Poem

ಆತ್ಮ ಸಾರಥಿ 

ನಾನು ಹಡೆದ ಮಗುವ ತೆರದೆ
ಕವಿತೆ ತೊದಲನು ನುಡಿದಿದೆ
ನೋವ ಬಿಕ್ಕುಗಳಲ್ಲಿ ಎಂದೂ
ನನ್ನ ಕೈಯನು ಹಿಡಿದಿದೆ

ಮನದ ಮೂಲೆಯ ಆಸೆ ಮಲ್ಲಿಗೆ
ಕವಿತೆ ಸಾಲಲಿ ಘಮ್ಮಿಸಿ
ನಲಿವ ನಾಳೆಯ ಎಲ್ಲ ಕನಸನು
ಹೆಕ್ಕಿ ಪದದಲಿ ಜೋಡಿಸಿ

ಪೊರೆವ ಬಯಲದು ಕವಿತೆ ಎಂದೂ
ಭಾವಬೀಜವ ಬಿತ್ತಿದೆ...
ಭರವಸೆಯ ಟಿಸಿಲದು ಮೊಳಕೆಯೊಡೆಯುತ
ಚಿಗುರಿ ಮನದಲಿ ಹಬ್ಬಿದೆ

ಮಬ್ಬು ಬೆಳಕಲಿ ದಾರಿತೋರುವ
ಗುರುವಿನಂದದಿ ಕವಿತೆಯೂ
ಇದ್ದೂ ಇರದ ಮಂದಿ ನಡುವಲಿ
ಆತ್ಮ ಸಾರಥಿ ಕವಿತೆಯೂ

ವಿದ್ಯಾಶ್ರೀ ಅಡೂರ್
ಮುಂಡಾಜೆ

ವಿಡಿಯೋ
ವಿಡಿಯೋ

ವಿದ್ಯಾಶ್ರೀ ಅಡೂರ್

ಲೇಖಕಿ ವಿದ್ಯಾಶ್ರೀ ಅಡೂರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯವರು. ಬಿ.ಎ ಪದವೀಧರರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಸ್ವಯಂ ದೀಪ

More About Author