“ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ್ರೆ,” ಎನ್ನುತ್ತಾರೆ ಕೆ.ಸಿ.ಶಿವಪ್ಪ ಅವರು ತಮ್ಮ “ಮುದ್ದು ರಾಮನ ಒಲವು” ಕೃತಿ ಕುರಿತು ಬರೆದ ಲೇಖಕರ ಮಾತು.
ಶುಕ್ರದೆಸೆ ನನ್ನ ಮೊದಲ ಪುಸ್ತಕ. ಹಿಂದಿಯಿಂದ ಕನ್ನಡಕ್ಕೆ ಅನುವಾದಿತವಾದ ಹತ್ತು ಕತೆಗಳ ಸಂಕಲನ. 1961ರಲ್ಲಿ ಬೆಳಕು ಕಂಡ ಈ ಕೃತಿಗೆ ಪ್ರಾತಃಸ್ಮರಣೀಯರಾದ ಪ್ರೊ.ತ.ಸು.ಶಾಮರಾಯರ ಮುನ್ನುಡಿಯಿದೆ. ತದನಂತರ ಕೆಲವೊಂದು ಲೇಖನಗಳನ್ನಷ್ಟೆ ಬರೆಯಲು ಸಾಧ್ಯವಾಗಿತ್ತು. ನನ್ನ ಸಾಹಿತ್ಯಕ ಬರವಣಿಗೆ ಸತತ ಪ್ರಾರಂಭವಾದದ್ದು 1970ರ ದಶಕದಲ್ಲಿ - ಭಾವಗೀತೆಗಳ ರಚನೆಯ ಮೂಲಕ. ರಾಗರತಿ (1985), 2 (1988). ដ (1997), ಚೆಲುವೆ, ಚಂದ್ರಿಕೆ, ಚಾರುಲತೆ, ಚಿತ್ರಪತ್ರ, ಚಿತ್ತಭಿತ್ತಿ, ಚಿತ್ತವೃತ್ತಿ ಚಿತ್ರಾಂಬರ, ಚೆಂಬೆಳಕು, ಚಿದಾನಂದ (2013) ಹೀಗೆ ಹನ್ನೆರಡು ಕವನಗುಚ್ಛಗಳು ಪ್ರಕಟವಾದವು. ಈ ಎಲ್ಲ 1085 ಕವಿತೆಗಳನ್ನು 'ಕೆಸಿಎಸ್ ಸಮಗ್ರ ಕಾವ್ಯ'ದಲ್ಲಿ (ಸಂಪುಟ 1: ನೆನಪು ಮಂದಾರ; ಸಂಪುಟ 2: ಚೈತ್ರಚೈತನ್ಯ) ಒಂದೆಡೆ 1524 ಪುಟಗಳಲ್ಲಿ ಕಾಣಬಹುದಾಗಿದೆ.
ಮುಕ್ತಕಗಳನ್ನು ರಚಿಸುವ ನನ್ನ ಒಲವು ಚಿಗುರೊಡೆದದ್ದು ಈ ಶತಮಾನದ ಪ್ರಾರಂಭದಲ್ಲಿ. ಇತ್ತ ಮನಸ್ಸು ವಾಲುವುದಕ್ಕೆ ಪ್ರಮುಖ ಪ್ರೇರಣೆ ಎಂದರೆ ಹಿರಿಯರಾದ ಗೌರವಾನ್ವಿತ ಡಿವಿಜಿ ಅವರ 'ಮಂಕುತಿಮ್ಮನ ಕಗ್ಗ'. ಅಂತೆಯೇ ಬಿಜಾಪುರದ
ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ನಿಕಟ ಒಡನಾಟ ಹಾಗೂ ಅವರ ನಡೆನುಡಿಯ ಅಚ್ಚಳಿಯದ ನೇರ ಪ್ರಭಾವ. ಆದಾವ ಪುಣ್ಯವಿಶೇಷವೊ! ವಾಣಿಶ್ರೀಯ ದಿವ್ಯ ವರವೊ! ಉದಾರಚರಿತರ ಕೃಪಾಶೀರ್ವಾದವೊ! ಚೌಪದಿಗಳ ಬರವಣಿಗೆ ಕಳೆದ 25 ವರ್ಷಗಳಲ್ಲಿ ನಿರಂತರವಾಗಿ ನನ್ನ ಕೈಹಿಡಿದಿದೆ; ಬಾಳಿಗೊಂದು ಸುಖಾನುಭವವನ್ನು ದಯಪಾಲಿಸಿದೆ.
