ಪ್ರಧಾನವಾಗಿ ಇದು ಭಾವ ಪರಿವಶತೆಯ ಉದ್ದೀಪನ ಕಾವ್ಯ


“ಈ ಕಾವ್ಯ ಅನುಸರಿಸಿದ್ದು ಸರಳ ಮಾದರಿಯ ತಂತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ವೈಯಕ್ತಿಕ ಬದುಕಿನ ನಿಷೇಧಗಳು, ಪಾಪ ಪುಣ್ಯದ ಮಾತುಗಳು, ಸಿದ್ದಾರ್ಥನಿಗೆ ಇವುಗಳ ದರ್ಶನವಾಗುವ ಮುನ್ನಿನ ಭಾಗ ಓದುಗರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ,” ಎನ್ನುತ್ತಾರೆ ಅರವಿಂದ ಮಾಲಗತ್ತಿ. ಅವರು ಡಾ. ಮಹಾದೇವ ಅವರ “ಏಷ್ಯಾದ ಬೆಳಕು” ಕೃತಿ ಕುರಿತು ಬರೆದ ವಿಮರ್ಶೆ.

ಆವತ್ತು ಪ್ರೊಫೆಸರ್ ಅಸಾದಿಯವರು ನಮ್ಮನ್ನಗಲಿದ ದಿನ, ಕೊನೆಯದಾಗಿ ಅವರ ಮುಖವನ್ನು ನೋಡಿ ಬರಲೆಂದು ಮನೆಗೆ ಹೋಗಿದ್ದೆ. ಆಗ ನನ್ನೊಂದಿಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಎನ್ ಕೆ ಲೋಲಾಕ್ಷಿಯವರು ಇದ್ದರು. ಪ್ರೊ ಅಸಾದಿ ಅವರು ನಿಶ್ಚಿಂತೆಯಿಂದ ಮಲಗಿದ್ದರು. ಆತ್ಮೀಯರಾದ ಅವರು ನನ್ನ ಬೆಳವಣಿಗೆಯ ಬಗ್ಗೆ ಸಂಭ್ರಮಿಸುವವರೂ ಆಗಿದ್ದರು. ಎದೆ ಭಾರದಿಂದ ಅವರ ಮನೆಯ ಹೊಸ್ತಿಲು ದಾಟಿ ಹೊರಬಂದು ಕೆಲಕಾಲ ಹಾಗೆಯೇ ನಿಂತುಕೊಂಡಿದ್ದೆ.

ಈ ಸಂದರ್ಭದಲ್ಲಿ ನನಗಿಂತಲೂ ಮೊದಲೇ ಬಂದಿದ್ದ, ಇನ್ನೊಬ್ಬ ಆತ್ಮೀಯರಾದ ಪ್ರೊ. ಮಹದೇವ ಅವರು ಬಂದು, ಪರಸ್ಪರ ಮಾತಿನ ನಂತರ ಬಂದೆ ಒಂದೆರಡು ನಿಮಿಷ ಎಂದು ಸುಮಾರು ಸಮಯದ ನಂತರ ಮರಳಿ ಬಂದು ನನ್ನ ಕೈಗೆ ಕೃತಿಯೊಂದನ್ನು ಇಟ್ಟು ತೆರಳಿದರು. ಅದು ಪ್ರೊ. ತೆಗೆದುಕೊಂಡೆ.

ಈ ಕೃತಿಯನ್ನು ಓದಿದ ಮೇಲೆ ಪ್ರೊಫೆಸರ್ ಮಹದೇವ ಅವರ ಬಗ್ಗೆ ಗೌರವ ನನಗೆ ಇಮ್ಮಡಿಯಾಗಿದೆ. ಅವರು ಒಬ್ಬ ಆಂಗ್ಲ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದವರು. ಅವರ ಕನ್ನಡ ಇಷ್ಟೊಂದು ಸೊಗಸಾಗಿದೆ ಎಂದು, ಈ ಕೃತಿ ಓದಿದ ಮೇಲೆ ನನಗೆ ಮನನವಾದದ್ದು. ಮೇಲುನೋಟಕ್ಕೆ ಶಾಂತ ಸ್ವಭಾವದ ವ್ಯಕ್ತಿ ಎನಿಸಿದರೂ, ಅವರ ನಿರ್ಣಯಗಳು ಕೆಲವೊಮ್ಮೆ ತುಂಬಾ ಕಠೋರ ಮತ್ತು ನಿಷ್ಠೋರ ಎನ್ನುವುದನ್ನು ನಾನು ನನ್ನ ಸ್ವಂತ ಅನುಭವದಿಂದ ಬಲ್ಲವನಾಗಿದ್ದೇನೆ. ಮತ್ತು ಅವರು ಜಾತಿ ಸಂಬಂಧಗಳನ್ನು ಮೀರಿದ ಮನುಜ ಪ್ರೇಮಿ.

