Date: 05-12-2025
Location: ಬೆಂಗಳೂರು
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕಾದಂಬರಿಯ ಆವರಣದ ತಾತ್ವಿಕತೆಯನ್ನು ರೂಪಿಸಿವೆ. ದೇಹದ ದಂದುಗದಲ್ಲಿ ಮುಳುಗಿದ ಪ್ರೊ. ಹನುಮಂತ ಒಂಟಿಮನಿ ಮರಣಾವಸ್ಥೆಯಲ್ಲಿದ್ದಾಗ ದೇಹಕ್ಕೆ ಇನ್ನೇನೋ ಬೇಕು ಎನ್ನುವ ಕನವರಿಕೆಯಾಗುತ್ತದೆ," ಎನ್ನುತ್ತಾರೆ ಹಳೆಮನೆ ರಾಜಶೇಖರ, ಉಜಿರೆ. ಅವರು ತಮ್ಮ ʻಓದಿನ ಹಂಗುʼ ಅಂಕಣದಲ್ಲಿ ಬರೆದ ʻಪುರುಷವತಾರ- ದೇಹ ಮೀಮಾಂಸೆಯ ಕಥನʼ ಲೇಖನ ನಿಮ್ಮ ಓದಿಗಾಗಿ..
ಡಾ. ಬಾಳಸಾಹೇಬರು ಲೋಕಾಪುರ ಅವರು ಪ್ರಾದೇಶಿಕ ಬಿತ್ತಿಯಿಂದ ಹೊರ ಬಂದು ಮನುಷ್ಯನ ಸಂಕೀರ್ಣತೆಯನ್ನು ಶೋಧಿಸುವ ಕಥನವನ್ನು ಕಟ್ಟಿದ್ದಾರೆ. ಪ್ರಾದೇಶಿಕ ವಿನ್ಯಾಸದ ಸಾಂಸ್ಕೃತಿಕ ಪರಿಸರದೊಂದಿಗೆ ತನ್ಮಯಗೊಳ್ಳುತ್ತಿದ್ದ ಅವರ ಕಥನ ಇಲ್ಲಿ ಹೊಸ ಹಾದಿಯನ್ನು ಹಿಡಿದಿದೆ. ಈ ಕಾದಂಬರಿಯ ಮೂಲಕ ಹೊಸ ಅನುಭವ ಜಗತ್ತೊಂದನ್ನು ನಿರೂಪಿಸುತ್ತಾರೆ. ದೇಹ ಅಭೀಪ್ಸೆಯನ್ನು ಕುರಿತು ಕಾದಂಬರಿ ಗಾಢವಾಗಿ ಅನ್ವೇಷಿಸುತ್ತದೆ. ಮನುಷ್ಯನ ಸಾಮಾಜಿಕ ಆವರಣಗಳು ಲೌಕಿಕದ ನೆಲೆಯಲ್ಲಿಯೇ ಮೈ ಪಡೆಯುತ್ತವೆ. ಲೌಕಿಕವನ್ನು ಮೀರುವ ಹುಸಿತನದ ಬಗ್ಗೆ ಕಾದಂಬರಿಗೆ ನಂಬಿಕೆಯಿಲ್ಲ. ಗತದ ಬಿಂಬಗಳು ತೀವ್ರವಾಗಿ ಕಾಡುತ್ತಾ ಬದುಕಿನ ಆವರಣವನ್ನು ರೂಪಿಸುವ ಒಂದು ಮಗ್ಗಲನ್ನು ಕಾದಂಬರಿ ಶೋಧಸುತ್ತದೆ. ಬದುಕಿನ ಲೌಕಿಕತೆಯು ಲೈಂಗಿಕ ಪಾತಳಿಯಲ್ಲಿದೆ ಎಂಬ ನಂಬಿಕೆ ಮೇಲ್ನೋಟಕ್ಕೆ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಮನುಷ್ಯನ ಕೇಡಿನ ಆಯಾಮಗಳು ಬದುಕಿನ ಸಂಕೀರ್ಣತೆಯ ಮೇಲೆ ಅಗಾಧ ಪರಿಣಾಮ ಬೀರುತ್ತವೆ ಎಂಬ ಅಂಶ ಕಾದಂಬರಿಯಲ್ಲಿ ಅಂತರವಾಹಿನಿಯಾಗಿ ಹರಿಯುತ್ತದೆ. ಕಾದಂಬರಿಯ ನಾಯಕ ಪ್ರೊ. ಹನುಮಂತಪ್ಪ ಒಂಟಿಮನಿ ತನ್ನ ಗತದೊಂದಿಗೆ ಮುಖಾಮುಖಿಯಾಗುತ್ತಾ ಸಾವನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತದೆ.
