​​​​​​​ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

Date: 06-10-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಲೆಬನಾನ್‌ನ ಮೋನಾ ಹಾಟಮ್‌ ಅವರ ಬಗ್ಗೆ ಬರೆದಿದ್ದಾರೆ.

ಕಲಾವಿದ: ಮೋನಾ ಹಾಟಮ್ (Mona Hatoum)

ಜನನ: 1952 (ಬೆರೂತ್, ಲೆಬನಾನ್)

ಶಿಕ್ಷಣ: ಬೆರೂತ್ ಯೂನಿವರ್ಸಿಟಿ ಕಾಲೇಜ್, ಲೆಬನಾನ್; ಬ್ಯಾಂ ಷಾ ಸ್ಕೂಲ್ ಆಫ್ ಆರ್ಟ್ ಮತ್ತು ಸ್ಲೇಡ್ ಸ್ಕೂಲ್ ಆಫ್ ಆರ್ಟ್, ಲಂಡನ್.

ವಾಸ: ಲಂಡನ್, ಇಂಗ್ಲಂಡ್

ಕವಲು: ಪೋಸ್ಟ್ ಮಿನಿಮಲಿಸಂ, ಕಾನ್ಸೆಪ್ಚುವಲ್ ಆರ್ಟ್

ವ್ಯವಸಾಯ: ಪರ್ಫಾರ್ಮೆನ್ಸ್ ಆರ್ಟ್, ವೀಡಿಯೊ ಆರ್ಟ್, ಇನ್ಸ್ಟಾಲೇಷನ್ ಆರ್ಟ್.

ಮೋನಾ ಹಾಟಮ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಮೋನಾ ಹಾಟಮ್ ಅವರ ಕುರಿತು ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ತೀರಾ ತಾಳ ತಪ್ಪಿದ ಕೌಟುಂಬಿಕ ಹಿನ್ನೆಲೆ ಮತ್ತು ಅದರಿಂದ ಉಂಟಾಗುವ ಪರಕೀಯತೆಯನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಮೊನಾ ಹಾಟಮ್ ಅವರು ಆರಂಭದಲ್ಲಿ ಪರ್ಫಾರ್ಮೆನ್ಸ್ ಆರ್ಟ್ ಮೂಲಕ ತಾನು ಪ್ರಜ್ಞೆ ಮತ್ತು ದೇಹಗಳ ನಡುವಿನ ಸಂಬಂಧವನ್ನು ಶೋಧಿಸುತ್ತಾ ಹೋದೆ; ಆ ಬಳಿಕ ಒಬ್ಬ ಇನ್ಸ್ಟಾಲೇಷನ್ ಕಲಾವಿದೆಯಾಗಿ ಒಂದು ಸಮೂಹದ ದೇಹ ಮತ್ತು ಅದರ ಪ್ರಜ್ಞೆಗಳ ನಡುವಿನ ಸಂಬಂಧವನ್ನು ಶೋಧಿಸುವುದು ಸಾಧ್ಯವಾಯಿತು ಎಂದು ತನ್ನ ಕಲಾ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾರೆ.

