ಶರ್ಮರ ಪಾಂಡು ಮಾದ್ರಿ ಕವಿತೆ 

Date: 27-06-2025

Location: ಬೆಂಗಳೂರು


"ಪಾಂಡು ಮಾದ್ರಿಯರ ಸಮಾಗಮ ಸಾವಿಗೆ ಹೆದರುವ ಸಮಾಗಮ ಅಲ್ಲ, ಮರವು ಮರವಿನ ಮಧ್ಯದ ಸಮಾಗಮ. ಈ ಬದುಕೇ ಹಾಗೆ; ಒಂದು ಮರವು ಮತ್ತು ಇನ್ನೊಂದು ಮರವಿನ ನಡುವಿನ ಹರಿವು ಎಂಬ ತತ್ವಜ್ಞಾನ ಕೂಡ ಈ ಕವಿತೆಯಲ್ಲಿ ವ್ಯಕ್ತವಾಗುತ್ತದೆ," ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಬರೆದಿರುವ ‘ಶರ್ಮರ ಪಾಂಡು ಮಾದ್ರಿ ಕವಿತೆ’ ವಿಮರ್ಶಾ ಸರಣಿ ನಿಮ್ಮ ಓದಿಗಾಗಿ..

ಹೇಳಿ ಕೇಳಿ ನವ್ಯದ ರಚನೆಗಳು ಸಾಂಕೇತಿಕವಾದ ರಚನೆಗಳು. ಕೆಲವೊಮ್ಮೆ ಅವು ನಮ್ಮ ಒಗಟುಗಳ ಹಾಗೆ, ಮುಂಡಿಗೆಗಳ ಹಾಗೆ ಇರುತ್ತವೆ. ಕವಿತೆಯಲ್ಲಿ ಬಳಸಿರುವ ಎಲ್ಲ ಪದಗಳ ಅರ್ಥ ಗೊತ್ತಿದ್ದೂ ಕೆಲವೊಮ್ಮೆ ಪದ್ಯದ ಅರ್ಥಗಳನ್ನು ಬಿಡಿಸಿಕೊಳ್ಳಲು ಆಗದೆ ಹೋಗಬಹುದು. ನಾವು ಓದುವ ಪದ್ಯದ ತಾತ್ವಿಕತೆ, ಆಶಯಗಳನ್ನು, ಅದರ ಅನುಭವಗಳನ್ನು ತಿಳಿಯಲು ಆಗದೆ ಹೋಗಬಹುದು. ಮತ್ತೊಮ್ಮೆ, ಮಗದೊಮ್ಮೆಓದಿದ ನಂತರವೂ ಯಾವುದೊ ಒಂದು ಕವಿತೆ ನಮ್ಮ ಓದಿಗೆ ಏನನ್ನು ಬಿಟ್ಟುಕೊಡುತ್ತಿದೆ ಎನ್ನುವುದು ನಮಗೆ ಸ್ಪಷ್ಟ ಆಗದೆ ಹೋಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಈ ಕವಿತೆಯು ನನಗೆ ಹೇಗೆ ಮತ್ತು ಎಷ್ಟು ದಕ್ಕುತ್ತದೊ ಹಾಗೆ ಮತ್ತು ಅಷ್ಟನ್ನೆ ನಿಮ್ಮೊಂದಿಗೆ ಹಂಚಿಕೊಳ್ಳಲು; ಇದರ ಅರ್ಥ ಮತ್ತು ರಚನೆ ಎರಡೂ ನೆಲೆಯಲ್ಲಿ ನನಗೆ ತಿಳಿದಮಟ್ಟಿಗೆ ಕವಿತೆಯ ವಿಶ್ಲೇಷಣೆ ಮಾಡಲು ಇಲ್ಲಿ ಯತ್ನಿಸುತ್ತೇನೆ.

ಈ ಕವಿತೆಯ ಶೀರ್ಷಿಕೆಯೆ ಇದನ್ನು ಓದಲು ಒಂದು ಕೀಲಿಕೈಯಾಗಿ ಕೆಲಸ ಮಾಡುತ್ತದೆ. ಮೊದಲಿಗೆ ನಾವು ಈ ಪಾಂಡು ಮಾದ್ರಿ ಕವಿತೆಯನ್ನು ಓದೋಣ. ಆನಂತರ ಇದರ ಇದರ ಬಗ್ಗೆ ಮಾತುಕತೆಗೆ ತೊಡಗಬಹುದು.

ಪಾಂಡು ಮಾದ್ರಿ 
ನೆಲದ ಮೈಮೇಲೆ ಎರಗಲಿದ್ದಾಕಾಶ
ದಡಗಳಿಕ್ಕಟ್ಟಿನಲ್ಲಿ ಸಿಕ್ಕ ನದಿ 
ದಡದಾಚೆ ಸಂಜೆಗೋ ಮಂಜು ತೊಡಿಸಿದ ವೇಷ -
ಮಬ್ಬು, ಮಬ್ಬಾಗಿ ಗಿಡಗುಡ್ಡ ಬಾನಂಚು
ನೆಲ ಧೂಳು ಕವಿದೊಂದಂಗಡಿ.

ತಳಕ್ಕದುಮಿದರೆ ಪುಳಕ್ಕನೆ ಜಿಗಿದ ಬೆಂಡು ಪ್ರಶ್ನೆ
ಅವ್ಯಕ್ತದಲ್ಲಿ ವ್ಯಕ್ತಿತ್ವ ಲಯವಾದರೇ
ಬದುಕು ಸಾರ್ಥಕವೇನು?  ಅನ್ವೇಷಣದ ಕೊನೆ
ಬಟ್ಟ ಬಯಲೇ ? ನದಿ ಸಾಗರದ ಕಡೆ ಮಿಂಚು
ಕತ್ತಲೆಯ ಕಡೆ ತುಡಿತುಡಿದು ಕಡೆಗೆ ಹೆಸರು ಕಳಕೊಂಡರೇ

ಮೋಕ್ಷ, ಮತ್ತೆ ಸುರು ಉಸಿರು. ಗಳಿಗೆ ಫಕ ಫಕ ಬಾಳು
ಮರವು ಮರವಿನ ಮಧ್ಯೆ... ದೂರ ಗುಡಿಸಲಿನತ್ತ
ಕತ್ತು ಬಗ್ಗಿಸಿ ಹುಬ್ಬು ಗಂಟಿಕ್ಕಿ ನಡೆದಾಳು
ಕಣ್ಣೆಡವಿದಾಗ ಗಕ್ಕನೆ ನಿಂತ... ತುಟಿ, ಕತ್ತು.
ಮೊಲೆ ಹೊಕ್ಕುಳಿನ ಗುಣಿ. ತೊಡೆಗಪ್ಪು – ಅಂಗಾತ

ಮಲಗಿದ್ದ ಹೆಣ್ಣೊಡಲು ಒಡೆದ ಒಗಟಾಗಿತ್ತು
ಕಟ್ಟೊಡೆದ ನದಿ ನುಗ್ಗಿ ಅಪ್ಪಳಿಸಿದಂತಾಗಿ
ಗಂಡಿಗೊ ಎದೆ ನಿಂತೇ ಹೋಯಿತು. ಗೊತ್ತು.
ಜೇಡ ಕಾದಿದೆ ಬಲೆಯೊಳಗೆ, ಗೊತ್ತು. ಆದರೂ
ನೂಲ ಜಗ್ಗಬೇಕು ನಕ್ಕು ಮೀಸೆಯ ತಿದ್ದಿ ಬಗ್ಗಿ

ಹೆಣ್ಣು ಮೊಲೆ ತುದಿಗೆ ಮುತ್ತಿಟ್ಟ. ಜಿಂಕೆ ಶಾಪದುರಿ
ಕನಸ ಝಳದಿಂದೆದ್ದು ಬಂದ ಹೆಣ್ಣಿಗೋ ಮಾತು
ಉಡುಗಿತ್ತು. ಕಾಲ ಝಾಡಿಸಿ, ಒಮ್ಮೆಗೇ ಹೋರಿ
ಹಾರಿದ್ದ ಗಂಡನ್ನತ್ತ ತಳ್ಳುವ ಮೊದಲೇ
ಅವನ ಕಣ್ಣಿನ ಮಾತು ಗೊತ್ತಾಯಿತು.

ನಂಬಿ ಮಲಗಿದ ಹೆಣ್ಣಿನೆದೆ ಹಗುರ. ಅನುಮಾನ
ಕಳೆದುಳಿದ ಸಾಗರ. ಹುಟ್ಟು ಸಾವಿನ ಕೂಟ
ಹುಲ್ಲು ಹಾಸಿಗೆಯಲ್ಲಿ - ಎಂದೇ ವರ್ತುಲ ಪೂರ್ಣ.
ಒಮ್ಮೆಗೇ ಗಗನಕ್ಕೆ ಜಿಗಿದ ಚೀತ್ಕಾರಕ್ಕೆ
ಸಂಜೆ ಬೆದರಿತ್ತು. ಸುರು ಮತ್ತೆ ಬುಗುರಿಯಾಟ.

