ಮುಳ್ಳುಗಳ ಪಹರೆಯಲಿ ಮಂದಾರ ತಣಿಯುತಿದೆ
ಸೀಮೆಗಳು ದಾಟಿ ಪ್ರೀತಿ ಸುಗಂಧ ಪಸರಿಸುತಿದೆ
ಉಸಿರು ಬಂಧಿಸುವ ವ್ಯರ್ಥ ಪ್ರಯತ್ನ ನಡೆಯುತಿದೆ
ಗಾಳಿಗೆ ಬಿರುಗಾಳಿಯಾಗಿಸುವ ಕ್ರಿಯೆ ಸಾಗುತಿದೆ
ಮರ್ಯಾದಾ ಹತ್ಯೆ ಒಲುಮೆಗೆ ಕಫನ್ ತೊಡಿಸುತಿದೆ
ಅಲೌಕಿಕ ಅನುಭೂತಿಗೆ ಜಾತಿ ನಂಜು ಸವರುತಿದೆ
ಅಗೋ ಅಲ್ಲಿ ಆ ದಮನಿತರ ಗುಡಿಸಲು ಸುಡುತಿದೆ
ಮಕ್ಕಳು ಕೂಡಿ ಆಡಿದ ತಪ್ಪಿಗೆ ಹಿಂಸೆ ವಿಜೃಂಭಿಸುತಿದೆ
ಮುಗ್ಧರನ್ನ ಶಿಕ್ಷಿಸುವ ಫರಮಾನ್ ಜಾರಿಯಾಗುತಿದೆ
ಪ್ರೇಮಿಗಳು ಸತ್ತರು ಅದೇ ಇತಿಹಾಸ ಮರುಕಳಿಸುತಿದೆ
ಅನುರಾಗಿಗಳ ದಾರಿಗೆ ಮುಳ್ಳಿನ ಮಳೆ ಸುರಿಯುತಿದೆ
ಎಷ್ಟೇ ತುಳಿದರೂ ಬಿಡದೇ ಪವಿತ್ರ ಪುಷ್ಪ ಅರಳುತಿದೆ
- ಅಶ್ಫಾಕ್ ಪೀರಜಾದೆ
ಅಶ್ಫಾಕ್ ಪೀರಜಾದೆ
ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು.
ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)
More About Author