’ಸ್ವತಂತ್ರ ಭಾರತ’ ಎಂಬ ಇತ್ಯರ್ಥವಾಗದ ವಿದ್ಯಮಾನ

Date: 19-01-2021

Location: .


ಮೂಲಭೂತ ಚೌಕಟ್ಟನ್ನು ವಿರೋಧಿಸುತ್ತಿರುವ ಸದ್ಯದ ರೈತ ಹೋರಾಟ ಯಾವ ರಾಜಕೀಯ ಪಕ್ಷವನ್ನೂ ತನ್ನ ಒಳಗೆ ಸೇರಿಸಿಕೊಳ್ಳದಿರುವುದು ಅತ್ಯಂತ ವಿವೇಕದ ನಡೆ. ಈ ಚಳವಳಿಯ ದೊಡ್ಡ ಗುಣ ಮತ್ತು ಯಶಸ್ಸು ಇದೇ ಆಗಿದೆ ಎನ್ನುತ್ತಾರೆ ನಿತ್ಯಾನಂದ ಬಿ ಶೆಟ್ಟಿ. ಕೃಷಿಗೆ ಸಂಬಂಧಿಸಿದ ಮೂರು ಕಾಯಿದೆಗಳ ವಿರುದ್ಧ ಪ್ರಸ್ತುತ ರೈತರು ರಾಜಧಾನಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯನ್ನು ನಿತ್ಯಾನಂದರು ಇಂದಿನ ‘ಲೋಕೋಕ್ತಿ’ ಅಂಕಣದಲ್ಲಿ ಯು. ಆರ್. ಅನಂತಮೂರ್ತಿ ಅವರ ‘ಊರು-ದೇಶ’ ಕವಿತೆಯ ಮೂಲಕ ವಿಶ್ಲೇಷಿಸಿದ್ದು ಇಲ್ಲಿದೆ.

ಯು. ಆರ್. ಅನಂತಮೂರ್ತಿಯವರ ಅಷ್ಟಾಗಿ ಪರಿಚಿತವಲ್ಲದ ಒಂದು ಕವನದಿಂದಲೇ ಮಾತಿಗೆ ತೊಡಗೋಣ. ಆ ಕವನ ಹೀಗಿದೆ:

ಊರು-ದೇಶ

ಸತ್ತು ಬದುಕಿ ಊರು
ಸೋತು ಗೆದ್ದು ದೇಶ

ಒಳದಾರಿ ತುಳಿದು ಊರು
ಹೆದ್ದಾರಿ ತಿಳಿದು ದೇಶ

ಗೊತ್ತಾಗಿ ಇರೋದು ಊರು
ಗುರಿಯಾಗಿ ಉಳಿಯೋದು ದೇಶ

ಎಣ್ಣಿ ಊರು, ಎಣಿಸಿ ದೇಶ
ಹರಟಿ ಊರು, ಸ್ತುತಿಸಿ ದೇಶ

ಒಂದು ಮಮತೆಗೆ
ಇನ್ನೊಂದು ಘನತೆಗೆ

ಬದುಕಿದ್ದು ಊರು
ಭಾವಿಸಿದ್ದು ದೇಶ

ಒಂದು ಕಥೆ
ಇನ್ನೊಂದು ಇತಿಹಾಸ (ಇಲ್ಲಿಯವರೆಗಿನ ಕವಿತೆಗಳು, 2002, ಪ್ರಿಸಮ್ ಬುಕ್ಸ್, ಬೆಂಗಳೂರು.)

ಈ ಕವನ ಇದ್ದಕ್ಕಿದ್ದಂತೆ ನನಗೆ ನೆನಪಾಗಿರುವುದಕ್ಕೂ ಒಂದು ಹಿನ್ನೆಲೆ ಇದೆ.

ಜನರ ಆರೋಗ್ಯದ ಪರಿಸ್ಥಿತಿ ಚಿಂತಾಜನಕವಾಗಿದ್ದು ದೇಶದಲ್ಲಿ ಮೆಡಿಕಲ್ ಎಮರ್ಜೆನ್ಸಿ ಇದ್ದ ಕಾಲದಲ್ಲಿ ನಮ್ಮ ಕೇಂದ್ರ ಸರಕಾರ ಕೃಷಿಗೆ ಸಂಬಂಧಿಸಿದ ಮೂರು ಕಾಯಿದೆಗಳನ್ನು ರೂಪಿಸಿತು. ಇದರ ವಿರುದ್ಧ ನಮ್ಮ ರೈತರು ರಾಜಧಾನಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವ ಕಾಲ ಇದು. ಪ್ರಾಯಶಃ ಸ್ವಾತಂತ್ರ್ಯ ಹೋರಾಟದ ನಂತರ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಅಹಿಂಸಾತ್ಮಕ ಹೋರಾಟವೂ ಇದು ಹೌದು. ಜಗತ್ತಿನ ಬೇರೆಬೇರೆ ದೇಶಗಳು ಭಾರತದಲ್ಲಿ ಏನಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವುದೂ ಈ ಹೋರಾಟದ ಅಸಾಮಾನ್ಯತೆಯನ್ನು ಎತ್ತಿ ಹೇಳುವಂತಿದೆ.

