ಅಂತಿಮಯಾನವೆಂಬುದು ಅನಂತಕ್ಕೆ ಮೊದಲೇ,
ಅದೇನು ಹೊಲದ ಬದಿಯ ಬದುವೆ
ಬದುಕು ಬಯಲಾಗಿ ಬಾನಡೆಗೆ ಬಾಗುವ
ಭವಸಾಗರದ ಮುಗಿಯದ ಆಟಪಾಟವೇ,
ಕೊನೆಮೊದಲಿಲ್ಲದ ಜೀವಯಾವದ ಜಾಲವೇ
ಬುದ್ಧ ಬಯಲಾದ ಬಾಳಿನಾಟದಲಿ
ಎಷ್ಟೊಂದು ಕೊನೆ ಮೊದಲಿಲ್ಲದ ತೀರದ ತೀರಗಳು
ಬಾಗಿಲ ತೆರೆವ, ಮುಚ್ಚುವ ಬೆಳಕು ನೆರಳಾಟಗಳು
ಬಾಗಿ ಮಣಿದರೂ ಸೆಣಸಿದರೂ ಎಷ್ಟೆಲ್ಲಾ ಅಸುರರು
ಬಂಧಿಗಳಲ್ಲವೇ ಬುದ್ಧನ ಕಮಲ ಹಸ್ತದಲ್ಲಿ
ಎಷ್ಟೊಂದು ಸತ್ಕಾರ, ಔತಣಕೂಟ, ಬೀಳ್ಕೊಡುಗೆ
ಆಮ್ರವನವೇ, ಜೇತವನವೇ, ಕಾಡಬಯಲ ಬೆಳದಿಂಗಳೇ
ಸುರಿವ ಕಾರ್ಮೋಡವೇ, ತಣ್ಣಗಿನ ಸೋನೆಮಳೆಯೇ
ಎಲ್ಲಿ ಬಯಲೋ ಅಲ್ಲೇ ಹಾಸಿಗೆ
ಎಲ್ಲಿ ನೆರಳೋ ಅಲ್ಲೇ ಬುದ್ಧ ಬೆಳದಿಂಗಳು.
ಮುಟ್ಟಬಲ್ಲರು, ಮುಟ್ಟಲಾರದವರು
ರಾಕ್ಷಸರು, ಗಣಿಕೆಯರು ಎಲ್ಲರನ್ನೂ
ಮತ್ತೆ ಮತ್ತೆ ಬುದ್ಧ ಎದುರಾಗುತ್ತಿದ್ದ
ಊಟಕೂಟವೆಂಬ ಅವರೀವ ಬೆಳದಿಂಗಳಿನಲ್ಲಿ
ಅವರೆಲ್ಲ ಮೀಯುತ್ತಿದ್ದರು. ಅಲ್ಲಿ
ಅವನ ಕಣ್ಣ ಕೊಳದ ಮಂದಸ್ಮಿತದಲ್ಲಿ.
ಊಟ ಕೂಟಗಳೇ ಕಾರಾಸ್ಥಾನಗಳಾಗಿ,
ಕುದಿವ ಕಡಲಾಗಿ ಮೊರೆವ ಕೊಳಲದನಿ ಹೂತುಹೋಗುತ್ತಿದೆ
ರಾಜಕೀಯವೋ, ಮೇಜವಾನಿಯೋ, ಸಂಬಂಧಸೇತುಗಳೋ
ವಿದಾಯವೋ ಒಂದೊಂದು ದೃಶ್ಯ ಕಣ್ಣಮುಂದೆ ಹಾಯುತ್ತವೆ.
ಕಮ್ಮಾರ ಚುಂದ ಅಲ್ಲಿ ಆಮ್ರವನದಲ್ಲಿ
ಬುದ್ಧನ ಅಂತಿಮಯಾತ್ರೆಯ ಚುಕ್ಕಾಣಿ ಹಿಡಿದಿದ್ದ
ಹದವಾಗಿ ಮೃದುವಾಗಿ ಮಧುರವಾಗಿ ಮಡಿಕೆಯಲಿ
ಬೇಯುತ್ತಿತ್ತು ಸೂಕರಮದ್ಭವ ಜೇನಿನೊಂದಿಗೆ ಸಿಹಿಯಾಗಿ
ಭಕ್ತನಂತರಂಗದ ಪ್ರೀತಿ ಮೊರೆವಂತೆ.
