ಯಕ್ಷಗಾನ ಕಲಾಸಕ್ತಿ ಕರಾವಳಿಯಲ್ಲಿ ಹುಟ್ಟಿದವರ ರಕ್ತಗುಣ ಎಂದರೂ ತಪ್ಪಲ್ಲ


“ವೈದ್ಯಕೀಯ ವೃತ್ತಿ ಜೊತೆ ಅವರ ಸಾಹಿತ್ಯಾಸಕ್ತಿ ಮೇಳವಿಸಿ ತಮ್ಮ ಬದುಕು ಚಿಂತನೆಗಳನ್ನು ಡಾ. ಪಾಂಗಾಳರು ಕಟ್ಟಿಕೊಂಡ ರೀತಿಯನ್ನು ಈ ಕೃತಿ ಕಾಣಿಸಿ ಕೊಡುತ್ತದೆ,” ಎನ್ನುತ್ತಾರೆ ಎಸ್. ಆರ್. ವಿಜಯಶಂಕರ ಅವರು ಚ. ಚಂದ್ರಶೇಖರ ಚಡಗ ಅವರ “ಪಾಂಗಳ ಡಾಕ್ಟ್ರು” ಕೃತಿಗೆ ಬರೆದ ಮುನ್ನುಡಿ.

ಡಾ. ರಾಧಾಕೃಷ್ಣ ರಾವ್ ಪಾಂಗಾಳ ಜನರ ಮನಸ್ಸಲ್ಲಿ ನೆಲೆಸಿರುವ ವೈದ್ಯರು. ಅವರು ಕೆಲವು ವರುಷಗಳ ಕಾಲ ವಿದೇಶಗಳಲ್ಲಿ ಕೆಲಸ ಮಾಡಿ. ಇನ್ನು ಸಾಕು, ನಮ್ಮ ನೆಲದಲ್ಲಿರಬೇಕು ಎಂದು ನಿಶ್ಚಯಿಸಿ ಬೆಂಗಳೂರಿಗೆ ಹಿಂತಿರುಗಿ ತಮ್ಮ ಕ್ಲಿನಿಕ್‌ನ್ನು ರವೀಂದ್ರನಾಥ ಟಾಗೂರ ನಗರದಲ್ಲಿ ಪ್ರಾರಂಭಿಸಿದಾಗ ಅದು ಆಗ ತಾನೆ ಕಣ್ಣು ಬಿಡುತ್ತಿದ್ದ ಹೊಸ ಬಡಾವಣೆ, ಈಗ ಸಂಜಯ ನಗರವೆಂದು ಪ್ರಖ್ಯಾತವಾಗಿರುವ ಆರ್. ಟಿ. ನಗರಕ್ಕೆ ತಾಗಿರುವ ಜಾಗ. ಆಗ ಗೆದ್ದಲಹಳ್ಳಿ ಎಂಬ ಊರು. ಈಗ ರವೀಂದ್ರನಾಥ ಟಾಗೂರ್‌ ನಗರ ಸುಸಜ್ಜಿತವಾಗಿ ಬೆಳೆದಿರುವ ಜಾಗ. ಜನರ ವಾಸ ಹೆಚ್ಚಾದಂತೆ, ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಅನೇಕ ಸ್ಪೆಷಲಿಸ್ಟ್ ಡಾಕ್ಟರುಗಳು ಇರುವ ಜಾಗ. ಆದರೆ ಉತ್ತರ ಬೆಂಗಳೂರಿನ ಈ ಭಾಗದಲ್ಲಿ ಜನ "ನಮ್ಮ ಡಾಕ್ಟ್ರು" ಎಂದರೆ, ಅವರ ಮನಸ್ಸಲ್ಲಿರುವುದು ಡಾ. ಆರ್. ಆರ್. ಪಾಂಗಾಳ್. ಉಡುಪಿ ಸಮೀಪದ ಪಾಂಗಾಳ ಎಂಬ ಊರಿನಲ್ಲಿ ಹುಟ್ಟಿ ಬೆಳೆದ ನಮ್ಮ ಡಾಕ್ಟ್ರು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಓದಿ, ಈಗ ಬೆಂಗಳೂರಿನವರೇ ಆಗಿದ್ದಾರೆ.