ಮೋನಾ ಹೆತ್ತವರು ಪ್ಯಾಲಸ್ತೀನ್ ನ ಹೈಫಾದಲ್ಲಿದ್ದವರು. ಅಲ್ಲಿ ರಾಜಕೀಯ ಅಶಾಂತಿ ಉಂಟಾದಾಗ (1948) ಅಲ್ಲಿಂದ ಲೆಬನಾನ್ ಗೆ ವಲಸೆ ಬಂದು ಬೆರೂತ್ ನಲ್ಲಿ ನೆಲೆಸಿದ್ದರು. ಆದರೆ ಆ ಕುಟುಂಬಕ್ಕೆ ರಾಜಕೀಯ ಕಾರಣಗಳಿಗಾಗಿ ಲೆಬನಾನ್ ಪೌರತ್ವ ಸಿಗಲೇ ಇಲ್ಲ. ಹಾಗಾಗಿ ಹುಟ್ಟಿದ್ದು ಲೆಬನಾನ್ ನಲ್ಲಾದರೂ ಮೋನಾ ತಮ್ಮನ್ನು ಪ್ಯಾಲಸ್ತೀನಿ ಎಂದೇ ಗುರುತಿಸಿಕೊಳ್ಳುತ್ತಾರೆ. ಆಕೆಯ ತಂದೆ ಬೆರೂತ್ ನಲ್ಲಿ ಬ್ರಿಟಿಷ್ ದೂತಾವಾಸದಲ್ಲಿ ಕೆಲಸದಲ್ಲಿದ್ದುದರಿಂದ ಮುಂದಾಲೋಚಿಸಿ, ಕುಟುಂಬಕ್ಕೆ ಬ್ರಿಟಿಶ್ಃ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದರು. ಮುಂದೆ1975ರಲ್ಲಿ, ಬೆರೂತ್ ಯೂನಿವರ್ಸಿಟಿ ಕಾಲೇಜಿನಲ್ಲಿ ಗ್ರಾಫಿಕ್ ಡಿಸೈನ್ ಕಲಿತು, ಅಲ್ಲೇ ಜಾಹೀರಾತು ಸಂಸ್ಥೆಯೊಂದರಲ್ಲಿ ಕೆಲಸದಲ್ಲಿದ್ದ ಮೋನಾ ತನ್ನ ಕೆಲಸದ ಬಗ್ಗೆ ಸಮಾಧಾನ ಹೊಂದಿರಲಿಲ್ಲ. ಆಕೆ ಹೆಚ್ಚಿನ ಅವಕಾಶಗಳನ್ನರಸಿ 1975ರಲ್ಲಿ ಇಂಗ್ಲಂಡಿಗೆ ಹೋಗುತ್ತಾರೆ. ಅಲ್ಲಿರುವಾಗಲೇ ಹಠಾತ್ ಆಗಿ ಲೆಬನಾನ್ ನಲ್ಲಿ ಆಂತರಿಕ ಕದನ-ಅಶಾಂತಿ ಏರ್ಪಟ್ಟು ಆಕೆಗೆ ಹಿಂದಿರುಗಲಾಗುವುದಿಲ್ಲ. ಲಂಡನ್ ನಲ್ಲೇ ಆಕೆ ಗಂಭೀರವಾಗಿ ಕಲೆಯ ಅಧ್ಯಯನ ಆರಂಭಿಸಿ, ಸ್ಲೇಡ್ ಕಲಾಶಾಲೆಯ ಪದವಿ ಪಡೆಯುತ್ತಾರೆ.

ಪದವಿಯ ಬಳಿಕ ಕಲಾ ರೆಸಿಡೆನ್ಸಿಗಳ ಸಹಾಯ ಮತ್ತು ಶಿಕ್ಷಕಿಯಾಗಿ ದುಡಿಮೆಗಳ ಮೂಲಕ ಬದುಕು ಕಟ್ಟಿಕೊಳ್ಳುತ್ತಾ, ಜೊತೆಗೇ ಕಲಾವ್ಯವಸಾಯದಲ್ಲಿ ತೊಡಗಿದ ಮೋನಾ ಅವರ ಮೊದಲ ಪರ್ಫಾರ್ಮೆನ್ಸ್ ಕಲಾಕೃತಿ Road Works (1985) ಲಂಡನ್ ನಗರದ ಬೀದಿಗಳಲ್ಲಿ ಬರಿಗಾಲಲ್ಲಿ, ಕಾಲಿಗೆ ಮಿಲಿಟರಿ ಬೂಟು ಜೋತಾಡಿಸಿಕೊಂಡು ಅವನ್ನು ರಸ್ತೆಯಲ್ಲಿ ಎಳೆದಾಡುತ್ತಾ ತಿರುಗಾಡುವ ಪರ್ಫಾರ್ಮೆನ್ಸ್ ಇದು. ಅದಾದ ಬಳಿಕ ಆಕೆಯ ಇನ್ನೊಂದು ಮಹತ್ವದ ಕಲಾಕೃತಿ Measures of Distance (1988) ಒಂದು ವೀಡಿಯೊ ಕಲಾಕೃತಿಯಾಗಿದ್ದು ಆಕೆಯ ತಾಯಿ ಸ್ನಾನ ಮಾಡುತ್ತಿರುವ ದೃಶ್ಯ ಮತ್ತು ಮುನ್ನೆಲೆಯಲ್ಲಿ ಅರೆಬಿಕ್ ಅಕ್ಷರಗಳ ಜೊತೆಗೆ ತಾಯಿ ಮಗಳ ನಡುವಿನ ಪತ್ರವ್ಯವಹಾರವನ್ನು ಆಕೆ ಓದುವ 15ನಿಮಿಷಗಳ ವೀಡಿಯೊ ಇದು. ಈ ವೀಡಿಯೊ ಗೆ ಲೇಖಕ ಎಡ್ವರ್ಡ್ ಸೈದ್ ಹೀಗೆ ಪ್ರತಿಕ್ರಿಯಿಸಿದ್ದರು: "no one has put the Palestinian experience in visual terms so austerely and yet so playfully, so compellingly and at the same moment so allusively."

