“ನಮಗೆಲ್ಲಾ ಗೊತ್ತೇ ಇರುವ ಕತೆಯನ್ನು ಅಕ್ಷರದ ಮೇಲೆ ಅಕ್ಷರವಿಟ್ಟು ಪೋಣಿಸಿದ ಈ ಕೃತಿ ನಮ್ಮನ್ನು ಹೊಸಹೊಳಹುಗಳತ್ತ ಹೊರಳಿಸುತ್ತದೆ,” ಎನ್ನುತ್ತಾರೆ ಗೋಪಾಲಕೃಷ್ಣ ಕುಂಟಿನಿ. ಅವರು ಜಗದೀಶಶರ್ಮಾ ಸಂಪ ಅವರ “ಕುರುಕ್ಷೇತ್ರ” ಕೃತಿ ಕುರಿತು ಬರೆದ ವಿಮರ್ಶೆ.
ಮಹಾಭಾರತ ಮತ್ತು ಜಗದೀಶ ಶರ್ಮಾ ಸಂಪ ಜೋಡಿಪದ ಆದಂತಿದೆ. ಕಳೆದ ಐದಾರು ವರ್ಷಗಳಿಂದ ವ್ಯಾಸ ಭಾರತವನ್ನು ಎಕ್ಸ್ಪ್ಲೋರ್ ಮಾಡುತ್ತಿರುವ ಶರ್ಮಾ ಅವರು ಮೂಲಭಾರತವನ್ನು ಕನ್ನಡಿಗರಿಗೆ ಆಪ್ತವಾಗಿಸುತ್ತಿದ್ದಾರೆ.
ಬೇರೆಬೇರೆ ಚಾನಲ್ ಗಳ ಮೂಲಕ ಭಾರತ ಕಥಾಶ್ರವಣ ಮಾಡಿಸುತ್ತಿರುವ ಜಗದೀಶ ಶರ್ಮಾ ಅವರು ಈಗ ಕನ್ನಡ ಕೇಳುಗರಿಗೆ ಆಪ್ತರು. ಅವರ ಇನ್ ಸೈಟುಗಳೇ ಈ ಆಪ್ತತೆಗೆ ಕಾರಣ. ಮೂಲವನ್ನು ಬಿಟ್ಟು ಕೊಂಚವೂ ಜರಗದೇ, ಅದರಾಚೆಗೆ ಯಾವ ರಾಜಿಯೂ ಮಾಡದೇ ಶರ್ಮಾ ಅವರು ಸದ್ಯಕ್ಕಂತೂ ವ್ಯಾಸಮಿತ್ರ.
ಈಗ ಅವರು ಕುರುಕ್ಷೇತ್ರದ ಸಂಪೂರ್ಣ ಕಥಾನಕವನ್ನು ಪುನರ್ ಕಥನವಾಗಿ ತಂದಿದ್ದಾರೆ. ಮೊದಲ ವಾಲ್ಯೂಮ್ ಈಗ ಬಂದಿದೆ. ಸಾವಣ್ಣ ಪ್ರಕಾಶನದ ಮಹತ್ವದ ಪ್ರಕಟಣೆ ಇದು. ರಾಮಾಯಣ ಮಹಾಭಾರತದ ಮೇಲೆ ಹಲವು ಕೃತಿಗಳನ್ನು ಪ್ರಕಾಶಿಸಿದ ಜಮೀಲ್ ಸಾವಣ್ಣ - ಶಫೀಕಾ ದಂಪತಿ ಈ ಕೃತಿಯನ್ನು ಕನ್ನಡ ಓದುಗರಿಗೆ ಕೊಡಿಸಿದ್ದಾರೆ.
