ಎಷ್ಟೆಲ್ಲಾ ಆಪಾದನೆಗಳು
ಏನೆಲ್ಲಾ ಅಪವಾದಗಳು
ಸುತ್ತ ಸುಳಿದು ಎದೆಯಾಳಕ್ಕಿಳುಯುತ್ತಿವೆ
ಆವರಿಸಿ ದೇಹವೆಲ್ಲಾ ಗಟ್ಟಿಗೊಳಿಸುತ್ತಿವೆ ಮನವ
ಮೌನದಿಂದಿರುವಾಗ, ಮರೆಯಲಿರುವಾಗ
ಕೈಗೆಟಕಿದಾಗ, ಜೊತೆನಡೆದಾಗ
ಮನವ ಕಾಡಿರಲಿಲ್ಲ
ಬೆಳಕ ಪ್ರಭಾವಳಿ ಅರಳಿದಾಗ
ವಿಶೇಷತೆ ಮೈಗೂಡಿಸಿಕೊಂಡಾಗ
ಜಗದ ಕಣ್ಣು ಮೆಚ್ಚಿಕೊಂಡಾಗ
ಪಿಸುರಾಗುತ್ತದೆ ಅಸೂಯೆ
ಭೂತದ ಕಥೆಗಳು, ವರ್ತಮಾನವಾಗುತ್ತವೆ
ಬಣ್ಣ ಬಣ್ಣದ ರೆಕ್ಕೆ ತಳೆದು ಹಾರಾಡುತ್ತವೆ
ಎಂದೋ ಆಡಿದ ಮಾತು ಸಾಕ್ಷಿಯಾಗುತ್ತವೆ
ಇಂದಿಗೆ ಚಾಚಿದ ಕೈಗಳು ಕೊಚ್ಚಿಹೋಗುತ್ತವೆ
ಯಾಕೆ ಹೀಗೆ ಎಂದು ಮನ ದುಗುಡಗೊಳ್ಳುತ್ತದೆ
ಎಂದೋ ಮರೆತ ಕ್ಷಣ ದೈತ್ಯಾಕಾರ ದೃಶ್ಯವಾಗುತ್ತದೆ
ಸಿಕ್ಕ ಅವಕಾಶ ಅದೃಶ್ಯವಾಗುತ್ತದೆ
ಸಿಹಿನುಡಿದ ಮನ ದೂರವಾಗುತ್ತದೆ
ಮೆಟ್ಟಿನಿಲ್ಲುವದೇ ನಿಲುಗಡೆ
ಕಟ್ಟಿಕೊಳ್ಳುವುದೇ ಕೋಟೆ
ಕಣ್ಣು ಕಿವಿ ಮುಚ್ಚಿ ಆಗಸಕ್ಕೆ ಕೈಚಾಚಿ ಹಾರುವುದು
ಇದ್ದೆ ಇರುತ್ತವೆ, ಬೆನ್ನತಟ್ಟುವ ಮನಗಳು
ಎತ್ತರಕ್ಕೇರಿ ಬೆಳಕಬೀರುವ ನಕ್ಷತ್ರವಾಗುವುದೇ
ಗುರಿ!
-ಎಂ.ವಿ.ಶಶಿಭೂಷಣ ರಾಜು
ಎಂ.ವಿ. ಶಶಿಭೂಷಣ ರಾಜು
ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.
ಕೃತಿಗಳು: ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,
More About Author