ಹಿಂಸೆ ಇಲ್ಲ, ಅಸಂಸದೀಯ ಪದಗಳ ಬಳಕೆ ಇಲ್ಲ, ನಿಂದನೆ-ಭರ್ತ್ಸನೆಗಳಿಲ್ಲ, ಪ್ರತಿಭಟನೆಗೆ ಬಂದ ತಮ್ಮ ಒಡನಾಡಿಗಳು ಕಣ್ಣ ಮುಂದೆಯೇ ಹೆಣವಾಗುತ್ತಿದ್ದರೂ ಸಮಚಿತ್ತದಿಂದ ಕುಳಿತಿರುವ ರೈತರು ರೋಷಾವೇಶದಿಂದ ಕ್ರುದ್ಧರಾಗಿಲ್ಲ, ದೇಶದ ಸಭ್ಯ ಕಾನೂನುಗಳಿಗೆ ವಿಧೇಯರಾಗಿದ್ದುಕೊಂಡೇ ಅ-ಸಭ್ಯ ಕಾಯಿದೆಗಳನ್ನು ರದ್ದುಗೊಳಿಸುವಂತೆ ಶಾಂತಚಿತ್ತದಿಂದ ಒತ್ತಾಯಿಸುವ ಇವರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿಲ್ಲ. ಒಂದು ವಿಶಾಲವಾದ ನೋಟದಲ್ಲಿ ಇದನ್ನು ನೋಡುವಾಗ, ನಮ್ಮ ಕಣ್ಣಮುಂದಿನ ಈ ಅಭೂತಪೂರ್ವ ದೃಶ್ಯ ಬಲಿಷ್ಠ ರಾಷ್ಟ್ರಪ್ರಭುತ್ವವೊಂದನ್ನು ಊರಿಗೆ ಊರೇ ಒಟ್ಟಾಗಿ ಎದುರು ಹಾಕಿಕೊಂಡಂಥ ದೃಶ್ಯ. ಇದುವರೆಗೆ ಯಾವುದಕ್ಕೂ ಜಗ್ಗದ, ಪ್ರತಿಪಕ್ಷಗಳನ್ನು ಕಡೆಗಣ್ಣಿನಿಂದಲೂ ನೋಡದ ನಮ್ಮ ಪ್ರಭುತ್ವ ತನ್ನೆದುರು ಬಂದು ನಿಂತ ಈ ಜನಸ್ತೋಮವನ್ನು ಕಂಡು ದಿಙ್ಮೂಢಗೊಂಡಿದೆ. ಹುಲು ಮಾನವರ ಇದಿರು ದರ್ಪದಿಂದ ಅವಡುಗಚ್ಚಿ ನಿಂತ ವ್ಯವಸ್ಥೆಯ ದಾರ್ಷ್ಟ್ಯ, ಉಸಿರು ಬಿಗಿ ಹಿಡಿದು ನಿಂತವರ ಸಹನೆಯ ಮುಂದೆ ದಂಗು ಬಡಿದು ಹೋಗಿದೆ. ಅವಾಕ್ಕಾಗಿದೆ.

ರಾಷ್ಟ್ರವನ್ನು ಎದುರು ಹಾಕಿಕೊಂಡ ಊರು ಎಂದು ಈ ಪ್ರತಿಭಟನೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ನನಗೆ ತಕ್ಷಣವೇ ನೆನಪಿಗೆ ಬಂದದ್ದು ಈ ಕವನ.

ಒಂದರ ಸಮ್ಮುಖದಲ್ಲಿ ಇನ್ನೊಂದನ್ನು ತುಲನೆ ಮಾಡುವ ಧಾಟಿಯಲ್ಲಿರುವ ಈ ಕವನ ಊರು ಮತ್ತು ದೇಶ (ಆಧುನಿಕ ಅರ್ಥದ ರಾಷ್ಟ್ರ)ಗಳ ಕುರಿತ ನಮ್ಮ ನಿರನುಮಾನವನ್ನು (ಅನುಮಾನವೇ ಇಲ್ಲದ ಮನಃಸ್ಥಿತಿ) ಕೆಣಕುವಂತಿದೆ. ಸಹಜ-ಸ್ವಾಭಾವಿಕವೆಂದು ನಾವು ಇದುವರೆಗೆ ನಂಬಿರುವ, ನಮ್ಮ ನಂಬಿಕೆಯ ತಿಳಿಗೊಳವನ್ನು ಈ ಕವನ ತನ್ನ ದ್ವಿಪಾದಗಳಲ್ಲಿ ಕಲಕುತ್ತಿದೆ. ಸದ್ಯದ ರೈತ ಹೋರಾಟದ ಹಿನ್ನೆಲೆಯಲ್ಲಿ ಇದನ್ನು ಹೀಗೆ ಓದೋಣ.

ಸತ್ತು ಬದುಕಿ ಊರು
ಸೋತು ಗೆದ್ದು ದೇಶ

  • ದೆಹಲಿಯಲ್ಲಿ ಬೀಡು ಬಿಟ್ಟಿರುವ ರೈತರು ಕೃಷಿಗೆ ಸಂಬಂಧಿಸಿದ ಈ ಮೂರು ಕಾಯಿದೆಗಳನ್ನು ಕೃಷಿಕರ ಮರಣಶಾಸನವೆಂದೇ ಬಗೆದು ಅಂತಿಮ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಹಾಗಾಗಿ ಅವರು ಇದನ್ನು ತಮ್ಮ ಸಾವು-ಬದುಕಿನ ಪ್ರಶ್ನೆ ಎಂದೇ ತಿಳಿದಿದ್ದಾರೆ. ಪ್ರಭುತ್ವ ಮಾತ್ರ ಈ ಪ್ರತಿಭಟನೆಗೆ ತಲೆಬಾಗುವುದೆಂದರೆ ಇದು ತನ್ನ ಸೋಲು-ಗೆಲುವಿನ ಪ್ರಶ್ನೆ ಎಂದು ತಿಳಿದಂತಿದೆ. ತನ್ನನ್ನು ಆರಿಸಿ ಕಳುಹಿಸಿದ ಜನರಿಗೂ ತನಗೂ ಯಾವ ಬಗೆಯ ಸಂಬಂಧವೂ ಇಲ್ಲ ಎಂದು ಖಡಾಖಂಡಿತವಾಗಿ ತಿಳಿದಾಗ ಮಾತ್ರ ಇಂಥ ಸೋಲು-ಗೆಲುವಿನ, ಮಾನ-ಅಪಮಾನದ ಪ್ರಶ್ನೆ ಸರಕಾರಕ್ಕೆ ಬರಲು ಸಾಧ್ಯ. ತಾನು ಯಾರ ಕೆಲಸವನ್ನು ಮಾಡಲು ಬಂದಿರುವೆ, ಯಾರ ಪರವಾಗಿ ಅಧಿಕಾರದಲ್ಲಿ ಇರುವೆ, ಯಾರ ಕಲ್ಯಾಣಕ್ಕಾಗಿ ಅಧಿಕಾರದ ದಂಡವನ್ನು ಹೇಗೆ ಪ್ರಯೋಗಿಸಬೇಕು ಎಂಬಿತ್ಯಾದಿ ಆತ್ಮವಿಮರ್ಶಾತ್ಮಕ ’ಒಳ-ನೋಟ’ ಪ್ರಭುತ್ವದಲ್ಲಿ ಇರುತ್ತಿದ್ದರೆ ಆಗ ಅದು ತನ್ನ ಕಣ್ಣೆದುರೇ ಹೆಣವಾಗುತ್ತಿರುವ ತನ್ನದೇ ಪ್ರಜೆಗಳನ್ನು ನೋಡಿ ತಳಮಳಕ್ಕೆ ಒಳಗಾಗುತ್ತಿತ್ತು. ಧರ್ಮಸಂಕಟದ ಲವಲೇಶವೂ ಇಲ್ಲದೆ, ಈ ಹೋರಾಟವನ್ನು ಸೋಲು-ಗೆಲುವಿನ ಯುದ್ಧವೆಂದು ಪರಿಭಾವಿಸಿರುವ ಪ್ರಭುತ್ವ ಊರಿನ ಹಂಗನ್ನು ತೊರೆದಿದೆ.