“ಸಹಜ ನಿನಗೆ ಗೊತ್ತಿರಲು ಸಾಧ್ಯವಿಲ್ಲ. ನ್ಯಾಸವೆಂದರೆ ಗಿರವಿ ಇಟ್ಟ ವಸ್ತು ಎಂದು ಅರ್ಥ. ನ್ಯಾಸ ಪದಾರ್ಥಗಳು ಎನ್ನುವದಿಲ್ಲವೆ ನಾವು ? ಅಂದರೆ ದೇವರು ಮಹಾ ಬಡವ. ಅವನು ತನ್ನಲ್ಲಿಯ ವಸ್ತುಗಳನ್ನು ನಮ್ಮಲ್ಲಿ ಗಿರವಿ ಇಟ್ಟಿದ್ದಾನೆ. ಕೈ, ಕಾಲು, ಕಣ್ಣು, ಕಿವಿ, ಸೌಂದರ್ಯ, ಶಕ್ತಿ ಇವೆಲ್ಲ ಅವನು ಇಟ್ಟ ನ್ಯಾಸ ಪದಾರ್ಥಗಳು. ತನಗೆ ಬೇಕಾದಾಗ ಅವನು ಬಂದು ತಾನು ಗಿರವಿ ಇಟ್ಟ ವಸ್ತುಗಳನ್ನು ಬಿಡಿಸಿಕೊಂಡು ಹೋಗುತ್ತಾನೆ. ಕಣ್ಣು ಹೋಗುತ್ತವೆ, ಕಿವಿ ಕೇಳಿಸುವದಿಲ್ಲ. ನಡೆಯಲು ಶಕ್ತಿ ಇಲ್ಲ. ಕೊನೆಗೆ ಜೀವ ಇಲ್ಲ. ಅದಕ್ಕೆ ಜನ ದುಃಖಪಡುತ್ತಾರೆ. ಗಿರವಿ ಮಾಲನ್ನು ಬಿಡಿಸಿಕೊಂಡು ಹೋದರೆ ಯಾರಾದರೂ ಅಳುತ್ತಾರೆಯೇ . ಅವು ನನ್ನ ವಸ್ತುಗಳೇ ಎಂದು ಕೊಂಡವ ಅಳುತ್ತಾನೆ. ಹಾಗಾಗಿ ನ್ಯಾಸ ಬಿಟ್ಟವನೇ ಸನ್ಯಾಸಿ. ಸನ್ಯಾಸಿ ಆದವನಿಗೆ ತನ್ನ ಅವಯುವಗಳು ದೇವರು ಕೆಲವು ದಿನ ತನ್ನಲ್ಲಿ ಗಿರವಿ ಇಟ್ಟ ವಸ್ತುಗಳು ಎನ್ನುವದು ತಿಳಿದಿರುತ್ತದೆ. ಅದಕ್ಕಾಗಿ ಅವನು ಅಳುವುದಿಲ್ಲ. ಅವನೇ ಜ್ಞಾನಿ. ನಿನಗೆ ನಿನ್ನದಲ್ಲದ ನಿನ್ನ ದೇಹದ ಮೇಲೆ ಮೋಹ ಇರದಿದ್ದರೆ ನೀನೂ ಸನ್ಯಾಸಿಯೇ. ಮೋಹ ಇದೆ ಎಂದಾದರೆ ನೀನು ಸನ್ಯಾಸಿ ಅಲ್ಲ. ಬರೀ ವೇಶಗಾರ.’’
