ನಾವು ಕ್ಷೇಮದಿಂದ ತಲುಪಿದೆವು
ದಾರಿ ಖರ್ಚಿಗೆಂದು ನೀವು ಕಟ್ಟಿಕೊಟ್ಟಿದ್ದ ಡಬ್ಬಿಯನ್ನು
ನಾವು ದಾಕ್ಷಿಣ್ಯದಿಂದ ಬೇಡ ಎಂದಿದ್ದರೆ
ಎಂಥ ಮಹಾಪರಾಧವಾಗುತ್ತಿತ್ತು ಎಂಬುದು
ತಿಂದ ಮೇಲೆ ಅರಿವಿಗೆ ಬಂತು.
ಬೇಬಿಯ ಪರೀಕ್ಷೆ ಚೆನ್ನಾಗಿಯೇ ಆಗಿರುತ್ತದೆ
ಆಕೆ ಜಾಣೆ. ಏಕಪಾಠಿ. ಕಾಳಜಿ ಬೇಡ
ಈ ಸಲ ಮುದ್ದಾಂ ಶಾಲೆಗೆ ಕೀರ್ತಿ ತರುತ್ತಾಳೆ
ಮುಂದಿನ ಶಿಕ್ಷಣಕ್ಕೆ ಅವಳು ಇಲ್ಲಿ ಬಂದುಳಿಯಲು
ಏನೇನೂ ಹರಕತ್ತಿಲ್ಲ. ಒಳ್ಳೊಳ್ಳೆ ಕಾಲೇಜುಗಳಿದ್ದಾವೆ
ಅವಳಿಗಂತೂ ಅಡ್ಮಿಷನ್ಗೆ ತೊಂದರೆ ಆಗಲಿಕ್ಕಿಲ್ಲ
ನಾವು ಹೊರಟು ನಿಂತ ದಿನ ಪಾಪ ಆಕೆಗೆ
ಬಸ್ ಸ್ಟಾಂಡಿಗೆ ಬರುವ ಮನಸ್ಸು ತುಂಬಾ ಇತ್ತು
ದಣಪೆಯಲ್ಲಿ ನಿಂತ ಅವಳ ಕಣ್ಣುಗಳೇ ಹೇಳುತ್ತಿದ್ದವು
ಅವಳ ಅಭ್ಯಾಸ ಹಾಳಾದೀತೆಂದು ಬೇಡವೆಂದೆವು
ಅವಳಿಗೆ ಕೊಡಬೇಕೆಂದಿದ್ದ ಭಕ್ಷೀಸಿನ ನೋಟು
ಕಿಸೆಯಲ್ಲೇ ಉಳಿಯಿತು
ಇಡೀ ವಿಶ್ವವನ್ನೇ ಎದುರು ಹಾಕಿಕೊಳ್ಳುವ ಮಿಂಚು
ಅವಳ ಕಂಗಳಲ್ಲಿದೆ
ಅವಳನ್ನು ಊರಲ್ಲೇ ಇಟ್ಟುಕೊಳ್ಳಬೇಡಿ
ಮಕ್ಕಳಿಗೆ ಯಾವತ್ತೂ ತಮ್ಮೂರಿನ ಬಸ್ ಸ್ಟಾಂಡಿನಿಂದ ಪರ
ಊರುಗಳಿಗೆ ಹೋಗುವ ಬಸ್ಸುಗಳು ಏನೋ ಉಮೇದಿಯನ್ನು
ಹೊಸ ದಿಲಾಸೆಯನ್ನು ನೀಡುತ್ತವೆ.