ಒಳದಾರಿ ತುಳಿದು ಊರು
ಹೆದ್ದಾರಿ ತಿಳಿದು ದೇಶ

  • ಪ್ರಾಚೀನ ಕಾಲದಲ್ಲಿ ವೈರಿಗಳು ರಾಜಧಾನಿಗೆ ಲಗ್ಗೆಯಿಡಲು ಬರುತ್ತಿದ್ದಾರೆ ಎಂಬ ಸೂಚನೆ ದೊರೆತಾಗ ಆಳುವ ಪ್ರಭುತ್ವ ತನ್ನ ಕೋಟೆಯನ್ನು ಬಂದು ತಲುಪಬಹುದಾದ ಹೆದ್ದಾರಿಗಳನ್ನು ಮುಚ್ಚುವುದನ್ನು, ಆಳವಾದ ಕಣಿವೆ-ಕಂದಕಗಳನ್ನು ತೋಡುವುದನ್ನು ನಾವು ಕೇಳಿದ್ದೇವೆ. ಇಂಥ ಯಾವುದೇ ತುರ್ತುಪರಿಸ್ಥಿತಿ ಇಲ್ಲದಿದ್ದರೂ ಈಗಿನ ಪ್ರಭುತ್ವದ ರಥ ಹರಿಯುವುದೂ ಹೆದ್ದಾರಿಗಳಲ್ಲೇ. ಹಾಗೆ ರಥ ಚಲಿಸುವಾಗ ಕೊಳಕು ಕಾಣಬಾರದೆಂದು ಅಡ್ಡಗೋಡೆ ಕಟ್ಟುವುದೂ ಹೆದ್ದಾರಿಯ ಮೇಲಿನ ಪ್ರೀತಿಯಿಂದಲೇ. ಅನುಕೂಲ ಮತ್ತು ಅಪಾಯ ಎರಡೂ ಹೆದ್ದಾರಿಯ ಮೂಲಕವೇ ಬರುತ್ತದೆ ಎಂದು ಭಾವಿಸಿರುವ ಪ್ರಭುತ್ವ ದೇಶದ ನಾನಾ ಮೂಲೆಗಳಿಂದ ರೈತರು ದೆಹಲಿಗೆ ಬರುತ್ತಿದ್ದಾಗ ಅವರು ರಾಜಧಾನಿ ತಲುಪದಂತೆ ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳನ್ನು ಅಗೆದು-ಬಗೆದು ಕಂದಕ ನಿರ್ಮಿಸಿತು, ರಸ್ತೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಿತು. ದೇಶ-ವಿದೇಶ ತಿರುಗದೆಯೂ, ಕೋಶ-ಕೋಶ ಓದದೆಯೂ; ಓಣಿ-ಒರುಂಕು ತಿರುಗಿ ಲೋಕಾನುಭವ ಶ್ರೀಮಂತರಾದ ರೈತರು ಒಳದಾರಿ-ಕಿರುದಾರಿ-ಕಾಲುದಾರಿಗಳ ಮೂಲಕ ದೆಹಲಿ ತಲುಪಿದರು.

ಗೊತ್ತಾಗಿ ಇರೋದು ಊರು
ಗುರಿಯಾಗಿ ಉಳಿಯೋದು ದೇಶ

  • ದೈನಂದಿನ ರೈತಾಪಿ ಬದುಕಿನ ಸಂಕಟಗಳನ್ನು ಅನುಭವದಿಂದ ಬಲ್ಲ ರೈತರಿಗೆ ಈ ತ್ರಿವಳಿ ಕಾಯಿದೆಗಳು ಜಾರಿಗೆ ಬರುವ ಮೊದಲೇ ಕಾಯ್ದೆಯ ದುಷ್ಪರಿಣಾಮಗಳು ಗೊತ್ತಿತ್ತು. ಅವರ ಊರಿನ ಸಾಮಾಜಿಕ ಸಂಕೀರ್ಣತೆಯೂ ಅವರಿಗೆ ಗೊತ್ತು. ಊರಿನಲ್ಲಿ ಸಮಸ್ಯೆಗಳಿಲ್ಲ ಎಂದಲ್ಲ. ಲಾಗಾಯ್ತಿನಿಂದ ಪರಿಹರಿಸಲಾಗದ ಬಿಕ್ಕಟ್ಟುಗಳು ಇರುವುದೂ ಅವರಿಗೆ ಗೊತ್ತು. ಆದರೆ ಪ್ರಭುತ್ವ ಮಾತ್ರ ತನ್ನನ್ನು ತಾನು ಪ್ರಶ್ನಾತೀತ ಮತ್ತು ಸಮಸ್ಯೆಮುಕ್ತ ಎಂದು ಭಾವಿಸಿಕೊಂಡಂತಿದೆ. ಎಲ್ಲ ತೊಂದರೆಗಳನ್ನು ಒಂದೇ ಏಟಿಗೆ ಪರಿಹರಿಸಬಲ್ಲ ಮಂತ್ರದಂಡವೊಂದು ತನ್ನಲ್ಲಿ ಇದೆ ಎಂಬ ನಂಬಿಕೆ ಅದಕ್ಕೆ. ಈ ಕಾಯಿದೆಗಳ ಮೂಲಕ ಕೇಂದ್ರೀಕೃತ ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ದೊಡ್ಡಗುರಿಯೊಂದನ್ನು ಈಡೇರಿಸುವ ಮಹತ್ವಾಕಾಂಕ್ಷೆಯನ್ನು ಅದು ಹೊಂದಿದೆ. ಹಾಗಾಗಿ ಅದು ರಭಸದಲ್ಲಿದೆ, ಉದ್ವೇಗದಲ್ಲಿದೆ, ತವಕದಲ್ಲಿದೆ. ಗುರಿ ಸೇರುವ ತವಕ.

