ಒಂದು ವಿಚಿತ್ರವಾದ ರೂಹಿನೆಡೆಗೆ ಓಡುವವನಂತೆ ನಡೆದುಬರುತ್ತಿದ್ದ ಮಂಜುನಾಥನೊಂದಿಗೆ ಒಂದು ಅಸಹನೀಯ ವೇದನೆಯೂ ಬೆನ್ನಟ್ಟಿರುವಂತೆ ಕಾಣುತ್ತಿತ್ತು. ನಡೆದು ಬರುವ ಯಾವ ರಸ್ತೆಗಳಿಗೂ ನಿರ್ದಿಷ್ಟ ಕೊನೆಗಳೇ ಇಲ್ಲದಂತೆ ಆತನಿಗೆ ಅವು ಕಾಣುತ್ತಿದ್ದವು. ಮನುಷ್ಯರಂತೂ ನಿರ್ಜೀವ ಕಲ್ಲುಗಳು ನಡೆದಾಡುತ್ತಿರುವಂತೆ ಆತನಿಗನ್ನಿಸಿತು. ಭೀಭತ್ಸ ಅಸಹನೆಯೊಂದು ಆತನ ಅಂತರಂಗದಿಂದ ಪುಟಿದೇಳುತ್ತಿರುವಂತೆ ಆತನ ಮುಖವು ಬಿಳಿಚಿಕೊಂಡಿತ್ತು. ತಾನು ಸಾಗುವ ದಾರಿಯೇನೋ ಸರಿಯಾಗೇ ಇದೆ ಎಂಬ ಅರಿವು ಅವನಲ್ಲಿತ್ತು. ಆದರೂ ಎದೆಯಲ್ಲಿ ತಳಮಳ ಮತ್ತು ಅಸಹನೆ ತಾಂಡವವಾಡುತ್ತಿದ್ದವು. ತನ್ನ ಮನೆಯ ಗೇಟು ತಲುಪಿದ್ದೇ ಸುತ್ತಮುತ್ತಲ ಮನೆಗಳನ್ನೊಮ್ಮೆ ನೋಡತೊಡಗಿದಾಗ ಅಲ್ಲಿನ ಯಾವ ಮನೆಗಳೂ ಸಹ ಜೀವಸೆಲೆಯನ್ನು ಹೊಂದಿರದ ನಿರ್ಜೀವ ಸಿಮೆಂಟಿನ ಮುದ್ದೆಗಳಂತೆ ಕಾಣತೊಡಗಿದವು ಆತನಿಗೆ.
ಅಲ್ಲಿಂದ..
ವಿಚಿತ್ರ ಸೆಡವು, ಸಿಟ್ಟು, ಆಕ್ರೋಶ ತುಂಬಿದ ಮುಖವನ್ನು ಕಿವುಚುತ್ತ ಮಂಜುನಾಥ ತನ್ನೆರಡೂ ಕೈಗಳಿಂದ ಎತ್ತಿಕೊಂಡ ಕಲ್ಲೊಂದರಿಂದ ಗೇಟಿಗೆ ಹಾಕಿದ್ದ ಕೊಂಡಿಗೆ ಜಜ್ಜಿದ. ಕೊಂಡಿ ಕಳಚಿದ ಗೇಟನ್ನು ಕಾಲಿನಿಂದ ಒದ್ದು ಬಾಗಿಲಿನತ್ತ ದುಡದುಡನೆಂದು ಹೆಜ್ಜೆಹಾಕಿದ. ಕಾಲಿನಿಂದ ರಕ್ತ ಬುಳುಬುಳು ಸೋರುತ್ತಿತ್ತಾದರೂ ಅದನ್ನು ಗಣ ಸದೆ ಬಾಗಿಲು ತಲುಪಿದ. ಬಾಗಿಲ ಪಕ್ಕದಲ್ಲಿದ್ದ ಹೂಕುಂಡಗಳನ್ನೊಮ್ಮೆ ದುರುಗುಟ್ಟಿ ನೋಡತೊಡಗಿದ. ಅದರಲ್ಲಿ ಒಂದನ್ನು ಎತ್ತಿ ಅಂಗಳಕ್ಕೆ ಬಿಸುಟಿದ. ಇನ್ನೊಂದನ್ನು ಎತ್ತಿ ಬಾಗಿಲ ಕೀಲಿಗೆ ಜಜ್ಜಿದ. ಕೀಲಿ ಒಡೆಯಲಿಲ್ಲ. ಮತ್ತೊಂದು ಹೂಕುಂಡವನ್ನೆತ್ತಿ ಮತ್ತೆ ಕುಕ್ಕಿದ. ಆಗಲೂ ಬಾಗಿಲು ಒಡೆಯಲಿಲ್ಲ. ಮತ್ತೆ ದುರದುರನೇ ಹಿಂದಕ್ಕೋಡಿ ಗೇಟಿನ ಹೊರಬಂದು ವಿಚಿತ್ರ ನೋಟವೊಂದರಿಂದ ಕಲ್ಲನ್ನು ಅರಸಿ ಹುಡುಕತೊಡಗಿದ. ಬೆವರುತ್ತಿದ್ದ. ಕಾಲಿನಿಂದ ರಕ್ತ ಸೋರುತ್ತಿತ್ತು. ಮತ್ತೊಂದು ಕಲ್ಲು ಕಣ್ಣಿಗೆ ಬಿತ್ತು. ಅಸಾಧ್ಯ ಖುಷಿಯುಕ್ಕಿ ಸಿಂಹ ಘರ್ಜಿಸುವಂತೆ ವಿಚಿತ್ರವಾದ ನಗೆನಕ್ಕ. ಕಾಲಿನ ರಕ್ತವನ್ನು ನೆಕ್ಕಿ ಥೂ ಎಂದು ನೆಲಕ್ಕೆ ಉಗಿದ. ಓಡಿಬಂದು ಕಲ್ಲಿಂದ ಕೀಲಿಯನ್ನು ಜಜ್ಜಿ ಬಾಗಿಲು ಒಡೆದ. ವಿಚಿತ್ರ ಆಕ್ರೋಶದಲ್ಲಿ ಸೋಫಾದ ಮೇಲೆ ಬಿದ್ದು ಗೋಡೆಯತ್ತ ಕಣ್ಣಿಟ್ಟ. ಹೆಂಡತಿ ಲಲಿತಾಳಿಗೆ ಮುತ್ತಿಕ್ಕುತ್ತಿದ್ದ ತನ್ನದೇ ಭಾವಚಿತ್ರ. ಅಸಾಧ್ಯ ಖುಷಿ, ಅಸಾಧ್ಯ ಆಕ್ರೋಶ ಒಟ್ಟೊಟ್ಟಿಗೆ ಅವನ ಕಣ್ಣುಗಳನ್ನು ತುಂಬಿಕೊಂಡವು. ತಲೆಯನ್ನು ಕೊಡವಿಕೊಂಡು ಅಂಗಿಯನ್ನು ಕಿತ್ತು ಫ್ಯಾನುಹಾಕಿದವನೇ ದೀರ್ಘನಿಟ್ಟುಸಿರನ್ನು ಬಿಟ್ಟ. ಪ್ಯಾಂಟು ಜೇಬಿನಿಂದ ಸಿಗರೇಟು ಹೊರತೆಗೆದು ಕಡ್ಡಿಗೀರಿದ. ಹೊಗೆಯನ್ನು ಅದೇ ತಿರುಗುವ ಫ್ಯಾನಿಗೆ ಸುರುಳಿಸುರುಳಿಯಾಗಿ ಬಿಡುತ್ತ ವ್ಯಗ್ರವಾಗಿ ನಗತೊಡಗಿದ. ಒಂದೊಮ್ಮೆ ಮನೆಯನ್ನೆಲ್ಲಾ ದಿಟ್ಟಿಸಿನೋಡತೊಡಗಿದ. ಟಿ.