ಶರಣರು ಮೊದಲು ನಡೆದರು ನಂತರ ನುಡಿದರು


“ಬೆಳೆವ ಸಿರಿ ಮೊಳಕೆಯಲ್ಲೇ ನೋಡು ಎಂಬಂತೆ ಶ್ರೀ ರೇವಣಸಿದ್ದಯ್ಯ ಹಿರೇಮಠರವರಿಗೆ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಸಂಸ್ಕಾರದಲ್ಲಿ ಬೆಳೆದಿದ್ದರಿಂದ ಸಾಹಿತ್ಯದೊಂದಿಗೆ ಸಂಗೀತ ಸಂಸ್ಕಾರವನ್ನು ಕ್ರಮಬದ್ಧವಾಗಿ, ಶಾಸ್ತ್ರೀಯವಾಗಿ ಪಡೆದವರು,” ಎನ್ನುತ್ತಾರೆ ಡಾ.ರಾಮಚಂದ್ರ ಗಣಾಪೂರ ಅವರು ರೇವಣಸಿದ್ದಯ್ಯ ಹಿರೇಮಠ ಅವರ "ಶ್ರೀಗುರು ವಚನಾಮೃತ" ಕೃತಿ ಕುರಿತು ಬರೆದ ಮುನ್ನುಡಿ


ಗಾನಕೋಗಿಲೆ ರೇವಣಸಿದ್ದಯ್ಯ ಹಿರೇಮಠರವರ|
'ಶ್ರೀಗುರು ವಚನಾಮೃತ'ದ ಸುಧೆಯೊಳಗೆ

ಈ ಜೀವನ ದೇವರು ನಮಗೆ ನೀಡಿದ ವರದಾನ ಹಾಗೂ ಹಲವು ವಿಸ್ಮಯಗಳ ಆಗರ. ಈ ಭುವಿಗೆ ಬಂದ ಮನುಷ್ಯ ತನ್ನ ಸಾರ್ಥಕ ಕೊಡುಗೆಯನ್ನು ಸಮಾಜಕ್ಕೆ ಧಾರೆಯೆರೆದಾಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ, ಮೌಲಿಕವಾಗುತ್ತದೆ. ವ್ಯಕ್ತಿ ಬರುವುದು, ಇರುವುದು, ಹೋಗುವುದರ ನಡುವೆ ಅಚ್ಚಳಿಯದ ಛಾಪನ್ನು ದಾಖಲಿಸುವುದರ ಮೂಲಕ ಮಾನವ ಮಹಾಮಾನವನಾಗುತ್ತಾನೆ. ಆದ್ದರಿಂದ ಇರುವ ಅಮೂಲ್ಯ ಸಮಯದಲ್ಲಿಯೇ ಮಾಡುವ ಸಮಾಜಮುಖಿ, ಜೀವಪರ ಕಾರ್ಯ, ಸಾಹಿತ್ಯ, ಸಂಗೀತ ಸೇವೆ ನೀಡಿದ್ದು ಮಾತ್ರ ಆಚಂದ್ರಾರ್ಕವಾಗಿರುತ್ತದೆ. ಅಂತಹ ಸಾಧಕರ, ಮಹಾನುಭಾವರ ಹೆಸರು ಚಿರಸ್ಥಾಯಿಯಾಗಿರುತ್ತದೆ. ಅಂತಹ ಸಾರ್ಥಕ ಜೀವನ ಸಾಗಿಸುತ್ತಿರುವ ಮಹಾನುಭಾವರಲ್ಲಿ ಗಾನಗಂಧರ್ವ, ಗಾನಕೋಗಿಲೆ, ಸಾಹಿತಿ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಒಬ್ಬರು. ವೃತ್ತಿಯಲ್ಲಿ ಸಂಗೀತ ಶಿಕ್ಷಕರಾಗಿರುವ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಶ್ರೀಮತಿ ಸಂಗಮ್ಮ ಸಿದ್ಧರಾಮಯ್ಯ ಹಿರೇಮಠ ಪುಣ್ಯದಂಪತಿಗಳ ಉದರದಲ್ಲಿ ಶರಣಭೂಮಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಲ್ಲೂರಿನಲ್ಲಿ ಜನಿಸಿದವರು. ಹಿರೇಮಠ ಮನೆತನದ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ ಅಸಾಮಾನ್ಯ ಸಾಧನೆ ಮಾಡಿದ ಮಹಾನುಭಾವರು. ಇವರಿಗೆ ಸಂಸ್ಕಾರಭರಿತ ಮನೆಯೇ ಮೊದಲು ಪಾಠಶಾಲೆಯಾಗಿತ್ತು. ನಂತರದಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮವೇ ಮಹಾಮನೆಯಾಯಿತು.

ಶ್ರೀ ರೇವಣಸಿದ್ದಯ್ಯ ಹಿರೇಮಠರವರಿಗೆ ಮಹತ್ವದ ತಿರುವು ದೊರೆತದ್ದು ಸಂಗೀತ ಕಾಶಿ ಎನಿಸಿದ ಗದಗನ ಶ್ರೀ ವೀರೇಶ್ವರ ಪುಣ್ಯಾಶ್ರಮ. ಸಂಗೀತ ವಿದ್ಯೆಯ ಹಂಬಲದಿಂದಾಗಿ ಗದುಗಿಗೆ ಬಂದ ಹಿರೇಮಠರಿಗೆ ವೀರೇಶ್ವರ ಪುಣ್ಯಾಶ್ರಮ ನಿಜವಾಗಿಯೂ ಗುರುಕುಲವಾಯಿತು. ಅವರ ಸಂಗೀತದ ಕನಸು ಗಾನಯೋಗಿ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳಂತಹ ಜಗತ್ಪಸಿದ್ಧ ಪೂಜ್ಯರ ಸಾಂಗತ್ಯದಲ್ಲಿ ನನಸಾಯಿತು, ನೆರವೇರಿತು. ಪುಟ್ಟರಾಜ ಗವಾಯಿಗಳಂತಹ ಸಂತರ, ಯೋಗಿಗಳ ಸಾಮೀಪ್ಯ ದೊರೆತದ್ದೇ ಒಂದು ಯೋಗ, ಅವರ ನೇರ ಶಿಷ್ಯರಾಗಿ ಸಂಗೀತ ಕಲಿತದ್ದು ಇವರ ಯೋಗಾ ಯೋಗ. ಮಹಾನ್ ಸಾಧಕರಾಗಿದ್ದ ಪುಟ್ಟರಾಜರ ಶಿಷ್ಯತ್ವದಲ್ಲಿ ಅವರ ಸೇವೆಯೊಂದಿಗೆ, ಸಂಗೀತದ ವಿದ್ಯಾಭ್ಯಾಸದಲ್ಲಿ ಪ್ರವೀಣರಾದವರು. ಸಂಗೀತದಲ್ಲಿ ಎಂ.ಮ್ಯೂಜಿಕ್, ವಿದ್ವತ್, ವಿಶಾರದ(ಹಿಂದೂಸ್ಥಾನಿ ಸಂಗೀತ) ಹೀಗೆ ಸಂಗೀತ ವಿದ್ಯೆಯಲ್ಲಿ ಪಾರಂಗತರಾದವರು.