ಎಣ್ಣಿ ಊರು, ಎಣಿಸಿ ದೇಶ
ಹರಟಿ ಊರು, ಸ್ತುತಿಸಿ ದೇಶ

  • ಕಾಯಿದೆ ಜಾರಿಗೊಂಡರೆ ದಿನನಿತ್ಯದ ಬದುಕು ಹೈರಾಣಾಗುವುದು ಖಚಿತ ಎಂಬುದನ್ನು ಅನುಭವದಿಂದ ಬಲ್ಲ ರೈತರು ಅದನ್ನು ನೆನೆ-ನೆನೆದು (ಎಣ್ಣಿ) ವಿಹ್ವಲಗೊಂಡಿದ್ದಾರೆ. ಇದೇ ಜನರು ಸಂಪೂರ್ಣ ನಂಬುಗೆಯಿಂದ ರಾಜದಂಡವನ್ನು ಕೊಟ್ಟು ಅಧಿಕಾರಕ್ಕೆ ತಂದಿರುವ ಪ್ರಭುತ್ವ ಮಾತ್ರ, ತನ್ನನ್ನು ಪೊರೆವ ಕಾರ್ಪೊರೇಟ್ ಧಣಿಗಳ ಉಗ್ರಾಣ ತುಂಬುವ ಉಗ್ರಾಣಿಯಂತೆ, ಒಡೆಯರ ಕಾಸಿನ ಚೀಲ ತುಂಬುವ ನೋಟುಗಳನ್ನು ಎಣಿಸುವ ಗುಮಾಸ್ತನಂತೆ ಕುಳಿತಿದೆ.

ತನ್ನ ಬಾಳ್ವೆಯ ಸುಖ-ಕಷ್ಟಗಳನ್ನು ತನ್ನವರೊಂದಿಗೆ ಹರಟಿ ನೀಗಿಕೊಳ್ಳಬಲ್ಲ ರೈತ, ಈಗ ನೀಗಲಾರದೆ, ಏಗಲಾರದೆ ತನ್ನ ಸಂಕಷ್ಟವನ್ನು ಹೇಳಲೆಂದೇ ದಿಬ್ಬ (ರಾಜಧಾನಿ) ಹತ್ತಿ ಕುಳಿತಿದ್ದಾನೆ. ಆದರೆ ತನ್ನ ಸ್ತುತಿಗಷ್ಟೇ ಕಿವಿ ತೆರೆದುಕೊಂಡಿರುವ ಪ್ರಭುತ್ವ ಉಳಿದ ಎಲ್ಲವಕ್ಕೂ ಕಿವುಡಾಗಿದೆ, ಕುರುಡಾಗಿದೆ. ’ಅಧಿಕಾರವೆಂದರೆ ಶಕ್ತಿಯುತವಾದ ಮದ್ಯ. ಅದು ಎಂಥವರ ತಲೆಯನ್ನೂ ತಿರುಗಿಸುತ್ತದೆ’ ಎಂದು ಹೇಳಿದ ಬುದ್ಧನ ಕಾಲಜ್ಞಾನದ ಮಾತಿಗೆ ಎದುರುಂಟೇ?

ಒಂದು ಮಮತೆಗೆ
ಇನ್ನೊಂದು ಘನತೆಗೆ

  • ಒಂದೆಡೆ ಭೂಮಿಯ ಜೊತೆ ಕಳ್ಳುಬಳ್ಳಿಯ ಸಂಬಂಧ ಕಟ್ಟಿಕೊಂಡ ರೈತನಿಗೆ ಆತನ ಪಾಲಿನ ತುಂಡು ನೆಲ; ನೆಲವಲ್ಲ ಅನ್ನದ ತಟ್ಟೆ. ಹುಟ್ಟಿ ಬೆಳೆದ ಊರಿನ ಜೊತೆ ನೂರೆಂಟು ತಂಟೆ-ತಕರಾರುಗಳಿದ್ದರೂ ಅವನಿಗದೇ ತವರೂರು. ಹಾಗಾಗಿ ಆತನಿಗೆ ಊರೆಂದರೆ ಮಮತೆ. ಇನ್ನೊಂದೆಡೆ ಸಾವಿರಾರು ವರ್ಷಗಳ ನಾಗರಿಕತೆಯ ಇತಿಹಾಸ ಹೊಂದಿರುವ ಈ ದೇಶಕ್ಕೆ ತನ್ನದೇ ಆದ ಘನತೆಯೂ ಇದೆ. ಈ ಘನತೆ ಸಾವಿರಾರು ವರ್ಷಗಳ ಸುದೀರ್ಘ ಚರಿತ್ರೆಯಿಂದಷ್ಟೇ ಬಂದಿರುವುದಲ್ಲ; ದೇಶವಾಸಿಗಳ ಗೌರವಯುತ ಬದುಕಿನೊಂದಿಗೆ ಬೆಸೆಯಲ್ಪಟ್ಟಿರುವುದರಿಂದ ಬಂದಿರುವುದು. ಭಾರತದಂಥ ದೇಶದಲ್ಲಿ ಘನತೆಯ ಬದುಕಿಗೆ ಸಂವಿಧಾನದ ಕಣ್ಗಾವಲೂ ಬೇಕಾಗುತ್ತದೆ. ಸಾಮಾಜಿಕ-ಲಿಂಗೀಯ ಸಮಾನತೆಯ ಆಗ್ರಹದಿಂದಲ್ಲವೇ ನಮ್ಮ ದೇಶಕ್ಕೆ ಘನತೆ ಬಂದಿರುವುದು. ಇಂಥ ಅಸಮಾನತೆಗಳೆಂಬ ಊರೊಳಗಿನ ಕೀವು, ಅದರಿಂದುಂಟಾದ ನೋವು, ರಾಷ್ಟ್ರೀಯ ಹೋರಾಟದ ಹೊತ್ತಿಗೆ ಕಾಣಿಸಿಕೊಂಡ ಬಾವು ಮುಪ್ಪುರಿಗೊಂಡಾಗ ಹುಟ್ಟಿದ ಸಂವಿಧಾನ ಈ ದೇಶಕ್ಕೆ ತಂದಿತ್ತ ಘನತೆಯೇನು ಸಾಮಾನ್ಯವೇ? ಮಮತೆಯನ್ನು ಸಂಕೇತಿಸುವ ಗಾಂಧಿ, ಘನತೆಯನ್ನು ಪ್ರತಿನಿಧಿಸುವ ಅಂಬೇಡ್ಕರ್ ಈ ಮಣ್ಣಲ್ಲಿ ಹುಟ್ಟದೇ ಇರುತ್ತಿದ್ದರೆ ಊರು ಊರೂ ಆಗುತ್ತಿರಲಿಲ್ಲ, ದೇಶ ದೇಶವೂ ಆಗುತ್ತಿರಲಿಲ್ಲ.

