ಹಾದಿಯಲಿ ನಡೆವಾಗ ಕರೆಯುತ್ತಾರೆ ಯಾರೋ
ಎದೆಯಲ್ಲಿ ಪಿಸುನುಡಿಯ ಬರೆಯುತ್ತಾರೆ ಯಾರೋ
ತಿರುವುಗಳು, ಹಳ್ಳ- ತಿಟ್ಟು ದಾರಿಯೆಷ್ಟು ಕಠಿಣ
ಕೈಹಿಡಿದು ಕರೆದೊಯ್ದು ಹರಸುತ್ತಾರೆ ಯಾರೋ
ಅನುಬಂಧಗಳು ಹೇಗೆಲ್ಲ ಕಳಚಿಹೋಗುತ್ತವೆ
ಹಾಲಲ್ಲಿ ಹುಳಿಯನ್ನು ಬೆರೆಸುತ್ತಾರೆ ಯಾರೋ
ಊರುಗೋಲಾಗಿ ಆಧರಿಸಿದ ಸಂದರ್ಭಗಳೆಷ್ಟು
ಮಾತಿನ ಆವೇಶದಲ್ಲಿ ಮರೆಯುತ್ತಾರೆ ಯಾರೋ
ಕನಸುಗಣ್ಣಿನ ಹುಡುಗ ಕಳೆದೇ ಹೋದನೇನು
ಕವಿತೆಗೆ ಕೆಂಡಗಳ ಸುರಿಯುತ್ತಾರೆ ಯಾರೋ
ಹಾಲಿನದು ಹಾಲಿಗೆ ನೀರಿನದು ನೀರಿಗೆ- ಹೌದೇನು
ಹಾಲೆಂದು ಸುಣ್ಣದ ನೀರ ಕುಡಿಸುತ್ತಾರೆ ಯಾರೋ
ನಿನ್ನ ಪಾಡು ನಿನಗೆ, ಲೋಕದ್ದು ಲೋಕಕ್ಕೆ 'ಜಂಗಮ'
ಎಂದರೂ ಪಾತ್ರಗಳ ಬದಲಿಸುತ್ತಾರೆ ಯಾರೋ
----
ಗಜಲ್-೨
ಎಷ್ಟು ನೋಯಬೇಕು ಒಂದು ಒಲವಿಗಾಗಿ
ಏನೆಲ್ಲ ಪಡಬೇಕು ಒಂದು ಒಲವಿಗಾಗಿ
ಯಾವೆಲ್ಲ ಅನುಮಾನ, ಪರೀಕ್ಷೆಯ ಹಿಂಸೆ
ದಿವ್ಯವ ಹಾಯಬೇಕು ಒಂದು ಒಲವಿಗಾಗಿ
ಕುದಿಕುದಿದು ತನ್ನಲ್ಲೇ ಇಂಗುತ್ತದೆ ಕಡಲು
ಅಸರಂತ ಮೊರೆಯಬೇಕು ಒಂದು ಒಲವಿಗಾಗಿ
ಜೊನ್ನದ ಹಾದಿಯಲಿ ಮೋಡಗಳ ದರ್ಬಾರು
ಕನಸೆಷ್ಟು ಫಲಿಸಬೇಕು ಒಂದು ಒಲವಿಗಾಗಿ
ಸುತ್ತಿ ಸುಳಿದು ಸೋಲುತ್ತಿದ್ದಾನೆ 'ಜಂಗಮ'
ಏನೆಲ್ಲವ ಒಡ್ಡಬೇಕು ಒಂದು ಒಲವಿಗಾಗಿ
- ಗೋವಿಂದ ಹೆಗಡೆ
ಗೋವಿಂದ ಹೆಗಡೆ
ಗೋವಿಂದ ಹೆಗಡೆ ಅವರು ಎಂಬಿಬಿಎಸ್, ಡಿಎ., ಪದವೀಧರರು. ಅರಿವಳಿಕೆ ತಜ್ಞ. ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ. ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ ಮೊದಲಾದ ಕಾವ್ಯಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.
ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನ ಕವಿಗೋಷ್ಠಿಯೂ ಸೇರಿದಂತೆ ಹಲವಾರು ವೇದಿಕೆಗಳಿಂದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ.
ಪ್ರಾಚಾರ್ಯ ಎಚ್ಚೆಸ್ಕೆ ಅವರ ಜನ್ಮಶತಮಾನೋತ್ಸವದಲ್ಲಿ ಏರ್ಪಡಿಸಲಾಗಿದ್ದ ‘ಎಚ್ಚೆಸ್ಕೆ ಬೆಳಕು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಕಟಿತ ಕವನ ಸಂಕಲನ 'ಕನಸು ಕೋಳಿಯ ಕತ್ತು' ಕನ್ನಡ ಪುಸ್ತಕ ಪ್ರಾಧಿಕಾರದ ‘ಯುವ ಬರಹಗಾರರಿಗೆ ಪ್ರೋತ್ಸಾಹ' ಯೋಜನೆಯಡಿಯಲ್ಲಿ ಪುರಸ್ಕೃತವಾಗಿದೆ. ‘ಸುವರ್ಣ ಕಾವ್ಯ', ‘ಮತ್ತೆ ಬಂತು ಶ್ರಾವಣಾ', ‘ಪಾರಿಜಾತ ಪರಿ' ಮೊದಲಾದ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಇವರ ಕವನಗಳು ಸೇರ್ಪಡೆಯಾಗಿವೆ. ಕವಿತೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿವೆ. ಪೇಟೆ ಬೀದಿಯ ತೇರು ಎಂಬ ಕವನ ಸಂಕಲನ.
More About Author