ತಂಗಾಳಿ ಬೀಸಿ ಮಂಜು ಮೇಲೆದ್ದು ಚಿಕ್ಕಿ ಹೊಳೆಹೊಳೆದಾಗ
ದಡವೊಡೆದ ನದಿ ನುಗ್ಗಿದಾಗ ಸಣ್ಣಗೆ ಮಾದ್ರಿ
ಕೊರಗಿದಳು. ತೋಟದೊಳಗೊಬ್ಬ ಧಾಂಡಿಗ ಹುಡುಗ
ತಲೆ ಸುತ್ತ ಗದೆ ಬೀಸಿ ಕೇಕೆ ಹಾಕಿದ. ದೂರ,
ಯಾವುದೋ ಊರಾಚೆಗೊಬ್ಬ ಪಾದ್ರಿ

ಎದ್ದು ಶತಪಥ ಸುತ್ತಿ ಬೆಳಗಿನುಪದೇಶಕ್ಕೆ
ಧರ್ಮ ಕರ್ಮದ ಪಾಠವನ್ನುರುಹಚ್ಚಿ, ನಕ್ಕ.
೧೯೬೦ -ಡಾ. ಬಿ. ಸಿ. ರಾಮಚಂದ್ರ ಶರ್ಮ

ಈ ಕವಿತೆಯನ್ನು ಓದುವಾಗ ಇದು ಹೇಗೆ ಸಾಲುಸಾಲುಗಳಲ್ಲಿ ಸಾಗುತ್ತದೊ ಹಾಗೆಯೇ ಓದಿಕೊಳ್ಳಬೇಕು ಎಂಬ ನಿಯಮವೇನೂ ಇಲ್ಲ. ಕವಿತೆ ಓದುವುದಕ್ಕೆ ಕೆಲವು ಪದ್ಧತಿಗಳಿವೆ. ಆದರೆ ಅದಕ್ಕೆ ಇಂಥದ್ದೆ ಒಂದು ನಿಯಮ ಎಂಬುದಿಲ್ಲ. ನಿಯಮಗಳಿಗೆ ಕಟ್ಟು ಬಿದ್ದು ಯಾವುದೆ ಪದ್ಯವನ್ನು ಓದುವ ಅಗತ್ಯವೂ ಇಲ್ಲ. ನಿಯಮ ಮೀರಿದ ಓದು ನಮಗೆ ಕೆಲವೊಮ್ಮೆ ದಾರಿ ತಪ್ಪಿಸಲೂಬಹುದು; ಹಾಗೆಯೆ ಭಿನ್ನ ಅನುಭವಗಳಿಗು ದಾರಿ ತೋರಬಹುದು. ಯಾವುದೆ ಕವಿತೆಯನ್ನು ಅದರ ಸುರುವಿನಿಂದ ಓದಲು ಶುರುಮಾಡುವುದು, ಹಾಗೆಯೆ ಪಾದಗಳು ಸಾಗುವ ಹಾದಿಯಲ್ಲೆ ಓದು ಮುಂದುವರೆಸುವುದು ನಮ್ಮಲ್ಲಿ ಒಂದು ವಾಡಿಕೆ. ಆದರೆ ರೊಟ್ಟಿ ತಿನ್ನುವುದಕ್ಕೆ ಹೇಗೆ ಒಂದು ನಿರ್ದಿಷ್ಟ ಆರಂಭ ಎನ್ನುವುದು ಇರುವುದಿಲ್ಲವೊ ಹಾಗೆಯೆ ಪದ್ಯದ ಓದಿಗು ಒಂದು ನಿರ್ದಿಷ್ಟ ಆರಂಭ ಎನ್ನುವುದು ಇರಬೇಕಿಲ್ಲ. ಮುನ್ನಡೆ ಹಾದಿಗಳು ಇರುವುದಿಲ್ಲ. ನಾವು ಹಾಗೆ ಓದಿನ ಜಡ್ಡಿಗೆ ಬಿದ್ದಿರುತ್ತೇವೆ ಅಷ್ಟೆ.

ಇಲ್ಲಿ ಈ ಕವಿತೆಯಲ್ಲಿ ಒಂದು ಕಡೆ ʻಜಿಂಕೆ ಶಾಪದುರಿʼ ಎಂಬ ಮಾತು ಬರುತ್ತದೆ. ಇದರ ಹಿನ್ನೆಲೆಯನ್ನೊಂದಿಷ್ಟು ತಿಳಿಯೋಣ: ಒಮ್ಮೆ ಪಾಂಡುವು ಹರಯದಲ್ಲಿ ಬೇಟೆಗೆ ತೊಡಗಿದ್ದಾಗ ಜಿಂಕೆ ಜೋಡಿಕಂಡು ಬಾಣ ಹೂಡಿ ಹೊಡೆಯುತ್ತಾನೆ. ಕಿಂದಮ ಋಷಿ ಮತ್ತು ಆತನ ಪತ್ನಿ ಜಿಂಕೆರೂಪ ತಾಳಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಅವು ನಿಜ ಜಿಂಕೆಗಳೇ ಎಂದು ಭಾವಿಸಿ ಪಾಂಡು ಬಾಣ ಹೊಡೆದು ಕಿಂದಮ ಋಷಿಯ ಸಾವಿಗೆ ಕಾರಣನಾಗುತ್ತಾನೆ. ಬಾಣಘಾತದಿಂದ ಸಾಯುವ ಮುನ್ನ ನಿಜರೂಪ ತಾಳಿದ ಕಿಂದಮನು ನೀನು ನಿನ್ನ ಪತ್ನಿಯ ಜೊತೆ ಮಿಲನಕ್ರಿಯೆಯಲ್ಲಿ ತೊಡಗಿದಾಗ ನಿನಗೆ ಸಾವು ಬರಲಿ ಎಂದು ಪಾಂಡುವಿಗೆ ಶಾಪ ನೀಡುತ್ತಾನೆ. ಇದರ ಪರಿಣಾಮವಾಗಿ ಪಾಂಡು ಮಾದ್ರಿಯ ಜೊತೆ ಕೂಡಿದಾಗ ಸಾಯುತ್ತಾನೆ ಎಂಬ ಪೌರಾಣಿಕ ಕಥನ ಇದರ ಹಿನ್ನೆಲೆ.

ಯಾವುದೆ ಪೌರಾಣಿಕ ಪ್ರಸಂಗಗಳನ್ನು ನಾವು ಇಂದು ಕೇವಲ ಪ್ರಸಂಗಗಳ ಹಾಗೆ ನೋಡುವುದಿಲ್ಲ; ಪಾತ್ರಗಳನ್ನು ಕೇವಲ ಪಾತ್ರಗಳಾಗಿ ನೋಡುವುದಿಲ್ಲ; ಬದಲಾಗಿ ಅವನ್ನು ಪ್ರತೀಕಗಳಾಗಿ, ಮೆಟಫರ್‌ಗಳಾಗಿ ನೋಡುತ್ತೇವೆ. ಪುರಾಣ ಪಾತ್ರ ಅಥವಾ ಪ್ರಸಂಗಗಳು ನಮ್ಮ ಚರಿತ್ರೆಯನ್ನು ಪರೀಕ್ಷಿಸುವ ಹತಾರಗಳಾಗಿ ಬಳಕೆ ಆಗುತ್ತಲೆ, ವರ್ತಮಾನದ ಸಮಾಜ, ಬದುಕುಗಳನ್ನು ಪರೀಕ್ಷೆಗೆ, ಜಿಜ್ಞಾಸೆಗೆ ಒಡ್ಡುವ ಕೆಲಸವನ್ನೂ ಮಾಡುತ್ತವೆ. ಹಾಗೆಯೆ ಜನರಲ್ಲಾದ ಜೀವನತತ್ವಜ್ಞಾನ ಮಂಡನೆಗೂ ಅವುಗಳನ್ನು ಕೆಲವೊಮ್ಮೆ ನಾವು ಬಳಸುವುದುಂಟು. ಉದಾಹರಣೆಗೆ ಬಕಾಸುರ ಎಂದ ಕೂಡಲೆ ನಮಗೆ ರಕ್ಕಸ ಬಕಾಸುರನ ಬದಲಾಗಿ ಅತಿಯಾಗಿ ತಿನ್ನುವ ರಾಕ್ಷಸ ಪ್ರವೃತ್ತಿ ನೆನಪಾಗುತ್ತದೆ. ಬೃಹಸ್ಪತಿ ಎಂದ ಕೂಡಲೆ ದಡ್ಡ ಎಂಬ ಇಂಗಿತ ಬರುತ್ತದೆ. ಅಂದರೆ ಕೆಲವು ಪಾತ್ರಪ್ರತೀಕಗಳು ನಮ್ಮಲ್ಲಿ ಅನ್ವರ್ಥಗಳಿಗೆ, ಸಿದ್ಧ ಅರ್ಥಗಳಿಗೆ ಕಟ್ಟುಗೊಂಡಿವೆ. ನಿರ್ದಿಷ್ಟ ಅರ್ಥಛಾಯೆಗಳನ್ನು, ಸಂಕೇತಗಳನ್ನು ಅವು ಸದಾ ಹೊತ್ತು ಸಾಗುತ್ತ ಇರುತ್ತವೆ. ಇನ್ನು ಕೆಲವು ಪ್ರಸಂಗಗಳು ಇಷ್ಟು ಪರಿಚಿತ ಅಲ್ಲ. ಈ ಪಾಂಡು ಮಾದ್ರಿ ಪ್ರಸಂಗ ಕೂಡ ಅಷ್ಟು ಪ್ರಸಿದ್ಧ ಪ್ರಸಂಗವೇನೂ ಅಲ್ಲ. ಆದಾಗ್ಯೂ ಪಾಂಡು ನೆನಪಾದಾಗ ನಮಗೆ ಮಕ್ಕಳನ್ನು ಹುಟ್ಟಿಸಲು ಅಸಮರ್ಥನಾದ ಗಂಡಸು, ಬಿಳಿಚಿಕೊಂಡ ಪೇಲವ ವ್ಯಕ್ತಿ ಮನಸ್ಸಿಗೆ ಬರುತ್ತಾನೆ. ಮಾದ್ರಿ ಹೆಸರು ಹೇಳಿದ ಕೂಡಲೆ ನಮಗೆ ಪತಿಯ ಹೆಣದೊಂದಿಗೆ ಸಹಗಮನ ಮಾಡಿದ ಅಸಹಾಯಕ ಹೆಣ್ಣು ಕಾಣುತ್ತಾಳೆ. ಇವರಿಬ್ಬರ ಈ ಕೂಟ ನೆನಪಾದಾಗ ಈ ಅಸಮರ್ಥ ಗಂಡಸಿಗೆ ಗೊತ್ತಿದ್ದೂ ಈ ಸಾಯುವ ಸಾಹಸ ಮಾಡಬೇಕಿತ್ತಾ ಎಂಬ ಪ್ರಶ್ನೆ ಹುಟ್ಟುತ್ತದೆ. ಇವೆಲ್ಲವನ್ನು ಒತ್ತಟ್ಟಿಗೆ ಇಟ್ಟು ಜನರಲ್ಲಾಗಿಯೂ ಈ ಪದ್ಯವನ್ನು ಈ ತಲೆಬರಹ ಇಲ್ಲದೆಯೂ ಓದಿಕೊಳ್ಳುವ ಸಾಧ್ಯತೆ ಕೂಡ ಇದೆ. ಅದನ್ನು ಕೊನೆಗೆ ನೋಡೋಣ.