ಬೆಳೆವ ಸಿರಿ ಮೊಳಕೆಯಲ್ಲೇ ನೋಡು ಎಂಬಂತೆ ಶ್ರೀ ರೇವಣಸಿದ್ದಯ್ಯ ಹಿರೇಮಠರವರಿಗೆ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಸಂಸ್ಕಾರದಲ್ಲಿ ಬೆಳೆದಿದ್ದರಿಂದ ಸಾಹಿತ್ಯದೊಂದಿಗೆ ಸಂಗೀತ ಸಂಸ್ಕಾರವನ್ನು ಕ್ರಮಬದ್ಧವಾಗಿ, ಶಾಸ್ತ್ರೀಯವಾಗಿ ಪಡೆದವರು. ವೃತ್ತಿಯಲ್ಲಿ ಸಂಗೀತ ಶಿಕ್ಷಕರಾಗಿದ್ದ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಪ್ರವೃತ್ತಿಯಲ್ಲಿ ಪ್ರಬುದ್ಧ ವಾಗ್ನಿಗಳು, ಪ್ರವಚನಕಾರರು ಹಾಗೂ ಸಾಹಿತಿಗಳು. ಸಾಹಿತ್ಯ ಲೋಕದಲ್ಲಿ ಕಾವ್ಯ, ಲೇಖನಗಳನ್ನು ಸಾಹಿತ್ಯ ಲೋಕಕ್ಕೆ ಧಾರೆಯೆರೆದ ಬರಹಗಾರರೂ ಕೂಡ. ಸಾಹಿತ್ಯ ಹಾಗೂ ಸಂಗೀತ ಎರಡನ್ನೂ ಮೈಗೂಡಿಸಿಕೊಂಡಂತಹ ಹಿರಮಠರು ಇಲ್ಲಿಯವರೆಗೆ ಹಳ್ಳಿಯಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಂತಹ ಬೃಹತ್ ನೂರಾರು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಸಾಧಕರು. ಸುಮಾರು ೨೫ ವರ್ಷಗಳಿಂದ ನಿರಂತರವಾಗಿ ಹಾಡುಗಾರಿಕೆಯಲ್ಲಿ ತಲ್ಲೀನರಾಗಿದ್ದಾರೆ. ಅನೇಕ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ, ವಿವಿಧ ಸ್ತರದ ಪದಾಧಿಕಾರಿಯಾಗಿ ಸಕ್ರಿಯರಾಗಿದ್ದಾರೆ. ಅನೇಕ ಧ್ವನಿ ಸುರುಳಿಗಳನ್ನು ಸಹ(ಸಿ.ಡಿ) ಕಲಾರಸಿಕರಿಗೆ ಧಾರೆಯೆರೆದ ಕಲಾವಿದರು. ತುಂಬಾ ಕ್ರಿಯಾಶೀಲರಾದ ಹಿರೇಮಠರು ರಂಗಭೂಮಿ ಕ್ಷೇತ್ರದಲ್ಲಿಯೂ ತಮ್ಮನ್ನು ತೊದಗಿಸಿಕೊಂಡಿದ್ದಾರೆ. ಶ್ರೀಯುತರು ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ನೀಡಿ ಕಲಾ ರಸಿಕರ ಮನಸೂರೆಗೊಂಡಿದ್ದಾರೆ. ಹಿರೇಮಠರವರ ಪ್ರತಿಭೆ ಹಾಗೂ ಪ್ರಾಂಜಲಭಾವದ ಕಲಾ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿಗಳು ಇವರನ್ನರಸಿ ಬಂದಿವೆ. ಅವುಗಳಲ್ಲಿ ರೇಣುಕಶ್ರೀ ಪ್ರಶಸ್ತಿ, ಗಾನ ಕೋಗಿಲೆ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಶ್ರೀ ಪ್ರಶಸ್ತಿ, ಸಂಗೀತ ಶಿರೋಮಣಿ ಪ್ರಶಸ್ತಿ, ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಗಾನ ಸುಧಾಕರ ಪ್ರಶಸ್ತಿ, ಸಂಗೀತ ಆರಾಧಕ ಪ್ರಶಸ್ತಿ, ಕಾಯಕ ಶ್ರೀ ಪ್ರಶಸ್ತಿ, ಶ್ರೀ ಚೆನ್ನ ರತ್ನ ಪ್ರಶಸ್ತಿ, ಶ್ರೀ ಗಾನ ರತ್ನ ಪ್ರಶಸ್ತಿ, ಪಂಚಾಕ್ಷರ ಕೃಪಾ ಭೂಷಣ ಪ್ರಶಸ್ತಿ, ಶ್ರೀ ಚನ್ನಶ್ರೀ ಪ್ರಶಸ್ತಿ, ಕುಮಾರ ಶ್ರೀ ಪ್ರಶಸ್ತಿ, ಗಾನ ಸಿಂಚನ ಪ್ರಶಸ್ತಿ, ಸಂಗೀತ ರತ್ನ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ ಹೀಗೆ ಶ್ರೀ ರೇವಣಸಿದ್ದಯ್ಯ ಹಿರೇಮಠರವರ ಅಪೂರ್ವ ಸೇವೆಗೆ ಸಂದ ಪ್ರಶಸ್ತಿಗಳಾಗಿವೆ. ಇವರ ಜೀವನ ಸಾಧನೆಯನ್ನು ಪರಿಗಣಿಸಿ ಹಿರಿಯ ಸಾಹಿತಿಗಳಾದ ಶ್ರೀ ಬಸವರಾಜ ಐನೋಳಿಯವರು 'ಗಾನಕೋಗಿಲೆ ಶ್ರೀ ರೇವಣಸಿದ್ದಯ್ಯ ಹಿರೇಮಠ' ಮಹತ್ವದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.