“ನೋಡು ಕೃತಜ್ಞತೆಯ ಅಶೆಯಿಂದ ಯಾರಿಗಾದರೂ ಸಹಾಯ ಮಾಡುವದಾದರೆ ಅದು ಸನ್ಯಾಸಿಯ ನಡೆಯಲ್ಲ. ಭೂಮಿ ನಮಗೆ ಇಷ್ಟೆಲ ಕೊಟ್ಟಿದೆ. ಪ್ರತಿಯಾಗಿ ಅದು ನಮ್ಮಿಂದ ಏನನ್ನೂ ಬೇಡಿಲ್ಲ. ನಾನು ನನ್ನ ಶ್ಯಾಟಿಯನ್ನು ಚಳಿಇದ್ದರೂ ರಾತ್ರಿ ಹೊಚ್ಚಿಕೊಳ್ಳದೆ ಗುರುಗಳಿಗಾಗಿ ತ್ಯಾಗ ಮಾಡಿದೆ ಎನ್ನೋದಿದೆಯಲ್ಲಾ ಇದು ಅಪಾಯಕಾರಿ. ಪಡೆವ ಅಹಂಕಾರಕ್ಕಿಂತಲೂ ತ್ಯಾಗದ ಅಹಂಕಾರ ನಮ್ಮನ್ನು ಧರ್ಮಲಂಡರನ್ನಾಗಿ ಮಾಡುತ್ತದೆ’’
`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕಾದಂಬರಿಯ ಆವರಣದ ತಾತ್ವಿಕತೆಯನ್ನು ರೂಪಿಸಿವೆ. ದೇಹದ ದಂದುಗದಲ್ಲಿ ಮುಳುಗಿದ ಪ್ರೊ. ಹನುಮಂತ ಒಂಟಿಮನಿ ಮರಣಾವಸ್ಥೆಯಲ್ಲಿದ್ದಾಗ ದೇಹಕ್ಕೆ ಇನ್ನೇನೋ ಬೇಕು ಎನ್ನುವ ಕನವರಿಕೆಯಾಗುತ್ತದೆ. ಮರ್ಮಾಂಗದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದ ಪ್ರೊ. ಹನುಮಂತ ಒಂಟಿಮನಿ ತಾನು ಕಳೆದ ಜೀವನವನ್ನು ನೆನಪು ಮಾಡಿಕೊಳ್ಳುವುದೆ ಕಾದಂಬರಿಯ ನಿರೂಪಣೆಯಾಗಿದೆ. ಸ್ವಗತದ ರೀತಿಯಲ್ಲಿ ತಾನು ಕಳೆದ ಬದುಕನ್ನು ನೆನಪು ಮಾಡಿಕೊಳ್ಳುತ್ತಾ ದೇಹದ ಹಂಗನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ. ದೇಹದ ತೀವ್ರತೆಯನ್ನು ಅನುಭವಿಸುತ್ತಲೇ ಅನಾಥ ಪ್ರಜ್ಞೆಯ ಶೂನ್ಯತೆಯು ಕಾಡುತ್ತಾ ಹೋಗುತ್ತದೆ. ಬಾಲ್ಯದಿಂದಲೂ ಒಂಟಿಯಾದ ಹನುಮಂತಪ್ಪ ಬದುಕನ್ನು ಕಟ್ಟಿಕೊಳ್ಳಲು ಅಗ್ನಿಕುಂಡಗಳನ್ನೇ ಆಯ್ದು ಬರುತ್ತಾನೆ.
ಬಾಲ್ಯದಲ್ಲಿಯೇ ಗಂಡು ಹೆಣ್ಣಿನಿಂದ ಅತ್ಯಚಾರಕ್ಕೊಳಗಾದ ಪ್ರೊ. ಹನುಮಂತಪ್ಪ ಒಂಟಿಮನಿಗೆ ಗಂಡು ಹೆಣ್ಣಿನ ನೈತಿಕ ಸಂಬಂಧಗಳಲ್ಲಿ ನಂಬಿಕೆ ಉಳಿಯುವದಿಲ್ಲ. ಲೋಕವನ್ನು ಆತ ಅನುಭೋಗದ ದೃಷ್ಟಿಯಿಂದಲೇ ಕಾಣುತ್ತಲೇ ಹೋಗುತ್ತಾನೆ. ಅಮ್ಮನನ್ನು ಕಳೆದುಕೊಂಡು ಅಕ್ಕನ ಕಕ್ಕುಲಾತಿಯ ತೊಡೆಯ ಮೇಲೆ ಬೆಳೆದರೂ ಅಕ್ಕನ ಪ್ರೀತಿಗಿಂತ ಅತ್ಯಾಚಾರದ ನೆನಪುಗಳೇ ಗಾಢವಾಗಿ ಕಾಡುತ್ತವೆ. ಆತ ಅನುಭವಿಸಿದ ಹಸಿವು ಅಪಮಾನಗಳು ಲೋಕಹಿತವನ್ನು ಮೀರುವಂತೆ ಮಾಡುತ್ತವೆ. ಅತಂತ್ರ, ಆತಂಕ, ಅನಿಶ್ಚಿತತೆ, ಅಭದ್ರತೆಯಲ್ಲಿ ಬೆಳೆದ ಒಂಟಿಮನಿ ಬದುಕಿನಲ್ಲಿ ಹಲವು ದಾರಿಗಳನ್ನು ತುಳಿಯುತ್ತಾನೆ. ವಿದ್ಯಬ್ಯಾಸಕ್ಕಾಗಿ ಮತ್ತು ಹಸಿವನ್ನು ತಣಿಸಿಕೊಳ್ಳಲು