Story

ಆಸೆ ತೋರಿಸಿದರು..ಕಣ್ಣೀರು ಹಾಕಿಸಿದರು

ಕತೆಗಾರ, ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಆಸಕ್ತಿ ಕ್ಷೇತ್ರವಾಗಿದ್ದು, ಪ್ರಸ್ತುತ ಅವರು ಬರೆದಿರುವ ʻಆಸೆ ತೋರಿಸಿದರು..ಕಣ್ಣೀರು ಹಾಕಿಸಿದರು' ಕತೆ ನಿಮ್ಮ ಓದಿಗಾಗಿ...

ಸಚಿನ್ ತನ್ನ ಕೊನೆಯ ಹಂತದ ಇಂಜಿನಿಯರಿಂಗ್ ಪದವಿಗೆ ಬಂದನು. ಕಾಲೇಜಿನಲ್ಲಿ ಎಲ್ಲಾ ಪರೀಕ್ಷೆಗಳಲ್ಲೂ ಉತ್ತಮ ಅಂಕಗಳನ್ನು ಪಡೆದಿದ್ದನು. ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈತನನ್ನು ಒಂದು ವಸ್ತುವಿನ ಹಾಗೆ ಉಪಯೋಗಿಸಿಕೊಂಡು ಅವರದ್ದೇ ಆಟದ ಹಾಗೆ ಆಡುತ್ತಿದ್ದರು. ಸಚಿನ್ ಓದುತ್ತಿದ್ದ ಕಾಲೇಜಿನಲ್ಲಿ ಪ್ರತಿ ವರ್ಷ ಕಾಲೇಜು ಸಂಭ್ರಮವನ್ನು ಮಾಡುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಕ್ಕೆ ಸಚಿನ್ ನನ್ನು ಕರೆದು ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಹೇಳುತ್ತಿದ್ದರು. ಈತನು ಕೂಡ ಅವಕಾಶ ಸಿಗುತ್ತಿದೆ ಎಂಬ ಭಾವನೆಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಸಿದ್ಧತೆ ನಡೆಸುತ್ತಿದ್ದನು. ಕಾರ್ಯಕ್ರಮ ಕೊನೆಯ ಹಂತಕ್ಕೆ ಬರುವಷ್ಟರಲ್ಲಿ ಸಚಿನ್ ಹೆಸರು ಬದಲಾಯಿಸಿ ಬೇರೆಯವರ ಹೆಸರು ಹಾಕುತ್ತಿದ್ದರು. ಈ ಎಲ್ಲಾ ವಿಷಯಕ್ಕೆ ತಲೆಕೆಡಿಸಿಕೊಳ್ಳದೆ ತನ್ನದೇ ಆದ ಲೋಕದಲ್ಲಿ ಸಾಹಿತ್ಯ ಸೇವೆ ಮಾಡಿಕೊಂಡು ಕಾಲೇಜಿನಲ್ಲಿ ಕಾಲ ಕಳೆಯುತ್ತಿದ್ದ.

ಸಚಿನ್ ಕೊನೆಯ ವರ್ಷದ ಇಂಜಿನಿಯರಿಂಗ್ ಪದವಿ ಓದುತ್ತಿರುವ ಸಂದರ್ಭದಲ್ಲಿ ಕಾಲೇಜು ಉಸ್ತುವಾರಿ ಸಮಿತಿಯು ಕಾಲೇಜು ಸಂಭ್ರಮ ಮಾಡಲು ಆದೇಶ ಹೊರಡಿಸಿತು. ಈತನು ಕೂಡ ಕೊನೆಯ ವರ್ಷವಾದ ಕಾರಣ ನನ್ನ ಸಹಪಾಠಿಗಳು ನನಗೂ ಅವಕಾಶ ಮಾಡಿಕೊಡುತ್ತಾರೆ ಎಂದು ತನ್ನ ಮನದಲ್ಲಿ ಆಲೋಚನೆ ಮಾಡಿಕೊಂಡು, ಇರುವ ಕಾರ್ಯಕ್ರಮಗಳಿಗಾಗಿ ಸಿದ್ಧತೆಗಳನ್ನು ನಡೆಸಲು ಪ್ರಾರಂಭ ಮಾಡಿದ. ಕಾಲೇಜಿನಲ್ಲಿ ನಡೆಯುವ ಬೀದಿಗೆ ಕಾರ್ಯಕ್ರಮದಲ್ಲೂ ಕೂಡ ಅವಕಾಶ ಕೇಳಲೆಂದು ತನ್ನ ಕಾಲೇಜಿನ ಸ್ನೇಹಿತರಿಗೆ ಕರೆ ಮಾಡಿದನು. ಕಾಲೇಜು ಸಂಭ್ರಮದ ಬಗ್ಗೆ ಕಾಲೇಜಿನಲ್ಲಿ ಸೂಚನೆ ನೀಡಿದ ದಿನದಿಂದಲೂ ಕಾಲೇಜಿನ ಕೆಲಸ ಸ್ನೇಹಿತರು ಸಚಿನ್ ನ ಫೋನು ತೆಗೆಯುತ್ತಿರಲಿಲ್ಲ. ಈತನು ಕೂಡ ಯಾವುದಕ್ಕೂ ಯೋಚನೆ ಮಾಡಿದೆ ಅಂತಿಮ ವರ್ಷದಲ್ಲಿ ಇರುವ ವಿದ್ಯಾರ್ಥಿಗಳು ಅವಕಾಶ ಕೇಳಿದರೆ ಕೊಡಬಹುದು ಎಂಬುದನ್ನು ತನ್ನ ಮನದಲ್ಲಿ ಯೋಚನೆ ಮಾಡಿಕೊಂಡು ತನ್ನ ಸಮಯವನ್ನು ಸಾಹಿತ್ಯ ಪುಸ್ತಕ ಓದುತ್ತಾ ಕಳೆಯುತ್ತಿದ್ದ. ಹೀಗೆ ಕಾಲೇಜಿನ ಪಕ್ಕದಲ್ಲಿ ಇದ್ದ ಹಾಸ್ಟೆಲ್ ನಲ್ಲಿ ತನ್ನ ಕಾಲೇಜು ಜೀವನದೊಂದಿಗೆ ಹಾಸ್ಟೆಲ್ ಜೀವನವನ್ನು ಸಂತೋಷವಾಗಿ ಅನುಭವಿಸುತ್ತಿದ್ದನು.

ಒಂದು ದಿನ ತನ್ನ ಹಾಸ್ಟೆಲ್ನಲ್ಲಿ ಪುಸ್ತಕ ಓದಿಕೊಂಡು ಕುಳಿತಿದ್ದ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಮುಖ್ಯಸ್ಥ ಕರೆ ಮಾಡಿದ.

