        ಮಗಳು ಮೂಕಿ ಇನ್ನಿಲ್ಲವಾಗಿ ವಾರದಲ್ಲೇ ತುಳಸವ್ವ ಪಿನ್ನು, ಏರಪಿನ್ನು ರಿಬ್ಬೆನ್ನುಗಳ ಕೈಚೀಲ ಹೆಗಲಿಗೇರಿಸಿದಳು. ಹಸಿವು ನೀಗಿಕೊಳ್ಳಲು ಬೇರೆ ದಾರಿಯಿರಲಿಲ್ಲ. ಆದರೆ, ತಿಂಗಳೊಪ್ಪತ್ತಿನಲ್ಲಿಯೇ ಮತ್ತೊಂದು ನಗ್ನಸತ್ಯ ಸತ್ಯ ಅರಿವಿಗೆ ಬಂತು. ಈ ಕೈ ಚೀಲದ ಸಹವಾಸದಿಂದಾಗಿ ಮೊಮ್ಮಕ್ಕಳ ಸಾಲಿ ಖರ್ಚು ಭರಿಸುವುದಿರಲಿ, ದಿನದ ಹೊಟ್ಟೆಯನ್ನೂ ತುಂಬಿಸಿಕೊಳ್ಳುವುದು ಕಷ್ಟ ಎಂಬುದು ಅರಿವಿಗೆ ಬಂತು. ಕಾಲ ಬದಲಾಗತೊಡಗಿತ್ತು. ಹಳ್ಳಿಗಳಲ್ಲೂ ಸಹ ಪ್ಯಾನ್ಸಿ ಅಂಗಡಿಗಳ ಜಮಾನಾ ಶುರುವಾಗಿತ್ತು.  
        ತುಳಸವ್ವ ಎರಡು ಹಗಲು ಒಂದು ರಾತ್ರಿ ಚಿಂತಿ ಮಾಡಿದ್ದೇ ಬಂತು. ಮರುದಿನ ಮಗಳು ಮೂಕಿಯ ಟ್ರಂಕ್ ಬಿಚ್ಚಿ ನೋಡಿದಳು. ಅದರಲ್ಲಿ ಎಳೆಂಟು ಅಗ್ಗದ, ಆದರೆ, ಮಿಂಚುದಡಿಯ ಹೂವಿನ ಪತ್ತಲಗಳಿದ್ದವು. ಮೈ ಕಾಣುವ ಬಿಗಿಬಟ್ಟೆಗಳಿದ್ದವು. ಹೊಂದುವಂಥವುಗಳನ್ನು ಉಟ್ಟು ನೋಡಿದಳು. ಮೊಮ್ಮಕ್ಕಳನ್ನು ಕಂಡಿರುವ ಜೊಳ್ಳು ಬಿದ್ದ ಸ್ಥೂಲ ಸರೀರಕ್ಕೆ ಅಲ್ಲಿನ ಯಾವ ಬಟ್ಟೆಯೂ ಅಷ್ಟೇನೂ ಹೊಂದಿಕೆ ಎನಿಸಲಿಲ್ಲ. ಆದರೂ ಪತ್ತಲವೊಂದನ್ನು ಸುತ್ತಿಕೊಂಡ್ಲು. ಜೋತುಬಿದ್ದ ಎದೆಗೆ ಹತ್ತಿಉಂಡೆ ಇಟ್ಟುಕೊಂಡಳು. ಮೋಟುಜಡೆಗೆ ತನ್ನ ಕೈಚೀಲದಲ್ಲಿದ್ದ ಚೌರ ತೆಗೆದು ಜೋಡಿಸಿಕೊಂಡಳು. 
        ಅವತ್ತಿಂದ ತುಳಸಮ್ಮ ತನ್ನ ಇಳಿ ವಯಸ್ಸಿನ ಇಳಿಸಂಜೆಗಳನ್ನು ನಗರದ ವೃತ್ತಗಳಲ್ಲಿ, ರಸ್ತೆಗಳ ಪಕ್ಕದಲ್ಲಿ, ನಿಲ್ದಾಣಗಳ ಅಂಚಿನಲ್ಲಿ, ವಿದ್ಯುದ್ವೀಪಗಳ ಮಬ್ಬು ಬೆಳಕಿನಲ್ಲಿ ಹೋಗಿ ನಿಲ್ಲುವುದನ್ನು ರೂಡಿಸಿಕೊಂಡಳು. ಯಾವದೋ ಕಾರಣಕ್ಕೆ ಕುಟುಂಬದಿಂದ ವಂಚಿತರಾಗಿ ಹೆಂಡತಿ ಮಕ್ಕಳಿಂದ ದೂರವಿರುವ ಕುಡುಕರು, ಸಂಗಾತಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿರುವ, ಮುದಕ ವಿದುರರು, ಹಗಲೆಲ್ಲ ದುಡಿದು ದಣಿದು ಕಾಲೇಳುದುಕೊಂಡು ಬರುವ ನಗರದಂಚಿನ ಹಳ್ಳಿಗಳ ಬಡಕಾರ್ಮಿಕರು ಆಕೆಯ ಮುರಾಬಟ್ಟೆಯಾದ ಕುಟುಂಬ ಸಾಕುವ ಅನ್ನದಾತರಾದರು. 
*
