ಇಲ್ಲಿನ ಕಥೆಗಳು ಶೋಷಿತ ಜನಸಮುದಾಯದ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತವೆ. ಅಲ್ಲದೇ ಇಲ್ಲಿನ ಕಥೆಗಳು ಬಸವಣ್ಣನ ಸಮಾನತೆಯ ಆಶಯವನ್ನು ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತವೆ. ಭಾಷೆಯ ದೃಷ್ಟಿಯಿಂದ ನೋಡುವುದಾದರೆ ಇಲ್ಲಿನ ಕಥೆಗಳಲ್ಲಿ ಉತ್ತರ ಕರ್ನಾಟಕದ ಅದರಲ್ಲೂ ಬಿಜಾಪೂರ ಭಾಷೆ ಬಳಸಲ್ಪಟ್ಟಿದೆ ಎನ್ನುತ್ತಾರೆ ಲೇಖಕ ಕಿರಣ ವಲ್ಲೇಪುರೆ. ಅವರ ಪ್ರೊ. ಎಚ್. ಟಿ. ಪೋತೆ ಅವರ ‘ಬೆತ್ತಲಾದ ಚಂದ್ರ’ ಕಥಾ ಸಂಕಲನ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ...
ದಲಿತ ಸಂವೇದನೆಯ ಕಥೆಗಾರರಾದ ಪ್ರೊ. ಎಚ್. ಟಿ. ಪೋತೆ ಸರ್ ಅವರು ಬರೆದ `ಬೆತ್ತಲಾದ ಚಂದ್ರ' ಕಥಾಸಂಕಲನದಲ್ಲಿ 'ಪರಿ', 'ಕಾಗಿಶಕುನ', 'ಬೆಂಕಿ ಬೆಳಕು', 'ಬೆತ್ತಲಾದ ಚಂದ್ರ', 'ಅಲ್ಲಾಪುರದ ಗುಮ್ಮಟ' ಮತ್ತು 'ಸೂರ್ಯ ಚಂದ್ರರಿಲ್ಲದ ನಾಡಿನಲ್ಲಿ' ಎನ್ನುವ ಆರು ಕಥೆಗಳಿವೆ. ಇಲ್ಲಿನ ಕಥೆಗಳು ದಲಿತರ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತವೆ. ದಲಿತರ ನೋವು, ಅವರ ಸ್ವಾಭಿಮಾನ, ಅಲ್ಲಿನ ಮೌಡ್ಯತೆ, ಅವರ ಮೇಲಿನ ದೌರ್ಜನ್ಯ, ಶೋಷಣೆ, ಅವರು ತಮಗಾದ ಅನ್ಯಾಯದ ವಿರುದ್ಧ ಸಿಡಿದೇಳುವ ಬಗೆ ಮತ್ತು ಅವರ ಏಳಿಗೆಗೆ ಶಿಕ್ಷಣ ತುಂಬಾ ಅವಶ್ಯಕವಾಗಿರುವುದನ್ನು ಇಲ್ಲಿನ ಕಥೆಗಳಲ್ಲಿ ಚಿತ್ರಿಸಲಾಗಿದೆ.
ಮೊದಲನೆಯ ಕಥೆ 'ಪರಿ', ಈ ಕಥೆಯಲ್ಲಿ ಸಂವಿಧಾನದ ಮೂಲಕ ಹಿಂದುಳಿದ ಜನಸಮುದಾಯಕ್ಕೆ ಅವರ ಏಳಿಗೆಗಾಗಿ ನೀಡಲಾದ ಮೀಸಲಾತಿ ಸೌಲಭ್ಯವನ್ನು ಇನ್ನೊಂದು ಜನಸಮೂದಾಯದವರು ಸುಳ್ಳು ಜಾತಿ ಪ್ರಮಾಣಪತ್ರ ಸೃಷ್ಟಿಸಿ ಮೀಸಲಾತಿ ಸೌಲಭ್ಯವನ್ನು ದೋಚುವ ಹುನ್ನಾರ ಮಾಡಿದಾಗ, ಅದಕ್ಕೆ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟಿಸಿ ಕುಲಪತಿಗೆ ದೂರು ನೀಡುವರು. ಕುಲಪತಿ ವಾಲೀಕರ್ ಅವರು ಸಂಬಂಧಿಸಿದವರನ್ನು ಕರೆಸಿ ಮಾತನಾಡಿ ಅವರನ್ನು ಬೈದು, ಸಿದ್ದರಾಜುನ ಮಗ ಪಾವಟೆಯ ಮತ್ತು ಶ್ರೀಮಂತನ ಮಗ ಕಣೇಶನ ಬೆಳವಣಿಗೆಯ ಕಥೆ ಹೇಳಿ, ಆ ಮೂಲಕ ಅವರ ಮನಪರಿವರ್ತನ ಮಾಡುವರು. ಅಲ್ಲಿನವರು ತಮ್ಮ ತಪ್ಪನ್ನು ಒಪ್ಪಿಕೊಂಡು ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ ಎನ್ನುವರು. ಆ ಮೂಲಕ ಕುಲಪತಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವರು. ಕುಲಪತಿಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ಓದುಲು ಹೇಳುವ ಮೂಲಕ ಇಲ್ಲಿನ ಕಥೆ ಅಂತ್ಯವಾಗುತ್ತದೆ. ಈ ಕಥೆಯ ಮೂಲಕ ಲೇಖಕರು ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯದಿಂದ, ಸರಿಯಾಗಿ ಓದಿ ಸಮೃದ್ಧ ಜೀವನವನ್ನು ರೂಪಿಸಿಕೊಂಡು ಈ ಅಸ್ಪೃಶ್ಯ ಬದುಕಿನ ಪರಿಯಿಂದ ಕಳಚಿಕೊಳ್ಳಬೇಕು ಎಂದು ಕರೆಕೊಡುವರು. ನಾವು ನಮ್ಮ ಲಾಭಕ್ಕಾಗಿ ಬೇರೆಯವರಿಗೆ ಅನ್ಯಾಯ ಮಾಡಿ ಮುಂದೆ ಬರುವುದನ್ನು ದಿಕ್ಕರಿಸಿ, ನಾವು ನಮ್ಮ ಸ್ವಂತ ಪರಿಶ್ರಮದಿಂದ ಮುಂದೆ ಬರಬೇಕೆಂದು ಈ ಕಥೆ ನಮಗೆ ತಿಳಿ ಹೇಳುತ್ತದೆ.
ಎರಡನೆಯ ಕಥೆ 'ಕಾಗಿಶಕುನ'. ಈ ಕಥೆಯಲ್ಲಿ ಕಾಗೆಗಳು, ಅನಂತಚಾರಿ, ಇಠ್ಠಲಗೌಡ ಪಾತ್ರಗಳ ಚಿತ್ರಣವಿದೆ. ಇಲ್ಲಿ ಅನಂತಾಚಾರಿ ಮೂಡನಂಭಿಕೆಯ ಸಂಕೇತವಾಗಿದ್ದು, ಕಥೆಯ ಕೊನೆಗೆ ಆತನ ತಂದೆ ವಸಂತಚಾರಿ ಸತ್ತಾಗ ಆತನೂ ಬದಲಾವಣೆಯಾಗುತ್ತಾನೆ. ಇಲ್ಲಿನ ಇಠ್ಠಲಗೌಡ ಜಾತಿಯತೆ ಸಂಕೇತವಾಗಿದ್ದು, ಕೊನೆಗೆ ಆತನಿಗೆ ಕನಸು ಬಿದ್ದು, ಆ ಕನಸಿನಲ್ಲಿ ಬಸವ, ಕನಕ, ಕೋರೆಗಾಂವ್ ವೀರಯೋಧರು ಮತ್ತು ಅಂಬೇಡ್ಕರ್ ಅವರೆಲ್ಲಾ ಒಂದು ಸಮಾನತೆಯನ್ನು ಸಾರುತ್ತಾರೆ. ಇದರಿಂದ ಇಠ್ಠಲಗೌಡ ಬದಲಾಗಿ ನಾವೆಲ್ಲ ಒಂದೇ, ನಾವು ಪರಸ್ಪರ ಸಹಬಾಳ್ವೆಯ, ಸಾಮರಸ್ಯದ ಜೀವನವನ್ನು ನಡೆಸೋಣ ಎಂದು ಹೇಳುವನು. ಈ ಕಥೆ ನಮಗೆ ನಾವು ಮೌಡ್ಯತೆಯನ್ನು ತೊರೆದು ವೈಚಾರಿಕರಾಗಿ, ವೈಜ್ಞಾನಿಕರಾಗಿ ಬಾಳಬೇಕು ಎಂದು ಹೇಳುತ್ತದೆ. ನಮ್ಮಲ್ಲಿನ ಅಸಮಾನತೆಯನ್ನು ತೊರೆದು ನಾವು ಸಮಾನರಾಗಿ ಬದುಕಬೇಕು ಎಂಬುದು ಈ ಕಥೆಯ ಆಶಯವಾಗಿದೆ.