ಸುಮಾರು ನಾಲ್ಕು ದಶಕಗಳ ಹಿಂದೆ, ನನ್ನ ಇಬ್ಬರು ಮಕ್ಕಳು ಚಿಕ್ಕವರಾಗಿದ್ದಾಗ ಸ್ವಲ್ಪ ದೂರ ಎನ್ನಬಹುದಾದ 'ವಿದ್ಯಾರಣ್ಯಪುರಂ'ನಿಂದ ನಾನು ಮಡದಿ ಮಕ್ಕಳೊಂದಿಗೆ ನಮ್ಮ ಡಾಕ್ಟ್ರು ಕ್ಲಿನಿಕ್‌ಗೆ ಬಂದು ಔಷಧಿ ಪಡೆಯುತ್ತಿದ್ದೆ. ಮಕ್ಕಳು ಚಿಕ್ಕವರಾಗಿದ್ದಾಗ ಆಗಾಗ ವೈದ್ಯರಲ್ಲಿಗೆ ಹೋಗಬೇಕಾಗುತ್ತದೆ. ಅಷ್ಟು ದೂರದಿಂದ ಈ ಥಂಡಿ ಗಾಳಿಗೆ ಮಕ್ಕಳನ್ನು ಹಿಡಿದುಕೊಂಡು ಯಾಕೆ ಬರುತ್ತೀರಿ. ಜ್ವರ ಕಮ್ಮಿಯಾದರೆ ಫೋನು ಮಾಡಿ. ಔಷಧ ಬದಲಿಸಬೇಕಾದರೆ ಹೇಳುವೆ, ಜ್ವರ ನೋಡಲು ಒಂದು ಥರ್ಮಾಮೀಟರ್ ಮನೆಯಲ್ಲಿರಲಿ ಎಂದರು. ಕನ್ಸಲ್‌ಟೇಶನ್ ಫೀಸು ಬಿಟ್ಟು ಹೀಗೆ ಫೋನು ಮಾಡಿ ಎನ್ನುವ ಡಾಕ್ಟರ್ ಎಲ್ಲರ ಹಾಗೆ ಅಲ್ಲ ಅನಿಸಿತ್ತು.

ಕೆಲವು ದಿನಗಳಲ್ಲಿ ಅವರ 'ಹಸಿರು ಪಾಚಿ' ಕಾದಂಬರಿಯನ್ನು ಡಾ. ಶಿವರಾಮ ಕಾರಂತರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ವಿವರವಾದ ವರದಿ ಪತ್ರಿಕೆಗಳಲ್ಲಿ ಬಂತು. ಆಗ ಅವರ ಸಾಹಿತ್ಯ ಮುಖದ ಇನ್ನೊಂದು ಪರಿಚಯವಾಯಿತು. ನನಗೂ ಹೆಚ್ಚಿದ ಪರಿಚಯದಿಂದಾಗಿ ವೈದ್ಯಕೀಯ ಸಂಬಂಧದೊಡನೆ ಸಾಹಿತ್ಯ ಸ್ನೇಹವೂ ಸೇರಿಕೊಂಡು ಆತ್ಮೀಯತೆ ಹೆಚ್ಚಾಯಿತು. ಅವರು ನಿಘಂಟುತಜ್ಞ ಡಾ. ಜಿ. ವೆಂಕಟಸುಬ್ಬಯ್ಯ (ಜಿ.ವಿ.) ಅವರ ಆತ್ಮೀಯ ವಿದ್ಯಾರ್ಥಿಗಳಲ್ಲೊಬ್ಬರು ಎಂಬುದೂ ತಿಳಿಯಿತು. ಡಾಕ್ಟರಿಗೆ ಆ‌ರ್.ಟಿ. ನಗರದ ಪೌರರು ನೀಡಿದ ಸರಳ ಸನ್ಮಾನ ಸಮಾರಂಭವೊಂದರಲ್ಲಿ ಅವರು ಈ ಜಾಗ ತನಗೆ ಬಂಧುಜನ ದರುಶನ ಫಲ ಒದಗಿಸಿದ ಪುಣ್ಯಭೂಮಿ ಎಂದರು.