'ಸಾಹಿತ್ಯದೊಂದಿಗೆ ಸಂಗೀತ ಸೇರಿದರೆ ಚಿನ್ನದ ಹೂವಿಗೆ ಪರಿಮಳ ಬಂದಂತೆ' ಎಂಬ ಮಾತಿನಂತೆ ಸಂಗೀತ ಕ್ಷೇತ್ರದ ಅಸಾಮಾನ್ಯ ಸಾಧಕರಾದ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ವೃತ್ತಿಯಲ್ಲಿ ಸಂಗೀತ ಶಿಕ್ಷಕರು, ಪ್ರವೃತ್ತಿಯಲ್ಲಿ ಅಪೂರ್ವ ಸಾಹಿತಿಗಳು, ಅಪಾರ ಲೋಕಾನುಭವವನ್ನು ಹೊಂದಿರುವಂತಹ ಇವರು 'ಗುರು ಪುಟ್ಟ ರಸಿಕಪ್ರಭು' ಅಂಕಿತದಲ್ಲಿ ಸಾಹಿತ್ಯ ಲೋಕಕ್ಕೆ ೧೫೫ ಆಧುನಿಕ ವಚನಗಳುಳ್ಳ 'ಶ್ರೀಗುರು ವಚನಾಮೃತ' ಎಂಬ ಮಹತ್ವದ ಹೊತ್ತಿಗೆ ಕನ್ನಡ ಸಾಹಿತ್ಯದ ಗಣಿಗೆ ಧಾರೆಯೆರೆದು ವಾಗ್ಗೇವಿಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಹಸಿಗೋಡೆಯಲ್ಲಿ ಹರಳೊಗೆದಂತೆ ಇಲ್ಲಿನ ವಚನಗಳು ಪ್ರಖರ ವಿಚಾರಗಳಿಂದ ಗಮನಸೆಳೆಯುತ್ತವೆ. ಸುಂದರ ಸಮಾಜಕ್ಕಾಗಿನ ಹಿರೇಮಠರವರ ಪ್ರಾಂಜಲಭಾವ, ಕಾಳಜಿ ಅವರ ವಚನಗಳಲ್ಲಿ ಎದ್ದು ಕಾಣುತ್ತದೆ. ಮೊನಚಾದ ವಿಡಂಬನೆಯ ಮಾತುಗಳು ಎಂತಹ ದಪ್ಪ ಚರ್ಮದ ವ್ಯಕ್ತಿಯನ್ನೂ ಚುಚ್ಚಿ ಸನ್ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಪೂರಕವಾಗಿವೆ. ತಮ್ಮ ರಸವತ್ತಾದ ಜೀವನಾನುಭವಗಳನ್ನು ಆಧುನಿಕ ವಚನಗಳಲ್ಲಿ ದಾಖಲಿಸಿದ್ದಾರೆ.

ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೋ ಎಂಬಂತೆ ಈ ಅಮೂಲ್ಯವಾದ ಜೀವನದಲ್ಲಿ ಇನ್ನೊಬ್ಬರಿಗೆ ಹಾನಿಯಾಗದಂತೆ, ಧಕ್ಕೆಯಾಗದಂತೆ ಜೀವಪರ ಕಾಳಜಿಯಿಂದ ಬಾಳಬೇಕು. ಇನ್ನೊಬ್ಬರನ್ನು ತುಳಿದು ಬದುಕುವದಕ್ಕಿಂತ ತಿಳಿದು ಬದುಕಬೇಕೆಂಬ ಮಾರ್ಮಿಕ ಜೀವಪರ ಕಾಳಜಿಯನ್ನು ಸಮಾಜಕ್ಕೆ ಅರುಹುತ್ತಾರೆ.

ತಿಳಿದು ಬದುಕುವ ತಿಳುವಳಿಕೆಯೇ ಶ್ರೇಷ್ಠ
ತುಳಿದು ಬದುಕುವ ಚಾಳಿಯೇ ಕನಿಷ್ಠ
ತಿಳುವಳಿಕೆಗಿಂತ ಉತ್ತಮ ನಡವಳಿಕೆಯೇ
ಜೀವನದಲ್ಲಿ ಪರಮ ಶ್ರೇಷ್ಠನೆಂದಾತ ನಮ್ಮ
ಪುಟ್ಟರಸಿಕ ಪ್ರಭುವೆ |

ಜೀವನವೇ ಒಂದು ನಾಟಕರಂಗವಿದ್ದಂತೆ ಬಾಹ್ಯ ಆಡಂಬರಕ್ಕಾಗಿ ನಾನಾ ವೇಶಗಳನ್ನು, ಧರ್ಮ ಲಾಂಛನಗಳನ್ನು ಹಾಕುವುದುಂಟು. ಅದಕ್ಕೆ ಬದ್ಧರಾಗಿ ನಡೆಯುವುದು ದುರ್ಲಭ. ನಡೆ-ನುಡಿ ಒಂದಾದಾಗ ಮಾತ್ರ ಯುಗಪುರುಷರಾಗಲು ಸಾಧ್ಯವೆಂಬ ಮಾರ್ಮಿಕವಾದ ಮಾತನ್ನು ಇಲ್ಲಿ ದಾಖಲಿಸಿದ್ದಾರೆ.

ಕಾಯಕ್ಕೆ ಕಾವಿ ಹಾಕಿದವರು ಬಹಳುಂಟು
ಮನಸ್ಸಿಗೆ ಕಾವಿ ಹಾಕಿದವರು ಕಡಿಮೆಯುಂಟು
ಕಾಯಕ್ಕೆ ಬಳಲಿದವರು ಜಗದಿ ಬಹಳುಂಟು
ಕಾವಿಲಾಂಛನಕ್ಕೆ ಮಹತ್ವ ತಂದ ಕಾರಣಿಕ
ಯುಗಪುರುಷ ಹಾನ್ಗಲ್ಲ ಕುಮಾರೇಶನೆಂದಾ
ನಮ್ಮ ಗುರು ಪುಟ್ಟರಸಿಕ ಪ್ರಭುವು।

ಪ್ರತಿಯೊಬ್ಬರ ಜೀವನದಲ್ಲಿ ದೊರಕಬೇಕಾದದ್ದು ಮಾತ್ರ ದೊರಕುತ್ತದೆ. ದೊರಕದಿದ್ದಾಗ ಕುಗ್ಗದೆ, ದೊರಕಿದಾಗ ಹಿಗ್ಗದೆ ಸಮಾಧಾನಿಯಾಗಿರಬೇಕೆಂದಿದ್ದಾರೆ. ಸದಾ ಆ ದೇವನಿರಿಸಿದಂತೆ ಆಶಾವಾದಿಯಾಗಿ ಸಂತೃಪ್ತ ಜೀವನ ನಡೆಸುವುದೇ ಶ್ರೇಷ್ಠವೆಂದಿದ್ದಾರೆ.