"ಹಲೋ ಬ್ರದರ್..." ಎಂದು ವಿದ್ಯಾರ್ಥಿಗಳ ಮುಖ್ಯಸ್ಥ ನಿಹಾಲ್ ಹೇಳಿದ.
"ಹೇಳಿ!, ಏನ್ ಅಪರೂಪಕ್ಕೆ ಕಾಲ್ ಮಾಡಿದ್ದೀರಾ" ಎಂದ.
"ಏನು ಇಲ್ಲ ಬ್ರದರ್, ಕಾಲೇಜು ಸಂಭ್ರಮ ಇದೆ. ಅದಕ್ಕೆ ಕರೆ ಮಾಡಿದೆ" ಇಂದು ಕಾಲೇಜು ಸಂಭ್ರಮದ ಬಗ್ಗೆ ಮಾಹಿತಿ ನೀಡಿದ.

"ನಾನೇನು ಮಾಡಬೇಕು" ಎಂದು ಸಂತೋಷದಿಂದ ಕೇಳಿದ.
"ಕಳೆದ ಬಾರಿ ಮಾಡಿದ ಹಾಗೆ, ಈ ಬಾರಿಯೂ ಕಾಲೇಜು ಕುರಿತು ಕಿರು ಚಿತ್ರ ಮಾಡಬೇಕು. ಆ ಕಿರು ಚಿತ್ರಕ್ಕೆ ಸುಂದರವಾದ ಚಿತ್ರಕಥೆಯನ್ನು ಬರೆದು ಕೊಡಿ" ಎಂದು ಹೇಳಿದ. "ಸರಿ ಬ್ರದರ್, ಬರೆದು ನಿಮಗೆ ಕರೆ ಮಾಡಿ ಹೇಳುವೆ" ಎಂದು ಹೇಳಿ ಕರೆ ಅಂತ್ಯಗೊಳಿಸಿದ.

ಕಾಲೇಜು ಕಾರ್ಯಕ್ರಮಕ್ಕಾಗಿ ಕಿರು ಚಿತ್ರಕ್ಕೆ ಚಿತ್ರಕಥೆ ಬರೆಯಲೆಂದು ಪೆನ್ನು ಮತ್ತು ಪೇಪರ್ ತೆಗೆದುಕೊಂಡು ತನ್ನ ಮಂಚದ ಮೇಲೆ ಕುಳಿತುಕೊಂಡ. ತನ್ನ ಮಂಚದ ಮೇಲೆ ಕುಳಿತುಕೊಂಡು ಕಾಲೇಜ ಜೀವನದ ಬಗ್ಗೆ ನೆನೆದುಕೊಂಡ. ಆತನಿಗೆ ಮೊದ-ಮೊದಲು ಕಾಲೇಜಿನಲ್ಲಿ ಪ್ರವೇಶ ಪಡೆದ ದಿನದಂದು ಅಷ್ಟೇನು ಅನುಭವ ಆಗಿರಲಿಲ್ಲ. ಈ ಕಥೆಯನ್ನು ನಾನು ಬರೆದರೆ ಯಾರಿಗೂ ಇಷ್ಟವಾಗಲ್ಲ ಎಂದು ತಿಳಿದು ತನ್ನ ಮೊಬೈಲ್ ತೆಗೆದುಕೊಂಡು ಎಲ್ಲಾ ಸ್ನೇಹಿತರಿಗೂ ಕರೆ ಮಾಡಲು ಆರಂಭಿಸಿದ. ಅವನ ಕರೆಯನ್ನು ಆ ಕ್ಷಣಕ್ಕೆ ಯಾರು ಸ್ವೀಕರಿಸಲಿಲ್ಲ. ಯಾರು ಕರೆ ಸ್ವೀಕರಿಸಲಿಲ್ಲ ಎಂದು ಪಕ್ಕದ ರೂಮಿನಲ್ಲಿ ಇರುವ ಉದಯನನ್ನು ಕರೆ ಮಾಡಿ ತನ್ನ ರೂಮಿಗೆ ಕರೆದ. ಕರೆದ ತಕ್ಷಣವೇ ಆತನು ಓಡೋಡಿ ಬಂದನು.

"ಲೋ ಉದಯ, ಕಾಲೇಜ್ ಬಗ್ಗೆ ಒಂದು ಶಾರ್ಟ್ ಮೂವಿ ಮಾಡಬೇಕಂತೆ. ನಿಮ್ ಕ್ಲಾಸ್ ಅಲ್ಲಿ ಏನಾದ್ರೂ ಇಂಟರೆಸ್ಟಿAಗ್ ಹಾಗೆ ನಡೆದಿರೋ ಯಾವುದಾದರೂ ಕಥೆ ಇದ್ರೆ ಹೇಳು" ಎಂದರು."ಬ್ರದರ್, ನಮ್ದು ಸೇಮ್ ನಿಮ್ಮ ಹಾಗೆ ಯಾವ ರೀತಿ ಇನ್ನು ಕಥೆ ಇಲ್ಲ. ನಮ್ ಕ್ಲಾಸ್ ಅಲ್ಲಿ ಏನು ನಡೆಯೋದೇ ಇಲ್ಲ ಅಂತೀನಿ" ಎಂದು ನಗುತ್ತಾ ಉತ್ತರ ನೀಡಿದ.

"ಮತ್ತೆ, ಕಿರು ಚಿತ್ರಕ್ಕೆ ಯಾವ ರೀತಿ ಕಥೆ ಬರೆಯೋದು" ತಲೆ ಮೇಲೆ ಕೈ ಇಟ್ಟುಕೊಂಡು ಕೇಳಿದ. "ನೋಡಿ ಬ್ರದರ್, ನೀವು ಕಥೆ ಬರೆಯೋರು ನಿಮಗೆ ಕಥೆ ಕಟ್ಟೋದು ನಾವು ಹೇಳ್ಕೊಡಕ್ ಆಗುತ್ತಾ. ನಿಮ್ಮ ಮೈಂಡ್ ಬರುತ್ತೆ ಚೆನ್ನಾಗಿರೋದು ಬರಿತಿರಿ ಬರೆಯಿರಿ" ಎಂದು ಹೇಳಿ ತನ್ನ ರೂಮಿಗೆ ಹೋದ.