ನೋಡಿ ಹಳ್ಳಿಗಳಲ್ಲಿ ರಾತ್ರಿ ಬಂದು ತಂಗುವ ಬಸ್ಸು
ಒಂದು ದಿನ ಬರದಿದ್ದರೆ ಹೇಗೆ ಜೀವ ಕಸಿವಿಸಿಗೊಳ್ಳುತ್ತದೆ
ನಸುಕಿನ ಅರೆನಿದ್ರೆಯಲ್ಲಿ ಬಸ್ಸುಗಳೆದ್ದು
ಮುಖ ತೊಳೆದುಕೊಂಡು ಚಾ ಕುಡಿದು ಹೊರಡುವ ಸದ್ದು
ಇಡೀ ಹಳ್ಳಿಯ ಆತ್ಮಕ್ಕೆ ಕೀಲಿ ಕೊಟ್ಟಂತಿರುತ್ತದೆ
ನಾವು ಊರಿಗೆ ಬಂದಾಗ ಹೊಸ ಬರ್ಮುಡಾ ಟೀ ಶರ್ಟು
ಹಾಕಿ ಮೇಲೆ ಕೆಳಗೆ ಗತ್ತಿನಿಂದ ಮೆರೆದಾಡುವುದುಂಟು
ಏಕೆಂದರೆ ನಮ್ಮ ಪಾಡು ನಮಗೇ ಗೊತ್ತು
ಬಿದ್ದಲ್ಲೆ ಬೇರೂರಿ ಗಗನಕ್ಕೆ ಕೈಯೆತ್ತಿ ಹೂ ಹಿಡಿದ ಗಿಡಗಳಂತೆ
ಊರಿನ ನೀವೆಲ್ಲರೂ ಕಾಣುತ್ತೀರಿ
ಆ ತಳಮಳ ಮುಚ್ಚಿಕೊಳ್ಳಲು ತೋಂಡಿ ಪ್ರೀತಿ ತೋರಿಸುತ್ತೇವೆ
ಆ ದಿನ ಸಮುದ್ರ ಬೇಲೆಗೆ ಹೋದಾಗ
ಬೇಬಿ ಎಷ್ಟು ಚಂದ ಹಾಡಿದಳು
ಟಿ.ವಿ ಗೀವಿಯ ರಿಯಾಲಿಟಿ ಶೋಗಳನ್ನು ನಿವಾಳಿಸಿ ಒಗೆಯಬೇಕು.
ಅವಳು ಹಾಡುವಾಗ ಬಲಗೈ ಬೆರಳಿಂದ ಹೊಯ್ಗೆಯಲ್ಲಿ
ತನಗೇ ಗೊತ್ತಿಲ್ಲದೇ ಏನೋ ಗೀಚುತ್ತಿದ್ದಳಲ್ಲ
ಅದು ಅದೆಷ್ಟು ಚೆಂದ ಅದೇನದು
ಚಿತ್ರಲಿಪಿಯ ನಿಗೂಢ ಒಗಟು
ಅವಳಿಗಷ್ಟೇ ತಿಳಿಯುತ್ತ ಅವಳೇ ಬಿಡಿಸಿಕೊಳ್ಳಬೇಕಾದ
ಅವಳದೇ ಒಗಟು
ಹಾಡು ಮುಗಿಸಿದ್ದೇ ಹೇಗೆ ತಕ್ಷಣ ಅದನ್ನು ಅಳಿಸಿಬಿಟ್ಟಳು
ನೀವು ಕೊಟ್ಟ ಕರಿ ಇಶಾಡು ಮಾವಿನ ಹಣ್ಣಿನಲ್ಲಿ
ಕೆಲವಷ್ಟೇ ಹಳೆಕಂಪಾಗಿದ್ದವು. ಹಾಗಂತ ಬಿಡುತ್ತೇವೆಯೇ
ಊರಿನದಲ್ಲವೆ ರಸಾಯನ ಮಾಡಿಕೊಂಡು ಚಪ್ಪರಿಸಿದೆವು
ಇಲ್ಲಿಯ ನಮ್ಮ ಖೋಲಿ ಪುಟ್ಟದು ಅಂತ ಚಿಂತಿಸಬೇಡಿ
ಬೇಬಿಗೆ ಖಂಡಿತ ಜಾಗವಿದೆ
ನಮ್ಮ ಮನೆಗೆಲಸದಲ್ಲೂ ಆಕೆ ಒಂದಿಷ್ಟು
ನೆರವಾಗಬಹುದು. ಅವಳಿಗೆ
ಚಪಾತಿ ಮಾಡಲು ಬರುತ್ತದೆ ಅಂತ ತಿಳಿಯುತ್ತೇವೆ
ಅವಳು ಇಲ್ಲಿ ಬರುವುದು ಖಾತ್ರಿಯಾದರೆ