ಕಂಡ ಕಂಡಲ್ಲಿ ಸೊಣಗನಂತೆ ಹೆಣಗಬೇಡ
ಕಂಡಿದ್ದು ಸಿಗಲಿಲ್ಲವೆಂದು ಮನದು ಗೊಣಗಬೇಡ
ಸಿಗಲಾರದಕ್ಕೆ ಪರಿತಪಿಸಿ ಮನದಿ ಒಣಗಬೇಡ
ಸಿಕ್ಕಾಗ ಹಿಗ್ಗಬೇಡ ಸಿಗದಾಗ ಕುಗ್ಗಬೇಡ
ಗದೊಳಗೆ ಜಗದೊಡೆಯನಿರಿಸಿದಂತೆ
ಬಾಳು ಎಂದಾತ ಗುರು ಪುಟ್ಟರಸಿಕ ಪ್ರಭುವು।

ಸಮಾಜದಲ್ಲಿ ಒಬ್ಬೊಬ್ಬರದು ಒಂದೊಂದು ತತ್ವ, ಸಿದ್ದಾಂತ, ಪಕ್ಷವೆಂದು ಬೀಗುತ್ತಾರೆ. ಸರಳ, ಸುಂದರವಾದ ಜೀವನ ಸಾಗಿಸುವಲ್ಲಿ ಎಡವುತ್ತಾರೆ. ಜನಪರವಾಗಿ ಆರೋಗ್ಯಕರ ಸಮಾಜಕ್ಕಾಗಿ ಬಾಳಿದರೆ ದೇಶ, ಸರ್ಕಾರ, ಸಮಾಜ ಉದ್ಧಾರವಾಗುತ್ತದೆಂಬುದನ್ನು ಹಿರೇಮಠರವರು ಸಾರಿದ್ದಾರೆ.

ಆ ತತ್ವ ಈ ತತ್ವ ಜಂಜಡತ್ವದಲ್ಲಿ ಸಿಲುಕಿ
ಮನುಷ್ಯತ್ವ ಮರೆತು ಬಾಳುವರಯ್ಯ
ಆ ಪಕ್ಷ ಈ ಪಕ್ಷ ಸ್ವಹಿತ ಪಕ್ಷ ಕಟ್ಟಿಕೊಂಡು
ಪ್ರಜಾಪ್ರಭುತ್ವ ಮರೆತು ಆಳುವರಯ್ಯ
ಕಿಂಕರತ್ವದಿ ಬಾಳಿ ಶಂಕರತ್ವದ ಶಕ್ತಿಯಾಗಿ
ಪರಿಪೂರ್ಣತ್ವ ಪಡೆದು ವಿಶ್ವಪಥದ ಮಹತ್ವ
ತಿಳಿಸಿದನಯ್ಯ ನಮ್ಮ ಗುರು ಪುಟ್ಟರಸಿಕ ಪ್ರಭುವೆ॥

ಶರಣರು ಮೊದಲು ನಡೆದರು ನಂತರ ನುಡಿದರು. ನಡೆದು ನುಡಿದ ಮಾತು ವಚನವಾಯಿತು. ಮನುಕುಲದ ಉದ್ಧಾರಕ್ಕಾಗಿ ನಿಸ್ವಾರ್ಥದಿಂದ ದುಡಿದರು. ಅದಕ್ಕಾಗಿ ಅವರ ಹೆಸರು ಇಂದಿಗೂ ಅಜರಾಮರವಾಗಿದೆ. ಹಾಗೆಯೇ ಪಂಚಾಕ್ಷರ ಪುಟ್ಟರಾಜರು ಅಂಧರ ಬಾಳಿನ ನಂದಾದೀಪವಾದರು. ಸ್ವತಃ ಹಿರೇಮಠರವರು ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಯಾಗಿ ಕಂಡಿದ್ದಾರೆ. ಶರಣರಂತೆ ಪುಟ್ಟರಾಜರು ಸಾಹಿತ್ಯ, ಸಂಗೀತ ಕ್ಷೇತ್ರದ ಜ್ಯೋತಿಯಾಗಿ, ವಿಶ್ವದ ನಂದಾದೀಪವಾಗಿ ಬೆಳಗಿದರು. ಪುಟ್ಟರಾಜ ಕೊಡುಗೆಯನ್ನು ಗಮನಿಸಿದರೆ ನಿಜವಾಗಿಯೂ ಕಣ್ಣಿದ್ದವರೇ ಕುರುಡರು.

ಸರ್ವ ಮನುಕುಲಕ್ಕೆ ಶ್ರಮಸಿದರು ಶಿವಶರಣರು
ಅಂಧ ಅನಾಥರಿಗೆ ಶ್ರಮಿಸಿದರು ಪಂಚಾಕ್ಷರ ಪುಟ್ಟರಾಜರು
ಭಕ್ತಿಯ ವಚನ ರಚಿಸಿದವರು ಶಿವಶರಣರು
ವಚನಗಳನ್ನು ಹಾಡಿದವರು ಪಂಚಾಕ್ಷರ ಪುಟ್ಟರಾಜರು

ಅನುಭವದ ಸತ್ಯ ಜ್ಯೋತಿಗಳಾದರು ಶಿವಶರಣರು ವಿಶ್ವದ ಪ್ರೇಮದಾನಂದ ಸುರಿಸಿದರು ಪಂಚಾಕ್ಷರ ಪುಟ್ಟರಾಜರು ಅಂಧರ ನಂದಾದೀಪವಾಗಿ ಜಗ ಬೆಳಗಿದರು ನಮ್ಮ ಗುರು ಪುಟ್ಟರಸಿಕ ಪ್ರಭುಗಳು ಜೀವನದಲ್ಲಿ ವ್ಯಕ್ತಿತ್ವ, ಚಾರಿತ್ರ್ಯ ತುಂಬಾ ದೊಡ್ಡದು. ಅದನ್ನು ಕಾಪಿಟ್ಟುಕೊಂಡು ಹೋಗುವುದು ತುಂಬಾ ಮಹತ್ವದ ಸಂಗತಿ. ಒಮ್ಮೆ ಹುಟ್ಟುವ ಈ ಅರ್ಥವತ್ತಾದ ಜೀವನವನ್ನು ಸಾರ್ಥಕ ಮಾಡಿಕೊಳ್ಳುವಲ್ಲಿ ಮನುಷ್ಯ ಕೆಲವು ಸಂದರ್ಭದಲ್ಲಿ ಸೋಲುತ್ತಾನೆ ಎಂಬುದನ್ನು ಇಲ್ಲಿ ಹಿರೇಮಠರವರು ದಾಖಲಿಸಿದ್ದಾರೆ. ಉತ್ತಮ ವ್ಯಕ್ತಿತ್ವವಿಲ್ಲದ ಮನುಷ್ಯ ಬರೀ ಕೊರಡಿದ್ದಂತೆ ಎಂಬುದನ್ನು ಪ್ರಖರವಾಗಿ ಅನೇಕ ಉದಾಹರಣೆಯೊಂದಿಗೆ ದಾಖಲಿಸಿದ್ದಾರೆ.