ಬದುಕಿದ್ದು ಊರು
ಭಾವಿಸಿದ್ದು ದೇಶ

  • ಹುಟ್ಟಿ ಬೆಳೆದ ಊರನ್ನು ಬಿಟ್ಟು ಹೊಟ್ಟೆಪಾಡಿಗಾಗಿ ವಲಸೆ ಹೋಗಿರುವ ಎಲ್ಲರಿಗೂ, ಅವರವರ ಭಾವಕೋಶದಲ್ಲಿ ಅವರವರ ಊರು, ಊರಿನ ನೆನಪು ತಣ್ಣಗೆ ಮಲಗಿರುತ್ತದೆ. ಕರಾವಳಿಯಲ್ಲಿ ಹುಟ್ಟಿ ಬಯಲುಸೀಮೆಯಲ್ಲಿ ಕೆಲಸ ಮಾಡುವ ನನ್ನಂಥವನು ವರ್ಷಕ್ಕೋ, ಎರಡು ವರ್ಷಕ್ಕೋ ಕುಟುಂಬ ಸಮೇತ ಊರಿಗೆ ಹೊರಟಾಗ, ಶಿರಾಡಿ ಘಾಟ್ (ಘಟ್ಟ) ಇಳಿದು ನೆಲ್ಯಾಡಿ, ಉಪ್ಪಿನಂಗಡಿಯ ಹೊಟೇಲುಗಳಲ್ಲಿ ಆಗ ತಾನೇ ಕರಿದು ತಂದಿಟ್ಟ ಗೋಳಿಬಜೆ-ಬನ್ಸ್ ಇತ್ಯಾದಿ ತಿಂಡಿಗಳನ್ನು ನೋಡಿದಾಗ, ಅದರ ಗಂಧವನ್ನು ಆಘ್ರಾಣಿಸಿದಾಗ ಮುಖದಲ್ಲಿ ಮಂದಹಾಸವೊಂದು ಜಿನುಗುವುದು ಯಾಕೆ? ಬಾಲ್ಯದ ನೆನಪುಗಳ ಕಚಗುಳಿ ಅಲ್ಲವೇ ಅದು? ನನ್ನ ಊರು ನನಗೆ ಹತ್ತಿರವಾದಷ್ಟು, ಆತ್ಮೀಯವಾದಷ್ಟು ರಾಜಧಾನಿಗಳಾದ ಬೆಂಗಳೂರು, ದೆಹಲಿಗಳು ಅಪರಿಚಿತವಾಗುತ್ತಲೇ ಹೋಗುವ ಈ ಒಗಟ ಬಿಡಿಸುವುದೆಂತು? ಕವಿರಾಜಮಾರ್ಗಕಾರನ ಕಾಣ್ಕೆ, ಎಷ್ಟೊಂದು ದೊಡ್ಡದು. ಎಂಟನೇ ಶತಮಾನದಲ್ಲೇ ಹೇಳಿಬಿಟ್ಟನಲ್ಲ ಅಂವ. ಇದು ’ಭಾವಿಸಿದ ಜನಪದ’ ವೆಂದು. ಊರಿನಷ್ಟು ನಿಜವಲ್ಲವೆಂದು.

ಒಂದು ಕಥೆ
ಇನ್ನೊಂದು ಇತಿಹಾಸ

  • ಒಂದೊಂದು ಊರಿಗೆ ಒಂದೊಂದು ಕಥೆ. ಊರಿನೊಳಗೋ ನೂರಾರು-ಸಾವಿರಾರು ಕಥೆ. ಊರಿನ ಕಥೆಯನ್ನು ಕೇಳುವುದು, ಊರಿನೊಳಗಣ ಧಂಡಿಧಂಡಿ ಕಥೆಯ ಭಾಗವಾಗಿ ಬಾಳುವುದು, ಊರ ಜನರ ನಿತ್ಯದ ದಿನಚರಿ. ಆದರೆ ಕೃಷಿಗೆ ಸಂಬಂಧಿಸಿದ ಈ ಕಾಯಿದೆಗಳು ಜಾರಿಗೊಂಡರೆ, ತನ್ನ ಬದುಕು ದುರಂತ ಅಂತ್ಯದ ಕಥೆ ಎಂದು ಊರ ಜನರು ದಿಗ್ಭ್ರಾಂತರಾಗಿದ್ದಾರೆ. ಆದರೆ ಈ ಕಾಯಿದೆಗಳಿಂದ ದೇಶದಲ್ಲಿ ಹೊಸ ಇತಿಹಾಸವೇ ಆರಂಭವಾಗಲಿದೆ ಎಂದು ಬೀಗುತ್ತಿದೆ ಪ್ರಭುತ್ವ. ಇಂಥ ಇತಿಹಾಸವನ್ನು ಬರೆಯುವ ಲಿಪಿಕಾರರಾಗುವುದಕ್ಕೆ, ಈ ’ಐತಿಹಾಸಿಕ’ ಕಾರ್ಯದ ಸ್ತುತಿಪಾಠಕರಾಗುವುದಕ್ಕೆ ಪ್ರಜಾಪ್ರಭುತ್ವದ ಕಾವಲುಗಾರರ ನಡುವೆ ಪೈಪೋಟಿಯೇ ಏರ್ಪಟ್ಟಿರುವುದು ಪ್ರಜಾಸತ್ತೆಗೆ ಬಂದಿರುವ ಹೊಸ ಬಿಕ್ಕಟ್ಟು. ಪ್ರಜಾಸತ್ತೆಯನ್ನು ಬದುಕಿನ ಭಾಗವಾಗಿಸದೆ, ಕೇವಲ ಅಲಂಕಾರವಾಗಿ ಮಾತ್ರ ಒಳಗೊಳ್ಳುವ ಜಗತ್ತಿನ ಯಾವ ದೇಶಕ್ಕಾದರೂ ಬಂದೊದಗಬಹುದಾದ ಅಪಾಯ ಇದು.