'ಏಷ್ಯಾದ ಬೆಳಕು' ಕಾವ್ಯ, ವಸ್ತು ಪ್ರಧಾನ ಎನ್ನುವುದಕ್ಕಿಂತ ಭಾವ ಪ್ರಧಾನವಾಗಿದೆ. ವರ್ಣಕ ಕಾವ್ಯ ಎನ್ನುವುದಕ್ಕಿಂತ ಭಕ್ತಿ ಗೌರವದ ರಮ್ಯ ಕಾವ್ಯವಾಗಿದೆ. ಹಾಗೂ ಓದುಗನನ್ನು ಕಾವ್ಯದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡುತ್ತದೆ. ಕಾವ್ಯ ಶಕ್ತಿಯ ವಾತಾವರಣ ನಿರ್ಮಾಣ ವಿಧಾನ ಲೋಹ ಚುಂಬಕದಂತೆ ಬಿಗಿದಪ್ಪಿ ಬಿಡುತ್ತದೆ. ಇದು ಸರ್ ಅಡ್ವೀನ್ ಅರ್ನೋಲ್ಡ್ ಕಾವ್ಯಾನುವಾದ ಎನ್ನುವುದಕ್ಕಿಂತ ಮಹದೇವರ ಮರು ಸೃಷ್ಟಿ ಎನ್ನುವುದೇ ಸೂಕ್ತ.

ಡಾ. ಮಹದೇವ ಅವರ "ಏಷ್ಯಾದ ಬೆಳಕು" ಎನ್ನುವ ಈ ಕೃತಿ ಎಡ್ವಿನ್ ಅರ್ನಾಲ್ಡ್ ಅವರ "ದಿ ಲೈಟ್ ಆಫ್ ಏಷಿಯಾ" ಕೃತಿಯ ಅನುವಾದವಾಗಿದೆ. ಕನ್ನಡದಲ್ಲಿ ಈಗಾಗಲೇ ಈ ಕೃತಿ ಬಿ ಲೀಲಾ ಭಟ್ ಅವರು "ಏಷಿಯಾದ ಬೆಳಕು" (1995) ಎನ್ನುವ ಹೆಸರಿನಲ್ಲಿ ಹೊರತಂದರೆ, "ಏಷಿಯಾದ ಜ್ಯೋತಿ" ಎನ್ನುವ ಹೆಸರಿನಲ್ಲಿ ಪಾವಟೆ (2006)ಸಂಗಪ್ಪನವರು ಅನುವಾದಿಸಿ ಹೊರತಂದಿದ್ದಾರೆ. ಲೀಲಾ ಭಟ್ಟ ಅವರು ಆ ಕಾವ್ಯವನ್ನು ಕನ್ನಡದ ಗದ್ಯಕೃತಿ ಆಗಿಸಿದರೆ, ಶ್ರೀಯುತ ಪಾವುಟೆ ಅವರು, ನಡುಗನ್ನಡ ಮಿಶ್ರಿತ ಭಾಷೆಯ ಕಾವ್ಯವಾಗಿಸಿದ್ದಾರೆ. ಈ ಎರಡೂ ಕೃತಿಗಳನ್ನು ಅನುವಾದದ ದೃಷ್ಟಿಯಿಂದ ಗಮನಿಸಬೇಕಾದವು. ಪ್ರೊ ಮಹದೇವ ಅವರು ತಮ್ಮ ಅನುವಾದ ಕೃತಿಯನ್ನು, ಹೊಸಗನ್ನಡದ ಪ್ರಭುದ್ಧ ಕಾವ್ಯವಾಗಿಸುವುದರೊಂದಿಗೆ, ನಾನೊಬ್ಬ ಅಪ್ಪಟ ಕವಿ ಎನ್ನುವುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಕಾವ್ಯದ ಮೂಲ ವೈಖರಿಯನ್ನು ಮತ್ತು ಅನುವಾದದ ಭಿನ್ನತೆಯನ್ನು ಅರಿಯಬೇಕಿದ್ದರೆ, ಮೇಲಿನ ಎರಡು ಕೃತಿಗಳನ್ನು ಈ ಕೃತಿಯೊಂದಿಗೆ ಪರಸ್ಪರವಾಗಿ ಮುಂದಿಟ್ಟುಕೊಂಡು ಹೋಲಿಸಿ ಓದಿದಾಗ ಅನುವಾದಕರ ಕಾವ್ಯಶಕ್ತಿ ನಮ್ಮ ಅರಿವಿಗೆ ಬರುತ್ತದೆ.