ಮೂರನೆಯ ಕಥೆ 'ಬೆಂಕಿ ಬೆಳಕು'. ಈ ಕಥೆಯ ಕಥಾನಾಯಕ ಕರಣಿ ಕಲ್ಲಪ್ಪ. ಆತ ಊರಿನ ಚಾಕ್ರಿ ಮಾಡುವ ಮೂಲಕ ಶೋಷಣೆಗೆ ಒಳಗಾಗುವನು. ಈತ ಊರನ್ನು ಗೂಡಿಸುವ, ರೊಟ್ಟಿಯನ್ನು ಬೇಡಿಕೊಳ್ಳುವ ಮತ್ತು ಸತ್ತ ದನಗಳನ್ನು ಊರಾಚೆ ಹೊತ್ತೊಯ್ಯುವ ಕೆಲಸ ಮಾಡಬೇಕಾಗಿತ್ತು. ಕೆಲವು ದಿನ ಆ ಚಾಕ್ರಿಯನ್ನು ಮಾಡದಿದ್ದಾಗ ಗೌಡನಿಂದ ಬೈಯಿಸಿಕೊಳ್ಳುವನು, ಓದೆಸಿಕೊಳ್ಳುವನು. ಜೋತಿಭಾ ಅವರು ಹೇಳಿರುವಂತೆ ಶೋಷಣೆಯ ವಿರುದ್ಧ ಸಿಡಿದೇಳಬೇಕು, ಹಳ್ಳಿ ಬಿಟ್ಟು ನಗರ ಸೇರಬೇಕು ಆ ಮೂಲಕ ಇದರಿಂದ ಮುಕ್ತರಾಗಬೇಕು ಎಂಬ ಮಾತಿನಂತೆ ಕಲ್ಲಪ್ಪ ರಾತ್ರಿ ಸಮಯ ಗೌಡನ ಹೊಲಕ್ಕೆ ಹೋಗಿ ಆತನ ಭಣಮಿಗೆ ಬೆಂಕಿ ಹಚ್ಚಿ ತನ್ನ ಸೇಡನ್ನು ತೀರಿಸಿಕೊಳ್ಳವನು. ಸಿಡಿದೆದ್ದ, ಸಡನ್ನು ತೀರಿಸಿಕೊಂಡ ಖುಷಿಯಲ್ಲಿ ಚಿರಾಡುವನು, ಕುಣಿದಾಡುವನು. ಕೊನೆಗೆ ಆ ಬೆಂಕಿ ಬೆಳಕಿನಲ್ಲಿ ದೂರ ದೂರದವರೆಗೆ ಓಡಿ ರೈಲು ಹತ್ತಿ ನಗರಕ್ಕೆ ಹೋಗುವ ಮೂಲಕ ಇಲ್ಲಿನ ಕಥೆ ಅಂತ್ಯವಾಗುತ್ತದೆ. ಈ ಕಥೆ ದಲಿತರ ಚಾಕ್ರಿಯನ್ನು, ಅಲ್ಲಿನ ದೌರ್ಜನ್ಯವನ್ನು ಚಿತ್ರಿಸಿ, ಅದರಿಂದ ಹೊರಬರಲು ಕೆಲವು ಒಳಹುಗಳನ್ನು ನೀಡುತ್ತದೆ.
