ಮೊದಲು ನಮ್ಮದೇ ಹುತ್ತವನ್ನು ಕೆಡವುವಾಗ
ನೀವು ಹೇಳಿದ ನ್ಯಾಯ,
"ತಲೆತಲಾಂತರದಿಂದ ಇದು ಗೆದ್ದಲುಗಳು ಕಟ್ಟಿದ ಕೋಟೆ
ನೀವು ಮೂಲನಿವಾಸಿಗಳಲ್ಲ, ಈಗಲೇ ಹೊರಟುಬಿಡಿ"
ಎಲ್ಲಿಗೆ ಹೋಗಬೇಕು ನಾವು ತೆವಳಿ ತೆವಳಿ
ಇತ್ತೀಚೆಗೆ ಮಾಧ್ಯಮಗಳು
ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸುತ್ತಿವೆ
ಕಿವಿಗಳೇ ಇಲ್ಲದ ನಾವುಗಳು ಕೇಳಿಸಿಕೊಳ್ಳುವಷ್ಟು
ನೆರಳು ಬಿದ್ದರೆ ಹಗೆ
ಕಚ್ಚಿದರೆ ಅರೆ ಘಳಿಗೆಯಲ್ಲಿ ಸಾವು
ಹನ್ನೆರಡು ವರ್ಷ ದ್ವೇಷ
ಪ್ರೀತಿಯಿಂದ ಮುತ್ತು ಕೊಟ್ಟವರ ಮುಖವೇ ಕೊಳೆಯುವುದು
ಬಾಲದಲ್ಲಿ ಬಾರಿಸಿದರೆ ಬೆನ್ನುಮೂಳೆ ಮುರಿಯುವುದು
ಅಬ್ಬಬ್ಬಾ! ಎಷ್ಟೊಂದು ಮೂಢನಂಬಿಕೆಗಳು
ಕ್ಷಣದಲ್ಲೇ ನಂಬಿ ಬಿಡುವವರೆಲ್ಲಾ
ಬಡಿಗೆಗೆಳನ್ನು ತಯ್ಯಾರಿಟ್ಟಿದ್ದಾರೆ
ಆದರೂ ತಲೆತಲಾಂತರದಿಂದ ಹೊಡೆತ ಸಿಕ್ಕಿ
ಸಾಯುತ್ತಿರುವ ನಮ್ಮವರಲ್ಲಿ
ಪ್ರಶ್ನಿಸಲಾಗುತ್ತಿದೆ
ನೀವು ಇಲ್ಲಿಯವರೆಂದು ಸಾಕ್ಷಿ ತನ್ನಿ
ಹಸಿವಿಗೆ ಹಿಡಿದು
ತಿಂದ ಕಪ್ಪೆ- ಇಲಿಗಳ ಬಗ್ಗೆ ಲೆಕ್ಕ ಕೇಳುತ್ತಾರೆ
ಆಹಾರಕ್ಕೂ ನಿರ್ಬಂಧ;
ಹಸಿವಿಗೆ ಸುಂಕ ಕಟ್ಟುವ
ದುರ್ಬಲ ಜೀವಿಗಳು ಇನ್ಯಾರಿದ್ದಾರೆ!
ನಮ್ಮಲ್ಲೂ ವಿಷ ಕಕ್ಕುವ ಕಾಳಿಂಗ-ನಾಗರಗಳಿವೆ
ಕಚ್ಚಿದರೆ ಕೊಳೆಯಿಸುವ ಕೊಳಕು ಮಂಡಲಗಳಿವೆ
ವಿಷರಹಿತ ಕೇರೆಹಾವುಗಳಿವೆ
ನಿರುಪದ್ರವಿ ಬಿಸಿಲು ಹಾವುಗಳೂ ಇವೆ
ಬಾಯಿಗೆ ಬೆರಳು ಹಾಕಿದರೂ
ಕಚ್ಚಲೇ ಗೊತ್ತಿಲ್ಲದ ನಮ್ಮ ಹೆಚ್ಚಿನವರನ್ನೂ
ಚಚ್ಚುವ ನಿಮ್ಮ ಬಡಿಗೆಗಳಿಂದ ತಪ್ಪಿಸಿಕೊಳ್ಳಲು
ನಾವು ತೆವಳಿಕೊಂಡು ಯಾವ ದ್ವೀಪವನ್ನು ಸೇರಿಕೊಳ್ಳಬೇಕು
ಶ್ವೇತ ವಸ್ತ್ರದ ಹಾವಾಡಿಗರು ಬರುತ್ತಾರೆ
ಓಲೈಕೆಯ ಬುಟ್ಟಿಯಲ್ಲಿ ಬಂಧಿಸುತ್ತಾರೆ
ಪ್ರತಿರೋಧಿಸಿದರೆ ಕೊಲ್ಲುತ್ತಾರೆ
ಶರಣಾಗತರಾದರೆ ನಮ್ಮ ಹಲ್ಲುಗಳನ್ನು ಕೀಳುತ್ತಾರೆ
"ಶಂಖದಿಂದ ಬಿದ್ದರೇ ತೀರ್ಥ"
ಅವರು ಪುಂಗಿ ಊದುವಾಗಲೆಲ್ಲಾ
ನಾವು ಕುಣಿಯುತ್ತೇವೆ
ಈ ಗುಲಾಮಗಿರಿಯಿಂದ ಮುಕ್ತರಾಗಲು
ಹೇಳಿ- ನಾವು ಎಲ್ಲಿಗೆ ಗುಳೆ ಹೊರಡಬೇಕು
ವಿಡಿಯೋ
ವಿಡಿಯೋ
ಮುನವ್ವರ್ ಜೋಗಿಬೆಟ್ಟು
ಮುನವ್ವರ್ ಜೋಗಿಬೆಟ್ಟು ಅವರ ಊರು ಉಪ್ಪಿನಂಗಡಿ ಪಟ್ಟಣಕ್ಕೆ ಸಮೀಪವಿರುವ ಜೋಗಿಬೆಟ್ಟು. ಇಷ್ಟದ ಲೇಖಕ ತೇಜಸ್ವಿ ಮತ್ತು ಹಳ್ಳಿ ಸೊಗಡಿನಲ್ಲೇ ಬೆಳೆದಿದ್ದರಿಂದ ಪ್ರಾಣಿ ಪ್ರಪಂಚ, ಪರಿಸರದ ಬಗ್ಗೆ ವಿಶೇಷ ಕಾಳಜಿಯೊಂದಿರುವ ಅವರು ಪ್ರಸ್ತುತ ಕೆಂಡ ಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ' ಪರಿಸರ ಕಥನ' ಅಂಕಣಗಳು ಬರೆಯುತ್ತಿದ್ದಾರೆ. ಮುನವ್ವರ್ ಅವರ ' ಮೊಗ್ಗು' ಮತ್ತು ' ಇಶ್ಖಿನ ಒರತೆಗಳು' ಕವನ ಸಂಕಲನಗಳು ಪ್ರಕಟವಾಗಿವೆ. ಜೊತೆಗೆ ಅವರ ಹಲವು ಲೇಖನ, ಕಥೆ , ಕವಿತೆಗಳು ಪ್ರಜಾವಾಣಿ, ವಾರ್ತಾ ಭಾರತಿ, ವಿಶ್ವವಾಣಿ ಮತ್ತು ಇತರ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಸದ್ಯ ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಫಿನ್ಯಾನ್ಸ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.