"ಚಲನಚಿತ್ರಕ್ಕೆ ನಿರ್ದೇಶನ ಮಾಡುವುದೆಂದರೆ, ಕಲೆ ಹಾಗೂ ತಂತ್ರಜ್ಞಾನ ಇವೆರಡನ್ನೂ ಮೀರಿದ ವಿಶೇಷವಾದ ಕೌಶಲ್ಯವನ್ನು ಬೇಡುವಂಥದ್ದು ಎನ್ನುವುದು ಸಹೃದಯ ವೀಕ್ಷಕನಾಗಿ ನನ್ನೊಳಗೆ ಮೂಡಿದ ಕಲ್ಪನಾ ಸತ್ಯ. ಒಂದು ಪುಟ್ಟ ಜಗತ್ತನ್ನು, ವಿಷಯವನ್ನು ಸಂಗತಿಯನ್ನು ಜನ ಮಾಧ್ಯಮದಲ್ಲಿ ಅತ್ಯಂತ ಪ್ರಖರವಾಗಿ ಪರಿಣಾಮ ಬೀರುವಂತೆ ತಲುಪಿಸುವ ಒಂದು ಸಂವಹನ ಮಾಧ್ಯಮ ಎಂದರೆ ಅದು ಚಲನಚಿತ್ರ," ಎನ್ನುತ್ತಾರೆ ಕಲಾ ಭಾಗ್ವತ್. ಅವರು ಪಿ. ಶೇಷಾದ್ರಿ ಅವರ ‘ಬೆಟ್ಟದ ಜೀವ’ ಚಲನಚಿತ್ರ ಕುರಿತು ಬರೆದಿರುವ ವಿಮರ್ಶೆ.
ಪಿ. ಶೇಷಾದ್ರಿ ಅವರ ಹೆಸರನ್ನು ಹೇಳುವಾಗ, ಕೇಳುವಾಗಲೆಲ್ಲ ಅವರ ಅನಾಮಿಕ ಅಭಿಮಾನಿಯಾದ ನನ್ನ ಮನಸ್ಸು ತಿರುಮಲೆಯ ಬೆಟ್ಟವನ್ನೇರಿ ನಿಂತುಬಿಡುತ್ತದೆ. ಅವರ ಹೆಸರಿಗೂ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿರಬಹುದೇ?! ಏಕೆಂದರೆ ಡಾ. ಕೆ ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಕಥೆ ಏನಿದೆ ಎಂಬುದನ್ನು ಹುಡುಕುತ್ತಲೇ ಆ ಅದ್ಭುತ ಆವರಣದೊಳಗೆ ಸುತ್ತಾಡಿ ಬಂದು ಅನಿರ್ವಚನೀಯ ಅನುಭೂತಿಯನ್ನು, ಆನಂದವನ್ನು ಪಡೆದ ಮನಸ್ಸು ಇನ್ನೂ ಹಸಿರಾಗಿಯೇ ಇರುವಾಗ ಪಿ. ಶೇಷಾದ್ರಿಯವರು ಇದನ್ನು ಚಲನಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡು ನಿರ್ದೇಶನ ಮಾಡಿ ಅಪಾರ ಯಶಸ್ಸನ್ನು ಗಳಿಸಿದುದನ್ನು ಕಂಡಾಗ ಈ ಗುಮಾನಿ ಬರುವುದು ಸಹಜ. ಅದರೊಂದಿಗೇ ತೆರೆಯ ಮೇಲೆ ವೀಕ್ಷಿಸಿದಾಗ ಕಾದಂಬರಿಯೊಳಗೆ ಸಿನೆಮೇಟಿಕ್ಸ್ ಕಿಡಿಯನ್ನು ಹೊತ್ತಿಸಿ ಕತೆಯನ್ನು ಇನ್ನೂ ಹರಿತಗೊಳಿಸಿ ವೀಕ್ಷಕರಿಗೆ ಬೆಟ್ಟದಷ್ಟು ಚೈತನ್ಯಾನುಭವವನ್ನು ನೀಡುವಲ್ಲಿ ಸಫಲವಾಗಿದೆ ಅನ್ನಿಸಿತು. ಇಲ್ಲಿ ನಿರ್ದೇಶಕರು ಕಾರಂತರ ಕಾದಂಬರಿ ಎನ್ನುವ ಸಹಜ ಅಭಿಮಾನದಿಂದಲೋ ಅಥವಾ ಇನ್ಯಾವುದೋ ಕಾರಣಕ್ಕಾಗಿಯೋ ಮೂಲ ಕತೆಗೆ ಅಪಚಾರವಾಗದಂತೆ ಯಥಾವತ್ ತೆರೆಯ ಮೇಲೆ ತೋರುವ ಪ್ರಯತ್ನವನ್ನು ಮಾಡದೆ ಅದಕ್ಕೆ ತಕ್ಕುದಾದ ಬದಲಾವಣೆಗಳನ್ನು ಮಾಡಿಕೊಂಡು ಅದರಲ್ಲಿ ತನಗೆ ಬೇಕಾದ ಎಳೆಗಳನ್ನು ಎತ್ತಿಕೊಂಡು ಮಿತವಾದ ಮಾತುಗಳ ಸಂಭಾಷಣೆಯ ಮೂಲಕ ಅಮೋಘ ಅನುಭೂತಿಯನ್ನು ಹೊಮ್ಮಿಸಿದ್ದಾರೆ.