ಸಾಹಿತ್ಯದ ಶಕ್ತಿ ಅಂದರೆ ಇದೇ. ಹೊಸ ಕಾಲದಲ್ಲಿ ಹೊಸ ದೇಶದಲ್ಲಿ ಹೊಸ ಬಗೆಯ ಅರ್ಥನಿರೂಪಣೆ. ಈ ಕವನದ ಶೀರ್ಷಿಕೆ ಊರು-ದೇಶ ಎಂದಿದ್ದರೂ ನನಗೆ ಈ ಕವನ, ರಾಷ್ಟ್ರರಹಿತರ ರಾಷ್ಟ್ರಗೀತೆಯಾಗಿ ತನ್ನೆಲ್ಲಾ ವ್ಯಂಗ್ಯದ ಸಾಧ್ಯತೆಗಳೊಂದಿಗೆ ಅನಾವರಣಗೊಳ್ಳುತ್ತಿದೆ. ತನ್ನ ಕಲ್ಪನೆಯ ದೇಶ ಹೇಗಿರಬೇಕು ಎಂಬುದನ್ನು ಮೆಲುದನಿಯಿಂದ ಚಿತ್ರವತ್ತಾಗಿ ಆಗ್ರಹಿಸುವ ಈ ಕವನ; ಊರುಗಳಿಲ್ಲದ ದೇಶ ’ಊರುಭಂಗ’ಗೊಂಡ ದೇಶ ಎಂಬ ಕಟುಸತ್ಯವನ್ನು ಅರುಹುತ್ತಿರುವುದು ಅಮೋಘವಾಗಿದೆ.

ಈಗ ಕವನ ಎತ್ತಿದ ಪ್ರಶ್ನೆಗಳ ಗುಂಗಿನಿಂದ ಚಣಹೊತ್ತು ಹೊರಬಂದು ರೈತಹೋರಾಟವನ್ನು ನೋಡೋಣ.

1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಮಸೂದೆ-2020

2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ-2020

3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ-2020

ಈ ಮೂರು ಮಸೂದೆಗಳನ್ನು ನಮ್ಮ ಸರಕಾರ ಕಾಯ್ದೆಯಾಗಿಸಿದೆ. ಇವು ಕೃಷಿ ಉತ್ಪನ್ನಗಳ ತಡೆರಹಿತ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. ರೈತರಿಗೆ ತಮ್ಮ ಆಯ್ಕೆಯ ಹೂಡಿಕೆದಾರರೊಂದಿಗೆ ತೊಡಗಿಸಿಕೊಳ್ಳಲು ಅಧಿಕಾರ ನೀಡುತ್ತದೆ. ವ್ಯಾಪಾರ ಮತ್ತು ವಾಣಿಜ್ಯ ಮಸೂದೆಯಂತೂ ರೈತರು ಮತ್ತು ವ್ಯಾಪಾರಿಗಳ ನಡುವಣ ತಡೆಬೇಲಿಯನ್ನು ಕಿತ್ತು ರೈತರ ಉತ್ಪನ್ನಗಳ ನೇರ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿ ಆಯ್ಕೆಯ ಸ್ವಾತಂತ್ರ್ಯವನ್ನು ಕೊಡುತ್ತಿದೆ. ಅಷ್ಟು ಮಾತ್ರವಲ್ಲದೆ ಸ್ಪರ್ಧಾತ್ಮಕ ಪರ್ಯಾಯದ ಮೂಲಕ ಸೂಕ್ತ ದರವನ್ನು ಪಡೆಯುವಂಥ ಹೊಸ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಸರಕಾರ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ.

ಆದರೆ ರೈತರು ತ್ರಿವಳಿ ಕಾಯಿದೆಗಳ ಕಲಮುಗಳು ಓದುವುದಕ್ಕೆ ಸೊಗಸಾಗಿದ್ದಂತೆ ಕಂಡರೂ ಆಚರಣೆಗೆ ಬಂದಾಗ ಕ್ರೂರವಾಗುತ್ತವೆ. ಎಪಿಎಂಸಿಗಳ ಹೊರಗೆ ಸೆಸ್ ಸಂಗ್ರಹಿಸಲು ಸರಕಾರಕ್ಕೆ ಅವಕಾಶ ಇಲ್ಲದೆ ಇದ್ದಾಗ ಎಪಿಎಂಸಿಗಳಲ್ಲಿ ಈಗಾಗಲೇ ಇರುವ ವರ್ತಕರು ಎಪಿಎಂಸಿಗಳಿಂದ ಹೊರಗೆ ನಡೆಯುತ್ತಾರೆ. ಹಾಗೆಯೇ ಎಪಿಎಂಸಿಗಳ ಹೊರಗಿರುವ ವರ್ತಕರ ಮೇಲೆ ಸರಕಾರದ ನಿಯಂತ್ರಣ ಇಲ್ಲದಿರುವುದರಿಂದ ರೈತರ ಗೋಳನ್ನು ಕೇಳುವವರು ಇಲ್ಲವಾಗುತ್ತಾರೆ. ವರ್ತಕರಿಗೆ ಹೇಳುವವರೂ ಇಲ್ಲವಾಗುತ್ತಾರೆ. ಕಾಲಕ್ರಮೇಣ ಎಪಿಎಂಸಿ ವ್ಯವಸ್ಥೆಯೇ ಕುಸಿಯುವುದರಿಂದ ಇದುವರೆಗೆ ರೈತರಿಗೆ ಸಿಗುತ್ತಿದ್ದ ಬೆಂಬಲ ಬೆಲೆಯೂ ರದ್ದಾಗುತ್ತದೆ ಎಂದು ಮೂರೂ ಕಾಯಿದೆಗಳನ್ನು ವಿರೋಧಿಸುತ್ತಿದ್ದಾರೆ.