ಈ ಕಾವ್ಯ ಮೂರ್ತ ಮತ್ತು ಅಮೂರ್ತ ರೂಪದ ಎರಡು ಬಗೆಯ ಶಕ್ತಿಗಳನ್ನು ಧಾರಣೆ ಮಾಡಿಕೊಂಡಿದೆ. ಅಮೂರ್ತ ರೂಪಗಳು ಸಾಮಾನ್ಯ ಓದುಗನ ಗ್ರಹಿಕೆಗೆ ದಕ್ಕುವುದು ಅಷ್ಟು ಸಲ್ಲಿಸಲ್ಲ. ಎಷ್ಟೋ ಕಡೆಗಳಲ್ಲಿ ನಾನು ಎರಡು ಮೂರು ಬಾರಿ ಓದಿ, ಒಳ ಪ್ರವೇಶಿಸಲು ಎತ್ನಿಸಿದ್ದೇನೆ. ಇಂಥ ಮಾರ್ಗವನ್ನು ಆಯ್ಕೆ ಮಾಡಿದ ಅನುವಾದಕರ ಬಗ್ಗೆ ಗೌರವ ಹೆಚ್ಚಿಸುತ್ತದೆ. ಡಾ. ಅಂಬೇಡ್ಕರ್ ಅವರ (ಬುದ್ಧ ಅಂಡ್ ಹಿಸ್ ದಮ್ಮ) ಬುದ್ಧ ಮತ್ತು ಆತನ ದಮ್ಮ ಕಥನಕ್ಕೂ ಇಲ್ಲಿಯ ಕಥನಕ್ಕೂ ಸಾಕಷ್ಟು ಅಂತರಗಳಿವೆ. ಇದು ಸಾಂಪ್ರದಾಯಿಕ ಕಥನದ ರಮ್ಯತೆಯಲ್ಲಿಯೇ ವಿರಮಿಸುತ್ತದೆ. ಅದು ಮೂಲ ಕೃತಿಯ ಸ್ವರೂಪವಾಗಿದ್ದರಿಂದ ಅನುವಾದಕ ಅದನ್ನು ಅನುಸರಿಸುವುದು ಅನಿವಾರ್ಯ.