ಚಲನಚಿತ್ರಕ್ಕೆ ನಿರ್ದೇಶನ ಮಾಡುವುದೆಂದರೆ, ಕಲೆ ಹಾಗೂ ತಂತ್ರಜ್ಞಾನ ಇವೆರಡನ್ನೂ ಮೀರಿದ ವಿಶೇಷವಾದ ಕೌಶಲ್ಯವನ್ನು ಬೇಡುವಂಥದ್ದು ಎನ್ನುವುದು ಸಹೃದಯ ವೀಕ್ಷಕನಾಗಿ ನನ್ನೊಳಗೆ ಮೂಡಿದ ಕಲ್ಪನಾ ಸತ್ಯ. ಒಂದು ಪುಟ್ಟ ಜಗತ್ತನ್ನು, ವಿಷಯವನ್ನು ಸಂಗತಿಯನ್ನು ಜನ ಮಾಧ್ಯಮದಲ್ಲಿ ಅತ್ಯಂತ ಪ್ರಖರವಾಗಿ ಪರಿಣಾಮ ಬೀರುವಂತೆ ತಲುಪಿಸುವ ಒಂದು ಸಂವಹನ ಮಾಧ್ಯಮ ಎಂದರೆ ಅದು ಚಲನಚಿತ್ರ. ಪ್ರಪಂಚದ ಅನುಭವಗಳನ್ನು ಸಶಕ್ತವಾಗಿ ದಾಟಿಸಿ ಅದರ ಬಗೆಗೆ ನಮ್ಮ ತಿಳುವಳಿಕೆಯನ್ನು ರೂಪಿಸಿ ವಿಸ್ತರಿಸುವಲ್ಲಿ ಕೊನೆಗೆ ನಮ್ಮ ಭಾವಕೋಶದೊಳಗೆ ಬಸೆದುಕೊಳ್ಳುವಂತೆ ಮಾಡುವಲ್ಲಿ ನಿರ್ದೇಶಕನ ಪಾತ್ರ ಹಿರಿದು. ಕಥೆಯೊಳಗಿನ ಭಾಷೆಯನ್ನು, ಸಂದರ್ಭವನ್ನು ಕಥೆಯೊಳಗೆ ಬರುವ ಚಿತ್ರಣವನ್ನು ತೆರೆಯ ಅವಶ್ಯಕತೆಗೆ ಅನುಗುಣವಾಗಿ ಮರುರೂಪಿಸಿ ಅಥವಾ ಮರು ಸೃಷ್ಟಿ ಮಾಡಿ ವೀಕ್ಷಕರ ಭಾವನೆಯನ್ನು ಹೊಳಪಿಸುವುದು ಆ ಮೂಲಕ ಅನೇಕ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗುವಾಗ ಇದರ ಹಿಂದಿರುವ ಶ್ರಮ ಎಷ್ಟಿರಬಹುದು ಎಂಬುದು ನನಗೆ ಊಹಾತೀತವಾದುದು. ಕತೆಯಲ್ಲಿ ಏನು ಹೇಳಲು ಹೊರಟಿರುವರೋ ಅದನ್ನು ಇನ್ನಷ್ಟು ಕಲಾತ್ಮಕವಾಗಿ ದೃಶ್ಯಾವಳಿಗಳ ಮೂಲಕ ಬಿತ್ತರಿಸುವ ಸಿನೆಮಾ ಒಂದು ಸಾಂಸ್ಕೃತಿಕ ದಾಖಲೆಯಾಗಿ ಅಥವಾ ಒಂದು ಕಾಲದ ಸಮಾಜದ ಚಲನವಲನಗಳ ಪ್ರತಿಬಿಂಬವಾಗಿ ಪ್ರದರ್ಶನಗೊಳ್ಳುತ್ತದೆ. ಅಷ್ಟೇ ಅಲ್ಲ ಮೂಲ ಸಾಹಿತ್ಯಕ್ಕಿಂತ ಭಿನ್ನವಾದ ಅನುಭವದ ಒರತೆಯನ್ನು ಸೃಜಿಸಿ ಜನ ಸಮುದಾಯದ ಹೃದಯವನ್ನು ಆರ್ದ್ರಗೊಳಿಸುತ್ತದೆ. ಸಾಹಿತ್ಯದಲ್ಲಿ ಭಾಷೆಯು ಶರೀರವಾಗಿದ್ದರೆ ಚಲನಚಿತ್ರದಲ್ಲಿ ದೃಶ್ಯಗಳೇ ಶರೀರವಾಗಿವೆ. ಸಾಹಿತ್ಯವನ್ನೋದುವಾಗ ಕಾಣದಿರುವ ಹೊಸ ಹೊಳಹುಗಳನ್ನು ಚಲನಚಿತ್ರದಲ್ಲಿ ಒಳ್ಳೆಯ ನಿರ್ದೇಶಕ ಕಾಣಿಸುತ್ತಾನೆ. ಆ ಮೂಲಕ ಚಲನಚಿತ್ರವು ಓದುವಿಕೆಗಿಂತ ಭಿನ್ನವಾದ ಅನುಭೂತಿಯನ್ನು ನೀಡುತ್ತದೆ. ಪಿ ಶೇಷಾದ್ರಿ ಅವರು ನಿರ್ದೇಶನ ಮಾಡಿದ ಚಲನಚಿತ್ರಗಳು ಇದಕ್ಕೆ ಹೊರತಾಗಿಲ್ಲ ಎನ್ನಲೇಬೇಕು. ಬೆಟ್ಟದ ಜೀವ ಕಾದಂಬರಿಯಲ್ಲಿ ಮತ್ತು ಚಲನಚಿತ್ರದಲ್ಲಿ ಕಥೆ, ಭಾಷೆ, ಪರಿಸರ ಎಲ್ಲದರಲ್ಲಿಯೂ ನಮಗೆ ಪರಿಚಿತವೆನ್ನುವಂತಹ ಸ್ಥಳೀಯತೆ ಇದೆ. ಅದರ ಜೊತೆಗೆ ನಿರ್ದೇಶಕರ ಪರಿಣತಿ, ಕ್ಷಮತೆ ಮತ್ತು ಸೂಕ್ಷ್ಮ ಮತಿಯಿಂದಾಗಿ ಚಲನಚಿತ್ರದಲ್ಲಿ ಅಭಿನಯ, ಛಾಯಾಗ್ರಹಣ, ಸಂಗೀತ, ಧ್ವನಿ ಸಂಕಲನ, ಸಾಂದ್ರ ಭಾವವನ್ನು ಉದ್ದೀಪನಗೊಳಿಸುವ ಸಂಭಾಷಣೆ ಇವೆಲ್ಲವೂ ಹದವಾಗಿ ಮೇಳೈಸಿ ಅನುಭವಗಳ ಪರಿಪಾಕವಾಗಿ ಸಹೃದಯರಿಗೆ ಸಿಕ್ಕಿದೆ. ಒಳ್ಳೆಯ ನಿರ್ದೇಶಕ ಒಂದು ಅದ್ಭುತವಾದ ಚಿತ್ರವನ್ನು ಮಾಡಬಲ್ಲ ಎನ್ನುವುದನ್ನು ಶೇಷಾದ್ರಿ ಅವರು ತಮ್ಮ ಅನೇಕ ಚಲನ ಚಿತ್ರಗಳ ಮೂಲಕ ತೋರಿಸಿಕೊಟ್ಟಿದ್ದಾರೆ.