     ಅವತ್ತೊಂದಿನ ತಡರಾತ್ರಿ ಕಳೆದು ಬೆಳಕು ಹರಿದರೂ ತುಳಸವ್ವ ಮುದುಕಿ ಶೆಡ್ಡಿಗೆ ಹಿಂದಿರುಗಲಿಲ್ಲ. ರೇಣಿ ಮತ್ತು ಹನ್ಮ್ಯಾ ರಾತ್ರಿಯೆಲ್ಲ ದುಗುಡದಲ್ಲೇ ಕಳೆದರು. ಮೂರ್ನಾಲ್ಕು ದಿನ ಕಳೆದರೂ ಮುದುಕಿಯೇ ಪತ್ತೆಯಿಲ್ಲ. ತುಳಸವ್ವ ಮುದುಕಿ ನಿಲ್ಲುತ್ತಿದ್ದ ನಗರದ ವೃತ್ತಗಳು, ರಸ್ತೆ, ನಿಲ್ದಾಣಗಳ ಅಂಚುಗಳಲ್ಲಿ ಹೋಗಿ ಹುಡುಕಿ ಬಂದರು. ಸರಿ ರಾತ್ರಿ ಶೆಡ್ಡಿಗೆ ಬರುತ್ತಿದ್ದ ಪಕ್ಕದ ಶೆಡ್ಡುಗಳಲ್ಲಿನ ಅಂಕಲ್‌ಗಳ ಮುಂದೆ ಹೋಗಿ ಸಂಕಟ ತೋಡಿಕೊಂಡರು. ಹುಡಿಕಿಕೊಡಿ ಎಂದು ಅಳ್ಳತ್ತಾ ಬೇಡಿಕೊಳ್ಳತೊಡಗಿದರು. ಆದರೆ, ಆ ಅಂಕಲ್‌ಗಳ ಹೆಂಡತಿಯರು ಬಂದು ಆ ‘ಕೊಳಕು ರಂಡೆಹಾಳಾಗಿ ಹೋದದ್ದೆ ಒಳ್ಳೆದಾತು’ ಎಂದು ಶಪಿಸುತ್ತಾ ಬಂದು ಇವರನ್ನು ಓಡಿಸಿದರು. ಶೆಡ್ಡಿಗೆ ಮರಳಿದ ರೇಣಿ ಮತ್ತು ಹನುಮ್ಯಾ ಮುಖ ಮುಖ ನೋಡಿಕೊಂಡ ಅತ್ತವು. 
        ಇದಾದ ಎಂಟನೇ ದಿನಕ್ಕೆ ಆ ಸ್ಲಮ್ಮಿನ ನಿವಾಸಿಯೇ ಆದ ನಿಂಗಜ್ಜ ಕೈಯಲ್ಲಿ ಪೇಪರ್ ಹಿಡಿದುಕೊಂಡು ಬಂದು ಈ ಮಕ್ಕಳಿಗೆ ತೊರಿಸಿದ. ಅದರಲ್ಲಿ ಬಾತುಕೊಂಡ ಮುಖ ವಾಲಿದ ಕೆಳದವಡೆಯ ಭಯಾನಕವೆನಿಸುವ ಮುದುಕಿಯ ಫೊಟೋ ಇತ್ತು. ಅದರ ಕೆಳಗೆ, ‘ಅಂದಾಜು ನಲವತ್ತೇಳು ವರ್ಷದ, ಗೋದಿಬಣ್ಣ, ಐದಡಿ ಎತ್ತರದ ಸ್ಥೂಲದೇಹಿ ಮಹಿಳೆಯ ಶವವೊಂದು ಬಸವೇಶ್ವರ ಲಾಡ್ಜ್ನಳಲ್ಲಿ ಪತ್ತೆಯಾಗಿದ್ದು ಮೃತಮಹಿಳೆಯ ಸಂಬಂಧಿಕರು ಯಾರಾದರೂ ಇದ್ದರೆ, ಈ ನಂಬರಿಗೆ ಸಂಪರ್ಕಿಸಿ’ ಎಂದುನಗರ ಠಾಣೆಯ ನಂಬರನ್ನು ಅಚ್ಚುಹಾಕಲಾಗಿದ್ದನ್ನು ರೇಣಿ ಮತ್ತು ಹನುಮ್ಯಾ ತೇವಗೊಂಡ ಕಣ್ಣುಗಳಲ್ಲೇ ಓದಿಕೊಂಡರು. ಆ ಅಜ್ಜನೇ ಇವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ. ‘ಅಯ್ಯಯ್ಯೊ ಇವತ್ತಷ್ಟೇ ಮಣ್ಣು ಮಾಡಿದ್ವಿ. ವಾರಗಟ್ಟಲೇ ಕಾಯ್ದು ಅನಾಥ ಶವ ಇರಬೇಕು ಅನ್ಕೊಂಡು ಸಂಸ್ಕಾರ ಮಾಡಿದ್ವಿ.’ ಎಂದು ಮುಖ್ಯಪೇದೆ ಪಡದಯ್ಯ ಹೇಳಿ ಕೈ ಕೈ ಹಿಚುಕಿಕೊಂಡ.
        ‘ಆ ಹೆಂಗ್ಸು ಮುದುಕಿ ಆಗಿದ್ರು ಅದಕ್ಕ ಹಗ್ಗ ತಿನ್ನೋ ಹೊಲ್ಸು ಚಾಳಿ ಬಿಟ್ಟಿರಲಿಲ್ಲಂಥ ಕಾಣ್ತೈತಿ. ದೇವರು ಚಲೋ ಶಾಸ್ತಿ ಮಾಡಿದ. ಭೂಮಿಯಿಂದ ಒಂದು ಪೀಡಾ ತೊಲಗಿದಂಗ ಆತು’ ಎಂಬ ಪಡದಯ್ಯನ ಮಾತುಗಳು ಠಾಣೆಯಿಂದ ಹೊರಗೆ ಕಾಲಿಡುತ್ತಿದ್ದ ಇವರ ಕಿವಿಗೆ ಅಪ್ಪಳಿಸಿದವು. 
        ಮರುದಿನದಿಂದಲೇ ರೇಣಿ ತಮ್ಮ ಹನುಮ್ಯಾನ ಹೆಗಲುಗಳಿಗೆ ಪಾಠಿಚೀಲದ ಬದಲಿಗೆ ಪಿನ್ನು, ಎರಪಿನ್ನು, ರುಬ್ಬೆನ್ನುಗಳ ತುಂಬಿದ್ದ ಬಾರದ ಚೀಲ ನೇತಾಡುತ್ತಿತ್ತು. ಆಗಷ್ಟೆ ಹದಿವಯಸ್ಸಿಗೆ ಕಾಲಿಡುತ್ತಿದ್ದ ರೇಣಿಯ ಮೈಮೇಲೆ ಆ ಸಭ್ಯ ನಗರದ ನಾಗರಿಕರ ಅತೃಪ್ತ ಕಣ್ಣುಗಳು ಯಥಾಪ್ರಕಾರ ಹರಿದಾಡತೊಡಗಿದ್ದವು.