ಸ್ವಲ್ಪ ಸಮಯದವರೆಗೆ ತನ್ನ ಮಂಚದ ಮೇಲೆ ಯೋಚನೆ ಮಾಡಿಕೊಂಡು ಕೂತುಕೊಂಡ. ಮನಸ್ಸಿಗೆ ಯಾವುದೇ ರೀತಿಯ ಯೋಚನೆ ಬರಲಿಲ್ಲ. ಈ ದಿನ ಕಥೆ ಬರೆದರೆ ಏನು ಉಪಯೋಗವಿಲ್ಲ ಎಂದು ತಿಳಿದು ಎಲ್ಲ ವಸ್ತುಗಳನ್ನು ತನ್ನ ಬ್ಯಾಗಿನಲ್ಲಿ ಹಾಕಿ ನಿದ್ದೆಗೆ ಜಾರಲು ಸಿದ್ಧ ಮಾಡಿಕೊಂಡ. ಆತನು ಎಷ್ಟೇ ಪ್ರಯತ್ನ ಮಾಡಿದರು ನಿದ್ದೆ ಬರಲಿಲ್ಲ. ಮತ್ತೆ ತನ್ನ ಬ್ಯಾಗಿನಿಂದ ಪೆನ್ ಮತ್ತು ಪೇಪರ್ ತೆಗೆದುಕೊಂಡು ಮನಸ್ಸಿಗೆ ಬಂದ ಕಥೆಯನ್ನು ಬರೆದ. ಕಥೆ ಬರೆಯುತ್ತಿರುವ ಸಂದರ್ಭದಲ್ಲಿ ಆತನಿಗೆ ಅನೇಕ ಘಟನೆಗಳು ನೆನಪಿಗೆ ಬಂತು. ಆ ಎಲ್ಲಾ ಘಟನೆಗಳನ್ನು ಉಪಯೋಗಿಸಿಕೊಂಡು ಒಂದು ಸುಂದರ ಕಥೆ ಕಾಲೇಜಿನ ಸಂಭ್ರಮಕ್ಕಾಗಿ ಬರೆದ. ಕಥೆ ಬರೆದು ಮುಗಿಯುವಷ್ಟರಲ್ಲಿ ಮಧ್ಯರಾತ್ರಿ ಮೂರು ಗಂಟೆಯಾಗಿತ್ತು. ಅಲ್ಲಿಯವರೆಗೂ ತನ್ನ ಕಾಲೇಜು ಕುರಿತು ಅನೇಕ ನೆನಪುಗಳನ್ನು ನೆನೆದುಕೊಂಡು ಕಣ್ಣಂಚಿನಲ್ಲಿ ಸ್ವಲ್ಪ ಕಣ್ಣೀರು ಹಾಕಿಕೊಂಡು ಕಥೆ ಬರೆದು ಒಂದು ಸುಂದರ ಚಿತ್ರಕಥೆ ಆಯಾಮ ನೀಡಿ ತನ್ನ ಎಲ್ಲಾ ವಸ್ತುಗಳನ್ನು ಮತ್ತೆ ಬ್ಯಾಗಿನ ಒಳಗೆ ಹಾಕಿ ನಿದ್ದೆಗೆ ಜಾರಿದ.

ಮಧ್ಯರಾತ್ರಿವರೆಗೂ ಕಥೆ ಬರೆದ ಪರಿಣಾಮ ಸಚಿನ್ ಗೆ ಸರಿಯಾಗಿ ನಿದ್ದೆ ಬರಲಿಲ್ಲ. ಬೆಳಗ್ಗೆ ಬೇಗ ಎದ್ದು ತನ್ನ ಮಂಚದ ಮೇಲೆ ಕುಳಿತಿದ್ದ. ಅಷ್ಟರಲ್ಲಿ ತನ್ನ ವಾಟ್ಸಪ್ ನಲ್ಲಿ ಒಂದು ಸಂದೇಶ ಬಂತು. ಅದು ಏನೆಂದರೆ ಎಲ್ಲರೂ ಸರಿಯಾಗಿ ಒಂಬತ್ತು ಗಂಟೆಗೆ ಲಾಗಿನ್ ಬಳಿ ಬನ್ನಿ ಎಂದು. ಕಾರಣವೇನೆಂದರೆ ಪ್ರಾಜೆಕ್ಟ್ ವರ್ಕ್ ತೆಗೆದುಕೊಂಡು ಕಾಲೇಜಿಗೆ ತೋರಿಸಲೆಂದು ಸಂದೇಶ ಹಾಕಿದ್ದರು. ಸಚಿನ್ ಇದ್ದ ಜಾಗದಿಂದ ಪ್ರಾಜೆಕ್ಟ್ ವರ್ಕ್ ನೀಡಿದ ಜಾಗಕ್ಕೂ ತುಂಬಾ ದೂರವಿತ್ತು. ಆ ದಿನ ಈತನ ಬಳಿ ಬೈಕ್ ಕೂಡ ಇರಲಿಲ್ಲ. ಹೀಗೆ ಮತ್ತೆ ತನ್ನ ಮೊಬೈಲ್ ನೋಡಿಕೊಂಡು ಕುಳಿತಿದ್ದ

ಸಂದರ್ಭದಲ್ಲಿ ಮತ್ತೊಂದು ಸಂದೇಶ ಬಂತು. ಸಚಿನ್ ನ ಸ್ನೇಹಿತೆ ತನು "ನೀವು ಯಾವುದರಲ್ಲಿ ಬರುವಿರಿ?" ಎಂದು ಕಳಿಸಿದ್ದಳು. ಆತನು"ಬಸ್ಸಿನಲ್ಲಿ ಬರುವ ವಿಳಾಸ ತಿಳಿಸಿ" ಎಂದು ಉತ್ತರ ನೀಡಿದ. ನಂತರ ಆಕೆ "ನೀವು ನಾನು ಹೇಳುವ ಜಾಗಕ್ಕೆ ಬನ್ನಿ, ಅಲ್ಲಿಂದ ನನ್ನ ಬೈಕಿನಲ್ಲಿ ಕರೆದುಕೊಂಡು ಹೋಗುವೆ" ಎಂದು ಮತ್ತೆ ಸಂದೇಶ ಕಳಿಸಿದಳು. ಆಕೆ ಕಳಿಸಿದ್ದ ವಿಳಾಸ ಸರಿಯಾಗಿ ಈತನಿಗೆ ತಿಳಿಯಲಿಲ್ಲ. 'ಈ ವಿಳಾಸ ನನಗೆ ಗೊತ್ತಿಲ್ಲ' ಎಂಬ ಉತ್ತರವನ್ನು ನೀಡಿದ. ಆಕೆ ಮತ್ತೆ ಸ್ವಲ್ಪ ಸಮಯ ಕಳೆದ ನಂತರ "ರಿಂಗ್ ರಸ್ತೆಯ ಬಳಿ ಬನ್ನಿ, ನಾನು ಅಲ್ಲಿಗೆ ಬರುವೆ, ಅಲ್ಲಿಂದ ಹೋಗೋಣ" ಎಂದು ಸಂದೇಶ ಕಳಿಸಿದಳು. ಈತನಿಗೆ ವಿಳಾಸ ತಿಳಿದಿದ್ದ ಕಾರಣ ಸರಿ ಎಂಬ ಉತ್ತರವನ್ನು ಕಳಿಸಿದ. ತನ್ನ ದಿನ ನಿತ್ಯದ ಕೆಲಸ ಮುಗಿಸಿ, ಹಾಸ್ಟೆಲ್ ನಲ್ಲಿ ನೀಡಿದ ತಿಂಡಿ ಮಾಡಿಕೊಂಡು ಕುಳಿತಿದ್ದ. ಇನ್ನೇನು ಹೊರಗೆ ಹೋಗಬೇಕು ಅಷ್ಟರಲ್ಲಿ ಆತನ ಗೆಳೆಯರು ಹಾಸ್ಟೆಲ್ ಗೆ ಬಂದರು. ಅವರಿಗೆ ಶುಭಾಶಯ ತಿಳಿಸಿ ಸಚಿನ ಸ್ನೇಹಿತ ತಿಳಿಸಿದ್ದ ವಿಳಾಸಕ್ಕೆ ನಡೆದುಕೊಂಡು ಹೋದ.

