ಒಂದಿರುಳು ಕಳೆದು
ಬೆಳಗಾಗುವನಿತರಲ್ಲಿ
ಕಿಲಕಿಲ ನಗುವ ಅರಮನೆ
ಯಾರು ತಾನೇ ಮಲಗಿದ್ದಾರೆ
ಅಯೋಧ್ಯೆಯ ಅರಮನೆಯಲ್ಲಿ
ಕಳೆದಿರುಳು?
ಅದೇನು ಸಣ್ಣ ವಿಷಯವೇ?
ರಘುರಾಮನಿಗೆ
ಪಟ್ಟಾಭಿಷೇಕ!
ಕೆಲವೇ ಜಾಮಗಳಲ್ಲಿ
ನಡೆಯಬೇಕಿದೆ ಸಿದ್ಧತೆ...
ಇಳಿಯಬೇಕಿದೆ
ಗಂಧರ್ವಲೋಕವೇ ಧರೆಗೆ...
ಗಡಿಬಿಡಿ... ಓಡಾಟ
ಹೂವು ಗಂಧ ತೋರಣ...
ಬಾಲ ಅರುಣ
ಮುಗಿಲ ಮೆತ್ತೆಯ ಮೇಲೆ ಇನ್ನೂ ಈಗ
ಬಲ ಮಗ್ಗುಲಿಗೆ
ಹೊರಳಿದ್ದಾನೆ ಅಷ್ಟೇ
ರೆಪ್ಪೆ ಅಂಚಲ್ಲಿ
ಕನಸು ತೂಗುತಿದೆ
ಇನ್ನೂ
ಮಲಗೆ ಇಲ್ಲದ
ಜನ ಎದ್ದಿದ್ದಾರೆ...
ಜಾನಕಿಯ ಅಂತಃಪುರದಲ್ಲಿ
ಇದ್ದಾರೆ ಓರಗಿತ್ತಿಯರು
ಮಣ್ಣಿನ ಮಗಳೋ
ಕಡು ಚೆಲುವೆ
ಆದರೆ ಅಲಂಕಾರ ನಿಪುಣೆಯಲ್ಲ
ಶುತಕೀರ್ತಿ ಸೀತೆಯ
ಕಂಗಳಿಗೆ
ಕಪ್ಪು ಬರೆದು
ತಿಲಕ ತಿದ್ದುತ್ತಿದ್ದಾಳೆ.
ಮಾಂಡವಿ ಹರವಾದ
ಅವಳ ಕೂದಲಿಗೆ
ಆಭರಣವಿಡುತ್ತಿದ್ದಾಳೆ
ಕತ್ತಲ ಆಗಸಕ್ಕೆ
ನಕ್ಷತ್ರ ಜೋಡಿಸುವಂತೆ..
ಊರ್ಮಿಳೆ ಏನೋ
ಗುಟ್ಟು ಹೇಳುತ್ತಾ
ಚೆಲುವೆಯ ಚೆಲು ನಡುವಿಗೆ
ಪಟ್ಟೆ ಪೀತಾಂಬರವ
ಸುತ್ತಿ ನಿರಿಗೆಯ ಲಾಸ್ಯವ ತೀಡುತ್ತಿದ್ದಾಳೆ.
ಬಂತು ಸಂದೇಶ
'ಜನಕ ಕುವರಿ
ಪಟ್ಟಿ ಸೀರೆ ಉಡಬೇಕಿಲ್ಲ
ಅರೇ! ಏಕೆ? ಏಕೆ?
ಏನು ಕಾರಣ? ಯಾರು ಕಾರಣ?
ತಲ್ಲಣದ ಗುಸುಗುಸು
ಕೈಕೇಯಿಯಂತೆ ಕೈಕೇಯಿಯಂತೆ ರಾಮನ ಪಟ್ಟಿ ತಡೆದವಳು
ಕೈಕೇಯಿಯಂತೆ! ಕೈಕೇಯಿ?
ರಾಮನಿಗೆ ಕೌಸಲ್ಯೆಗಿಂತ ಹೆಚ್ಚು ಲಾಲಿ ಹಾಡಿದವಳು!
ಕೌಶಿಕನ ಜೊತೆ ರಾಮ ಹೊರಟಾಗ ಒದ್ದೆ ಕಣ್ಣಂಚಲಿ ಅವನ
ಬರವ ಕಾದವಳು!
ಕೈಕೇಯಿ ದಶರಥನ ಬಳಿ ವರ ಬೇಡಿದಳಂತೆ.
ರಾಮನ ವನವಾಸ ಕೋರಿದಳಂತೆ...
ಕೈಕೇಯಿಯಂತೆ! ಕೈಕೇಯಿಯಂತೆ!!
ಕಯಾದುವಿಗೆ
ಮತ್ತೊಮ್ಮೆ ಸತ್ವ ಪರೀಕ್ಷೆ
ಒಂದೊಂದೇ ಸಂಕಟಗಳನು
ಪರಿಹರಿಸಿಕೊಂಡಂತೆ
ಧುತ್ತೆಂದು ಮತ್ತೊಂದು
ಹಾಜರು.
ಈ ಅರಮನೆಯಲ್ಲಿ ಏನಿಲ್ಲ?
ಶೂರಾಧಿಶೂರ ರಾಜ
ತನ್ನ ಗಂಡ ಹಿರಣ್ಯ ಕಶಿಪು
ಮುದ್ದು ಮಕ್ಕಳು....
ಸದಾ ಅಮ್ಮಾ ಅಮ್ಮಾ
ಎಂದು ತನ್ನ ಸುತ್ತಲೇ ಸುತ್ತುವ ಬಣ್ಣದ ಬುಗುರಿ ಪ್ರಹ್ಲಾದ,
ಅವನ ಮುಖ ಮಾತು ನಗು ಎಲ್ಲವೂ ಆಯಸ್ಕಾಂತ...
ಅವನಿಗಿಂದು
ವಿಷ ಉಣಿಸುವರಂತೆ!
ಗೆಲ್ಲುತ್ತಾನೆ. ತನ್ನ ಕಂದ
ಗೊತ್ತು ಕಯಾದುವಿಗೆ. ಎಷ್ಟೋ ಅಗ್ನಿದಿವ್ಯಗಳನ್ನು ದಾಟಿದವನು
ಆದರೂ ತಾಯಿಕರುಳು
ಪಂಜರದೊಳಗಿನ ಹಕ್ಕಿಯ ರೆಕ್ಕೆಬಡಿತ.
ಹಿರಣ್ಯ ಕಶಿಪುವಿಗೆ ಮೋಹ ಕಯಾದು ಎಂದರೆ
ಅವಳ ಒಡಲಕುಡಿ
ಎಂದರೂ ಪ್ರೀತಿಯೇ
ತಂದೆ ತಾನೇ!
ರಾಜನ ಸಿಟ್ಟೆಲ್ಲಾ
ತನ್ನ ಸೋದರನನು
ಕೊಂದ ವಿಷ್ಣುವಿನ ಮೇಲೆ
ಸಹಿಸಲಾರ ಹರಿನಾಮ...
ಈ ಪ್ರಹ್ಲಾದನೋ ಕೂತರೆ ನಿಂತರೆ ನಡೆದರೆ ಹರಿಹರಿ ಮಲಗಿದಾಗ
ಉಸಿರಾಟದ ಸದ್ದು ಹರಿ...
ಏನು ಮಾಡುತ್ತಾಳೆ
ಕಯಾದು
ವಿಷ ಊಡುತ್ತಿರುವವ
ಬೇರಾರೂ ಅಲ್ಲ..
ಲಾಲಿ ಹಾಡಿದ ತಂದೆ
ಶಿಕ್ಷಿಸುತ್ತಿರುವವ
ಬೇರಾರೂ ಅಲ್ಲ
ರಾಜ್ಯ ಕಾಯುವ ದೊರೆ
ಯಾರಿಗೆ ನೀಡುತ್ತಾಳೆ ದೂರು? ಯಾರಲ್ಲಿ
ಇಡುತ್ತಾಳೆ ಮೊರೆ?
ಕಾಲ ಕೆಳಗಿನ ನೆಲ ಕುಸಿಯುತಿದೆ...
ರಥದ ಗಾಲಿ ಕೆಸರಲ್ಲಿ
ಹೂತಿದೆ
ಕಲಿತ ವಿದ್ಯೆಗಳೆಲ್ಲ
ಶಾಪಕ್ಕೆ ಮರೆಯುತಿವೆ...
ಕೊನೆಗಳಿಗೆಗಳು ಇವು...
ಬದುಕ ರಥ ನಿಲ್ಲಲಿದೆ
ತಲೆಯ ಒಳಗೊಂದು
ಭೂಚಕ್ರ ನೆನಪುಗಳು...
ರಾಧೆ ಅತಿರಥರದು
ಬೆಸ್ತರ ಪಾಳ್ಯ ಬಾಲ್ಯ
ಕೌರವನ ಸ್ನೇಹ
ಪಾಂಡವರ ದ್ವೇಷ
ಪಗಡೆಯಾಟ
ಧರ್ಮಜನ ಸೋಲು
ಕುರುಕ್ಷೇತ್ರಕ್ಕೆ
ಕೆಲದಿನಗಳ ಮೊದಲು
ಭೇಟಿಯಾದ ಕೃಷ್ಣ
ನಂತರ ಕುಂತಿ
ಹುಟ್ಟಿದ ಹಸಿಕಂದನನ್ನು
ತೇಲಿಬಿಟ್ಟವಳಿಗೆ
ಈಗ ಎಲ್ಲಿಂದ ಬಂತು
ಪುತ್ರ ವ್ಯಾಮೋಹ?
ಅಮ್ಮ, ಏಕೆ ಹೀಗೆ ಮಾಡಿದೆ?
ನಿನ್ನ ಹರೆಯದ ಕುತೂಹಲಕ್ಕೆ
ನನ್ನ ಬದುಕನ್ನೇ...
ನೀರುಪಾಲು ಮಾಡಿದೆ?
ಅನಂತರದ ಇರುಳುಗಳಲ್ಲಿ
ಹೇಗೆ ಸರಿಸಿದ ಕಾಯೇ?
ಯುದ್ಧಕ್ಕೆ ಮುನ್ನ
ಭೇಟಿಯೇಕಾದೆ?
ನಾನೇನೋ ಕೂಟ ಮಾತನು
ಉಳಿಸಿ ಕೊಂಡೆನಮಾ
ನನ್ನ ತಮ್ಮನೇ ನನಗೆ
ಬಾಣ ಹೂಡಿದ..
ನನ್ನ ಬದುಕಿನ ಸುತ್ತ ನೀ ಬೇಲಿ ಬಿಗಿದೆ
ಅಮ್ಮಾ, ನಿನ್ನ ಈ ಹಿರಿಮಗ
ಹಲವು ಬಾರಿ ಸತ್ತಿದ್ದಾನೆ
ಈಗ ಉಸಿರು ನಿಲ್ಲುತಿದೆ ಅಷ್ಟೇ...
ಚೆಂದದ ಒಂದು ಮರ
ಎದುರೇ ಕಾಣುತಿತ್ತು
ನಳನಳಿಸಿ
ಹೂಹಣ್ಣುಗಳ ಕೂಡ
ಕೆಲದಿನಗಳ ಮುಂಚೆ
ಹಬ್ಬಿತೊಂದು ಬಳ್ಳಿ ಅದಕೆ...
ಅದು ಮಾಮರಕ್ಕೆ ಹಬ್ಬುವ ಮಲ್ಲಿಗೆಯಲ್ಲ
ಅಡಿಕೆಗೆ ಹಬ್ಬುವ ವೀಳೆಯವಲ್ಲ
ಯಾವುದೋ ಬ೦ದಳಿಕೆ...
ನಿಧಾನ ಹಬ್ಬಿ
ಮರದ ರಸವನ್ನೇ ಹೀರಿ
ತಾನು ಕೊಬ್ಬಿತು...
ರಂಜನಿ ಪ್ರಭು
ವಿಡಿಯೋ
ವಿಡಿಯೋ
ರಂಜನಿ ಪ್ರಭು
ರಂಜನಿ ಪ್ರಭು ಅವರು ಮೂಲತಃ ಬೆಂಗಳೂರಿನವರು. ಎಂ.ಇ.ಎಸ್. ಕಾಲೇಜಿನಲ್ಲಿ ಪಿಯುಸಿ, ಮಹಾರಾಣಿ ಕಾಲೇಜಿನಲ್ಲಿ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಬೆಂಗಳೂರಿನ ಸೇಂಟ್ ಆ್ಯನ್ಸ್ ಕಾಲೇಜಿನಲ್ಲಿ 35 ವರ್ಷಗಳ ಕಾಲ ಬೋಧನೆ ನಡೆಸಿ ಕನ್ನಡ ವಿಭಾಗದ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. “ತುಷಾರ’ ಮಾಸ ಪತ್ರಿಕೆಗೆ 'ಬಾಲ್ಯಕಾಲದ ಸಖೀ’ ಎಂಬ ಲೇಖನ ಬರೆದರು. ಅದಾದ ಬಳಿಕ ಅವರ ಹಲವಾರು ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈವರೆಗೆ ಅವರ 2 ಕವನ ಸಂಕಲನ, ನಾಲ್ಕು ಭಾವಗೀತೆಗಳ ಕ್ಯಾಸೆಟ್ ಗಳು(ಸೀಡಿ) ಹೊರಬಂದಿದೆ.