ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...


"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್ತಿ. ಕಥೆಗಳೆಂದರೆ ಉಪರಿಯ ಕಥೆಗಳ ಹಾಗಿರಲಿ ಎಂದು ಬಯಸುವ ಹಾಗೆ ಹದವಾದ ರಸ ಮಿಶ್ರಣವಿದು. ಕಥೆಗಳಲ್ಲಿ ಕ್ರಿಸ್ಪ್ನೆಸ್ ಬಯಸುವವರಿಗೆ ಒಂದೊಳ್ಳೆಯ ಓದು," ಎನ್ನತ್ತಾರೆ ಕವಿತಾ ಹೆಗಡೆ ಅಭಯಂ. ಅವರು ಅಜಿತ್ ಹರೀಶಿಯವರ ‘ಉಪರಿ’ ಕೃತಿ ಕುರಿತು ಬರೆದಿರುವ ವಿಮರ್ಶೆ.

“ಅಂತರ್ಗತ” ಎಂಬ ಕಥೆಯಲ್ಲಿ ಲೇಖಕನೇ ಕಲ್ಪಿಸಿಕೊಂಡು ಕಥೆಯಲ್ಲಿ ಸೃಷ್ಟಿಸಿದ ಶಿವರಾಮರಾಯರ ಪಾತ್ರವೊಂದು ಅಚಾನಕ್ಕಾಗಿ ಅವನ ಮುಂದೆ ಬಂದು ‘ನನ್ನ ಕಥೆಯನ್ನೇ ಅದು ಹೇಗೆ ಬರೆದಿರಿ? ಯಾರನ್ನು ಕೇಳಿ ಬರೆದಿರಿ?’ ಎಂದು ಪ್ರಶ್ನಿಸುವ ಸಂದರ್ಭ ತುಂಬ ಜಾಣ್ಮೆಯಿಂದ ವ್ಯಕ್ತವಾಗಿದೆ. ಅವರ ಕುಟುಂಬದ ಇತರ ಪಾತ್ರಗಳನ್ನೂ ತೋರಿಸಿ ಶಿವರಾಮರಾಯರು ತಮ್ಮ ಕುಟುಂಬವನ್ನು, ವೈಯಕ್ತಿಕ ಬದುಕನ್ನು ಸಾರ್ವಜನಿಕರ ಎದುರು ಹರಾಜು ಹಾಕುವುದು ನ್ಯಾಯವೇ ಎಂದು ಪ್ರಶ್ನಿಸುವುದು ಕಥೆಗಾರರ ಅಂತಃಸಾಕ್ಷಿಗೇ ಎಸೆದ ಪ್ರಶ್ನೆ. ಕಥೆಗಾರನಿಗೆ ಇದರ ಹೊರತು ಬೇರೆ ದಾರಿಯಿಲ್ಲ. ಪಾತ್ರಗಳು ಅವನು ಹೇಳಿದಂತೆ ಕುಣಿಯಲೇ ಬೇಕು. ಆದರೆ ಅಂಥ ಪಾತ್ರಗಳು ಒಂದೊಮ್ಮೆ ಜೀವಂತವಾಗಿ ಕಣ್ಮುಂದೆ ಬಂದುಬಿಟ್ಟರೆ? ಆಹಾ! ಸೊಗಸಾಗಿದೆ ಈ ಕಥೆ.

“ಉಪರಿ” ನನ್ನ ಮೆಚ್ಚಿನ ಕಥೆ. ಒಂದರ ಮೇಲೊಂದು ತಿಥಿ ಅಥವಾ ತಿಂಗಳು ಬಂದಾಗ ಉಪರಿ ಎನ್ನುತ್ತೇವೆ. ಚೌತಿ, ಹುಣ್ಣಿಮೆ, ಅಮಾವಾಸ್ಯೆ ಅಥವಾ ಆಷಾಢದಂಥವು ಡಬಲ್ ಬಂದು ಎರಡು ದಿನ ಆಚರಣೆ ಅಂದುಬಿಟ್ಟರಂತೂ ಎಲ್ಲರಿಗೂ ಕನ್ಫ್ಯೂಶನ್. ಆದರೂ ಏನೋ ಸಂಭ್ರಮ. ಇಲ್ಲಿ ಉಪರಿ ಎಂಬ ಶಬ್ದದ ಬಳಕೆ ಬಹಳ ಕೌಶಲ್ಯಪೂರ್ಣವಾಗಿ ಆದ ಹಾಗನಿಸಿತು. ಮನಸ್ಸಿನ ಆಟವನ್ನು ಅಜಿತ್ ಅವರು ಮರ್ಮಿಕವಾಗಿ ನಿರೂಪಿಸಿದ್ದನ್ನು ಓದೇ ಅರಿಯಬೇಕು.