ಈ ಹಂತದಲ್ಲಿ ಡೇಮಿಯನ್ ಹರ್ಸ್ಟ್ ಅವರ ಹಾಗೆಯೇ YBA (ಯಂಗ್ ಬ್ರಿಟಿಷ್ ಆರ್ಟಿಸ್ಟ್) ಚಳುವಳಿಯ ಪ್ರಮುಖ ಕಲಾವಿದರಲ್ಲೊಬ್ಬರು ಎಂದು ಪರಿಗಣಿತರಾದ ಮೋನಾ ಅಲ್ಲಿಂದ ಮುಂದೆ, ಇನ್ಸ್ಟಾಲೇಷನ್ ಕಲಾಕೃತಿಗಳನ್ನು ರಚಿಸತೊಡಗಿದರು. ಅವರ ಪ್ರಮುಖ ಕಲಾಕೃತಿಗಳು Light Sentence (1992), Van Gogh's Back (1995), Grater Divide (2002), Hot Spot III (2009), Map (clear) (2015). ಸಹಜ ದಿನಬಳಕೆಯ ವಸ್ತುಗಳೇ ಏಕಾಏಕಿ ವ್ಯಕ್ತಿಯನ್ನು ಹತ್ತಿಕ್ಕುವ, ಭಯ ಹುಟ್ಟಿಸುವ ವಿನ್ಯಾಸಗಳಾಗಿ ಬದಲಾಗುತ್ತಾ ಹೋಗುವುದನ್ನು ಬಿಂಬಿಸುವ ಈ ಕಲಾಕೃತಿಗಳು ಕಿರಿದರಲ್ಲಿ ಹಿರಿದರ್ಥವನ್ನು ಹೇಳುವ ಸಮಕಾಲೀನ ಕಲಾಪರಂಪರೆಗೆ ಮಹತ್ವದ ಕೊಡುಗೆಗಳೆಂದು ಪರಿಗಣಿತವಾಗಿವೆ. ಈರೀತಿ ಮೇಲ್ನೋಟಕ್ಕೆ ನಿರಪಾಯಕಾರಿ ಎನ್ನಿಸುವ ಸಂಗತಿಗಳೇ ವ್ಯಗ್ರಗೊಳ್ಳಬಲ್ಲ ಒಳಹರಿವುಗಳನ್ನು ಹೊಂದಿರುವುದರ ಕುರಿತು ಪ್ರಶ್ನೆಗಳನ್ನು ಜನ ಕೇಳಿಕೊಳ್ಳುವುದು ಅಗತ್ಯ ಎಂಬುದು ಕಲಾವಿದೆಯ ಅಭಿಪ್ರಾಯ.

ರಾಜಕೀಯ ಕಾರಣಗಳಿಗಾಗಿ ದೇಶದಿಂದ ಹೊರಗೆ ಹೋಗಬೇಕಾಗಿ ಬಂದು, ಅಲ್ಲಿ ಬದುಕು ಕಟ್ಟಿಕೊಳ್ಳುವ ಜೊತೆಗೇ ತನ್ನ ಸುತ್ತಣ ರಾಜಕೀಯಕ್ಕೆ ಪ್ರತಿಕ್ರಿಯಿಸುವ ಮೋನಾ ಹಾಟಮ್ ಅವರ ಕಲಾಕೃತಿಗಳನ್ನು ಚೀನಾದ ಅವರ ಸಮಕಾಲೀನ ಕಲಾವಿದ ಆಯ್ ವೇಯಿ ವೇಯಿ ಅವರ ಬದುಕಿನ- ಕಲಾಕೃತಿಗಳ ಜೊತೆಗೆ ಇರಿಸಿ ಹೋಲಿಸಿ ನೋಡಬಹುದು

ಮೋನಾ ಹಾಟಮ್ ಅವರ ಪ್ರಮುಖ ವೀಡಿಯೊ ಕಲಾಕೃತಿ Measures of Distance(1988):

ಮೋನಾ ಹಾಟಮ್ ಅವರ ಮಾತುಗಳು ಇಲ್ಲಿವೆ:

ಮೋನಾ ಹಾಟಮ್ ಅವರ . Road Works (1985)

ಮೋನಾ ಹಾಟಮ್ ಅವರ Hotspot (2018)

ಮೋನಾ ಹಾಟಮ್ ಅವರ Light Sentence (1992)

ಮೋನಾ ಹಾಟಮ್ ಅವರ Inside Out (2019)

ಮೋನಾ ಹಾಟಮ್ ಅವರ Remains to be seen (2019)

ಮೋನಾ ಹಾಟಮ್ ಅವರ Vangogh’s back (1995)

ಈ ಅಂಕಣದ ಹಿಂದಿನ ಬರೆಹಗಳು

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...