ವಿ, ಗೋಡೆಗಡಿಯಾರ, ಗೋಡೆಯ ಮೇಲೆ ಅಂಟಿಕೊಂಡಿದ್ದ ವಿಚಿತ್ರ ಸಂಜ್ಞೆಯೊಂದರ ಭಾವಚಿತ್ರ, ಮತ್ತೂ ಮಗದೊಂದೂ ಎಲ್ಲವನ್ನೂ ನೋಡತೊಡಗಿದ. ಒಡೆದ ಮನಸ್ಸಿಗೆ, ಘಾಸಿಗೊಂಡ ಅಂತಃಕರಣಕ್ಕೆ ಸೃಷ್ಟಿಯ ಕೊನೆಯ ಸೌಂದರ್ಯದಲ್ಲೂ ಕುರೂಪತೆ ಕಾಣ ಸುವಂತೆ ನೋಡುವ ಎಲ್ಲ ವಸ್ತುಗಳೂ ಹರಿದ, ಮುರಿದ, ಕೊಳೆತ ಬಿಂಬಗಳಂತೆ ಕಾಣತೊಡಗಿದವು ಆತನಿಗೆ. ಅತೀವ ಖುಷಿಯಲ್ಲಿ ತಾನೇ ತಂದು ತನ್ನ ಲಲಿತಳಿಗೆ ಪ್ರೀತಿಯಿಂದ ತೋರಿಸಿ ಗೋಡೆಗಾನಿಸಿದ್ದ ಅದೇ ಕ್ಯಾಲೆಂಡರ್; ಇದೀಗ ಅವನಿಗೆ ಅದು ಔಟ್ಡೇಟೆಡ್ ಕ್ಯಾಲೆಂಡರಿನಂತೆ ಕಂಡು ಗೋಡೆಯ ಮೇಲೆ ಕುಣಿಯುತ್ತಿರುವಂತೆ ಕಾಣತೊಡಗಿತು. ಅಲ್ಲಿಂದ ಎದ್ದು ನೇರ ಬೆಡ್ರೂಮಿಗೆ ಹೋಗಿ ಗಾದೆಯ ಮೇಲೆ ಒರಗಿದ. ತಲೆದಿಂಬಿನ ಪಕ್ಕದಲ್ಲಿ ತನ್ನ ಲಲಿತಳ ಒಳವಸ್ತ್ರವೊಂದು ಬಿದ್ದಿತ್ತು. ಎತ್ತಿಕೊಂಡ; ಬಿಸಾಕಿದ. ಗಾದೆಯ ಮೇಲೆ ಹೊರಳಾಡಿದ. ನಿದ್ರೆಯೂ ಇಲ್ಲಾ, ಎಂಥದೂ ಇಲ್ಲ. ವಿಚಿತ್ರ ತಳಮಳ, ಆಕ್ರೋಶ ಮತ್ತು ನೋವು ಅವನ ಅಂತರಂಗದಿಂದ ಪುಟಿದೇಳುತ್ತಿದ್ದವು. ಎದ್ದು ಅಂಗಿ ಸಿಕ್ಕಿಸಿಕೊಂಡು ಅಡಿಗೆಮನೆಗೆ ಹೋದ. ಬೇಳೆ ತುಂಬಿಸಿಟ್ಟ ಗಾಜಿನ ಭರಣಿಗಳು... ಬೂಸ್ಟು ತುಂಬಿ ವಿಚಿತ್ರ ಗಬ್ಬು ಹೊಮ್ಮಿಸುತ್ತಿದ್ದವು. ವಾಕರಿಕೆ ಬಂದಂತಾಗಿ ವಾಶ್ಬೆಸಿನ್ ಕಡೆಗೆ ನುಗ್ಗಿದ. ನೀರು ಆನ್ ಮಾಡಿದ್ದೇ ಅದರಿಂದ ಉದ್ದುದ್ದ ಉದ್ದುದ್ದ ಬೆಳ್ಳನೆಯ ಹುಳುಗಳು ಒಂದೊಂದೇ ಹೊರಬಂದಂತೆ ಅನ್ನಿಸಿ ಕೈಯನ್ನು ಕೊಡವಿಕೊಂಡು ಹೊರಹಾಲಿಗೆ ಬಂದು ನಿಂತುಕೊಂಡ. ಅಸಹನೀಯ ಆತಂಕ, ಮೈಯೆಲ್ಲಾ ಬೆವರು! ಎದ್ದುಬಂದು ಹೊರಬಾಗಿಲ ಕೊಂಡಿಹಾಕಿ ಟಿ.ವಿಯನ್ನು ಆನ್ ಮಾಡಿ ಒಂದರ ಮೇಲೊಂದರಂತೆ ಚಾನಲ್ಲುಗಳನ್ನು ಬದಲಿಸಿದ. ಎಲ್ಲಾ ಚಾನಲ್ಲುಗಳೂ ಬರೀ ಚುಕ್ಕಿಗಳು; ಚುಕ್ಕಿಗಳು. ಬಿಂಬವೂ ಇಲ್ಲ ಎಂಥದೂ ಇಲ್ಲ. ರಿಮೋಟನ್ನು ಗೋಡೆಗೆಸೆದು ಅದೇ ಸೋಫಾದ ಮೇಲೆ ಬಿದ್ದುಕೊಂಡ. ಉರುಳಿದ, ಹೊರಳಿದ, ನರಳಿದ. ಮೈಯೆಲ್ಲಾ ಪರಪರನೆಂದು ತರಚಿಕೊಳ್ಳತೊಡಗಿದ. ಅವನ ಮುಖದ ಮೇಲೆ ಮೂಡಿದ್ದ ಗೆರೆಗಳು ದೈತ್ಯ ಬೆಟ್ಟದಡಿಯ ಸೀಳುಕಣ ವೆಯೊಂದನ್ನು ನೆನಪಿಸುವಂತಿದ್ದವು. ರೂಪಕ ಮತ್ತು ರಮ್ಯತೆಯಿಂದ ವಂಚಿತವಾದ ನೀರಸ; ಪ್ರಕ್ಷುಬ್ಧ ಕವನವೊಂದು ಆತನ ಕಂಗಳಲ್ಲಿ ತಾಂಡವವಾಡುತ್ತಿತ್ತು. ನಿಗುರಿ ನಿಂತ ಕೂದಲು ಕಾಡು ಪ್ರಾಣ ಇಲ್ಲವೆ ಮಿಕವೊಂದನ್ನು ನೆನಪಿಸುವಂತೆ ಕೆದರಿದ್ದವು.
