Poem

ಅಪೂರ್ಣ

ಬೆಳಕಿನ ದೋಣಿ
ತೇಲುತ್ತಿದೆ ನೋಡು
ಬಾನಲ್ಲಿ ನೀನು
'ಹೊಯ್ಯಾರೆ ಹೊಯ್ಯ'
ಹಾಡೋಣವೇನು
ನಾನೂ ನೀನೂ?

ಯಾರಿರಬಹುದು
ಅದರಲ್ಲಿ?
ನೋಡೋಣವೇನು
ಕಿಟಕಿಯಲ್ಲಿ?

ನಿಂತಲ್ಲೆ ಒಲೆಯುತ್ತಿದೆ
ಕಿವಿಯ ಲೋಲಾಕು
ತರೋಣವೇನು ಇಂದು
ಮತ್ತು ನಾಳೆ ಇನ್ನೊಂದು?

ಅರೆ!
ಅದು ಬಿಲ್ಲಂತೆ
ಬಾಗಿದ ಹಾಳೆ,
ಬೆಳಕು ಮೈಯಲಿ
ಬರೆಯೋಣವೇನು
ಕವಿತೆ ?

ನೋಡು ನೋಡು
ಅದೊಂದು ತಬಲಾ
ನುಡಿಸೋಣವೇನು
ತಿರಕಿಟ ತಕ
ತಕಿಟ ತಿರಕಿಟ?

ಬಾ ಅದೊಂದು
ಬೆಳಕಿನ ಬುಟ್ಟಿ
ಹೆಕ್ಕಿ ತುಂಬೋಣವೇನು
ಹೂವು ಚುಕ್ಕಿ?

ಇರುಳಿಡೀ
ನಡೆಯೋಣ
ಕೈಹಿಡಿದು ಅತ್ತ
ಅದೊಂದು ಬೆಳಕಿನ ರೆಕ್ಕೆ
ಹಾರೋಣವೇನು ಆಕಾಶಕ್ಕೆ?

ಹೇ .. ಅದು
ಮಾವಿನ ಹೋಳು
ಇನ್ನರ್ಧ ನಾಳೆ
ಕೂಡಿದರೆ ಇಡಿ.

ಕಿಟಕಿಯಲಿ
ಈಗಲೇ ನೋಡು ನೀನು.
ನಾಳೆ ಹಗಲಾಗುವುದು,
ಹಗಲಲಿ ಬಯಲಾಗುವುದು.

ಅಯ್ಯಯ್ಯ!
ಅದೊಂದು ಬೆಳಕಿನ
ಗೊರಟು
ಬಿತ್ತೋಣವೇನು ಅಂಗಳದಲ್ಲಿ
ಅದನು?

ಅಲ್ಲಲ್ಲ
ಅದೊಂದು ತೊಟ್ಟಿಲು
ಅದರೊಳಗೆ ನಗುತ್ತಿದೆ
ಪುಟ್ಟದೊಂದು ಮಗು.

ನೋಡೋಣವೇನು
ಕಿಟಕಿಯಲ್ಲಿ ಅರ್ಧವನು ಇಂದು?
"ಬೆಳದಿಂಗಳ ನೋಡ" - ಎಂದು
ನಾಳೆ ಹಾಡೋಣವೇನು?

ಕಾತ್ಯಾಯಿನಿ ಕುಂಜಿಬೆಟ್ಟು

ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹುಟ್ಟೂರು ಉಡುಪಿಯ ಕಾಪು ಬಳಿಯ ಕರಂದಾಡಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮುಂಬೈ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ “ವಿಶಾರದ' ಪದವಿ. 

ತುಳು ಕಾದಂಬರಿ 'ಕಬರ್ಗತ್ತಲೆ'ಗೆ ತುಳುಕೂಟ(ರಿ) ಉಡುಪಿಯ 'ಪಣಿಯಾಡಿ ಪ್ರಶಸ್ತಿ’,  ಕನ್ನಡ ಕಾದಂಬರಿ 'ತೊಗಲುಗೊಂಬೆ'ಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ' ಪ್ರಶಸ್ತಿ ಹಾಗೂ ಮೂಡಬಿದರೆಯ ವರ್ಧಮಾನ ಪ್ರತಿಷ್ಠಾನದ 'ಯುವ ವರ್ಧಮಾನ ಪ್ರಶಸ್ತಿ'; 'ಒಳದನಿಯ ಪಲುಕುಗಳು' ವಿಮರ್ಶಾಕೃತಿಗೆ ಕ.ಸಾ.ಪ. ಲೀಲಾವತಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ದ.ರಾ.ಬೇಂದ್ರೆ ಗ್ರಂಥ ಬಹುಮಾನ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ 'ಬಸವರಾಜ ಕಟ್ಟಿಮನಿ ಪ್ರಶಸ್ತಿ', 'ಮೂರು ನಾಟಕಗಳು' ಕೃತಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ 'ಅರಳು' ಪ್ರಶಸ್ತಿ; ನಿದ್ರಾನಗರಿ ಮಕ್ಕಳ ನಾಟಕಕ್ಕೆ ಉಡುಪಿ ರಥಬೀದಿ ಗೆಳೆಯರು “ಕೆದ್ಲಾಯ ಸ್ಮಾರಕ ಪ್ರಶಸ್ತಿ'....

ಪಳಕಳ ಸೀತಾರಾಮ ಭಟ್ಟರ ಸಮಗ್ರ ಕೃತಿಗಳ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ; ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 'ಗುಳಿಯಪ್ಪ' ಮಕ್ಕಳ ನಾಟಕಕ್ಕೆ ಪ್ರಥಮ ಬಹುಮಾನ (2016), 'ಪಗಡೆಹಾಸು' ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿಯ ಬಹುಮಾನ (2017) ಹಾಗೂ ರಾಜ್ಯ ಯುವ ಬರಹಗಾರರ ಒಕ್ಕೂಟದ ಒಂದನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷೆ (2018)ಯಾಗಿದ್ದರು. 

More About Author