ಕುರುಕ್ಷೇತ್ರದ ಕಥನ ಬಹಳ ಮಹತ್ವದ್ದು. ಭಾರತ ಕತೆಯಲ್ಲಿ ನಿರ್ಣಾಯಕವಾಗಿ ಕಾಣಿಸುವುದು ಕುರುಕ್ಷೇತ್ರದ ಆ ಹದಿನೆಂಟು ದಿನಗಳು. ರಾಜಸೂಯ ಯಾಗದಲ್ಲಿ ಕಾಣಿಸಿಕೊಂಡ ಎಲ್ಲಾ ರಾಜ ಮರಿರಾಜ ಸಾಮಂತರೆಲ್ಲಾ ಕುರುಕ್ಷೇತ್ರದಲ್ಲೂ ಕಾಣಿಸಿಕೊಂಡರು ಮತ್ತು ಅವರೆಲ್ಲಾ ಅಕ್ಷರಶಃ ನಾಶವಾದರು. ಹೀಗಾಗಿ ಕುರುಕ್ಷೇತ್ರ ಕದನವನ್ನು ಯುಗಾಂತ್ಯದ ಕತೆಯೆಂದೇ ಪರಿಗಣಿಸಬೇಕು ಮತ್ತು ಅದು ನವಯುಗದ ಆರಂಭದ ಕತೆಯೂ ಆಯಿತು.
ಜಗದೀಶ ಶರ್ಮಾ ಸಂಪ ಅವರು ತಮ್ಮ ಕೃತಿಗೆ ‘ಕ್ಷಣಕ್ಷಣದ ಮಾಹಿತಿ’ ಎಂದು ಟ್ಯಾಗ್ ಲೈನ್ ಹೊದಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಮಹಾಕಾವ್ಯದೊಳಗೆ ನಮಗೆ ಸಿಗುವ ಕುರುಕ್ಷೇತ್ರದ ವಿವರಗಳು ಫ್ಲಾಶ್ ಬ್ಯಾಕ್ ನಲ್ಲಿವೆ. ಸ್ವತಃ ಮಹಾಕವಿಯೇ ಎಲ್ಲೆಡೆ ಭಾರತ ಕತೆಯನ್ನು ಪ್ರಸ್ತುತಪಡಿಸುತ್ತಿದ್ದರೆ, ಕುರುಕ್ಷೇತ್ರದ ವರದಿಗೆ ಅವರು ವರದಿಗಾರನನ್ನು ನೇಮಿಸಿದರು. ಆ ವರದಿಗಾರನ ಹೆಸರು ಸಂಜಯ. ವ್ಯಾಸರೇ ಆ ವರದಿಯನ್ನು ಮಾಡಬಹುದಿತ್ತಲ್ಲ? ಮಾಡಲಿಲ್ಲ. ಏಕೆಂದರೆ ಒಂದು ಮಹಾವಿನಾಶಕ್ಕೆ ವಕ್ತಾರನಾಗಿ ಕೂರುವುದು ಅವರಿಗೆ ಇಷ್ಟವಿರಲಿಲ್ಲವೇ? ಅಥವಾ ಕವಿ ಆ ಭಂಜನವನ್ನು ಸಹಿಸಲಾರನೇ? ಗೊತ್ತಿಲ್ಲ.
ಯುದ್ಧದ ವರದಿಯನ್ನು ಸಂಜಯ ಹೇಳಿದ್ದು ಧೃತರಾಷ್ಟ್ರನಿಗೆ. ಬಹುಶಃ ಇದಕ್ಕೂ ಮುನ್ನ ವ್ಯಾಸರು ಧೃತರಾಷ್ಟ್ರನಿಗೆ ನೇರವಾಗಿ ಯುದ್ಧವನ್ನು ಕಾಣಿಸಲು ಯತ್ನಿಸಿದ್ದರು. ಯಾವ ಸಮೂಹ ನಾಶದ ಮೂಲಕಾರಕನಿದ್ದಾನೋ ಅವನೇ ಆ ನಾಶವನ್ನು ಕಣ್ಣಾರೆ ಕಾಣಲಿ ಎಂಬುದು ವ್ಯಾಸರ ಉದ್ದೇಶವಾಗಿತ್ತು. ಆದರೆ ಧೃತರಾಷ್ಟ್ರನಿಗೆ ಅಂತರಾತ್ಮದ ಎಚ್ಚರ ಮತ್ತು ಆತ್ಮಸಾಕ್ಷಿ ಪ್ರಬಲವಾಗಿತ್ತು. ಅವನು ಆ ದಿವ್ಯದೃಷ್ಟಿಯ ವರವನ್ನು ನಿರಾಕರಿಸಿದ. ಹೀಗಾಗಿ ಸಂಜಯ ಬರಬೇಕಾಯಿತು.