ಸ್ವಾದವಿಲ್ಲದ ಹಣ್ಣು, ಶೀಲವಿಲ್ಲದ ಹೆಣ್ಣು
ವೇದ ವೋದದ ಕಣ್ಣು, ವಾದ ಮಾಡುವ ಹೆಣ್ಣು
ದೇಹಕಂಟಿದ ಹುಣ್ಣು, ಮೈಮಾಸಿದ ತೊನ್ನು ಎರಿಯಿಲ್ಲದ ಮಣ್ಣು
ಹುಳುವಿದ್ದ ಮಾವಿನ ಹಣ್ಣು
ನಿಷ್ಟ್ರಯೋಜಕವೆಂದ ನಮ್ಮ ಗುರು ಪುಟ್ಟ ರಸಿಕ ಪ್ರಭುವು||

ಜ್ಞಾನವೆಂಬುದು ಬೆಳಕು ಅದರಿಂದ ಮಾತ್ರ ಜಗತ್ತು ಬೆಳಗಲು ಸಾಧ್ಯ. ಅದಕ್ಕೆ ಸಮರ್ಥ ಗುರು ದೊರೆತರಂತೂ ಆ ಜ್ಞಾನ ಇನ್ನಷ್ಟು ಪ್ರಜ್ವಲಿಸುತ್ತದೆ. ಹೇಗೆ ಸೂರ್ಯನಿಲ್ಲದೆ ಜಗಕ್ಕೆ ಬೆಳಕು ಸಿಗಲು ಸಾಧ್ಯವಿಲ್ಲವೋ, ಕವಿಯಿಲ್ಲದೆ ಕಾವ್ಯ ರಚನೆಯಾಗುವುದಿಲ್ಲವೋ, ಪುಷ್ಪವಿಲ್ಲದೆ ಪರಿಮಳ ಹೊರಹೊಮ್ಮದೋ, ಎಣ್ಣೆಯಿಲ್ಲದೆ ದೀಪ ಪ್ರಜ್ವಲಿಸದೋ ಹಾಗೆ ಇಲ್ಲಿ ಗುರುವಿನ ಕರುಣೆಯಂತೆ ಆಧುನಿಕ ವಚನಗಳನ್ನು ರಚಿಸಿದ್ದೇನೆಂಬ ವಿನಮ್ರಭಾವ ಲೇಖಕರಲ್ಲಿದೆ. ರವಿಯಿಲ್ಲದೆ ಜಗವು ಬೆಳಗಬಹುದೆ ಕವಿಯಿಲ್ಲದೆ ಕಾವ್ಯವು ಬರೆಯಬಹುದೆ ಪುಷ್ಪವಿಲ್ಲದೆ ಪರಿಮಳ ಸೂಸಬಹುದೆ

ಎಣ್ಣೆಯಿಲ್ಲದೆ ದೀಪವು ಪ್ರಜ್ವಲಿಸುವುದೇ
ರವಿ ಕಾಣದು ಕವಿ ಕಂಡ ಗಾದೆಯಂತೆ
ಗುರು ಕರುಣಿಸಿದಂತೆ ಆಧುನಿಕ ವಚನ
ಗುರು ಪುಟ್ಟ ರಸಿಕನು ಬರೆದನಂತೆ
ಎಲ್ಲರಲ್ಲೂ ಅರಿವು ಎನ್ನುವದು ಇರುತ್ತದೆ ಆದರೆ ಅದನ್ನು ಆಚರಣೆಗೆ
ತಂದಾಗ ಮಾತ್ರ ಅದಕ್ಕೆ ಬೆಲೆ ಸಿಗುತ್ತದೆ. ಹಸಿದಾಗ ಅನ್ನವೇ ಸಂತೃಪ್ತಿ ನೀಡುತ್ತದೆ

ವಿನಃ ಚಿನ್ನವಲ್ಲ. ಶರೀರಕ್ಕಿಂತ ಮನ ತುಂಬಾ ದೊಡ್ಡದು, ಈ ಜಗತ್ತಿಗಿಂತ ಜಗದೀಶನ ನಾಮವೇ ದೊಡ್ಡದು ಎಂಬ ಕಿಂಕರತ್ವವನ್ನು ಅಚಲವಾಗಿ ಸಾರಿದ್ದಾರೆ.

ಅರಿವಿಗಿಂತ ಆಚಾರ ದೊಡ್ಡದು
ಚಿನ್ನಕ್ಕಿಂತ ಅನ್ನವು ದೊಡ್ಡದು
ತನುವಿಗಿಂತ ಮನವು ದೊಡ್ಡದು
ಜೇನಿಗಿಂತ ಅಮೃತ ದೊಡ್ಡದು
ಜಗತ್ತಿಗಿಂತ ಜಗದೀಶನ ನಾಮವೇ

ದೊಡ್ಡದೆಂದ ಗುರು ಪುಟ್ಟ ರಸಿಕ ಪ್ರಭುವು।। ಕೆಲವೊಂದು ಸಂದರ್ಭದಲ್ಲಿ ಇರುವ ದೇಶವ ಮರೆತು ಪರದೇಶವನು ಆರಾಧಿಸುವವರು ನಮಕಹರಾಮರಾಗುತ್ತಾರೆ. ನಾವು ನೆಲಸಿದ ನೆಲ, ಜಲ, ಅನ್ನಕ್ಕೆ ಗೌರವ ಕೊಡಬೇಕು. ದೇಶದ ಅನ್ನ ತಿಂದು ವಿದ್ರೋಹ ಮಾಡುವವರು ದೇಶದ್ರೋಹಿಗಳಾಗುತ್ತಾರೆ ಎಂಬ ಕಟುಸತ್ಯವನ್ನು ತಮ್ಮ ದೇಶಾಭಿಮಾನವನ್ನು ಇಲ್ಲಿ ಹಿರೇಮಠರವರು ಅತ್ಯಂತ ಪ್ರಖರವಾಗಿ ದಾಖಲಿಸಿದ್ದಾರೆ. ಭಾರತ ಮಾತೆಯ ಅನ್ನವ ತಿಂದು

ಗಂಗಾ ಮಾತೆಯ ಜಲವನು ಕುಡಿದು
ಕನ್ನ ಹಾಕುವ ಹೀನ ಕುನ್ನಿಗಳಿಗೆ
ಕೆನ್ನೆಗೆ ಖನ ಖನ ಹೊಡಿಯೆಂದ
ನಮ್ಮ ಗುರು ಪುಟ್ಟರಸಿಕ ಪ್ರಭುವು।।

ಇಂದು ಜಗತ್ತೇ ಭಾರತದತ್ತ ಮುಖ ಮಾಡಿದೆ. ಕಾರಣ ಭಾರತ ಪ್ರಾಚೀನ ಪರಂಪರೆಯಾದ ಯೋಗ ವಿಧಾನ ಇಂದು ಸರ್ವ ರೋಗಕ್ಕೂ ಮದ್ದಾಗಿದೆ. ಅದರೊಂದಿಗೆ ರಾಗ ಅಂದರೆ ಸಂಗೀತವೂ ಕೂಡ ಜನಮಾನಸವನ್ನು ತಣಿಸಲು ಸಂಗೀತ ಪ್ರಕಾರ ಅತ್ಯಂತ ಮಹತ್ವದ್ದಾಗಿದೆ.