ಎಡ್ವಿನ್ ಅರ್ನಾಲ್ಡ್ ರು ಕಾವ್ಯಕ್ಕೆ ಆಯ್ದುಕೊಳ್ಳುವ ಪ್ರಸಂಗಗಳು ಮತ್ತು ಅವುಗಳನ್ನು ಹಿಂಜುವ ರೀತಿ ಯಾರಿಗೂ ಬೆರಗುಗೊಳ್ಳುವಂತೆ ಮಾಡುತ್ತದೆ. ಪಾಶ್ಚಾತ್ಯ ಚಿಂತಕನ ಈ ದೇಸಿ ನೆಲೆಗಳ ನಿರೂಪಣೆ ಹಾಗೂ ಸಂವಿಧಾನ, ದೇಸಿ ಓದುಗರಿಗೆ ಅದ್ಭುತವೆನಿಸಿ ಬಿಡುತ್ತವೆ. ಇದಕ್ಕಾಗಿ ಅವರು ಮಾಡಿದ ಕ್ಷೇತ್ರಕಾರ್ಯದ ಬಗ್ಗೆ ಈ ಕೃತಿ ಪರೋಕ್ಷವಾಗಿ ಮನನ ಮಾಡುತ್ತದೆ. ರತ್ನಗಿರಿಯ ಹಠಯೋಗಿಗಳ ಕುರಿತು ನಿರೂಪಿಸುವ ಭಾಗ ಬುದ್ಧನ ಸಮಕಾಲಿನ ಅನುಭವದ ಹಾಗೂ ಅನುಭವದ ಸಹಜ ಧ್ಯಾನವನ್ನು ಕಟ್ಟಿಕೊಟ್ಟ ರೀತಿ ಅಚ್ಚರಿಯನ್ನು ಹುಟ್ಟಿಸುತ್ತದೆ. ದಕ್ಷಿಣ ಭಾರತದ ನನ್ನಂತಹ ಒಬ್ಬ ಓದುಗನಿಗೆ ಉತ್ತರ ಭಾರತದ ಅಲಹಾಬಾದ್ ನ ಪ್ರಯಾಗದ ಕುಂಭಮೇಳದ ಸ್ವರೂಪವನ್ನು ತನ್ಮಯತೆಯಿಂದ ನೋಡಿದ್ದರ ಪರಿಣಾಮವಾಗಿ ಈ ಕೃತಿಯ ಭಾಗ ಅತ್ಯಂತ ವಾಸ್ತವವೂ ಹಾಗೂ ಬುದ್ಧಕಾಲೀನ ಸತ್ಯವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಸಾರ್ವತ್ರಿಕವಾದ ಇಂತಹ ಪ್ರಸಂಗಗಳ ಹೊರತಾಗಿ ಬುದ್ಧನ ವೈಯಕ್ತಿಕ ಪ್ರಸಂಗಗಳು ಅಷ್ಟೇ ಸೂಕ್ಷ್ಮವಾಗಿ ನಿರೂಪಿಸಲಾಗಿದೆ. ಇಂಥಲ್ಲಿ ಅರ್ನಾಲ್ಡ್ ರು ನಿರೂಪಿಸಿದ ಕಥೆಯ ಮಂದಗತಿಯ ಓಟ, ಸಂವಿಧಾನದ ವಿಸ್ತರಣಾ ನಾವಿನ್ಯ, ಅವರ ಕಾವ್ಯಶಕ್ತಿ ಜಲಧಾರೆಯಂತೆ ಅನಾವರಣಗೊಂಡಿದ್ದು ದಾಖಲಿಸುತ್ತದೆ. ಕಥೆಯ ಓಟ ತೀವ್ರ ಗತಿಯದ್ದಾಗಿದ್ದರೂ ಕಾವ್ಯದ ನಿರೂಪಣೆಯ ಶೈಲಿ ಓದುಗನನ್ನು ಆವರಿಸಿಕೊಳ್ಳುವುದರೊಂದಿಗೆ ಕವಿತನದ ಸಾಮರ್ಥ್ಯದ ಬಗ್ಗೆ ಹೆಮ್ಮೆಯನ್ನು ಉಂಟುಮಾಡುತ್ತದೆ. ಗಾಂಧೀಜಿಯವರು ಈ ಕಾವ್ಯವನ್ನು ಓದಿ ಕೊಂಡಾಡಿದ್ದು ಉತ್ಪ್ರೇಕ್ಷೆಯ ಮಾತೇನಲ್ಲ ಎನಿಸುತ್ತದೆ.

ಈ ಕಾವ್ಯ ಅನುಸರಿಸಿದ್ದು ಸರಳ ಮಾದರಿಯ ತಂತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ವೈಯಕ್ತಿಕ ಬದುಕಿನ ನಿಷೇಧಗಳು, ಪಾಪ ಪುಣ್ಯದ ಮಾತುಗಳು, ಸಿದ್ದಾರ್ಥನಿಗೆ ಇವುಗಳ ದರ್ಶನವಾಗುವ ಮುನ್ನಿನ ಭಾಗ ಓದುಗರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇದು ಹೆಚ್ಚು ಸಾಂಪ್ರದಾಯಿಕ ನೋಟವನ್ನು ಒಳಗೊಂಡಿದ್ದು ಸಾಮಾನ್ಯ ಓದುಗ ಇದರಿಂದ ಬಿಡಿಸಿಕೊಂಡು ಹೊರಬರುವುದು ಕಷ್ಟ. ಆಸ್ತಿಕತೆಯಯ ವೈಭವೀಕರಣ ಓದುಗನನ್ನು ಸೆರೆ ಹಿಡಿಯುತ್ತದೆ. ಅನಂತರದಲ್ಲಿ ಸರ್ವಶಕ್ತನ ಶಕ್ತಿಯ ಬಗ್ಗೆ ಪ್ರಶ್ನೆಗಳಿದ್ದರೂ ಹಿಂದಿನ ಪರಿಣಾಮದಿಂದ ಬಿಡಿಸಿಕೊಳ್ಳುವುದು ಸಾಮಾನ್ಯ ಓದುಗನಿಗೆ ಅಷ್ಟು ಸರಳ ಸಾಧ್ಯವಲ್ಲ ಎನಿಸುತ್ತದೆ.