ಸಚಿನ್ ಹೆಜ್ಜೆ ಹಾಕಿಕೊಂಡು ರಿಂಗ್ ರಸ್ತೆಗೆ ಹೋಗುವ ಮೊದಲೆ ತನು ಆ ಜಾಗಕ್ಕೆ ಬಂದಿದ್ದಳು. ಈತನನ್ನು ತನ್ನ ಬೈಕಿನ ಹಿಂದೆ ಕೂರಿಸಿಕೊಂಡು ಪ್ರಾಜೆಕ್ಟ್ ವರ್ಕ್ ನೀಡಿದ ಜಾಗಕ್ಕೆ ಹೋದರು. ರಸ್ತೆಯ ಮಧ್ಯದಲ್ಲಿ ಎಲ್ಲರೂ ನಮ್ಮ ಜೊತೆ ಸೇರಿಕೊಳ್ಳುತ್ತಾರೆ ನಾವು ಡೈರಿ ಇರುತ್ತದೆ ಬಳಿ ಅವರನ್ನು ಸೇರಿಕೊಳ್ಳೋಣ ಎಂಬ ಮಾಹಿತಿಯನ್ನು ತನು ನೀಡಿದಳು. ಸರಿ ಎಂಬ ಉತ್ತರ ನೀಡಿ, ಮಾತುಗಳನ್ನು ಆರಂಭ ಮಾಡಿದರು. ರಸ್ತೆ ಉದ್ದಕ್ಕೂ ಅನೇಕ ಮಾಹಿತಿಗಳ ಬಗ್ಗೆ ಚರ್ಚೆ ಮಾಡಿ ಹೋಗುತ್ತಿದ್ದರು. ಕಾಲೇಜಿನ ವಿಷಯದ ಚರ್ಚೆ ಇನ್ನೇನು ಮುಗಿಯಬೇಕು ಅಷ್ಟರಲ್ಲಿ ಡೈರಿ ವೃತ್ತ ಬಂದೇ ಬಿಟ್ಟಿತು. ಸಚಿನ್ ಮತ್ತು ತನು ಅವರ ಸ್ನೇಹಿತರು ಬರೋವರೆಗೂ ಕಾಯೋಣ ಎಂದು ನಿಶ್ಚಯಿಸಿ ಡೈರಿ ವೃತ್ತದ ಬಳಿ ನಿಂತುಕೊಂಡರು. ತನು ತನ್ನ ಫೋನ್ ತೆಗೆದು ಕೊಂಡು ಎಲ್ಲರಿಗೂ ಕರೆ ಮಾಡಿದಳು. ಎಲ್ಲರೂ ಕೆಲವು ಕ್ಷಣ ಕಾಯಿರಿ ನಾವು ಬರುತ್ತೇವೆ ಎಂದರು. ಅವರೆಲ್ಲರಿಗೂ ಬೇಗ ಬನ್ನಿ ಎಂದು ಹೇಳಿ, ಮಾತುಗಳನ್ನು ಮತ್ತೆ ಪ್ರಾರಂಭ ಮಾಡಿದರು. ಅವರು ಮಾತನಾಡಿಕೊಂಡು ನಿಂತಿರುವ ಸಂದರ್ಭದಲ್ಲಿ ಉಳಿದ ಸದಸ್ಯರು ಬಂದು ಸೇರಿಕೊಂಡರು. ಸ್ವಲ್ಪ ಸಮಯದ ಬಳಿಕ ನಾಲ್ಕು ಜನ ಒಟ್ಟಿಗೆ ಪ್ರಾಜೆಕ್ಟ್ ವರ್ಕ್ ನೀಡಿದ ಲಾಗಿನ್ವೇರ್ ಜಾಗಕ್ಕೆ ಹೋದರು.

ಹೋಗಿದ್ದ ಜಾಗದಲ್ಲಿ ಪ್ರಾಜೆಕ್ಟ್ ಮಾಡುವ ಹುಡುಗರು ಆಗಲೇ ಬಂದಿದ್ದರು. ಎಲ್ಲರೂ ತಮ್ಮ ಬೈಕ್ ಪಾರ್ಕ್ ಮಾಡಿ ಒಳಗೆ ಹೋದರು. ಆ ಜಾಗದಲ್ಲಿ ಪ್ರಾಜೆಕ್ಟ್ ಮಾಡಿ ಅದರ ಬಗ್ಗೆ ಮಾಹಿತಿ ನೀಡಿದರು. ಸುಮಾರು ಎರಡು ಗಂಟೆಯ ಒಳಗೆ ಸಚಿನ್ ನ ಕಾಲೇಜಿನ ಎಲ್ಲಾ ಸ್ನೇಹಿತರು ಅವರವರ ಪ್ರಾಜೆಕ್ಟ್ ತೆಗೆದುಕೊಳ್ಳಲು ಬಂದಿದ್ದರು. ಸಚಿನ್ ಮತ್ತು ಆತನ ಮೂರು ಜನ ಸ್ನೇಹಿತರು ಪ್ರಾಜೆಕ್ಟ್ ನ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ತಮ್ಮ ತಮ್ಮ ಮನೆಗೆ ಹಿಂದಿರುಗಿದರು. ತನು ತನ್ನ ಬೈಕಿನಲ್ಲಿ ಸಚಿನ್ ಗೆ ಆತನ ಹಾಸ್ಟೆಲ್ ವರೆಗೆ ಬಿಟ್ಟಳು.

"ನೀವು ಈಗ ಎಲ್ಲಿಗೆ ಹೋಗುತ್ತಿರುವುದು" ಹಾಸ್ಟೆಲ್ ಮುಂದೆ ಬಂದು ಕೈಯಲ್ಲಿ ಪ್ರಾಜೆಕ್ಟ್ ಹಿಡಿದುಕೊಂಡು ಕೇಳಿದ. "ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲು" ಬೈಕ್ ಮೇಲೆ ಕುಳಿತು ಉತ್ತರ ನೀಡಿದಳು.

"ಈ ಸಲ ನನಗು ಅವಕಾಶ ಕೊಡುವಿರಾ" ಎಂದನು.
"ನೀವು ಇದ್ದೀರಾ, ನಾವು ಹೇಳಿದಾಗ ಬನ್ನಿ" ಎಂದು ಅಲ್ಲಿಂದ ಹಾಕಿ ಹೋದಳು.

ಸಚಿನ್ ತನ್ನ ಪ್ರಾಜೆಕ್ಟ್ ತೆಗೆದುಕೊಂಡು ಹೋಗಿ ತುಂಬಾ ಜೋಪಾನವಾಗಿ ಇದ್ದನು. ಊಟದ ಸಮಯವಾಗಿತ್ತು ತಟ್ಟೆ ಹಿಡಿದುಕೊಂಡು ಊಟದ ಹಾಲಿಗೆ ಹೋದನು.

ಊಟ ಮಾಡಿಕೊಂಡು ತನ್ನ ಮಂಚದ ಮೇಲೆ ಫೋನ್ ನೋಡಿಕೊಂಡು ಕುಳಿತಿದ್ದ ಕಾಲೇಜಿನ ಸ್ನೇಹಿತ ರಾಣಿ ಕರೆ ಮಾಡಿ "ಕಾಲೇಜಿನ ಬಗ್ಗೆ ಕಿರುಚಿತ್ರ ಮಾಡುವ ಮಾತುಕತೆ ನಡೆಸಲು ರವಿ ಸಿಗುತ್ತಾನೆ, ಆತನನ್ನು ಭೇಟಿ ಮಾಡು" ಎಂದು ಹೇಳಿ ಕರೆ ಅಂತ್ಯಗೊಳಿಸಿದಳು.

ಸಚಿನ್ ಕಾಲೇಜಿಗೆ ಹೋಗಿ ರವಿಯನ್ನು ಮಾತನಾಡಿಸಿಕೊಂಡು ಬರೋಣ ಎಂಬ ಆಲೋಚನೆಯನ್ನು ತನ್ನ ಮನದಲ್ಲಿ ಯೋಚಿಸಿ, ಸಿದ್ದವಾಗಿ ಕಾಲೇಜಿನ ಕಡೆ ಹೆಜ್ಜೆ ಹಾಕಿದ.

ರವಿ ಕಾಲೇಜಿನ ವೇದಿಕೆ ಹತ್ತಿರ ಕುಳಿತಿದ್ದ. ಆತನನ್ನು ನೋಡಿ ಸಚಿನ್ ಅವನು ಇರುವ ಜಾಗಕ್ಕೆ ಬಂದ.
"ಬ್ರದರ್, ಈ ಸಲ ಕಿರುಚಿತ್ರ ಸೂಪರ್ ಆಗಿ ಮಾಡೋಣ" ಎಂದನು.
"ಸರಿ ರವಿ, ನಾನು ಕೂಡ ಕಥೆ ಬರೆದಿರುವೆ" ರವಿಯ ಕೈಗೆ ತಾನು ಬರೆದಿರುವ ಕಥೆ ನೀಡಿದ.
ಸ್ವಲ್ಪ ಸಮಯ ಕಥೆ ಸಂಪೂರ್ಣವಾಗಿ ಓದಿದ, ಅಂತರ ಕಥೆಯಲ್ಲಿ ಏನೋ ಬದಲಾವಣೆ ಇಲ್ಲದ ಕಾರಣ "ಕಥೆ ಚೆನ್ನಾಗಿದೆ, ಶನಿವಾರ ಚಿತ್ರೀಕರಣ ಮಾಡೋಣ" ಎಂದು ಕತೆ ಬರೆದಿದ್ದ ಕಾಗದ ಹಿಂದೆ ನೀಡಿದ.
"ರವಿ, ಈ ಸಲ ಯಾವುದಾದರೂ ವೇದಿಕೆ ಕಾರ್ಯಕ್ರಮ ಇದ್ದರೆ ನನಗೂ ಹೇಳಿ".
"ಬ್ರದರ್, ಈ ಸಲ ನಿಮಗೂ ಅವಕಾಶ ಇದೆ. ಒಂದುದಲ್ಲಿ ನೀವು ಕೂಡ ಇದ್ದೀರಾ" ಎಂದನು.

ಸಚಿನ್ ಗೆ ಈ ಮಾತು ಕೇಳಿ ತುಂಬಾ ಸಂತೋಷವಾಯಿತು. ಕೆಲಸ ಮಯದವರೆಗೂ ಚಿತ್ರೀಕರಣದ ಬಗ್ಗೆ ಚರ್ಚೆ ಮಾಡಿ ತನ್ನ ಹಾಸ್ಟೆಲ್ ಕಡೆ ಹೆಜ್ಜೆ ಹಾಕಿದ.

ಸಂಜೆಯ ತಿಳಿ ಹೊತ್ತಿನಲ್ಲಿ ಕುಳಿತು ಕಥೆಗೆ ಬೇಕಾದ ಎಲ್ಲಾ ಜಾಗಗಳನ್ನು ಗುರುತು ಮಾಡಿಕೊಂಡ ನಂತರ ಆ ಜಾಗದಲ್ಲಿ ಯಾವ ರೀತಿ ಅಭಿನಯ ಮಾಡಿಸಬೇಕೆಂದು ಒಂದು ಚೀಟಿಯಲ್ಲಿ ಬರೆದುಕೊಂಡ. ಸ್ವಲ್ಪ ಹೊತ್ತು ಕಥೆಯನ್ನು ಓದಿ ಅದಕ್ಕೆ ಬೇಕಾದ ಬದಲಾವಣೆಗಳನ್ನು ಮಾಡಿಕೊಂಡ. ಅಷ್ಟರಲ್ಲಿ ಊಟದ ಸಮಯವಾಗಿತ್ತು ತಟ್ಟೆ ಹಿಡಿದು ಊಟದ ಹಾಲ್ ಕಡೆ ಹೆಜ್ಜೆ ಹಾಕಿದ.

ಮರುದಿನ ಮುಂಜಾನೆ ಬೇಗ ಎದ್ದು ದಿನಪತ್ರಿಕೆಯನ್ನು ಓದಿ, ನಂತರ ಮುಖ ತೊಳೆದು, ಹಾಸ್ಟೆಲ್ ನಲ್ಲಿ ನೀಡಿದ್ದ ತಿಂಡಿ ಮುಗಿಸಿ, ಸಿದ್ಧವಾಗಿ ಚಿತ್ರಿಕರಣ ಮಾಡಲೇ ಎಂದು ಕಾಲೇಜಿಗೆ ಹೋದ. ಈತ ಹೋಗುವ ಮುನ್ನವೇ ಮೂರು ನಾಲ್ಕು ಜನ ಆಗಲೇ ಬಂದಿದ್ದರು. ನಮಗೆ ಇನ್ನು ಹೆಚ್ಚಾದ ಜನ ಬೇಕಾದ ಕಾರಣ ಫೋನ್ ಮಾಡಿ ಕೆಲವು ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರಲು ಹೇಳಿದ. ಸ್ವಲ್ಪ ಸಮಯದ ನಂತರ ಎಲ್ಲರೂ ಕಾಲೇಜಿನ ಮುಖ್ಯ ದಾರದ ಬಳಿ ಬಂದರು. ಆತನಿಗೆ ಬೇಕಾಗುವ ಸ್ಥಳಗಳಲ್ಲಿ ತುಂಬಾ ಸುಂದರವಾಗಿ ಚಿತ್ರಿಕರಣ ಮಾಡಿದ. ಆತನು ಹೇಳಿಕೊಟ್ಟ ರೀತಿಯಲ್ಲಿ ಎಲ್ಲರೂ ಸುಂದರವಾಗಿ ಅಭಿನಯ ಮಾಡಿದರು. ಸುಮಾರು ಒಂದು ಗಂಟೆಯ ಚಿತ್ರೀಕರಣದ ನಂತರ ಸ್ವಲ್ಪ ಮಟ್ಟಿಗೆ ಒಂದು ಹಂತಕ್ಕೆ ಬಂತು. ಉಳಿದ ಭಾಗಗಳನ್ನು ನಾಳೆ ಮಾಡೋಣ ಎಂದು ನಿರ್ಧರಿಸಿ ಎಲ್ಲರೂ ತಮ್ಮ ತಮ್ಮ ಮನೆಯ ಕಡೆ ಹೋದರು. ಸಚಿನ್ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ ಹಾಸ್ಟೆಲಿಗೆ ಹೋದ.

ಮರುದಿನವೂ ಕೂಡ ಕಾಲೇಜಿನ ಆವರಣದಲ್ಲಿ ಸಚಿನ್ ಬರೆದಿರುವ ಕತೆಗೆ ಬೇಕಾದರೆ ಪ್ರೀತಿಯಲ್ಲಿ ಚಿತ್ರಕರಣ ಮಾಡಿ, ಕಿರು ಚಿತ್ರಕ್ಕೆ ಬೇಕಾದ ಎಲ್ಲ ದೃಶ್ಯಗಳನ್ನು ಸೆರೆಹಿಡಿದು ತುಂಬಾ ಸುಂದರವಾಗಿ ಸಂಕಲನ ಮಾಡಲೆಂದು ರವಿಯ ಕೈಗೆ ನೀಡಿದ. ಈ ದಿನದ ಚಿತ್ರೀಕರಣದಲ್ಲಿ ರವಿ ಭಾಗವಹಿಸಲಿಲ್ಲ ಕಾರಣವೇನೆಂದರೆ ಕಾಲೇಜಿನಲ್ಲಿ ಬೇರೆ ಕಾರ್ಯಕ್ರಮ ಇದ್ದ ಕಾರಣ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆತನು ಮತ್ತು ಆತನ ಸ್ನೇಹಿತರು ಹೋಗಿದ್ದರು. ರವಿ ಇಲ್ಲದಿದ್ದರೂ ಸಚಿನ್ ತುಂಬಾ ಸುಂದರವಾಗಿ ಚಿತ್ರೀಕರಣವನ್ನು ಮುಗಿಸಿದನು. ಚಿತ್ರೀಕರಣಕ್ಕೆ ಬೇಕಾಗಿರುವ ಹಿನ್ನೆಲೆ ಧ್ವನಿ ಯಾವ ರೀತಿಯಲ್ಲೂ ಹೊಂದಾಣಿಕೆ ಆಗುತ್ತಿರಲಿಲ್ಲ. ಕೊನೆಗೆ ರವಿಯ ಸ್ನೇಹಿತನ ಕೈಯಲ್ಲಿ ಧ್ವನಿ ನೀಡಿಸಿದನು. ಆ ಧೋನಿ ಸರಿ ಇಲ್ಲದ ಕಾರಣ ಬೇರೊಬ್ಬನ ಬಳಿ ಧ್ವನಿ ನೀಡಿ ಕಿರು ಚಿತ್ರವನ್ನು ಸಂಪೂರ್ಣವಾಗಿ ಮುಗಿಸಿ ಕಾಲೇಜಿಗೆ ನೀಡಲು ಸಿದ್ದರಾದರು.

ಕಾಲೇಜು ಸಂಭ್ರಮದ ದಿನ ಹತ್ತಿರ ಬರುವ ಸಂದರ್ಭದಲ್ಲಿ ಸಚಿನ್ ತನ್ನ ಗೆಳೆಯರಿಗೆ ಕರೆ ಮಾಡುತ್ತಿದ್ದರು ಆದರೆ ಯಾರು ಆತನ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಎಲ್ಲರೂ ನೃತ್ಯ ಕಲಿಯುವುದರಲ್ಲಿ ತುಂಬಾ ನಿರಂತರಾಗಿದ್ದಾರೆ ಎಂದು ಸುಮ್ಮನಾದ. ಇನ್ನೇನು ಕಾಲೇಜ್ ಸಂಭ್ರಮ ಎರಡು ದಿನ ಇದ್ದ ಹಾಗೆ ರಾಣಿ ಕರೆ ಮಾಡಿದಳು. ಈತನು ಕೂಡ ಆಕೆ ಕರೆಯನ್ನು ಸ್ವೀಕರಿಸಿ ನಗುತ್ತಾ ಮಾತನಾಡಿದ.

"ರಾಣಿ, ಹೇಗೆ ನಡೆದಿದೆ ತಯಾರಿ" ಎಂದನು.
"ಪರವಾಗಿಲ್ಲ ಕಣೋ, ಯುವ ನಡಿತಿದೆ. ಈ ಸಲ ಗೆಲ್ಲಬಹುದು ಎಂಬ ವಿಶ್ವಾಸವಿದೆ" ಎಂದಳು.
"ಅದೇ ನನಗೂ ಅವಕಾಶ ನೀಡುವಿರಿ ಎಂದು ಹೇಳಿದ್ದೀರಲ್ಲ ಅದರ ಕತೆ ಏನಾಯ್ತು" ಪ್ರಶ್ನೆಯನ್ನು ಕೇಳಿದ.

"ಲೋ..., ಉಳಿದಿರುವುದು ಒಂದೇ ಪಾತ್ರ ವಾಟ್ಸಪ್ ನಲ್ಲಿ ಫೋಟೋ ಕಳಿಸಿರುವೆ ಅದನ್ನು ಅದನ್ನು ನೋಡಿ ಮಾಡ್ತೀಯಾ ಅಂದ್ರೆ ಹೇಳು" ಫೋಟೋ ವಾಟ್ಸಪ್ ಮೂಲಕ ಕಳಿಸಿದಳು.

ಸಚಿನ್ ತನ್ನ ವಾಟ್ಸಪ್ ತೆರೆದು ಫೋಟೋ ನೋಡಿದ ಆ ಚಿತ್ರವಾಗಿತ್ತು. ಕೆಲವು ಯೋಚಿಸಿ "ಮಾಡ್ತೀನಿ, ನನಗೇನು ಪ್ರಾಬ್ಲಮ್ ಇಲ್ಲ" ಎಂದು ರಾಗ ಹೇಳಿದ. ಆಕೆ ಈತನಿಗೆ ಮಾಡಲು ಇಷ್ಟವಿಲ್ಲ ಎಂದು ತಿಳಿದು ಆ ಪಾತ್ರವನ್ನು ಸಚಿನ್ ಗೆ ನೀಡದೆ ಬೇರೆಯಾವರಿ ನೀಡಿದಳು. ಈ ವರ್ಷವೂ ಕೂಡ ಕಿರು ಚಿತ್ರ ಮಾಡುವುದು ಬಿಟ್ಟರೆ ಯಾವುದೇ ರೀತಿಯ ವೇದಿಕೆ ಕಾರ್ಯಕ್ರಮಕ್ಕೆ ಯಾವ ಕಾಲ ಸಿಗಲಿಲ್ಲ ಎಂದು ತನ್ನ ಮನದಲ್ಲಿ ತುಂಬಾ ನೊಂದುಕೊಂಡ. ಸ್ವಲ್ಪ ಹೊತ್ತಿನ ನಂತರ ಇನ್ನೊಬ್ಬಳು ಗೆಳತಿಗೆ ಕರೆ ಮಾಡಿ ಅವಕಾಶ ಕೇಳಿದರೆ ಆಕೆ ನೀಡಬಹುದು ಎಂದು ಯೋಚಿಸಿ ಆಕೆಗೆ ಕರೆ ಮಾಡುತ್ತಾನೆ.

"ಹಾಯ್! ಹೇಗೆ ನಡೆದಿದೆ ಎಲ್ಲ ಕೆಲಸಗಳು" ಎಂದನು.
"ಚೆನ್ನಾಗಿ ನಡೆದಿದೆ" ಆಕೆ ಉತ್ತರ ನೀಡಿದರು.
"ಅದೇ ನನಗೊಂದು ಅವಕಾಶ ಇದೆ ಅಂತ ಹೇಳಿದ್ರು ಏನಾದ್ರು ಇದಿಯಾ" ಬೇಸರದ ಧ್ವನಿಯಲ್ಲಿ ಕೇಳಿದ.
"ಇಲ್ಲ ರೀ..." ನಗುತ ಉತ್ತರ ನೀಡಿದಳು.
"ಯಾಕೆ" ಎಂದನು.

"ಅದು ಒಂದು ಕಲೆ ನಿಮಗೆ ಮಾಡಲು ಬರುತ್ತೆ ಅಂದ್ರೆ ತುಂಬಾ ನಗು ಬರುತ್ತೆ" ಎಂದು ಅವಮಾನಿಸುವ ಹಾಗೆ ಮಾತನಾಡಿದಳು.
ಆಕೆಯ ಮಾತಿಗೆ ತಲೆ ಕೆಡಿಸಿಕೊಳ್ಳದೆ ತನ್ನ ದಿನನಿತ್ಯದ ಕೆಲಸದ ಕಡೆ ಗಮನ ಹರಿಸಿದ. ಹಾಗೂ ಹೀಗೂ ಕಾಲೇಜಿನ ಸಂಭ್ರಮದ ದಿನ ಬಂದೇ ಬಿಟ್ಟಿತು.

ಆ ದಿನ ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಪುಗಳು ಧರಿಸಿ ಎಲ್ಲರೂ ಬರುವುದು ಒಂದು ವಿಶೇಷ. ಸಚಿನ್ ಮತ್ತು ಆತನ ಸ್ನೇಹಿತರು ಪಂಚೆ ಮತ್ತು ಕೂರ್ಥ ಧರಿಸಿಕೊಂಡು ಹೋಗೋಣ ಎಂದು ಯೋಚಿಸಿ ಅಂಗಡಿಗೆ ಹೋಗಿ ಹೊಸ ಹುಡುಕುಗಳನ್ನು ತೆಗೆದುಕೊಂಡು ಬಂದಿದ್ದರು. ವಿಶೇಶ ಉಡುಪಿಗೆ ಜೊತೆಯಲ್ಲಿ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮುಗಿಸಿ ಎಲ್ಲರೂ ನಿದ್ದೆಗೆ ಜಾರಿದರು. ಈತ ಮಾತ್ರ ಕಥೆ ಬರೆಯಬೇಕೆಂದು ತನ್ನ ಮಂಚದ ಮೇಲೆ ಕುಳಿತು ಕಥೆ ಬರೆಯಲು ಆರಂಭಿಸಿದ. ಮಧ್ಯರಾತ್ರಿವರೆಗೂ ಕುಳಿತು ಕಥೆ ಬರೆದು ಆನಂತರ ನಿದ್ದೆಗೆ ಜಾರಿದ.