ನಾಲ್ಕನೆಯ ಕಥೆ 'ಬೆತ್ತಲಾದ ಚಂದ್ರ'. ಈ ಕಥೆಯ ಕಥಾನಾಯಕ ಚಂದ್ರ ಇತನ ತಾಯಿ ಬಾಳವ್ವ ಇವನನ್ನು ಕೂಲಿಮಾಡಿ ಸಾಕುವಳು. ಇವನು ಚೆನ್ನಾಗಿ ಓದಿ ಮೆಟ್ರಿಕ್ ಪಾಸು ಮಾಡಿ ಕಾಶ್ಮೀರದಲ್ಲಿ ಸೈನಿಕನಾಗಿ ಕೆಲಸ ಮಾಡುವನು. ತನ್ನ ತಾಯಿಯ ಹರಕೆಯಂತೆ ಕೇರಿಯಲ್ಲಿ ಚಂದ್ರಾತಾಯಿ ದೇವರ ಗುಡಿ ಕಟ್ಟುವನು. ಆದರೆ ಅರ್ಚಕರು ಸಂಪಾದನೆಯ ಆಸೆಯಿಂದ ಆ ಗುಡಿಯನ್ನು ಕಬಳಿಸಿ, ಚಂದ್ರನನ್ನು ಮತ್ತು ಕೇರಿಯ ಜನರನ್ನು ಗುಡಿಯಿಂದ ದೂರವಿಡುವರು. ಕೋರ್ಟಲ್ಲೂ ಅರ್ಚಕರ ಪರವಾಗಿಯೇ ತೀರ್ಪ ಬರುವುದು. ಇದರಿಂದ ಚಂದ್ರ ನಾನು ಕಟ್ಟಿದ ಗುಡಿ ಬೇರೆಯವರ ಪಾಲಾಯಿತು. ನನಗೆ ಅನ್ಯಾಯವಾಯಿತು ಎಂದು ನೊಂದುಕೊಳ್ಳುವನು. ಮುಂದೆ ದಳಪತಿ ಹೇಳಿದ ಕಥೆಯಂತೆ, ಯೋಚಿಸಿ ಒಂದು ತಿರ್ಮಾನಕ್ಕೆ ಬರುವನು. ಮೂಲಕ ಹುಣ್ಣಿಮೆ ಚಂದ್ರನಂತೆ ನಿಸ್ಸಂಗ ಬೆತ್ತಲೆಯಾಗಿ ಆರ್ಚಕರನ್ನು ಓಡಿಸಿ, ಜನರನ್ನು ದೂರ ಮಾಡಿ ತನ್ನ ಗುಡಿಯನ್ನು ತಾನು ಪಡೆಯುತ್ತಾನೆ. ಕೊನೆಗೆ ನಮಗೆ ನ್ಯಾಯಕೊಡದ ದೇವರು ನಮಗೆ ಬೇಡ ಎಂದು ಹೇಳಿ, ಗುಡಿಯಲ್ಲಿನ ಮೂರ್ತಿಯನ್ನು ಬಾವಿಗೆ ಎಸೆಯುತ್ತಾನೆ ಮತ್ತು ಆ ಗುಡಿಗೆ 'ವಾಚನಾಲಯ' ಎಂದು ಹೆಸರು ಕೊಡುವ ಮೂಲಕ ಇಲ್ಲಿನ ಕಥೆ ಅಂತ್ಯವಾಗುತ್ತದೆ. ನಮಗೆ ಬೇಕಾಗಿರುವದು ಗ್ರಂಥಾಲಯವೇ ಹೊರತು, ದೇವಾಲಯವಲ್ಲ ಎನ್ನುವ ಅಂಬೇಡ್ಕರ್ ಅವರ ಆಶಯವನ್ನು ಈ ಕಥೆ ಪ್ರತಿನಿಧಿಸುತ್ತದೆ.
ಐದನೆಯ ಕಥೆ 'ಅಲ್ಲಾಪುರದ ಗುಮ್ಮಟ'. ಈ ಕಥೆಯಲ್ಲಿ ಮಾರುತನ ಮಗ ಮೆಲ್ಜಾತಿಯ ಹುಡುಗಿಯನ್ನು ಮದುವೆಯಾಗುತ್ತಾನೆ. ಹುಡುಗಿಯ ತಂದೆ ವಿಜಯ್‌ಗೆ ಮೆಲ್ಲಾತಿಯ ಮುಖಂಡರು ಪ್ರಶ್ನಿಸಿದರೂ, ವಿಜಯ್ ದಲಿತರ ಕೆಲಸವನ್ನು, ಅವರ ಉಪಕಾರವನ್ನು ಕೊಂಡಾಡುತ್ತಾನೆ. ಕಥೆಯ ಕೊನೆಗೆ ಅಂತರ್ಜಾತಿಯ ವಿವಾಹವಾಗಿ ಮಾರುತನ ಮಗ ತನ್ನ ಸಾಕು ತಂದೆ-ತಾಯಿಯಾದ ಮಾರುತ ಮತ್ತು ಗೌರಾ ಅವರ ಜೊತೆ ಹಳ್ಳಿಯಲ್ಲಿ ಬಾಳುವುದರೊಂದಿಗೆ ಕಥೆ ಅಂತ್ಯವಾಗುತ್ತದೆ. ಈ ಕಥೆ ಅಂತರ್ಜಾತಿ ವಿವಾಹದ ಮೇಲೆ ಬೆಳಕು ಚೆಲ್ಲುತ್ತದೆ,