ಇಲ್ಲಿ ಶಿವರಾಮ ಕಾರಂತ ವೇದಿಕೆಯನ್ನು ಸ್ಥಾಪಿಸಿದ ಪಾ. ಚಂದ್ರಶೇಖರ ಚಡಗರು ನಮಗೆಲ್ಲಾ ಹಿರಿಯಣ್ಣ ಇದ್ದ ಹಾಗೆ. ಆ ಸಂಸ್ಥೆಯನ್ನು ಕಟ್ಟುವುದರಲ್ಲಿ ಅವರ ಬೆನ್ನಿಗೆ ನಿಂತ ಮುಖ್ಯರಲ್ಲಿ ಒಬ್ಬರು ಡಾ. ಪಾಂಗಾಳ. ಅವರ ಜೊತೆ ನನ್ನ ಹಾಗೆ ಅನೇಕರು ಸಹಕಾರ್ಯಕರ್ತರು, ವೈದ್ಯಕೀಯ ವೃತ್ತಿ ಬಹಳವಾಗಿ ವಾಣಿಜ್ಯಕರಣಕ್ಕೆ ಒಳಗಾಗುತ್ತಿರುವ ಇಂದಿನ ದಿನಗಳಲ್ಲಿ ಬಿಡುವಿಲ್ಲದ ಪ್ರಾಕ್ಷೀಸು ಇದ್ದು ಕೂಡಾ ಸದಾ ಮಾನವೀಯ ಅಂತಃಕರಣದಿಂದ ತೊಯ್ಯುವ, ಹಲವು ಹತ್ತು ರೀತಿಯ ಸಾಹಿತ್ಯ, ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವ ಬಹುಮುಖಿ ವ್ಯಕ್ತಿತ್ವ ನಮ್ಮ ಡಾ. ಪಾಂಗಾಳರದು.

ವೈದ್ಯಕೀಯ ಬರಹಗಳಲ್ಲಿ ಮುಖ್ಯವಾಗಿ ಎರಡು ವಿಧ. ಮೊದಲನೆಯದು ನೇರವಾಗಿ ವೈದ್ಯಶಾಸ್ತ್ರವನ್ನು ವಿವರಿಸಿ ಹೇಳುವ ವೈದ್ಯವಿಜ್ಞಾನ. ಇನ್ನೊಂದು ಕಥಾನಕವೊಂದರ ಚೌಕಟ್ಟಿನೊಳಗೆ ತಿಳಿಸಿಕೊಡುವ ವೈದ್ಯಶಾಸ್ತ್ರ. ಡಾ. ಪಾಂಗಾಳರು ಗಂಡು-ಹೆಣ್ಣು ಮಾನವ ಸಂಬಂಧಗಳ ಹಲವು ಮಜಲುಗಳನ್ನು ವೈದ್ಯವಿಜ್ಞಾನದ ಕಣ್ಣಿನಿಂದಲೂ ಕಾಣಿಸುತ್ತಾರೆ. ಕರ್ಮಣೇ..., ಉತ್ತಿಷ್ಠ ಮುಂತಾದ ಕೃತಿಗಳ ಬಗೆಗಿನ ಲೇಖನಗಳು ಅವುಗಳನ್ನು ಹೇಳುತ್ತವೆ.

ಡಾ. ಪಾಂಗಾಳರು ಬದುಕಿನಲ್ಲಿ 'ಆದರ್ಶ'ಕ್ಕೆ ಗೌರವದ ಸ್ಥಾನವೊಂದನ್ನು ನೀಡಿದವರು. ಜೀವನವನ್ನು ಇರುವಂತೆ ನೋಡುವುದು ಮಾತ್ರವಲ್ಲ ಇರಬೇಕಾದಂತೆ ಕಾಣುವುದು ಕೂಡಾ ಮನುಷ್ಯನ ಜವಾಬ್ದಾರಿ ಎಂದು ತಿಳಿದವರು. ಹಾಗೆ ಇರಬೇಕಾದಂತೆ ಕಾಣುವ ಆದರ್ಶ, ವಾಸ್ತವವನ್ನು ಮರೆತ ಬೋಳೆತನ ಆಗಬಾರದು. ನಿಜಸ್ಥಿತಿಯನ್ನು ಅರಿತ ಆದರ್ಶ ಮನುಷ್ಯ ಚಿಂತನೆಯಲ್ಲಿ ಗುರಿಯೊಂದನ್ನು ಹೊಂದಬಲ್ಲನು. 'ಹಸಿರುಪಾಚಿ' ಹೀಗೆ ವಾಸ್ತವ ಆದರ್ಶಗಳನ್ನು ಅರಿತ ಮನಸ್ಥಿತಿ ಮಾತ್ರ ರಚಿಸಬಹುದಾದ ಕಾದಂಬರಿ, 'ಹಸಿರುಪಾಚಿ' ತುಂಬಿದ ನೇರ್ಕಲ್ಲಿನ ಹೊಳೆಯು ಎಲ್ಲ ಆಗು ಹೋಗುಗಳಿಗೆ ಮೂಕವಾಗಿ ಬಿದ್ದುಕೊಂಡಂತೆ ಕಾಣುವ ಕಾದಂಬರಿಯ ಧ್ವನಿಯನ್ನು ಅದರ ಸಾಂಕೇತಿಕತೆಯಲ್ಲಿ ಇಲ್ಲಿನ ಲೇಖನದಲ್ಲೂ ವಿವರಿಸಲಾಗಿದೆ. ಮನುಷ್ಯನ ಅಲ್ಪತನ ಅರಿತು, ಆ ಬಳಿಕವೂ ಆದರ್ಶವನ್ನು ಹಂಬಲಿಸುವ ಮನಸ್ಸು ದೊಡ್ಡದು.