ಈ ಕವಿತೆಯ ಕೊನೆಯಲ್ಲಿ ತೋಟದೊಳಗೊಬ್ಬ ದಾಂಡಿಗ ಹುಡುಗ ತಲೆ ಸುತ್ತ ಗದೆ ಬೀಸಿ ಕೇಕೆ ಹಾಕಿದ ವಿವರ ಮತ್ತು ದೂರ ಯಾವುದೋ ಊರ ಆಚೆಗೆ ಒಬ್ಬ ಪಾದ್ರಿ ಎದ್ದು ಶಥಪಥ ಸುತ್ತಿ ಬೆಳಗಿನ ಉಪದೇಶಕ್ಕೆ ಧರ್ಮಕರ್ಮದ ಪಾಠವನ್ನು ಉರುಹಚ್ಚಿ ನಕ್ಕ ವಿವರವೂ ಬರುತ್ತದೆ. (ದೂರ ಎನ್ನುವ ಮಾತು ಈ ಕವಿತೆಯಲ್ಲಿ ಎರಡು ಸಲ ಬರುತ್ತದೆ. ಪಾಂಡು ನಡೆದು ತಲುಪಿದ ಗುಡಿಸಲು ಕೂಡ ದೂರ ಇತ್ತು ಎಂದು ಕವಿತೆ ಹೇಳುತ್ತದೆ.) ಈ ದಾಂಡಿಗ ಹುಡುಗ ಯಾರು? ಈ ದೂರದ ಯಾವುದೋ ಊರ ಪಾದ್ರಿ ಧರ್ಮ ಕರ್ಮದ ಪಾಠವನ್ನು ಉರುಹಚ್ಚಿ ನಗುವುದಕ್ಕು ಇಲ್ಲಿ ದಂಪತಿಗಳು ಕೂಡಿ ಪಾಂಡು ಸಾಯುವುದಕ್ಕು ಇರುವ ಸಂಬಂಧ ಏನು? ಈ ಪ್ರಶ್ನೆಗಳು ಏಳುತ್ತವೆ. ಶಾಪವಿರಲಿ ಬಿಡಲಿ ದಾಂಪತ್ಯ ಕೂಟದಲ್ಲಿ ಧರ್ಮಕರ್ಮದ ಪಾಠವೆಲ್ಲ ವ್ಯರ್ಥ ಎಂಬ ಇಂಗಿತವೂ ಸಾವಿನ ಜೊತೆಜೊತೆಗೇ ಹುಟ್ಟಿ ಬರುತ್ತದೆ; ಜೀವನದ ಪ್ರತಿಯೊಂದು ಕ್ಷಣವೂ ಸಾವಿನ ಕಡೆಗಿನದೆ ಚಲನೆ ಎಂಬ ತತ್ವಜ್ಞಾನವೂ ಈ ಮಾತುಗಳ ಮೂಲಕ ವ್ಯಕ್ತವಾಗುತ್ತದೆ.

ಚಿಕ್ಕಿ ಹೊಳೆಹೊಳೆದಾಗ, ತೋಟದೊಳಗೊಬ್ಬ ದಾಂಡಿಗ ಹುಡುಗ ಎನ್ನುವಾಗ ಈ ಇಡೀ ಘಟನೆ ಅಂದರೆ ಪಾಂಡು ಮಾದ್ರಿಯರ ಸಮಾಗಮ ಮತ್ತು ಪಾಂಡುವಿನ ಸಾವು ನಡೆದದ್ದು ಒಂದು ತೋಟದ ಒಳಗೆ ಎನ್ನುವುದನ್ನು ಈ ಕವಿತೆ ನಮಗೆ ತಿಳಿಸುತ್ತದೆ. ಅಲ್ಲದೆ ಕವಿತೆಯೆ ಹೇಳುವ ಹಾಗೆ ವರ್ತುಲ ಪೂರ್ಣಗೊಂಡಂತೆ ಹುಲ್ಲು ಹಾಸಿಗೆಯಲ್ಲಿ ಹುಟ್ಟು ಸಾವಿನ ಕೂಟ ನಡೆದಾಗ ಹೆಣ್ಣಿನ ಎದೆ ಹಗುರವಾಗಿ ಅನುಮಾನ ಕಳೆದು ಸಣ್ಣಗೆ ಆಕೆ ಕೊರಗುತ್ತಾಳೆ. ಅಂದರೆ ತನ್ನ ಗಂಡ ತನ್ನೊಂದಿಗೆ ಕೂಡಿದ ಕೂಡಲೆ ಆತ ಸತ್ತ ಸಂಗತಿ ಖಾತ್ರಿಯಾಗಿ ಆಕೆ ಕೊರಗುತ್ತಾಳೆ. ಅಂದರೆ ಈ ಘಟನೆ ಸುರುವಾದಾಗ ಸಂಜೆಯಾಗಿತ್ತು ಮತ್ತು ಪಾಂಡುವಿನ ಸಾವು ಜರುಗಿದಾಗ ಕವಿತೆಯೆ ತನ್ನ ನಿರೂಪಣೆಯಲ್ಲಿ ಬಿಟ್ಟುಕೊಡುವಂತೆ ಬೆಳಗಿನ ಜಾವ ಆಗಿದೆ. ಅಂದರೆ ಈ ಪಾಂಡು ಮಾದ್ರಿಯರ ಸಮಾಗಮ ಒಂದು ಹುಟ್ಟು ಮತ್ತು ಸಾವಿನ ಕೂಟವೆಂದೂ, ಅದಕ್ಕೆ ನಿರ್ದಿಷ್ಟವಾದ ಸ್ಥಳ ಮತ್ತು ಕಾಲ ಇದ್ದುವೆಂದೂ ಕವಿತೆ ಹೇಳುತ್ತದೆ. ಜೊತೆಗೆ ಹುಲ್ಲು ಹಾಸಿಗೆಯಲ್ಲಿ ಹುಟ್ಟು ಸಾವಿನ ಕೂಟ ಎಂಬುದು ಕ್ಷಣಿಕ ಮತ್ತು ಸಹಜ ಎನ್ನುತ್ತ ಬಾಳಿನ ಬಗ್ಗೆ ತನ್ನದೆ ತತ್ವಜ್ಞಾನವನ್ನೂ ಮಂಡಿಸುತ್ತದೆ. ಒಂದು ಕಡೆ ʻಗಳಿಗೆ ಫಕ ಫಕ ಬಾಳುʼ ಎನ್ನುವಾಗ, ʻನದಿ ಸಾಗರದ ಕಡೆ ಮಿಂಚು ಕತ್ತಲೆಯ ಕಡೆ ತುಡಿತುಡಿದು ಕಡೆಗೆ ಹೆಸರು ಕಳಕೊಂಡರೇ ಮೋಕ್ಷʼ ಎನ್ನುವಾಗ, ʻಮತ್ತೆ ಸುರು ಉಸಿರುʼ ಎನ್ನುವಾಗ ಮತ್ತೊಂದೆಡೆ ಇದೆ ಕವಿತೆ ʻಮತ್ತೆ ಸುರು ಬುಗುರಿಯಾಟʼ ಎನ್ನುವಾಗ ಇಲ್ಲೆಲ್ಲ ಸಾವಾಗಲೀ ಹುಟ್ಟು ಆಗಲೀ ಇವೆಲ್ಲ ಶಾಶ್ವತ ಅಲ್ಲ, ಒಟ್ಟಾರೆ ಬದುಕೇ ಶಾಶ್ವತ ಅಲ್ಲ, ನಿರಂತರ ಹುಟ್ಟು ಸಾವುಗಳ ವರ್ತುಲ ಪೂರ್ಣವಾಗುವುದು ಮತ್ತು ಮತ್ತು ಆ ಎಡೆಗೆ ಜೀವಿಗಳು ಗೊತ್ತಿದ್ದೂ ಸಾಗುವುದು ಈ ಪ್ರಕ್ರಿಯೆ ನಿರಂತರ ಎನ್ನುತ್ತದೆ. ಅಂದರೆ ಇದೊಂದು ಸಾವಿನ ಕಡೆಗಿನ ಚಲನೆಯ ಜಿಜ್ಞಾಸೆಯಾಗಿ ಕಾಣುತ್ತದೆ.

ಪಾಂಡು ಮಾದ್ರಿಯರ ಸಮಾಗಮ ಸಾವಿಗೆ ಹೆದರುವ ಸಮಾಗಮ ಅಲ್ಲ, ಮರವು ಮರವಿನ ಮಧ್ಯದ ಸಮಾಗಮ. ಈ ಬದುಕೇ ಹಾಗೆ; ಒಂದು ಮರವು ಮತ್ತು ಇನ್ನೊಂದು ಮರವಿನ ನಡುವಿನ ಹರಿವು ಎಂಬ ತತ್ವಜ್ಞಾನ ಕೂಡ ಈ ಕವಿತೆಯಲ್ಲಿ ವ್ಯಕ್ತವಾಗುತ್ತದೆ. ಈ ಮರವು ಎಂಬುದು ಯಾರದೊ ಸಾವಿನಿಂದ ನಾವು ಸಾಯದೆ ಇರುವುದನ್ನು ಕಲಿಯಬಹುದಾದ ಪಾಠ ಅಲ್ಲ. ವ್ಯಕ್ತವಾಗದೆ ಬದುಕಿಗೆ ಸಾರ್ಥಕ್ಯ ಇಲ್ಲ ಎನ್ನುವ ಮೂಲಕ; ಕೂಡಿದರೆ ಸಾಯಬಹುದು ಅಂತ ಕೂಡದೆ ಇರಲಿಕ್ಕೆ ಆಗುತ್ತದೆಯೆ ಎಂಬ ಪ್ರಶ್ನೆಯನ್ನೂ ಈ ಕವಿತೆ ಜೋರಾಗಿ ಮಂಡಿಸುತ್ತದೆ.

ನೆಲದ ಮೈಮೇಲೆ ಎರಗಲಿದ್ದಾಕಾಶ
ದಡಗಳಿಕ್ಕಟ್ಟಿನಲ್ಲಿ ಸಿಕ್ಕ ನದಿ 
ದಡದಾಚೆ ಸಂಜೆಗೋ ಮಂಜು ತೊಡಿಸಿದ ವೇಷ -
ಮಬ್ಬು, ಮಬ್ಬಾಗಿ ಗಿಡಗುಡ್ಡ ಬಾನಂಚು
ನೆಲ ಧೂಳು ಕವಿದೊಂದಂಗಡಿ.

ಹೀಗೆ ಮೊದಲಿಗೆ ಇಲ್ಲಿ ಒಂದು ಪ್ರಕೃತಿಯ ನಿರೂಪಣೆ ಬರ್ತದೆ. ಆಮೇಲೆ; ʼತಳಕ್ಕದುಮಿದರೆ ಪುಳಕ್ಕನೆ ಜಿಗಿದ ಬೆಂಡು ಪ್ರಶ್ನೆ: ಅವ್ಯಕ್ತದಲ್ಲಿ ವ್ಯಕ್ತಿತ್ವ ಲಯವಾದರೇ ಬದುಕು ಸಾರ್ಥಕವೇನು?ʼ  ʼಅನ್ವೇಷಣದ ಕೊನೆ ಬಟ್ಟ ಬಯಲೇ?ʼ ಎಂಬ ಎರಡು ಪ್ರಶ್ನೆಗಳು ಇಲ್ಲಿ ಬರುತ್ತವೆ. ವ್ಯಕ್ತಿತ್ವ ವ್ಯಕ್ತವಾಗಬೇಕು. ಆಗಲೆ ಬದುಕಿಗೆ ಒಂದು ಸಾರ್ಥಕತೆ ಎನ್ನುವ ನಿಲುವು ಇಲ್ಲಿದೆ. ವ್ಯಕ್ತಿತ್ವ ವ್ಯಕ್ತವಾಗುವುದು ಎಂದರೇನು? ಯಾವ್ಯಾವ ಬಗೆಗಳಲ್ಲಿ ವ್ಯಕ್ತಿತ್ವ ವ್ಯಕ್ತವಾಗುತ್ತದೆ? ವ್ಯಕ್ತಿತ್ವ ವ್ಯಕ್ತವಾದರೇನೆ ಬದುಕು ಸಾರ್ಥಕವೊ? ಅನ್ವೇಷಣೆ ಎನ್ನುವುದು ಕೊನೆ ಮುಟ್ಟುತ್ತದೊ? ಆ ಕೊನೆ ಬಟ್ಟ ಬಯಲೊ? ಬಟ್ಟ ಬಯಲು ಅಂದರೆ ಏನು? ಶೂನ್ಯವೊ? ಶೂನ್ಯವೆಂದರೆ ಏನು? ಅನಿರ್ವಚನೀಯವೊ? ಹೌದು ಬದುಕು ಎಂದರೆ ಏನು? ಬದುಕು ಹೇಗಿರಬೇಕು ಎಂಬುದು ಕೊನೆಗೂ ಅನಿರ್ವಚನೀಯವೆ. ಅಥವಾ ಅದೊಂದು ನಿರ್ದಿಷ್ಟ ಉತ್ತರ ಇಲ್ಲದ ಪ್ರಶ್ನೆ. ಹಾಗೆ ಬದುಕು ಎಂದರೆ ಏನು? ವ್ಯಕ್ತಿತ್ವ ವ್ಯಕ್ತವಾಗುವುದು ಎಂದರೆ ಏನು? ಎನ್ನುವ ಪ್ರಶ್ನೆಗಳಿಗೆ ಒಂದೆ ಬಗೆಯ ಉತ್ತರ ಇರಲಿಕ್ಕೆ ಸಾಧ್ಯವಿಲ್ಲ. ಅನಿರ್ವಚನೀಯ ಅಂದರೆ ಒಂದು ಬಗೆಯ ವ್ಯಾಖ್ಯಾನ, ಒಂದೆ ಬಗೆಯ ನಿರ್ವಚನ ಸಾಧ್ಯವಿಲ್ಲದ ಸ್ಥಿತಿ ಎಂಬ ಅರ್ಥವೂ ಇದೆ. ಅದನ್ನೆ ಈ ಕಂಡಿಕೆ ಹೇಳ್ತಾ ಇದೆ ಅನ್ನಿಸುತ್ತೆ.

ಧೂಳು ಕವಿದ ಒಂದು ಅಂಗಡಿಯ ಹಾಗೆ ಕಾಣುವ ಪ್ರಕೃತಿಯನ್ನು ನಿರೂಪಿಸಿದ ಕೂಡಲೆ ಇಲ್ಲಿ ಮುಂದಿನ ಕಂಡಿಕೆ ಮೊದಲಿಗೇ ಜೀವನದ ಪ್ರಶ್ನೆಯನ್ನು, ಜೀವನದ ಸಾರ್ಥಕತೆಯ ಪ್ರಶ್ನೆಯನ್ನು ಎತ್ತುತ್ತದೆ? ಪಾಂಡು ಮಾದ್ರಿಯರ ಜೀವನಕ್ಕು ಮತ್ತು ಜೀವನದ ಸಾರ್ಥಕ್ಯದ ಪ್ರಶ್ನೆಗೂ ಇಲ್ಲಿ ಒಂದು ನಂಟನ್ನು ಕವಿತೆ ಕಟ್ಟಲು ಯತ್ನಿಸುತ್ತದೆ.

ʼನದಿ ಸಾಗರದ ಕಡೆ ಮಿಂಚು ಕತ್ತಲೆಯ ಕಡೆ ತುಡಿತುಡಿದು ಕಡೆಗೆ ಹೆಸರು ಕಳಕೊಂಡರೇ ಮೋಕ್ಷ. ಮತ್ತೆ ಸುರು ಉಸಿರು. ಗಳಿಗೆ ಫಕ ಫಕ ಬಾಳು, ಮರವು ಮರವಿನ ಮಧ್ಯೆʼ ಎಂಬ ಮಾತುಗಳು ಇಲ್ಲಿ ಪಾಂಡು ಮಾದ್ರಿಯರ ಬಾಳಿಗೆ ಒಂದು ಸಂಪರ್ಕಕೊಂಡಿಯನ್ನು ಜೋಡಿಸುತ್ತವೆ. ಸಾವು ಹೇಗೆ ಆಕಸ್ಮಿಕವೋ ಹಾಗೆಯೆ ಬಾಳು ಕ್ಷಣಿಕ ಎಂಬ ವ್ಯಾಖ್ಯಾನದ ಮೂಲಕ ಆ ಕೊಂಡಿ ತೆರಕೊಳ್ಳುತ್ತದೆ. ಹಾಗೆಯೆ ನಾನೀಗಾಗಲೆ ಹೇಳಿದ ಹಾಗೆ ಈ ಮಾತುಗಳು ಜೀವನದ ವ್ಯಾಖ್ಯಾನದ ಸಾಧಾರಣೀಕರಣವನ್ನೂ ಮಾಡುತ್ತವೆ.