ಕಥಾ ಹಂದರ
‘ಬೆಟ್ಟದ ಜೀವ’ ಚಲನಚಿತ್ರದ ಮೂಲ ಕಥೆಯು ಪ್ರಕಟವಾದದ್ದು 1943ರಲ್ಲಿ. ಇದು ಪಿ. ಶೇಷಾದ್ರಿಯವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಹೊರ ಬಂದದ್ದು 2011ರಲ್ಲಿ. ಯುವ ಸ್ವಾತಂತ್ರ್ಯ ಹೋರಾಟಗಾರ ಶಿವರಾಮನು ಸುಬ್ರಹ್ಮಣ್ಯದ ಸಮೀಪವಿರುವ ಒಂದು ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಕಾಡಿನಲ್ಲಿ ದಾರಿತಪ್ಪುತ್ತಾನೆ. ಅವನ ಅರಿವಿಗೆ ಬರುವಾಗ ಸಂಜೆಯ ಸಮಯವಾಗಿರುತ್ತದೆ. ಆಗಲೇ ದೇರಣ್ಣ ಮತ್ತು ಭಟ್ಯಾ ಎಂಬುವ ಇಬ್ಬರು ಗ್ರಾಮಸ್ಥರು ದಾರಿ ಮಧ್ಯೆ ಭೇಟಿಯಾಗುತ್ತಾರೆ. ಅವರು ಕೆಳಬೈಲಿನಲ್ಲಿ ವಾಸಿಸುತ್ತಿರುವ ಗೋಪಾಲಯ್ಯನವರ ಮನೆಯಲ್ಲಿ ರಾತ್ರಿ ಕಳೆಯಲು ಶಿವರಾಮನಿಗೆ ಸಲಹೆ ನೀಡುತ್ತಾರೆ. ಗೋಪಾಲಯ್ಯ ಶಂಕರಿ ದಂಪತಿ ಶಿವರಾಮನನ್ನು ಚೆನ್ನಾಗಿ ಸತ್ಕರಿಸುತ್ತಾರೆ ಮತ್ತು ಕೆಲವು ದಿನಗಳ ಕಾಲ ತಮ್ಮೊಂದಿಗೆ ಉಳಿಯಲು ಅವನನ್ನು ಕೇಳುತ್ತಾರೆ. ತಮ್ಮ ಕಷ್ಟ ಸುಖಗಳನ್ನು ಅವನೊಂದಿಗೆ ಹಂಚಿಕೊಳ್ಳುತ್ತಾರೆ. ತಮ್ಮನ್ನು ಬಿಟ್ಟು ಹೋದ ಮಗ ಶಂಭುವನ್ನು ಅವನಲ್ಲಿ ಕಾಣುತ್ತಾರೆ.
ಶಂಭುವು ಕಣ್ಮರೆಯಾಗಿರುವುದಕ್ಕೆ ಎಲ್ಲರೂ ತಮ್ಮದೇ ಆದ ವಿವರಣೆಯನ್ನು ನೀಡುತ್ತಾರೆ. ನಾರಾಯಣನ ಹೆಂಡತಿ ಲಕ್ಷ್ಮಿಯು ತನ್ನೊಂದಿಗೆ ಶಂಭುವು ಸಲಿಗೆ ಮೀರಿ ವರ್ತಿಸಿ ಮುಂದೆ ಬರಬರುತ್ತಾ, ಬೇರೆ ದೃಷ್ಟಿಯಿಂದ ನೋಡಲು ಆರಂಭಿಸಿದ್ದ. ಅದನ್ನು ವಿರೋಧಿಸಿದ್ದಕ್ಕಾಗಿ ಬಣ್ಣ ಬಯಲಾಗುವುದೆಂದು ಮನೆ ಬಿಟ್ಟು ಹೋದ ಎಂದು ಹೇಳುತ್ತಾಳೆ. ತನ್ನ ಗಂಡ ಗೋಪಾಲಯ್ಯ ಅವನಿಗೆ ಬೇಕಾದ ನಿಧಿಯನ್ನು ಕೊಡಲಿಲ್ಲ ಎನ್ನುವ ಕಾರಣದಿಂದ ಮನೆ ಬಿಟ್ಟು ಹೋದ ಎಂದು ಶಂಕರಮ್ಮ ಹೇಳುತ್ತಾಳೆ. ಇಂಗ್ಲಿಷ್ ಕಲಿತು ಪಂಜ, ಸುಬ್ರಹ್ಮಣ್ಯ ಹಾಗೆ ಮುಂಬೈಗೆ ಹೊರಟುಹೋದ ಎಂಬುದಾಗಿಯೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಕ್ಕಾಗಿ ಮನೆ ಬಿಟ್ಟು ಹೋಗಿದ್ದಾನೆ ಎಂಬುದಾಗಿಯೂ ಗೋಪಾಲಯ್ಯ ಹೇಳುತ್ತಾರೆ. ಒಟ್ಟಾರೆ ಮಗನ ಕಳಕೊಂಡ ದುಃಖ ಮಾತ್ರ ಬಹಳ ಸಾಂದ್ರವಾಗಿ ಮಡುಗಟ್ಟಿದೆ.