ಅವನೋ ಯುದ್ಧದ ನೇರ ಪ್ರಸಾರ ಮಾಡಲಿಲ್ಲ. ಹತ್ತು, ಹದಿನೈದು, ಹದಿನೇಳನೆಯ ರಾತ್ರಿಗಳಲ್ಲಿ ಮತ್ತು ಹತ್ತೊಂಭತ್ತನೆಯ ಹಗಲು ಧೃತರಾಷ್ಟ್ರನಿಗೆ ಮಹಾಯುದ್ಧದ ಸಮಗ್ರ ವರದಿ ಒಪ್ಪಿಸಿದ.
ಇದು ನೇರಪ್ರಸಾರಕ್ಕಿಂತಲೂ ಅಪೂರ್ವವಾಗಿತ್ತು. ಅಲ್ಲಿ ಪ್ರತಿ ಕ್ಷಣದ ಸಂಪೂರ್ಣ ಚಿತ್ರವಿತ್ತು. ಶೌರ್ಯ, ಸಾಹಸ,ತಾಪ, ಪ್ರತಾಪ, ಪಶ್ಚಾತ್ತಾಪಗಳಿದ್ದವು. ಮಹಾಯುದ್ಧದಲ್ಲಿ ಮಾಡಿದ್ದೆಲ್ಲವೂ ಸರಿ ಎಂಬ ಕಾಲೋಚಿತವಾದ ಕ್ಷಣಗಳಿದ್ದವು.
ಜಗದೀಶ ಶರ್ಮಾ ಅವರ ಈ ಕೃತಿಯಲ್ಲಿ ಎಲ್ಲವೂ ಇದೆ. ಒಂದರ್ಥದಲ್ಲಿ ಅವರು ಕನ್ನಡದ ಸಂಜಯ.
ಭೀಷ್ಮನ ಪತನವಾಗಿದೆ.ಇನ್ನು ಎಂಟು ದಿನಗಳಿವೆ.
ನಮಗೆಲ್ಲಾ ಗೊತ್ತೇ ಇರುವ ಕತೆಯನ್ನು ಅಕ್ಷರದ ಮೇಲೆ ಅಕ್ಷರವಿಟ್ಟು ಪೋಣಿಸಿದ ಈ ಕೃತಿ ನಮ್ಮನ್ನು ಹೊಸಹೊಳಹುಗಳತ್ತ ಹೊರಳಿಸುತ್ತದೆ. ಕನ್ನಡದ ಮಸ್ಟ್ ರೀಡ್ ಬುಕ್ ಇದು.
“ನಮಸ್ಕಾರ, ನಾನು ಚೆನ್ನಗಿರಿ ಕೇಶವ ಮೂರ್ತಿ, ಕ್ರಿಕೆಟ್ ಅಂಕಿಅಂಶ ಬರೆಯುತ್ತೇನೆ,” ಎಂದರು. ವಿನಿಯವ...
"ಈ ಹೊತ್ತಗೆಯಲ್ಲಿ ಹಿಂದೂ ಧರ್ಮ, ಹಿಂದುತ್ವ, ಸನಾತನ ಧರ್ಮ ಇವೆಲ್ಲವೂ ಒಂದೇ ಆಗಿದೆ ಎಂದು ತರ್ಕಶುದ್ಧವಾಗಿ ಸಮನ್ವಯಗ...
"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...
©2025 Book Brahma Private Limited.