ಮುದ್ದುರಾಮ ಮಾಲಿಕೆಯಲ್ಲಿ ಪ್ರಕಟವಾದ ಮೊದಲ ಕೃತಿ 'ಮುದ್ದುರಾಮನ ಮನಸು' (2003). ಆಮೇಲೆ 'ಮುದ್ದುರಾಮನ ಬದುಕ ಬದುಕು' (2012), ಮುದ್ದುರಾಮನ ಅರಿವು (2020) ಮತ್ತು 'ಮುದ್ದುರಾಮನ ನಲಿವು. (2020), 30,000ಕ್ಕೂ ಹೆಚ್ಚಿನ ಮುಕ್ತಕಗಳು ಈ ತನಕ ನನ್ನ ಲೇಖನಿಗೆ ವಸ್ತುವಾಗಿರುವುದು ನನಗೇ ಎಲ್ಲಿಲ್ಲದ ಅಚ್ಚರಿ ತಂದಿದೆ. ಓದುಗರ ಪ್ರೀತಿಯ ಅಭಿಮಾನ ಸಂತಸದ ಮಳೆಗರೆದಿದೆ. ಹಾಗೆಯೇ ಬಾಳಿನಲ್ಲಿ ಸಮಚಿತ್ತಸಮಾಧಾನ, ನಮ್ರತೆಮೆದುತನದ ತಂಗಾಳಿ ಬೀಸಿದೆ. ಎಲ್ಲ ದೈವಕೃಪೆ.
ನನ್ನದಿದು ನಾ ಬರೆದೆ ಎನುವ ಅಮಲೇರಿದರೆ ಪಾತಾಳದೊಳಬಿದ್ದೆ ನೀ ಮೇರುವಿಂದ. ನಿನದಲ್ಲ ಪದಪುಂಜ ಯಾರದೋ ಕರುಣೆ ಅದು; ಬರಿ ನಿಮಿತ್ತವೊ ನೀನು ಮುದ್ದು ರಾಮ
ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ್ರೆ. ಆದರೆ ನೂರಾರು ಬಿಡಿಬಿಡಿಯಾಗಿ ಬರೆಯಲಾಗಿದ್ದ ಇವೆನ್ನೆಲ್ಲ ಅಕ್ಷರಜೋಡಣೆಗೆ ಒಳಪಡಿಸಿ, ಕರಡು ತಿದ್ದಿದ ನಂತರ ವಿಷಯಾವಾರು ವಿಂಗಡಿಸುವ ಕಾರ್ಯ ನನ್ನ ಈ ಇಳಿವಯಸ್ಸಿನಲ್ಲಿ ಶಾರೀರಿಕವಾಗಿ ಕೊಂಚ ಶ್ರಮದಾಯಕವೆನಿಸಿರುವುದು ಸಹಜ. ಮೊದಲಿಗೆ 'ಪ್ರಕಾಶಕ' ತಂತ್ರಾಶ ಬಳಸಿದ್ದನ್ನು. ಇಂದಿನ ಚಾಲ್ತಿಯಲ್ಲಿರುವ 'ನುಡಿ'ಗೆ ಪರಿವರ್ತಿಸಿ ಮತ್ತೊಮ್ಮೆ ಕರಡು ತಿದ್ದುವುದರ ಜೊತೆಗೆ, ಇವೆರಡನ್ನೂ ತಾಳೆನೋಡಿ ಹೊಂದಿಸುವ ಕೆಲಸ ಇನ್ನಷ್ಟು ಸವಾಲೆನಿಸಿತು.
ನೆನೆದದ್ದು ಏಕೆ ಆಗುತ್ತಿಲ್ಲ, ಆಗುವುದಿಲ್ಲವೆಂದು ಕೈಚೆಲ್ಲಿ ಕುಳಿತ ಅಂತಹ ಸಂದರ್ಭದಲ್ಲಿ ಯಾವುದೋ ಕಾಣದ ಕೈ ಹೇಗೊ ನೆರವಿಗೆ ಧಾವಿಸಿಬರುತ್ತದೆ. ಹೂವೊಂದು ಬಾಡಿದರೆ, ಇನ್ನೊಂದು ಬಿರಿಯುತ್ತದೆ ತಾನೆ. ಸೃಷ್ಟಿ ಬೆರಗೇ ಹೀಗೆ! ನಂಬಿಕೆ-ಭರವಸೆ ಮುಕ್ಕಾಗಬಾರದು ಅಷ್ಟೆ.
- ಕೆ.ಸಿ.ಶಿವಪ್ಪ
ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...
"ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ...
"ಚಲನಚಿತ್ರಕ್ಕೆ ನಿರ್ದೇಶನ ಮಾಡುವುದೆಂದರೆ, ಕಲೆ ಹಾಗೂ ತಂತ್ರಜ್ಞಾನ ಇವೆರಡನ್ನೂ ಮೀರಿದ ವಿಶೇಷವಾದ ಕೌಶಲ್ಯವನ್ನು ಬ...
©2024 Book Brahma Private Limited.