ಈ ನಡುವೆ ಅನೇಕ ಬಗೆಯ ವಿಚಾರ ವಿನೋದ ವೈಚಾರಿಕ ಸಂಭಾಷಣೆಗಳು ಪರಿಸರ ಕಾಳಜಿಯ ಮಾತುಗಳು, ನುಡಿಮುತ್ತುಗಳು ಇವೆಲ್ಲ ಉದ್ದಕ್ಕೂ ಸಂಚಾರವಾಗುತ್ತವೆ. ಕೊನೆಯಲ್ಲಿ ಶಿವರಾಮನು ವೃದ್ಧಾಪ್ಯದ ಕಾಲದಲ್ಲಿ ತನ್ನ ಮಗನ ಜೊತೆಗೆ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬರುವುದು, ಕುಮಾರ ಪರ್ವತದ ತಪ್ಪಲಿನಲ್ಲಿ ನಿರ್ಮಿತವಾದ ರೆಸಾರ್ಟಿನಿಂದ ಪರ್ವತ ಶಿಖರವನ್ನು ನೋಡುವಾಗ ಎಲ್ಲವೂ ಬದಲಾಗಿ ಆಧುನೀಕರಣಗೊಂಡಿರುತ್ತದೆ. ಗೋಪಾಲಯ್ಯ ದಂಪತಿಗಳ ಆಪ್ತ ಉಪಚಾರ ಅಕ್ಕರೆಯ ಮಾತುಗಳು ಧ್ವನಿಯಾಗಿ ಆತನ ಮನದಲ್ಲಿ ಅನುರಣಿಸುತ್ತವೆ. ಆಧುನಿಕತೆಯ ಮಗ್ಗುಲಿನಲ್ಲಿ ಆಪ್ತ ಅಂತಃಕರಣವು ಕಳೆದು ಹೋದಂತೆ ಭಾಸವಾಗುವಾಗ ಚಲನಚಿತ್ರವು ಮುಕ್ತಾಯಗೊಳ್ಳುತ್ತದೆ.
‘ಬೆಟ್ಟದ ಜೀವ’ ಒಂದು ಪ್ರಾದೇಶಿಕ ಚಲನಚಿತ್ರ. ದಕ್ಷಿಣ ಕನ್ನಡದ ಆಡು ಭಾಷೆ, ಹವ್ಯಕ ಉಪಭಾಷೆ, ಕಾಡಿನ ನಡುವೆ ವಾಸಿಸುವವರ ಆಚರಣೆ, ಜಾನಪದ ಸಂಸ್ಕೃತಿಯನ್ನು, ದಟ್ಟಾರಣ್ಯದಲ್ಲಿ ವಾಸವಾಗಿರುವ ಜನರ ಪದ್ಧತಿಗಳು, ಜೀವನ ವಿಧಾನವನ್ನು ತಿಳಿಸಿಕೊಟ್ಟಿರುವುದು ಮತ್ತು ಅಲ್ಲಿನ ವಿಶಿಷ್ಟ ಲಕ್ಷಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ದರ್ಶಿಸಿರುವುದು ಇದರ ಹಿರಿಮೆ. ‘ಬೆಟ್ಟದ ಜೀವ’ ಕೃತಿಯು ಕಾರಂತರ ದಟ್ಟವಾದ ಜೀವನಾನುಭವದ ಹಿನ್ನೆಲೆಯಲ್ಲಿ ರೂಪುಗೊಂಡಿದೆ. ಶೀರ್ಷಿಕೆಯು ಹೇಳುವಂತೇ ಇಲ್ಲಿ ಕೆಳಬೈಲಿನ ಜನರು ಬೆಟ್ಟಕ್ಕೆ ಜೀವವೋ ಅಥವಾ ಬೆಟ್ಟ ಅವರೆಲ್ಲರಿಗೆ ಜೀವವೋ ಎಂಬುದನ್ನು ಪ್ರತ್ಯೇಕಿಸಲಾಗದಷ್ಟು ತಾದಾತ್ಮ್ಯ ಭಾವವಿದೆ. ಚಲನಚಿತ್ರದಲ್ಲೂ ಅಷ್ಟೇ ಗಾಢವಾಗಿ ಆ ಅನುಭವವನ್ನು ತರುವಲ್ಲಿ ಪಿ ಶೇಷಾದ್ರಿ ಅವರು ಸಫಲರಾಗಿದ್ದಾರೆ. ಬೆಟ್ಟದ ವರ್ಣನೆ, ಅದರ ತಂಪು, ಕಂಗಿನ ಮನೋಹರವಾದ ತೋಟ, ಹೊಳೆಯ ಹರಿವಿನ ಜುಳು ಜುಳು ನಾದ ಇವೆಲ್ಲವೂ ಬಹಳ ಚೆನ್ನಾಗಿ ಚಿತ್ರಣವಾಗಿವೆ. ಎಲ್ಲದಕ್ಕೂ ಹೊರತಾಗಿ ಗೋಪಾಲಯ್ಯ ಎನ್ನುವ ಮುಖ್ಯ ಪಾತ್ರಧಾರಿಯದು ಅಗಾಧವಾದ ಬೆಟ್ಟದಂಥ ವ್ಯಕ್ತಿತ್ವ. ಅಂತೇಯೇ ಶಂಕರಿ, ನಾರಾಯಣ, ಲಕ್ಷ್ಮಿ, ದೇರಣ್ಣ ಎಲ್ಲ ಪಾತ್ರಗಳು ಉದಾರ ಮನಸ್ಸಿನವೇ ಆಗಿವೆ. ಕಥೆಯ ಮುಖ್ಯ ಭಾಗವು ಗೋಪಾಲಯ್ಯನವರಿಗೆ ಸಂಬಂಧಿಸಿರುವುದರಿಂದ ಅದಕ್ಕೆ ತಕ್ಕುದಾದ ಹಿರಿದಾದ ನಟನೆಯಿಂದ ಅವರೊಬ್ಬ ದಾರ್ಶನಿಕರಾಗಿ ಕಂಡುಬರುತ್ತಾರೆ. ಅವರನ್ನೂ ಒಳಗೊಂಡ ಕೆಳಬೈಲು ಕಾಟುಮೂಲೆ ಪ್ರದೇಶದ ಜನರು ಮುಗ್ಧರು ಎನ್ನುವುದಕ್ಕಿಂತ ಅವರ ತಿಳಿಯಾದ ಮನಸ್ಸನ್ನು ಕೆಡಿಸಲು ಸುತ್ತಲೂ ಎಳೆದೆಳೆದು ಕಂಗೆಡಿಸುವ ಋಣಾತ್ಮಕ ಸಮುದಾಯವಿಲ್ಲದಿರುವ ಕಾರಣಕ್ಕಾಗಿ ಧನಾತ್ಮಕ ಚಿಂತನೆಗಳ ಬುತ್ತಿ ಅವರೊಂದಿಗೇ ಇದೆ ಎನ್ನಬಹುದೇನೋ. ಅಲ್ಲಿರುವ ಅವರದೇ ಆದ ಸ್ವಾತಂತ್ರ್ಯ, ಸ್ವಾಭಿಮಾನದ ಬದುಕು, ಅಷ್ಟೇ ನಯ ವಿನಯ, ಹಿರಿಯರ ಬಗೆಗಿನ ಗೌರವ ಇವೆಲ್ಲವೂ ಅಲ್ಲಿನ ಜನರಿಗೆ ಜೀವನ ಪ್ರೀತಿಯನ್ನು ಆಗಾಗ ನವೀಕರಿಸಿಕೊಳ್ಳಲು ಅನುವಾಗಿವೆ. ಆ ಪರಿಸರಕ್ಕೆ ತಕ್ಕಂತೆ ಅವರ ಮನಸ್ಸು ನಿರ್ಮಲವಾಗಿ ರೂಪುಗೊಂಡಿದೆ. ಇದು ಅವರವರ ಮಾತುಗಳಲ್ಲಿ ಮುಖ್ಯವಾಗಿ ಕಥೆಯ ಆಧಾರ ಸ್ತಂಭ ಗೋಪಾಲಯ್ಯನವರ ನಡೆ-ನುಡಿ ಮಾತು, ಅಭಿನಯಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಿಗೊಂಡಿದೆ.
ಶಿವರಾಮ ಕಾರಂತರು ಕಾದಂಬರಿಯಲ್ಲಿ ತಾವೇ ದನ ಹುಡುಕುತ್ತ ಸುಬ್ರಹ್ಮಣ್ಯ ಹಾಗೂ ಪಂಜದ ಕಡೆಗೆ ಹೋಗುವಾಗ ದಾರಿತಪ್ಪಿ ಕೆಳಬೈಲಿನ ಗೋಪಾಲಯ್ಯನವರ ಮನೆಗೆ ಹೋದ ಹಾಗೆ ಪ್ರಾಸಂಗಿಕವಾಗಿ ಹೆಣೆದಿದ್ದಾರೆ. ಆದರೆ ಸಿನಿಮಾದಲ್ಲಿ ಕಾರಂತರು ಸ್ವಾತಂತ್ರ್ಯ ಚಳವಳಿಯಲ್ಲಿ ಆಸಕ್ತರಾಗಿದ್ದ ಹಿನ್ನೆಲೆಯನ್ನು ಮುಖ್ಯವಾಗಿಟ್ಟುಕೊಂಡು ಅಥವಾ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕಾಡಿನ ಎಲ್ಲ ಜೀವಿಗಳೊಳಗೊಂದಾಗಿ ಬದುಕುತ್ತಿರುವ ಜನರ ಬದುಕಿನ ಚಿತ್ರವನ್ನು ಕಣ್ಮುಂದೆ ತರಲಿಕ್ಕಾಗಿ ಚಳವಳಿಯಿಂದಲೇ ಆರಂಭಿಸಿದ್ದಾರೆ. ಮಹಾತ್ಮಾ ಗಾಂಧಿಯವರ ಜೈಕಾರದೊಂದಿಗೆ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸುವ ನಿಟ್ಟಿನಲ್ಲಿ ಕರಸೇವಕರ ಗುಂಪು ಜಾತಾ ಹೊರಟಾಗಲೇ ಬ್ರಿಟಿಷರ ಲಾಟಿ ಏಟಿಗೆ ಒಳಗಾದ ಯುವಕ ಶಿವರಾಮ ಹೇಗೋ ತಪ್ಪಿಸಿಕೊಂಡು ಕಾಡು ದಾರಿಯಲ್ಲಿ ನಡೆಯುತ್ತಾನೆ. ಈ ಸಂದರ್ಭದಲ್ಲಿ ವಸಾಹತುಶಾಹಿಯ ಆಕ್ರಮಣದ ರೂಪಕವಾಗಿ ದಕ್ಷಿಣ ಕನ್ನಡದ ಹುಲಿ ವೇಷ ಕುಣಿತವನ್ನು, ಹುಲಿ ಹಿಂಡು ಅಟ್ಟಿಸಿಕೊಂಡು ಹೋಗಿ ಅವನ ಮೇಲೆ ದಾಳಿ ಮಾಡುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. ಮತ್ತೆ ಮತ್ತೆ ಅವನೊಳಗೆ ಸ್ವಾತಂತ್ರ್ಯ ಸಂಗ್ರಾಮದ ಪ್ರಜ್ಞೆ ಹಾಗೂ ಹಳ್ಳಿ ಮನೆಯ ಸುಖ ನಿದ್ರೆ ಎರಡರ ಅನುಭವಗಳನ್ನು ಸಾಂದ್ರವಾಗಿಸಲು ಕನಸಿನಲ್ಲಿಯೂ ಹುಲಿಯು ಎರಗಿದಂತೆ ಕಂಡು ಎದ್ದು ಕೂರುವುದು ಇತ್ಯಾದಿ ಇಲ್ಲಿ ಮಾಡಿಕೊಂಡಿರುವ ಬದಲಾವಣೆಗಳು.