“ಕಾಲ ವಟಿ”ಯ ಕೈಲಾಜಿ ಬಹುಕಾಲ ನೆನಪಿರಬಲ್ಲ ವಿಶಿಷ್ಟ ಪಾತ್ರ.

“ತಾರೆ”, “ತುಂಬೀತೆ ಒಲವು”, “ನೀಲಿ ಕಮಲ”ಗಳು ಆಕರ್ಷಕ ಶೈಲಿಯಲ್ಲಿವೆ

“ರೆಕ್ಕೆಯಗಲ ಪದ” ಇನ್ನೊಂದು ಕಾಡುವ ಕಥೆ. ತನ್ನ ವೈವಾಹಿಕ ಬದುಕಿನ ಸಂಭ್ರಮಗಳೆಲ್ಲ ಮಿಥ್ಯವೆಂದು ತಿಳಿದ ಸುಭಾಷಿಣಿಯ ಬಿಡುಗಡೆಯ ಕಥೆ. ತಾನು ಯಾವುದನ್ನು ತನ್ನ ಗಂಡನ ಪ್ರೀತಿ ಎಂದು ಉಮೇದಿಯಲ್ಲಿದ್ದೆನೋ ಆದು ಪ್ರೀತಿಯಲ್ಲ, ಕಿರುಕುಳ ಅನಿಸಿದ ಕ್ಷಣ ಅವಳಿಗೆ ಎಷ್ಟು ತಲ್ಲಣ ನೀಡಿರಬಹುದು? ತುಂಡು ಬಟ್ಟೆ ತೊಡಿಸಿ ವಿಕೃತಿ ಮೆರೆಯುವ ಗಂಡ ರಮಾನಂದನ ಬಗ್ಗೆ ಅವಳ ಮುಜುಗರ ಎಷ್ಟಿರಬೇಡ? ತನ್ನ ಒಳಗುದಿಗೆ ತಾನೇ ಪರಿಹಾರ ಕಂಡುಕೊಳ್ಳುತ್ತ ಅವಳು ಸ್ವತಂತ್ರಳಾಗಿ ಹೊರ ನಡೆವ ಸಂದರ್ಭದ “ತನು ಬಂಧನವ ಮೀರಿ ಮನಗುದುರೆಯ ರೆಕ್ಕೆ ಬಿಚ್ಚಿ ಬಡಿದು” ಎಂಬ ವಾಕ್ಯ ಎದೆಯಲ್ಲಿ ಸ್ಥಿರವಾಗಿಬಿಡುತ್ತದೆ.

ಬಿಳಿ ಮಲ್ಲಿಗೆಯ ಬಾವುಟ, ಸೂರು ಹಿಡಿಯದ ಹನಿಗಳು, ಕನಸಿನ ದನಿ ಎಂಬ ಕವನ ಸಂಕಲನಗಳು, ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಎಂಬ ಕಥಾ ಸಂಕಲನಗಳ ನಂತರ ಬಂದ ಪುಸ್ತಕ ಸಮತೋಲಿತ ಚಿತ್ತದ ಕಥೆಗಾರನ ಒಂದು ಕುಶಲ ಕುಸುರಿ.

ಈ ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು. ಓದದಿದ್ದರೆ ನೀವೊಂದು ಸುಖದ ಓದನ್ನು ತಪ್ಪಿಸಿಕೊಳ್ಳುವುದು ಕೂಡ ಹೌದು.

ಅಜಿತ್ ಇನ್ನಷ್ಟು ಬರೆಯಲಿ. ಇನ್ನಷ್ಟು ಓದಿಸಲಿ ಎಂಬ ಹಾರೈಕೆಯೊಂದಿಗೆ ಉಪರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಕೋರುತ್ತೇನೆ.

- ಕವಿತಾ ಹೆಗಡೆ ಅಭಯಂ

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...