ತನ್ನ ಜಾತಿಯನ್ನು ಮರೆ ಮಾಚಿ ಸುಳ್ಳು ಹೇಳಿ ಹಾಸ್ಟೆಲ್ ಸೇರುತ್ತಾನೆ. ಅಲ್ಲಿ ಆತನ ನಿಜ ಜಾತಿ ಗೊತ್ತಾಗಿ ದೊಡ್ಡ ಅಪಮಾನಕ್ಕೆ ಒಳಗಾಗುತ್ತಾನೆ. ಆಗ ಈತನಿಗೆ ಬಾಬುರಾವ್ ಕರಂದಿಕರ್ ಮೇಷ್ಟ್ರು ಆಶ್ರಯ ನೀಡುತ್ತಾರೆ. ಬಾಬುರಾವ್ ಕರಂದಿಕರ್ ದಂಪತಿಗಳು ಮಗನಂತೆ ನೋಡಿಕೊಂಡು ಅನ್ನ, ಪ್ರೀತಿ ಕೊಡುತ್ತಾರೆ. ಮೇಷ್ಟ್ರು ದೊಡ್ಡ ಮಗಳು ಮದುವೆಯಿಲ್ಲದೆ ಬಸುರಿಯಾಗುತ್ತಾಳೆ. ಆ ಅಪವಾದ ಈತನ ಮೇಲೆ ಬರುತ್ತದೆ. ಬಸುರಿಗೆ ಆಕೆಯ ಮಾವನೆ ಕಾರಣ ಎಂದು ಗೊತ್ತಿದ್ದರೂ ಅವನೊಳಗೂ ಅನುಮಾನದ ಹುತ್ತ ಏಳುತ್ತದೆ. ಈ ಘಟನೆ ಒಂಟಿಮನಿ ಮನಸ್ಸನ್ನು ಘಾಸಿಗೊಳಿಸುತ್ತದೆ. ಮನೆಯಿಂದ ಹೊರ ಹಾಕುತ್ತಾರೆ. ಅಪಮಾನ ತಾಳದೆ ಮೇಷ್ಟ್ರು ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ತುತ್ತು ನೀಡಿದವರಿಗೆ ದ್ರೋಹ ಬಗೆದೆ ಎಂಬ ವ್ಯಸನ ಕಾಡುತ್ತದೆ.
ಹೇಗೋ ಅಲ್ಲಿ ಇಲ್ಲಿ ದುಡಿದು ಸ್ನಾತಕೋತ್ತರ ಪದವಿ ಮುಗಿಸುತ್ತಾನೆ. ಉದ್ಯೋಗ ಸಿಗುವುದಿಲ್ಲ. ಗೋಸಾಯಿ ಗುರುವಿನ ದಾರಿ ಹಿಡಿಯುತ್ತಾನೆ. ಗುರುವಿನೊಂದಿಗೆ ಸುಮ್ಮನೆ ಜೀವಿಸುತ್ತಾನೆ. ಆ ಗುರುವು ಸಂಪೂರ್ಣ ಆತ್ಮದಲ್ಲಿ ಮುಳುಗಿ ಹೋದವರು. ಗುರುವಿನ ಉನ್ನತಿ ತನಗೆ ಸಾಧ್ಯವಿಲ್ಲ ಎಂದು ಒಂಟಿಮನಿಗೆ ಅನಿಸುತ್ತದೆ. ಗುರುವಿಗೂ ಈತನ ಚಂಚಲ ಚಿತ್ತದ ಅರಿವು ಇರುತ್ತದೆ. ಗುರುವನ್ನು ಭೇಟಿಯಾಗಲು ಬಂದ ಸಾದ್ವಿಯ ಶಿಷ್ಯೆ ಮಾಳವಿಕ ಒಂಟಿಮನಿಯನ್ನು ಕೂಡುತ್ತಾಳೆ. ಮಾಳವಿಕೆಯನ್ನು ರೈಲಿನಲ್ಲಿಯೇ ಬಿಟ್ಟು ಒಂಟಿಮನಿ ಮಂಗಳೂರಿಗೆ ಬಂದು ಉಪನ್ಯಾಸಕ ಹುದ್ದೆಗೆ ಸೇರುತ್ತಾನೆ. ಅಲ್ಲಿ ಹೋಟಲ್ ನಡೆಸುತ್ತಿದ್ದ ಅಂಡಾಳಮ್ಮನ ಜೊತೆ ಸಂಬಂಧ ಬೆಳೆಸುತ್ತಾನೆ. ಅದು ಗೊತ್ತಾಗಿ ಕಾಲೇಜಿನಿಂದ ಹೊರ ಹಾಕುತ್ತಾರೆ. ಮತ್ತೆ ಊದು ಬತ್ತಿ ಮಾರಿ ಜೀವನ ಸಾಗಿಸುತ್ತಾನೆ. ಕೊಕಟನೂರ ಎಲ್ಲಮ್ಮನ ಜಾತ್ರೆಗೆ ಊದುಬತ್ತಿ ಮಾರಲು ಹೋದಾಗ ಒಡ ಹುಟ್ಟಿದ ಅಕ್ಕ ಭೇಟಿಯಾಗುತ್ತಾಳೆ. ಆಗಲೇ ಅಕ್ಕ ಗಂಡನನ್ನು ಕಳೆದುಕೊಂಡು ಮಗಳಿಗೆ ಮದುವೆ ಮಾಡಿ ಹೈರಾಣಾಗಿರುತ್ತಾಳೆ. ಆಕೆಯ ಮಗಳ ಜೀವನವೂ ಸುಖವಾಗಿರುವದಿಲ್ಲ. ಗಂಡನ ಮನೆಯವರು ಬಸಿರು ಇರುವಾಗ ಬಡೆದು ಸಾಯಿಸಿರುತ್ತಾರೆ. ಅಕ್ಕ ಮಗಳ ಕತೆ ಹೇಳುವಾಗ ಒಂಟಿಮನಿಯ ಹೃದಯ ತಳಮಳಿಸಿ ಹೋಗುತ್ತದೆ.