ಮರುದಿನ ಬೆಳಗ್ಗೆ ಬೇಗ ಎದ್ದು ಹಾಸ್ಟೆಲ್ ನಲ್ಲಿ ನೀಡಿದ ತಿಂಡಿ ತಿಂದು ತನ್ನ ಮಂಚದ ಮೇಲೆ ಫೋನ್ ಉಪಯೋಗಿಸಿಕೊಂಡು ಹಾಗೆ ಮಲಗಿದ್ದ. ಕಾಲೇಜಿನಲ್ಲಿ ಕಾರ್ಯಕ್ರಮ ಇದ್ದದ್ದು ಮಧ್ಯಾನ ಒಂದು ಗಂಟೆಗೆ ಅಲ್ಲಿಯವರೆಗೂ ಯಾವುದೇ ಕೆಲಸವಿಲ್ಲದೆ ಎಲ್ಲರೂ ಒಂದಿಗೆ ಮಾತನಾಡುತ್ತಾ ಹಾಗೆ ಕುಳಿತುಕೊಂಡ. ಸಮಯ ಹತ್ತಿರ ಬರುತ್ತಿದ್ದಂತೆ ನಾನು ತಂದಿದ್ದ ಉಡುಪುಗಳನ್ನು ಧರಿಸಿಕೊಂಡು ಕಾಲೇಜಿನ ಕಡೆ ಹೆಜ್ಜೆ ಹಾಕಿದ.

ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿವಿಧ ಬಗೆಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು. ಕಾಲೇಜು ಒಂದು ತರಹ ಸ್ವರ್ಗ ಆಗಿತ್ತು. ಹುಡುಗಿಯರೆಲ್ಲ ಸೀರೆ ತೊಟ್ಟು ಹುಡುಗರನ್ನು ಕಣ್ಣಿನಲ್ಲಿ ಸೆಳೆಯುತ್ತಿದ್ದರು. ಕ್ಯಾಮೆರಾ ಕಣ್ಣುಗಳು ಎಲ್ಲರ ಚಿತ್ರಗಳನ್ನು ಸೆರೆಹಿಡಿಯುತ್ತಿತ್ತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಫೋನಿನಲ್ಲಿ ವಿವಿಧ ಬಗೆಯ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಸಚಿನ್ ಜೊತೆಯಿದ್ದ ಸ್ನೇಹಿತರು ಹುಡುಗಿಯರನ್ನು ನೋಡಿದ ತಕ್ಷಣ ಅವರ ಜೊತೆ ಹೋದರು. ಈತ ಮಾತ್ರ ಯಾರ ಜೊತೆಯಲ್ಲೂ ಹೋಗದೆ ಒಬ್ಬನೇ ಮುಂದೆ ಗೇಟ್ ನಿಂದ ಹಿಂದೆ ಗೇಟ್ ನವರೆಗೂ ಹುಚ್ಚನ ರೀತಿಯಲ್ಲಿ ಓಡಾಡುತ್ತಿದ್ದ. ಯಾರು ಕೂಡ ಈತನನ್ನು ಮಾತನಾಡಿಸುತ್ತಿರಲಿಲ್ಲ ಯಾಕೆಂದರೆ ಎಲ್ಲರೂ ಅವರದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಸಚಿನ್ ಯಾವುದೇ ವಿಷಯಕ್ಕೆ ತಲೆಕೆಡಿಸಿಕೊಳ್ಳದೆ ಸ್ವಲ್ಪ ಸಮಯ ಸಾಂಪ್ರದಾಯಿಕ ಉಡುಪನ್ನು ತೊಟ್ಟು ಕಾಲೇಜಿನಲ್ಲಿ ಖುಷಿಯಾಗಿ ಕಳೆದ ನಂತರ ಹಾಸ್ಟೆಲ್ ಗೆ ಹೋಗಿ ಬೇರೆ ಬಟ್ಟೆ ಧರಿಸಿಕೊಂಡು ಸಂಜೆಯ ಕಾರ್ಯಕ್ರಮವನ್ನು ನೋಡಲೆಂದು ವೇದಿಕೆ ಬಳಿ ಹೋದನು. ಎಲ್ಲ ಕಾರ್ಯಕ್ರಮವನ್ನು ತುಂಬಾ ಖುಷಿಯಿಂದ ಕಣ್ತುಂಬಿಕೊAಡು ಕಾರ್ಯಕ್ರಮ ಮುಗಿದ ನಂತರ ಹಾಸ್ಟೆಲ್ ಕಡೆ ಹೆಜ್ಜೆ ಹಾಕಿದ.

ಮರುದಿನವೂ ಕಾಲೇಜಿನಲ್ಲಿ ವಿಶೇಷವಾದ ನೃತ್ಯಗಳು ಇದ್ದವು. ಸಚಿನ್ ಮತ್ತು ಆತನ ಗೆಳೆಯರು ಕಾರ್ಯಕ್ರಮ ನೋಡಲೆಂದು ಸಿದ್ಧವಾಗಿ ಕಾಲೇಜಿನ ಕಡೆ ಹೆಜ್ಜೆ ಹಾಕಿದರು. ಕಾಲೇಜಿನ ವೇದಿಕೆಯಲ್ಲಿ ಅನೇಕ ವಿಭಿನ್ನ ಮತ್ತು ವಿಶೇಷವಾದ ನೃತ್ಯಗಳು ಪ್ರದರ್ಶನವಾದವು. ಗೆಳೆಯರೊಂದಿಗೆ ಸೇರಿಕೊಂಡು ತುಂಬಾ ಖುಷಿಯಿಂದ ಎಲ್ಲರೂ ಕಾರ್ಯಕ್ರಮವನ್ನು ನೋಡಿದ. ಕೊನೆಯಲ್ಲಿ ಈತನು ಕೂಡ ಡಿಜೆ ಹಾಡುಗಳಿಗೆ ನೃತ್ಯ ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ತುಂಬಾ ಖುಷಿ ಪಟ್ಟನು. ಕೊನೆಗೆ ಕಾಲೇಜ ಮುಂದೆ ನಿಂತು ಫೋಟೋ ತೆಗೆದುಕೊಳ್ಳುವುದರ ಮೂಲಕ ಕಾಲೇಜು ಸಂಭ್ರಮವನ್ನು ಮುಗಿಸಿದನು. ಹಾಗೂ ಹೀಗೂ ದುಃಖಗಳಲ್ಲಿ ಆ ವರ್ಷದ ಕಾಲೇಜು ಸಂಭ್ರಮವು ಮುಗಿಯಿತು.

ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.

ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.

ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ

More About Author