ಸಾಹಿತ್ಯದಲ್ಲಿರುವ ವಸ್ತುವನ್ನು ದೃಶ್ಯ ಮಾಧ್ಯಮಕ್ಕೆ ತರುವಾಗ ಮಾಡಿಕೊಂಡ ಇಂತಹ ಬದಲಾವಣೆಗಳು ಬೆಚ್ಚಗಿನ ದೇಶಭಕ್ತಿಯೊಂದಿಗೆ ಕೆಳಬೈಲಿನ ಪರಿಸರವನ್ನು ಸುತ್ತಾಡಿಸುತ್ತದೆ. ಶಿವರಾಮ ಕಾಡಿನ ನಡುವೆ ನಡೆಯುತ್ತಿರುವಾಗ ದೇರಣ್ಣ ಮತ್ತು ಬಟ್ಯಾ ಎನ್ನುವ ಒಕ್ಕಲಿಗರು ಸಿಕ್ಕು ಅವನನ್ನು ಗೋಪಾಲಯ್ಯನ ಮನೆಗೆ ತಲುಪಿಸುತ್ತಾರೆ. ನಡುವೆ ಅವರು ಮಾತನಾಡಿಕೊಳ್ಳುವ ತುಳು ಭಾಷೆ ತುಳು ಜಾನಪದ ಹಾಡು ಇವೆಲ್ಲವೂ ಚಲನಚಿತ್ರ ಮುಗಿದ ಬಳಿಕವೂ ಕಿವಿಯಲ್ಲಿ ಅನುರಣಿಸುತ್ತಲೇ ಇರುವಷ್ಟು ನೈಜವಾಗಿದೆ. ಯಾವುದೇ ಹೊರಸಂಪರ್ಕವಿರದ ಗೊಂಡಾರಣ್ಯದಲ್ಲಿ ಪ್ರಾದೇಶಿಕ ಜನ ಸಮುದಾಯವು ಹೇಗೆ ಪ್ರಕೃತಿಯೊಡನೆ ಬೆರೆತು ಬಾಳುತ್ತಿದೆ, ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಪ್ರಕೃತಿ ಒಡ್ಡುವ ಸವಾಲುಗಳನ್ನು, ರೋಗ ರುಜಿನಗಳನ್ನು ಎದುರಿಸಿಯೂ ಬೆಟ್ಟವನ್ನೇ ಜಯಿಸಿದಂತಹ ಸಂತೃಪ್ತಿಯಿಂದ ಬಾಳುವೆ ನಡೆಸುತ್ತಿದೆ ಎಂಬುದಕ್ಕೆ ಒಂದು ಉತ್ತಮ ಮಾದರಿಯಾಗಿದೆ. ಕಾಡಿನ ಕೊಂಪೆಯಲ್ಲಿ ವಾಸಿಸುವ ನಿರ್ಲಕ್ಷ್ಯಕ್ಕೆ ಒಳಗಾದ ಕುಟುಂಬಗಳ ಕತೆಯನ್ನು ಬೆಟ್ಟದ ಜೀವ ಚರ್ಚಿಸುತ್ತದೆ. ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಜೀವನ ವಿಧಾನವನ್ನು ವಾಸ್ತವದ ನೆಲೆಯಲ್ಲಿ ಚಿತ್ರಿಸುವ ಪ್ರಯತ್ನವೂ ಈ ಚಲನಚಿತ್ರದಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬೇಕು.
ಇಲ್ಲಿ ಮನುಷ್ಯ ಸಂಬಂಧಗಳು ಹಾಗೂ ಸ್ವಾತಂತ್ರ್ಯ ಚಳುವಳಿಯ ಹಸಿ ಬಿಸಿಯ ಕಾವಿನ ಅನುಭವವು ನಯವಾಗಿ ತಟ್ಟುತ್ತವೆ. ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಸ್ವಾತಂತ್ರ್ಯ ಚಳವಳಿಯ ತಾಪ ಜನರಲ್ಲಿ ಹೆಚ್ಚಾಗಿದ್ದ ಸಮಯದಲ್ಲಿ ಹಳ್ಳಿಯ ವಿದ್ಯಾವಂತ ಯುವಕರು ಕರಪತ್ರ ಇತ್ಯಾದಿಗಳನ್ನು ಹಂಚುವ ಹಾಗೂ ಚಳವಳಿಯ ಮುಖ್ಯಸ್ಥರಿಗೆ ನೆರವಾಗುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಶಿವರಾಮನೂ ಅದೇ ಕಾರಣಕ್ಕೆ ಮನೆ ಬಿಟ್ಟು ಬಂದವನೇ. ಅಂತೆಯೇ ಶಂಭುವೂ ಎನ್ನುವ ಮಾರ್ಪಾಟು ಚಲನಚಿತ್ರಕ್ಕೆ ಗೆಲುವು ನೀಡಿದೆ. ಪರಕೀಯರ ಆಕ್ರಮಣ ದೇಶದ ಮೇಲೆ, ಕಾಡುಪ್ರಾಣಿಗಳ ಆಕ್ರಮಣ ಕಾಡನ್ನು ಕಡಿದು ತೋಟಗದ್ದೆಯ ಸಾಗುವಳಿ ಮಾಡುವ ಮನುಷ್ಯರ ಮೇಲೆ. ಇವೆರಡೂ ಅಯಾಚಿತ ಆಕ್ರಮಣಗಳೇ. ಆದರೂ ಒಂದು ವಸಾಹತುಶಾಹಿ ಇನ್ನೊಂದು ಜೀವಿಗಳ ಬದುಕಿನ ಸಹಜ ಧರ್ಮ. ನಿರ್ಧಾರ ಸಹೃದಯರ ಪಾಲಿಗೆ. ಕಾರಂತರ ಮಾನಸಿಕ ತರ್ಕಕ್ಕೆ ನಿಲುಕುವಂತಹ ಇಂತಹ ಮಾರ್ಪಾಟುಗಳು ಚಲನಚಿತ್ರಕ್ಕೂ ಶೋಭಾಯಮಾನವಾಗಿದೆ. ಅಂತೆಯೇ ಮೂಲ ಕತೆಗೆ ಇನ್ನಷ್ಟು ಮೆರುಗು ನೀಡಿದೆ ಎನ್ನಬಹುದು.
ದೇರಣ್ಣ ಮತ್ತು ಬಟ್ಯಾ ಎನ್ನುವ ಒಕ್ಕಲಿಗರು ಸಿಕ್ಕು ಅವನನ್ನು ಗೋಪಾಲಯ್ಯನ ಮನೆಗೆ ತಲುಪಿಸುವಾಗ ಅವರ ತುಳು ಭಾಷೆಯ ಸಂವಾದ, ತುಳು ಜಾನಪದ ಹಾಡು ಇವೆಲ್ಲವೂ ಅತ್ಯಂತ ನೈಜವಾಗಿದೆ. ದಕ್ಷಿಣ ಕನ್ನಡದ ಕಾಡು ಪ್ರದೇಶದ ಜನಜೀವನದ ಸ್ಪಷ್ಟ ಚಿತ್ರಣ, ಭಾಷಾ ವಿಲಾಸ, ತುಳು ಜಾನಪದ ಸೊಗಡು, ಗಾಂವ್ಟಿ ಮದ್ದಿನ ಶುಶ್ರೂಷೆ, ಹಂಡೆ ನೀರಿನಿಂದ ಎಣ್ಣೆ ಸ್ನಾನ, ಅಡಿಗೆ, ತಾಂಬೂಲ, ನಶ್ಯ ಸೇವನೆ ಇತ್ಯಾದಿಗಳನ್ನು ತೆರೆಯ ಮೇಲೆ ನೋಡುವಾಗ ವಿಶೇಷವಾದ ಹಿತವನ್ನು ನೀಡುತ್ತವೆ. ‘ತಾನ ತಂದಾನ ಬೈರಿ’ ಎನ್ನುವ ಬಟ್ಯನ ಜಾನಪದ ಹಾಡು ರಂಜನೀಯವಾಗಿದೆ. ಪಂಜುರ್ಲಿ ಕೋಲದ ತಯಾರಿ, ಸನ್ನಿವೇಶ, ಅದರ ಕುರಿತು ಅಪಾರ ನಂಬಿಕೆ ಇವೆಲ್ಲವೂ ಚಿತ್ರದಲ್ಲಿ ದಾಖಲಾಗಿವೆ.
ಪರಿಸರ ಕಾಳಜಿಯು ಇಲ್ಲಿ ಯಥೇಚ್ಚವಾಗಿ ಕಾಣಸಿಗುತ್ತದೆ. ಆಗಾಗ ಶಿವರಾಮ ಈ ಕಾಡನ್ನು ಕಡಿದು ತೋಟ ಮಾಡಿಕೊಂಡು ಜೀವಿಸಲಿಕ್ಕೆ ಬೇಸರವೆನಿಸುವುದಿಲ್ಲವೇ ಎಂದು ಕೇಳುವುದು, ಹಸಿವನ್ನು ನೀಗಿಸಿಕೊಳ್ಳಲು ಪ್ರಾಣಿಗಳು ಸಸ್ಯವನ್ನು ಕಾಡುಪ್ರಾಣಿಯನ್ನು ತಿನ್ನುವುದು ತಪ್ಪೇ? ಅದಕ್ಕಾಗಿ ಅವುಗಳನ್ನು ಕೊಲ್ಲುವುದು ಯಾಕೆ? ಎಂದು ಕೇಳುವಂತಹ ಪ್ರಶ್ನೆಗಳು ನಿಸರ್ಗದತ್ತವಾದ ಚಟುವಟಿಕೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದರ ಬಗೆಗೆ ಯೋಚಿಸುವಂತೆ ಮಾಡಿವೆ. ನಾರಾಯಣನು ಶಿವರಾಮನಿಗೆ ಗದ್ದೆ ತೋರಿಸಲು ಬಂದಾಗ ಗೋಪಾಲಯ್ಯನವರ ಮಾತನ್ನು ಶಿವರಾಮನಿಗೆ ಹೇಳುತ್ತಾ “ಮರುಳು ಕಣೋ ನಾರಾಯಣ.. ದುಡ್ಡನ್ನು ಯಾರು ಒಯ್ತಾರೆ, ತೋಟ ಗದ್ದೆ ಮಾಡಿದರೆ ಇದ್ದಷ್ಟು ದಿನ ಅದನ್ನು ನೋಡಿಕೊಂಡು ಖುಷಿಪಡಬಹುದಲ್ಲವೋ? ಇನ್ನೆಂತಾ ಬೇಕು?” ಅಂತ ನಗುತ್ತಾರೆ. “ಹೋ! ನೀವೀಗ ನಿಲ್ಲುತ್ತೇನೆಂದು ಖಂಡಿತ ಮಾತು ಕೊಡಿ ನಿಮಗಾಗಿ ಇನ್ನೊಂದು ಕಾಟು ಮೂಲೆ ತಯಾರಿಸುತ್ತೇನೆ” ಮನುಷ್ಯ ಪ್ರಕೃತಿಯೊಂದಿಗೆ ಹೇಗೆಲ್ಲಾ ಅನುಸಂಧಾನ ಮಾಡಿಕೊಳ್ಳಬಹುದು ಆ ಮೂಲಕ ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದಕ್ಕೆ ಚಲನಚಿತ್ರದಲ್ಲಿ ಕಂಡು ಬರುವ ಇಂತಹ ಸಂಭಾಷಣೆಗಳು ಉದಾಹರಣೆಗಳಾಗಿವೆ.
ಗೋಪಾಲಯ್ಯನವರ ವಿಶಾಲ ಹೃದಯವಂತಿಕೆಯನ್ನು ಚಲನಚಿತ್ರದುದ್ದಕ್ಕೂ ತೋರಿಸಿರುವುದು ಅಪ್ಯಾಯಮಾನವಾಗಿದೆ. ವಿನೋದ ಪ್ರಸಂಗಗಳು ಬೆಟ್ಟದ ಜೀವದಲ್ಲಿ ಬಹಳ ಸೊಗಸಾಗಿ ಚಿತ್ರತವಾಗಿದೆ. ಭಟ್ಟರು ರಾತ್ರಿ ಊಟವಾದ ಬಳಿಕ ಹೆಂಡತಿಯ ಬಾಯಿಗೆ ತಾಂಬೂಲವನ್ನು ಇಡುವ ದೃಶ್ಯವು ರಂಜನೀಯ. ‘ಮಂಗಳಂ ರಾಮಚಂದ್ರಗೆ..’ ಎಂದು ಸುಪ್ರಭಾತ ಹಾಡುತ್ತಾ ಹೊರಗೆ ಬರುವ ಶಂಕರಮ್ಮನಿಗೆ ಗೋಪಾಲಯ್ಯನವರು ತೊಳೆದಿಟ್ಟ ತನ್ನ ಸೀರೆಯನ್ನು ಒಣಗಿಸುತ್ತಿರುವರೆಂದು ಮುಜುಗರವಾಗುತ್ತದೆ. ಅದು ತನ್ನ ಕೆಲಸವೆಂದು ಆಕೆ ತಾನೇ ಒಣಗಿಸಲು ಮುಂದಾದಾಗ ಅಂದಿನ ಕುಟುಂಬದಲ್ಲಿ ಹೆಣ್ಣಿನ ಸ್ಥಿತಿ ಹೀಗಿತ್ತು ಎನ್ನುವುದು ಒಳಗಣ್ಣಿಗೆ ಕಾಣುತ್ತಿರುವಾಗಲೇ ಗೋಪಾಲಯ್ಯ “ಅದರಲ್ಲಿ ತಪ್ಪೇನಿದೆ?” ಎಂದು ಕೇಳುತ್ತಾ ತಮ್ಮ ಮದುವೆಯ ದಿನಗಳ ನೆನಪಿನೊಂದಿಗೆ ಬಟ್ಟೆಯ ಹಾರವನ್ನೇ ಹಾಕಿಕೊಳ್ಳುವ ಸರಸ ಸಲ್ಲಾಪವು ಪ್ರೌಢ ನಟನೆಯಿಂದಾಗಿ ಬೇಂದ್ರೆಯವರ ‘ಒಲವೆ ನಮ್ಮ ಬದುಕು’ ಎನ್ನುವುದನ್ನು ನೆನಪಿಸುತ್ತದೆ.