ರೈತ ಮುಖಂಡರ ಮಾತಿನ ತರ್ಕವನ್ನು ಬೆಳೆಸುವುದಾದರೆ ಈ ಬಗೆಯ ನೀತಿಗಳು ಇದುವರೆಗಿನ ಗ್ರಾಮೀಣ ಜೀವನಕ್ರಮಗಳ ಮತ್ತು ರೈತರ ಬದುಕಿನ ಸ್ವಾಯತ್ತತೆಯನ್ನು ಬಲಿ ಹಾಕುತ್ತವೆ. ವಿಶಾಲವಾದ ಅರ್ಥದಲ್ಲಿ ಇದು ಗ್ರಾಮೀಣ ಭಾರತದ ನಾಶ ಅಥವ ಊರುಮಂದಿಯ ಬದುಕಿನೊಳಗೆ ಕಾರ್ಪೊರೇಟ್ ಶಕ್ತಿಗಳ ಪ್ರವೇಶ. ಈ ವಾದವನ್ನು ಇನ್ನೊಂದು ಅತಿಗೆ ಕೊಂಡೊಯ್ಯುವುದಾದರೆ, ಇದು ಜಾಗತಿಕ ಮಟ್ಟದ ಕಾರ್ಪೊರೇಟ್ ಶಕ್ತಿಗಳು ಒಗ್ಗೂಡಿ ನಡೆಸಿರುವ ಗಾಂಧೀ ಹತ್ಯೆಯ ವಿಸ್ತೃತ ರೂಪ. ಮಹಾತ್ಮರು ಊರುಗಳು ಸ್ವಾವಲಂಬಿಯಾಗುವ ಬಗ್ಗೆ, ಸ್ವಾಯತ್ತಗೊಳ್ಳುವ ಬಗ್ಗೆ, ಸಾಮಾಜಿಕ ಅಸಮಾನತೆಯ ಸಂರಚನೆಯನ್ನು ಆತ್ಮಶೋಧದಿಂದ ವಿಸರ್ಜಿಸುವುದರ ಬಗ್ಗೆ ಚಿಂತನೆ ನಡೆಸಿದ್ದರು. ಆದರೆ ಕಾಯಿದೆಗಳು ಊರುಮನೆಗಳ ಜೀವನಕ್ರಮವನ್ನು ಧ್ವಂಸಗೊಳಿಸುವಂತಿವೆ. ವ್ಯಂಗ್ಯ ಮತ್ತು ಕ್ರೌರ್ಯವೆಂದರೆ ಇವೆಲ್ಲವನ್ನೂ ನಾವು ಸಂವಿಧಾನದ ಚೌಕಟ್ಟಿನಲ್ಲೇ ಮಾಡುತ್ತಿದ್ದೇವೆ.

ಈಗ ಈ ವಿಷಯದ ಕುರಿತು ಆತ್ಮಾವಲೋಕನ ಮಾಡೋಣ. ಈ ಧ್ವಂಸದ ಕಾರ್ಯಾಚರಣೆಯನ್ನು ನಿಜಕ್ಕೂ ನಡೆಸುತ್ತಿರುವವರು ಯಾರು? ಆಧುನಿಕತೆ-ಅಭಿವೃದ್ಧಿಗಳೆಂಬ ಹೊಸ ಆಕಾಂಕ್ಷೆಗಳಲ್ಲಿ ರೂಪುಗೊಳ್ಳುತ್ತಿರುವ, ಇಂಡಿಯಾ ಎನ್ನುವ ಹೊಸ ರಾಷ್ಟ್ರಪ್ರಭುತ್ವದ ಹಿತಾಸಕ್ತಿಗಳಿಗಾಗಿ ಹಪಹಪಿಸಿ ಇಂಥ ಪ್ರಭುತ್ವಗಳನ್ನು ಆಯ್ಕೆ ಮಾಡಿದ/ಮಾಡುವ ನಾವೇ ಅಲ್ಲವೇ? ಅದು ನಾವೇ ಹೌದು ಎಂಬುದು ನಮಗೆ ಮನದಟ್ಟಾದರೆ ಹೊಸ ಪ್ರಶ್ನೆಯನ್ನು ಕೇಳಬಹುದು. ಯಾರನ್ನು ಯಾರು ಪ್ರತಿನಿಧಿಸುತ್ತಿದ್ದಾರೆ ಎಂಬುದು ಹಳೆಯ ಪ್ರಶ್ನೆ. ಯಾರು ಯಾವುದನ್ನು ಪ್ರತಿನಿಧಿಸಿದ್ದರಿಂದ ಯಾರು ಆಯ್ಕೆಯಾಗಿದ್ದಾರೆ ಎಂಬುದೇ ಮೂಲಭೂತವಾದ ಪ್ರಶ್ನೆ.

ನಮ್ಮದೇ ಚರಿತ್ರೆಯ ಕಡೆಗೆ ಒಮ್ಮೆ ಹೊರಳಿ ಹೇಳುವುದಾದರೆ, ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಕಾಲದಲ್ಲಿ ರಾಷ್ಟ್ರ ಮತ್ತು ರಾಷ್ಟೀಯತೆಯ ಕಲ್ಪನೆಯನ್ನೂ ಇಟ್ಟುಕೊಳ್ಳದ ಬಲುಬಗೆಯ ರೈತ ಹೋರಾಟಗಳು ಮತ್ತು ಅನೇಕ ಬಗೆಯ ವಿಮೋಚನಾ ಹೋರಾಟಗಳು ನಡೆದಿದ್ದವು. ಆ ಅರ್ಥದಲ್ಲಿ ಅಂದಿನ ಸ್ವಾತಂತ್ರ್ಯಪೂರ್ವ ಹೋರಾಟದ ಒಂದು ಹೊಸ ಆವೃತ್ತಿಯನ್ನು ಇಂದಿನ ಈ ಹೋರಾಟ ನೆನಪಿಸುತ್ತಿದೆ. ಈ ದೇಶವನ್ನು ಕಾಂಗ್ರೆಸ್, ಬಿಜೆಪಿ ಇತ್ಯಾದಿ ಯಾವುದೇ ರಾಜಕೀಯ ಪಕ್ಷಗಳು ಆಳಿದರೂ ಅವೆಲ್ಲವೂ ಆಳದಲ್ಲಿ ರೈತವಿರೋಧಿ ನಿಲುವುಗಳನ್ನೇ ಹೊಂದಿದ್ದವು. ಸ್ವತಂತ್ರ ಭಾರತದ ರಾಜಕೀಯ ಚರಿತ್ರೆಯುದ್ದಕ್ಕೂ ಇದಕ್ಕೆ ನಿದರ್ಶನಗಳಿವೆ. ಈ ಇಂಥ ಪಕ್ಷಗಳನ್ನು ಪೊರೆಯುವ ಬಂಡವಾಳಶಾಹೀ ಕಾರ್ಪೊರೇಟ್ ಕಂಪೆನಿಗಳ ಮುಖ್ಯಸ್ಥರು ಕಾಲದಿಂದ ಕಾಲಕ್ಕೆ ಬದಲಾಗಬಹುದು. ಆದರೆ ಆಳುವ ಪಕ್ಷಗಳ ನೀತಿ ಬದಲಾಗುವುದಿಲ್ಲ. ನಮ್ಮ ದೇಶದ ರಾಜಕೀಯ ಸಂರಚನೆ ಬಂಡವಾಳಶಾಹಿಗಳನ್ನು ಉದ್ಧರಿಸುವುದಕ್ಕಾಗಿಯೇ ರೂಪುಗೊಂಡಿದೆ.