ತಾನೇ ಸಂಸಾರ ಹೂಡಲೆಂದು ನಿರ್ಮಿಸಿಕೊಂಡಿದ್ದ ಮನೆ. `ಎಷ್ಟು ಕಷ್ಟ ಪಟ್ಟು ತಾನು ಈ ಮನೆಯನ್ನು ಕಟ್ಟಿದ್ದೆ' ಎಂದು ಒಮ್ಮೆ ಮನೆಯನ್ನೆಲ್ಲಾ ವಿಚಿತ್ರವಾಗಿ ನೋಡತೊಡಗಿದ. ಗೋಡೆಯ ನಿಲುವುಗನ್ನಡಿಯ ಮೇಲೆ ತನ್ನನೇ ನೋಡಿಕೊಳುತ್ತ ಕಳೆದು ಹೋದ ನೆನಪುಗಳನ್ನು ಮರುಕಳುಹಿಸಲೆತ್ನಿಸಿದ. ಹೊರಗಿನಿಂದ ಯಾರೋ ಬೆಲ್ಲುಹಾಕಿದ ಸದ್ದು! ಗಡಬಡಿಸುತ್ತಾ ಎದ್ದುನಿಂತುಕೊಂಡವನೇ ಕನ್ನಡಿಯತ್ತ ನೋಡತೊಡಗಿದ. ಹಲ್ಕಿರಿದುಕೊಂಡು ಮುಖ ಮತ್ತು ಮೈಯ ವಸ್ತ್ರಗಳನ್ನೆಲ್ಲಾ ಸರಿ ಮಾಡಿಕೊಂಡು ಬಾಗಿಲ ಬಳಿ ಬಂದು ನಿಂತುಕೊಂಡ. ಬಾಗಿಲು ತೆಗೆಯುವುದೋ ಬೇಡವೋ ಎಂಬ ದ್ವಂದವೀಗ ಅವನ ಮನಸ್ಸಿನಲ್ಲಿ. ಹಿಂತಿರುಗಿ ನೋಡಿದ. ಮನಸ್ಸು ತಡೆಯಲಿಲ್ಲ. ಅವಾಕ್ಕಾಗಿ ಬಾಗಿಲನ್ನು ತೆಗೆದುಬಿಟ್ಟ. ಹೊರಗೆ ತನ್ನ ಹೆಂಡತಿ ಲಲೀ ಎವೆಯಿಕ್ಕದೇ ನೋಡುತ್ತಾ ನಿಂತಿರುವುದನ್ನು ಕಂಡ. ಅವಳ ಮುಖದಲ್ಲಿ ಮಂದಹಾಸ. ಆತನ ಮುಖದಲ್ಲೂ ಮಂದಹಾಸ. ಅವಳ ಕಂಗಳಿಂದ ಮಳೆತರುವ ಮೋಡಗಳ ಛಾಯೆ. ಗಲ್ಲದ ಮೇಲೆ ಸಾಬೂನು ನುಣುಪು. ತುಟಿಗಳೋ ವರ್ಣನಾತೀತ ಕಿಡಿಗೇಡಿಗಳು. ಗಿಳಿಮೂಗು, ಅದರದೇ ವಿಶಿಷ್ಠ ರೂಪುವಯ್ಯಾರಗಳಲ್ಲಿ. ನುಣುಪಾದ ಕತ್ತು, ರೇಶಿಮೆ ಸೀರೆ, ಕಾಲ್ಚೈನುಗಳನ್ನು ಧರಿಸಿದ್ದಳು. ಅವಳಿಷ್ಟದ ಪಿಂಕ್ ಬಣ್ಣದ ಬಳೆಗಳು. ತನ್ನ ಲಲೀ ತನಗೇ ಹೊಸಬಳೋ ಎಂಬ ಕುತೂಹಲ ಈಗ ಮಂಜುನಾಥನ ಮುಖದಲ್ಲಿ. ಈಗ ಲಲಿತಾಳ ಸರದಿ. ಅವಳೂ ಮಂಜುನಾಥನನ್ನೇ ನೋಡುತ್ತಿದ್ದಾಳೆ. ಮಂಜುನಾಥನ ಮುಖವೇ ಅವಳಿಗೆ ಕಾಣಿಸುತ್ತಿಲ್ಲ. ಎಲ್ಲೋ ಕ್ಷೀಣವಾದ ಎರಡು ಕಣ್ಣುಗಳು ಮಾತ್ರ ಬೆಕ್ಕಿನ ಕಣ್ಣಿನಂತೆ ಹೊಳೆಯುತ್ತಿವೆ. ಮುಖದ ತುಂಬೆಲ್ಲಾ ಬರೀ ಕೂದಲು. ಗಡ್ಡ, ಮೀಸೆ, ಹುಬ್ಬಿನ ಕೂದಲು, ತಲೆಗೂದಲು ಅಭಿನ್ನವಾಗಿ ಬೆಳೆದುಬಿಟ್ಟಿವೆ. ಹರಿದ ಅಂಗಿ, ಹರಿದ ಪ್ಯಾಂಟು ತೊಟ್ಟಿದ್ದಾನೆ. ಕೈ ಕಾಲುಗಳೆಲ್ಲಾ ಕ್ಷೀಣಗೊಂಡಿವೆ. ಸವಕಲು ಕಡ್ಡಿಯಂತಾಗಿದ್ದಾನೆ. ಲಲಿತಾಳಿಗೆ ಮಾತು ಹೊರಡುತ್ತಿಲ್ಲ. ಏನು ಮಾತನಾಡುವುದು ತೋಚುತ್ತಿಲ್ಲ. ಎವೆಯಿಕ್ಕದೇ ನೋಡುತ್ತಿದ್ದಾಳೆ. ಅವನೂ ನೋಡುತ್ತಿದ್ದಾನೆ. ಅವನ ಕಂಗಳಲ್ಲಿ ಮಾತ್ರ ಅವಳಿಗಾಗಿ ಅದೇ ಮುದ್ದು ಮತ್ತು ಪ್ರೀತಿ. ಅವಳ ಮನಸು ತಡೆಯದೆ ಕೇಳಿದಳು.
“ರೀ ಯಾಕ್ರಿ ಹೀಗಾಗಿದ್ದೀರಿ? ಗಡ್ಡ ಮೀಸೆ ತೆಗೆದಿಲ್ಲ. ಸಣಕಲು ಸಣಕಲಾಗಿ ಕಾಣ ಸುತ್ತಿದ್ದೀರಿ? ಸರಿಯಾಗಿ ಊಟ ಮಾಡುತ್ತಿದ್ದೀರೋ ಹೇಗೋ? ಒಂದು ವಾರ ನಾನು ಮನೆಯಲ್ಲಿಲ್ಲ ಅಂದರೆ ಇಷ್ಟೊಂದು ನಿರ್ಲಜ್ಜೆಯಾ? ಥೂ ಹೋಗ್ರಿ, ಒಳ್ಳೇ ಮಗೂ ಥರಾ, ಏನದು? ಮೊದಲು ಒಳಗೆ ನಡೀರಿ ಸ್ನಾನ ಮಾಡಿಸಿ ಬಟ್ಟೆ ಹಾಕ್ತೀನಿ. ನಿಮಗೊಂಚೂರೂ ನಾಚಿಕೇನೇ ಇಲ್ಲಾ? ಗಡ್ಡ ಕೆರಕೊಳ್ಳಿ... ಬನ್ನಿ, ನಾನೇ ಸಹಾಯ ಮಾಡ್ತೇನೆ. ಗಂಡಾ-ಹೆಂಡ್ತಿ ಮಧ್ಯೆ ನಾಲ್ಕು ಮಾತು ಬರ್ತವೆ, ನಾಲ್ಕು ಮಾತು ಹೋಗ್ತವೆ. ಅದಕ್ಕೇ ಇಷ್ಟೊಂದು ಅಸ್ತವ್ಯಸ್ತವಾಗಿಬಿಡೋದಾ? ಏನೋ ಹೆಣ್ಣುಕರುಳು, ತಾಳದೆ ಎರಡು ಮಾತು ಹೆಚ್ಚಿಗೆ ಆಡಿದೆ, ನೀವೇ ಬೈದು ತವರಿಗೆ ಅಟ್ಟಿದಿರಿ, ಕೊನೆಗೂ ನನ್ನ ತಪ್ಪು ನನಗೆ ಅರಿವಾಗಿ ಇಗೋ ಓಡಿಬಂದಿದ್ದೇನೆ, ನಿಮ್ಮನ್ನು ನೋಡಲು. ಕ್ಷಮಿಸಿಬಿಡಿ... ನನ್ನನ್ನು... ಒಳಗೆ ನಡಿಯಿರಿ. ನಿಮ್ಮನ್ನು ಈ ಅವತಾರದಲ್ಲಿ ನೋಡಲಿಕ್ಕಾಗುತ್ತಿಲ್ಲ ನನಗೆ”
“ಅಯ್ಯೋ ಹುಚ್ಚೀ, ನಂದೇ ತಪ್ಪು. ನಿಂದೇನೂ ತಪ್ಪಿಲ್ಲ. ನಾನು ಚನ್ನಾಗೇ ಇದ್ದೇನೆ. ಯಾಕೋ ಬೇಜಾರಾಯ್ತು, ನಿನ್ನನ್ನು ಬೈದಿದ್ದಕ್ಕೆ. ಅದಕ್ಕೇ ಒಂದಷ್ಟು ಎಲ್ಲಾ ಬಿಟ್ಟು ಹೀಗೆ ಕೂತಿದ್ದೇನೆ. ಈಗ ನೀನು ಬಂದೆಯಲ್ಲ, ನಾನೇ ಎಲ್ಲಾ ಸರೀ ಮಾಡ್ತೇನೆ ಬಿಡು, ನಿನಗ್ಯಾಕೆ ಕಷ್ಟ. ದಣಿದು ಬಂದಿರುತ್ತೀ, ನಡೀ ನೀನು ಮೊದಲು ವಿಶ್ರಾಂತಿ ತಗೋ. ನಾನೇ ಕಾಫಿ ಮಾಡಿ ತರ್ತೇನೆ. ನೀನು ಹೋದಮೇಲೆ ನನಗೆ ಎಷ್ಟು ನೋವಾಯ್ತು ಗೊತ್ತಾ? ಕೆಟ್ಟ ಕಾಲ ನಾನೂ ನಿನ್ನ ಮೇಲೆ ಹರಿಹಾಯಬಾರದಿತ್ತು. ಹೆಚ್ಚೇನು? ಬರೀ ಎರಡೇ ಎರಡು ಮಾತು ನಮ್ಮ ಮಧ್ಯದಲ್ಲಿ. `ಸಾಂಬಾರಿಗೆ ಎಷ್ಟೊಂದು ಖಾರ?' -ಇದೊಂದು ಪ್ರಶ್ನೆಯೇ ನಾವಿಬ್ಬರು ಜಗಳವಾಡಲು. ಕೆಲವೊಮ್ಮೆ ಚಿಕ್ಕ ಸಂಗತಿಗಳೂ ಎಷ್ಟೊಂದು ದೊಡ್ಡ ನೋವು ತಂದುಬಿಡುತ್ತವಲ್ಲ? ಜೀವನದ ಎಲ್ಲ ಸುಖಗಳು ಬರೀ ಒಂದು ‘ಕಾರಣದಲ್ಲಿ’ ಕಳೆದುಹೋಗುತ್ತವಲ್ಲ. ಎಷ್ಟು ಬೇಜಾರಾಯ್ತು ಗೊತ್ತಾ? ಕ್ಷಮಿಸಿಬಿಡು ಲಲೀ ನನ್ನನ್ನ. ಏನೋ ಅಂದುಬಿಟ್ಟೆ. ಸಿಟ್ಟಿನ ಕೈಯಲ್ಲಿ ಮನಸು ಕೊಡಬಾರದು ಅನ್ನುತ್ತಾರೆ. ಸನ್ನಿವೇಶದ ಕೈಯಲ್ಲಿ ಸಿಕ್ಕ ಮನಸ್ಸು, ಮನಸ್ಸಿನ ಕೈಯಲ್ಲಿ ಸಿಕ್ಕ ಸಿಟ್ಟು, ಸಿಟ್ಟಿನಲ್ಲಿ ಹೊರಹೊಮ್ಮಿದ ಮಾತು... ಯಾವುದರ ಕೈಯಲ್ಲಿ ಯಾವುದು? ದೇವರ ಕೈಯಲ್ಲಿ ಬದುಕು. ಯಾವುದು ಸತ್ಯ, ಯಾವುದು ಮಿಥ್ಯ. ನಿಜಕ್ಕೂ ನಾವೆಲ್ಲಾ ದೇವರ ಕೈಲಾಡುವ ಬೊಂಬೆಗಳಾ? ಸುಳ್ಳು! ಶತಸುಳ್ಳು! ಪ್ರಶ್ನೆಗಳಲ್ಲಿ ಪ್ರಶ್ನೆ? ಉತ್ತರದಲ್ಲಿ ಉತ್ತರ? ನಂಬಿಕೆ, ವಿಶ್ವಾಸ, ಪ್ರೀತಿ -ಇವುಗಳ ಕೈಯಲ್ಲಿ ಆಡುವವರು ನಾವು? ಯಾರು ದೇವರು? ಪ್ರಶ್ನೆಗಳೂ ಕೆಲವೊಮ್ಮೆ ಇರಿದುಬಿಡುವ ಚೂರಿಗಳಾಗುತ್ತವಲ್ಲ. ಪ್ರಶ್ನೆಗಳು ಬೇಡ. ಪ್ರಶ್ನೆಗಳಿಂದ ಪ್ರಶ್ನೆಗಳೇ ಹುಟ್ಟುವುದು. ಒಗಟು! ಇದೊಂದು ಒಗಟು... ದೊಡ್ಡದಾದ ಒಗಟು! ಈ ಬದುಕು! ಒಂದು ಒಗಟು! ಒಡೆದರೆ ಮಾತ್ರ ಬದುಕಿಗೆ ಅರ್ಥ, ಬಣ್ಣ. ನಾವಿನ್ನು ಎಂದೂ ಜಗಳವಾಡುವುದು ಬೇಡ. ನಾನು ನಿನ್ನನ್ನು ಎಂದೂ ಜರಿಯುವುದಿಲ್ಲ. ಸಾಂಬಾರಿಗೆ ಹುಳಿ, ಖಾರ, ಉಪ್ಪು. ಮನಸ್ಸಿಗೆ ನೋವು, ಸಂಕಟ, ಪ್ರೀತಿ. ಆಹಾ! ಎಷ್ಟೊಂದು ಅರ್ಥ. ಎಷ್ಟೊಂದು ದ್ವಂದ್ವ. ಹೆಕ್ಕಿದಷ್ಟೂ ಬದುಕು ಕ್ಲಿಷ್ಟ ಮತ್ತೂ ಸರಳ”
“ಅಯ್ಯೋ! ಹೋಗಲಿ ಬಿಡಿ, ನಂದೇ ತಪ್ಪೆಂದುಕೊಳ್ಳಿ. ಒಳಗೆ ನಡಿಯಿರಿ!”
ಲಲಿತಾ ಮಂಜುನಾಥನ ಕೈ ಹಿಡಿದುಕೊಂಡು ಒಳನಡೆದಳು.
“ಅಯ್ಯೋ ಮಂಜೂ ಎಷ್ಟು ಗಲೀಜು ಮಾಡಿದ್ದೀಯೋ ಮನೆಯನ್ನು?”
“ನಡೀ ನೀನು ಮೊದಲು ಸ್ನಾನದ ಕೋಣೆಗೆ, ನಾನು ಮೊದಲು ಮನೆಯನ್ನು ಗುಡಿಸಿ ಸ್ವಚ್ಛ ಮಾಡ್ತೀನಿ”
ಮಂಜುನಾಥನನ್ನು ಸ್ನಾನದ ಕೋಣೆಗೆ ಕಳುಹಿಸಿದ ಲಲಿತಾ ಮನೆಯನ್ನೆಲ್ಲಾ ಸ್ವಚ್ಛವಾಗಿ ಗುಡಿಸಿ ತೊಳೆಯತೊಡಗಿದಳು.
ಇತ್ತ ಮಂಜುನಾಥ ಸ್ನಾನದ ಕೋಣೆಯಲ್ಲಿ ಮೈಯನ್ನೆಲ್ಲಾ ಉಜ್ಜಿ ಉಜ್ಜಿ ತೊಳೆದುಕೊಳ್ಳತೊಡಗಿದ. ಮನಸಿನ ಕೊಳೆ ತೊಳೆಯುವ ಔಷಧಿ ಅಂತೂ ತನ್ನ ಲಲೀ ಬಂದುಬಿಟ್ಟಳಲ್ಲಾ... ಎಂದುಕೊಂಡು ಒಳಗೊಳಗೆ ಖುಷಿಪಡುತ್ತಾನೆ ಮಂಜುನಾಥ. ಸೋಪು ಜಾರೀತು ಎಚ್ಚರ ಎನ್ನುತ್ತಿದೆ ಮನಸ್ಸು. ಮೈ-ಮನಗಳನ್ನೆಲ್ಲಾ ಉಜ್ಜಿ ಉಜ್ಜಿ ತೊಳೆದುಕೊಂಡು ಹೊರಬಂದ ಮಂಜುನಾಥನ ಮನಸ್ಸಿಗೀಗ ಏನೋ ನಿರಾಳ. ಜಡಗೊಂಡ, ಜಿಡ್ಡುಗಟ್ಟಿದ ಮನಸ್ಸು ಲಲಿಯ ಒಂದೇ ಒಂದು ಮಾತಿನಲ್ಲಿ ಕರಗಿ ನೀರಾದ ಅನುಭವ. ಎಲ್ಲಿದ್ದಾನೆ ದೇವರು? ಲಲಿಯ ಸೋಲಿನಲ್ಲಿ, ಲಲಿಯ ಪ್ರೀತಿಯಲ್ಲಿ. `ಒಂದು ಕ್ಷಣಕ್ಕೆ, ಒಂದೇ ಒಂದು ಕ್ಷಣಕ್ಕೆ ಎಷ್ಟು ಶಕ್ತಿಯಿಟ್ಟಿದ್ದಾನೆ ಆ ದೇವರು' -ಖುಷಿಪಡುತ್ತಾನೆ ಮಂಜುನಾಥ. ಹೊಸದಾಗಿ ಮದುವೆಯಾಗಿ ಗೃಹಪ್ರವೇಶ ಮಾಡಿದ್ದಾಗ ಹೊಳೆಯುತ್ತಿದ್ದ ಆ ಅದೇ ಮನೆ; ಇದೀಗ ಲಲಿತಾಳ ಕೈತಾಕಿ ಮತ್ತೆ ಫಳಫಳನೆಂದು ಹೊಳೆಯುತ್ತಿದೆ. ಅಮೂರ್ತನ ಮುಂದೆ ಮೂರ್ತರೂಪದ ವಸ್ತುಗಳೆಲ್ಲಾ ಎಷ್ಟೊಂದು ಬೇಗ ಬದಲಾಗಿಬಿಡುತ್ತವಲ್ಲಾ? ಎಂದುಕೊಳ್ಳುತ್ತಾ ಮಂಜುನಾಥ ಮತ್ತಷ್ಟು ಹುಮ್ಮಸ್ಸಿಗೊಳಗಾಗುತ್ತಾನೆ. ತನ್ನ ಲಲೀ ಅಡಿಗೆ ಮನೆಯಲ್ಲಿ ತನಗಾಗಿ ಏನೋ ಮಾಡುತ್ತಿರುವ ಸಪ್ಪಳ. ಒಂದುಕ್ಷಣ ಮುಖವನ್ನು ಮುಟ್ಟಿ ನೋಡಿಕೊಳ್ಳುತ್ತಾನೆ. ಅಯ್ಯೋ ನನ್ನ ಮರವಿಗೆ ಎಂದು ತನ್ನನ್ನು ತಾನೇ ಜರಿದುಕೊಂಡು, ಗಡ್ಡಕೆರೆದುಕೊಳ್ಳಲೆಂದು ಶೇವಿಂಗ್ ಸೆಟ್ಟಿಗಾಗಿ ಹುಡುಕಾಡುತ್ತಾನೆ. ಕುಳಿತುಕೊಂಡು ಗಡ್ಡವನ್ನು ಪರಪರನೆಂದು ಕೆರೆದುಕೊಳ್ಳುತ್ತಾನೆ. ಎಲ್ಲಿ; ತನ್ನ ಲಲೀ ಅಡಿಗೆ ಮಾಡಿ ಮುಗಿಸುವಷ್ಟರಲ್ಲಿ ತಾನು ತಯಾರಾಗಿಬಿಡಬೇಕು –ಮತ್ತೆ ಹೊಸ ಮನುಷ್ಯನಂತೆ.