ಕಾದಂಬರಿಗಳಲ್ಲದೆ ಕತೆ, ಕವನ, ಸಂಶೋಧನೆ, ಯಕ್ಷಗಾನ ಪ್ರಸಂಗ ಹೀಗೆ ಹಲವು ಆಸಕ್ತಿಯ ಕ್ಷೇತ್ರಗಳಲ್ಲಿ ಡಾ. ಪಾಂಗಾಳರು ಕೆಲಸ ಮಾಡಿದ್ದಾರೆ. ಅವರು ಬರೆದ 93 ಕವನಗಳ ಸಂಕಲನವೆ, 'ಆನಂದ, ಆಕ್ರೋಶ, ಆಕ್ರಂದನದ ಸಂಪಾತಿ'. ಅವರ ಕವನಗಳು ವ್ಯಕ್ತಿಭಾವದ ಹಲವು ಮಗ್ಗಲುಗಳಿಗೆ ಸಾಕ್ಷಿ. ಅವರ ಸಾಮಾಜಿಕ ತಲ್ಲಣದ ಭಾಗವಾಗಿ ಗಮನಿಸಬಹುದಾದ ಈ ವೈಯಕ್ತಿಕ ಪ್ರತಿಕ್ರಿಯೆಯ ಸಾಲುಗಳು ಕಣ್ಣ ಮುಂದೆ ನಡೆದ ಗ್ಯಾಂಗ್ ರೇಪಿಗೆ ಮೂಕ ಪ್ರೇಕ್ಷಕನಾಗಿ ಷಂಡನಾಗಿ ಪೋಲೀಸರ ಏಟು ತಿಂದು ಬಾಯ್ದಿಟ್ಟು ಸಾಕ್ಷಿ ಹೇಳಿದಾಗ ಅಪರಾಧಿಯೋರ್ವ ಚಾಕು ಇರಿದಾಗ ಉಳಿದುದು ಧೀರದಿಟ್ಟ ಸಂಪಾತಿಯೋ, ಸುಟ್ಟು ಕರಕಲಾದ ಸಂಪಾತಕಿಯೋ?