ಮರೆವು ಮರೆವಿನ ಮಧ್ಯೆ ಬಾಳು ಎನ್ನುವ ಮಾತು ನೆನಪಾಗದೆ ಹೋಗುವುದು ಅಂತಲೂ ಮರೆಯಾಗುವ ವಿದ್ಯಮಾನ ಅಂತಲೂ ಎರಡೂ ಅರ್ಥಗಳಲ್ಲಿ ಇಲ್ಲಿ ಬಳಕೆ ಆಗುತ್ತದೆ. ಒಂದು ಜೀವ ಅಥವಾ ವಿದ್ಯಮಾನ ಮರೆಯಾದ ಕೂಡಲೆ ಬಾಳು ಮುಗಿಯುವುದಿಲ್ಲ; ಒಂದರ ಮರೆವು ಎನ್ನುವುದೆ ಇನ್ನೊಂದರ ಆರಂಭ ಆಗುತ್ತದೆ. ಹುಟ್ಟು ಮತ್ತು ಸಾವುಗಳ ವರ್ತುಲದ ಮದ್ಯದ ಬಾಳು ಗಳಿಗೆ ಫಕಫಕ ಎನ್ನುವಷ್ಟು ಕ್ಷಣಿಕ ಆದುದು ಎಂಬ ಬಾಳಿನ ಅಶಾಶ್ವತತೆ ಮತ್ತು ನಶ್ವರತೆಯನ್ನು ಈ ಮಾತು ಸೂಚಿಸುತ್ತದೆ. ನದಿ ಸಾಗರದ ಕಡೆಗೆ ಹೋಗಲು ಧಾವಿಸುವ ಧಾವಂತವೆ ಅದರ ಅಳಿವು ಕೂಡ ಹೇಗೆ ಹೌದೋ ಹಾಗೆ, ಮಿಂಚು ಕತ್ತಲೆಯನ್ನು ಓಡಿಸುವ ಕ್ರಿಯೆ ಹೇಗೆ ಕ್ಷಣಿಕ ಹೌದೋ ಹಾಗೆ ಪಾಂಡು ಮಾದ್ರಿಯರ ಬಾಳು ಆ ಕ್ಷಣದ ಬಾಳು ಮತ್ತು ಅದು ಸಾವಿಗೆ ಅಥವಾ ಅಳಿವಿಗೆ ಚಲಿಸುವ ಕ್ರಿಯೆ ಕೂಡ ಹೌದು ಅನ್ನುವುದನ್ನು ಈ ಭಾಗ ಸೂಚಿಸುತ್ತಿದೆ.

ಪೌರಾಣಿಕ ಕಥನದ ಹಿನ್ನೆಲೆಯನ್ನು ನೆನಪಿಸಿಕೊಂಡರೆ ಪಾಂಡುವಿನ ಜೊತೆಯಲ್ಲೆ ಮಾದ್ರಿ ಚಿತೆಗೆ ಏರಿ ಸತಿಯಾದ ವಿವರ ನಮಗೆ ತಿಳಿಯುತ್ತದೆ. ಅಂದರೆ ಮಾದ್ರಿ ಕೂಡ ಪಾಂಡುವಿನ ಸಾವಿನ ಸ್ವಲ್ಪ ಸಮಯದ ನಂತರ ಸಾಯುತ್ತಾಳೆ. ಅವಳ ಸಾವು ಕೂಡ ಅಷ್ಟು ಬೇಗ ಬರಬಹುದು ಅಂತ ಆಕೆ ತಿಳಿದಿದ್ದಳೆ ಎಂಬ ವಿವರ ಈ ಪದ್ಯದಲ್ಲಿ ಇಲ್ಲ. ಮಾದ್ರಿಯ ಸತಿ ಸಹಗಮನದ ಬಗ್ಗೆ ಈ ಪದ್ಯದಲ್ಲಿ ಯಾವುದೆ ವಿವರಗಳಿಲ್ಲ. ಅದರ ಜಿಜ್ಞಾಸೆಗು ಪದ್ಯ ಯತ್ನಿಸುವುದಿಲ್ಲ. ಸಮಾಗಮ ಮತ್ತು ಸಾವು ಹಾಗೂ ಜಿಂಕೆಯ ರೂಪದ ಕಿಂದಮನ ಶಾಪ ಇವುಗಳಷ್ಟೆ ಇಲ್ಲಿ ನಿರೂಪಣೆಗೆ ಗುರಿಯಾಗಿವೆ. ಈ ಶಾಪದ ವಿಚಾರವನ್ನು ಆನಂತರ ಕೈಗೆತ್ತಿಕೊಳ್ಳೋಣ.

ದೂರ ಗುಡಿಸಲಿನತ್ತ ಕತ್ತು ಬಗ್ಗಿಸಿ ಹುಬ್ಬು ಗಂಟಿಕ್ಕಿ ನಡೆದಾಳು ಕಣ್ಣೆಡವಿದಾಗ ಗಕ್ಕನೆ ನಿಂತ... ಎನ್ನುವ ಮಾತು ಪಾಂಡುವಿನ ನಡೆಯನ್ನೆ ಸೂಚಿಸುತ್ತದೆ. ನಡೆದಾಳು ಎನ್ನುವುದು ನಡೆದವಳು ಅಲ್ಲ, ನಡೆದ ಆಳು. ಕತ್ತು ಬಗ್ಗಿಸಿ ಹುಬ್ಬು ಗಂಟಿಕ್ಕಿ ನಡೆದ ಆ ಪಾಂಡುವಿಗೆ ಸಿಕ್ಕಿದ್ದು ಬಿಡಿಸಿದ ಒಗಟಿನ ಹಾಗೆ ತೆರೆದು ಮಲಗಿದ್ದ ಹೆಣ್ಣಿನ ದೇಹ. ತುಟಿ, ಕತ್ತು, ಮೊಲೆ ಹೊಕ್ಕುಳಿನ ಗುಣಿ. ತೊಡೆಗಪ್ಪು ಎಲ್ಲ ತೆರೆದು ಅಂಗಾತ ಮಲಗಿದ್ದ ಹೆಣ್ಣಿನ ದೇಹ. ಆ ದೇಹ ಕಂಡಾಗ ಆತನಿಗೆ ಕಟ್ಟೊಡೆದ ನದಿ ನುಗ್ಗಿ ಅಪ್ಪಳಿಸಿದಂತಾಗಿ ಎದೆ ನಿಂತೇ ಹೋಗುತ್ತದೆ. ಕಟ್ಟೊಡೆದ ನದಿ ನುಗ್ಗಿದ ಹಾಗೆ ಎನ್ನುವ ಹೋಲಿಕೆ ಅದುವರೆಗೆ ತಡೆದು ಹಿಡಿದಿದ್ದ ಲೈಂಗಿಕ ಭಾವನೆಗಳೆಲ್ಲ ಒಮ್ಮೆಗೇ ಒಡೆದು ನುಗ್ಗಿದುದರ ಅನ್ಯೋಕ್ತಿ. ಬಲೆಯೊಳಗೆ ಜೇಡ ಕಾದಿರುವುದು ಗೊತ್ತಿದ್ದರೂ ನೂಲನ್ನು ಜಗ್ಗಲೇಬೇಕು. ಬಲೆ ಹೆಣೆದು ಜೇಡ ಕಾದಿರುವುದು ಇಲ್ಲಿ ಹೆಣ್ಣು ತನ್ನ ದೇಹವನ್ನು ಒಡ್ಡಿ ಅಂಗಾತ ಮಲಗಿರುವುದರ ಅನ್ಯೋಕ್ತಿ. ಹೆಣ್ಣೇ ಜೇಡ. ಹೆಣ್ಣಿನ ದೇಹದ ಅಂಗಾಂಗಗಳೇ ಬಲೆ. ಬಲಿಯಾಗುವುದು ಖಾತ್ರಿ. ಆದರೂ ನೂಲನ್ನು ಜಗ್ಗಲೇಬೇಕು. ಅವ್ಯಕ್ತವಾದರೆ ಬದುಕು ಸಾರ್ಥಕವೇನು? ಸಾವು ಬರುವುದಾದರೂ ನೂಲು ಜಗ್ಗುವುದೆ ಸಾರ್ಥಕತೆ. ಅಂತಹ ಒಂದು ಇಂಗಿತ ಇಲ್ಲಿ ಕಾಣುತ್ತದೆ. ಆದರೆ ʻಗೊತ್ತು. ಜೇಡ ಕಾದಿದೆ ಬಲೆಯೊಳಗೆ, ಗೊತ್ತು.ʼ ಎಂಬ ಮಾತನ್ನು ಸಾಂಕೇತಿಕವಾಗಿ ನಾವು ಕಾಮ ಮತ್ತು ಅದರ ಅನಿವಾರ್ಯತೆ ಎಂತಲೇ ತೆಗೆದುಕೊಳ್ಳಬೇಕು.