ವಾರದಿಂದ ಕೆಲಸಕ್ಕೆ ಹೋಗಲಿಲ್ಲ. ಆಫೀಸಿನ ಕೆಲಸಕಾರ್ಯಗಳು ಎಲ್ಲೆಲ್ಲಿ ಬಿದ್ದಿದ್ದಾವೋ? ಆಲೋಚನೆಗಳು ಮತ್ತೆ ಅವನನ್ನು ಮುತ್ತಿಕೊಳ್ಳುತ್ತಿವೆ. ಬ್ಯಾಂಕಿನ ಮ್ಯಾನೇಜರನಾದ ತಾನೇ ಹೀಗೆ ಬೇಜವಾಬ್ದಾರನಾದರೆ ತನ್ನ ಕೈಕೆಳಗಿನ ಕೆಲಸಗಾರರ ಗತಿಯೇನು? ತಾನೇ ನೆಟ್ಟಗಿಲ್ಲದಿದ್ದರೆ ಅವರಾದರೂ ಶ್ರದ್ಧೆವಹಿಸಿ ಹೇಗೆ ದುಡಿದಾರು? `ಕಳೆದ ವಾರವೊಂದರಿಂದ ತಾನು ಕರ್ತವ್ಯದಿಂದ, ಸಂದರ್ಭದಿಂದ ವಿಮುಕ್ತನಾಗಿ ಗಾಳಿಯೊಟ್ಟಿಗೆ ಸಾಗುವ ಧೂಳಿನಂತೆ ವ್ಯರ್ಥ ಕಾಲಹರಣ ಮಾಡುತ್ತಿರುವೆ... ಮನಸ್ಸಿನ ಸುಖ-ದುಃಖಗಳು ನಮ್ಮ ಒಟ್ಟು ಬದುಕನ್ನೇ ಅಲ್ಲಾಡಿಸಿಬಿಡಬಹುದು ಅಲ್ವಾ?', ಎಂದವನೇ ಮತ್ತಷ್ಟು ಜೋರಾಗಿ ಗಡ್ಡವನ್ನು ಕೆರೆದುಕೊಳ್ಳತೊಡಗಿದ. ಗಲ್ಲದ ಮೇಲಿನ ಮಚ್ಚೆಗೆ ಬ್ಲೇಡು ತಾಕಿ ರಕ್ತ ಹೊರಚಿಮ್ಮಿತು. ಭಯದಲ್ಲಿ ಮತ್ತೆ ಮತ್ತೆ ಕ್ರೀಮನ್ನು ತೀಡಿಕೊಳ್ಳತೊಡಗಿದ. ಎಷ್ಟು ತೀಡಿದರೂ ರಕ್ತ ನಿಲ್ಲಲಿಲ್ಲ. ಕ್ರೀಮೆಲ್ಲಾ ಕೆಂಪುಕೆಂಪಗಾಗತೊಡಗಿತು. ಗಾಬರಿಯಲ್ಲಿ ಮುಖವನ್ನು ತೊಳೆದುಕೊಳ್ಳತೊಡಗಿದ. ಮುಖವೆಲ್ಲಾ ಬೆಳ್ಳಬೆಳ್ಳಗೆ ಹೊಳೆಯತೊಡಗಿತ್ತು. ಆದರೆ ರಕ್ತ ಮಾತ್ರ ನಿಲ್ಲಲಿಲ್ಲ. ವಿಚಿತ್ರ ತಳಮಳದಲ್ಲಿ ಗಾಯವಾಗಿದ್ದ ಜಾಗಕ್ಕೆ ಮುಲಾಮಿನಿಂದ ಹಚ್ಚಿಕೊಳ್ಳತೊಡಗಿದ. ಈ ಅವತಾರದಲ್ಲಿ ಲಲೀ ತನ್ನನ್ನು ನೋಡಿಬಿಟ್ಟರೆ ಖಂಡಿತಾ ಬಯ್ಯುತ್ತಾಳೆ –ಎಂದುಕೊಂಡವನೇ ಮತ್ತೆ ಮುಲಾಮನ್ನು ತೀಡಿಕೊಳ್ಳತೊಡಗಿದ. ಕೊನೆಗೂ ರಕ್ತ ಸೋರುವುದು ನಿಂತಿತು. ಮುಖದ ಮೇಲಿನ ಮುಲಾಮು ಕಿಲಕಿಲ ನಕ್ಕಂತೆನ್ನಿಸಿ, ಮುಖವನ್ನು ಕಿವುಚಿದ. ಏನೂ ಆಗೇ ಇಲ್ಲ ಎನ್ನುವಂತೆ ಮಂಜುನಾಥ ಹೊರಗಿನ ಹಾಲಿಗೆ ಬಂದು ಕುಳಿತುಕೊಂಡ; ಅಂತೂ ತನ್ನ ಲಲೀ ತನ್ನನ್ನು ನೋಡಲು ಬಂದುಬಿಟ್ಟಳಲ್ಲಾ ಎಂಬ ಖುಷಿ ತುಂಬಿಕೊಂಡ ಆತನ ಮುಖದಲ್ಲಿ ತುಸು ಮಂದಹಾಸವೂ ಅರಳಿತ್ತು! ಕಿಟಕಿಯಲ್ಲಿ ಎಂದೋ ಇಟ್ಟಿದ್ದ ವಿಸ್ಕಿಯ ಬಾಟಲು ತನ್ನನ್ನು ಆಸೆಗಣ್ಣಿನಿಂದ ನೋಡುತ್ತಿದೆಯೆನ್ನಿಸಿ ಅದನ್ನು ಎತ್ತಿ ಟಿಫಾಯಿಯ ಮೇಲಿಟ್ಟ. “ಲಲೀ, ಒಳ್ಳೇ ಅಡಿಗೆ ಮಾಡು ಲಲೀ. ನನಗ್ಯಾಕೋ ಇಂದು ತುಂಬಾ ಖುಷಿಯಾಗಿದೆ. ನಿನಗೆ ಬೇಸರವಾಗದಿದ್ದರೆ ಒಂದಷ್ಟು ವಿಸ್ಕಿ ತಗೋಬೇಕು ಅನ್ನಿಸ್ತಿದೆ ನನಗೆ” -ಎಂದು ಲಲಿತಾಳಿಗೆ ಕೇಳುವಂತೆ ಜೋರಾಗಿಯೇ ಅಂದ.