ಆರನೆಯ ಕಥೆ 'ಸೂರ್ಯ ಚಂದ್ರರಿಲ್ಲದ ನಾಡಿನಲ್ಲಿ, ಈ ಕಥೆಯಲ್ಲಿ ಚಂದೂರಿನ ಬಡ ಹೆಣ್ಣುಮಗಳು ಚಂದವ್ವ ತನ್ನ ಒಬ್ಬನೇ ಮಗ ತ್ಯಾಗಿಯನ್ನು ಕಾಲೇಜಿಗೆ ಸೇರಿಸಲು ಉತ್ಕಟ ಆಸೆಯನ್ನು ಹೊಂದಿರುವಳು. ಅಂತೆಯೇ ಫುಡಾರಿ ಮುತ್ತಣ್ಣನ ಸಹಾಯದಿಂದ ಕಾಲೇಜಿಗೆ ಸೇರಿಸುವಳು, ಅಲ್ಲಿ ಭೂಕಂಪನದಿಂದಾಗಿ ಹಾಸ್ಟಲ್ ಕಟ್ಟಡ ಕುಸಿದು ತ್ಯಾಗಿ ಮೂರ್ಛೆ ಹೋಗುವನು, ಮೂರ್ಛೆ ಹೋದಾಗ ತ್ಯಾಗಿ ಕತ್ತಲಿನ ಸೂರ್ಯ ಚಂದ್ರರಿಲ್ಲದ ನಾಡಿನಲ್ಲಿ ಅಂಬೇಡ್ಕರ್, ಇಂಗಾಳ, ವರಾಳೆಯೊಂದಿಗೆ ಮಾತನಾಡುವನು, ಕೊನೆಗೆ ಮೂರ್ಛಯಿಂದ ಎಚ್ಚರವಾದ ನಂತರದಲ್ಲಿ ತ್ಯಾಗಿ ತಾನು ಅಂಬೇಡ್ಕರ ಅವರಂತ ಆಗುವ ಉತ್ಕಟ ಕನಸಿನೊಂದಿಗೆ ಬದುಕುವುದರೊಂದಿಗೆ ಇಲ್ಲಿನ ಕಥೆ ಅಂತ್ಯವಾಗುತ್ತದೆ. ಈ ಕಥೆ ಹಿಂದುಳಿದವರ ಏಳಿಗೆಗೆ ಶಿಕ್ಷಣ ಅವಶ್ಯಕವಾಗಿರುವುದನ್ನು ಸಾರುತ್ತದೆ.
ಹೀಗೆ ಇಲ್ಲಿನ ಕಥೆಗಳು ಶೋಷಿತ ಜನಸಮುದಾಯದ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತವೆ. ಅಲ್ಲದೇ ಇಲ್ಲಿನ ಕಥೆಗಳು ಬಸವಣ್ಣನ ಸಮಾನತೆಯ ಆಶಯವನ್ನು ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತವೆ. ಭಾಷೆಯ ದೃಷ್ಟಿಯಿಂದ ನೋಡುವುದಾದರೆ ಇಲ್ಲಿನ ಕಥೆಗಳಲ್ಲಿ ಉತ್ತರ ಕರ್ನಾಟಕದ ಅದರಲ್ಲೂ ಬಿಜಾಪೂರ ಭಾಷೆ ಬಳಸಲ್ಪಟ್ಟಿದೆ.
ಎಚ್.ಟಿ. ಪೋತೆ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಬೆತ್ತಲಾದ ಚಂದ್ರ ಕೃತಿ ಪರಿಚಯ...
"ಮೊದಲ ಅಧ್ಯಾಯ ಕಳಿಸಿದರು. ಓದುತ್ತಾ ಹೋದಂತೆ ಅದು ಸೀದಾ ತಲೆಯೊಳಗೆ ಇಳಿದಂತಾಗಿ, ಜೊತೆಗೆ ಲಾಜಿಕಲಿ ಘಟನೆಗಳೆಲ್ಲ ಫಿ...
"ಕನ್ನಡ ನಾಡಿನಿಂದ ಅಮೇರಿಕಾಗೆ ವಲಸೆ ಹೋಗುವ, ಅಲ್ಲಿ ತಮ್ಮ ಪ್ರತಿಭೆಯಿಂದ ಬೆಳಗುವ ಕನ್ನಡಿಗರು ತಮ್ಮ ಅಸ್ತಿತ್ವವನ್ನ...
"ದಶಕಗಳಿಂದ ಕಾವ್ಯ ಬರೆಯುತ್ತ ಬಂದಿರುವ ಗೋವಿಂದ ಹೆಗಡೆಯವರ ಮೊದಲ ಹಾಗೂ ಕೊನೆಯ ನಿಷ್ಠೆ ಕವಿತೆಯಲ್ಲಿದೆ. ಕಾವ್ಯಕ್ಕಿ...
©2025 Book Brahma Private Limited.