Poem

ದಂತಕಥೆ

ಏನಿಲ್ಲ ಚೆನ್ನಾಗಿಯೇ ಇತ್ತು ಆರೋಗ್ಯ
ಎಕ್ಸರೇ ಬಿಟ್ಟು ಹುಡುಕಿದರು ದಂತಕ್ಷಯ!
ನುರಿತ ಹಲ್ಲು ವೈದ್ಯರ ಸಮಿತಿ
ಏರಿಸಿತು ಅಂದಾಜು ವೆಚ್ಚದ ಮಿತಿ

ಕಟ್ಟುವೆವು ನಾವು ಹೊಸ ಸೆಟ್ಟು
ಹಳದಿ ಹಲ್ಲುಗಳು ಸಂದು ಬಿಟ್ಟು
ಅರಳುವ ನಗೆಯಲ್ಲಿ ಹೊಳಪಿಲ್ಲ
ಹಳೆಯದ್ಯಾವುದೂ ನಮಗೆ ಸಲ್ಲ

ಒಂಚೂರು ಜಾಗವನು ಬಿಟ್ಟರೆ ಕೇಳಿ
ಎಲ್ಲಾದರೂ ಕುಂದು ಕಲೆಗಳು ಕಂಡರೆ ಹೇಳಿ
ಹಸಿರ ಉಸಿರನು ನಳಿಗೆಯಲಿಟ್ಟು
ನೆಲದ ಬಾಯಗಲಿಸಿ ಸ್ಟೀಲು ಫ್ರೇಮಿಟ್ಟು

ಅರಿವಳಿಕೆ, ವಿಸ್ಮೃತಿ, ಸಮ್ಮೋಹಿನಿ
ಆಯ್ಕೆ ನಿಮ್ಮದು ಹೊರಬರಬಾರದು ದನಿ
ಗಾಯವಾದರೆ ಆ್ಯಂಟಿ ಸೆಪ್ಟಿಕ್ ಡೆಟ್ಟಾಲು
ಕ್ಯಾಲ್ಸಿಯಂ ಬೇಕಿಲ್ಲ ಬೆಳ್ಳಗೆ ಕಂಡರೆ ಸಾಕು ಹಾಲು

ಕೊನೆಯ ಅವಶೇಷಗಳವರೆಗೂ ಕೊರೆದ ಡ್ರಿಲ್ಲು
ಕರಾರುವಾಕ್ಕಾಗಿ ಸುರಿದ ಸಿಮೆಂಟು ಫುಲ್ಲು
ಪರಂಪರೆಯ ಮುಕ್ಕುಗಳ ಉಜ್ಜಿ ಕೆತ್ತಿ
ಶಿಥಿಲ ಸಂದುಗಳಿಗೆ ಚಿನ್ನಬೆಳ್ಳಿಯ ಮೆತ್ತಿ

ಅಂತೂ ಇಂತೂ ನಾಡು ನಗಬೇಕು
ಹೊಳೆವ ಮುತ್ತಿನ ಸಾಲು ಕಾಣಬೇಕು
ರಸ್ತೆಗಳ ಗೆರೆ ಹೊಡೆದು ಮಾಡಿದ ವಿನ್ಯಾಸ
ನಾಚಿದೆ ಭೂಮಿ ಶರಣಾಗಿದೆ ಆಗಸ

ಅಂತರಾಟಿಕೆಯಲಿ ಸೇತುವೆ
ವಿಜ್ಞಾನದಮಲಲಿ ನೇತಾಡಿವೆ
ಇನ್ನೇನು ನಮ್ಮದೆಲ್ಲ ಹೊಚ್ಚ ಹೊಸ ಇತಿಹಾಸ
ಈಗ ನೋಡಿ ನಗುವಿಗೆ ಹೊಸ ಆತ್ಮವಿಶ್ವಾಸ

ಎಲ್ಲ ಸರಿ ಕವಿಗ್ಯಾಕೋ ಮಂಕು ಕವಿದು ಆಯಾಸ
ಹೊಸ ಕಾವ್ಯ ಕಟ್ಟಲು ಹರಸಾಹಸ
ಎದೆಯಗೂಡಲಿ ಒಂದು ಥರದ ಉಬ್ಬಸ
ಕೆಮ್ಮಿ ಕ್ಯಾಕರಿಸಿದರೂ ಜಪ್ಪಯ್ಯ
ಅನ್ನುತ್ತಿಲ್ಲ ಬಲು ಹಟಮಾರಿ ಕಾವ್ಯ