'ಮರುಳನೆಂಬಭಿದಾನದಲ್ಲಿ' ಸರಳ ಮನದ ಜನರಿಗೊಂದು 'ತರಲೆ ಮಾತನು ಪೇಳ್ವೆನು' ಎಂದು ಹೇಳುವ ಅವರಿಗೆ ತಾನೇನೋ ಮಹತ್ವವಾದದ್ದನ್ನು ಹೇಳುತ್ತೇನೆಂಬ ಹೆಮ್ಮೆ ಇಲ್ಲ. ತನಗೆ ತಿಳಿದದ್ದನ್ನು ಹಂಚಿಕೊಳ್ಳುವ ಲಹರಿಯನ್ನು ಅವರು ಲಘುವಾಗಿ ಹೇಳುವ ಕ್ರಮ ಹೀಗೆ: ಬುದ್ದಿವಂತರೆ ನಂಬಿ ಇದನು ಶುದ್ಧತನ ಒಂದಿನಿತೂ ಇಲ್ಲ ಸುದ್ದಿಗಾಗಿಯೇ ಸದ್ದು ಮಾಡಲು ಕದ್ದು ಬರೆದನು ಮರುಳನು, ಏಳು ಕಾದಂಬರಿಗಳು, ಸಣ್ಣ ಕತೆಗಳ ಮೂರು ಸಂಕಲನಗಳನ್ನು ಪ್ರಕಟಿಸಿರುವ ಡಾ. ಪಾಂಗಾಳ್ ಅವರ 'ವ್ಯಾಸ ಭಾರತ ಭಿನ್ನ ವಿನ್ಯಾಸ' ವಿಶಿಷ್ಟವಾದೊಂದು ಸಂಶೋಧನಾ ಕೃತಿ. 37 ಅಧ್ಯಾಯಗಳ 900ಕ್ಕೂ ಹೆಚ್ಚಿನ ಪುಟ ಸಂಖ್ಯೆಯ ಈ ಕೃತಿ ಮೂಲಕೃತಿಗೊಂದು ಆಧುನಿಕ 'ಟೀಕು' ಎಂದರೂ ಸಲ್ಲುತ್ತದೆ. ಪುರಾಣಗಳ ಮಿಥ್‌ಗಳು ಕೇವಲ ಕಲ್ಪನೆಯಲ್ಲ. ಅದೊಂದು ರೀತಿಯಲ್ಲಿ ಆದಿಮ ಮಾನವ ಮನಸ್ಸಿನ ಪಡಿಯಚ್ಚಿನಂತೆ ಕೆಲಸ ಮಾಡುತ್ತವೆ. ಇಂದಿನ ಮಾನವ ಮನಸ್ಸಿನಲ್ಲೂ ಆದಿಮ ಪ್ರವೃತ್ತಿ ಜೀವಂತವಾಗಿರುವುದರಿಂದ ಅಂತಹ ಮಿಥ್‌ಗಳು ಎಲ್ಲಾ ಕಾಲವನ್ನೂ ಪ್ರತಿನಿಧಿಸುತ್ತಿರುತ್ತವೆ. ಆದರೆ ಇಂದು ಮನುಷ್ಯನ ಮನಸ್ಸು ವಾಸ್ತವವಾದಕ್ಕೆ ತೆತ್ತುಕೊಂಡಿದೆ. ವಿಜ್ಞಾನ ಈ ಭೂಮಿಯಲ್ಲಿ ಕ್ಯಾಮರಾಗಳನ್ನು ಸೃಷ್ಟಿಸಿದ ಬಳಿಕವಂತೂ ಮನುಷ್ಯ ಕಲ್ಪನೆಗಿಂತಲೂ ಹೆಚ್ಚು ಕಣ್ಣನ್ನು ನಂಬುವಂತಾಗಿದೆ. ಇದೂ ಒಂದು ಕಾರಣವಾಗಿ, 20ನೇ ಶತಮಾನದಲ್ಲಿ ಮಿಥ್‌ಗಳ ಹಿಂದೆಯೂ ಇರಬಹುದಾದ ವಾಸ್ತವದ ಉತ್ತರಗಳನ್ನು ಹುಡುಕುವ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ.