ಪುರಾಣ ಹಾಗೂ ದೈವಿಯತೆಯೊಂದಿಗೆ ದೇವ ಭಾಷೆಯ ಬೆರಕೆ ದೇಶಿಯತಿಯನ್ನು ಬದಿಗಿಟ್ಟಂತೆ ಭಾಸವಾಗುತ್ತದೆ ಅದು ಮೂಲ ಕಾವ್ಯದ ಸ್ವರೂಪವೇ ಆಗಿರುವಾಗ ವ್ಯತಿರಿಕ್ತವೆನಿಸದು "ರಾಮ"ನೂ ಇಲ್ಲಿ ಇಣುಕುವುದು ವಿಶೇಷ. ಸಿದ್ದಾರ್ಥ ಕಾಣುವ ಸಾವಿನ ಸನ್ನಿವೇಶದ ಸಂದರ್ಭದಲ್ಲಿ "ರಾಮನಾಮ ಸತ್ಯ" ದ ನುಡಿಯನ್ನು ತರಲಾಗಿದೆ. ಮುಂದೆ ರಾಮ ಜನಿಸಿದ ದಿನದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಬೌದ್ಧ ನಿಕಾಯಗಳಲ್ಲಿ ರಾಮನ ಕಥನ ದ ಎರಡು ತುಣುಕಿನ ಭಾಗಗಳು ಕಂಡುಬಂದರೂ ಇಲ್ಲಿ ವ್ಯಕ್ತವಾದಷ್ಟು ಜನಪ್ರಿಯತೆಯನ್ನು ಹೊಂದಿತ್ತೆ? ಎನ್ನುವುದು ಸಂದೇಹ.

ಪ್ರಧಾನವಾಗಿ ಇದು ಭಾವ ಪರಿವಶತೆಯ ಉದ್ದೀಪನ ಕಾವ್ಯವಾಗಿದ್ದರೂ, ವಾಸ್ತವದಿಂದ ಅತೀತವಾಗಿಸುವ ಮೈನವಿರೇಳಿಸುವ ಹಾಗೂ ಮೈಮರೆಸುವ ಕಾವ್ಯವಾಗಿದೆ. ಪವಾಡ ಮೀರಿದವರಿಗೆ ಪವಾಡ ಸಾದೃಶ್ಯದ, ವೈಭವ ಪೂರ್ಣ ವರ್ಣನಾತ್ಮಕ ಕಾವ್ಯ. ಈ ಸ್ವರೂಪದ ಕಾವ್ಯದ ನಡೆ ಬುದ್ಧನನ್ನು ಎದೆಯಲ್ಲಿ ಸಚಿತ್ರವಾಗಿ ಕೆತ್ತುತ್ತದೆ ಆದರೆ ಬುದ್ಧ ತತ್ವ ಅಷ್ಟೇ ಪರಿಣಾಮಕಾರಿಯಾಗಿ ಹರಿದೊಯ್ಯಬಲ್ಲ ಸಾರ್ಥಕತೆಯ ಬಗ್ಗೆ ಇಂಬುಗೊಡುವಂತೆ ಮಾಡುತ್ತದೆ.

 

MORE FEATURES

ಕನ್ನಡದ ಅಪರೂಪದ ಚಿಂತಕ ಜಿ.ಎಸ್.ಸಿದ್ದಲಿಂಗಯ್ಯ

07-05-2025 ಬೆಂಗಳೂರು

"ಸಾಹಿತ್ಯ ಲೋಕದ ಯಾವ ಗುಂಪುಗಾರಿಕೆಗೂ ಸೇರದ ಜಿ.ಎಸ್.ಸಿದ್ದಲಿಂಗಯ್ಯ ಒಬ್ಬಂಟಿಯಾಗಿಯೇ ಸಾಗಿದರು. ಅವರಿಗಿಂತ ಕಿರಿಯರ...

ಅಪರೂಪದ ಕವಿ-ವಾಗ್ಮಿ ನಮ್ಮ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ

07-05-2025 ಬೆಂಗಳೂರು

"ಸಾಹಿತ್ಯ ವಲಯದ ಗುಂಪುಗಾರಿಕೆಯಿಂದ ಬಲುದೂರ ಉಳಿದಿರುವ ಸಿದ್ಧಲಿಂಗಯ್ಯನವರದು ಬಹುತೇಕ ಒಂಟಿ ಪಯಣವೇ. ಇವರಿಗೆ ಆಪ್ತರ...

ಓದಿನ ಸುಖ ಕೊಡುವುದು ಅನುವಾದ ಸರಾಗವಾಗಿ ಓದಿಸಿಕೊಂಡು ಹೋದಾಗ ಮಾತ್ರ!

07-05-2025 ಬೆಂಗಳೂರು

"ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತ...