Poem

ಆಗಸದಾಲಾಪ

ನಿಡಿಸುಯ್ದು
ನಿಟ್ಟಿಸುರ ರಾಗದಲಿ
ಭಾವ ಭಾರದ ನೋವಿನಲಿ
ಬಿಕ್ಕಳಿಸಿದ ನೋವು
ಗುಡುಗು ಸಿಡಿಲ ಜೊತೆಗೂಡಿ
ಗೊಳೋ ಎಂದು ಸುರಿಯಿತು ಕಣ್ಣೀರಧಾರೆ
ಆಗಸ ಮೊಗದ ಮೇಘ ಕಣ್ಣಿನಿಂದ

ಎನಿತು ಕಥೆಗಳ ಭಾರದಲಿ
ತಪ್ತ ಮನಗಳ ನೋವಲಿ
ಅಸಂಖ್ಯ ಅತೃಪ್ತ ಜೀವಗಳ ಎದೆಯಲಿ
ಎದೆಯಾಳದ ಭಾವವುಕ್ಕಿ
ಹಲವು ಕಣ್ಣೀರಧಾರೆ ಜೊತೆಯಾಗಿ
ನದಿಯಾಗುತಿದೆ

ಗದ್ಗದಿಸಿ ಕಾಲವೆಲ್ಲಾ
ದಳ್ಳಿಸುತ ಮಿಂಚ ಕಾವಿನಲಿ
ನಡುಗುತಲಿ, ಅಡಗಿರುವ ಗುಡುಗರವಕೆ
ನೀರಾವಿಗೆ ಓಲಾಡುತಿರುವ ಸಿಡಿಲ ಸೊಡರಿಗೆ
ದಿಕ್ಕುಗಾಣದೆ ಹಗುರವಾಗಲು
ಬಿಕ್ಕಳಿಸುತಿದೆ

ನಿರುತ್ತವಾಗಿರುವ ನೀರದಮನ
ಗಳಿಗೆ ಗಳಿಗೆಗೆ ರೂಪ ಬದಲಿಸಿ
ಸುತ್ತಿಸುರಳಿ ಆಳದಲಿ
ಸತ್ತಮನಕೆ ಮರುಕ ತೋರಿ
ಕರಗಿ ಹೋಗುತಿದೆ
ಬಾನ ಬಾಳಿನಲಿ

ಜಾರುತಿರುವ ಜಲವಾಗಲಿ
ಸ್ವಚ್ಚಮನಕೆ ಚೇತನ
ಗುಡುಗರವವು ಲಾಲಿಯಾಗಲಿ
ಸುಖನಿದ್ರಕೆ ಗಾಯನ
ಮಿಂಚಬಳ್ಳಿ ದಾರಿಯಾಗಲಿ
ನವಜಗದ ಸಾಧನ
ಸಿಡಿಲ ಸೊಡರು ಉರಿಸಲಿ
ನೋವುಗಳ, ಸುಖಕಾಗಲಿ ಕಾರಣ

-ಎಂ.ವಿ ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author