“ಅಡಿಗೆ ರೆಡಿ ಮಾಡ್ತಿದೀನಿ, ಇಬ್ಬರೂ ಸೇರಿಯೇ ಉಣ್ಣೋಣ, ನೀವು ಬೇಗ ಕುಡಿದು ಮುಗಿಸಿ. ಹಾಂ, ಸ್ವಲ್ಪಾನೇ... ಎರಡೇ ಎರಡು ಪೆಗ್ಗು”
“ಆಯ್ತು ಲಲೀ, ನಿನ್ನ ಮಾತು ಮೀರುವುದೇ? ಎರಡೇ ಎರಡು ಪೆಗ್ಗು” ಎಂದವನೇ ಬಾಟಲಿಯ ಬಾಯಿತೆಗೆದು ವಿಸ್ಕಿಯನ್ನು ಗ್ಲಾಸಿಗೆ ತುಂಬಿಸಿಕೊಂಡ. ಒಂದೇ ಗುಟುಕಿಗೆ ಗ್ಲಾಸನ್ನು ಪೂರ್ತಿಯಾಗಿ ಖಾಲಿಮಾಡಿ ಸಿಗರೇಟು ಅಂಟಿಸಿದ. ಹೊಗೆಯನ್ನು ತಿರುಗುವ ಫ್ಯಾನಿಗೆ ಸುರಳಿ ಸುರಳಿಯಾಗಿ ಬಿಟ್ಟ. ತಲೆ ಸುತ್ತತೊಡಗಿತು. ಮತ್ತೊಂದು ಪೆಗ್ಗಿಗಾಗಿ ವಿಸ್ಕಿಯ ಬಾಟಲಿಯತ್ತ ಕೈಹಾಕಿದ. ಕೊಳೆತ ಮಾಂಸದ ತುಂಡಿನಂತೆ ವಿಸ್ಕಿ ಘಾಟುಘಾಟಾಗಿ ನಾರುತ್ತಿತ್ತು. ಎಂದು ತಂದಿಟ್ಟಿದ್ದೋ ಎಂದು ತನ್ನನ್ನು ತಾನೇ ಹಳಿದುಕೊಂಡು ಮತ್ತೆ ಮುಖವನ್ನು ಕಿವುಚಿದ.
ಎದ್ದುಬಂದವನೇ ಕಿಟಕಿಗೆ ಕಣ್ಣಿಟ್ಟು ಆಕಾಶವನ್ನು ನೋಡತೊಡಗಿದ. ಸೂರ್ಯ ಹಗಲನ್ನು ಕೊಲ್ಲುವ ಹುನ್ನಾರದಲ್ಲಿದ್ದ. ಆಕಾಶದಿಂದ ಬರುತ್ತಿದ್ದ ವಿಚಿತ್ರವಾದ ಚೀತ್ಕಾರಗಳು ಅವನ ಕಿವಿಗೆ ಲಗ್ಗೆಯಿಡುವ ತಂತ್ರದಲ್ಲಿದ್ದವು. ಕೀರಲು ಧ್ವನಿಯಲ್ಲಿ ಗಾಳಿಯು ಬರ್ರನೆಂದು ಬೀಸುತ್ತಿತ್ತು. ಸಂಜೆಯ ಸಮಯವಾದ್ದರಿಂದ ಎಲ್ಲೆಂದರಲ್ಲಿ ದೇವರ ಸ್ತುತಿಗಳು... ಕೇಳಿಬರುತ್ತಿದ್ದವು. ಅತ್ತ ನಮಾಜಿನ ಸದ್ದು, ಇತ್ತ ಓಂ ನಮಃ ಶಿವಾಯಃ! ಮಂಜುನಾಥನಿಗೆ ಹೊರಜಗತ್ತಿನ ವಾತಾವರಣವು ಈಗ ಇನ್ನೂ ಅಸಹ್ಯವಾಗಿ ಕಾಣ ಸತೊಡಗಿತು. ಕಿಟಕಿಯನ್ನು ಮುಚ್ಚಿದ.
“ರೀ, ಊಟಕ್ಕೆ ರೆಡಿಯಾಗಿದೆ” -ಅಡುಗೆ ಮನೆಯಿಂದ ಲಲಿತಾಳ ಧ್ವನಿ.
“ಹಾಂ ಬಂದೆ” -ಮಂಜುನಾಥ ತಡವರಿಸುತ್ತಾ ಅಂದ.
“ಕುಡಿದದ್ದು ಆಯ್ತಾ?” -ಪ್ರಶ್ನಿಸಿದಳು.
“ಎಷ್ಟೊತ್ತು, ಎರಡೇ ಎರಡು ಪೆಗ್ಗು; ಆಯ್ತು”
`ಇನ್ನೊಂದು ಪೆಗ್ಗು ಕುಡಿದರೇನು ತನ್ನ ಲಲೀ ತನ್ನನ್ನು ಬಯ್ಯುತ್ತಾಳಾ?' ಎಂದುಕೊಂಡು ಮತ್ತೆ ವಿಸ್ಕಿ ಬಾಟಲಿಗೆ ಕೈಹಾಕಿದ.
“ಏನ್ರೀ, ಊಟಕ್ಕೆ ಹಚ್ಚಲಾ?”
“ಹಾಂ ಹಾಂ, ಎರಡೇ ನಿಮಿಷ”
ಇಡೀ ಬಾಟಲಿಯನ್ನೇ ಎತ್ತಿ ಗಟಗಟನೆಂದು ಕುಡಿದು ಬಾಟಲಿಯನ್ನು ಯಥಾವತ್ತಾಗಿ ಕಿಟಕಿಯಲ್ಲೇ ಇಟ್ಟ.