“ಅವಳನ್ನು ನಿನಗೆ ಕೊಟ್ಟು ಮದುವೆ ಮಾಡಬೇಕೆಂದು ಅವಳು ಹುಟ್ಟಿದಾಗಲೇ ನಿನ್ನ ಹುಡುಕುತ್ತಿದ್ದೆವು. ನೀನು ಬರಲಿಲ್ಲ. ಮದುವೆ ಮಾಡಿಕೊಟ್ಟೆವು. ಆ ದಿನ ಪಂಚಮಿ ಹಬ್ಬಕ್ಕೆ ತವರಿಗೆ ಕರೆಯಲು ನಿನ್ನ ಮಾವ ನಡೆಯುತ್ತ ಅವಳ ಗಂಡನ ಮನೆಗೆ ಹ್ವಾದ. ಆಗ ಗೊತ್ತಾತು ಅಕಿಗಿ ಮೂರತಿಂಗಳು ಅಂತ. ನಿಮ್ಮ ಮಾವ ಅಲ್ಲಿಗಿ ಹೋಗಿ ಮುಟ್ಟಲಾಕ ಮಧ್ಯಾನ್ಹ ಬಾರಾ ಆಗಿತ್ತು. ತಿರುಗಿ ನಡಕೊಂತ ನಮ್ಮ ಊರಿಗಿ ಬರಲಾಕ ಸಂಜಿ ಆರ ಆಗತಿತ್ತು. ಬ
ಸರ ಹುಡುಗಿ ಅಲ್ಲೀತನಕಾ ಯಾನು ತಿಂದಿರಲಿಲ್ಲ. ಒಂದು ರೊಟ್ಟಿ ತಿಂದ ಹೋಗತೀನಿ ಅಂತ ತಾಟ ತುಗೊಂಡಳಂತ. ಆಕಿ ಅತ್ತಿ ಬ್ಯಾಡಾ ನಿಮ್ಮ ಊರಾಗ ಹೋಗಿ ತಿನ್ನ ಅಂತ ಹೇಳಿ ತಾಟ ಕಸಕೊಂಡಳಂತ. ಹುಡುಗಿ ಹಟಾ ಮಾಡಿತಂತ. ಹೊಟ್ಯಾನ ಹಸೂ ತಮ್ಮಾ ಹಟಾ ಮಾಡಿದ್ಲು. ಅತ್ತಿ ಚೀರಾಡಾಕ ಹತ್ತಿದ್ದಳು. ಒಳಗ ಬಂದ ಗಂಡ ಅವ್ವನ ಕೂಡಾ ಜಗಳಾ ತಗೀತಿ ಅಂತ ಹೊಟ್ಟಿಗಿ ಒದ್ದನಂತ. ಬಾಳಿಗಿಡ ಬಿದ್ದಂಗ ಅಡಗಿ ಮನ್ಯಾಗ ನನ್ನ ಮಗಳ ಕಳಕ್ಕನ ಕವುಚಿಕೊಂಡು ಬಿದ್ದಳಂತ. ರಾತ್ರಿ ಆತು ಹರ‍್ಯಾ ಯಾಕ ಬರವಲ್ಲ ಅಂತ ನಾ ಹಾದಿಕಾಯಕೋತ ಕುಂತ್ರ “ಸತ್ತ ಸುದ್ದಿ ಬಂತ. ಮಣ್ಣ ಮಾಡಿ ಬರಿಗೈಲಿ ಬಂದಿವಿ” ಎಂದು ಅಕ್ಕ ಹೇಳುತ್ತಿದ್ದರೆ. ಇವನು ತಳಮಳಿಸಿ ಹೋದ.’ ಈ ಸಂಗತಿಯು ಒಂಟಿಮನಿಯಲ್ಲಿ ಇನ್ನಷ್ಟೂ ಅನಾಥ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ತಾನು ಅಕ್ಕನಿಗೆ ಏನು ಮಾಡದೆ ಹೋದೆ ಎಂಬ ಸಂಕಟ ಕಾಡುತ್ತದೆ