ವ್ಯಾಸ ಮಹಾಭಾರತದ ಹಿಂದಿನ ವಾಸ್ತವದ ಉತ್ತರವನ್ನು ಕಂಡುಕೊಳ್ಳಲು, ಸಂಶೋಧನೆ, ಚಿಂತನೆಗಳ ಮೂಲಕ ನಡೆಸಿದ ಪ್ರಯತ್ನ 'ವ್ಯಾಸ ಭಾರತ ಭಿನ್ನ ವಿನ್ಯಾಸ' ವಸ್ತು, ವಿನ್ಯಾಸಗಳರಡೂ ಪರಸ್ಪರ ಸಂಬಂಧ ಹೊಂದಿವೆ. ವಸ್ತುವಿನ ಗ್ರಹಿಕೆ ಬದಲಾದಂತೆ ವಿನ್ಯಾಸವೂ ಬದಲಾಗಬೇಕಾಗುತ್ತದೆ ಎಂಬುದು ಅವರ ಚಿಂತನೆಯ ಹಿಂದಿನ ಮೀಮಾಂಸಾ ನಿಲುವು. ಉತ್ತಮ ಮಾನವ ಗುಣ ಮತ್ತು ದೈವಶಕ್ತಿ ಎಂಬ ಮಾನವ ಆದರ್ಶಗಳು ಈ ಕೃತಿ ರಚನೆಯಲ್ಲಿ ಕೆಲಸ ಮಾಡಿವೆ. ಹಾಗೆಯೇ ಅನ್ಯಾಯವನ್ನು ವಿರೋಧಿಸುವುದು ಕೂಡಾ ಧರ್ಮವೇ ಆಗುತ್ತದೆಂಬ ವಿಶ್ವಾಸ ಅವರದು. ಮೇಧಾವಿಯಾದ ಮನುಷ್ಯ ಕೂಡಾ ಎಡವುತ್ತಾನೆ, ಅದು ದೈವ ನಿಯಮ ಆಗಿರಬಹುದೆ? ಎಂಬುದು ಅವರ ಕಾರ್ಯ-ಕಾರಣ ಚಿಂತನಾ ಕ್ರಮದಂತೆ ಗೋಚರಿಸುತ್ತದೆ. ಧರ್ಮವನ್ನು ಸಮಕಾಲೀನಗೊಳಿಸಿ ಅರ್ಥೈಸಿಕೊಳ್ಳುವ ಅವರ ಕ್ರಮ ಈ ಕೃತಿಯ ಭಾಗವೇ ಆಗಿದೆ. ಕಂಸ ಬೆಳೆಯಲು ಕಾರಣ ಅವನನ್ನು ಸಹಿಸಿಕೊಂಡುದರ ಪ್ರಭಾವ ಎಂಬ ಅವರ ವಾದ ಅಂತಹ ಆಧುನಿಕ ಗ್ರಹಿಕೆಗೊಂದು ಉದಾಹರಣೆ. ಮಾನವ ಶಾಸ್ತ್ರೀಯ, ಚಾರಿತ್ರಿಕ ಹಾಗೂ ಇನ್ನು ಹಲವಾರು ಚಿಂತನಾ ದೃಷ್ಟಿಕೋನಗಳಿಂದ ರಚಿಸಲ್ಪಟ್ಟ ಈ ಕೃತಿ ಡಾ. ಪಾಂಗಾಳರ ಓದು, ಶ್ರದ್ದೆ ಹಾಗೂ ವಸ್ತು ನಿರೂಪಣೆಗೊಂದು ಉತ್ತಮ ಉದಾಹರಣೆ.

ಕರಾವಳಿಯವರಿಗೆಲ್ಲ ಯಕ್ಷಗಾನವೆಂದರೆ ಅಚ್ಚುಮೆಚ್ಚು. ಯಕ್ಷಗಾನ ಕಲಾಸಕ್ತಿ ಕರಾವಳಿಯಲ್ಲಿ ಹುಟ್ಟಿದವರ ರಕ್ತಗುಣ ಎಂದರೂ ತಪ್ಪಲ್ಲ. ಈ ಮಾತಿಗೆ ಡಾ. ಪಾಂಗಾಳರೂ ಹೊರತಲ್ಲ. ಎದುರು ಕಾಣಿಸಿಕೊಳ್ಳದ ಹಿಂದಿನಿಂದ ಧನ ಸಹಾಯ ಮಾಡಿ ಡಾ. ಪಾಂಗಾಳರು ಪ್ರತಿ ವರುಷವೂ ಆಡಿಸುವ ಆಟಗಳು (ಯಕ್ಷಗಾನ) ಆರ್.ಟಿ. ನಗರದವರಿಗೆಲ್ಲಾ ಗೊತ್ತು. ಡಾ. ಪಾಂಗಾಳ ವಿರಚಿತ ಯಕ್ಷಗಾನ ಪ್ರಸಂಗಗಳು, ಅವರ ಯಕ್ಷಗಾನ ಪ್ರೀತಿ ಅಭಿರುಚಿಗಳನ್ನು ತೋರಿಸುತ್ತವೆ. ಯಕ್ಷಗಾನದ ವೈಚಾರಿಕ ಚಿಂತನೆ, ಸಂಶೋಧನೆಗಳಿಗೆ ಹೆಸರಾಗಿರುವ ಡಾ. ಆನಂದರಾಮ ಉಪಾಧ್ಯರು ಡಾ. ಪಾಂಗಾಳರ ಯಕ್ಷಗಾನ ಪ್ರಸಂಗಗಳ ಬಗ್ಗೆ ಮನಮುಟ್ಟುವಂತೆ ಬರೆದಿದ್ದಾರೆ.