ಮಾಡಿದರೆ ಯೋಗ ಮಾಡದಿದ್ದರೆ ರೋಗ
ಹಾಡಿದರೆ ರಾಗ ಹಾಡದಿದ್ದರೆ ಹೋಗ ಯೋಗ
ಮಾಡು ಈಗ ರಾಗ ಹಾಡು ಬೇಗ ಜಾಗ ನೋಡಿ ಯೋಗ ರಾಗ ಮಾಡಿರೆಂದ
ನಮ್ಮ ಗುರು ಪುಟ್ಟ ರಸಿಕ ಪ್ರಭುವು||

ಜೀವನದಲ್ಲಿ ಹಾಸಿಗೆಯಿದ್ದಷ್ಟು ಕಾಲು ಚಾಚಬೇಕು, ಕಾಲಿದ್ದಷ್ಟು ಹಾಸಿಗೆಯಿರಬೇಕೆನ್ನುವವರೇ ಇಂದು ಹೆಚ್ಚಾಗಿದ್ದಾರೆ. ಹೀಗಾಗಿ ನಮ್ಮ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಜೀವನ ಸಾಗಿಸಬೇಕೆಂಬ ಮಹತ್ವದ ಸಂಗತಿಯನ್ನು ಇಲ್ಲಿ ನಿರ್ಭಿಡೆಯಿಂದ ವಚನಕಾರರು ಹೇಳಿದ್ದಾರೆ. ಹಾಗೆ ರೋಗಕ್ಕೆ ತಕ್ಕಂತೆ ಪಥ್ಯ, ವಿದ್ಯೆಗೆ ತಕ್ಕಂತೆ ವಿವೇಕವಿರಬೇಕೆಂಬ ವಿಚಾರವನ್ನು ಮನಮುಟ್ಟುವಂತೆ ತುಂಬಾ ಮಾರ್ಮಿಕವಾಗಿ ತಿಳಿಸಿದ್ದಾರೆ.

ಆಯಕ್ಕೆ ತಕ್ಕಂತೆ ವ್ಯಯ ಮಾಡಬೇಕು
ರೋಗಕ್ಕೆ ತಕ್ಕಂತೆ ಪಥ್ಯ ಪಾಲಿಸಬೇಕು
ವಿದ್ಯೆಗೆ ತಕ್ಕಂತೆ ವಿವೇಕಿಯಾಗಬೇಕು
ಅಂದಾಗ ಬದುಕಿಗೆ ಸಾರ್ಥಕತೆಯ ಬೆಲೆ ಬರುವುದೆಂದು
ಹೇಳಿದ ನಮ್ಮ ಗುರು ಪುಟ್ಟರಸಿಕ ಪ್ರಭುವು||

ಇಂದಿನ ಆಡಂಬರದ ಜೀವನಶೈಲಿ, ಮುಖವಾಡಗಳ ಜಗತ್ತಿನಲ್ಲಿ ಅನೇಕ ಜನರು ಬರೀ ಕೀರ್ತಿಶನಿಯ ಬೆನ್ನು ಹತ್ತಿದ್ದಾರೆ. ಕೆಲವರಿಗೆ ಪ್ರಚಾರದ ಹುಚ್ಚು ಹತ್ತಿ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಒಳ್ಳೆಯವರು ಯಾವ ಮೂಲೆಯಲ್ಲಿರುತ್ತಾರೋ ಗೊತ್ತಿಲ್ಲ. ಆದರೆ ಸಾಧಕರಿಗೆ, ಸೇವಕರಿಗೆ, ಸಮರ್ಥ ವ್ಯಕ್ತಿಗಳಿಗೆ ಸೂಕ್ತ ಸ್ಥಾನ ಸಿಗಬೇಕೆಂಬ ಕಾಳಜಿ ಲೇಖಕರದ್ದಾಗಿದೆ.

ಮಾದಕ ಪ್ರಿಯರ ಪ್ರಚಾರ ಮಾಡಿದಷ್ಟು
ಸಾದಕ ಪ್ರಿಯರ ಪ್ರಚಾರ ಮಾಡಿಲ್ಲವಯ್ಯ
ಬಾದಕ ವಿಷಯ ಪ್ರಚಾರ ಮಾಡಿದಷ್ಟು
ಶೋಧಕ ಪ್ರಿಯರ ಪ್ರಚಾರ ಮಾಡಿಲ್ಲವಯ್ಯ
ಶೋಧಕ ಭೋದಕ ಗಾಯಕ ಸೈನಿಕರಿಗೆ
ಸಿಗಲಾರದ ಮಾಧ್ಯಮ ಪ್ರಚಾರ ಸಮಾಜಕ್ಕೆ
ಮಾರಕವೆಂದ ಗುರುಪುಟ್ಟ ರಸಿಕ ಪ್ರಭುವು।।

ಈ ಜೀವನದಲ್ಲಿ ಯಾವುದೂ ಸ್ಥಿರವಿಲ್ಲ, ಆದರೂ ಮಾನವನಾಶೆಗೆ ಕೊನೆಯಿಲ್ಲ. ಡಿವಿಜಿಯವರ ಮಾತಿನಂತೆ ಇರುವ ಭಾಗ್ಯವನ್ನು ನೆನೆದು ಬಾರದುದ್ದನ್ನು ಬಿಡಬೇಕು. ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುವ ಕ್ಷಣಿಕ ಜೀವನಕ್ಕಾಗಿ ಬಡಿದಾಡುವ ನಶ್ವರತೆಯನ್ನು ವಚನಕಾರರು ಮಾರ್ಮಿಕವಾಗಿ ಈ ವಚನದಲ್ಲಿ ವಿಡಂಬಿಸಿದ್ದಾರೆ.

