Poem

ಭಿನ್ನತೆಯ ಭಾದೆ

ಒಳಗಣ್ಣಿಗೆ ಕಾಣುವ ದೃಷ್ಟಿಯೇ ಬೇರೆ
ಬರಿಗಣ್ಣಿಗೆ ಕಾಣುವ ರಂಗುರಂಗಿನ
ದೃಶ್ಯಾವಳಿಗಳ ನೋಟಕ್ಕಿಂತ ವಿಭಿನ್ನ

ಒಳಗಿವಿಗೆ ಕೇಳುವ ಗೂಢಾರ್ಥವೇ ಬೇರೆ
ಮೋಡಿಮಾತಿನ ಸಾಂಧರ್ಬಿಕ
ಧನಿಗಳು ಸೂಸುವ ನಿಜಾರ್ತ ವಿಭಿನ್ನ

ಒಳನಾಲಗೆಗೆ ರುಚಿಸುವ ಬಗೆಯೇ ಬೇರೆ
ತೋರಿಕೆಯ ಕಾಟಕ್ಕೆ ಸೆಳೆವ
ತಿನಿಸಿನ ಹಿಂದಿನ ಸಾರ ವಿಭಿನ್ನ

ಮನಸಿಗೆ ಒಳಹೊರಗು ಎಂಬುದಿಲ್ಲ
ಹೊರಗಿನದೆಲ್ಲವೂ ಒಳನುಸುಳುತ್ತವೆ
ಒಳಗಿನದೆಲ್ಲವೂ ಹಾಗೇ ಹೊರಬರುವುದು
ಕೆಲವು ಹೊರಬರುತ್ತವೆ ನಿರ್ಭೀತಿಯಿಂದ
ಮತ್ತೆ ಕೆಲವು
ಬೆದರು ಗೊಂಬೆಯ ನೆನೆದು ಬೆಚ್ಚಿದಂತೆ
ಒಳಗೇ ಉಳಿದು ಕುಲುಕಾಡಿ
ಅಂತಃಕರಣವ ಗುದ್ದಿ ಅಂತರ್ಮುಖಿಯಾಗಿಸುತ್ತವೆ

- ಕೆ ಎಸ್ ಗಂಗಾಧರ

ಕೆ.ಎಸ್ ಗಂಗಾಧರ

ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author