ಕುಮಾರ ಪರ್ವತದ ರಮಣೀಯ ನೋಟಗಳು ಒಂದೆಡೆಯಾದರೆ ಅಡಿಕೆ ತೋಟಗಳ, ಹೊಲ ಗದ್ದೆಗಳ ಹಸಿರು ವೈಭವ ಮತ್ತೊಂದೆಡೆಗೆ. ಚಿತ್ರದುದ್ದಕ್ಕೂ ಗಮನ ಸೆಳೆಯುವ ವೃದ್ಧ ದಂಪತಿಗಳಾಗಿ ಅಭಿನಯಿಸಿರುವ ದತ್ತಣ್ಣ ಮತ್ತು ರಾಮೇಶ್ವರಿ ವರ್ಮಾ ಅವರ ಅಭಿನಯವು ಮನಕಲಕುತ್ತದೆ. ಹಲವು ದೃಶ್ಯಗಳಲ್ಲಿ ರಾಮೇಶ್ವರಿ ವರ್ಮ ಅವರು ಕಳೆದು ಹೋದ ಮಗನಿಗಾಗಿ ಹಂಬಲಿಸುವಿಕೆ, ಬಂದ ಅತಿಥಿಯಲ್ಲಿ ಮಗನನ್ನು ಕಾಣುವ ಮುಗ್ಧ ಭಾವ ಇವೆಲ್ಲವನ್ನೂ ತೆರೆಯ ಮೇಲೆ ನೋಡಿದರೇನೇ ಸೊಗಸು. ಇನ್ನು ಸ್ಥಳೀಯ ಕಲಾವಿದರಿಂದ ಮಾಡಿಸಿರುವ ಪಾತ್ರಗಳ ನಟನೆಯು ಸಹಜವಾಗಿ ಮೂಡಿ ಬಂದಿವೆ. ಎಣ್ಣೆ ಸ್ನಾನದ ದೃಶ್ಯವಂತೂ ನಮ್ಮನ್ನು ತವರಿನ ಸುಖದ ನೆನಪಿನ ಕಡೆಗೆ ಮುಖ ಮಾಡಿಸುತ್ತದೆ. ಕುವೆಂಪುರವರ 'ಅಜ್ಜಯ್ಯನ ಅಭ್ಯಂಜನ' ದಲ್ಲಿರುವ ವರ್ಣನೆಯನ್ನು ನೆನಪಿಗೆ ತರುತ್ತದೆ. ಪರಕೀಯನಾದ ಶಿವರಾಮುವಿನ ಮಾತಿನ ಶೈಲಿ, ದಕ್ಷಿಣ ಕನ್ನಡದ ಮಾತು, ತುಳು ಮಾತು, ಹವ್ಯಕ ಕನ್ನಡ ಮಾತು ಇವೆಲ್ಲವನ್ನೂ ಸಂವಹನದಲ್ಲಿ ಬಳಸಿಕೊಂಡಿರುವುದರಿಂದ ಅಗತ್ಯಕ್ಕೆ ತಕ್ಕದಾದ ಭಾವ ಸಾಂದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಚಿತ್ರವು ಯಶಸ್ವಿಯಾಗಿದೆ.
ಮುಂಬಯಿಯಂತಹ ಜನಾರಣ್ಯದಲ್ಲಿ ಕುಳಿತು ಕಿರುತೆರೆಯ ಮೇಲೆ ಈ ಬೆಟ್ಟದ ಜೀವದ ಕಥೆಯನ್ನು ವೀಕ್ಷಿಸುವಾಗ ‘ಸಿನೆಮಾನುಭೂತಿ ಎಂಬ ಪಬ್ಲಿಕ್ ಪ್ರಾಪರ್ಟಿ’ಯಿಂದ ವಂಚಿತ; ಅಂದರೆ ಥಿಯೇಟರ್ ನಲ್ಲಿ ಜನಸಮೂಹದೊಡನೆ ಕುಳಿತು ನೋಡುವ ಅವಕಾಶದಿಂದ ವಂಚಿತ ಎನ್ನುವ ಭಾವವು ಆವರಿಸಿದರೂ ಅದರೆದುರಿಗೆ ಒಟ್ಟಾರೆ ಚಲನಚಿತ್ರವು ನೀಡಿದ ವಿಶೇಷ ಅನುಭೂತಿಯು ಗೆಲುವನ್ನು ಸಾಧಿಸಿದೆ. ಇದರ ಹಿಂದೆ ಇಡೀ ಚಿತ್ರತಂಡದ ಶ್ರಮವನ್ನು ಮರೆಯಲಿಕ್ಕಾಗದು. ಪಿ ಶೇಷಾದ್ರಿ ಅವರಿಗೆ ಹೆಮ್ಮೆಯ ಅಭಿನಂದನೆಗಳು.
ಕಲಾ ಭಾಗ್ವತ್
ಮುಂಬೈ
ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...
"ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ...
“ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ...
©2024 Book Brahma Private Limited.