ಈ ಕವಿತೆಯಲ್ಲಿ ದಡಗಳಿಕ್ಕಟ್ಟಿನಲ್ಲಿ ಸಿಕ್ಕ ನದಿ, ಸಾಗರದ ಕಡೆ ತುಡಿಯುವ ನದಿ, ಕಟ್ಟೊಡೆದ ನದಿ ನುಗ್ಗಿ ಅಪ್ಪಳಿಸಿದಂತಾಗುವುದು, ದಡವೊಡೆದ ನದಿ ನುಗ್ಗಿದ ಹಾಗೆ ಆಗುವುದು ಹೀಗೆ ನಾಲ್ಕು ಕಡೆ ನದಿಯ ಪ್ರಸ್ತಾಪ ಬರುತ್ತದೆ. ನದಿಯನ್ನು ಪ್ರಕೃತಿ ಸಹಜ ಹರಿವುಳ್ಳ ಭಾವನೆಗಳ ಮೊತ್ತಕ್ಕೆ ಸಂಕೇತವಾಗಿ ಇಲ್ಲಿ ಬಳಸಲಾಗಿದೆ. ಮಾನವ ಒಡ್ಡು ಕಟ್ಟಿದ ನದಿಯ ಹಾಗೆ, ದಡಗಳ ನಡುವೆ ಇಕ್ಕಟ್ಟಿನಲ್ಲಿ ಸಿಕ್ಕ ನದಿಯ ಹಾಗೆ ಬದುಕಬಾರದು ಎಂಬ ಇಂಗಿತ ಇಲ್ಲಿ ಇರುವಂತಿದೆ. ಈ ದಡ ಮಾನವರ ಬಾಳಿನಲ್ಲಿ ನಿಯಮಗಳ ದಡವೂ, ಹುಟ್ಟು ಸಾವುಗಳ ದಡವೂ ಆಗಬಹುದು. ಹಾಗೆಯೆ ಈ ಕವಿತೆಯಲ್ಲಿ ಹುಟ್ಟು ಸಾವುಗಳನ್ನು ಚಲನೆಯ ಆರಂಭ ಮತ್ತು ಅಂತ್ಯ ಎನ್ನುತ್ತಲೆ ಅದನ್ನೊಂದು ವರ್ತುಲ ಎನ್ನಲಾಗಿದೆ. ಹುಟ್ಟಿನಿಂದ ಆರಂಭವಾದ ಚಲನೆ ಸಾವಿನಲ್ಲಿ ಮುಕ್ತಾಯಗೊಂಡು ಅಲ್ಲಿಗೆ ಒಂದು ವರ್ತುಲ ಪೂರ್ಣಗೊಂಡ ಹಾಗೆ ಎನ್ನಲಾಗಿದೆ. ಹಾಗಾಗಿ ಇಲ್ಲಿ ಎರಡು ಬಗೆಯ ಚಲನೆಗಳಿವೆ. ಪಾಂಡು ದೂರ ಗುಡಿಸಲಿಗೆ ನಡೆಯುವ ನೇರ ಚಲನೆ ಮತ್ತು ಅದೆ ಪಾಂಡು ಸಾವಿಗೆ ನಡೆಯುವ ವರ್ತುಲ ಚಲನೆ; ಇವು ಇಲ್ಲಿನ ಅಂತಹ ಎರಡು ಚಲನೆಗಳು.

ದಾಂಪತ್ಯವನ್ನು ಕಾಮದ ಆಚೆಗು ನೋಡಲು, ಮನುಕುಲದ ಮುಂದುವರಿಕೆಗೆ ನಾವು ಮಾಡಿಕೊಂಡ ಒಪ್ಪಂದ ಎಂಬ ವ್ಯಾಖ್ಯಾನದ ಆಚೆಗು ಅದನ್ನು ನೋಡಲು ಸಾಧ್ಯವಿಲ್ಲವೆ? ಕೂಟರಹಿತ ದಾಂಪತ್ಯದ ಕಲ್ಪನೆಯ ಬಗೆಗೆ ಚಿಂತನೆ ನಡೆಸಲು ಈ ಕವಿತೆ ಅವಕಾಶ ನೀಡುತ್ತದೊ? ಎಂದರೆ ಇದೆಲ್ಲ ಓದುಗರ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಕವಿತೆ ಈ ನೆಲೆಯಲ್ಲಿ ಯಾವುದೆ ನಿರ್ಬಂಧಗಳನ್ನು ಹಾಕುವುದಿಲ್ಲ. ಹಾಗೆ ನೋಡಿದರೆ ಓದುಗನಿಗೆ ಆ ಎಲ್ಲ ಕಡೆ ಯೋಚಿಸಲು ಕವಿತೆ ಪ್ರಚೋದನೆ ನೀಡುತ್ತದೆ. ಪಾಂಡು ಮಾದ್ರಿಯರ ದಾಂಪತ್ಯದ ಸಮಗ್ರ ಚಿತ್ರಣ ಕೊಡುವ ಕೆಲಸ ಕವಿತೆಯ ಒಡಲಲ್ಲಿ ಇಲ್ಲ. ಒಂದು ಸಂಜೆಯಿಂದ ಬೆಳಗಿನ ಜಾವದವರೆಗಿನ ಪಾಂಡು ಮಾದ್ರಿಯರ ಕೂಟವನ್ನು ಮಾತ್ರ ಈ ಕವಿತೆ ಹೇಳಿ ಅದರ ಮೂಲಕ ಕೆಲವು ಪ್ರಶ್ನೆಗಳನ್ನೂ ಒಂದೆರಡು ವ್ಯಂಗ್ಯವಾದ ನಿರೂಪಣೆಗಳನ್ನೂ ಮಾಡುತ್ತದಷ್ಟೆ. ಅಷ್ಟರ ಮಟ್ಟಿಗೆ ಇದೊಂದು ಕೂಟದ ಕುರಿತ ಕವಿತೆಯಷ್ಟೆ. ಕೂಟವು ಹೊಸಸೃಷ್ಟಿಯ ಕಾರ್ಯ ಹೇಗೋ ಹಾಗೆಯೆ ಸಾವಿನ ಚಲನೆಯು ಆಗಿರುವುದೆ ಬದುಕಿನ ವಿಸ್ಮಯ ಎಂಬ ನಿರೂಪಣೆ ಇಲ್ಲಿದೆ.

ಇನ್ನು ಕೊನೆಯಲ್ಲಿ ಈ ಕವಿತೆಯ ಶೀರ್ಷಿಕೆ ಕಿತ್ತು ಹಾಕಿ ಯಾರಿಗಾದರೂ ಓದೋಕೆ ಕೊಟ್ಟೆವು ಅಂದುಕೊಳ್ಳೋಣ. (ಹಾಗೆ ಯಾಕೆ ಮಾಡಬೇಕು ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ) ಆಗ ಏನಾಗಬಹುದು? ಈ ಕವಿತೆಯ ಕೆಲವು ಸಾಲುಗಳಿಗೆ ನಾವು ಹಿನ್ನೆಲೆ ತಿಳಿಯಲು ಸಾಧ್ಯವಾಗದೆ ಹೋಗಬಹುದು. ಆದಾಗ್ಯೂ ಈ ಕವಿತೆಯ ಓದು ಜನರಲ್ಲಾಗಿ ತನ್ನದೇ ಅರ್ಥಛಾಯೆಗಳನ್ನು ಒದಗಿಸುತ್ತದೆ. ಪಾಂಡು ಮಾದ್ರಿಯ ಪೌರಾಣಿಕ ಹಿನ್ನೆಲೆ ಇಲ್ಲದೆಯೂ ಇದೊಂದು ಸ್ವತಂತ್ರ ಕವಿತೆ ಆಗಿ ನಮಗೆ ಹಲವು ವಿಚಾರಗಳ ಬಗೆಗೆ ಅದರಲ್ಲು ಬದುಕಿನ ಸಾರ್ಥಕತೆ ಬಗೆಗೆ ಜಿಜ್ಞಾಸೆ ನಡೆಸಲು ಅನುವು ಮಾಡಿಕೊಡುತ್ತದೆ. ಈ ದೃಷ್ಟಿಯಿಂದ ಇದು ಒಂದು ಪುರಾಣಪ್ರತಿಮೆ ಇರುವ ಕವಿತೆಯೂ ಹೌದು ಹಾಗೆಯೆ ಆ ಚೌಕಟ್ಟಿಲ್ಲದೆ ಓದಬಹುದಾದ ಕವಿತೆಯೂ ಹೌದು.

ಇನ್ನು ಶಾಪದ ಬಗ್ಗೆ ಒಂದು ಚಿಕ್ಕ ಜಿಜ್ಞಾಸೆ ಬೆಳೆಸಬಹುದು: ನಮ್ಮ ಸಾಹಿತ್ಯದಲ್ಲಿ ಉಕ್ತವಾಗಿರುವ ಶಾಪಗಳ ಆಶಯ ಮತ್ತು ಉದ್ದೇಶಗಳ ಬಗ್ಗೆ ನಮ್ಮಲ್ಲಿ ಸಾಕಷ್ಟು ಗ್ರಂಥಗಳು ಬಂದಿವೆ. ನಮ್ಮ ಜನಪದರಲ್ಲು ಸಾಪಳಿಸುವ ಕಾರ್ಯದ ಬಗ್ಗೆ ಸಾಕಷ್ಟು ಸಂಕಥನ ಸೃಷ್ಟಿಯಾಗಿದೆ. ಆದಾಗ್ಯೂ ವಿಜ್ಞಾನಬುದ್ಧಿ ಮತ್ತು ವೈಚಾರಿಕ ದೃಷ್ಟಿಯನ್ನು ರೂಢಿಸಿಕೊಂಡಿರುವ ನಾವುಗಳು ಈ ಬಗ್ಗೆ ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಟಿಗಳಿಂದ ನೋಡಿದರೆ ನಮ್ಮ ಪೂರ್ವಿಕರು ಒಂದೊಂದು ಶಾಪದ ಸಂಕಥನವನ್ನು ಸೃಷ್ಟಿಸುವಾಗಲು ಭಿನ್ನ ಭಿನ್ನವಾದ ಉದ್ದೇಶಗಳಿಂದ ಆ ಶಾಪಗಳನ್ನು ಸೃಷ್ಟಿಸಿರುವುದನ್ನು ಗಮನಿಸಬಹುದು.