ಮುಂದೆ ಆತನಿಗೆ ಖಾಯಂ ಉಪನ್ಯಾಸಕ ಹುದ್ದೆ ದೊರೆಯುತ್ತದೆ. ಆಗ ಅಕ್ಕನನ್ನು ಕರೆದುಕೊಂಡು ಬಂದು ತನ್ನ ಜೊತೆಗೆ ನೆಲೆಸುವಂತೆ ಮಾಡಬೇಕೆಂದು ಮನೆಗೆ ಹೋದಾಗ ಅಕ್ಕ ತೀರಿ ಹೋಗಿರುತ್ತಾಳೆ. `ಇವನು ಕೇಳಿದ್ದೇ ತಡಾ ಯಾರೋ ಒಬ್ಬಳು ಕೀಲಿ ತೆಗೆದು ಕೊಟ್ಟಳು. ಹೋಗಿ ಪಡಸಾಲೆಯಲ್ಲಿ ನಿಂತ. ಹೆಂಗಸರು ಕೂಡಾ ಒಳಗೆ ಬಂದರು. ಪಡಸಾಲೆಯ ಜಂತಿಯ ಕಡೆ ನೋಡಿದ. ಅಡ್ಡತೊಲೆಯ ಮೇಲೆ ಚಾಕಪೀಸ್ ದಿಂದ “ಆಸ್ತಿಕ ಋಷಿ ಕಾಳ ಭೈರವಿ” ಎಂದು ಬರೆದಿದ್ದನ್ನು ನೋಡಿದ. ಅಕ್ಕ ಯಾರಿಂದಲೋ ಬರೆಸಿದ್ದಿರಬೇಕು. ಇದೇ ಪಡಸಾಲೆಯಲ್ಲಿ ಅಕ್ಕನನ್ನು ಮೊದಲ ಸಲ ಕಳಿಸಲು ಬಂದಾಗ ತಾನು ಮತ್ತು ಅಪ್ಪ ಹಾಸಿದ ಕಂಬಳಿ ಮೇಲೆ ಕುಂತಿದ್ದು ನೆನಪಿಗೆ ಬಂತು. ಅವಳನ್ನು ಆ ಮನೆಯಲ್ಲಿ ಬಿಟ್ಟು ಹೋಗುವಾಗ ಅಪ್ಪನ ಕೈ ಹಿಡಿದು ಅತ್ತದ್ದು ಇದೇ ಪಡಸಾಲೆಯಲ್ಲಿ. ಅವ್ವನ ಮುಖವನ್ನೇ ನೋಡದೆ ಬೆಳೆದಿದ್ದ ತಮ್ಮನಾದ ಇವನನ್ನು ತನ್ನ ಮಗನೇ ಏನೋ ಎನ್ನುವಹಾಗೆ ಎದೆಗೆ ಅಪ್ಪಿಕೊಂಡು ಅತ್ತದ್ದು ಇದೇ ಪಡಸಾಲೆಯ ನೆಲದಲ್ಲಿ. ತನಗೆ ಹೆಂಡತಿಯಾಗ ಬೇಕಿದ್ದ ಅವಳ ಮಗಳು ತನ್ನ ಪುಟ್ಟ ಪಾದಗಳಿಂದ ಓಡಾಡಿದ ಜಾಗ. ದುಡಿದು ಉಸ್ ಎಂದು ಅಡ್ದಾಗಿದ್ದ ಅವಳ ಗಂಡ ಕೂಡ್ರುವ ಜಾಗ. ಸೆಗಣಿಯಿಂದ ನೆಲ್ಲಕ್ಕಿ ಸಾರಿಸಿ ದೀಪ ಹಚ್ಚಿಟ್ಟ ಜಾಗ. ಹೊರಗೆ ಚಿಟಪಾಲಕಿ ತಯಾರು ಮಾಡುವವರೆಗೂ ಸತ್ತ ತನ್ನ ಗಂಡನನ್ನು ನೋಡುತ್ತ ಎದೆ ಎದೆ ಬಡಕೊಂಡು ಉಳ್ಳಾಡಿ ಅತ್ತ ಜಾಗ. ತಾನೂ ಸತ್ತು ಹೋಗಿ ತವರು ಮನೆಯಿಂದ ಒಂದು ಸೀರೆ ಇಲ್ಲದೆ ತವರು ಮನೆಯವರಿಂದ ಬರದೆ ಇದ್ದ ನೆತ್ತಿಗೆ ಎಣ್ಣೆ ಇಲ್ಲದೆ ಒಣತಲೆಯಿಂದಲೇ ಸ್ಮಶಾನದಲ್ಲಿ ಹುಗಿಸಿಕೊಂಡ ಅಕ್ಕನ ಮನೆ.’ ಅಕ್ಕನ ಸಾವು ಆತನಲ್ಲಿ ಬಾವುಕತನವನ್ನು ಕಳೆದು ಭೋಗಕ್ಕೆ ಎಡೆ ಮಾಡಿಕೊಡುತ್ತದೆ.