- ಸುಚಿತ್ರಾ ಹೆಗಡೆ

ಸುಚಿತ್ರಾ ಹೆಗಡೆ

ಲೇಖಕಿ ಸುಚಿತ್ರಾ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ, ಕುಮಟಾದ, ಕತಗಾಲ ಗ್ರಾಮದವರು. ತಾಯಿ ಶಾರದಾ ಭಟ್ ಮತ್ತು ತಂದೆ ಪಿ.ಆರ್ ಭಟ್ಟರು ಹೈಸ್ಕೂಲಲ್ಲಿ ಶಿಕ್ಷಕರಾಗಿದ್ದರು. ಕುಮಟಾದ ಬಾಳಿಗಾ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಅವರು ಕಮಲಾ ಬಾಳಿಗಾ ಕಾಲೇಜಿನಿಂದ ರ್ಯಾಂಕ್ ನೊಂದಿಗೆ ಬಿಎಡ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಹಾಗೆಯೇ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಮತ್ತೆ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಹಲವು ಕವನಗಳು ನಾಡಿನ ವಿವಿಧ ಪತ್ರಿಕೆ/ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಕಾಲೇಜು ದಿನಗಳಲ್ಲಿ ತುಷಾರ ಮಾಸಪತ್ರಿಕೆಯ ರಾಜ್ಯಮಟ್ಟದ ಕವನ ರಚನಾ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಗಳಿಕೆ ತೀರ್ಪುಗಾರರಾಗಿದ್ದವರು ಖ್ಯಾತ ವಿಮರ್ಶಕ ಶ್ರೀ ಜಿ ಎಸ್ ಆಮೂರ ಅವರು. ಇಪ್ಪತ್ತೆರಡು ವರುಷಗಳಿಂದ ಹೈಸ್ಕೂಲು, ಕಾಲೇಜುಗಳಲ್ಲಿ ಮುಖ್ಯ ಶಿಕ್ಷಕಿ, ಪ್ರಾಂಶುಪಾಲೆ, ಆಂಗ್ಲ ವಿಭಾಗದ ಮುಖ್ಯಸ್ಥೆ ಮೊದಲಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಈಗ ಸ್ವಂತ ಉದ್ಯೋಗವನ್ನು ಆರಂಭಿಸಿದ್ದಾರೆ.

ಸುಚಿತ್ರಾ ಅವರಿಗೆ ದೇಶ ಸುತ್ತುವುದು ಮತ್ತು ಕೋಶ ಓದುವುದು ಎರಡೂ ನೆಚ್ಚಿನ ಹವ್ಯಾಸಗಳು. ಸಮಾರು ಇಪ್ಪತ್ತೈದು ದೇಶಗಳನ್ನು ಈಗಾಗಲೇ ನೋಡಿದ್ದಾರೆ. ‘ಶ್ರಾವಣ’ ಬ್ಲಾಗಿನಲ್ಲಿ ಮೂಡಿ ಬರುತ್ತಿರುವ ಅವರ ಪ್ರವಾಸ ಕಥನಗಳ ಸರಣಿ ತುಂಬ ಜನಪ್ರಿಯವಾಗಿದೆ. ಸುಚಿತ್ರಾ ಅವರ ಮೊದಲಕವನ ಸಂಕಲನ ‘ಈ ಚಿಟ್ಟೆ ಕಾಡಿದ ಹಾಗೆ’ ಮೈಸೂರಿನ ‘ಮಡಿಲು’ಪ್ರಕಾಶನದಿಂದ ಸೆಪ್ಟೆಂಬರ್ 2021 ರಲ್ಲಿ ಬಿಡುಗಡೆಯಾಗಿದೆ. ಪ್ರವಾಸ ಬರಹಗಳ ಪುಸ್ತಕವೊಂದು ಪ್ರಕಟಣೆಯ ಹಾದಿಯಲ್ಲಿದೆ. ಪತಿ ಅನಂತ ಹೆಗಡೆ ರಿಸರ್ವ್ ಬ್ಯಾಂಕಿನ ನೋಟ್ ಪೇಪರ್ ಮಿಲ್ ನ ಜನರಲ್ ಮ್ಯಾನೇಜರ್ ಆಗಿದ್ದಾರೆ. ಮಗಳು ಸಿಂಚನಾ ಎನ್ ಐ ಟಿ ಸುರತ್ಕಲ್ ನಿಂದ ಬಿ ಟೆಕ್ ಪದವಿ ಪಡೆದು ಸಾಫ್ಟವೇರ್ ಇಂಜನಿಯರ್ ಆಗಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿದ್ದ ಸುಚಿತ್ರಾ ಹೆಗಡೆ ಪ್ರಸ್ತುತ ಸಾಂಸ್ಕ್ರತಿಕ ನಗರಿ ಮೈಸೂರಲ್ಲಿ ನೆಲೆಸಿದ್ದಾರೆ.

More About Author