ಈ ಮೂಲಭೂತ ಚೌಕಟ್ಟನ್ನು ವಿರೋಧಿಸುತ್ತಿರುವ ಸದ್ಯದ ರೈತ ಹೋರಾಟ ಯಾವ ರಾಜಕೀಯ ಪಕ್ಷವನ್ನೂ ತನ್ನ ಒಳಗೆ ಸೇರಿಸಿಕೊಳ್ಳದಿರುವುದು ಅತ್ಯಂತ ವಿವೇಕದ ನಡೆ. ಈ ಚಳವಳಿಯ ದೊಡ್ಡ ಗುಣ ಮತ್ತು ಯಶಸ್ಸು ಇದೇ ಆಗಿದೆ. ಒಂದು ಕಾಲದಲ್ಲಿ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳು ಕರ್ನಾಟಕದಲ್ಲಿ ಹೇಗೆ ಕಾರ್ಯಾಚರಿಸಿದ್ದವೋ ಅದೇ ಕ್ರಮದಲ್ಲಿ ಈ ರಾಷ್ಟ್ರೀಯ ಹೋರಾಟವೂ ಇದೆ. ಇದರ ಇನ್ನೊಂದು ಮುಖ್ಯ ಗುಣ ಇಲ್ಲಿಯ ಸಾಮೂಹಿಕ ನಾಯಕತ್ವ. ದೇಶದುದ್ದಗಲದ 21 ರೈತ ಸಂಘಟನೆಗಳು ಭಾಗವಹಿಸಿರುವ ಈ ಹೋರಾಟ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಹೋರಾಟವಾಗಿಯೇ ಜಗತ್ತಿಗೆ ಕಂಡಿದೆ. ನಮ್ಮ ಎಸ್ ಎಲ್ ಭೈರಪ್ಪನವರು ಅಂದಂತೆ ಇದೇನೂ ಪಂಜಾಬಿನ ಅಥವ ಸಿಖ್ ರೈತರ ಹೋರಾಟವಲ್ಲ.

ಚಾರಿತ್ರಿಕವಾಗಿರುವ ಈ ಹೋರಾಟದ ಹೊಸ ನಾಯಕತ್ವ, ’ಭಾರತ ಅಂದರೇನು, ಯಾವ ರೀತಿಯ ಸ್ವಾಯತ್ತತೆ ಇಲ್ಲಿಯ ಜನಸಮುದಾಯಗಳಿಗೆ ಬೇಕು, ಇದು ರೈತ ಹೋರಾಟವೋ ಅಥವ ಪ್ರಜಾಸತ್ತೆಯನ್ನು ಗಟ್ಟಿಗೊಳಿಸುವ ಹೋರಾಟವೋ ಅಥವ ’ದಿ ಐಡಿಯಾ ಆಫ್ ಇಂಡಿಯಾ’ದ ಹೊಸಬಗೆಯ ಅರ್ಥನಿರೂಪಣೆಯನ್ನು ಆಗ್ರಹಿಸುತ್ತಿರುವ ಹೋರಾಟವೋ ಎಂಬ ಪ್ರಶ್ನೆಗಳನ್ನು ಬಲವಾಗಿ ಕೇಳಬೇಕಿದೆ. ಹಾಗೆ ಕೇಳುವುದಕ್ಕೆ ಅದು ತಾತ್ತ್ವಿಕವಾಗಿ ಇನ್ನೂ ಗಟ್ಟಿಯಾಗಬೇಕಿದೆ. ಭಾರತೀಯತೆ ಅಂದರೆ ಏನು ಮತ್ತು ಭಾರತವಾಗುವುದೆಂದರೆ ಏನು ಎನ್ನುವ ಆಳವಾದ ಪ್ರಶ್ನೆಗಳನ್ನು ಎತ್ತಬೇಕಾದ ಹೋರಾಟವಾಗಿ ಇದು ಇನ್ನಷ್ಟೇ ರೂಪುಗೊಳ್ಳಬೇಕಿದೆ. ಭಾರತ ಎಂಬ ಚಿಂತನೆಯ, ಭಾರತ ಎಂಬ ಕಲ್ಪನೆಯ ಸಮಗ್ರ ಮರುನಿರೂಪಣೆಯನ್ನು ಮಾಡುವತ್ತ ಇದು ಮುನ್ನಡೆಯಬೇಕಿದೆ.

ಅನಂತಮೂರ್ತಿಯವರ ಊರು-ದೇಶ ಕವನವನ್ನು ಸದ್ಯದ ರೈತ ಚಳವಳಿಯ ಮುಂದೆ ಹೀಗೆ ಓದಿಕೊಂಡ ಹಿನ್ನೆಲೆಯಲ್ಲಿ, ದೇಶವಿಭಜನೆ ಅನ್ನುವುದು ಇದುವರೆಗೂ ಇತ್ಯರ್ಥವಾಗದ ವಿಷಯವಾಗಿ ಹೇಗೆ ಉಳಿದಿದೆಯೋ, ಹಾಗೆ ’ಸ್ವತಂತ್ರ ಭಾರತ’ ಎಂಬುದು ಇನ್ನೂ ಇತ್ಯರ್ಥವಾಗದ ಒಂದು ವಿದ್ಯಮಾನ’ ಎಂದು ಹೇಳಬಹುದೇ?

ಈ ಅಂಕಣದ ಹಿಂದಿನ ಬರಹಗಳು

ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ–ಬೃಹತ್ ಕಾದಂಬರಿಯೊಂದರ ಮೊದಲ ಪುಟಗಳು

ಅನೇಕಲವ್ಯ – 3

ಅನೇಕಲವ್ಯ-2

ಅನೇಕಲವ್ಯ-1

‘ಇಂದಿರಾಬಾಯಿ’ ಯ ರಾಜಕೀಯ ಓದು

MORE NEWS

ಎ.ಕೆ. ರಾಮಾನುಜನ್ ಅವರ ಅಣ್ಣಯ್ಯನ ಮಾನವಶಾಸ್ತ್ರ

08-01-2025 ಬೆಂಗಳೂರು

"ಈ ಕಥೆಯ ಒಳತಿರುಳುಗಳನ್ನು ಅರ್ಥೈಸುತ್ತಾ ಸಾಗಿದಂತೆ ಒಂದಿಷ್ಟು ವೈರುಧ್ಯ ವ್ಯಂಗ್ಯ ವಿಡಂಬನೆ ನಮಗೆ ಕಾಣುತ್ತದೆ. ಜಿ...

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...