ನಮ್ಮ ಚಪಾತಿಯವಳಿಗೆ ಮುಂಚಿತವಾಗಿ ಸೂಚನೆ ನೀಡಿ
ನಿಲ್ಲಿಸುತ್ತೇವೆ. ನಮಗೂ ಹಗುರ
ಬೇಬಿಗೂ ಟೈಮ್ಪಾಸ್
ನಿಮಗೆ ಸಿಗದ್ದೇನೋ ನಮಗೆ ಸಿಕ್ಕಿದೆ ಅಂತ
ನೀವು ಅಂದುಕೊಳ್ಳುವುದು ನಿಮಗೆ ಸಿಗುತ್ತಿರುವುದನ್ನೇನನ್ನೋ
ಶಾಶ್ವತವಾಗಿ ಕಳೆದುಕೊಂಡಿದ್ದೇವೆ ಅಂತ ಅಂದುಕೊಂಡು
ನಾವು ಒದ್ದಾಡುವುದು ಎಲ್ಲವೂ
ಅಂದುಕೊಳ್ಳುವುದಲ್ಲೇ ಇದೆ ಅಲ್ಲವೆ
ಸಮುದ್ರದ ಗಾಳಿಯ ಲಯದಲ್ಲಿ
ಅಲೆಗಳ ಅಭಯದಲ್ಲಿ
ತನ್ನ ಸಹಜ ದಿಟ್ಟ ವಿನಯದಲ್ಲಿ
ಕಾಬಾಳೆ ಹೂ ಮುಡಿದ ಬೇಬಿಯ ಆ
ಸಂಜೆಗೆಂಪಿನ ಹಾಡಷ್ಟೆ ನಿಜ
ಮತ್ತು ಹೊಯ್ಗೆಯಲ್ಲಿ ಮೂಡಿ ಮಾಯವಾದ
ಅವಳದೇ ಅವ್ಯಕ್ತ ಒಕ್ಕಣೆ
ಆದರೂ ಇರಲಿ
ನಿಮ್ಮ ಕ್ಷೇಮಕ್ಕೆ ಬರೆಯಿರಿ
ಕಲಾಕೃತಿ : ಎಸ್. ವಿ. ಹೂಗಾರ
ಜಯಂತ ಕಾಯ್ಕಿಣಿ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ. ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ನೀಲಿಮಳೆ, ಒಂದು ಜಿಲೇಬಿ, ವಿಚಿತ್ರಸೇನನ ವೈಖರಿ (ಕವನ ಸಂಕಲನಗಳು), ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್ , ಚಾರ್ ಮಿನಾರ್, ಅನಾರ್ಕಲಿಯ ಸೇಫ್ಟಿ ಪಿನ್ (ಕಥಾ ಸಂಕಲನಗಳು), ಸೇವಂತ ಪ್ರಸಂಗ ಜತೆಗಿರುವನು ಚಂದಿರ, ಇತಿ ನಿನ್ನ ಅಮೃತಾ (ನಾಟಕಗಳು), ಬೊಗಸೆಯಲ್ಲಿ ಮಳೆ, ಶಬ್ದತೀರ (ಅಂಕಣಗಳು). ಎಲ್ಲೋ ಮಳೆಯಾಗಿದೆ (ಚಿತ್ರಗೀತೆಗಳ ಸಂಕಲನ), ಹಲವಾರು ಕನ್ನಡ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿರುವ ಅವರಿಗೆ ’ಫಿಲಂಫೇರ್’ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ.
More About Author