ಗಳಿಸಿದ ಸಂಪತ್ತು ಕಳೆಯುವುದು ಸತ್ಯವಿದ್ದರೂ
ದುರಾಶೆಯಿಂದ ಗಳಿಸುವುದು ಬಿಟ್ಟಿಲ್ಲವಯ್ಯಾ
ಕಟ್ಟಿದ ಮನೆಯು ಬೀಳುವುದು ನಿಶ್ಚಿತವಿದ್ದರೂ
ಬಹು ಮಹಡಿ ಕಟ್ಟುವುದು ಬಿಟ್ಟಿಲ್ಲವಯ್ಯಾ
ಪಡೆದ ಅಧಿಕಾರ ಅಳಿವುದು ನಿಜವಿದ್ದರೂ
ದರ್ಪದಬ್ಬಾಳಿಕೆಯು ಗುಣ ಬಿಟ್ಟಿಲ್ಲವಯ್ಯಾ
ನಶ್ವರವಾದ ಮಾಯಾ ಪ್ರಪಂಚದಲ್ಲಿ
ಈಶ್ವರನ ಧ್ಯಾನದ ದಿವ್ಯ ಜ್ಞಾನವೆ ಈ
ಜಗದ ನಿಯಮವೆಂದು ಪೇಳಿದರು
ನಮ್ಮ ಗುರು ಪುಟ್ಟರಸಿಕ ಪ್ರಭುವಯ್ಯ||

ಯಾವುದೇ ವ್ಯಕ್ತಿಗೆ ತಾನು ಮಾಡುವ ಕಾಯಕದಲ್ಲಿ ನಿಷ್ಠೆಯಿರಬೇಕು. ಅದರಲ್ಲೂ ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದ ವೃತ್ತಿ. ಅದನ್ನು ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಈ ವಚನದಲ್ಲಿ ತಮ್ಮ ವೃತ್ತಿಯನ್ನು ಪ್ರಾಂಜಲ ಮನಸ್ಸಿನಿಂದ ನೆನೆದಿದ್ದಾರೆ. ಇಂದು ಇಂತಹ ಗುರುಗಳ ಅವಶ್ಯಕತೆಯಿದೆ. ಮೊದಲು ತಮ್ಮ ವೃತ್ತಿಯಲ್ಲಿ ಗೌರವವಿರಬೇಕು. ಅಂದಾಗ ಮಾತ್ರ ಆ ವ್ಯಕ್ತಿಯು ಕಾಯಕಕ್ಕೆ ಗೌರವ ನೀಡಲು ಸಾಧ್ಯವೆಂಬುದನ್ನು ತಿಳಿಸಿದ್ದಾರೆ.

ಅಪ್ಪಾಜಿಯೆಂದರೆ ಪಾರ್ಲೆಜೀ ಕೊಡುವುದಿಲ್ಲ
ಮುರಾರ್ಜಿ ಶಾಲೆಯ ಅನ್ನವ ತಿಂದು
ಅಲರ್ಜಿ ಮಾಡದೇ ಎನರ್ಜಿಯಿಂದ
ಮುಂದೆ ಬಯೋಲಜಿ ಸೊತೊಲೋಜಿ
ಜಿಯೋಲಜಿ(ಪಾಲಿ ಟೆಕ್ನಾಲಜಿ) ಓದಿ ಎಕನಾಮಿಕಲಿ
ಸದೃಢ ಸಮಾಜದಲ್ಲಿ ಸರದಾರನಾಗಿ ಮೆರೆಯೆಂದ
ಮುರಾರ್ಜಿಯ ಮ್ಯೂಜಿಕ್ ಗುರು ಪುಟ್ಟರಸಿಕ ಕಂದ
ತಿಳಿದಷ್ಟು ವಚನ ಗುರು ಕೃಪೆಯಿಂದ||

ಈ ಕಾಯ ತುಂಬಾ ಮಹತ್ವದ್ದು, ಈ ದೇಹದಿಂದಾಗಿ ಮಾನವ ತನ್ನ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಹೀಗಾಗಿ ಈ ದೇಹ ದೇವಾಲಯವಾಗಬೇಕು, ರೋಗದ ಗೂಡಾಗಬಾರದು ಎಂಬ ಎಚ್ಚರಿಕೆಯನ್ನು ಇಲ್ಲಿ ಹಿರೇಮಠವರು ನೀಡಿದ್ದಾರೆ.

ದೇಹವೆಂಬ ದೇಗುಲ ದೇವ ಮಂದಿರವಾಗಬೇಕು
ದೇಹವೆಂಬ ದೇಗುಲ ರೋಗ ಮಂದಿರವಾಗಬಾರದು
ದೇಹವೆಂಬ ದೇಗುಲ ಶಾಂತಿ ಕಾಂತಿಯಿಂದ ಹೊಳೆಯಬೇಕು
ದೇಹವೆಂಬ ದೇಗುಲ ಶಾಂತಿ ಚಿಂತೆ ಸಂಕಟದ ಗೂಡಾಗಬಾರದು
ದೇಹವು ದೇವ ಮಂದಿರವೆಂದು ಭಾವಿಸಿ
ಬ್ರಹ್ಮಚಾರಿಯಾಗಿ ಭುವನವೆಲ್ಲ ಬೆಳಗಿದ ನಮ್ಮ
ಸಂಗೀತ ಶ್ರೀಗುರು ಪುಟ್ಟರಸಿಕ ಪ್ರಭುವು।।

 

ಅರಿತು ಬಾಳುವವನಿಗೆ ಜೀವನ ಒಂದು ಕಲೆ, ಅರಿಯದೆ ಬಾಳಿದರೆ ಜೀವನ ಒಂದು ಬಲೆ. ಹೀಗಾಗಿ ದೇವರು ನೀಡಿದ ಅಮೂಲ್ಯ ಜೀವನವನ್ನು ಸಾರ್ಥಕ ಮಾಡಿಕೊಂಡಾಗ ಮಾತ್ರ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಆ ಜೀವನಕ್ಕೆ ಅರ್ಥವಿರುವುದಿಲ್ಲ. ಹಾಗಾಗಿ ಇನ್ನೊಬ್ಬರಿಗೆ ಭಾರವಾಗದ ಬದುಕು ನಮ್ಮದಾಗಬೇಕು. ಸಮಾಜಕ್ಕೆ ಮಾರಕವಾಗದ ಜೀವನ ನಮ್ಮದಾಗಬೇಕೆಂಬ ಅರ್ಥಪೂರ್ಣ ಸಂದೇಶವನ್ನು ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಸಮಾಜಕ್ಕೆ ನೀಡಿದ್ದಾರೆ.