ಪಾಂಡು ಮಾದ್ರಿಯರ ಶಾಪವನ್ನು ನೋಡಿದರೆ ಪಾಂಡುವಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲದಿದ್ದ ಕಾರಣಕ್ಕೆ ಇಂತಹ ಒಂದು ಶಾಪ ಸಂಕಥನ ಸೃಷ್ಟಿಯಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಮಕ್ಕಳನ್ನು ರಾಣಿಯರು ಹೆರುವುದು ಅವರ ರಾಜ್ಯದ ವಂಶಾಡಳಿತಕ್ಕೆ ಅತ್ಯಗತ್ಯ. ಆದರೆ ಕಟ್ಟಿಕೊಂಡ ಗಂಡನಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲದಾಗ ಹೆಣ್ಣಾದವಳು ಏನು ಮಾಡಬೇಕು? ಅದಕ್ಕೆ ನಮ್ಮ ಸಮಾಜ ಹಲವು ಕಾಲಗಳಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇಲ್ಲಿ ಪಾಂಡುವಿನ ಹೆಂಡತಿಯರಾದ ಕುಂತಿ ಮತ್ತು ಮಾದ್ರಿ ದೇವತೆಗಳಿಂದ ವರ ಪಡೆದು ಮಕ್ಕಳನ್ನು ಹಡೆದಂತೆ ಕಥನ ಕಟ್ಟಲಾಗಿದೆ. ಅಂದರೆ ಪಾಂಡವರ ಜನನದ ಜೈವಿಕ ಗುಟ್ಟನ್ನು ಅಡಗಿಸಲು ಹೆಣೆದಿರುವ ಕಥನ ಇದು ಎಂದೆ ನಾವು ಭಾವಿಸಬೇಕು.

ಯಾವನೆ ಒಬ್ಬ ರಾಜ ಯಾವುದೆ ಒಂದು ಜಿಂಕೆಯ ಜೋಡಿಯನ್ನು ಅವು ಕೂಟದಲ್ಲಿ ಇದ್ದಾಗ ಬೇಟೆ ಆಡುವುದು ಅತಿ ಕ್ರೂರವಾದ ಆಟ. ಮೃಗೀಯವಾದ, ಅಮಾನವೀಯವಾದ ಆಟ. ಇಂತಹ ಕ್ರೂರವಾದ ಆಟದಲ್ಲಿ ತೊಡಗುವುದನ್ನು ನಿಷೇಧಿಸಲು ಬೇಕಾದ ಸಂಕಥನವನ್ನು ಕಟ್ಟುವುದು ಕೂಡ ಇಲ್ಲಿನ ಒಂದು ಉದ್ದೇಶ ಇರಬಹುದು. ಇನ್ನೊಂದೆಡೆ ಲೈಂಗಿಕತೆ ಎನ್ನುವುದು ದಾಂಪತ್ಯದ ಚೌಕಟ್ಟಿನಲ್ಲೆ ಇದ್ದಾಗಲು, ಪ್ರಕೃತಿಸಹಜ ಪ್ರಚೋದನೆಗಳು ಇದ್ದಾಗಲು ಅದನ್ನು ನಿಗ್ರಹಿಸಿ ಬದುಕಬೇಕು ಎಂಬ ಸಂದೇಶವನ್ನು ಕೊಡುವುದು ಇದರ ಇನ್ನೊಂದು ಉದ್ದೇಶ ಇರಬಹುದು. ಈ ಎರಡು ಸದ್ಯಕ್ಕೆ ನನಗೆ ಕಾಣುವ ಈ ಶಾಪದ ಆಶಯಗಳು. ಈ ಹಿನ್ನೆಲೆಯಲ್ಲಿ ಶರ್ಮರ ನಿರೂಪಣೆ ನಮಗೆ ಶಾಪದ ವಿಚಾರದ ಬಗ್ಗೆ ಯಾವುದೆ ಪ್ರಶ್ನೆಗಳನ್ನು ಎತ್ತದೆ ಬದುಕಿನ ಸಾರ್ಥಕತೆ ಬಗೆಗೆ, ಧರ್ಮಕರ್ಮದ ಬಗೆಗೆ ತಲೆ ಕೆಡಿಸಿಕೊಳ್ಳದೆ, ಸಾವಿನ ಕಡೆಗೆ ಚಲಿಸಬಹುದಾದ ಅನಿವಾರ್ಯತೆ ಬಗೆಗು ತಲೆ ಕೆಡಿಸಿಕೊಳ್ಳದೆ ಸಹಜ ಬದುಕು ಬದುಕುವ ಬಗೆಗೆ ಒತ್ತನ್ನು ನೀಡುವಂತೆ ಕಾಣುತ್ತದೆ.

ಇನ್ನು ಇದರ ರಾಚನಿಕತೆ ಕುರಿತು ಒಂದೆರಡು ಮಾತು. ಅದುವರೆಗೆ ನವೋದಯದಲ್ಲಿ ಪ್ರಚಾರಕ್ಕೆ ಬಂದಿದ್ದ ಚೌಪದಿ ಚೌಕಟ್ಟನ್ನು ಇಲ್ಲವೆ ಷಟ್ಪದಿ ಚೌಕಟ್ಟನ್ನು ಮೀರಿದ ಐದು ಸಾಲುಗಳ ಚೌಕಟ್ಟಿನಲ್ಲಿ ರಚನೆ ಆಗಿರುವ ಪದ್ಯವಿದು. ಇಲ್ಲಿ ನಿರೂಪಣೆಯ ನೆಲೆಯಲ್ಲಿ ಸಾಂಕೇತಿಕ ನವ್ಯ ನಿರೂಪಣೆ ಇದ್ದರೂ ಪುರಾಣ ಪ್ರತಿಮೆಯನ್ನು ಬಳಸಿದ ಜೀವನದ ವ್ಯಾಖ್ಯಾನ ಇರುವುದನ್ನು ಕಾಣಬಹುದು. ಇಲ್ಲಿನ ಶಬ್ದಗಳ ಬಳಕೆ ಅಡಿಗರ ಬಳಕೆಯ ರೀತಿಯ ತೀರಾ ಎಚ್ಚರದ ಕಟ್ಟಾಣಿಕೆ ಅಲ್ಲ. ಭರವಸೆಯ ವ್ಯವಸಾಯ. ಸಹಜಸಂಭವಿತನವನ್ನು ಸಾಧಿಸಲು ಇಲ್ಲಿ ಯತ್ನಿಸಲಾಗಿದೆ. ಇಲ್ಲಿನ ಐದೈದು ಸಾಲುಗಳಲ್ಲಿ ಒಂದೊಂದು ವಿಚಾರ ಮುಗಿಯುವುದಿಲ್ಲ. ವಿಚಾರದ ಹರಿವು ಮೊದಲ ಕಂಡಿಕೆಯಿಂದ ನಂತರದ ಕಂಡಿಕೆಗು ಹರಿಯುತ್ತದೆ. ಹಾಗಾಗಿ ಇಲ್ಲಿ ಐದು ಪಾದಗಳ ರಾಚನಿಕತೆ ನಿಜವಾಗಿಯು ಒಡೆದುಹೋಗುತ್ತದೆ. ಮುಕ್ತಛಂದವೆ ಇದರ ನಿಜವಾದ ರಚನಾಚೌಕಟ್ಟು. ಆದರೂ ಅದನ್ನು ಐದೈದು ಪಾದಗಳಲ್ಲಿ ಮುರಿದು ಕಟ್ಟಲು ಯತ್ನಿಸಲಾಗಿದೆಯಷ್ಟೆ. ಉದಾಹರಣೆಗೆ ನೋಡಿ: ನದಿ ಸಾಗರದ ಕಡೆ ಮಿಂಚು ಕತ್ತಲೆಯ ಕಡೆ ತುಡಿತುಡಿದು ಕಡೆಗೆ ಹೆಸರು ಕಳಕೊಂಡರೇ ಎಂಬಲ್ಲಿಗೆ ಕಂಡಿಕೆ ಮುಗಿದರೂ, ಕಣ್ಣಿಗೆ ಐದು ಪಾದದ ಕಂಡಿಕೆ ಮುಗಿದಂತೆ ಕಂಡರೂ, ನಾವು ಓದುವಾಗ ನಿಲ್ಲಿಸುವುದೆ ಮುಂದಿನ ಕಂಡಿಕೆಯ ಮೋಕ್ಷ ಎಂಬ ಪದಕ್ಕೆ. ಪೂರ್ಣವಿರಾಮ ಕೂಡ ಅಲ್ಲೆ ಇದೆ. ಓದಿನ ವಿರಾಮ ಕೂಡ ಅಲ್ಲೆ ಅಗುತ್ತದೆ. ಹೀಗಾಗಿ ಕಣ್ಣಿಗೆ ಕಾಣುವ ಪಾದಗಳನ್ನು ಮುರಿದು ಕಟ್ಟಿದ ರೂಪಕ್ಕು ಓದಿಗೆ ದಕ್ಕುವ ನಾದಲಯದ ವಿನ್ಯಾಸಕ್ಕು ಇಲ್ಲಿ ವ್ಯತ್ಯಾಸವಿದೆ.