ಒಂಟಿಮನಿಯ ಬದುಕಿನ ಈ ಘಟನೆಗಳು ಹೆಣ್ಣನ್ನು ನೋಡುವ ದೃಷ್ಟಿಕೋನವನ್ನು ಪ್ರಭಾವಿಸುತ್ತವೆ. ಸಂಬಂಧಗಳ ನೈತಿಕತೆಯನ್ನು ಮೀರಿ ಹೆಣ್ಣಿನಲ್ಲಿ ಭೋಗವನ್ನೇ ಕಾಣುತ್ತಾನೆ. ಒಂಟಿಯಾಗಿ ಬದುಕನ್ನು ಕಳೆಯುತ್ತಾನೆ. ದೇಶದ ವಿವಿಧೆಡೆ ಚಿಂತನೆಯುಳ್ಳ ಉಪನ್ಯಾಸಗಳನ್ನು ನೀಡಿ ಅನೇಕ ಮಹಿಳೆಯರ ಮೋಹಕ್ಕೆ ಒಳಗಾಗುತ್ತಾನೆ. ಚಂದ್ರಿಕಾ, ದೀಪಾ, ಢವಳಾಕ್ಷಿಮಾಳ ಆತನ ಬದುಕಿನಲ್ಲಿ ಬಂದು ಹೋಗುತ್ತಾರೆ. ಅವರೆಲ್ಲಾ ಆತನಲ್ಲಿ ಯಾವ ಸಂವೇದನೆಯನ್ನು ಉಂಟು ಮಾಡುವುದಿಲ್ಲ. ದೇಹದ ಭೋಗಕ್ಕೆ ಸೀಮಿತವಾಗುತ್ತಾರೆ. ಚಂದ್ರಿಕಾ ಮಾತ್ರ ಅದಮ್ಯವಾಗಿ ಒಂಟಿಮನಿಯನ್ನು ಪ್ರೀತಿಸುತ್ತಾಳೆ. ಒಂಟಿಮನಿಗೆ ಲೋಕದ ಪ್ರೀತಿಗಳೆಲ್ಲಾ ಭ್ರಮೆಯಾಗಿ ಕಾಣುತ್ತವೆ. ಆಕೆಯ ಮದುವೆಯ ಪ್ರಸ್ತಾಪವನ್ನು ನಿರಾಕರಿಸುತ್ತಾನೆ. ಚಂದ್ರಿಕಾ ತನ್ನ ಮಾಜಿ ಪ್ರಿಯತಮನಿಂದ ಅತ್ಯಚಾರಕ್ಕೆ ಒಳಗಾಗಿ ಒಂಟಿಮನಿಯ ಹತ್ತಿರ ಬರುತ್ತಾಳೆ. ಆ ಕ್ಷಣ ಆತನಲ್ಲಿ ತಲ್ಲಣವನ್ನುಂಟುಮಾಡುತ್ತದೆ. ಹೆಣ್ಣಿನ ತಾಯ್ತನದ ದರ್ಶನವಾಗಿತ್ತದೆ.
ಆಸ್ಪತ್ರೆಯಲ್ಲಿ ಅನಾಥನಾಗಿ ಬಿದ್ದಾಗ ಆರೈಕೆ ಮಾಡುವ ರ‍್ಸ್ ಮೃದಲಾ ಬದುಕಿನ ಸೌಂದರ್ಯದ ಇನ್ನೊಂದು ಮಗ್ಗಲನ್ನು ಸ್ಪರ್ಷಿಸುತ್ತಾಳೆ. ಆಕೆಯಲ್ಲಿ ತಾಯಿ, ಅಕ್ಕನ ಮಾತೃತ್ವವನ್ನು ಕಾಣುತ್ತಾನೆ. ಈ ಸಂದರ್ಭದಲ್ಲಿ ಚಂದ್ರಿಕಾಳನ್ನು ಮದುಯೆಯಾಗಬೇಕಿತ್ತು ಅನಿಸುತ್ತದೆ. ಹೆಣ್ಣಿ ಮೇಲಿದ್ದ ಭೋಗದ ಭಾವ ಅವನ ಮನಸ್ಸಿನಿಂದ ಕಾಣೆಯಾಗುತ್ತದೆ. ಜೀವಕ್ಕೆ ಮಾತೃಛಾಯೆಯ ಮತ್ತೊಂದು ಜೀವ ಬೇಕೆನಿಸುತ್ತದೆ. ತಾನು ಗಳಿಸಿದ ಆಸ್ತಿಯನ್ನು ಮೃದಲಾ ಹೆಸರಿಗೆ ಬರೆದು ಸಾಯಲು ನಿರ್ಧರಿಸುತ್ತಾನೆ. ಅವನ ಭಯಾನಕ ರೋಗವು ಸಾವನ್ನೇ ಬಯಸುವಂತೆ ಮಾಡುತ್ತದೆ.