 

ಹೀಗೆ ರೇವಣಸಿದ್ದಯ್ಯ ಹಿರೇಮಠರವರು ಡಾ.ಪಂಡಿತ ಪುಟ್ಟರಾಜ ಕವಿಗವಾಯಿಗಳ ಪಟ್ಟದ ಶಿಷ್ಯರಾಗಿದ್ದು ಯೋಗಾ ಯೋಗ. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಂಸ್ಕೃತಿ ಅವರ ಮನೆಮನವನ್ನು ತುಂಬಿದೆ. ಅವರ ಕಾಯಕನಿಷ್ಠೆ ಹಾಗೂ ಭಕ್ತಿಯ ಪರಾಕಾಷ್ಠೆ ಅವರ ನಡೆ-ನುಡಿ, ಸಾಹಿತ್ಯ-ಸಂಗೀತದಲ್ಲಿ ನಾವು ಇಂದಿಗೂ ಕಾಣುತ್ತೇವೆ. ಸ್ನೇಹಜೀವಿಗಳಾದ ಹಿರೇಮಠರವರದು ಮೃದು ಮಧುರ ಸ್ವಭಾವ ಇನ್ನೊಬ್ಬರಿಗೆ ನೋವಾಗದಂತೆ. ಹೊರೆಯಾಗದಂತೆ ಜೀವನ ಸಾಗಿಸುತ್ತಿರುವ ಸಾಹಿತ್ಯ ಸಂಗೀತದ ಆರಾಧಕರು.

ಹೆಂಡ ಕುಡಿದ ಗಂಡ ಹೆಂಡತಿಗೆ ಭಾರ
ದಂಡ ಕಟ್ಟಿದ ಕಳ್ಳ ಸಂಸಾರಕ್ಕೆ ಭಾರ
ಭಂಡತನದಿ ಬಾಳುವ ಬದುಕು ಭಾರ
ಮಂಡತನದಿ ನಡೆವ ಹೆಂಡತಿ ಭಾರ
ಢ ಆರಾಧನೆಯು ನಾಡಿಗೆ ಭಾರ
ರೂಢಿಯೊಳಗೆ ಕೇಡು ಬಯಸಿ ಜಗಕ್ಕೆ
ಭಾರವಾಗದೆ ಧೀರ ವೀರ ಶೂರನಾಗಿ
ಬಾಳೆಂದ ಗುರುಪುಟ್ಟ ರಸಿಕ ಪ್ರಭುವು||

ಗಾನಗಂಧರ್ವ ಶ್ರೀ ರೇವಣಸಿದ್ದಯ್ಯ ಹಿರೇಮಠರವರ ಸಾರವತ್ತಾದ ಜೀವನಾನುಭವ ಈ ಕೃತಿಯ ಗುಚ್ಛದಲ್ಲಿ ಸಾಕ್ಷಿಯಾಗಿವೆ. ಸಾಹಿತ್ಯ ಹಾಗೂ ಸಂಗೀತ ಎರಡೂ ಕ್ಷೇತ್ರದಲ್ಲೂ ಪಯಣಿಸುತ್ತಿರುವಾಗಲೂ ಹಿರೇಮಠರವರು ಎಲ್ಲಿಯೂ ಅಂತಃಸಮತೆಯನ್ನು ಕದಡದೆ ಕಾಪಾಡಿಕೊಂಡು ಬಂದಿರುವಂತಹ ಚೇತನ. ಅವರ ನಡೆ-ನುಡಿ ಆದರ್ಶಪ್ರಾಯ. ಅವರ ಇಂಪಾದ ಸಂಗೀತದಂತೆ ಅವರ ಮೃದುವಚನವೂ ತುಂಬಾ ಅಪ್ಯಾಯಮಾನ ಹಾಗೂ ಆದರ್ಶಪ್ರಾಯವಾದುದು. ಇಂತಹ ಗುರುಪರಂಪರೆಯ ಗುರುಗಳು ಇಂದಿನ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ತುರ್ತಾಗಿದೆ. ಏಕೆಂದರೆ ಇಂದಿನ ಮೊಬೈಲ್ ಯುಗದಲ್ಲಿ ಗುರುಗಳು ಲಘುವಾಗುತ್ತಿದ್ದಾರೆ. ಗುರು ಎಂದಿಗೂ ಲಘುವಾಗಬಾರದು. ಏಕೆಂದರೆ ತಂದೆ ತಾಯಿಯನ್ನೂ ನಂಬದ ಮಗು ಗುರುವಿನ ಮೇಲೆ ಅಪಾರ ನಂಬಿಕೆಯಿಡುತ್ತದೆ.

ಆ ನಂಬಿಕೆಯನ್ನು ಗುರುಗಳಾದವರು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಹಿಂದಿನಕ್ಕಿಂತ ಇಂದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಕಾಯಕನಿಷ್ಠೆಯ ಆದರ್ಶ ಗುರುಗಳು. ಇಲ್ಲಿ ಅವರ ಅಗಾಧವಾದ ವಚನಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರ ಜೀವನಾನುಭವ ತುಂಬಾ ದೊಡ್ಡದು ಅವರ ಲೇಖನಿಯಿಂದ ಇಂತಹ ಅನೇಕ ಮೌಲಿಕ ವಚನಗಳು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲಿ. ಅವರ ಇಂಪಾದ ಸಂಗೀತದಂತೆ ಅವರ ಸಾಹಿತ್ಯ ಸೊಂಪಾಗಿ ಕಂಗೊಳಿಸಲಿ ಎಂದು ಬಯಸುವೆ.

- ಡಾ.ರಾಮಚಂದ್ರ ಗಣಾಪೂರ
ಕನ್ನಡ ಅಧ್ಯಯನ ವಿಭಾಗ, ಬೀದರ ವಿಶ್ವವಿದ್ಯಾಲಯ, ಬೀದರ

 

MORE FEATURES

ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ

04-12-2024 ಬೆಂಗಳೂರು

“ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ...

ಬೆಟ್ಟದ ಜೀವಕ್ಕೆ ಮರು ಜೀವ..

04-12-2024 ಬೆಂಗಳೂರು

"ಚಲನಚಿತ್ರಕ್ಕೆ ನಿರ್ದೇಶನ ಮಾಡುವುದೆಂದರೆ, ಕಲೆ ಹಾಗೂ ತಂತ್ರಜ್ಞಾನ ಇವೆರಡನ್ನೂ ಮೀರಿದ ವಿಶೇಷವಾದ ಕೌಶಲ್ಯವನ್ನು ಬ...

ವಿವಾಹಿತರ ಸೀಮಿತ ಚೌಕಟ್ಟಿನೊಳಗಿನ ಬದುಕಿನ ಚಿತ್ರಣವಿದು

04-12-2024 ಬೆಂಗಳೂರು

"ತಮ್ಮದೇ ಅನುಭವಗಳ ಪರಿಧಿಯಲ್ಲಿ ಬರುವ ಮೆಟ್ರೊ ನಿಲ್ದಾಣ ಮತ್ತದರ ಕಾರ್ಯಚಟುವಟಿಕೆ, ಬೆಂಗಳೂರು ನಗರ ಮತ್ತು ಕೋಲ್ಕತಾ...