Date: 15-03-2025
Location: ಬೆಂಗಳೂರು
ಮಂಗಳೂರು: ಕನ್ನಡ-ತುಳು ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಾಮನ ನಂದಾವರ (82) ಶನಿವಾರ ನಿಧನರಾದರು. ಇವರು ಪತ್ನಿ, ಲೇಖಕಿ ಚಂದ್ರಕಲಾ ನಂದಾವರ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ವಾಮನ ನಂದಾವರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದವರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಬಿ.ಎಸ್‌ಸಿ ಪದವಿ ಪಡೆದ ಅವರು ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ (ಕನ್ನಡ) ಪದವೀಧರರಾದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ.ವಿವೇಕ ರೈಯವರ ಮಾರ್ಗದರ್ಶನದಲ್ಲಿ 'ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಗಳಿಸಿದರು.
ಬೆಂಗಳೂರುದ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಜೀವನ ಆರಂಭಿಸಿದ ಅವರು ಸೇಂಟ್ ಆನ್ಸ್ ಪ್ರೌಢಶಾಲೆಯ ಸಹಾಯಕ ಅಧ್ಯಾಪಕರಾಗಿ, ಸೇಂಟ್ ಆನ್ಸ್ ಮಹಿಳಾ ಶಿಕ್ಷಕ-ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ, ಸಹ್ಯಾದ್ರಿ ಶಿಕ್ಣಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂದಿರಾ ಗಾಂಧಿ ರಾಷ್ತ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿದ್ದ ಅವರು ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿ ಹಾಗೂ ಮಂಗಳೂರು ದರ್ಶನ ಯೋಜನೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು.
ವಾಮನ ನಂದಾವರ ಅವರ ಪ್ರಕಟಿತ ಕೃತಿಗಳು: ತಾಳಮೇಳ (ಕನ್ನಡ ಕವನ ಸಂಕಲನ) (1975), ಓಲೆಪಟಾಕಿ (ಸ್ವತಂತ್ರ ತುಳು ಕನ್ನಡ ಒಗಟುಗಳ ಸಂಕಲನ) (1980), ತುಳುವೆರೆ ಕುಸಾಲ್ ಕುಸೆಲ್ (ತುಳು ಜಾನಪದ ಪ್ರಬಂಧ) (1987/1988), ಸಿಂಗದನ (ತುಳು ಜಾನಪದ ಅಧ್ಯಯನ ಪ್ರಬಂಧ) (1987/1988), ತುಳುಟು ಪನಿಕತೆ (ತುಳುತ್ತ ದಂತ ಕತೆಕುಲು)(1988), ಅವಳಿ ವೀರರೆ ಕುರಿತ ಜಾನಪದ ಮಹಾಕಾವ್ಯ ‘ಕೋಟಿ ಚೆನ್ನಯ', 'ಜಾನಪದ ಸುತ್ತಮುತ್ತ’, ಡಿ.ವಿ.ಜಿ.ಯವರ ಸಾಹಿತ್ಯ ವಿಮರ್ಶೆ ‘ನಂಬಿಕೆ’, ಅಭಿನಂದನ ಗ್ರಂಥ ‘ಕಾಕಾನ ಅಭಿನಂದನೆ’, ಸ್ಮರಣ ಸಂಚಿಕೆ ‘ಪೆಂಗದೂಮ’, ಬರಹಗಾರೆರೆ ಕೈಪಿಡಿ ‘ತುಳು ಸಾಹಿತಿ ಕಲಾವಿದರ ಮಾಹಿತಿ’, ಕನ್ನಡ ಸಾಹಿತ್ಯ ಸಮ್ಮೇಳನದ ‘ಪೊನ್ನ ಕಂಠಿ’, ‘ಅಜ್ಜಿ ತಾಂಕಿನ ಪುಳ್ಳಿ’, ‘ನೆತ್ತರಾ ನೀರಾ’, ಇಂಚಿತ್ತಿ ತುಳು ನಾಟಕೊಲು, ತುಳು ಸಾಹಿತ್ಯ ಚರಿತ್ರೆ, ತುಳು ಜಾನಪದದ ಆಚರಣೆ, ತುಳು ಭಾಷಾ ಸಾಹಿತ್ಯ ಡಿ.ಕೆ. ಚೌಟ ಇಂಚಿತಿ ವ್ಯಕ್ತಿ ಚಿತ್ರ, ಮನಶಾಸ್ತ್ರ ವಿಜ್ಞಾನಿಯ ಜೀವನ – ಸಾಧನೆ ಕುರಿತ ‘ಸರ್ ಜೀಮ್ಸ್ ಜಾರ್ಜ್ ಫ್ರೆಜರ್’, ತುಳು ಕವನ ಸಂಕಲನ ‘ಬೀರ’, ತುಳು ದಂತಕತೆ ‘ತುಳುಟು ಪನಿಕತೆ’ ಮತ್ತು ‘ಒಂಜಿ ಕೋಪೆ ಕತೆಕುಲು’, ತುಳು ಜಾನಪದ ಕತೆ ‘ಕಿಡಿಗೇಡಿಯ ಕೀಟಲೆ’, ಮಕ್ಕಳ ಕಥೆ ‘ಕೋಟಿ ಚೆನ್ನಯ’.
ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ, ಅವರಿಗೆ ಬಂಟ್ವಾಳ ತಾಲ್ಲೂಕು 12ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರಿಗೆ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುರಸ್ಕಾರ ದೊರೆತಿವೆ
ಬೆಂಗಳೂರು: ಲೇಖಕ ಪುರುಷೋತ್ತಮ ದಾಸ್ ಅವರ ‘ಯಯಾತಿ’ ಕಾದಂಬರಿಯ ಲೋಕಾರ್ಪಣಾ ಕಾರ್ಯಕ್ರಮವು 2025 ಮಾ 16 ಭಾನ...
ಧಾರವಾಡ: ಸಾಹಿತ್ಯ ಗಂಗಾ ಧಾರವಾಡದ ವತಿಯಿಂದ ಕೊಡಮಾಡುವ 2024ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಪ್ರಕಟವಾ...
ಧಾರವಾಡ: ಬಹು ಭಾಷಾ ಪಂಡಿತರು, ಹಿರಿಯ ಸಾಹಿತಿಗಳು, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಪಂಚಾಕ್ಷ...
©2025 Book Brahma Private Limited.