ಪ್ರೊ. ಹನುಮಂತ ಒಂಟಿಮನಿಯ ಔದಾರ್ಯದಂತೆ ಭವ ಇರುವದಿಲ್ಲ. ಮೃದಲಾ ಮತ್ತು ಆಕೆಯ ಪ್ರಿಯತಮನಿಗೆ ಆಸ್ತಿಯನ್ನು ಕೊಡತ್ತೇನೆಂದಾಗ ಅವರ ಮುಖ ಭಾವದಲ್ಲಾಗುವ ಬದಲಾವಣೆಗಳು ಮನುಷ್ಯನ ಸಂದಿಗ್ಧತೆಯನ್ನು ಬಿಂಬಿಸುತ್ತದೆ. ಮನಸ್ಸಿನಲ್ಲಿ ಕೇಡು ಕಾಣಿಸಿಕೊಳ್ಳುತ್ತದೆ. ಸಾಯುವಾಗಲು ಭವ ಆತನಿಗೆ ಒಗಟಾಗಿಯೇ ಉಳಿಯುತ್ತದೆ. ಆಕ್ಸಿಜನ್ ಮೂಲಕ ಉಸಿರಾಡುತ್ತಿದ್ದ ಆಕ್ಸಿಜನ್‌ನನ್ನು ಯಾರು ತೆಗೆದರು ಎಂಬ ನಿಗೂಢತೆಯನ್ನು ಕಾದಂಬರಿ ಓದಗರಿಗೆ ಬಿಡುತ್ತದೆ.
ಈ ಕಾದಂಬರಿ ಪ್ರೊ. ಹನುಮಂತ ಒಂಟಿಮನಿಯ ಭಾಕೋಶವನ್ನು ಕಡೆದಿಡುತ್ತದೆ. ಬಾಲ್ಯದಲ್ಲಿ ಅತ್ಯಾಚಾರ, ಹಸಿವಿನ ಅಪಮಾನದಿಂದ ಜರ್ಜಿತವಾದ ಮನಸ್ಸು ಲೋಕದೊಂದಿಗೆ ಮುಖಾಮುಖಿಯಾಗಲು ಬಯಸುತ್ತದೆ. ಒಂಟಿಮನಿಯ ದುರ್ಬಲ ಮನಸ್ಸು ತಾನು ಕಾಣುವ ಪ್ರತಿಯೊಂದು ಹೆಣ್ಣಿನಲ್ಲಿ ದೌರ್ಬಲ್ಯವನ್ನೇ ಕಾಣುತ್ತದೆ. ಹೀಗಾಗಿ ಬದುಕನ್ನು ಆಸ್ವಾದಿಸಲು ಒಂಟಿಮನಿಗೆ ಆಗುವದಿಲ್ಲ. ಆತನ ಬದುಕಿನ ಲಯವೇ ತಪ್ಪಿ ಹೋಗುತ್ತದೆ. ಬದುಕಿನ ಶುದ್ಧ ಶ್ರದ್ಧೆಯನ್ನು ಕಾಮದಾಚೆಗೆ ಕಂಡುಕೊಳ್ಳುವ ವಾತವರಣವನ್ನು ಕಾದಂಬರಿ ನರ‍್ಮಿಸುತ್ತದೆ. ದೇಹದ ದಂದುಗದಿಂದ ಪಾರಾಗುವ ಬಗೆಯನ್ನು ಶೋಧಿಸುತ್ತದೆ.
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
"ದಾವಣಗೆರೆಯಲ್ಲಿ ಇಳಿದಾಗ ರಾತ್ರಿ ಎರಡೂವರೆ. ಆಟೋಕ್ಕೆ ಹೋಗಲೂ ಕಾಸಿಲ್ಲ. ಅದ್ಯಾರೋ ಪುಣ್ಯಾತ್ಮನಿಗೆ ಇರುವ ಸ್ಥಿತಿ ...
"ನಗುವು ಮಸಕಾಕದ ಮುಖದಲ್ಲಿ ಪದ್ಯದ ನಾದ ಹಿಡಿದು ಲಯಕ್ಕೆ ತಕ್ಕ ಚಿಟಿಕೆ ಹಾಕುತ್ತ ಅವನು ಓದುವ ಭಂಗಿ ಚೆಂದ. ಮಕ್ಕಳ ಪ...
©2025 Book Brahma Private Limited.