ಪುರಾಣ ಪ್ರತೀಕ, ಪ್ರಸಂಗಪ್ರತೀಕ, ದಾಂಪತ್ಯಪ್ರತೀಕಗಳನ್ನು ಇಲ್ಲಿ ಬಳಸಲಾಗಿದೆ. ಇಲ್ಲಿ ಬಳಸಿರುವ ಹಲವಾರು ಸಾಂಕೇತಿಕ ಪದಗುಚ್ಛಗಳು, ರೂಪಕಾತ್ಮಕ ಪದಕಂತೆಗಳು ಓದುಗರಿಗೆ ಅವರೇ ತಮ್ಮ ವ್ಯಾಖ್ಯಾನವನ್ನು ಕಟ್ಟಿಕೊಳ್ಳಲು ದಾರಿ ಮಾಡಿಕೊಡುತ್ತವೆ. ಕವಿತೆ ತನಗೆ ಏನನ್ನು ಕಟ್ಟಿಕೊಡುತ್ತದೆ ಎಂಬುದನ್ನು ಓದುಗನೂ ಕಲ್ಪಿಸಿ, ತರ್ಕಿಸಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶವಿದೆ. ತಮ್ಮದೆ ತತ್ವಜ್ಞಾನವನ್ನು ಮಂಡಿಸಲು ಮಾನವ ಪಾತ್ರಗಳ ಜೊತೆಗೆ ಪ್ರಕೃತಿಯ ಅಂಗಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಗಿಡ, ಗುಡ್ಡ, ಸಂಜೆ, ನದಿ, ಸಾಗರ, ಆಕಾಶ, ತೋಟ, ಮಂಜು, ತಂಗಾಳಿ, ನೆಲ, ಹುಲ್ಲು ಹಾಸಿಗೆ ಹೀಗೆ ಇಲ್ಲಿ ಹಲವು ಪ್ರಕೃತಿಯ ಅಂಗಗಳನ್ನು ಬಳಸಲಾಗಿದೆ. ಪಾಂಡು ಮಾದ್ರಿಯ ಜೊತೆಗೆ ಇಲ್ಲಿ ಪಾದ್ರಿ, ದಾಂಡಿಗ ಹುಡುಗ ಇವರೂ ಪ್ರತಿಮೆಗಳಾಗಿ ಬಳಕೆ ಆಗಿದ್ದಾರೆ.

ದೂರ ಯಾವುದೋ ಊರಾಚೆ ಪಾದ್ರಿಯ ಪ್ರಸ್ತಾಪವನ್ನು ಇಲ್ಲಿ ಮಾಡುವ ಮೂಲಕ ಈ ಕವಿತೆಯನ್ನು ಭಾರತೀಯ ಪುರಾಣ ಪ್ರತೀಕದಿಂದ ಜಾಗತಿಕ ಕ್ರಿಶ್ಚಿಯನ್‌ ನಡಾವಳಿಗು ಕೊಂಡಿ ಹಾಕುವ ಯತ್ನ ಮಾಡಲಾಗಿದೆ. ಹಾಗೆಯೆ ಆತ ಧರ್ಮಕರ್ಮದ ಪಾಠವನ್ನು ಉರುಹಚ್ಚುತ್ತ ತನ್ನೊಳಗೆ ತಾನೆ ನಗುವ ಪ್ರಸ್ತಾಪ ಮಾಡುವುದು ತಾನು ಯಾವ ನೀತಿ ನಿಯಮಗಳನ್ನು ಹೇಳುತ್ತಾನೊ ಆ ನಿಯಮಗಳನ್ನು ಪಾಲಿಸಬೇಕೆಂಬ ಶ್ರದ್ಧೆ ಅವನಲ್ಲೆ ಇಲ್ಲದಿರುವ ಸ್ಥಿತಿಯನ್ನೂ ಇದು ಸೂಚಿಸುತ್ತಿದೆ. ಹಾಗೆಯೆ ಪಾದ್ರಿ ಎಂದರೆ ಪಾದ್ರಿ ಮಾತ್ರ ಎಂದೇನೂ ನಾವು ತೆಗೆದುಕೊಳ್ಳಬೇಕಿಲ್ಲ; ಆತ ಯಾವುದೆ ಮೌಲ್ವಿ ಇಲ್ಲವೆ ಪುರೋಹಿತನ ಸಂಕೇತವೂ ಆಗಬಲ್ಲ. ಅಂತಹ ಸಾಧ್ಯತೆಯೂ ಈ ಭಾಗದ ಓದಿನಲ್ಲಿ ನಮಗೆ ಹೊಳೆಯುತ್ತದೆ.

ತಲೆ ಸುತ್ತ ಗದೆ ಬೀಸುವ ದಾಂಡಿಗ ಹುಡುಗನ ಪ್ರಸ್ತಾಪವನ್ನು ಕೂಡ ಪ್ರತಿಮೆಯ ರೀತಿಯಲ್ಲೆ ಮಾಡಲಾಗಿದೆ. ಸಾವು ಕಣ್ಣೆದುರೆ ಇದ್ದರೂ ಯಾವುದೆ ಅಪಾಯಗಳನ್ನು ಲೆಕ್ಕಿಸದ ಹೊಸ ಹುಡುಗರ ಸಾಹಸ ಪ್ರವೃತ್ತಿಯ ಪ್ರತೀಕವನ್ನಾಗಿ ಧಾಂಡಿಗನನ್ನು ಇಲ್ಲಿ ಬಳಸಲಾಗಿದೆ ಎನ್ನಿಸುತ್ತದೆ. ಇಂತಹ ಹೊಸ ಪೀಳಿಗೆ ಬಗ್ಗೆ ಕವಿತೆ ಅಡ್ಡಮಾತನ್ನೇನೂ ಆಡದೆ ಅದನ್ನು ಧನಾತ್ಮಕವಾಗಿಯೆ ಪ್ರಸ್ತಾಪಿಸುತ್ತದೆ. ಹೀಗೆ ಕವಿತೆಯನ್ನು ಹಲವು ರೂಪಕ - ಪ್ರತಿಮೆಗಳ ತಂತ್ರವನ್ನು ಬಳಸಿ ಕಟ್ಟಲಾಗಿದೆ. ಹೀಗಾಗಿ ಕಟ್ಟಾಣಿಕೆಯ ದೃಷ್ಟಿಯಿಂದ ಇದೊಂದು ಸಹಜತೆ ಮತ್ತು ಎಚ್ಚರದ ರಚನೆಗಳು ಬೆರೆತ ಕಟ್ಟಾಣಿಕೆ.

ಇನ್ನು ಈ ಕವಿತೆ ಪಾಂಡುವಿನ ದನಿಗಾಗಲಿ ಮಾದ್ರಿಯ ದನಿಗಾಗಲಿ ಆದ್ಯತೆ ನೀಡಿಲ್ಲ. ಅವರ ಪಾತ್ರದ ಮೂಲಕ, ಅವರ ಭಾವನೆಗಳ ಮೂಲಕವೆ ಕಥನವನ್ನು ಕಟ್ಟುವುದು ಇಲ್ಲಿನ ನಿರೂಪಣಾ ಕ್ರಮವಲ್ಲ. ಇಲ್ಲಿರುವುದು ಮೂರನೆ ವ್ಯಕ್ತಿಯ ನಿರೂಪಣೆ. ಈ ಕವಿತೆಯಲ್ಲಿ ಒಬ್ಬ ನಿರೂಪಕ ಬರುತ್ತಾನೆ. ಆತ ಪಾಂಡು ಮಾದ್ರಿಯ ಪ್ರಸಂಗವನ್ನು ನಿರೂಪಿಸುತ್ತ, ನಿರೂಪಿಸುತ್ತ, ತನ್ನದೆ ವ್ಯಾಖ್ಯಾನವನ್ನು ಮಾಡುತ್ತ, ಆ ಮೂಲಕ ತನ್ನದೆ ತತ್ವಜ್ಞಾನವನ್ನು ಮಂಡಿಸುವ ಕೆಲಸವನ್ನು ಮಾಡುತ್ತಿದ್ದಾನೆ. ಹಾಗಾಗಿ ಇದೊಂದು ಮೂರನೆ ವ್ಯಕ್ತಿಯ ನಿರೂಪಣೆ ಇರುವ ವ್ಯಾಖ್ಯಾನಾತ್ಮಕ ಮತ್ತು ತತ್ವಮಂಡನಾ ರಚನೆ.

ಪುರಾಣ ಪ್ರತೀಕವನ್ನು ಹೊಸದಾಗಿ ವಿಮರ್ಶಿಸುವ ಇಲ್ಲವೆ ಅದನ್ನು ಸಂಪೂರ್ಣ ಒಪ್ಪಿ ಮರುನಿರೂಪಿಸುವ ಧೋರಣೆ ಈ ಕವಿತೆಯಲ್ಲಿಲ್ಲ. ಆದರೆ ಆಧುನಿಕ ಜೀವನ ತತ್ವಜ್ಞಾನವನ್ನು ಮಂಡಿಸಲು ಈ ಕವಿತೆಯು ಮಹಾಭಾರತದ ಈ ಪುರಾಣ ತುಣುಕನ್ನು ಒಂದು ಪ್ರಸಂಗ ಪ್ರತೀಕ ಆಗಿ ಬಳಸಿದೆ.

(ಮಸ್ಕಿಯ ಬಂಡಾರ ಪ್ರಕಾಶನದವರು ಏರ್ಪಡಿಸಿದ್ದ ಆನ್‌ಲೈನ್‌ ಕಾವ್ಯಚರ್ಚೆಯಲ್ಲಿ ಆಡಿದ ಮಾತುಗಳ ಲೇಖನ ರೂಪ. ಆಯೋಜಕರಿಗೆ ಧನ್ಯವಾದಗಳು)

 

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...