**

(ವಾಟರ್‌ಕಲರ್‌ ಕಲಾಕೃತಿಗಳು: ಬಿ.ಕೆ. ಬಡಿಗೇರ, ಬೀದರ)

 

ಹನುಮಂತ ಹಾಲಿಗೇರಿ

ಬಾಗಲಕೋಟೆ ಸಮೀಪದ ತುಳಸಿಗೇರಿಯವರಾದ ಹನಮಂತ ಹಾಲಿಗೇರಿಯವರು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದರು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಅವರು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದರು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವರು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ನಾರಿ’ ಎಂಬ ನಾಟಕ ರಚಿಸಿದ್ದರು. ದೇವರ ಹೆಸರಲ್ಲಿ’ ಎಂಬ ಮತ್ತೊಂದು ನಾಟಕವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಧನ ಪಡೆದಿತ್ತು. ವಿಜಯಕರ್ನಾಟಕ, ವಾರ್ತಾಭಾರತಿ, ಸುದ್ದಿ ಟಿ.ವಿ., ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು : ಕೆಂಗುಲಾಬಿ, ಏಪ್ರೀಲ್ ಫೂಲ್ ಕಥೆಗಳು, ಗೆಂಡೆದೇವ್ರು, ಮಠದ ಹೋರಿ, ಕತ್ತಲಗರ್ಭದ ಮಿಂಚು, ಊರು ಸುಟ್ಟರೂ ಹನುಮಪ್ಪ ಹೊರಗ- ನಾಟಕ

More About Author