ಅದೇ ಸಮಯಕ್ಕೆ ಸರಿಯಾಗಿ ಒಂದೆರಡು ಬೆಕ್ಕುಗಳು ಅಡಿಗೆ ಮನೆಯಿಂದ ಪಾತ್ರೆಗಳನ್ನು ಚೆಲ್ಲುತ್ತಾ ಮೈಗಳನ್ನು ಪರಚಿಕೊಳ್ಳುತ್ತಾ ಹೊರಗಿನ ಹಾಲಿಗೆ ಓಡಿಬಂದವು.
ಗಾಬರಿಯಲ್ಲಿ ಮಂಜುನಾಥ, “ಲೇ ಲಲೀ, ಬೇಗ ಬಾರೇ, ಈ ಬೆಕ್ಕುಗಳದ್ದೊಂದು ಕಾಟ... ನನಗೆ” ಎಂದು ಕೂಗಿದ.
ಅಡಿಗೆ ಮನೆಯಿಂದ ಯಾವ ಉತ್ತರವೂ ಬರಲಿಲ್ಲ.
“ಲೇ ಲಲೀ, ಆಯ್ತೇನೇ?” ಮತ್ತೆ ಕಿರುಚಿದ
ಊಹೂಂ..
ಮತ್ತೆ ಯಾವ ಉತ್ತರವೂ ಬರಲಿಲ್ಲ.
ಇತ್ತ ಎರಡೂ ಬೆಕ್ಕುಗಳು ಮತ್ತೂ ಒಂದಷ್ಟು ಜೋರಾಗಿ ಮೈಕೈ ಪರಚಿಕೊಳ್ಳತೊಡಗಿದ್ದವು.
“ಲಲೀ, ಲೇ ಲಲೀ” –ಮತ್ತೆ ಜೋರಾಗಿ ಕಿರುಚಿದ.
ಉತ್ತರವಿಲ್ಲ.
ಎದ್ದು ಅಡಿಗೆ ಮನೆಗೆ ಹೋಗಿ ತನ್ನ ಲಲಿತಾಳಿಗಾಗಿ ಮಂಜುನಾಥ ಹುಡುಕಾಡತೊಡಗಿದ.
ಬೆಕ್ಕುಗಳು ಅಡಿಗೆ ಮನೆಯಲ್ಲಿನ ಸಾಮಾನುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದವು.
ಎಲ್ಲಿ ಹೋದಳಿವಳು ಎಂದು ಮಂಜುನಾಥ ಲಲಿತಾಳನ್ನು ಹುಡುಕಾಡತೊಡಗಿದ. ಅಡಿಗೆ ಮನೆಯಿಂದ ಸ್ನಾನದ ಮನೆಗೆ, ಸ್ನಾನದ ಮನೆಯಿಂದ ಬೆಡ್ರೂಮಿಗೆ, ಬೆಡ್ರೂಮಿನಿಂದ ಹಾಲಿಗೆ, ಹಾಲಿನಿಂದ ದೇವರಕೋಣೆಗೆ -ಅತ್ತಿಂದಿತ್ತ, ಇತ್ತಿಂದತ್ತ ಹುಚ್ಚನಂತೆ ತಿಕ್ಕಲು ತಿಕ್ಕಲಾಗಿ ಹುಡುಕಾಡತೊಡಗಿದ. ಹೊರಗಡೆ ಏನಾದರೂ ಹೋದಳೇ? ಎಂದು ಹಿಂದಿನ ಬಾಗಿಲು ತೆಗೆದು ವರಾಂಡಾಕ್ಕೆ ಬಂದು ನಿಂತು ನೋಡಿದ. ತನ್ನ ಲಲೀ ಎಲ್ಲಿ ಎಲ್ಲಿ ಎಂದು ವಿಚಿತ್ರ ಆವೇಶದಲ್ಲಿ ಕಿರುಚಾಡತೊಡಗಿದ.
ಅಷ್ಟರಲ್ಲಿ ಅದೇ ವರಾಂಡಾಕ್ಕೆ ಬರ್ರೆಂಬ ಸದ್ದಿನಲ್ಲಿ ಬಂದುನಿಂತುಕೊಂಡ ಆಂಬ್ಯುಲೆನ್ಸಿನಿಂದ ಏಳೆಂಟು ಜನ ವಾರ್ಡ್ಬಾಯ್ಗಳು ಚಂಗನೇ ಜಿಗಿದವರೇ ಮಂಜುನಾಥನನ್ನು ಹಿಡಿದು ಆಂಬ್ಯುಲೆನ್ಸಿನಲ್ಲಿ ಹಾಕಿದರು. ನಡುಗುತ್ತಿದ್ದ ಮಂಜುನಾಥನ ಕಿವಿಗಳಿಗೆ, “ಈ ಹುಚ್ಚನ ಸಲುವಾಗಿ ನಮಗೆ ಸಾಕಾಗಿಹೋಗಿದೆ. ಅಪಘಾತವೊಂದರಲ್ಲಿ ಇವನ ಹೆಂಡತಿ ತೀರಿದಳಂತೆ... ಇಂವ ಹೀಗಾದನಂತೆ...” ಎಂದು ಯಾರೋ ಆಡಿಕೊಳ್ಳುವ ಮಾತುಗಳು ಕೇಳಿಬಂದವು. ಮರುಕ್ಷಣ; ಮತ್ತೆ ಇವರು ತನಗೆ ಶಾಕ್ಟ್ರೀಟ್ಮೆಂಟ್ ಕೊಟ್ಟೇ ಕೊಡುತ್ತಾರೆಂಬ ಭಯದಲ್ಲಿ ಮಂಜುನಾಥ ಥರಥರ ನಡುಗತೊಡಗಿದವನೇ ಅದೇ ಉದ್ವೇಗದಲ್ಲಿ ಆಂಬುಲೆನ್ಸಿನ ಕಿಟಕಿಯಿಂದ ಹಾರಿ ದುರದುರನೆಂದು ರಸ್ತೆಗೊಂಟ ಓಡತೊಡಗಿದ!
ರವಿಶಂಕರ ಪಾಟೀಲ
ರವಿಶಂಕರ ಪಾಟೀಲ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ 1 ಜುಲೈ 1984ರಲ್ಲಿ ಜನಿಸಿದರು. ವೃತ್ತಿಯಿಂದ ದೈಹಿಕ ಶಿಕ್ಷಕರಾಗಿರುವ ಅವರು ಬರವಣಿಗೆಯಲ್ಲೂ ಹೆಚ್ಚಿನ ಆಸಕ್ತಿಹೊಂದಿದ್ದಾರೆ. ‘ದೃಷ್ಟಿಕೋನ’ ಎಂಬ ಕತಾ ಸಂಕಲನ ಪ್ರಕಟವಾಗಿದೆ. ಕತೆ, ಕವನ ಅವರ ಇಷ್ಟದ ಸಾಹಿತ್ಯ ಪ್ರಕಾರಗಳು.
More About Author