ಎಂಬತ್ತರ ಬುದ್ಧ ಎಂದಿನ ಪ್ರೀತಿಯಿಂದಲೇ ಸವಿದುಂಡ
ಉಳಿದದ್ದನ್ನೆಲ್ಲ ನೆಲದಾಳದ ಗೋರಿಯೊಳಗೆ ಸುರಿದ
ಯಾವ ಪಶುಪಕ್ಷಿಯೂ, ಕ್ರಿಮಿಕೀಟವೂ
ತನ್ನಂತೆ ಬೇಯದಿರಲಿ ಬೇನೆಯಲಿ, ಅಂತಿಮಯಾನದ ಬಾಗಿಲಲಿ
ಚರಿತ್ರೆ ಉಸಿರದಿರಲಿ ಎಂದೂ ಚುಂದನ ಹೆಸರನು ಎನ್ನುತ್ತಲೇ
ಮೈಯೆಲ್ಲಾ ಬಾಯಾಗಿ, ಬಾಹುಗಳೆಲ್ಲ ಬಳ್ಳಿಗಳಾಗಿ, ಪಾದಪದುಮಗಳು
ತೋರಿದವು ಹಾದಿ ಪರಿನಿರ್ವಾಣದೆಡೆಗೆ.
ಹಿಂದೊಂದು ದಿನ ಕ್ರಿಸ್ತನೂ ಎದುರಾಗಿದ್ದ ಹೀಗೆ ಔತಣಕೂಟದಲ್ಲಿ
ಹನ್ನೊಂದನೆಯ ಶಿಷ್ಯ ಯೂಧನ ಖಾರಾಸ್ತಾನದ ಅರಿವಿದ್ದೂ
ಗೋಧಿರೊಟ್ಟಿ ತಿನ್ನುತ್ತ, ದ್ರಾಕ್ಷಾರಸ ಕುಡಿಯುತ್ತ ನುಡಿದಿದ್ದ
'ನನ್ನಮೈಯ್ಯನ್ನೇ ರೊಟ್ಟಿಯೆಂದು ಭಾವಿಸಿಕೊಳ್ಳಿ
ನನ್ನ ಹರಿದ ನೆತ್ತರನ್ನೆ ಬುರುಗುಬುರುಗಾದ ದ್ರಾಕ್ಷಾರಸವೆನ್ನಿ
ಕುರುಬನಾದ ನಾನು ಕತ್ತರಿಸಲ್ಪಡುತ್ತೇನೆ
ಕುರಿಗಳೇ ನಿಮ್ಮ ನಿಮ್ಮ ನೆಲೆ ಕಂಡುಕೊಳ್ಳಿ
ನಾನು ಹಾರುತ್ತೇನೆ ಪಾರಿವಾಳವಾಗಿ
ಈ ಮಾಂಸ ಮಜ್ಜೆಯ ವಜ್ಜೆಯನ್ನು ದಾಟಿ
ಅಲ್ಲಿ ಮೇಲೆ ತಂದೆಯಡೆಗೆ
ನನ್ನ ಕಾವಳದ ಕಣ್ಣು ಸದಾ ನಿಮ್ಮೆಡೆಗೆ
ಚುಂದನಿತ್ತ ಮಾಂಸವೂ
ಯೂಧನಿತ್ತ ಗೋಧಿರೊಟ್ಟಿಯೂ
ಹೀಗೆ ಮತ್ತೆ ಮತ್ತೆ ಬೇಯಿಸಲ್ಪಡುತ್ತದೆ ಇಹದ ಒಲೆಯಲ್ಲಿ
ಅಲ್ಲಿ ದಿನನಿತ್ಯ ಆಗಮಿಸುತ್ತಾರೆ ಬುದ್ಧನಂತಹ ಬಂಧುವು
ಕ್ರಿಸ್ತನಂತಹ ಕರುಣಾಳುವು, ಗಾಂಧಿಯಂತಹ ತಂದೆಯು
ಹೀಗೆ ಚರಿತ್ರೆಯಲ್ಲಿನ ಔತಣಕೂಟಗಳು
ಮತ್ತೆ ಮತ್ತೆ ನಿಮಿತ್ತಗಳಾಗುತ್ತಲೇ ಇರುತ್ತವೆ
ಬೀಸುತ್ತಲೇ ಇರುತ್ತವೆ ಬಿಳಿಪಾರಿವಾಳಗಳ ರೆಕ್ಕೆ
ನಿಲ್ದಾಣವ ಹುಡುಕಿ ಅನಂತ ಆಗಸದೆಡೆಗೆ
- ಪುಷ್ಪ ಎಚ್.ಎಲ್
ಆಡಿಯೋಟ
ಎಚ್.ಎಲ್. ಪುಷ್ಪ
ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.
ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ (ವಿಮರ್ಶೆ) ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಪು.ತಿ.ನ.ಕಾವ್ಯ ಪುರಸ್ಕಾರ, ಕಡೆಂಗೋಡ್ಲು ಶಂಕರಭಟ್ ಕಾವ್ಯ ಪ್ರಶಸ್ತಿ, ಸಾರಂಗಮಠ ಪಾಟೀಲ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
More About Author