'ಪಾಂಗಾಳ ಡಾಕ್ಟ್ರು' ಡಾ. ಪಾಂಗಾಳರ ಬದುಕು-ಬರಹಗಳ ಕುರಿತಾದ ಕೃತಿ. ಅವರು ರಚಿಸಿದ ಸಾಹಿತ್ಯ ಕೃತಿಗಳ ಬಗ್ಗೆ ಬಂದಿರುವ ಲೇಖನಗಳು ಒಂದು ಕಡೆ ಸಿಗುವಂತಾಗಲಿ ಎಂದು ಪಾ. ಚಂದ್ರಶೇಖರ ಚಡಗರು ಅವನ್ನು ಸಂಪಾದಿಸಿದ್ದಾರೆ. ಅದರ ಜೊತ ಡಾ. ಪಾಂಗಾಳರ ಬದುಕಿನ ಹಿನ್ನೆಲೆಯೂ ಸಿಗುವಂತಾಗಲಿ ಎಂದು ಅವನ್ನು ಕೂಡಾ ದಾಖಲಿಸಿದ್ದಾರೆ. ಇದರಿಂದಾಗಿ ಬದುಕು-ಬರಹಗಳ ಮಾಹಿತಿಯು ಒಂದೇ ಕಡೆ ಸಿಗುವಂತಾಗಿದೆ. ವೈದ್ಯಕೀಯ ವೃತ್ತಿ ಜೊತೆ ಅವರ ಸಾಹಿತ್ಯಾಸಕ್ತಿ ಮೇಳವಿಸಿ ತಮ್ಮ ಬದುಕು ಚಿಂತನೆಗಳನ್ನು ಡಾ. ಪಾಂಗಾಳರು ಕಟ್ಟಿಕೊಂಡ ರೀತಿಯನ್ನು ಈ ಕೃತಿ ಕಾಣಿಸಿಕೊಡುತ್ತದೆ. ನಮ್ಮಲ್ಲಿ ಡಾ. ಪಾಂಗಾಳರ ಹಾಗೆ ಎಲೆ ಮರೆಯ ಕಾಯಿಗಳಂತೆ ಹಲವರಿದ್ದಾರೆ. ಅಂತಹವರ ಬಗೆಗೂ ಈ ರೀತಿಯ ಸಂಪಾದನೆಯನ್ನು ಮಾಡಲು ಹಿರಿಯರಾದ ಪಾ. ಚಂದ್ರಶೇಖರ ಚಡಗರ ಕೆಲಸ ಪ್ರೇರಣೆ ನೀಡುವಂತಿದೆ. ಇದು ಅಭಿನಂದನಾ ಗ್ರಂಥವಲ್ಲ. ಆದರೆ, ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಿದ್ದ ಚೇತನವೊಂದನ್ನು ಬೆಳಕಿಗೊಡ್ಡುವ ಕೃತಿ. ಇದಕ್ಕಾಗಿ ಸಂಪಾದಕರಾದ ಪಾ. ಚಂದ್ರಶೇಖರ ಚಡಗರನ್ನು ಮತ್ತು ಈ ಕೃತಿಯಲ್ಲಿರುವ ಲೇಖನಗಳನ್ನು ಬರೆದಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ. ಡಾ. ಪಾಂಗಾಳರ ಕೊಡುಗೆಗಳಿಗೆ ಇದೊಂದು ಪುಟ್ಟ ಗೌರವ ಎಂದು ತಿಳಿಯುತ್ತೇನೆ.

 

MORE FEATURES

ಈ ಕತೆಯಲ್ಲಿ ಎರಡು ಅಪರೂಪದ ತೈಲ ಚಿತ್ರಗಳ ವಿವರಣೆ ಇವೆ

22-04-2025 ಬೆಂಗಳೂರು

“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...

ಕೃಷ್ಣನ ಚೇಷ್ಟೆಗಳು, ಯುಕ್ತಿಗಳು, ಸಾಹಸಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ

22-04-2025 ಬೆಂಗಳೂರು

“ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ...

ವಿಮರ್ಶೆಯ ಸಮೀಕ್ಷೆ ಹಾಗೂ ಕೃತಿ ವಿಮರ್ಶೆಯ ಮೂಲಕ ವಿಮರ್ಶೆಯನ್ನು ಬೆಳೆಸುವ ಬಗೆಯ ಬಗ್ಗೆ ಒಂದು ಚರ್ಚೆ

21-04-2025 ಬೆಂಗಳೂರು

ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...